ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಮತಿ ಪ್ರಭಣ್ಣ

ವಿಕಿಸೋರ್ಸ್ದಿಂದ

ನ್ಯಾಮತಿ ಪ್ರಭಣ್ಣ 1870-ಕನ್ನಡ ನಿಘಂಟೊಂದರ ಕರ್ತೃವಾದ ಇವರ ಪೂರ್ಣಹೆಸರು ನ್ಯಾಮತಿ ಜೀನಕೇರಿ ಪ್ರಭಣ್ಣ ಎಂದು. ಇವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ನ್ಯಾಮತಿ. ತಂದೆ ಚನ್ನಬಸಪ್ಪ ತಾಯಿ, ಗುರುಶಾಂತಮ್ಮ, ಅಣ್ಣಂದಿರು. ಬಸವಲಿಂಗಪ್ಪ ಮತ್ತು ಶಾಂತವೀರಪ್ಪ. ತಮ್ಮ ಗುರುಲಿಂಗಪ್ಪ, ಹೆಂಡತಿ ರೇವಮ್ಮ, ಶಾಂತವೀರಪ್ಪನವರೊಂದಿಗೆ ಇವರು ಪ್ರೈಮರಿ ಶಾಲೆಯ ಮಾಸ್ತರರಾಗಿ ಸರ್ಕಾರದ ಸೇವೆಯಲ್ಲಿದ್ದರು ಪ್ರಭಣ್ಣನವರು ಸ್ವಂತ ವ್ಯಾಸಂಗದಿಂದ ಕನ್ನಡ ಅಪ್ಟರ್ ಸೆಕೆಂಡರಿ ಪರೀಕ್ಷೆಯಲ್ಲೂ ಅನಂತರ ಕನ್ನಡ ಪಂಡಿತ ಪರೀಕ್ಷೆಯಲ್ಲೂ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ಉಭಯ ಭಾಷಾ ಪ್ರವೀಣರೆಂದು ಹೆಸರು ಗಳಿಸಿದರು. ದಾವಣಗೆರೆ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಪಂಡಿತರಾಗಿ ಸೇವೆ ಸಲ್ಲಿಸುತ್ತಿರುವಾಗ ಇವರ ಪಾಂಡಿತ್ಯಕ್ಕೆ ಮೆಚ್ಚಿ ಸರ್ಕಾರದವರು ಸೆಕ್ರೆಟೇರಿಯಟ್ಟಿನಲ್ಲಿ ಕನ್ನಡ ಅನುವಾದಕರಾಗಿ ಇವರನ್ನು ನೇಮಕ ಮಾಡಿದರು. ಇವರು ಅನೇಕ ಗ್ರಂಥಗಳ ಸಹಾಯದಿಂದ ತಮ್ಮದೇ ಆದ ಒಂದು ನಿಘಂಟನ್ನು ಸಂಕಲಿಸತೊಡಗಿದರು. ಆಗ ವಿದ್ಯಾ ಇಲಾಖೆಯ ನಿರ್ದೇಶಕರಾಗಿದ್ದ ಸಿ. ಆರ್. ರೆಡ್ಡಿಯವರು ಅದನ್ನು ಪ್ರೋತ್ಸಾಹಿಸಿದರು. ಆ ಕಾರ್ಯದಲ್ಲಿ ನಿರತರಾಗಿದ್ದಾಗಲೆ ಪ್ರಭಣ್ಣನವರ ಆರೋಗ್ಯ ಕೆಟ್ಟು, ಅಕಾಲಮರಣಕ್ಕೆ ತುತ್ತಾದರು. ತಮ್ಮನ ಅಪೂರ್ಣ ಕೃತಿಯನ್ನು ಶಾಂತವೀರಪ್ಪನವರು ಪೂರ್ತಿಗೊಳಿಸಿದರು. ಆಗ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಬಿ. ಶಿವಮೂರ್ತಿಶಾಸ್ತ್ರಗಳು ನಿಘಂಟನ ಹಸ್ತಪ್ರತಿಯನ್ನು ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನ ಕಾರ್ಯಾಲಯಕ್ಕೆ ಒಪ್ಪಿಸಿದರು. (ಎಸ್.ಎಸ್.ಎಚ್.ಎ.ಎನ್.)