ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯ ವರದಿ

ವಿಕಿಸೋರ್ಸ್ದಿಂದ

ನ್ಯಾಯ ವರದಿ - ಬಹಿರಂಗ ನ್ಯಾಯಾಲಯದ ಮುಂದಿನ ಪ್ರಕರಣವೊಂದರಲ್ಲಿ ವಿಚಾರಣೆಯಲ್ಲಿ ವಿಧಿಯನ್ನು ಕುರಿತು ಪ್ರಶ್ನೆಯೊಂದರ ಮೇಲೆ ಮಾಡಲಾದ ತೀರ್ಪನ್ನು ಕುರಿತ ದಾಖಲೆ, ವರದಿ; ತರುವಾಯದ ಪ್ರಕರಣಗಳಲ್ಲಿ ಪೂರ್ವ ನಿದರ್ಶನವಾಗಿ ಇದನ್ನು ಉದಾಹರಿಸಬಹುದೆಂಬುದು ಇದರ ಪ್ರಾಮುಖ್ಯ (ಲಾ ರಿಪೋರ್ಟ್). ಮುಂದೆ ನ್ಯಾಯಲಯ ವ್ಯವಹರಣೆಗೆ ಮಾರ್ಗದರ್ಶಕವಾಗುವಂಥ ಸಾಮಗ್ರಿ ಇದು. ವಿವಾದಾಂಶ, ಪರ ಮತ್ತು ವಿರುದ್ಧ ಪ್ರತಿಪಾದನ, ಹಾಜರು ಪಡಿಸಿದ ಸಾಕ್ಷ್ಯ ಹಾಗೂ ಆ ಬಗ್ಗೆ ಸಂಬಂಧಪಟ್ಟ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯ ನೀಡುವ ತೀರ್ಮಾನ ಇವುಗಳ ಮುಖ್ಯಾಂಶಗಳೇ ನ್ಯಾಯ ವರದಿಗೆ ಮೂಲಾಧಾರ. ನಿರ್ದುಷ್ಟವಾಗಿರುವ ನ್ಯಾಯ ವರದಿಗಳು ರಾಜಶಾಸನ ಮತ್ತು ವಿಧಾನ ಮಂಡಲದಿಂದ ರಚಿತವಾದ ಕಾನೂನುಗಳಷ್ಟೇ ವಿಧಿಬಲ ಹೊಂದಿದವಾಗಿವೆ ಎಂದು ಹೆರಾಲ್ಡ್ಸ್ ಆಫ್ ದಿ ಲಾ ಎಂಬ ಗ್ರಂಥದಲ್ಲಿ ಕ್ಲಾರೆನ್ಸ್ ಮೊರಾನ್ ಅಭಿಪ್ರಾಯ ಪಟ್ಟಿದ್ದಾರೆ. ವಿಧಾನಾಂಗ ಮತ್ತು ಕಾರ್ಯಾಂಗಗಳು ತಮ್ಮ ಶಕ್ತಿಗಳನ್ನು ಮನ ಬಂದಂತೆ ಪ್ರಯೋಗಿಸುವುದನ್ನು ನ್ಯಾಯಾಂಗ ಹೇಗೆ ನಿಗ್ರಹಿಸುವುದೋ ಅದೇ ರೀತಿಯಲ್ಲಿ ನ್ಯಾಯವರದಿಗಳೂ ನ್ಯಾಯಾಂಗದ ಶಕ್ತಿ ಪ್ರಯೋಗವನ್ನು ನಿಗ್ರಹಿಸಲು ತುಂಬ ಸಹಾಯಕವಾಗಿವೆಯೆಂಬ ನೀತಿಯನ್ನು ಎಲ್ಲ ಮುಂದುವರಿದ ಪ್ರಜಾತಂತ್ರ ರಾಷ್ಟ್ರಗಳೂ ಒಪ್ಪಿಕೊಂಡಿವೆ. ನ್ಯಾಯಪಾರಮ್ಯ ನಿಯಮವನ್ನು ಅಂಗೀಕರಿಸಿದ ಎಲ್ಲ ದೇಶಗಳಲ್ಲಿ ನ್ಯಾಯ ವರದಿಗಳಿಗೆ ಪ್ರಾಮಾಣ್ಯ ಪ್ರಾಪ್ತವಾಗಿದೆ.

