ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯ ನೆರವು

ವಿಕಿಸೋರ್ಸ್ದಿಂದ

ನ್ಯಾಯ ನೆರವು - ಆಧುನಿಕ ರಾಷ್ಟ್ರಗಳಲ್ಲಿ ಮುಖ್ಯವಾಗಿ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿ, ಎಲ್ಲ ವ್ಯಕ್ತಿಗಳಿಗೂ ಸಮಾನತ್ವದ ಹಕ್ಕಿದೆ. ಇದರ ಅರ್ಥವ್ಯಾಪ್ತಿ ವಿಶಾಲವಾದ್ದು. ಸೂಕ್ಷ್ಮವಾಗಿ ಒಬ್ಬ ವ್ಯಕ್ತಿಗೂ ಮತ್ತೊಬ್ಬನಿಗೂ, ನ್ಯಾಯಾಲಯದ ದೃಷ್ಟಿಯಲ್ಲಿ, ಯಾವ ತಾರತಮ್ಯವನ್ನೂ ಉಂಟುಮಾಡುವಂತೆ ಯಾವ ಕಾನೂನೂ ಇರಬಾರದು.

ನ್ಯಾಯ ದೊರಕಿಸಿಕೊಡುವುದು ಪ್ರತಿ ರಾಜ್ಯದ ಆದ್ಯ ಕರ್ತವ್ಯ. ಅಂದರೆ ನ್ಯಾಯ ಸಮದೃಷ್ಟಿಯುಳ್ಳದ್ದಾಗಿದ್ದು ಸರ್ವರಿಗೂ ದೊರಕುವಂತಿರಬೇಕು. ಹಾಗೆ ನ್ಯಾಯ ದೊರಕಿಸಿಕೊಡುವ ಮುಖ್ಯವಾದ ಅಂಗ ನ್ಯಾಯಾಲಯ. ಅಲ್ಲಿ ವ್ಯಾಜ್ಯದ ಬಗ್ಗೆ ತನ್ನ ವಾದವನ್ನು ಸಮರ್ಥಿಸಲು ಪ್ರತಿಯೊಬ್ಬನಿಗೂ ಅವಕಾಶವಿರಬೇಕು ವಕೀಲರ ಸಹಾಯದಿಂದ ತನ್ನ ನಿಲವನ್ನು ಪ್ರತಿಪಾದಿಸುವ ಅವಕಾಶ ಸರ್ವರಿಗೂ ಲಭಿಸುವಂತಿರಬೇಕು. ಪ್ರಸ್ತುತದಲ್ಲಿ, ವಕೀಲರಿಗೆ ಸಂಭಾವನೆ ಕೊಡಲು ಆರ್ಥಿಕ ಸೌಲಭ್ಯವಿರುವವರು ಮಾತ್ರ ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಆ ಸೌಲಭ್ಯವಿಲ್ಲದವರಿಗೆ ರಾಷ್ಟ್ರ ಅಥವಾ ಖಾಸಗಿ ಸಂಘ ಸಂಸ್ಥೆಗಳು ನೆರವು ನೀಡುವ ವಿಚಾರ ಈಗ ಭಾರತದಲ್ಲಿ ತೀವ್ರವಾದ ಪರಿಶೀಲನೆಗೆ ಒಳಪಟ್ಟಿದೆ.

