ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯವೃತ್ತಿ

ವಿಕಿಸೋರ್ಸ್ದಿಂದ

ನ್ಯಾಯವೃತ್ತಿ - ಕಾನೂನು ಮತ್ತು ಅದರ ಅನ್ವಯವನ್ನು ಕುರಿತ ಪರಿಣತಿಯನ್ನು ಆಧರಿಸಿದ ಕಸಬು (ಲೀಗಲ್ ಪ್ರೊಫೆಷನ್). ನ್ಯಾಯಾಧೀಶರು ಅಥವಾ ನ್ಯಾಯಪೀಠ, ವೃತ್ತಿನಿರತ ವಕೀಲರು ಅಥವಾ ನ್ಯಾಯವಾದಿಗಳು ಎಂದು ನ್ಯಾಯವೃತ್ತಿಯಲ್ಲಿ ಎರಡು ಮುಖ್ಯ ವಿಭಾಗಗಳುಂಟು. ನ್ಯಾಯಾಧೀಶರನ್ನು ಅಥವಾ ನ್ಯಾಯಪೀಠವನ್ನು ಕುರಿತ ವಿವೇಚನೆಯನ್ನು ನ್ಯಾಯಾಂಗ ಮತ್ತು ನ್ಯಾಯಾಲಯ ಅಧಿಕಾರಿಗಳು ಎಂಬ ಲೇಖನದಲ್ಲಿ ನೋಡಬಹುದು. ಇಲ್ಲಿ ವಕೀಲರ, ವಿಧಿಜ್ಞರ ಅಥವಾ ನ್ಯಾಯವಾದಿಗಳ ವೃತ್ತಿಯನ್ನು ಕುರಿತ ವಿವೇಚನೆ ಇದೆ.

ನ್ಯಾಯವೃತ್ತಿ ಬಹಳ ಹಿಂದಿನಿಂದ ನಡೆದುಬಂದಿರುವ ಗೌರವಾನ್ವಿತ ವೃತ್ತಿಗಳಲ್ಲೊಂದು. ಪ್ರಾಚೀನ ಕಾಲದಲ್ಲಿ ರೋಮಿನ ನ್ಯಾಯವಾದಿಗಳಿಗೆ ಅತ್ಯಂತ ಹೆಚ್ಚಿನ ಸ್ಥಾನಮಾನಗಳಿದ್ದವು. ನ್ಯಾಯವೃತ್ತಿಯನ್ನು ಕೈಗೊಂಡವರಿಗೆ ಗ್ರೀಸಿನಲ್ಲಿ ಹೆಚ್ಚಿನ ಮರ್ಯಾದೆ ಸಲ್ಲುತ್ತಿತ್ತು. ಇಂಗ್ಲೆಂಡಿನಲ್ಲಿ ಹಿಂದಿನಿಂದಲೂ ನ್ಯಾಯವೃತ್ತಿ ರೂಢಿಯಲ್ಲಿ ಬಂದಿತ್ತು. ನ್ಯಾಯವಿಚಾರಗಳ ತಿಳಿವಳಿಕೆಯಿಲ್ಲದವರು ಇತರರ ವಿರುದ್ಧ ತಮ್ಮ ಹಕ್ಕನ್ನು ಚಲಾಯಿಸಿಕೊಳ್ಳಲು ಅಥವಾ ಇತರರು ತಮ್ಮ ವಿರುದ್ಧ ವ್ಯಾಜ್ಯ ಹೂಡಿದ್ದರೆ ಅದನ್ನು ಪರಿಹರಿಸಿಕೊಳ್ಳಲು, ಶುಲ್ಕವನ್ನು ಕೊಟ್ಟು ನ್ಯಾಯ ವಿಚಾರಗಳಲ್ಲಿ ಪರಿಣತರಾದವರನ್ನು ನಿಯೋಜಿಸಿಕೊಳ್ಳಬಹುದೆಂದು ಶುಕ್ರನೀತಿ ಹೇಳುತ್ತದೆ. ಅಂಥವರಿಗೆ ಸಮಾಜದಲ್ಲಿ ನಿಯೋಗಿಗಳೆಂದು ಹೆಸರಿತ್ತು. ಸಚ್ಚಾರಿತ್ರ್ಯದಿಂದ ಕೂಡಿದ್ದ ನಿಯೋಗಿಗಳಿಗೆ ಪೂರ್ಣ ಸನ್ಮಾನವೂ ಉಪಚಾರವೆಸಗಿದವರಿಗೆ ಶಿಕ್ಷೆಯೂ ಆಗಿನ ಸಮಾಜದಲ್ಲಿ ಪ್ರಚಲಿತವಿತ್ತು. ಅಂತೂ ನ್ಯಾಯವೃತ್ತಿ ಇತರ ಅನೇಕ ವೃತ್ತಿಗಳಂತೆ ಹಳೆಯದೂ ಗೌರವಾನ್ವಿತವಾದುದೂ ಆಗಿದೆಯೆನ್ನಬಹುದು.