ಎಷ್ಟೇ ಕ್ರೋಡೀಕೃತ ಕಾನೂನುಗಳಿದ್ದರೂ ನ್ಯಾಯಾಲಯ ನಿರ್ಣಯಾಧಾರ ಪೋಷಿತವಾದ ಕಾನೂನು ಸಾಹಿತ್ಯ ಪಾಶ್ಚಾತ್ಯ ದೇಶಗಳಲ್ಲಿ ಅಪಾರವಾಗಿ ಬೆಳೆದಿದೆ. ಭಾರತದಲ್ಲೂ ಹಿಂದೂ ಧರ್ಮಶಾಸ್ತ್ರ ಅಥವಾ ಮುಸ್ಲಿಮ್ ಮತಾಚಾರದ ಗ್ರಂಥಗಳ ಬಗ್ಗೆ ಕಾಲಕಾಲಕ್ಕೆ ಅರ್ಥ ವಿವರಣೆಗಳೂ ರೂಢಿ ಸಂಪ್ರದಾಯಗಳೂ ವ್ಯತ್ಯಾಸವಾಗಿ ಅವುಗಳ ಬಗ್ಗೆ ಪಂಡಿತರೂ ಮೌಲ್ವಿಗಳೂ ನೀಡುತ್ತಿದ್ದ ವ್ಯಾಖ್ಯೆಯನ್ನೇ ಆಧರಿಸಲಾಗುತ್ತಿತ್ತು. ಈ ಅರ್ಥವಿವರಣೆಗಳೂ ವ್ಯಾಖ್ಯಾನಗಳೂ ಅಂದಿನ ಪರಿಸ್ಥಿತಿಯಲ್ಲಿ ನ್ಯಾಯ ವರದಿಯ ಮಹತ್ತ್ವವನ್ನೇ ಹೊಂದಿದ್ದುವೆಂದು ಹೇಳಬಹುದು. ರೋಮನ್ ಸಾಮ್ರಾಜ್ಯದಲ್ಲಿ ನ್ಯಾಯಾಲಯಗಳಿಗೆ ಮಾರ್ಗದರ್ಶಕವಾಗಿದ್ದ ಪ್ರೇಟರರ ಈಡಿಕ್ಟುಗಳೂ (ಶಾಸನ) ನ್ಯಾಯ ಪರದಿಗಳ ಪಾತ್ರವನ್ನು ಪೂರೈಸಿವೆಯೆಂದು ಹೇಳಬಹುದು.

ನ್ಯಾಯ ವರದಿಗಳು ಅವಲಂಬನೀಯ ಆಧಾರಗಳಾಗಿ ಅಂಗೀಕೃತವಾದ್ದು 13ನೆಯ ಶತಮಾನದ ಉತ್ತರಾರ್ಧದಲ್ಲಿ. ಇಂಗ್ಲೆಂಡಿನಲ್ಲಿ ಇವನ್ನು ವಾರ್ಷಿಕ ಪುಸ್ತಕಗಳಾಗಿ (ಇಯರ್ ಬುಕ್) ಕ್ರೋಡೀಕರಿಸಲಾಯಿತು. ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುವಾಗ ಹಾಜರಿದ್ದು ಬಹು ಎಚ್ಚರಿಕೆಯಿಂದ ವರದಿಗಾರರು ಟಿಪ್ಪಣಿಗಳನ್ನು ತಯಾರಿಸುತ್ತಿದ್ದರು. ಇದು ಗಂಭೀರವೂ ಶ್ರಮಸಾಧ್ಯವೂ ಆದ ಕಾರ್ಯವೆಂಬುದನ್ನು ವಿಧಿವೇತ್ತರು ಮನಗಂಡಿದ್ದರು.

