ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯಾಂಗ, ಮತ್ತು ನ್ಯಾಯಾಲಯ ಅಧಿಕಾರಿಗಳು

ವಿಕಿಸೋರ್ಸ್ದಿಂದ

ನ್ಯಾಯಾಂಗ, ಮತ್ತು ನ್ಯಾಯಾಲಯ ಅಧಿಕಾರಿಗಳು - ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ನ್ಯಾಯಾಲಯಗಳ ಉದ್ದೇಶ ನ್ಯಾಯ ನೀಡುವುದೇ ಆಗಿದ್ದರೂ ರಾಷ್ಟ್ರರಾಷ್ಟ್ರಗಳ ನ್ಯಾಯ ವ್ಯವಸ್ಥೆಗಳ ಸಂಘಟನೆ, ನ್ಯಾಯಾಲಯ ಅಧಿಕಾರಿಗಳ ಅಧಿಕಾರನಾಮಗಳು, ಅವರಿಗೆ ನಿಗದಿ ಮಾಡಲಾದ ಕಾರ್ಯಭಾರಗಳು-ಇವುಗಳಲ್ಲಿ ವ್ಯತ್ಯಾಸಗಳಿರುತ್ತವೆ. ಏಕೀಕೃ ನ್ಯಾಯ ವ್ಯವಸ್ಥೆ ಇರುವ ಭಾರತದಲ್ಲಿ ಕೇಂದ್ರ, ರಾಜ್ಯಗಳು, ಜಿಲ್ಲೆಗಳು, ತಾಲ್ಲೂಕುಗಳು ಮುಂತಾಗಿ ವಿವಿಧ ಮಟ್ಟಗಳಲ್ಲಿ ಪ್ರತ್ಯೇಕ ನ್ಯಾಯಾಲಯಗಳಿವೆ; ಮತ್ತು ನ್ಯಾಯಾಲಯ ಅಧಿಕಾರಿಗಳಿದ್ದಾರೆ. ಕೇಂದ್ರ ಮಟ್ಟಿದಲ್ಲಿರುವ ಸರ್ವೋಚ್ಚ ನ್ಯಾಯಾಲಯ ಉಳಿದೆಲ್ಲ ನ್ಯಾಯಾಲಯಗಳಿಗಿಂತ ಹೆಚ್ಚಿನ ನ್ಯಾಯಾಧಿಕಾರವುಳ್ಳದ್ದಾಗಿದೆ. ಅದು ದೆಹಲಿಯಲ್ಲಿದೆ. ಅದು ಭಾರತದ ಸಂವಿಧಾನದ ರಕ್ಷಕ ಹಾಗೂ ಅದಕ್ಕೆ ವ್ಯಾಖ್ಯಾನ ನೀಡುವ ನ್ಯಾಯಾಲಯ. ಎಲ್ಲ ಪ್ರಕಾರದ ವ್ಯಕ್ತಿಸ್ವಾತಂತ್ರ್ಯಗಳ ಮೇಲ್ವಿಚಾರಣೆಯ ಭಾರೆ ಅದರದು. ಅದಕ್ಕೆ ಮೂಲಭೂತವಾದ ಮತ್ತು ಅಪೀಲುಗಳನ್ನು ನಿರ್ಣಯಿಸುವ ನ್ಯಾಯಾಧಿಕಾರಗಳಿವೆ. ಅದಕ್ಕಿರುವ ಮೂಲಭೂತ ನ್ಯಾಯಾಧಿಕಾರದಿಂದಾಗಿ ಅದು ಕೇಂದ್ರ ಮತ್ತು ರಾಜ್ಯಗಳ ಹಾಗೂ ರಾಜ್ಯರಾಜ್ಯಗಳ ನಡುವಿನ ವ್ಯಾಜ್ಯಗಳನ್ನು ನಿರ್ಣಯಿಸುತ್ತದೆ. ಸಂವಿಧಾನದಲ್ಲಿ ಹೇಳಿದ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ಮೂಲಭೂತ ನ್ಯಾಯಾಧಿಕಾರವನ್ನು ಚಲಾಯಿಸುವ ಸಂದರ್ಭಗಳಲ್ಲಿ ಮತ್ತು ಮೂಲಭೂತ ನ್ಯಾಯಾಧಿಕಾರವನ್ನು ಚಲಾಯಿಸುವ ಸಂದರ್ಭಗಳಲ್ಲಿ ಅದು ಸೂಕ್ತ ಆಜ್ಞೆ ಮತ್ತು ಆದೇಶಗಳನ್ನು ಜಾರಿ ಮಾಡಬಲ್ಲುದು. ರಾಜ್ಯಗಳ ಉಚ್ಚ ನ್ಯಾಯಾಲಯಗಳು ಪ್ರಮಾಣ ಪತ್ರವನ್ನಿತ್ತಾಗ ಇಲ್ಲವೆ ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಕಾನೂನಿನ ಸಾರಭೂತವಾದ ಪ್ರಶ್ನೆಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯಗಳು ನೀಡಿದ ನಿರ್ಣಯ, ಡಿಕ್ರಿ ಇಲ್ಲವೇ ಅಂತಿಮ ಆದೇಶ ಇವುಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ವಿಶೇಷ ಅನುಮತಿಯೊಂದಿಗೆ ಅದಕ್ಕೆ ಅಪೀಲು ಮಾಡಬಹುದು. ಸಿವಿಲ್ ಪ್ರಕರಣಗಳಲ್ಲಿ ವಿವಾದಕ್ಕೆ ಒಳಗಾದ ವಿಷಯದ ಮೌಲ್ಯವಾಗಲಿ, ನಿರ್ಣಯ, ಡಿಕ್ರಿ ಅಥವಾ ಅಂತಿಮ ಆದೇಶಕ್ಕೆ ಸಂಬಂಧಿಸಿದ ಸ್ವತ್ತಿನ ಮೌಲ್ಯವಾಗಲಿ ರೂ. 20,000ಕ್ಕೆ ಕಡಿಮೆ ಇಲ್ಲದಿದ್ದರೆ, ಇಲ್ಲವೇ ಯಾವುದೇ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಮಾಡಲು ತಕ್ಕುದೆಂದು ಪ್ರಮಾಣೀಕರಿಸಿದಾಗ ಆ ನ್ಯಾಯಾಲಯಕ್ಕೆ ಅಪೀಲು ಮಾಡಬಹುದು. ಕ್ರಿಮಿನಲ್ ಪ್ರಕರಣಗಳಲ್ಲಿ ಆಪಾದಿತನ ವಿಮೋಚನಾದೇಶವನ್ನು ಹೊಡೆದು ಹಾಕಿ ಅವನನ್ನು ಮರಣದಂಡನೆಗೆ ಉಚ್ಚ ನ್ಯಾಯಾಲಯ ಗುರಿ ಮಾಡಿದಾಗ, ಅದು ತನ್ನ ನ್ಯಾಯಾಧಿಕಾರಕ್ಕೆ ಒಳಪಟ್ಟ ನ್ಯಾಯಾಲಯವೊಂದರ ಎದುರಿಗಿದ್ದ ಪ್ರಕರಣವನ್ನು ಹಿಂತೆಗೆದುಕೊಂಡು ಅದನ್ನು ತಾನೇ ನಿರ್ಣಯಿಸಿ ಆಪಾದಿತನಿಗೆ ಮರಣದಂಡನೆ ವಿಧಿಸಿದಾಗ, ಇಲ್ಲವೇ ಅದು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಮಾಡಲು ತಕ್ಕುದಾದ ಪ್ರಕರಣ ಎಂದು ಪ್ರಮಾಣೀಕರಿಸಿದಾಗ ಆ ನ್ಯಾಯಾಲಯಕ್ಕೆ ಅಪೀಲು ಮಾಡಬಹುದು. ಕ್ರಿಮಿನಲ್ ಪ್ರಕರಣವೊಂದರಲ್ಲಿ ಉಚ್ಚ ನ್ಯಾಯಾಲಯ ನೀಡಿದ ನಿರ್ಣಯ, ಅಂತಿಮ ಆದೇಶ ಇಲ್ಲವೇ ದಂಡನೆಯನ್ನು ಪುನಃ ವಿಚಾರಣೆಮಾಡಿ ತೀರ್ಮಾನ ನೀಡಬೇಕೆಂದು ಸಂಸತ್ತೂ ಆ ನ್ಯಾಯಾಲಯಕ್ಕೆ ಅಧಿಕಾರ ನೀಡಬಹುದು. ಅಪೀಲುಗಳಿಗೆ ಸಂಬಂಧಿಸಿದಂತೆ ಅದಕ್ಕೆ ಇರುವ ಅತ್ಯಂತ ವಿಸ್ತಾರವಾದ ನ್ಯಾಯಾಧಿಕಾರದಿಂದಾಗಿ ಅದು ದೇಶದ ಯಾವುದೇ ಪ್ರಕರಣ ಅಥವಾ ವಿಷಯದಲ್ಲಿ ಯಾವುದೇ ನ್ಯಾಯಾಲಯ ಇಲ್ಲವೇ ನ್ಯಾಯಾಧಿಕರಣ ನೀಡಿದ ನಿರ್ಣಯ, ಡಿಕ್ರಿ, ದಂಡನೆ, ಆದೇಶ ಇವುಗಳ ವಿರುದ್ಧ ಅಪೀಲು ಮಾಡಲು ವಿಶೇಷ ಅನುಮತಿ ನೀಡಬಹುದಾಗಿದೆ. ಸಂವಿಧಾನದ 148ನೆಯ ಅನುಚ್ಛೇದದ ಪ್ರಾಕಾರ ರಾಷ್ಟ್ರಪತಿ ಅದಕ್ಕೆ ಒಪ್ಪಿಸಿದ ವಿಷಯಗಳಲ್ಲಿ ಸಲಹೆ ನೀಡುವ ವಿಶೇಷ ನ್ಯಾಯಾಧಿಕಾರವೂ ಅದಕ್ಕಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ರಾಷ್ಟ್ರಪತಿಯಿಂದ ನೇಮಕ ಹೊಂದಿದ ಒಬ್ಬ ಶ್ರೇಷ್ಠ ನ್ಯಾಯಾಧೀಶನೂ ಇತರ ನ್ಯಾಯಾಧೀಶರೂ ಇರುತ್ತಾರೆ.