ಕಾರ್ಯಭಾರ : ಪ್ರಚಲಿತ ಕಾನೂನುಗಳಿಗೆ ಅನುಗುಣವಾಗಿ ನ್ಯಾಯಾಲಯಗಳೆದುರು ಅಥವಾ ಇತರ ಕ್ಷೇತ್ರಗಳಲ್ಲಿ ತನ್ನ ಕಕ್ಷಿಯ ಪರವಾಗಿ ವಾದಿಸುವುದು, ಅವನ ಹಿತಗಳನ್ನು ರಕ್ಷಿಸುವುದು ವಕೀಲನ, ವಿಧಿಜ್ಞನ, ನ್ಯಾಯವಾದಿಯ ಕಾರ್ಯಭಾರ. ತನ್ನ ಕಕ್ಷಿಯ ಕ್ಷೇಮಾಭ್ಯುದಯಕ್ಕಾಗಿ, ವ್ಯಾವಹಾರಿಕ ಜೀವನದಲ್ಲಿ ಅವನಿಗೆ ಬಂದಿರುವ ಅಡ್ಡಿ ಆತಂಕವನ್ನು ನಿವಾರಿಸುವ ಸಲುವಾಗಿ, ಅವನ ಪರವಾಗಿ ಕಾನೂನಿನ ತತ್ತ್ವಗಳನ್ನು ಅಳವಡಿಸಿ ಆತ ವಾದವನ್ನು ಮಂಡಿಸುತ್ತಾನೆ. ನಿರ್ದಿಷ್ಟ ಪ್ರಕರಣಗಳಿಗೆ ಕಾನೂನನ್ನು ಅನ್ವಯಿಸುವುದು, ಬಳಸಿಕೊಳ್ಳುವುದು_ಕಾನೂನನ್ನು ವ್ಯಷ್ಟೀಕರಿಸುವುದು_ನ್ಯಾಯವೃತ್ತಿಯ ಪ್ರಥಮ ಕರ್ತವ್ಯ. ನ್ಯಾಯಾಲಯದಲ್ಲಿ ವ್ಯಾಜ್ಯಗಳ ವಿಚಾರಣೆ ನಡಸಿ ತೀರ್ಪು ನೀಡುವುದಕ್ಕೆ ಸಂಬಂಧಿಸಿದಂತೆ ನ್ಯಾಯವಾದಿಗಳೂ ನ್ಯಾಯಾಧೀಶನೂ ನಿರತರಾದಾಗ ಇದು ವ್ಯಕ್ತ ಪಡುತ್ತದೆ. ನ್ಯಾಯವಾದಿ ತನ್ನ ಕಕ್ಷಿಯೊಂದಿಗೆ ಸಮಾಲೋಚಿಸಿ, ಸಾಕ್ಷಿಗಳನ್ನು ಸಂದರ್ಶಿಸಿ, ದಸ್ತೈವಜುಗಳನ್ನು ಪರಿಶೀಲಿಸಿ, ವಾಸ್ತವಿಕಾಂಶಗಳು ಹಾಗೂ ಪುರಾವೆಯನ್ನು ತನಿಖೆ ಮಾಡುತ್ತಾನೆ; ನ್ಯಾಯಾಲಯದ ಮುಂದೆ ವಾದವನ್ನು ರೂಪಿಸಿ ಮಂಡಿಸುತ್ತಾನೆ. ಪ್ರತಿಕಕ್ಷಿಯ ವಾದ ಸಮರ್ಥನೀಯವಲ್ಲವೆಂಬುದು ಸ್ಪಟ್ಟವಾಗಿದ್ದ ಪಕ್ಷದಲ್ಲಿ ಸಂಕ್ಷಿಪ್ತತೀರ್ಪು ನೀಡಬೇಕೆಂದು ಅವನು ಕೋರಬಹುದು. ಅಥವಾ ಪ್ರತಿಪಕ್ಷದ ವಾದಕ್ಕೆ ಆಧಾರವಾದ ವಿವಾದಾಂಶಗಳನ್ನೂ ವಾಸ್ತವಿಕಾಂಶಗಳನ್ನೂ ಹೆಚ್ಚು ಸಮಗ್ರವಾಗಿ ಹೊರಗೆಡಹಲೇಬೇಕಾಗುವಂತೆ ವ್ಯವಹರಣೆಯನ್ನು ಮುಂದುವರಿಸಬಹುದು. ಸಾಕ್ಷ್ಯದ ಮಂಡನೆ, ಪ್ರತಿಪಕ್ಷ ಮಂಡಿಸಬಹುದಾದ ಅನುಚಿತ ಸಾಕ್ಷ್ಯದ ಬಗ್ಗೆ ಆಕ್ಷೇಪಣೆ, ಕಾನೂನು ಮತ್ತು ವಾಸ್ತವಿಕಾಂಶಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕುರಿತ ವಾದ_ಇವು ನ್ಯಾಯವಾದ ಅನುಸರಿಸುವ ವಿಧಾನ. ತನ್ನ ಪಕ್ಷಕ್ಕೆ ಸೋಲಾದಾಗ ಅವನು ಹೊಸ ವಿಚಾರಣೆಯನ್ನಾಗಲಿ ಅಪೀಲು ನ್ಯಾಯಾಲಯದಲ್ಲಿ ಪರಿಹಾರವನ್ನಾಗಲಿ ಅರಸಬಹುದು.

ನ್ಯಾಯಾಲಯದ ಮುಂದೆ ಇರುವ ಪ್ರಕರಣವೊಂದರಲ್ಲಿ ಪಕ್ಷವೊಂದನ್ನು ಹಿಡಿದು ವಾದಿಸುವುದಷ್ಟೇ ಅಲ್ಲ; ವಿಚಾರಣೆಯನ್ನು ನಿವಾರಿಸಿ ಎರಡೂ ಪಕ್ಷಗಳ ನಡುವೆ ವಾದವನ್ನು ಇತ್ಯರ್ಥಪಡಿಸಲು ಸಂಧಾನ, ರಾಜಿ, ಸಮನ್ವಯ ಮುಂತಾದವುಗಳಲ್ಲೂ ವಕೀಲರು ಪ್ರಧಾನಪಾತ್ರ ವಹಿಸುತ್ತಾರೆ.

ಒಂದು ಸಂಸ್ಥೆಯ ಅಥವಾ ವ್ಯಕ್ತಿಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ನ್ಯಾಯವಾದಿ ನೀಡುವ ನೆರವು ಪ್ರಮುಖವಾದ್ದು. ಅನೇಕ ಕಛೇರಿಗಳ ಕೆಲಸಗಳಲ್ಲಿ ನ್ಯಾಯವಾದಿಯ ಸಹಾಯ ಹೆಚ್ಚುಹೆಚ್ಚು ಅಗತ್ಯವಾಗುತ್ತಿದೆ. ಕೈಗೊಳ್ಳಲಿರುವ ಯಾವುದೇ ಯೋಜನೆ, ಕಾರ್ಯಕ್ರಮ, ಕಲಾಪ ಅಥವಾ ವಹಿವಾಟು ವಿಧಿಬದ್ದವಾದ್ದೆ ಅಲ್ಲವೆ ಎಂಬುದರ ಬಗ್ಗೆ ಸೂಕ್ತ ಸಲಹೆ ನೀಡಿ, ಅವೈಧಿಕವಾದ ಕ್ರಮಗಳನ್ನು ಕೈಗೊಳ್ಳದಂತೆ ತಡೆಯಲು ಅವನು ನೆರವಾಗುತ್ತಾನೆ. ದಸ್ತೈವಜುಗಳ ರಚನೆಯಲ್ಲಿ ನ್ಯಾಯವಾದಿಯ ಸಲಹೆ ಅತ್ಯಧಿಕವಾದ್ದು. ಉಯಿಲು, ಕರಾರು, ಕಂಪನಿಗಳ ಹಾಗೂ ಸಂಘಗಳ ನಿಬಂಧನೆಗಳು, ಟ್ರಸ್ಟುಗಳ ನಿಯಮಗಳು ಮುಂತಾದವುಗಳ ರಚನೆಯಲ್ಲಿ ನ್ಯಾಯವಾದಿಯ ನೆರವು ಅತ್ಯಾವಶ್ಯಕವೆನಿಸುತ್ತದೆ. ಈ ನಾನಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ವೈಧಿಕ ಹಕ್ಕುಗಳನ್ನು ನಿರ್ದಿಷ್ಟಗೊಳಿಸುವಲ್ಲಿ ಅವನು ನೆರವಾಗುತ್ತಾನೆ. ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರದ ನಿಯಂತ್ರಣಗಳೂ ನಿರ್ಬಂಧಗಳೂ ಪ್ರವೇಶನವೂ ಅಧಿಕವಾಗಿ ಬೆಳೆಯುತ್ತಿರುವ ಈ ಶತಮಾನದಲ್ಲಿ ತನ್ನ ಕಕ್ಷಿಗಳ ಹಿತಗಳನ್ನು ಅವರ ಪರವಾಗಿ ಆಯೋಗಗಳ ಹಾಗೂ ಸಮಿತಿಗಳ ಮುಂದೆ ಮಂಡಿಸುವುದೂ ಪ್ರತಿಪಾದಿಸುವುದೂ ನ್ಯಾಯವಾದಿಯ ಕಾರ್ಯಭಾರವಾಗಿದೆ.

