ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯಾಲಯಗಳು

ವಿಕಿಸೋರ್ಸ್ದಿಂದ

ನ್ಯಾಯಾಲಯಗಳು -

	ಸಂಸದೀಯ ಪ್ರಜಾಸತ್ತೆಗೆ ಅನುಗುಣವಾಗಿ ರಾಜ್ಯಾಂಗದ 214ನೆಯ ಅನುಚ್ಚೇದದ ಪ್ರಕಾರ ಕರ್ನಾಟಕದಲ್ಲಿ ಇತರ ರಾಜ್ಯಗಳಂತೆಯೇ ನ್ಯಾಯವ್ಯವಸ್ಥೆ ಇದೆ. ಇಡೀ ರಾಜ್ಯವ್ಯಾಪ್ತಿಯುಳ್ಳ ಉಚ್ಚನ್ಯಾಯಾಲಯ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ. ಇದು ಭಾರತ ಒಕ್ಕೂಟದ ಏಕಾತ್ಮಕ ನ್ಯಾಯಾಂಗ ವ್ಯವಸ್ಥೆಗೆ ಒಳಪಟ್ಟಿರುವುದರಿಂದ ಭಾರತದ ಅಧ್ಯಕ್ಷರ ಮತ್ತು ಉಚ್ಚತಮ ನ್ಯಾಯಾಲಯದ ಹತೋಟಿಗೆ ಸೇರಿದೆ. ರಾಜ್ಯಪಾಲರೊಡನೆ ಸಮಾಲೋಚಿಸಿ ರಾಷ್ಟ್ರಾಧ್ಯಕ್ಷರು ಈ ನ್ಯಾಯಾಲಯದ ನ್ಯಾಯಾದಿsೀಶರ ಸಂಖ್ಯೆಯನ್ನು ನಿರ್ಧರಿಸಿ ಅದರಂತೆ ನೇಮಕ ಮಾಡುತ್ತಾರೆ. ಹೀಗೆ ಒಮ್ಮೆ ನೇಮಿಸಿದ ನ್ಯಾಯಾದಿsೀಶರು ತಮ್ಮ 62ನೆಯ ವಯಸ್ಸಿನ ವರೆಗೆ ಸೇವೆ ಸಲ್ಲಿಸುವರು. ಇವರನ್ನು ಸಂಸತ್ತಿನ ಎರಡೂ ಸದನಗಳ ಒಪ್ಪಿಗೆ ಇಲ್ಲದೆ ಕೆಲಸದಿಂದ ತೆಗೆಯುವಂತಿಲ್ಲ. ಈ ನ್ಯಾಯಾಲಯ ತನ್ನ ನಿಯಮಗಳಿಗೆ ಅನುಸಾರವಾಗಿ ಬರುವ ಮತ್ತು ಕೆಳನ್ಯಾಯಾಲಯಗಳ ಮೂಲಕ ಬಂದ ಮೊಕದ್ದಮೆಗಳೆರಡನ್ನೂ ವಿಚಾರಮಾಡಿ ತೀರ್ಪುನೀಡುತ್ತದೆ. ರಾಜ್ಯದ ಇತರ ಎಲ್ಲಾ ನ್ಯಾಯಾಲಯಗಳ ಮೇಲ್ವಿಚಾರಣೆ, ಕೋರ್ಟಿನ ಅದಿsಕಾರಗಳನ್ನೂ ಸೇವಕರನ್ನೂ ನೇಮಿಸುವುದು ಮತ್ತು ನಿಯಂತ್ರಿಸುವುದು ಮತ್ತು ಕೆಳನ್ಯಾಯಾಲಯಗಳಿಂದ ಮೊಕದ್ದಮೆಗಳನ್ನು ತನ್ನ ವಿಚಾರಣೆಗೆ ತೆಗೆದುಕೊಳ್ಳುವುದು ಈ ಹಕ್ಕುಗಳನ್ನು ಪಡೆದಿದೆ. ಜಿಲ್ಲಾ, ತಾಲ್ಲೂಕು ಮತ್ತು ಎಲ್ಲಾ ಕೆಳದರ್ಜೆ ನ್ಯಾಯಾಲಯಗಳಿಗೆ ರಾಜ್ಯಪಾಲರು ಮುಖ್ಯ ನ್ಯಾಯಾದಿsೀಶರೊಡನೆ ಸಮಾಲೋಚಿಸಿ ನೇಮಕ ಮಾಡುತ್ತಾರೆ. ಜಿಲ್ಲಾ, ತಾಲ್ಲೂಕು ಮಟ್ಟಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳಿವೆ. ಎಲ್ಲಾ ನ್ಯಾಯಾಲಯಗಳು ಪ್ರಾದೇಶಿಕ ವ್ಯಾಪ್ತಿ ರೆವೆನ್ಯೂ ಆಡಳಿತ ಘಟಕಗಳಿಗೆ ಹೊಂದಿಕೊಂಡಂತೆ ಇರುತ್ತದೆ. ಜಿಲ್ಲಾ ನ್ಯಾಯಾಧೀಶರನ್ನೂ ಮತ್ತು ಸಿವಿಲ್ ಜಡ್ಜರನ್ನೂ ಬಿಟ್ಟು ಇತರ ಎಲ್ಲಾ ಕೆಳದರ್ಜೆ ನ್ಯಾಯಾಲಯಗಳ ನ್ಯಾಯಾಧೀಶರನ್ನು ಲೋಕಸೇವಾ ಆಯೋಗ ಉಚ್ಚ ನ್ಯಾಯಾಲಯದ ಆದೇಶದ ಮೇಲೆ ನೇಮಿಸುತ್ತದೆ. ಕೆಳನ್ಯಾಯಾಲಯಗಳ ಕಾರ್ಯವ್ಯಾಪ್ತಿಯನ್ನು ಉಚ್ಚ ನ್ಯಾಯಾಲಯ ನಿರ್ಧರಿಸುವುದು. ಇತರ ಮೊಕದ್ದಮೆಗಳ ಜೊತೆಗೆ ರಾಜ್ಯದ ಅನೇಕ ಕಾಯಿದೆಗಳು ಈ ನ್ಯಾಯಾಲಯ ವ್ಯಾಪ್ತಿಗೆ ನ್ಯಾಯ ವಿತರಣೆಗೆ ಒಳಪಟ್ಟಿರುತ್ತವೆ. ನ್ಯಾಯಪರಿಪಾಲನೆಯ ಹೊಣೆಯನ್ನು ನಿರ್ವಹಿಸುತ್ತಿರುವ ಅಧೀನ ನ್ಯಾಯಾಲಯಗಳು ಈ ರೀತಿ ಇವೆ.

1. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾದಿsೀಶರ ನ್ಯಾಯಾಲಯಗಳು (ಜಿಲ್ಲೆಗೆ ಒಂದು). 2. ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟರ್ ನ್ಯಾಯಾಲಯಗಳು (ಜಿಲ್ಲೆಗೆ ಒಂದು). 3. ಬೆಂಗಳೂರು ನಗರದಲ್ಲಿ ಮೆಟ್ರೊಪಾಲಿಟನ್ ಮತ್ತು ಚೀಫ್ ಮೆಟ್ರೊಪಾಲಿಟನ್ ನ್ಯಾಯಾಲಯಗಳು, 4. ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಗಳು (ಜಿಲ್ಲೆಗೆ ಒಂದು). 5. ಲಘುವಾದ ನ್ಯಾಯಾಲಯಗಳು, 6. ಮುನ್ಸೀಫರ ನ್ಯಾಯಾಲಯಗಳು 7. ಮುನ್ಸೀಫರ ಮತ್ತು ಜುಡಿಷಿಯಲ್ ಮ್ಯಾಜಿಸ್ಟ್ರೇಟರ ನ್ಯಾಯಾಲಯಗಳು (ತಾಲ್ಲೂಕು ಮಟ್ಟದಲ್ಲಿ) 8. ಜುಡಿಷಿಯಲ್ ಮ್ಯಾಜಿಸ್ಟ್ರೇಟರ ನ್ಯಾಯಾಲಯಗಳು. ಇದಲ್ಲದೆ, ವ್ಯಾಜ್ಯ ಸಂಖ್ಯೆಯನ್ನು ಗಮನಿಸಿ ಅಲ್ಲಲ್ಲಿ ಸಿವಿಲ್ ನ್ಯಾಯಾದಿsೀಶರ ನ್ಯಾಯಾಲಯಗಳನ್ನು ಸ್ಥಾಪಿಸುವ ಏರ್ಪಾಡೂ ಇದೆ. ಈ ರೀತಿ ಬೆಂಗಳೂರು ನಗರದಲ್ಲಿ ಉದ್ಭವವಾಗುವ ಅದಿsಕ ಸಿವಿಲ್ ವ್ಯಾಜ್ಯಗಳನ್ನು ಗಮನಿಸಿ ಹೆಚ್ಚುವರಿ ಸಿವಿಲ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಇದೇ ರೀತಿ ಹೆಚ್ಚುವರಿ ಸೆಷನ್ಸ್ ನ್ಯಾಯಧೀಶರ ನ್ಯಾಯಾಲಯಗಳು ವಿವಿಧ ಜಿಲ್ಲೆಗಳಲ್ಲಿವೆ.