ಸರ್ವೋಚ್ಚ ನ್ಯಾಯಾಲಯದ ಅನಂತರ (ಅದಕ್ಕೆ ಅಧೀನವಾಗಿ) ನ್ಯಾಯಾಂಗದ ಸ್ಥೂಲ ಸ್ವರೂಪ ಈ ರೀತಿ ಇದೆ : 1 ಉಚ್ಚ ನ್ಯಾಯಾಲಯ (ಪ್ರತಿ ರಾಜ್ಯದ ರಾಜಧಾನಿಯಲ್ಲಿ), 2 ಜಿಲ್ಲಾ ನ್ಯಾಯಾಲಯ (ಪ್ರತಿ ಜಿಲ್ಲೆಯ ಮುಖ್ಯಸ್ಥಳದಲ್ಲಿ), 3 ತಾಲ್ಲೂಕು ಅಥವಾ ತಾಲ್ಲೂಕುಗಳ ನ್ಯಾಯಾಲಯ. ಜಿಲ್ಲಾ ನ್ಯಾಯಾಲಯದಿಂದ ಕೆಳಮಟ್ಟದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣದ ಬಗ್ಗೆ ಪ್ರತ್ಯೇಕ ವಿಭಾಗಗಳು ಇರುತ್ತವೆ. ಖಾಸಗಿ ಹಕ್ಕುಗಳ ಸ್ವತ್ತು ವಗೈರೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಮೂಲದಲ್ಲಿ ಅತಿ ಕೆಳಗಿನ ನ್ಯಾಯಾಲಯದಲ್ಲಿ ದಾಖಲೆಪಡಿಸಬೇಕಾಗುತ್ತದೆ. ಇದರ ಅಧಿಕಾರವ್ಯಾಪ್ತಿಯನ್ನು ಭೌಗೋಲಿಕ ರೆವಿನ್ಯೂ ತಾಲ್ಲೂಕಿನ ಗಡಿಗೂ ಆರ್ಥಿಕವಾಗಿ ರೂ. 10,000ಕ್ಕೆ, ಅಂದರೆ ರೂ.9,999 ವರೆಗೂ, ಸೀಮಿತಗೊಳಿಸಲಾಗಿದೆ. ವ್ಯಾಜ್ಯಕ್ಕೆ ಸಂಬಂಧಿಸಿದ ಹಣದ ಮೊತ್ತ ಅಥವಾ ಆಸ್ತಿಯ ಕಿಮ್ಮತ್ತು (ನ್ಯಾಯಾಲಯ ಶುಲ್ಕ ಕಾನೂನಿನನ್ವಯ) ರೂ.10,000ನ್ನು ಮೀರಿದಲ್ಲಿ ಅಂಥ ವಿವಾದವನ್ನು ಮೂಲದಲ್ಲೇ ಜಿಲ್ಲೆಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಅದರಂತೆ ಶಿಕ್ಷೆಯ ಅವಧಿ ಹಾಗೂ ದಂಡದ ಗಾತ್ರಕ್ಕೆ ಅನುಗುಣವಾಗಿ, ಬೇರೆ ಬೇರೆ ರೀತಿಯ ಗುನ್ಹೆಯ ಪ್ರಕರಣಗಳನ್ನು ತಾಲ್ಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ನ್ಯಾಯಾಲಯದ ಕಾರ್ಯಕ್ಷೇತ್ರದೊಳಗೇ ದಾಖಲೆಪಡಿಸತಕ್ಕದ್ದಾಗಿದೆ. ಉದಾ : ಖೂನಿ ಪ್ರಕರಣವನ್ನು ಜಿಲ್ಲೆಗೆ ಒಳಪಟ್ಟ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲೇ ವಿಚಾರಣೆ ನಡೆಸತಕ್ಕದ್ದು.

