ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯಬಾಹಿರ ಕೂಟ

ವಿಕಿಸೋರ್ಸ್ದಿಂದ

ನ್ಯಾಯಬಾಹಿರ ಕೂಟ - ಕಾನೂನುಬಾಹಿರ ಕೂಟ/ಸಭೆ: ಲೋಕ ಶಾಂತಿಗೆ ಅಪಾಯಕಾರಿಯೆನಿಸುವ ಯಾವುದೇ ಕೂಟ ಸಭೆ ಕಾನೂನುಬಾಹಿರವಾಗುವುದು. ಕೂಟದ/ಸಭೆಯ ಸಾಮಾನ್ಯ ನೋಟ ಮತ್ತು ಅದಕ್ಕೆ ಲಗತ್ತಾಗಿರುವ ಸನ್ನಿವೇಶ(ಗಳು) ಅಪಾಯದ ಭೀತಿ, ದಿಗಿಲು ಹಾಗೂ ತಲ್ಲಣ ಉಂಟು ಮಾಡುವ ಯತ್ನವಾಗಿ ಬಿಂಬಿತವಾದರೆ, ಸಾಧಾರಣವಾಗಿ, ಅದೊಂದು ಅಪರಾಧಿಕ ಮತ್ತು ಕಾನೂನುಬಾಹಿರ ಕೃತ್ಯವೆಂದು ತಿಳಿಯಲಾಗುವುದು. ಆ ತೆರನಾದ ಸನ್ನಿವೇಶದಲ್ಲಿ ಜರುಗುವ ಯಾವುದೇ ಕೂಟ/ಸಭೆ ನೆರೆಹೊರೆಯವರ ಶಾಂತಿ-ನೆಮ್ಮದಿಯನ್ನು ಕಲುಷಿತಗೊಳಿಸುವ ಸಂಭಾವ್ಯತೆಯಿರಬೇಕು.

ಕೂಟ/ಸಭೆ ಕಾನೂನುಬಾಹಿರವೇ ಅಥವಾ ಇಲ್ಲವೇ ಎಂದು ವಿಮರ್ಶಿಸುವಾಗ, ಸಭೆ ನಡೆಸಿದ ವೈಖರಿ, ಸಭೆ ಸೇರಿದ ವೇಳೆ, ಅಲ್ಲಿ ಒಂದುಗೂಡಿದ ವ್ಯಕ್ತಿಗಳು ಮತ್ತು ಅವರುಗಳನ್ನುದ್ದೇಶಿಸಿ ಮಾಡನಾಡಿದ ಮಂದಿ ಬಳಸಿದ ಭಾಷೆಯನ್ನು ಅವಲೋಕಿಸುವುದರೊಂದಿಗೆ ಸದರಿ ಸ್ಥಳದಲ್ಲಿ ಹಾಗೂ ಆಸುಪಾಸಿನಲ್ಲಿ ಮನೆ-ಮಠ, ಆಸ್ತಿ-ಪಾಸ್ತಿಗಳನ್ನು ಹೊಂದಿರುವ ದೃಢಚಿತ್ತದ ಮತ್ತು ವಿವೇಕಯುತ ಜನರು ಅಂತಹ ಕಾರ್ಯ-ಕ್ರಿಯೆ ಅಶಾಂತಿಗೆ ಅವಕಾಶವೀಯುವುದೆಂದು ಭಯ-ಭೀತರಾಗಲು ಯುಕ್ತಾಧಾರಗಳಿವೆಯೇ ಎಂದು ನ್ಯಾಯದರ್ಶಿಯು ಪರಿಗಣಿಸಬೇಕು.