ಬೆಂಗಳೂರು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರುಗಳ ನ್ಯಾಯಾಲಯಗಳು ಕ್ರಿಮಿನಲ್ ಅಧಿಕಾರವ್ಯಾಪ್ತಿಯುಳ್ಳ ನ್ಯಾಯಾಲಯಗಳಾಗಿವೆ.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮುಖ್ಯತಃ ಅಪೀಲು ನ್ಯಾಯಾಲಯವಾಗಿದೆ. ಆದರೆ ಮರಣದಂಡನೆ ಮೊದಲಾದ ಘೋರಶಿಕ್ಷೆಗಳನ್ನು ವಿಧಿಸಬೇಕಾಗುವ ಪ್ರಕರಣದಲ್ಲಿ ಅದಕ್ಕೆ ಮೂಲ ಅಧಿಕಾರ ವ್ಯಾಪ್ತಿಯುಂಟು. ಇದಕ್ಕಿಂತ ಕೆಳಗಿನ ನ್ಯಾಯಾಲಯಗಳಿಗೆ ಅಪೀಲು ಅಧಿಕಾರವ್ಯಾಪ್ತಿಯಿಲ್ಲ. ಅಪರಾಧಸಂe್ಞÁನ ಮತ್ತು ದಾವೆಯ ಆರ್ಥಿಕ ಮೌಲ್ಯ ಇವುಗಳ ವೈವಿಧ್ಯಕ್ಕನುಗುಣವಾಗಿ ಅಧಿಕಾರವ್ಯಾಪ್ತಿಯಲ್ಲಿಯೂ ವ್ಯತ್ಯಾಸಗಳಿವೆ. ಸಾಮಾನ್ಯವಾಗಿ ಎಲ್ಲ ನ್ಯಾಯಾಲಯಗಳಲ್ಲಿ ನಾಜರ್, ಶಿರಸ್ತೇದಾರ, ಬೇಲಿಫ್ ಮೊದಲಾದ ಸಹಾಯಕ ಅಧಿಕಾರಿಗಳು ಇರುವರು. ಅಭಿಯೋಗ ನಡೆಸಲು ಮತ್ತು ಆರೋಪ ಪತ್ರಗಳನ್ನು ತಯಾರಿಸಲು ಅವಶ್ಯಕ ಸಹಾಯ ನೀಡುವುದಕ್ಕಾಗಿ ಅಭಿಯೋಗ ನಿರ್ದೇಶನಾಲಯವನ್ನೂ ರಚಿಸಲಾಗಿದೆ. ಉತ್ತರ ಕರ್ನಾಟಕ ಭಾಗಕ್ಕೆ ಒಂದು ಪ್ರತ್ಯೇಕ ಉಚ್ಫನ್ಯಾಯಾಲಯ ಪೀಠವನ್ನು ಸ್ಥಾಪಿಸುವ ಬಗ್ಗೆ ಪ್ರಗತಿ ಸಾಧಿಸಿದ್ದು ಶೀಘ್ರವೇ ಅದು ಈಡೇರುವ ಹಂತದಲ್ಲಿದೆ.