ರೆವಿನ್ಯೂ ನ್ಯಾಯಾಲಯಗಳ ವ್ಯವಸ್ಥೆ ಹೀಗಿರುತ್ತದೆ : ನ್ಯಾಯಮಂಡಲಿ (ಟ್ರಿಬ್ಯೂನಲ್), ವಿಭಾಗಾಧಿಕಾರಿ, ಜಿಲ್ಲಾಧಿಕಾರಿ (ಈತ ಜಿಲ್ಲಾ ದಂಡಾಧಿಕಾರಿ ಕೂಡ), ತಹಸೀಲ್ದಾರ (ತಾಲ್ಲೂಕಿನ ರೆವಿನ್ಯೂ ಮುಖ್ಯಸ್ಥ). ಈ ಶ್ರೇಣಿಯಲ್ಲಿ ಕೆಳಗಿನ ನ್ಯಾಯಾಲಯದ ಆಜ್ಞೆಗಳ ವಿರುದ್ಧ ಅದರ ಮೇಲಣ ನ್ಯಾಯಾಲಯಕ್ಕೂ ಅಂತಿಮವಾಗಿ ನ್ಯಾಯ ಮಂಡಲಿಗೂ ಮೇಲ್ಮನವಿ ಸಲ್ಲಿಸಬಹುದು. ಇದು ಪ್ರಮುಖವಾಗಿ ಕಾರ್ಯಾಂಗದ ಅಂಶವನ್ನೂ ಸ್ವಲ್ಪಮಟ್ಟಿಗೆ ನ್ಯಾಯಾಂಗದ ಅಂಶವನ್ನೂ ಹೊಂದಿದೆ. ಕಾರ್ಯಾಂಗದ ಆಚರಣೆಯಲ್ಲಿ ಬರಬಹುದಾದ ಸಣ್ಣಪುಟ್ಟ ಅಡಚಣೆಗಳನ್ನು ನಿವಾರಣೆಮಾಡಿಕೊಳ್ಳುವ ಮಟ್ಟಿಗೆ ಮಾತ್ರ ನ್ಯಾಯಾಂಗಕ್ಕೆ ಹೋಲಿಸಬಹುದಾದ ಆಧಿಕಾರವನ್ನು ಇದು ಹೊಂದಿದೆಯೇ ವಿನಾ ಇದು ಮುಖ್ಯವಾದ ವ್ಯಾಜ್ಯ ವ್ಯವಹರಣೆಗಳನ್ನು ತೀರ್ಮಾನಿಸಲಾರದು. ಕೂಲಿಗಾರರ ನ್ಯಾಯಮಂಡಳಿ, ಪಂಚಾಯಿತಿ ನ್ಯಾಯಾಲಯ ಮುಂತಾದವೂ ನ್ಯಾಯಾಂಗದ ಕೆಲವು ಹೊಣೆಗಾರಿಕೆಗಳನ್ನು ನಿರ್ವಹಿಸುತ್ತವೆ.

ಉಚ್ಚನ್ಯಾಯಾಲಯ: ಪ್ರತಿಯೊಂದು ರಾಜ್ಯದಲ್ಲೂ ಒಂದು ಉಚ್ಚನ್ಯಾಯಾಲಯ ಇರುತ್ತದೆ. ಅದಕ್ಕೂ ಮೂಲಭೂತವಾದ ಮತ್ತು ಅಪೀಲುಗಳಿಗೆ ಸಂಬಂಧಿಸಿದ ನ್ಯಾಯಾಧಿಕಾರಗಳಿರುತ್ತವೆ. ರಾಜ್ಯದ ನ್ಯಾಯಾಡಳಿತವೆಲ್ಲ ಅದರ ಮೇಲ್ವಿಚಾರಣೆಯಲ್ಲಿಯೇ ನಡೆಯುತ್ತದೆ. ಅದು ತನ್ನ ನ್ಯಾಯಾಧಿಕಾರದೊಳಗಿರುವ ಯಾವುದೇ ವ್ಯಕ್ತಿಗೆ, ಅಧಿಕಾರಿಗೆ ಇಲ್ಲವೇ ಸರ್ಕಾರಕ್ಕೆ ಆದೇಶಗಳನ್ನು ಇಲ್ಲವೇ ಆಜ್ಞೆಗಳನ್ನು ಹಾಗೂ ಸಂವಿಧಾನದ 3ನೆಯ ಭಾಗದಲ್ಲಿ ಹೇಳಿರುವ ಹಕ್ಕುಗಳ ಜಾರಿಗಾಗಿ ಅಥವಾ ಇನ್ನಾವುದೇ ಉದ್ದೇಶಕ್ಕಾಗಿ ರಿಟ್ಟುಗಳನ್ನು ನೀಡಬಹುದು. ತನ್ನ ನ್ಯಾಯಾಧಿಕಾರದೊಳಗಿದ್ದ ನ್ಯಾಯಾಲಯಗಳ ಮತ್ತು ನ್ಯಾಯಾಧಿಕರಣಗಳ ಆಚರಣೆ ಮತ್ತು ನ್ಯಾಯ ನಿರ್ಣಯ ವಿಧಿಗಳನ್ನು ಕ್ರಮಪಡಿಸುವುದಕ್ಕೆ ಅದು ನಿಯಮಗಳನ್ನು ಮಾಡಬಹುದು. ಅದರಲ್ಲಿ ಒಬ್ಬ ಮುಖ್ಯ ನ್ಯಾಯಾಧೀಶನೂ ರಾಷ್ಟ್ರಾಧ್ಯಕ್ಷರು ಅವಶ್ಯ ಕಂಡಂತೆ ನೇಮಕ ಮಾಡಿದಷ್ಟು ಮಂದಿ ನ್ಯಾಯಾಧೀಶರೂ ಇರುತ್ತಾರೆ. ಮುಖ್ಯ ನ್ಯಾಯಾಧೀಶನನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶನ ಮತ್ತು ರಾಜ್ಯಪಾಲನ ಸಲಹೆ ಪಡೆದು ನೇಮಿಸಲಾಗುತ್ತದೆ. ಈ ನ್ಯಾಯಾಧೀಶರು 60 ವರ್ಷ ವಯಸ್ಸಿನವರಾಗುವ ವರೆಗೆ ಅಧಿಕಾರದಲ್ಲಿರುತ್ತಾರೆ.