ಕೂಟ/ಸಭೆ ಕಾನೂನುಬಾಹಿರವಾಗಿ ರೂಪುಗೊಳ್ಳಬೇಕಾದರೆ ಅಲ್ಲಿ:- ಐದು ಅಥವಾ ಅಧಿಕ ವ್ಯಕ್ತಿಗಳು ಒಂದುಗೂಡಿರಬೇಕು. ಅವರುಗಳಿಗೆ ಏಕೋದ್ದೇಶವಿರಬೇಕು ಹಾಗೂ ಆ ಏಕೋದ್ಧೇಶ, ಅಕ್ರಮ ಬಲಪ್ರಯೋಗದಿಂದಾಗಲಿ, ಬಲಪ್ರಯೋಗದ ಬೆದರಿಕೆಯಿಂದಾಗಲಿ, ಭಯಕ್ಕೆ ಕಾರಣವಾಗುವಂತೆ ಮಾಡುವುದು, ಸರ್ಕಾರದಲ್ಲಿ ಅಥವಾ ಶಾಸಕಾಂಗದಲ್ಲಿ ಲೋಕ ನೌಕರರು ನಮ್ಮ ಕರ್ತವ್ಯ ನಿರ್ವಹಿಸುತ್ತಿರುವಾಗ ಅವರಲ್ಲಿ ಯಾರಿಗಾದರೂ ಭೀತಿ ಹುಟ್ಟಿಸಿ ಅವರನ್ನು ಅಧೀನ ಮಾಡಿಕೊಳ್ಳುವುದು; ಯಾವುದೇ ಸ್ವತ್ತಿನ ಸ್ವಾಧೀನತೆ ಪಡೆಯುವುದು ಅಥವಾ ಹಕ್ಕನ್ನು ಜಾರಿಯಲ್ಲಿ ತರುವುದು, ಕಾನೂನಿನ ಪ್ರಕಾರ ಒಂದು ಕೃತ್ಯವನ್ನು ಮಾಡಲು ಇಲ್ಲವೇ ಮಾಡದಿರಲು ಬದ್ಧನಾಗಿಲ್ಲದವನು ಅದನ್ನು ಮಾಡುವಂತೆ ಇಲ್ಲವೇ ಮಾಡದಂತೆ ಅವನನ್ನು ನಿರ್ಬಂಧಿಸುವುದು, ಯಾವುದೇ ಕಾನೂನಿನ ಇಲ್ಲವೇ ನ್ಯಾಯಾಲಯದ ಆದೇಶದ ಕಾರ್ಯನಿರ್ವಹಣೆಯನ್ನು ಪ್ರತಿಭಟಿಸುವುದು, ಭಾರತ ದಂಡ ಸಂಹಿತೆಯ ಪ್ರಕಾರ ಅಪರಾಧವಾಗುವ ಯಾವುದೇ ಕೃತ್ಯವನ್ನು ಮಾಡುವುದು ಆಗಿರಬೇಕು.

ಮೇಲೆ ಹೇಳಿದ ಯಾವುದೇ ಉದ್ದೇಶ ಆ ಕೂಟದ/ಸಭೆಯ ಓರ್ವ ಸದಸ್ಯನಿಗೆ ಮಾತ್ರ ಗೊತ್ತಿದ್ದ ಪಕ್ಷಕ್ಕೆ ಏಕೋದ್ದೇಶವಾಗುವುದಿಲ್ಲ. ಆ ಉದ್ದೇಶದಲ್ಲಿ ಎಲ್ಲರೂ ಭಾಗಿಗಳಾಗಿರಬೇಕು. ಪ್ರಾರಂಭದಲ್ಲಿ ಒಂದು ಕೂಟ/ಸಭೆ ನ್ಯಾಯಬಾಹಿರವಲ್ಲದಿದ್ದರೂ ಮುಂದೆ ಅದರ ಸದಸ್ಯರು ಮೇಲೆ ಉಲ್ಲೇಖಿಸಿದ ಯಾವುದೇ ಏಕೋದ್ದೇಶದಿಂದ ಪ್ರೇರಿತರಾದರೆ ಆಗ ಅವರದು ಕಾನೂನುಬಾಹಿರ ಕೂಟ/ಸಭೆಯಾವುದು.

ತನ್ನ, ದೇಶ ಸ್ವತ್ತು ಅಥವಾ ತಾನು ಅನುಭೋಗಿಸುತ್ತಿರುವ ಹಕ್ಕನ್ನು ರಕ್ಷಿಸಲು ಅಗತ್ಯವಾದಾಗ ಬಲಪ್ರಯೋಗ ಮಾಡಲು ಪ್ರತಿಯೋರ್ವ ನಾಗರಿಕನಿಗೂ ಅನುಗ್ರಹೀತವಾಗಿರುವ ಹಕ್ಕನ್ನು ಈ ವ್ಯಾಖ್ಯೆಯು ಕಸಿದುಕೊಳ್ಳುವುದಿಲ್ಲ. ಆದರೆ ಯಾವುದೇ ಸ್ವತ್ತು ಅಥವಾ ಹಕ್ಕು ಪ್ರಚಲಿತ ಅನುಭೋಗದಲ್ಲಿಲ್ಲದಿದ್ದರೆ, ಅದನ್ನು ಪಡೆಯಲಿಕ್ಕೆ ಬಲಾತ್ಕಾರ ಪ್ರಯೋಗಿಸುವುದನ್ನು ಅಥವಾ ತೋರಿಸುವುದನ್ನು ಕಾನೂನು ಪ್ರತಿಬಂಧಿಸುವುದು. (ವಿವರ: ಕಲಂ 141-145 ಭಾರತ ದಂಡ ಸಂಹಿತೆ, 1860).