ನ್ಯಾಯಾಲಯದ ಮುಂದಿರುವ ಪ್ರಕರಣಗಳಲ್ಲಾಗಲಿ ಅನ್ಯಕ್ಷೇತ್ರಗಳಲ್ಲಿಯ ವ್ಯವಹಾರಗಳಲ್ಲಾಗಲಿ ಕಛೇರಿಯ ಕಲಾಪಗಳಲ್ಲಾಗಲಿ ವಕೀಲ ಅಥವಾ ವಿಧಿಜ್ಞಭಾಗ ವಹಿಸುವಾಗ ಅವನು ಯಾವುದೇ ಒಂದು ಪಕ್ಷದ ಪರವಾಗಿ ಮಾತ್ರ ವರ್ತಿಸುತ್ತಾನೆ. ಇಲ್ಲೆಲ್ಲ ಪಧಾನವಾಗಿರತಕ್ಕದು ಪಕ್ಷ-ಪ್ರತಿಪಕ್ಷ ಪರಿಕಲ್ಪನೆ. ವಕೀಲ ತನ್ನ ಕಕ್ಷಿಯ ಹಿತಗಳಿಗಾಗಿ ಅತ್ಯಂತ ಶ್ರದ್ಧೆ ಉತ್ಸಾಹಗಳಿಂದ ಹೋರಾಡುತ್ತಾನೆ. ಇದು ಆವೇಶ ಭರಿತ ಹೋರಾಟಕ್ಕಿಂತ, ಪರಸ್ಪರ ನಿಲವುಗಳ ಬೌದ್ಧಿಕ ಅರಿವಿನ ಮೂಲಕ ನಡೆಯುವ ಹೋರಾಟವಾಗುವುದರಿಂದ ಅಂತಿಮವಾಗಿ ಇದರಿಂದ ಸತ್ಯ ಹೊರಬರುವುದಕ್ಕೆ ಸಹಾಯವಾಗುತ್ತದೆ.

ಅರ್ಹತೆ : ನ್ಯಾಯವೃತ್ತಿ ಹುಟ್ಟಿನಿಂದ ಬರುವಂಥದಲ್ಲ. ಅದು ಸತತ ಪ್ರಯತ್ನದ ಫಲವಾಗಿ ಕರಗತವಾಗುತ್ತದೆ. ವ್ಯಕ್ತಿಯೊಬ್ಬ ಬಹಳ ಮೇಧಾವಿಯಾಗಿರಬಹುದು; ಆದರೂ ಅವನು ನ್ಯಾಯವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ಅಸಮರ್ಥನಾಗಬಹುದು. ಸಾಮಾನ್ಯ ವ್ಯಕ್ತಿಯೊಬ್ಬ ಸ್ವಪ್ರಯತ್ನದಿಂದ ಸತತ ಅಭ್ಯಾಸದಿಂದ ನ್ಯಾಯವೃತ್ತಿಯಲ್ಲಿ ಅದ್ವಿತೀಯನಾಗಬಹುದು. ನ್ಯಾಯಾನ್ಯಾಯ ವಿಚಾರ, ವ್ಯವಹಾರ ಜ್ಞಾನ ಇವು ನ್ಯಾಯವೃತ್ತಿಗೆ ಮೆರುಗನ್ನು ಕೊಡುತ್ತವೆ.

ನ್ಯಾಯವೃತ್ತಿಗೆ ವಾಕ್ಪಟುತ್ವವಿರಬೇಕೆಂಬುದೇನೋ ನಿಜ. ವಾದದಲ್ಲಿ ಹುರುಳಿಲ್ಲದಿದ್ದರೂ ಮಾತಿನ ವೈಖರಿಯಿದ್ದರೆ ಒಂದೊಮ್ಮೆಗೆ ಅದು ಮಾನ್ಯವಾಗಬಹುದು. ಆದರೆ ವಿಷಯದ ವೃತ್ತವನ್ನು ಬಿಟ್ಟು ಹೊರಗೆ ಹೋಗುವಂತೆಯೇ ಇಲ್ಲ. ಕಾನೂನಿನ ಸೀಮಾರೇಖೆಯೊಳಗೆ ಮಾತ್ರ ವಿಷಯವಿರಬೇಕಲ್ಲದೆ ಅದನ್ನು ಮೀರಕೂಡದು.