ಆಪಾದಿತನಿಗೆ ವಕೀಲರ ಸಹಾಯವಿರಬೇಕೆಂಬುದಕ್ಕೆ ಅನೇಕ ಕಾರಣಗಳಿವೆ. ಆಪಾದಿತನ ಪ್ರಾಣಹಾನಿ ಮಾಡುವ ಅಥವಾ ಅವನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ, ಅವನನ್ನು ಕಾರಾಗೃಹದಲ್ಲಿರಿಸುವ ಹಕ್ಕು ನ್ಯಾಯಾಲಯಕ್ಕೆ ಇದೆ. ಸಾಮಾನ್ಯವಾಗಿ ಆಪಾದಿತನಿಗೆ ಕಾನೂನಿನ ಪರಿಚಯವಿರುವುದಿಲ್ಲ. ಪರಿಚಯವಿದ್ದರೂ ಅದರಲ್ಲಿ ಪರಿಶ್ರಮ ಇರುವುದಿಲ್ಲ. ವಿದ್ಯಾವಂತರಿಗೆ ಇತರ ಶಾಸ್ತ್ರಗಳಲ್ಲಿ ಪಾಂಡಿತ್ಯ ವಿದ್ದರೂ ಕಾನೂನುಗಳ ಮತ್ತು ಅವುಗಳ ನಿಗೂಢ ಅರ್ಥ ತಿಳಿಯದಿರಬಹುದು. ತಾನು ನಿರಪರಾಧಿ ಎಂಬುದನ್ನು ಸೂಕ್ತ ಸಾಕ್ಷ್ಯದೊಡನೆ ಹೇಗೆ ರುಜುವಾತು ಮಾಡಬೇಕೆಂಬುದು ತಿಳಿಯದಿರಬಹುದು. ನ್ಯಾಯಾಲಯದ ನಡವಳಿಯ ಪರಿಚಯವಿರುವವರು ವಿರಳ. ವಕೀಲರ ಸಹಾಯವಿಲ್ಲದಿದ್ದರೆ ಆಪಾದಿತನ ಬಗ್ಗೆ ಅಕ್ರಮವಾದ ಅಥವಾ ಅನ್ಯಾಯದ ವಿಚಾರಣೆ ನಡೆಯಬಹುದು. ಪ್ರಾಸಿಕ್ಯೂಷನ್ ಪರವಾಗಿ ನುರಿತ ವಕೀಲರು ವಾದಿಸುತ್ತಾರೆ. ಆಪಾದಿತನ ಪರವಾಗಿ ಸೂಕ್ತ ಸಾಕ್ಷ್ಯವಿದ್ದರೂ, ಪ್ರಾಸಿಕ್ಯೂಷನ್ನಿನ ವಾದದ ಎದುರು ಅದನ್ನು ಸಮಂಜಸವಾಗಿ ಮಂಡಿಸಲಾಗದೆ ಆಪಾದಿತ ಶಿಕ್ಷೆಗೆ ಗುರಿಯಾಗಬಹುದು. ವಿದ್ಯಾವಂತರ ಪರಿಸ್ಥಿತಿಯೇ ಹೀಗಿರುವಾಗ, ಅನಕ್ಷರಸ್ಥರ ಹಾಗೂ ಬಡವರ ಸ್ಥಿತಿ ಇನ್ನೂ ದಾರುಣವಾಗಬಹುದು.

ಆದ್ದರಿಂದ ಎರಡೂ ಪಕ್ಷಗಳಿಗೆ ದಕ್ಷ ವಕೀಲರು ಅವಶ್ಯಕ. ಸಮಾನತ್ವದ ಹಕ್ಕಿನ ಪ್ರಕಾರ ಎಲ್ಲರಿಗೂ ವಕೀಲರ ಸಹಾಯ ದೊರೆಯುವಂತಿರಬೇಕು. ಬಡವ ಆಪಾದಿತನಾಗಿದ್ದರೆ ಅವನಿಗೆ ವಕೀಲರಿದ್ದೇ ಇರಬೇಕು. ಅವರ ಸಂಭಾವನೆಯನ್ನು ರಾಜ್ಯಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ವಹಿಸಿಕೊಳ್ಳುವುದು ಅವಶ್ಯವಾಗುತ್ತದೆ.