ಈ ಬಗೆಯ ಯಾವುದೇ ಕೂಟವನ್ನು/ಸಭೆಯನ್ನು ಚದುರಿಸಲು ಯಾವುದೇ ಕಾರ್ಯಾಂಗೀಣ ದಂಡಾಧಿಕಾರಿ/ಪೋಲೀಸ್ ಠಾಣೆಯ ಪ್ರಭಾರಾಧಿಕಾರಿ ಅಥವಾ ಉಪ-ನಿರೀಕ್ಷಕನಿಗಿಂತ ಕೆಳಸ್ತರದಲ್ಲಿರದ ಪೊಲೀಸ್ ಠಾಣೆಯ ಪ್ರಭಾರಾಧಿಕಾರಿ ನಿಯಮಾನುಸಾರ ಕ್ರಮಕೈಗೊಳ್ಳಬಹುದಾಗಿದೆ. (ವಿವರ: ಕಲಂ. 129-132 ಅಪರಾಧಿಕ ಪ್ರಕ್ರಿಯೆ ಸಂಹಿತೆ, 1973).

ಕಾನೂನುಬಾಹಿರ ಕೂಟದ/ಸಭೆಯ ಏಕೋದ್ದೇಶ ಸಾಧನೆಯಲ್ಲಿ ಪ್ರತ್ಯಕ್ಷ ಬಲಾತ್ಕಾರ ಅಥವಾ ಜುಲುಮೆಯನ್ನು ಉಪಯೋಗಿಸಿದರೆ ಅದು ದೊಂಬಿಯಾಗುವುದು. (ನೋಡಿ- ದೊಂಬಿ). ಅಕ್ರಮ ಬಲಪ್ರಯೋಗದಿಂದಾಗಲಿ, ಬಲಪ್ರಯೋಗದ ಬೆದರಿಕೆಯಿಂದಾಗಲಿ ಭಯಕ್ಕೆ ಕಾರಣವಾಗುವಂತೆ ಮಾಡುವುದು, ಸರ್ಕಾರದಲ್ಲಿ ಅಥವಾ ಶಾಸಕಾಂಗದಲ್ಲಿ ಸಾರ್ವಜನಿಕ ನೌಕರರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ ಅವರಲ್ಲಿ ಯಾರಿಗಾದರೂ ಭೀತಿ ಹುಟ್ಟಿಸಿ ಅವರನ್ನು ಅಧೀನ ಮಾಡಿಕೊಳ್ಳುವುದು, ಯಾವುದೇ ಸ್ವತ್ತಿನ ಸ್ವಾಧೀನತೆ ಪಡೆಯುವುದು ಅಥವಾ ಯಾವುದೇ ಹಕ್ಕಿನ ಅನುಭೋಗವನ್ನು ಒಬ್ಬನಿಂದ ತಪ್ಪಿಸುವುದು ಅಥವಾ ಹಕ್ಕನ್ನು ಜಾರಿಯಲ್ಲಿ ತರುವುದು, ಕಾನೂನಿನ ಪ್ರಕಾರ ಒಂದು ಕೃತ್ಯವನ್ನು ಮಾಡಲು ಇಲ್ಲವೇ ಮಾಡದಿರಲು ಬದ್ಧನಾಗಿಲ್ಲದವನು ಅದನ್ನು ಮಾಡುವಂತೆ ಇಲ್ಲವೇ ಮಾಡದಂತೆ ಅವನನ್ನು ನಿರ್ಬಂಧಿಸುವುದು, ಯಾವುದೇ ಕಾನೂನಿನ ಇಲ್ಲವೇ ನ್ಯಾಯಾಲಯದ ಆದೇಶದ ಕಾರ್ಯನಿರ್ವಹಣೆಯನ್ನು ಪ್ರತಿಭಟಿಸುವುದು. ದಂಡಸಂಹಿತೆಯ ಪ್ರಕಾರ ಅಪರಾಧವಾಗುವ ಯಾವುದೇ ಕೃತ್ಯವನ್ನು ಮಾಡುವುದು_ಈ ಯಾವುದೇ ಸಾಮಾನ್ಯ ಉದ್ದೇಶದಿಂದ ಕೂಡಿದ ಐದು ಅಥವಾ ಹೆಚ್ಚು ಜನರ ಕೂಟ, ಗುಂಪು. ಇಂಥ ಕೂಟದ ಅಥವಾ ಗುಂಪಿನ ಸದಸ್ಯನಾಗಿರುವುದು ದಂಡಸಂಹಿತೆಯ ಪ್ರಕಾರ ಅಪರಾಧವಾಗುತ್ತದೆ.