ಇತರ ವೃತ್ತಿಗಳಿಗಿರುವಂತೆ ನ್ಯಾಯವೃತ್ತಿಗೂ ತಾಂತ್ರಿಕ ಜ್ಞಾನದ ಆವಶ್ಯಕತೆಯಿದೆ. ನ್ಯಾಯವೃತ್ತಿಗೆ ಕಾನೂನಿನ ಅರಿವಿಲ್ಲದಿದ್ದರೆ ಯಾರೂ ಯಶಸ್ವಿಯಾಗಲಾರರು. ಬರೀ ವಾಗಾಡಂಬರದಿಂದ ಪಕ್ಷಗಾರನ ಹಿತ ಸಾಧಿಸಲು ಬರಲಾರದು. ಆದ್ದರಿಂದ ನ್ಯಾಯದ ಅಥವಾ ಕಾನೂನಿನ ಸೂಕ್ಷ್ಮಾತಿಸೂಕ್ಷ್ಮ ಎಳೆಗಳ ಜ್ಞಾನ, ಅವನ್ನು ತನ್ನ ವಾದಕ್ಕೆ ಅಳವಡಿಸಿಕೊಳ್ಳುವ ಜಾಣ್ಮೆ ಇವು ಅಗತ್ಯ.

ನ್ಯಾಯವೃತ್ತಿಯಲ್ಲಿ ಉತ್ತೀರ್ಣತೆ ಪಡೆಯಬೇಕಾದರೆ ಕಾನೂನಿನ ಜ್ಞಾನವನ್ನು ಅಧುನಾತನವಾಗಿರಿಸಿಕೊಳ್ಳಬೇಕಾಗುತ್ತದೆ. ಕಾನೂನಿನ ವಿಚಾರಗಳ ಅಧ್ಯಯನ ಮುಂದುವರಿಯಬೇಕಾಗುತ್ತದೆ. ಕಾನೂನಿನ ಕ್ಷೇತ್ರ ಅತ್ಯಂತ್ ವಿಸ್ತಾರವಾದ್ದು. ಅದು ಸಂಕೀರ್ಣವಾಗುತ್ತಲೇ ಇರುತ್ತದೆ, ವಿಸ್ತರಿಸುತ್ತಲೂ ಇರುತ್ತದೆ. ನ್ಯಾಯಾಲಯಗಳು ನೀಡುತ್ತಿರುವ ಆದೇಶಗಳಲ್ಲಿ ಕಾನೂನಿನ ತತ್ತ್ವದ ಎಳೆಗಳು ಹೆಣೆದುಕೊಂಡಿರುತ್ತವೆ. ಅವುಗಳ ನಿತ್ಯಪರಿಚಯ ಅವಶ್ಯವಾಗುತ್ತದೆ. ಸಮಾಜ ಬೆಳೆದಂತೆ ಕಾನೂನಿನ ಹಿಡಿತ ಬಲವತ್ತರವಾಗುತ್ತ ಹೋಗುತ್ತದೆ. ಅದನ್ನೆಲ್ಲ ತಿಳಿದ ವಕೀಲ ಮಾತ್ರ ತನ್ನ ಬಳಿಗೆ ಬಂದ ಕಕ್ಷಿಗೆ ಯೋಗ್ಯ ಸಲಹೆ ನೀಡಬಲ್ಲ. ನ್ಯಾಯಾಲಯಗಳಲ್ಲಿ ಋಜುತ್ವದ ತೀರ್ಮಾನಕ್ಕೆ ಅವನು ನೆರವಾಗಬಲ್ಲ.

ನ್ಯಾಯವೃತ್ತಿಯನ್ನು ಕೈಗೊಂಡವನಿಗೆ ವಿಷಯಜ್ಞಾನದ ಜೊತೆಗೆ ಜನಜೀವನದ ಅರಿವೂ ಇರಬೇಕು. ಯಾಕೆಂದರೆ ಸಾಮಾನ್ಯನಿಗೆ ಅವನು ಕಾನೂನಿನ ಊರು ಗೋಲು.

ಕಾನೂನಿನ ಪುಸ್ತಕಗಳನ್ನಷ್ಟೇ ಓದಿಕೊಂಡ ಮಾತ್ರಕ್ಕೆ ಸಾಲುವುದಿಲ್ಲ. ದಿನವಹಿ ಬರುತ್ತಿರುವ ಪತ್ರಿಕೆಗಳನ್ನು, ನಿಯತಕಾಲಿಕೆಗಳನ್ನು, ಅಂತರ್ದೇಶೀಯ ಸುದ್ದಿ ಸಾರಗಳನ್ನು ಓದಬೇಕಾಗುತ್ತದೆ. ನ್ಯಾಯವೃತ್ತಿನಿರತನಿಗೆ ಹಲವಾರು ತರದ ವ್ಯಾಜ್ಯಗಳು ಬರುತ್ತಲೇ ಇರುವುದರಿಂದ ಅವನು ವೈಜ್ಞಾನಿಕ, ತಾಂತ್ರಿಕ ವಿಷಯಗಳ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಅವನಿಗೆ ತನ್ನ ಮುಂದೆ ನಿಂತಿರುವ ಸಾಕ್ಷಿಯ ಪಾಟೀ ಸವಾಲು ಮಾಡಲು ಸಾಧ್ಯವಾಗದು. ವೈದ್ಯಶಾಸ್ತ್ರ, ಶರೀರ ವಿಜ್ಞಾನ, ಅಪರಾಧಶಾಸ್ತ್ರ, ಯಂತ್ರಶಿಲ್ಪ, ವ್ಯಾಪಾರೀ ಸಂಪ್ರದಾಯಗಳು, ಲೆಕ್ಕಪತ್ರಗಳ ಕ್ರಮ, ಬೆರಳಚ್ಚಿನ ಜ್ಞಾನ ಇವೇ ಮುಂತಾದವನ್ನೂ ತಿಳಿದುಕೊಂಡಿರಬೇಕು. ಇಲ್ಲವಾದರೆ ಸಾಕ್ಷಿಗಳು ಕೊಡುವ ಹೇಳಿಕೆಗಳು ಅರ್ಥವಾಗುವುದಿಲ್ಲ; ಅವರ ಪಾಟೀಸವಾಲು ಮಾಡಲು ಸಾಧ್ಯವಾಗುವುದಿಲ್ಲ. ನ್ಯಾಯವೃತ್ತಿಯಲ್ಲಿರುವವನು ತನ್ನ ಪರಿಸರದ ಎಲ್ಲ ವಸ್ತುಗಳ ಬಗ್ಗೆ ಮಾಹಿತಿ ಪಡೆದಿರಬೇಕು; ಅವನೊಬ್ಬ ಸುಸಂಸ್ಕ್ರತನಿರಬೇಕು.