ಈ ಸಾಂಪ್ರದಾಯಿಕ ನ್ಯಾಯ ವಿತರಣ ವ್ಯವಸ್ಥೆಯ ಜೊತೆಗೆ ಇತರ ನ್ಯಾಯಾಧಿಕಾರ ಪಡೆದ ಅಂಗಗಳೂ ನ್ಯಾಯವಿತರಣೆಯಲ್ಲಿ ನಿರತವಾಗಿವೆ. ಭೂಸುಧಾರಣೆ ಸಂಬಂಧವಾದ ವಿವಾದಗಳು ಮತ್ತು ತಕರಾರುಗಳನ್ನು ಪರಿಶೀಲಿಸಲು ಭೂನ್ಯಾಯಾದಿsಕರಣವಿದೆ. ಕಾರ್ಮಿಕರ ಕುಂದುಕೊರತೆಗಳು ಅಥವಾ ವಿವಾದಗಳನ್ನು ಬಗೆಹರಿಸಲು ಕಾರ್ಮಿಕ ನ್ಯಾಯಾಲಯಗಳಿವೆ. ಶ್ರೀಸಾಮಾನ್ಯರಿಗೆ ನ್ಯಾಯಾವಾದಿಗಳು ಸುಲಭವಾಗಿ ಲಭ್ಯವಾಗಲು ಉಚಿತ ಕಾನೂನು ಸೇವೆಯನ್ನು ಸರ್ಕಾರ ಒದಗಿಸಿದೆ. 1986ರಲ್ಲಿ ಲೋಕಾಯುಕ್ತ ಎಂಬ ಜಾಗೃತ ಆಯೋಗವನ್ನು ಸ್ಥಾಪಿಸಲಾಯಿತು. ಸರ್ಕಾರಿ ನೌಕರರ ಭ್ರಷ್ಟಾಚಾರಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಮುಂದಿನ ಕ್ರಮಕೈಗೊಳ್ಳಲು ಶಿಫಾರಸು ಮಾಡಿ ವರದಿ ನೀಡುವ ಅದಿsಕಾರವನ್ನು ಇದು ಹೊಂದಿದೆ.

1974ರ ನವೆಂಬರ್ 1ರಿಂದ ಜುಡಿಷಿಯಲ್ ಮ್ಯಾಜಿಸ್ಟ್ರೇಟರ ನ್ಯಾಯಾಲಯ ಮಟ್ಟದಲ್ಲಿ ಕನ್ನಡವೂ ನ್ಯಾಯಾಲಯದ ಅಧಿಕೃತ ಭಾಷೆಯೆಂಬುದಾಗಿ ಸರ್ಕಾರ ಘೋಷಿಸಿದೆ. ಇದಲ್ಲದೆ, ರಾಜ್ಯದಲ್ಲಿ ಕಾರ್ಮಿಕ ನ್ಯಾಯಾಲಯಗಳೂ ಮಾರಾಟಕರ ಮತ್ತು ರಾಜಸ್ವ ಅಪೀಲು ನ್ಯಾಯಾಧಿಕರಣಗಳೂ ತಮ್ಮ ತಮ್ಮ ಕ್ಷೇತ್ರದಲ್ಲಿ ನ್ಯಾಯಾಂಗದ ಕಾರ್ಯವನ್ನು ನಿರ್ವಹಿಸುತ್ತವೆ.

ಕರ್ನಾಟಕದ ನ್ಯಾಯ ಪರಿಪಾಲನೆಯ ಇತಿಹಾಸ ಪ್ರಾಚೀನವಾದುದು. ರಾಜರು, ಮಹಾಮಂಡಲೇಶ್ವರರು, ಪಾಳೆಯಗಾರರು, ಊರ ಗೌಡ ಮೊದಲಾದವರು ಅನೂಚಾನವಾದ ನ್ಯಾಯವ್ಯವಸ್ಥೆಯನ್ನು ಧರ್ಮದ ಚೌಕಟ್ಟಿನೊಳಗೇ ಅನುಸರಿಸಿಕೊಂಡು ಬಂದರು ಎನ್ನಬಹುದು. ಪಂಚಾಯತಿ ಮಾಡುವವರು ಭಟ್ಟರು, ನ್ಯಾಯನಿರ್ಣಯ ಮಾಡುವವರು ಪಂಡಿತರು, ರಕ್ಷೆ ಶಿಕ್ಷೆ ನೋಡಿಕೊಳ್ಳುವವರು ಪಕ್ಷನಾಥರು ಎಂಬ ಕದಂಬರ ಕಾಲದ ತೌಳವನಾಡಿನ ಪ್ರಾಚೀನ ಗ್ರಾಮಪದ್ಧತಿಯ ಮಾತು ಗಮನಾರ್ಹವಾಗಿದೆ. ಕದಂಬರ ಕಾಲದ ಧರ್ಮಕರಣಿಕರು, ಗಂಗರಕಾಲದ ರಾಜಾಧ್ಯಕ್ಷರು ಮತ್ತು ಧರ್ಮಾಧ್ಯಕ್ಷರು ನ್ಯಾಯಶುದ್ಧಿಯನ್ನು ಕಾಪಾಡುತ್ತಿದ್ದರು. ಮಹಾದಂಡನಾಯಕರೂ ನಾಡೊಡೆಯರೂ ದ್ರೋಹಘರಟ್ಟಗಳೆಂದು ಪ್ರಸಿದ್ಧರಾಗಿದ್ದಾರೆ. ಪಂಚನಿರ್ಣಯ ಪದ್ಧತಿಯೂ ಪ್ರಾಚುರ್ಯ ಪಡೆದಿತ್ತು. ಈ ಕಾಲದಲ್ಲಿ ಸಮತೋಲದಿವ್ಯ, ಅಗ್ನಿದಿವ್ಯ, ಜಲದಿವ್ಯ, ವಿಷದಿವ್ಯ ಮತ್ತು ತಂಡುಲದಿವ್ಯಗಳು ನ್ಯಾಯಾಸ್ಥಾನದ ಪ್ರಮಾಣಸಾಧನಗಳಾಗಿದ್ದುವು.