ಆಧೀನ ನ್ಯಾಯಾಲಯಗಳು: ಸಿವಿಲ್ ನ್ಯಾಯಾಡಳಿತಕ್ಕೆ ಸಂಬಂಧಿಸಿದಂತೆ ಇಡೀ ದೇಶಾದ್ಯಂತ ಅಧೀನ ನ್ಯಾಯಾಲಯಗಳ ರಚನೆ ಮತ್ತು ಕಾರ್ಯಗಳಲ್ಲಿ ಸಾಮ್ಯತೆಯಿದೆ. ಪ್ರತಿ ರಾಜ್ಯವನ್ನು ಅನೇಕ ಜಿಲ್ಲೆಗಳಾಗಿ ವಿಭಾಗಿಸಲಾಗಿದೆ. ಪ್ರತಿ ಜಿಲ್ಲೆಗೆ ಒಬ್ಬ ಜಿಲ್ಲಾ ನ್ಯಾಯಾಧೀಶ ಇರುತ್ತಾನೆ. ಅವನಿಗೂ ಮೂಲಭೂತ ಮತ್ತು ಅಪೀಲು ನಿರ್ಣಯ ನ್ಯಾಯಾಧಿಕಾರಗಳಿರುತ್ತವೆ. ಅವನದು ಜಿಲ್ಲೆಯ ಮುಖ್ಯ ಸಿವಿಲ್ ನ್ಯಾಯಾಲಯ. ಅವನಿಗೆ ಅಧೀನವಾಗಿ ಅನೇಕ ಬೇರೆ ಬೇರೆ ದರ್ಜೆಗಳ ನ್ಯಾಯಾಲಯಗಳ ನ್ಯಾಯಾಧಿಕಾರಿಗಳಿರುತ್ತಾರೆ. ದಾವೆಗಳನ್ನು ವಿಚಾರಿಸುವುದಲ್ಲದೆ ಪಾಲೆನ (ಗಾರ್ಡಿಯನ್‍ಷಿಪ್), ವಿವಾಹ, ವಿವಾಹವಿಚ್ಛೇದ, ಉಯಿಲು ಮೊದಲಾದ ವಿಷಯಗಳ ಮೇಲೆ ಸಿವಿಲ್ ನ್ಯಾಯಾಲಯಗಳಿಗೆ ನ್ಯಾಯಾಧಿಕಾರವಿರುತ್ತದೆ. ಕ್ರಿಮಿನಲ್ ನ್ಯಾಯಾಡಳಿತ ಮತ್ತು ಕ್ರಿಮಿನಲ್ ನ್ಯಾಯಾಲಯಗಳ ರಚನೆಯೂ ದಂಡಪ್ರಕ್ರಿಯಾ ಸಂಹಿತೆಯಿಂದ ನಿಯಂತ್ರಿತವಾಗಿರುತ್ತದೆ. ಜಿಲ್ಲೆಯ ಸಿವಿಲ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶನೇ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಸೆಷನ್ಸ್ ವಿಭಾಗದ ಮುಖ್ಯ ನ್ಯಾಯಾಧೀಶನಾಗಿರುತ್ತಾನೆ. ಕೆಳಗಿನ ದರ್ಜೆಯ ನ್ಯಾಯಾಲಯಗಳ ನ್ಯಾಯಾಧಿಕಾರಿಗಳು ಅರಂಭದ ವಿಚಾರನೆ ನಡೆಯಿಸಿ ಅವನಿಗೆ ಒಪ್ಪಿಸಿದ ಹೆಚ್ಚು ಭೀಕರ ಅಪರಾಧಗಳಲ್ಲಿ ಮಾತ್ರ ಅವನು ತೀರ್ಪು ನೀಡುತ್ತಾನೆ. ಉಳಿದ ಅಪರಾಧಗಳ ವಿಷಯದಲ್ಲಿ ಕೆಳಗಿನ ದರ್ಜೆಯ ನ್ಯಾಯಾಲಯಗಳ ನ್ಯಾಯಾಧಿಕಾರಿಗಳು ವಿಚಾರಣೆ ನಡೆಯಿಸುತ್ತಾರೆ. ಯಾವುದೇ ನ್ಯಾಯಾಲಯವಾಗಲಿ, ಅದಕ್ಕೆ ಒಳಪಟ್ಟ ನ್ಯಾಯಾಧಿಕಾರಿ ಅಥವಾ ನಿರ್ಣಾಯಕನಾಗಲಿ, ಸಂಬಂಧಪಟ್ಟ ಕಾನೂನಿನ ಚೌಕಟ್ಟಿನಲ್ಲಿ, ಅವನ ಅಧಿಕಾರ ವ್ಯಾಪ್ತಿಯ ಒಳಗೆ ಮಾತ್ರ. ವ್ಯವಹರಿಸಬಹುದು. ಅದಕ್ಕೆ ಮೀರಿದ ಯಾವುದೇ ನಿರ್ಣಯ ಯಾರಿಗೂ ಬಂಧನಕಾರಿಯಾಗಲಾರದು. ಅದು ಸಿಂಧುವಲ್ಲ. ಯಾವುದನ್ನು ನ್ಯಾಯ ಎಂದು ಕಾನೂನು ಹೇಳುತ್ತದೆಯೋ, ಆ ನ್ಯಾಯವನ್ನು ಮಾತ್ರ ನ್ಯಾಯಾಲಯ ದೊರಕಿಸಿಕೊಡಲು ಸಮರ್ಥವಾಗಿದೆ. ಉಚ್ಚನ್ಯಾಯಾಲಯ ಮತ್ತು ಸವೋಚ್ಚ ನ್ಯಾಯಾಲಯವಾದರೂ ಸಂವಿಧಾನದ ವಿಧಿಗಳ ಅರ್ಥವಿವರಣೆಯನ್ನು ಮಾತ್ರ ನೀಡಿ, ಸಂಬಂಧಿಸಿದ ವಿವಾದಕ್ಕೆ ಅವನ್ನು ಅನ್ವಯಿಸಿ ನಿರ್ಣಯ ನೀಡುತ್ತದೆ.