ತಾನು ಮಂಡಿಸಬೇಕಾದ ವಿಷಯದ ಬಗ್ಗೆ ಪೂರ್ಣ ಮಾಹಿತಿ ಪಡೆದಿರಬೇಕಾದ್ದೂ ನ್ಯಾಯವಾದಿಗೆ ಅಗತ್ಯ ವಿಷಯಕ್ಕೆ ಉಚಿತವಾದ ಪದಗಳನ್ನು ಸಂಯೋಜಿಸಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಹಿತಮಿತವಾಗಿ ವಾದವನ್ನು ಮಂಡಿಸಬೇಕಾಗುತ್ತದೆ.

ಎಲ್ಲ ವೃತ್ತಿಯಲ್ಲಿರುವಂತೆ ನ್ಯಾಯವೃತ್ತಿಯಲ್ಲಿ ನೀತಿ ನಿಯಮಾವಳಿಗಳಿವೆ. ನ್ಯಾಯವೃತ್ತಿಯನ್ನಾರಿಸಿಕೊಂಡ ವ್ಯಕ್ತಿ ಅಸಂಸ್ಕøತ ರೀತಿಯಲ್ಲಿ ನಡೆದುಕೊಂಡರೆ ಅವನು ಸಮಾಜದಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾನೆ. ಪ್ರಾಮಾಣಿಕತೆ, ಋಜುತ್ವ ಮತ್ತು ಸಚ್ಚಾರಿತ್ರ್ಯ, ತಾಳ್ಮೆ ಇವು ನ್ಯಾಯವೃತ್ತಿಗೆ ಅವಶ್ಯ. ನ್ಯಾಯ ವೃತ್ತಿಯಲ್ಲಿ ತೊಡಗಿದವನು ಜಗಳಗಂಟನಾಗಿದ್ದರೆ, ದಿನವಹಿ ಕಾಣುತ್ತಿರುವ ನ್ಯಾಯಾಧೀಶನ ಜೊತೆ ಜಗಳ ಕಾಯುವವನಾಗಿದ್ದರೆ ಅಂಥವನು ತನ್ನ ಕಕ್ಷಿಯ ಹಿತವನ್ನು ಯಶಸ್ವಿಯಾಗಿ ರಕ್ಷಿಸಲಾರ.

ನ್ಯಾಯವಾದಿ ತನ್ನ ವೃತ್ತಿಯನ್ನು ಅನ್ಯಾಯವಾದ ಸಂಪಾದನೆಗೆ ಬಳಸಿಕೊಳ್ಳಬಾರದು. ನ್ಯಾಯವಾದಿ ತನ್ನ ಕಕ್ಷಿಗೆ ನ್ಯಾಯೋಚಿತ ಸಲಹೆ ಕೊಡುವವನೇ ವಿನಾ ಅವನು ಕಕ್ಷಿಯ ಕಾರ್ಯಭಾರಿಯಲ್ಲ. ನ್ಯಾಯವಾದಿ ತನ್ನ ಕಕ್ಷಿಯ ಹಿತಾಕಾಂಕ್ಷಿಯಾದರೂ ಅವನ ಪರವಾಗಿ ವಾದಿಸುವಾಗ ಕಾನೂನಿನ ಸೀಮಾರೇಖೆಗಳನ್ನು ಅತಿಕ್ರಮಿಸಬಾರದು; ಋಜುತ್ವದ ತಂತುಗಳನ್ನು ಕಡಿದೊಗೆಯಬಾರದು. ವ್ಯಕ್ತಿ ನಿಷ್ಠೆಯ ಜೊತೆಗೆ ವಸ್ತುನಿಷ್ಠೆಯನ್ನು, ಸತ್ಯ ನಿಷ್ಠೆಯನ್ನು ಹೊಂದಿಸಿಕೊಂಡು ಹೋಗುವುದು ನ್ಯಾಯವೃತ್ತಿಯ ಕುಶಲ ಕಲೆ, ಎಲ್ಲೆ ಮೀರಿ ಹೋಗುವ ಕಕ್ಷಿಯನ್ನು ಋಜು ಮಾರ್ಗಕ್ಕೆ ಎಳೆಯುವ ಪ್ರಭಾವ ಆತನಲ್ಲಿರಬೇಕೆಂಬುದು ಆದರ್ಶ.

ಯಾವನೇ ವ್ಯಕ್ತಿ ತನ್ನ ಬಗ್ಗೆ ಪ್ರಕರಣವೊಂದರಲ್ಲಿ ನ್ಯಾಯಾಲಯದಲ್ಲಿ ವಾದಿಸಬೇಕೆಂದು ಕೋರಿದಾಗ ಅದನ್ನು ನಿರಾಕರಿಸಬಹುದೆ ಎಂಬುದು ಒಂದು ಪ್ರಶ್ನೆ. ಸಲಹೆಯನ್ನು ಬಯಸಿ ಬಂದವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ನ್ಯಾಯವೃತ್ತಿಯನ್ನನುಸರಿಸುವವರ ಕರ್ತವ್ಯವಾಗಿರುತ್ತದೆ. ಆದರೆ ಒಂದು ಪಕ್ಷಕ್ಕೆ ನ್ಯಾಯ ಸಲಹೆ ನೀಡುವ ಮತ್ತು ಅದರ ಪರವಾಗಿ ವಾದಿಸುವ ಕೆಲಸವನ್ನೊಪ್ಪಿಕೊಂಡ ಮೇಲೆ ಪ್ರತಿಪಕ್ಷದ ಪರವಾಗಿಯೂ ವಾದಿಸುವುದು ಅಥವಾ ಅದಕ್ಕೂ ಸಲಹೆ ನೀಡುವುದು ದೋಷಕಾರಕವಾಗುತ್ತದೆ. ನ್ಯಾಯವಾದಿ ದ್ವಿಪಕ್ಷಗಳ ವಕಾಲತ್ತನ್ನು ಹಿಡಿದಿರುವುದು ತಿಳಿದು ಬಂದರೆ ಅವನ ವಿರುದ್ದ ವೃತ್ತಿಗೇಡಿನ ಪ್ರಕರಣ ತರಲಾಗುತ್ತದೆ; ಮತ್ತು ಅಂಥವನಿಗೆ ಶಿಕ್ಷೆಯನ್ನೂ ವಿಧಿಸಲಾಗುತ್ತದೆ.