ಬೆಳೆದುಬಂದ ರೂಢಿಸಂಪ್ರದಾಯಗಳನ್ನು ಸಮರ್ಥಿಸುತ್ತ ಪ್ರಾಚೀನ ಧರ್ಮಶಾಸ್ತ್ರಗಳಿಗೆ ಅಪೂರ್ವ ವ್ಯಾಖ್ಯಾನ ರೂಪವಾಗಿ ವಿe್ಞÁನೇಶ್ವರನ `ಮಿತಾಕ್ಷರ ನ್ಯಾಯಾಸ್ಥಾನಗಳ ಕೈಪಿಡಿಯಂತಿತ್ತು.

ಚಾಳುಕ್ಯ ಮತ್ತು ಹೊಯ್ಸಳರಸರ ಕಾಲದಲ್ಲಿ ವ್ಯಾವಹಾರಿಕ ಮತ್ತು ಅಪರಾಧಿಕ ಎಂಬ ವಿಭಜನೆಯಾಗಿ ನ್ಯಾಯತೀರ್ಮಾನದ ವ್ಯವಸ್ಥೆ ಉತ್ತಮಗೊಂಡಿತ್ತು. ಸಮಸ್ತ ಸಾಮ್ರಾಜ್ಯದ ಸಮಗ್ರ ದಂಡಾಚರಣೆಗೆ ಮಂಡಲಾಧಿಪತಿಗಳೂ ಹೆಗ್ಗಡೆಗಳೂ ನಿಯುಕ್ತರಾಗಿದ್ದರು. ವಿಜಯನಗರದ ಕಾಲದಲ್ಲಿ ವಿವೇಕಿಗಳೂ ಸಭ್ಯರೂ ಇರುವ ವರಿಷ್ಠ ನ್ಯಾಯಾಲಯಗಳು ರೂಪತಾಳಿದವು. ರಾಜರುಗಳೂ ನ್ಯಾಯದಾನ ಮಾಡುತ್ತಿದ್ದ ನಿದರ್ಶನಗಳು ಶಾಸನೋಕ್ತವಾಗಿವೆ.

ಮೈಸೂರು ಒಡೆಯರ ರಾಜ್ಯಭಾರದ ಕಾಲದಲ್ಲಿಯೂ ಶಾಸ್ತ್ರಸಮ್ಮತವಾಗಿಯೇ ನ್ಯಾಯಪರಿಪಾಲನೆ ನಡೆಯಿತು. ದೂರುಗಳು ಬಂದಾಗ ಒಡೆಯರೇ ಸ್ವತಃ ಪ್ರವಾಸ ಮಾಡಿ ಆಯಾ ಸ್ಥಳದಲ್ಲಿಯೇ ನ್ಯಾಯ ತೀರ್ಮಾನ ಮಾಡಿದ್ದುಂಟು. ಗ್ರಾಮಗಳಲ್ಲಿ ಗ್ರಾಮಪಂಚಾಯತಿಗಳು ನ್ಯಾಯ ತೀರ್ಮಾನ ಮಾಡುತ್ತಿದ್ದು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಅಲ್ಲೇ ದೊರಕುತ್ತಿತ್ತು. ಸುಮಾರು ನಾನೂರು ವರ್ಷಗಳು ಇಸ್ಲಾಮೀಯ ಆಳ್ವಿಕೆಯ ಕಾಲದಲ್ಲಿ ಮುಗಲ ರೀತಿಯ ಅದಾಲತ್ತು ಪದ್ಧತಿಯೂ ಪ್ರಚಲಿತವಾಗಿತ್ತು. ಮುಂದೆ ನ್ಯಾಯಪಾರಮ್ಯದ ತತ್ತ್ವಕ್ಕೆ ದಿನೇ ದಿನೇ ಮಹತ್ತ್ವ ಹೆಚ್ಚಿ. ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗದಿಂದ ಬೇರ್ಪಡುವ ಏರ್ಪಾಡುಗಳೂ ಜಾರಿಗೆ ಬಂದುವು.