ಮೇಲೆ ಹೇಳಿದ ಯಾವುದೇ ಉದ್ದೇಶ ಆ ಕೂಟದ ಅಥವಾ ಗುಂಪಿನ ಒಬ್ಬ ಸದಸ್ಯನಿಗೆ ಮಾತ್ರ ಗೊತ್ತಿದ್ದ ಪಕ್ಷಕ್ಕೆ ಸಾಮಾನ್ಯ ಉದ್ದೇಶವಾಗುವುದಿಲ್ಲ. ಆ ಉದ್ದೇಶದಲ್ಲಿ ಎಲ್ಲರೂ ಭಾಗಿಗಳಾಗಿರಬೇಕು. ಪ್ರಾರಂಭದಲ್ಲಿ ಒಂದು ಕೂಟ ನ್ಯಾಯ ಬಾಹಿರವಲ್ಲದಿದ್ದರೂ ಮುಂದೆ ಅದರ ಸದಸ್ಯರು ಮೇಲೆ ಹೇಳಿದ ಯಾವುದೇ ಸಾಮಾನ್ಯ ಉದ್ದೇಶದಿಂದ ಪ್ರೇರಿತರಾದರೆ ಆಗ ಅವರದು ನ್ಯಾಯಬಾಹಿರ ಕೂಟವಾಗುತ್ತದೆ.

ತನ್ನ ದೇಶ, ಸ್ವತ್ತು ಅಥವಾ ತಾನು ಅನುಭೋಗಿಸುತ್ತಿರುವ ಹಕ್ಕನ್ನು ರಕ್ಷಿಸಲು ಅಗತ್ಯವಾದಾಗ ಬಲಪ್ರಯೋಗವನ್ನು ಕೂಡ ಮಾಡಲು ಪ್ರತಿಯೊಬ್ಬ ನಾಗರಿಕನಿಗೂ ಇರುವ ಹಕ್ಕನ್ನು ಈ ವ್ಯಾಖ್ಯೆ ಕಸಿದುಕೊಳ್ಳುವುದಿಲ್ಲ. ಆದರೆ, ಯಾವುದೇ ಸ್ವತ್ತು ಅಥವಾ ಹಕ್ಕು ಪ್ರಚಲಿತ ಅನುಭೋಗದಲ್ಲಿಲ್ಲದಿದ್ದರೆ, ಅದನ್ನು ಪಡೆಯಲಿಕ್ಕೆ ಬಲಾತ್ಕಾರ ಪ್ರಯೋಗಿಸುವುದನ್ನು ಅಥವಾ ತೋರಿಸುವುದನ್ನು ಕಾನೂನು ಪ್ರತಿಬಂಧಿಸುತ್ತದೆ.

ನ್ಯಾಯಬಾಹಿರ ಕೂಟದ ಸಾಮಾನ್ಯ ಉದ್ದೇಶ ಸಾಧನೆಯಲ್ಲಿ ಪ್ರತ್ಯಕ್ಷ ಬಲಾತ್ಕಾರ ಅಥವಾ ಜುಲುಮೆಯನ್ನು ಉಪಯೋಗಿಸಿದರೆ ಅದು ದೊಂಬಿ ಆಗುತ್ತದೆ.

ಸರ್ವರ ಉದ್ದೇಶದ ಪುರಸ್ಕರಣೆಗಾಗಿ ಅವರೊಳಗೆ ಯಾವನೊಬ್ಬ ಅಪರಾಧವೆಸಗಿದರೂ ಸರ್ವರೂ ದಂಡನೀಯರು. ಸರ್ವರ ಉದ್ದೇಶದ ಹೊರಗಿನ ಯಾವುದೇ ಉದ್ದೇಶಕ್ಕಾಗಿ ಈ ಕೂಟದ ಸದಸ್ಯನೊಬ್ಬ ಏನನ್ನು ಎಸಗಿದರೂ ಅವನೊಬ್ಬನೇ ಬಾಧ್ಯ. (ಆರ್.ಆರ್.ಟಿ.)

              ಪರಿಷ್ಕರಣೆ
    ಡಾ|| ಎಂ.ಎನ್.ಭೀಮೇಶ್