ವ್ಯಾಪಾರವೃತ್ತಿಗೂ ನ್ಯಾಯವೃತ್ತಿಗೂ ಅಂತರವುಂಟು. ವ್ಯಾಪಾರಿ ತನ್ನ ಸರಕಿನ ಮಾರಾಟಕ್ಕಾಗಿ ಎಷ್ಟು ಬೇಕಾದರೂ ಪ್ರಚಾರಕಾರ್ಯ ಕೈಗೊಳ್ಳಬಹುದು. ತನ್ನ ಸರಕು ಉನ್ನತಮಟ್ಟದ್ದೆಂದೂ ಅದನ್ನು ಎಲ್ಲರೂ ಕೊಳ್ಳಬೇಕೆಂದೂ ಜಾಹೀರಾತು ಮಾಡಬಹುದು. ಆದರೆ ನ್ಯಾಯವೃತ್ತಿಯಲ್ಲಿ ಹಾಗಿಲ್ಲ. ತನ್ನ ನ್ಯಾಯವೃತ್ತಿಯ ಬಗ್ಗೆ ಪ್ರಚಾರ ಮಾಡಿಕೊಳ್ಳುವುದಾಗಲಿ ಜಾಹೀರಾತು ನೀಡುವುದಾಗಲಿ ಮಾಡಿದರೆ ಅದು ನಿಯಮಬಾಹಿರ ಪ್ರವೃತ್ತಿಯಾಗುತ್ತದೆ. ವ್ಯಕ್ತಿಗಳಿಗಿಂತಲೂ ನ್ಯಾಯವೃತ್ತಿ ಬಹಳ ಸುಲಭ ಎಂದು ಹಲವರು ಭಾವಿಸಿ ಅದನ್ನೇ ತಮ್ಮ ಮುಖ್ಯ ವೃತ್ತಿಯಾಗಿ ಆರಿಸಿಕೊಳ್ಳುವುದರಿಂದ ಅದರಲ್ಲಿ ಪೈಪೋಟಿ ಹೆಚ್ಚಾಗಿದೆ. ಆದರೂ ನ್ಯಾಯವೃತ್ತಿ ತನ್ನ ನಿಯಮಗಳನ್ನು ಕಾಪಾಡಿಕೊಂಡು ಬಂದಿದೆ. ನಿಯಮಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ವಿಧಿಸಿ ಅಂಥವರನ್ನು ಹೊರತಳ್ಳಿದ ಅನೇಕ ನಿದರ್ಶನಗಳಿವೆ.

ನ್ಯಾಯವಾದಿ ಒಬ್ಬನ ಪರವಾಗಿ ವಾದಿಸಲು ನೇಮಕಗೊಂಡವನಲ್ಲದೆ ಅವನ ಪ್ರತಿನಿಧಿಯಲ್ಲ ಎಂದು ಜಸ್ಟಿಸ್ ಕ್ರಾಮ್ಟನ್ ಹೇಳಿದ್ದಾರೆ. ಅವನು ತನ್ನ ಕಕ್ಷಿಗೆ ತಾನು ಕಲಿತ ನ್ಯಾಯಶಾಸ್ತ್ರದ ಉಪಯೋಗ ಮತ್ತು ಸಲಹೆಯನ್ನು ಮಾತ್ರ ಕೊಡ ಬಲ್ಲವನಾಗಿರುತ್ತಾನೆ; ಅವನ ಹೇಳಿಕೆಯಂತೆ ಕುಣಿಯುವ ಬೊಂಬೆಯಲ್ಲ. ತನ್ನ ಕಕ್ಷಿಯನ್ನು ಗೆಲ್ಲಿಸಲು ಅವನು ಕಾನೂನನ್ನು ಅಸ್ತವ್ಯಸ್ತಗೊಳಿಸಲಾರ. ಗೊತ್ತಿದ್ದೂ ಅವನು ತಪ್ಪು ವಾದಿಸಲಾರ. ತನ್ನ ಕಕ್ಷಿ ತನ್ನ ಪರ ವಾದಿಸಲು ಅಪಾರ ಹಣವನ್ನು ಕೊಟ್ಟಿದರೂ ತಾನು ಮಾತ್ರ ಸತ್ಯ ಮತ್ತು ಧರ್ಮಕ್ಕೆ ಚ್ಯುತಿಯಾಗುವಂತೆ ವರ್ತಿಸಲಾರ. ಹಣ ಗಳಿಸುವ ಒಂದೇ ಉದ್ದೇಶಕ್ಕೆ ತನ್ನನ್ನು ತಾನೇ ಮಾರಿಕೊಳ್ಳಲಾರ. (ಎಸ್.ಎನ್.ಎಂ.ಯು.)

ಇತರರಂತೆ ವಕೀಲನೂ ತನ್ನ ಕೆಲಸದಲ್ಲಿ ಅನೇಕ ಬಗೆಯ ನಿಷ್ಠೆಗಳಿಗೆ ಒಳಗಾಗ ಬೇಕಾಗುತ್ತದೆ. ಪ್ರಥಮತಃ ಅವನು ತನ್ನ ಕಕ್ಷಿಗೆ ನಿಷ್ಠೆಯಿಂದಿರಬೇಕೆಂಬುದು ಸ್ವಯಂವೇದ್ಯ. ಅದರೊಂದಿಗೇ ನ್ಯಾಯ ಪರಿಪಾಲನೆಗೂ ನಿಷ್ಠೆ ತೋರಬೇಕಾಗುತ್ತದೆ. ಜೊತೆಗೆ ಅವನು ತನ್ನ ಸಮಾಜವನ್ನು ಮರೆಯುವಂತಿಲ್ಲ. ತನ್ನಂತೆ ವೃತ್ತಿ ನಿರತರಾದ ಸಹೋದ್ಯೋಗಿಗಳಿಗೂ ಜೊತೆಗಾರರಿಗೂ ಅವನು ನಿಷ್ಠೆಯಿಂದಿರುವುದು ಅವಶ್ಯ. ಅಂತಿಮವಾಗಿ ಆತ್ಮನಿಷ್ಠೆಯೂ ಮುಖ್ಯ. ತನ್ನ ಆರ್ಥಿಕ ಹಿತಗಳನ್ನು ದುರ್ಲಕ್ಷಿಸುವುದಾದರೆ ನ್ಯಾಯವೃತ್ತಿಯನ್ನು ಹಿಡಿದು ಪ್ರಯೋಜನವಾಗದು. ಅದರಷ್ಟೇ ಮುಖ್ಯವಾದ್ದೆಂದರೆ ಮಾನವನಾಗಿ ಅವನು ಕೆಲವು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗುತ್ತದೆ. ಹೀಗೆ ಅವನ ಆತ್ಮನಿಷ್ಠೆ ದ್ವಿಮುಖವಾದ್ದಾಗಿರುತ್ತದೆ.