ಸರ್ವೊಚ್ಚ ನ್ಯಾಯಾಲಯದ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ. ರಾಷ್ಟ್ರದ ಎಲ್ಲ ಉಚ್ಚ ನ್ಯಾಯಾಲಯಗಳೂ ಅವುಗಳ ಕೆಳಗಿನ ಎಲ್ಲ ನ್ಯಾಯಾಲಯಗಳೂ ಈ ನಿರ್ಣಯಕ್ಕೆ ಬದ್ಧವಾಗಿರುತ್ತೆವೆ. ಸರ್ವೋಚ್ಚ್ಚ ನ್ಯಾಯಾಲಯದ ನಿರ್ಣಯದ ವಿರುದ್ಧ ಮೇಲ್ಮನವಿಯಿಲ್ಲ. ಅದು ಈ ದೇಶದ ಅಂತಿಮ ನ್ಯಾಯತೀರ್ಮಾನದ ಘಟಕ.

ನ್ಯಾಯಾಲಯವೊಂದರ ತೀರ್ಮಾನವನ್ನು ದೂಷಣೆ ಮಾಡುವ ಅಧಿಕಾರ ಅಯಾ ನ್ಯಾಯಾಲಯದ ಮೇಲಿನ ದರ್ಜೆಯ ನ್ಯಾಯಾಲಯಕ್ಕೆ ಮಾತ್ರ ಇದೆ. ವಿಧಾನಾಂಗವೂ ಕಾರ್ಯಾಂಗವೂ ಅದಕ್ಕೆ ಕೇವಲ ಬದ್ದವಾಗಿರುತ್ತವೆ. ಪ್ರಜಾಪ್ರಭುತ್ವ ಪದ್ಧತಿಯಲ್ಲಿ ನ್ಯಾಯಾಂಗದ ಸಂಸ್ಥೆಗಳಿಗೆ ಇರಬಹುದಾದ ಒಂದು ವಿಶಿಷ್ಟ ಸ್ಥಾನ ಮತ್ತು ಸ್ವಾತಂತ್ರ್ಯ ಇದಾಗಿರುತ್ತದೆ. ನ್ಯಾಯಾಲಯವೊಂದರಲ್ಲಿ ವಿಚಾರಣೆ ನಡೆಯುತ್ತಿರುವಾಗ ಕೂಡ ಯಾರೊಬ್ಬರು ಅದರ ನಿರ್ಣಯದ ಬಗ್ಗೆ ಚರ್ಚಿಸುವುದನ್ನೂ ಅಭಿಪ್ರಾಯ ವ್ಯಕ್ತಪಡಿಸುವುದನ್ನೂ ಕಾನೂನು ನಿಷೇಧಿಸುತ್ತದೆ. ತನ್ನದೇ ಅದ ಸ್ವತಂತ್ರ ನಿರ್ಣಯಕ್ಕೆ ಬರುವಲ್ಲಿ ನ್ಯಾಯಾಂಗ ಅನಿರ್ಬಂಧ ವಿವೇಚನೆ ಹೊಂದಿದೆ. ಯಾವುದೇ ಅಕ್ಷೇಪಾರ್ಹ ವಿಮರ್ಶೆಯನ್ನು ನ್ಯಾಯಾಲಯದ ಇಂಥ ಸ್ವಾತಂತ್ರ್ಯಕ್ಕೆ ದಕ್ಕೆ ತರುವ, ನ್ಯಾಯಾಲಯಕ್ಕೆ ಅಗೌರವ ಸೂಚಿಸುವ ವಿಷಯವೆಂದು ಪರಿಗಣಿಸಿ ಅದನ್ನು ಗಣನೆಗೆ ತೆಗೆದುಕೊಂಡು ಶಿಕ್ಷಿಸುವ ಅಧಿಕಾರವನ್ನು ನ್ಯಾಯಾಂಗ ಹೊಂದಿದೆ. ತನಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತಾನೇ ನಿರ್ಣಯ ಕೊಡುವುದು ಬರಬಾರದು ಎಂಬ ವಸ್ತುನಿಷ್ಠ ತತ್ತ್ವಕ್ಕೆ ಇದು ಒಂದು ವಿಸಂಗತ ವಿಷಯವೆನಿಸಿದರೂ, ನಿಯಮದ ಅಪವಾದವೆಂದೆಣಿಸಲ್ಪಡುತ್ತದೆ. ಯಾವ ಬೆಲೆಯಿಂದಾದರೂ ಸರಿ, ನ್ಯಾಯಾಲಯದ ಸ್ವಾತಂತ್ರ್ಯವನ್ನು, ಗೌರವವನ್ನು ಕಾಯ್ದುಕೊಳ್ಳಬೇಕೆಂಬುದು ಮೂಲತತ್ತ್ವ ಹಾಗೂ ಉದ್ದೇಶ. ದೇಶದ ಎಲ್ಲ ನ್ಯಾಯಾಲಯಗಳೂ ಈ ಅಧಿಕಾರ ಹೊಂದಿದೆ. ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯಗಳೂ ಖುದ್ದಾಗಿ ಇದರ ವಿಚಾರಣೆ ಕೈಗೊಳ್ಳಬಹುದು; ಅವಕ್ಕಿಂತ ಕೆಳಗಿನ ನ್ಯಾಯಾಲಯಗಳು ನ್ಯಾಯಾಲಯ ನಿಂದನೆಯನ್ನು ಕುರಿತ ವಿವಾದಗಳನ್ನು ಉಚ್ಚನ್ಯಾಯಾಲಯಕ್ಕೆ ಸಲ್ಲಿಸಬೇಕು. ಕೆಳ ನ್ಯಾಯಾಲಯಗಳು ನ್ಯಾಯ ನಿರ್ವಹಣೆಯಲ್ಲಿ ಬರಬಹುದಾದ ಇತರ ಅಡಚಣೆಗಳನ್ನು ಅಲ್ಲಿಯೇ ನಿವಾರಿಸಿಕೊಳ್ಳುವ ಅಧಿಕಾರ ಹೊಂದಿವೆ.

ಸರ್ವೊಚ್ಚ ನ್ಯಾಯಾಲಯದ ನಿರ್ಣಯ ವಿಧಾನಾಂಗಕ್ಕೆ ಕೂಡ ಬಂಧನಕಾರಿಯಾದ್ದು. ವಿಧನಾಂಗ ಕಾನೂನುಗಳನ್ನು ರಚಿಸಬಲ್ಲುದು. ಅವನ್ನು ಬದಲಾಯಿಸಲೂಬಹುದು. ಆದರೆ ಪ್ರಚಲಿತ ಕಾನೂನು ಚೌಕಟ್ಟಿನಲ್ಲಿ ನ್ಯಾಯಪೀಠ ನೀಡಿದ ನಿರ್ಣಯವನ್ನು ಬದಲಿಸಲಾರದು. ನ್ಯಾಯಾಂಗವಾಗಲಿ, ವಿಧಾನಾಂಗವಾಗಲಿ, ಕಾರ್ಯಾಂಗವಾಗಲಿ ಎಲ್ಲ ಅಂಗಸಂಸ್ಥೆಗಳೂ ಕೂಡಿಯೇ ಅಗಲಿ, ಸಂವಿಧಾನಕ್ಕೆ ಬದ್ಧವಾಗಿರತಕ್ಕದ್ದು. (ಬಿ.ಡಿ.ಎಚ್.)

ಇಂಗ್ಲೆಂಡಿನಲ್ಲಿ : ಇಂಗ್ಲೆಂಡಿನಲ್ಲಿ ನ್ಯಾಯ ವ್ಯವಸ್ಥೆಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಬೇರೆಬೇರೆ ನ್ಯಾಯಾಲಯಗಳಲ್ಲಿ ನಡೆಯುತ್ತದೆ. ಕೆಲವು ನ್ಯಾಯಾಲಯಗಳು ಮಾತ್ರ ಎರಡೂ ತರದ ಪ್ರಕರಣಗಳಲ್ಲಿ ವಿಚಾರಣೆ ನಡೆಸುತ್ತವೆ. ಹೆಚ್ಚು ಪ್ರಕರಣಗಳಲ್ಲಿ ಒಂದು ಸಲ ಮಾತ್ರ ಹಕ್ಕಿನಂತೆ ಅಪೀಲು ಮಾಡಬಹುದು. ಅದೂ ಕೆಲವು ಸಲ ಕಾನೂನಿನ ಪ್ರಶ್ನೆಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಸೀಮಿತವಾಗಿರುತ್ತದೆ. ಹೆಚ್ಚು ಪ್ರಕರಣಗಳಲ್ಲಿ ಒಬ್ಬನೇ ನ್ಯಾಯಾಧೀಶನಿಂದ ವಿಚಾರಣೆ ನಡೆಯುತ್ತದೆ. ಕೌಂಟಿನ್ಯಾಯಾಲಯಗಳು ಮತ್ತು ಉಚ್ಚ ನ್ಯಾಯಾಲಯ ಸಿವಿಲ್ ಪ್ರಕರಣಗಳಲ್ಲಿ ವಿಚಾರಣೆ ನಡೆಯಿಸುತ್ತವೆ. ಸಂಬಂಧಿಸಿದ ನ್ಯಾಯಾಲಯಗಳ ಅನುಮತಿ ದೊರೆತಾಗ ಮಾತ್ರ ಮುಂದಿನ ಅಪೀಲು ಮಾಡಬಹುದಾಗಿದೆ. ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅಪರಿಮಿತವಾದ್ದು. ಅದು ಇಡೀ ದೇಶಕ್ಕೆ ಅನ್ವಯಿಸುತ್ತದೆ. ಅಪೀಲುಗಳನ್ನು ನಿರ್ಣಯಿಸಲು ಅಪೀಲುನ್ಯಾಯಾಲಯ ಮತ್ತು ಲಾಡ್ರ್ಸ್ ಸಭಾ ನ್ಯಾಯಾಲಯಗಳಿವೆ. ಸಾಮಾನ್ಯ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ದೇಶಾದ್ಯಂತ ಇರುವ ಕ್ವಾರ್ಟರ್ ಸೆಷನ್ಸ್, ಮತ್ತು ಹೆಚ್ಚು ಭೀಕರ ಅಪರಾಧಗಳ ವಿಚಾರಣೆಗೆ ಅಸೈಜóಸ್ (ನ್ಯಾಯದರ್ಶಿ ಸಮ್ಮುಖ). ಲಂಡನ್ನಿನಲ್ಲಿರುವ ಕೇಂದ್ರೀಯ ಕ್ರಿಮಿನಲ್ ನ್ಯಾಯಾಲಯ ಮುಂತಾದ ನ್ಯಾಯಾಲಯಗಳಿವೆ. ಅಪೀಲುಗಳ ವಿಚಾರಣೆಗಾಗಿ ಕೇಂದ್ರೀಯ ಕ್ರಿಮಿನಲ್ ಅಪೀಲ್ ನ್ಯಾಯಾಲಯ, ರಾಣಿಪೀಠದ ವಿಭಾಗೀಯ ನ್ಯಾಯಾಲಯ ಮುಂತಾದವು ಇವೆ. ಅಸೈಜóಸ್ ಮತ್ತು ಕೇಂದ್ರೀಯ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಒಬ್ಬ ನ್ಯಾಯಾಧೀಶ ಮತ್ತು ನ್ಯಾಯದರ್ಶಿಗಳು (ಜ್ಯೂರಿ) ಇವರಿಂದ ವಿಚಾರಣೆ ನಡೆಯುತ್ತದೆ.

ಅಮೆರಿಕದಲ್ಲಿ : ಫೆಡರೆಲ್ ನ್ಯಾಯ ವ್ಯವಸ್ಥೆಯ ಜೊತೆಗೆ ಇದರಿಂದ ಪ್ರತ್ಯೇಕವಾದ ಅಸ್ತಿತ್ವವುಳ್ಳ ರಾಜ್ಯಗಳ ನ್ಯಾಯವ್ಯವಸ್ಥೆ ಇದೆ. ಫೆಡರಲ್ ವ್ಯವಸ್ಥೆಯಲ್ಲಿ 100 ಜಿಲ್ಲಾ ನ್ಯಾಯಾಲಯಗಳು, ಮತ್ತು ಅಪೀಲುಗಳನ್ನು ನಿರ್ಣಯಿಸುವ ನ್ಯಾಯಾಧಿಕಾರವುಳ್ಳ ಅಪೀಲುಗಳ 11 ಸಕ್ರ್ಯೂಟ್ ನ್ಯಾಯಾಲಯಗಳು, ಮತ್ತು ಅತಿ ಹೆಚ್ಚಿನ ಅಪೀಲುಗಳನ್ನು ನಿರ್ಣಯಿಸುವ ಅಧಿಕಾರವುಳ್ಳ ಸಂಯುಕ್ತ ಸಂಸ್ಥಾನ ಸರ್ವೋಚ್ಚ ನ್ಯಾಯಾಲಯ ಇವೆ.

ರಾಜ್ಯದಲ್ಲಿ ಅತಿ ಹೆಚ್ಚಿನ ಅಪೀಲುಗಳನ್ನು ನಿರ್ಣಯಿಸುವ ಅಧಿಕಾರವುಳ್ಳದ್ದು ಸರ್ವೋಚ್ಚ ನ್ಯಾಯಾಲಯ. ಹೆಚ್ಚು ರಾಜ್ಯಗಳಲ್ಲಿ ದ್ವಿಶ್ರೇಣಿಯ ನ್ಯಾಯ ವ್ಯವಸ್ಥೆಯಿದೆ. ವಿಚಾರಣಾ ನ್ಯಾಯಾಲಯಗಳು ನೀಡಿದ ತೀರ್ಪುಗಳ ಮೇಲೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಮಾಡಬಹುದು. ಸುಮಾರು 1/3 ರಾಜ್ಯಗಳಲ್ಲಿ ಮಧ್ಯವರ್ತಿ ಅಪೀಲು ನ್ಯಾಯಾಲಯಗಳಿವೆ. (ಜಿ.ಕೆ.ಯು.)