ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಪೆ

ವಿಕಿಸೋರ್ಸ್ದಿಂದ

ನ್ಯಾಪೆ - ಭೂ ಚಟುವಟಿಕೆಗಳ ಪ್ರಭಾವಕ್ಕೆ ಸಿಲುಕಿ ಸಿಕ್ಕು ಸಿಕ್ಕಾದ ವಿನ್ಯಾಸದಿಂದ ಕೂಡಿರುವ ಪಶ್ಚಿಮ ಆಲ್ಸ್ಪ್ ಶ್ರೇಣಿಯಲ್ಲಿ ವಿಶೇಷವಾಗಿಯೂ ಹಿಮಾಲಯ ಪರ್ವತಶ್ರೇಣಿಯಲ್ಲಿ ಸಾಧಾರಣವಾಗಿಯೂ ಗುರುತಿಸಲಾಗಿರುವ ವಿಶೇಷ ಬಗೆಯ ಬೃಹದಾಕಾರದ ಶಿಲಾರಚನೆ. ಸಾಮಾನ್ಯವಾಗಿ ಶಿಲಾಮಡಿಕೆಗಳು ನೆಟ್ಟಗಿರುತ್ತವೆ. ಆದರೆ ಒಂದೇ ದಿಕ್ಕಿನತ್ತ ಹೇರಿಬರುತ್ತಿರುವ ಒತ್ತಡ ಪ್ರಭಾವದ ಕಾರಣ ಹೀಗಿರದೆ ಆ ದಿಕ್ಕಿನಲ್ಲೇ ವಾಲಿ ನೆಲೆಕ್ಕೆ ಒರಗಿರುವ ಮಡಿಕೆಗಳೂ ಉಂಟು. ಇವೇ ಶಾಯಾನ (ರಿಂಕಬೆಂಟ್) ಮಡಿಕೆಗಳು. ಕ್ರಮೇಣ ಇವು ಥ್ರಸ್ಟ್ ಎಂಬ ವಿಶೇಷ ರೀತಿಯ ಸ್ತರಭಂಗಕ್ಕೆ ಒಳಗಾಗಿ ರಚನೆಯ ಮೇಲ್ಭಾಗದ ಹೊದಿಕೆ ಬಲು ದೂರ ತಳ್ಳಲ್ಪಟ್ಟು ಹೆಚ್ಚು ಇಳಿಜಾರಾಗಿರದ ನೆಲದ ಮೇಲೆ ಜಾರಿಕೊಂಡು ಹೋಗಿ ತನಗೆ ಯಾವ ರೀತಿಯಲ್ಲೂ ಸಂಬಂಧವಿರದ ಶಿಲೆಗಳ ಮೇಲೆ ತಳ ಊರುತ್ತದೆ. ಈ ದೂರ ಹತ್ತಾರು ಅಥವಾ ನೂರಾರು ಕಿಲೊಮೀಟರುಗಳಾಗಿರಬಹುದು. ಕಡೆಯ ಪಕ್ಷ 1.5ಕಿಮೀ ನಷ್ಟಾದರೂ ಈ ಜಾರಿಕೆ ನಡೆದಿರಲೇಬೇಕು.

ಒಮ್ಮೊಮ್ಮೆ ಬಲುದೂರ ಜಾರಿ ಹೋಗದೆ ತಾವಿರುವ ತಾಣದಲ್ಲೇ ಶಿಲಾಪ್ರಸ್ತರಗಳು ಈ ಬಗೆಯ ವಿಶಿಷ್ಟ ಮಡಿಕೆಯ ಸ್ವರೂಪವನ್ನು ತಳೆದಲ್ಲಿ ಅವಕ್ಕೆ ಆಟೋಕ್ಥಾನಸ್ ನ್ಯಾಪೆಗಳೆಂದೂ ತಮ್ಮ ನಲೆಯಿಂದ ಬಲು ದೂರ ಜಾರಿ ಹೋಗಿರುವ ನ್ಯಾಪೆಗಳಿಗೆ ಆ್ಯಲೋಕ್ಥಾನಸ್ ನ್ಯಾಪೆಗಳೆಂದೂ ಹೆಸರು. ಭೂ ಸವೆತದಿಂದ ಒಮ್ಮೊಮ್ಮೆ ಸುತ್ತ ಮುತ್ತಲ ಶಿಲಾಪ್ರಸ್ತರಗಳು ನಶಿಸಿ ಒಂಟಿಯಾಗಿ ನಿಂತಿರುವ ನ್ಯಾಪೆಯನ್ನು ಕ್ಲಿಪ್ ಎನ್ನುತ್ತಾರೆ. ನ್ಯಾಪೆಯ ಶಿಲಾಸ್ತರಗಳು ಸವೆದು ಗುಳಿಬಿದ್ದು ಅದರ ಅಡಿಯಲ್ಲಿ ಅಡಗಿರುವ ಶಿಲಾಭಾಗಗಳು ಗೋಚರವಾಗುವುದುಂಟು. ಇದೇ ಫೆನ್‍ಸ್ಟರ್ ಅಥವಾ ಗವಾಕ್ಷಿ.

ಆಲ್ಪ್ಸ್ ಶ್ರೇಣಿಯ ಪನ್ನೈನ್ ವಿಭಾಗದಲ್ಲಿ ಸಿಂಪ್ಲಾನ್ ನ್ಯಾಪೆಗಳು, ಗ್ರೇಟ್ ಸೆಂಟ್ ಬರ್ನಾರ್ಡ್ ನ್ಯಾಪೆ, ಮಾಂಟಿ ರೋಸಾ ನ್ಯಾಪೆ ಮತ್ತು ಡೆಂಟ್ ಬ್ಲಾಂಕ್ ನ್ಯಾಪೆ-ಹೀಗೆ ವಿವಿಧ ವಿನ್ಯಾಸದ ಹಲವಾರು ನ್ಯಾಪೆಗಳನ್ನು ಗುರುತಿಸಿದ್ದಾರೆ. ಇವೆಲ್ಲ ನೂರಾರು ಕಿಲೋಮಿಟರುಗಳಷ್ಟು ಹೆಚ್ಚು ಇಳಿಜಾರಾಗಿರದ ದೂರವನ್ನು ಜಾರಿ ಕೊಂಡು ದಾಟಿ ಬಂದು ತಾವು ಈಗಿರುವ ನೆಲೆಯನ್ನು ಆಕ್ರಮಿಸಿವೆ ಎಂದು ಭಾವಿಸಲಾಗಿದೆ. (ಬಿ.ವಿ.ಜಿ.)