ಈ ನಿಷ್ಠೆಗಳು ವಿಭಿನ್ನವೂ ಅನೇಕ ವೇಳೆ ಪರಸ್ಪರ ವಿರೋಧಾತ್ಮಕವೂ ಸ್ಪರ್ಧಾತ್ಮಕವೂ ಆಗಿರುವುದುಂಟು. ಇವುಗಳ ಸಾಮರಸ್ಯವನ್ನು ವಿವೇಕಿಯಾದ ನ್ಯಾಯವಾದಿ ಸಾಧಿಸಬೇಕು. ತನ್ನ ಕಕ್ಷಿಯ ಬಗ್ಗೆ ನ್ಯಾಯವಾದಿ ಹೊಂದಿರುವ ನಿಷ್ಠೆಯಿಂದಾಗಿಯೇ ಅವನು ಆ ಕಕ್ಷಿಯ ಹಿತಗಳಿಗೆ ವಿರೋಧವಾದ ಹಿತಗಳುಳ್ಳ ಇನ್ನೊಬ್ಬನನ್ನು ಪ್ರತಿನಿಧಿಸಲು ಇಷ್ಟಪಡುವುದಿಲ್ಲ. ಒಂದು ದ್ಯಾಜ್ಯದ ವಿಚಾರಣೆಯಲ್ಲಿ ಅವನು ತೋರುವ ಉತ್ಸಾಹದಿಂದ ನ್ಯಾಯಕ್ಕೆ ಚ್ಯುತಿ ಬರಬಾರದು. ನ್ಯಾಯ ಹಾಗೂ ನಿಷ್ಪಕ್ಷಪಾತ ದೃಷ್ಟಿಗಳು ಸತ್ತ್ವಪರೀಕ್ಷೆಗೊಳಗಾಗುವ ಸಂದರ್ಭಗಳು ಹಲವು ಉಂಟು. ಕ್ರಿಮಿನಲ್ ಮೊಕದ್ದಮೆಗಳಲ್ಲಿ ಸರ್ಕಾರದ ಪರವಾಗಿ ವಾದಿಸುವ ವಕೀಲನಿಗೆ ಉಭಯಸಂಕಟದ ಪರಿಸ್ಥಿತಿ ಉಂಟಾಗಬಹುದು. ಇಲ್ಲಿ ಅವನು ಒಂದು ಸಾಮಾನ್ಯ ಪಕ್ಷದ ಪರವಾಗಿ ವಾದಿಸುವ ವಕೀಲನಲ್ಲ; ಆತ ಸರ್ಕಾರದ ಪರ. ನಿಷ್ಪಿಕ್ಷಪಾತವಾಗಿ ಆಳುವುದು ಸರ್ಕಾರದ ಹೊಣೆ. ಕೇವಲ ಆಳ್ವಿಕೆಯಷ್ಟೇ ಆದರೆ ಜವಾಬ್ದಾರಿಯಲ್ಲ. ಆದ್ದರಿಂದ ಇಂಥ ಮೊಕದ್ದಮೆಯಲ್ಲಿ ತನ್ನ ಪಕ್ಷವಾದ ಸರ್ಕಾರ ಗೆಲ್ಲುವಂತೆ ಮಾಡುವುದು ಪ್ರಾಸಿಕ್ಯೂಷನ್ನಿನ (ಅಭಿಯೋಜನೆ) ಕರ್ತವ್ಯವಲ್ಲ; ನ್ಯಾಯವಾದ್ದೇ ಆಗುವಂತೆ ನೋಡಿಕೊಳ್ಳುವುದು ಅದರ ಹೊಣೆ. ಅಪರಾಧಿಯೆಂದು ಆಪಾದಿತನಾದವನ ಅಪರಾಧದ ಬಗ್ಗೆ ನ್ಯಾಯವಾದಿಯ ವೈಯಕ್ತಿಕ ಅಭಿಪ್ರಾಯವೇನೇ ಇರಲಿ, ಅಂಥವನ ಪರವಾಗಿ ಪ್ರತಿಪಾದಿಸಲು ಒಪ್ಪುವ ಹಕ್ಕು ನ್ಯಾಯವಾದಿಗೆ ಇರುತ್ತದೆ. ಇಲ್ಲದಿದ್ದರೆ ಸಂದೇಹಾಸ್ಪದ ಪರಿಸ್ಥಿತಿಯ ಫಲವಾಗಿ ಅಪರಾಧದ ಆಪಾದನೆಗೆ ಒಳಗಾದ ನಿರಪರಾಧಿಗೆ ಆಪಾದನೆಯ ವಿರುದ್ಧವಾಗಿ ಸೂಕ್ತವಾದ ಪ್ರತಿವಾದದ ರಕ್ಷಣೆ ದೊರಕದೆ ಅವನಿಗೆ ನ್ಯಾಯ ದೊರಕದೆ ಹೋಗಬಹುದಾದ ಅಪಾಯ ಇರುತ್ತದೆ.

ಭಾರತದಲ್ಲಿ : ಭಾರತದಲ್ಲಿಯ ನ್ಯಾಯವ್ಯವಸಾಯಿಗಳನ್ನು ಸ್ಥೂಲವಾಗಿ ಅಧಿವಕ್ತ ಅಥವಾ ಅಡ್ವೊಕೇಟ್ ಮತ್ತು ನ್ಯಾಯವಾದಿ ಅಥವಾ ಅಟಾರ್ನಿ ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು. ಅಧಿವಕ್ತರು ನ್ಯಾಯಾಲಯಗಳಲ್ಲಿ ಹಾಜರಾಗಿ ತಮ್ಮ ಕಕ್ಷಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಅವರ ಪರವಾಗಿ ವಾದಿಸುತ್ತಾರೆ. ನ್ಯಾಯವಾದಿಗಳು ನ್ಯಾಯಾಲಯದಲ್ಲಿ ಮಂಡಿಸಲು ವಾದವನ್ನು ಸಿದ್ಧಪಡಿಸುತ್ತಾರೆ. ಅಲ್ಲದೆ ಇವರು ನ್ಯಾಯಾಲಯದ ಹೊರಗಡೆ ಮಾಡಬೇಕಾದ ಕೆಲಸವನ್ನೂ ನಿರ್ವಹಿಸುತ್ತಾರೆ. ಹೇಳಿಕೆಗಳ ಅಥವಾ ಆಸ್ತಿ ವರ್ಗಾವಣೆ ಪತ್ರಗಳ ತಯಾರಿಕೆಗಳು ಇಂಥ ಕೆಲಸದ ಉದಾಹರಣೆಗಳು.