ಮೈಸೂರು ಸಂಸ್ಥಾನ ಕೆಲವು ಕಾಲ ಕಮಿಷನರ ಆಳ್ವಿಕೆಗೆ ಒಳಪಟ್ಟಾಗ ಇಲ್ಲಿಯೂ ನ್ಯಾಯವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾದುವು. 85 ತಾಲ್ಲೂಕು ಕೋರ್ಟುಗಳು, 8 ಮುಖ್ಯ ಸದರ್ ಮುನ್ಸೀಫ್ ಕೋರ್ಟುಗಳು, 4 ಸೂಪರಿಂಟೆಂಡೆಂಟ್ ಕೋರ್ಟುಗಳು ಮತ್ತು ಮೂವರು ನ್ಯಾಯಾಧೀಶರಿಂದ ಕೂಡಿದ ಒಂದು ಹುಜೂರ್ ಅದಾಲತ್ತು ಸ್ಥಾಪಿತವಾದುವು. ಒಂದು ಕಮಿಷನರ ಕೋರ್ಟೂ ರಚಿತವಾಯಿತು.

1855-56ರಲ್ಲಿ ಲಾರ್ಡ್ ಡಾಲ್‍ಹೌಸಿಯ ಭೇಟಿಯ ಪರಿಣಾಮವಾಗಿ ಮೈಸೂರು ಪ್ರದೇಶದಲ್ಲಿ ಒಬ್ಬ ಚೀಫ್ ಜುಡಿಷಿಯಲ್ ಕಮಿಷನರ್ ನಿಯುಕ್ತನಾದ. ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳಲ್ಲಿ ಪಂಚಾಯತಿಯ ಸಹಾಯ ಪಡೆದುಕೊಳ್ಳಲಾಗುತ್ತಿತ್ತು. ಕ್ರಮೇಣ ಪ್ರತಿ ಜಿಲ್ಲೆಗೊಬ್ಬರಂತೆ ನ್ಯಾಯಾಂಗ ಸಹಾಯಕರೂ ನಿಯುಕ್ತರಾದರು. 1884ರಲ್ಲಿ ಮೈಸೂರು ರಾಜ್ಯದಲ್ಲಿ ಒಂದು ಚೀಫ್ ಕೋರ್ಟು ಸ್ಥಾಪಿತವಾಗಿತ್ತು. ಅದನ್ನೇ ಮಹಾರಾಜರ ಆಡಳಿತ ಕಾಲದಲ್ಲಿ 1930ರಲ್ಲಿ ಮೈಸೂರಿನ ಉಚ್ಚನ್ಯಾಯಾಲಯವೆಂದು ಹೆಸರಿಸಲಾಯಿತು. ಕೊಡಗಿನ ಮೇಲಿದ್ದ ಮದರಾಸು ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಕೊನೆಗೊಂಡು, ಕೊಡಗು ಪ್ರದೇಶವು 1953ರಿಂದ ಮೈಸೂರು ಉಚ್ಚನ್ಯಾಯಾಲಯದ ಅಧಿಕಾರವ್ಯಾಪ್ತಿಗೆ ಒಳಪಟ್ಟಿತು. ಹೈದರಾಬಾದು, ಮುಂಬಯಿ, ಮದರಾಸು ಕನ್ನಡ ಪ್ರದೇಶಗಳಲ್ಲಿ ಮುನ್ಸೀಫ್, ಜುಡಿಷಿಯಲ್ ಮ್ಯಾಜಿಸ್ಟ್ರೇಟ್, ಸಿವಿಲ್ ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಅಧೀನ ನ್ಯಾಯಾಲಯಗಳಿದ್ದುವು. 1950ರಲ್ಲಿ ಸಂವಿಧಾನವು ಜಾರಿಗೆ ಬಂದು ಇಡೀ ಭಾರತಕ್ಕೊಂದು ಸರ್ವೋಚ್ಫ ನ್ಯಾಯಾಲಯವೂ ಪ್ರತಿ ರಾಜ್ಯದಲ್ಲೂ ಈಗ ಇರುವ ನ್ಯಾಯಾಂಗ ವ್ಯವಸ್ಥೆಯೂ ರೂಢಿಗೆ ಬಂದುವು. (ಕೆ.ಡಿ.)