ಬಡವನಾದ ಅಪಾದಿತನಿಗೆ ಆತನ ವರಮಾನದ ಅಧಾರದ ಮೇರೆ ಪೂರ್ಣ ಅಥವಾ ಭಾಗಶಃ ನೆರವು ನೀಡುವ ಬಗ್ಗೆ ತೀರ್ಮಾನಿಸಲು ಬ್ರಿಟನ್ನಿನಲ್ಲಿ 1960ರ ನ್ಯಾಯ ನೆರವು ಮತ್ತು ಸಲಹೆ ಅಧಿನಿಯಮದ ಅನ್ವಯ ರಚಿತವಾಗಿರುವ ಸಂಘದ ಆಶ್ರಯದಲ್ಲಿ ಒಂದು ಸಮಿತಿಯಿದೆ. ಆಪಾದಿತ ಆ ಸಂಘದ ಸದಸ್ಯರಾದ ವಕೀಲರನ್ನು ನೇಮಿಸಿಕೊಳ್ಳಬಹುದು. ವಕೀಲರು ತಮಗೆ ಸಲ್ಲಬೇಕಾದ ಸಂಭಾವನೆಯಲ್ಲಿ ಸೇಕಡ ಹತ್ತರಷ್ಟು ರಿಯಾಯಿತಿ ತೋರಿಸುತ್ತಾರೆ. ಉಳಿದ ಸಂಭಾವನೆಯ ಬಹುಭಾಗವನ್ನು ಸರ್ಕಾರವೇ ವಹಿಸುತ್ತದೆ.

ಅಮೆರಿಕದ ಸರ್ವೋಚ್ಚ ನ್ಯಾಯಾಲಯ 1932ರ ಪೊವೆಲ್ ವಿ. ಆಲಬಾಮ ಮೊಕದ್ದಮೆಯಲ್ಲಿ ನೀಡಿದ ತೀರ್ಪಿನಲ್ಲಿ ಈ ಬಗ್ಗೆ ಒಂದು ಗಮನಾರ್ಹ ನಿರ್ಣಯ ನೀಡಿದೆ. ಮರಣದಂಡನೆ ವಿಧಿಸಬಹುದಾದ ಅಪರಾಧಗಳ ವಿಚಾರಣೆಯಲ್ಲಿ ವಕೀಲರನ್ನು ಕಡ್ಡಾಯವಾಗಿ ನೇಮಿಸಬೇಕು ಎಂದು ಅದು ತಿಳಿಸಿದೆ. 1963ರಲ್ಲಿ ಗಿಡಿಯನ್ ವಿ. ವೇನ್‍ರೈಟ್ ಮೊಕದ್ದಮೆಯಲ್ಲಿ ಈ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ, ವಕೀಲರಿಗೆ ಸಂಭಾವನೆ ಕೊಡಲು ಶಕ್ತಿಯಿಲ್ಲದ ಆಪಾದಿತನಿಗೆ ವಕೀಲರನ್ನು ನೇಮಿಸಿ ಅವರಿಗೆ ಸಂಭಾವನೆ ಕೊಡುವುದು ರಾಜ್ಯದ ಕರ್ತವ್ಯವೆಂದು ಘೋಷಿಸಿದೆ. ನ್ಯಾಯ ನೆರವಿನ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಜನರಲ್ಲಿ ಆಸಕ್ತಿ ಹೆಚ್ಚಿದೆ. ಕ್ರಿಮಿನಲ್ ಮೊಕದ್ದಮೆ ಮೆಗಳಲ್ಲಿ, ಬಡ ಆಪಾದಿತನಿಗೆ ನೆರವು ನೀಡಲು ಸಾರ್ವಜನಿಕ ನ್ಯಾಯವಾದಿ ಬ್ಯೂರೋಗಳನ್ನು ತೆರೆಯಲಾಗಿದೆ. ನಿಪುಣರಾದ ವಕೀಲರನ್ನು ಸಂಭಾವನೆಯ ಮೇರೆಗೆ ನೇಮಿಸಿ, ಅವರ ಕಾರ್ಯ ಪರಿಣಾಮಕಾರಿಯಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಈ ಸುವ್ಯವಸ್ಥಿತ ಸಂಸ್ಥೆಗಳು ಉತ್ಸಾಹದಿಂದ ಚಟುವಟಿಕೆ ನಡೆಸುತ್ತಿವೆ.

ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಇತ್ತೀಚಿಗೆ ಕೆಲವು ಕಾನೂನು ನೆರವು ಸೊಸೈಟಿಗಳನ್ನು ತೆರೆಯಲಾಗಿದೆ. ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕರ ನೆರವಿನಿಂದ ಇವು ನಡೆಯುತ್ತಿವೆ. ಇವಲ್ಲದೆ ಸಾರ್ವಜನಿಕರ ಅನುಕೂಲಕ್ಕಾಗಿ ಕಾನೂನು ಸಲಹಾ ಕಛೇರಿಗಳನ್ನು ತೆರೆಯಲಾಗಿದೆ. ಇಲ್ಲಿ ಉಚಿತವಾಗಿ ತಿಳಿವಳಿಕೆ ಕೊಡಲಾಗುವುದು. ಇತ್ತೀಚಿಗೆ ವಿಶ್ವವಿದ್ಯಾಲಯಗಳ ಕೆಲವು ಕಾನೂನು ಕಾಲೇಜುಗಳು ಸಾರ್ವಜನಿಕರಿಗೆ ಸಲಹೆ ನೀಡಲು ಸಂಘಗಳನ್ನು ತೆರೆದಿವೆ.

ಸಮಾನತ್ವದ ಹಕ್ಕನ್ನು ಭಾರತದ ಸಂವಿಧಾನ ಸರ್ವರಿಗೂ ಕೊಟ್ಟಿದೆ. ಆಪಾದಿತನಿಗೆ ತನ್ನ ಪರ ವಾದಿಸಲು ಇಷ್ಟಾನುಸಾರ ವಕೀಲರನ್ನು ನೇಮಿಸಿಕೊಳ್ಳುವ ಮತ್ತು ಅವರಿಗೆ ಅವನ ಪರವಾಗಿ ವಾದಿಸುವ ಹಕ್ಕುಗಳಿವೆ. ದಂಡ ಪ್ರಕ್ರಿಯಾ ಸಂಹಿತೆಯಲ್ಲೂ ಆಪಾದಿತನಿಗೆ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕಿದೆ. ಈ ಹಕ್ಕುಗಳ ವ್ಯಾಪ್ತಿಯ ಬಗ್ಗೆ ಭಾರತದ ಸರ್ವೋಚ್ಚ ನ್ಯಾಯಾಲಯ ನಿರ್ಣಯ ನೀಡುತ್ತ, ಆಪಾದಿತನಿಗೆ ವಕೀಲರನ್ನು ನೇಮಿಸುವ ಹಕ್ಕಿದೆ. ಆ ಹಕ್ಕನ್ನು ಅವನು ವರ್ಜಿಸಿದರೆ ಅಥವಾ ಚಲಾಯಿಸದೆ ಯಾರನ್ನೂ ನೇಮಿಸದಿದ್ದರೆ, ವಕೀಲರಿಲ್ಲವೆಂಬ ಕಾರಣದಿಂದ, ವಿಚಾರಣೆ ಸಂವಿಧಾನಬಾಹಿರವಾಗುವುದಿಲ್ಲ ಎಂದು ತಿಳಿಸಿದೆ (1951). ಸಂಭಾವನೆ ಕೊಡಲು ಶಕ್ತನಲ್ಲದ ಬಡ ಆಪಾದಿತನಿಗೆ ರಾಜ್ಯ ಕಡ್ಡಾಯವಾಗಿ ವಕೀಲರನ್ನು ನೇಮಿಸಬೇಕೆಂಬ ಅಮೆರಿಕದ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನವನ್ನು ಇಲ್ಲಿ ಅನ್ವಯಿಸಿಲ್ಲ.