ವಿಧಿಸಲಾದ ನ್ಯಾಯಶಾಸ್ತ್ರಪದವಿಯೊಂದನ್ನು ವಿಶ್ವವಿದ್ಯಾಲಯವೊಂದರಲ್ಲಿ ಪಡೆದ, ಅಧಿವಕ್ತನೊಬ್ಬನ ಕಛೇರಿಯಲ್ಲಿ ಅಧ್ಯಯನ ಮಾಡಿರುವ, ಅಧಿವಕ್ತವ್ಯವಸಾಯಕ್ಕೆ ಉಪಯುಕ್ತವೆನಿಸಿದ ಪ್ರಕ್ರಿಯಾ ನ್ಯಾಯವೇ ಮುಂತಾದ ವಿಶೇಷ ವಿಷಯಗಳನ್ನು ಕುರಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವ್ಯಕ್ತಿಗೆ ಉಚ್ಚ ನ್ಯಾಯಾಲಯದ ಅಧಿವಕ್ತನಾಗಿ ಪ್ರವೇಶ ದೊರಕುತ್ತದೆ.

ವಿಧಿಸಲಾದ ನ್ಯಾಯಶಾಸ್ತ್ರ ಪದವಿ ಪಡೆದು ನ್ಯಾಯವಾದಿಯೊಂದಿಗೆ ಕೆಲಸಮಾಡಿ ಅರ್ಹತೆ ಪಡೆದ ವ್ಯಕ್ತಿ ನ್ಯಾಯವಾದಿಯಾಗಿ ಪ್ರದೇಶ ಪಡೆಯಬಹುದು. ನ್ಯಾಯವಾದಿಯೂ ನ್ಯಾಯಾಲಯದಲ್ಲಿ ಹಾಜರಿದ್ದು ವಾದಿಸಬಹುದು. ಅದರೆ ಕೆಲವು ನಿಶ್ಚಿತ ನ್ಯಾಯಾಲಯಗಳಲ್ಲಿ ಹಾಗೂ ನಿಶ್ಚಿತ ವ್ಯಾಜ್ಯಗಳಲ್ಲಿ ವಾದಿಸಲು ಅವನು ಅಧಿವಕ್ತನಿಗೇ ಸೂಚನೆ ನೀಡಬೇಕಾಗುತ್ತದೆ. ಕೆಲವು ಉಚ್ಚ ನ್ಯಾಯಾಲಯಗಳ ಮೂಲಪಕ್ಷಗಳಲ್ಲಿ (ಒರಿಜಿನಲ್ ಸೈಡ್) ಈ ನಿಯಮವಿದೆ. ಕೆಲವು ಉಚ್ಚ ನ್ಯಾಯಾಲಯಗಳ ಮೂಲ ಪಕ್ಷಗಳಲ್ಲಿ ನ್ಯಾಯವಾದಿಯ ಅನುದೇಶವಿಲ್ಲದೆ (ಇನ್‍ಸ್ಟ್ರಕ್ಷನ್) ಅಧಿವಕ್ತ ಹಾಜರಾಗುವಂತಿಲ್ಲ. ಸರ್ವೋಚ್ಚ ನ್ಯಾಯಾಲಯದಲ್ಲಿ ಅಭ್ಯಾವೇಶಗೊಂಡ (ಎನ್ರೋಲ್) ಅಧಿವಕ್ತರು ಮಾತ್ರವೇ ಅಲ್ಲಿ ಹಾಜರಾಗಬಹುದು. ಅವರಲ್ಲಿ ಜ್ಯೇಷ್ಠ (ಸೀನಿಯರ್) ಮತ್ತು ಕನೀಯ (ಜ್ಯೂನಿಯರ್) ಎಂದು ಎರಡು ವರ್ಗಗಳುಂಟು. ಜ್ಯೇಷ್ಠ ಅಧಿವಕ್ತನ ಅನುದೇಶ ಪಡೆದೇ ಕನೀಯ ಅಧಿವಕ್ತ ನ್ಯಾಯಾಲಯದಲ್ಲಿ ಹಾಜರಾಗಬೇಕು.

ನ್ಯಾಯವಾದಿಗಳ ವರ್ಗಕ್ಕೆ ಪ್ರವೇಶ ನೀಡುವ ವಿಧಾನವನ್ನು ನಿಯಂತ್ರಿಸುವ ಸಲುವಾಗಿ ನ್ಯಾಯಾವಾದಿ ಮಂಡಲಿಗಳು (ಬಾರ್ ಕೌನ್ಸಿಲ್) ಹಲವು ರಾಜ್ಯಗಳಲ್ಲಿವೆ. ಇದರ ಸದಸ್ಯರನ್ನು ಮುಖ್ಯವಾಗಿ ಅಧಿವಕ್ತರು ಆಯ್ಕೆ ಮಾಡುತ್ತಾರೆ. ಯಾವನೇ ನ್ಯಾಯವಾದಿಯ ವಿಚಾರವಾಗಿ ಬಂದ ಆಪಾದನೆಗಳ ವಿಚಾರಣೆ ಮಾಡಬೇಕೆಂದು ನ್ಯಾಯವಾದಿ ಮಂಡಲಿಯನ್ನು ಉಚ್ಚನ್ಯಾಯಾಲಯ ಕೋರಿಕೊಳ್ಳಬಹುದು. ನ್ಯಾಯವಾದಿ ಮಂಡಲಿಯ ವರದಿಯ ಮೇಲೆ ಉಚ್ಚನ್ಯಾಯಾಲಯ ಕ್ರಮ ತೆಗೆದುಕೊಳ್ಳಬಹುದು. ನ್ಯಾಯವಾದಿಯ ವರ್ಗದಿಂದ ತೆಗೆದುಹಾಕಬಹುದು, ಇಲ್ಲವೇ ಅವನನ್ನು ನಿಲಂಬನಗೊಳಿಸಬಹುದು (ಸಸ್ಪೆಂಡ್), ಅಥವಾ ಅವನಿಗೆ ವಾಗ್ದಂಡನೆ (ಸೆನ್ಷರ್) ವಿಧಿಸಬಹುದು. *