ಕಾನೂನು ಮಂಡಲಿ 1958ರ ತನ್ನ ವರದಿಯಲ್ಲಿ ವಕೀಲರ ಆವಶ್ಯಕತೆಯನ್ನು ಎತ್ತಿ ಹಿಡಿಯುತ್ತ, ಕೇಂದ್ರ ಹಾಗೂ ರಾಜ್ಯ ಸರ್ಕಾರ ವಕೀಲವೃಂದ ಮತ್ತು ಖಾಸಗಿ ಸಂಸ್ಥೆಗಳನ್ನು ಈ ದಿಸೆಯಲ್ಲಿ ಸಹಕರಿಸಲು ಕರೆಯಿತ್ತಿತ್ತು.

ಸರ್ವೋಚ್ಚ ನ್ಯಾಯಾಲಯದ ನಿಯಮದಂತೆ, ಆ ನ್ಯಾಯಾಲಯಕ್ಕೆ ಬರುವ ಕ್ರಿಮಿನಲ್ ಅಪೀಲುಗಳಲ್ಲಿ ಕಡ್ಡಾಯವಾಗಿ ವಕೀಲರಿರಬೇಕೆಂದು ತಿಳಿಸಲಾಗಿದೆ. ಮರಣದಂಡನೆ ವಿಧಿಸಬಹುದಾದ ಅಪರಾಧಗಳಲ್ಲಿ ನ್ಯಾಯ ಸಹಾಯಕನನ್ನು (ಅಮೈಕಸ್ ಕ್ಯೂರಿಯೀ) ನ್ಯಾಯಾಲಯ ನೇಮಿಸುತ್ತದೆ. ಅವನಿಗೆ ಸಂಭಾವನೆ ಕೊಡುವ ಬಗ್ಗೆ ಕೆಲವು ನಿಯಮಗಳಿವೆ. ಇತರ ಕ್ರಿಮಿನಲ್ ಅಪೀಲುಗಳಲ್ಲೂ ಇದೇ ರೀತಿಯ ನಿಯಮಗಳಿವೆ. ಸಿವಿಲ್ ವ್ಯಾಜ್ಯಗಳ ಅಪೀಲುಗಳ ಬಗ್ಗೆ ನ್ಯಾಯ ನೆರವು ನೀಡಲು ಸರ್ವೋಚ್ಚ ನ್ಯಾಯಾಲಯದ ವಕೀಲ ವೃಂದ ಮುಂದೆ ಬಂದಿದೆ. ಇದರಿಂದ ನೇಮಿಸಲ್ಪಟ್ಟ ವಕೀಲರು ಉಚಿತವಾಗಿ ಸೇವೆ ಸಲ್ಲಿಸುತ್ತಾರೆ.

ಸರ್ವೋಚ್ಚ ನ್ಯಾಯಾಲಯದ ಕೆಳಗಿನ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ವ್ಯಾಜ್ಯಗಳಲ್ಲಿ ನ್ಯಾಯ ನೆರವು ನೀಡಲು ಸೂಕ್ತ ನಿಯಮಗಳನ್ನು ಕೆಲವು ರಾಜ್ಯಗಳಲ್ಲಿ ಮಾಡಲಾಗಿದೆ. ಇಂಗ್ಲೆಂಡ್ ಮತ್ತು ಅಮೆರಿಕಗಳ ಮಾದರಿಯಲ್ಲಿ ವಕೀಲರನ್ನು ನೇಮಿಸಿ ಅವರಿಗೆ ಸಂಭಾವನೆ ಕೊಡುವ ನಿಯಮಗಳಿವೆ. ಅನೇಕ ಸುಧಾರಣೆಗಳಿಗೆ ಇನ್ನೂ ಅವಕಾಶವಿದೆ. ಸುವ್ಯವಸ್ಥಿತ ರೀತಿಯಲ್ಲಿ ನ್ಯಾಯ ನೆರವು ನೀಡಬೇಕೆಂಬುದು ಈಗಿನ ಧೋರಣೆಯಾಗಿದೆ. (ಎಂ.ಎಸ್.ಆರ್.)