ವಿವಾದಗಳು ಹೆಚ್ಚಿದಂತೆ ನ್ಯಾಯ ವರದಿಗಳ ಸಂಖ್ಯೆಯೂ ಅಪಾರವಾಗಿ ಬೆಳೆಯಿತು. ಖಾಸಗಿ ಸಂಸ್ಥೆಗಳೂ ಕಂಪನಿಗಳೂ ತಮ್ಮ ವಾಣಿಜ್ಯ ಹಿತಾಸಕ್ತಿಗೆ ಸಂಬಂಧಿಸಿದ ತೀರ್ಮಾನಗಳನ್ನು ವರದಿ ಮಾಡಲು ತಮ್ಮ ಖರ್ಚಿನಿಂದಲೇ ಏರ್ಪಾಡು ಮಾಡತೊಡಗಿದುವು. ಪ್ರಜಾಪ್ರಭುತ್ವ ಬೇರೂರಿದಂತೆ, ಎಲ್ಲ ರಾಷ್ಟ್ರಗಳಲ್ಲೂ ವಿಧಾನ ಮಂಡಲಗಳ ಕಾರ್ಯಕಲಾಪ ಮತ್ತು ನ್ಯಾಯಾಲಯಗಳ ತೀರ್ಮಾನಗಳ ಬಗ್ಗೆ ವರದಿಗಳು ಪ್ರಕಟವಾಗಬೇಕೆಂಬ ಬೇಡಿಕೆ ಹೆಚ್ಚಿತ್ತು. ವರದಿಯ ವಿಶ್ವಾಸನೀಯತೆಯನ್ನೂ ದೋಷರಾಹಿತ್ಯವನ್ನೂ ಕಾಪಾಡಿಕೊಂಡು ಬರಲು ಇಂಗ್ಲೆಂಡ್, ಅಮೆರಿಕ ದೇಶಗಳಲ್ಲಿ ನ್ಯಾಯಾಲಯಗಳು ಅಧಿಕೃತ ವರದಿಗಾರರನ್ನು ನೇಮಿಸುವ ಪದ್ಧತಿ ಆರಂಭವಾಯಿತು. ಇಂಗ್ಲೆಂಡಿನಲ್ಲಿ ನ್ಯಾಯಾಲಯ ವರದಿಗಾರನ ಸ್ಥಾನವನ್ನು ಬ್ಯಾರಿಸ್ಟರ್ ಅಟ್ ಲಾ ಪದವೀಧರನಿಗೆ ಮೀಸಲಿಡಲಾಯಿತು. ಅಮೆರಿಕದಲ್ಲಿ ಕೂಡ ನ್ಯಾಯಾಲಯದ ವರದಿಗಾರರು ಸರ್ಕಾರಿ ಅಧಿಕಾರಿಗಳು. ಸರ್ಕಾರವೇ ಅವರಿಗೆ ಸಂಬಳ ಕೊಡುತ್ತದೆ. ಈ ಸಂಪ್ರದಾಯ ಭಾರತದಲ್ಲಿ ಬ್ರಿಟಿಷರ ಆಗಮನಾನಂತರ ಜಾರಿಗೆ ಬಂದು ಈಗಲೂ ಪ್ರಚಲಿತವಾಗಿದೆ. ಖಾಸಗಿ ವರದಿ ಪತ್ರಿಕೆಗಳಲ್ಲಿ ನ್ಯಾಯಾಲಯ ತೀರ್ಮಾನಗಳ ಭಿನ್ನ ಪಾಠಗಳು ಪ್ರಕಟವಾಗಿ ಅದರಿಂದ ಅನಿಶ್ಚಿತತೆಯುಂಟಾಗದಂತೆ ತಡೆಯಲು ಅಧಿಕೃತ ವರದಿಗಾರರು ಅವುಗಳ ಮೇಲೇ ನಿಯಂತ್ರಣ ವಿಟ್ಟುಕೊಳ್ಳುವ ಏರ್ಪಾಡೂ ರೂಢಿಗೆ ಬಂತು. ಖಾಸಗಿ ವರದಿಗಾರರಿಗೆ ಕೃತಿ ಸ್ವಾಮ್ಯದ ಹಕ್ಕಿಲ್ಲವೆಂದು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಬಹು ಹಿಂದೆಯೇ ತೀರ್ಪಿತ್ತಿದೆ. ಸರ್ಕಾರಿ ವರದಿಗಾರನ ಪಾರವೇ ಅಧಿಕೃತ ಪಾರವೆಂದೂ ನಿರ್ಣಯಿಸಲಾಗಿದೆ.

ಅಮೆರಿಕದ ನ್ಯಾಯ ವರದಿಗಾರರು ಸ್ವತಂತ್ರರು. ಬ್ರಿಟನ್ನಿನಲ್ಲಿ ಖಾಸಗಿ ವರದಿಗಾರರು ತಯಾರಿಸಿದ ಸಾರಾಂಶ ರೂಪದ ಟಿಪ್ಪಣಿಗಳಿಗೆ ನ್ಯಾಯಾಧೀಶನ ಅನು ಮೋದನೆ ಅಗತ್ಯ. ಅಮೆರಿಕದ ವರದಿಗಾರ ತನ್ನ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದಾಗಿ ಶಪಥ ಮಾಡುತ್ತಾನೆ. ಅವನು ಕೊಡುವ ಪ್ರಮಾಣಪತ್ರ ಸಹಿತವಾದ ವರದಿಯ ಪ್ರತಿ ಆಪಾತತಃ ಸಿಂಧುವೆಂದು ಸ್ವೀಕೃತವಾಗುತ್ತದೆ. ಈ ಸಂಪ್ರದಾಯವನ್ನು ಈಗ ಮುಂದುವರಿದ ದೇಶಗಳ ಎಲ್ಲ ಆಧುನಿಕ ನ್ಯಾಯಾಲಯಗಳಲ್ಲಿ ಅನುಸರಿಸಲಾಗುತ್ತಿದೆಯೆಂದು ಹೇಳಬಹುದು.

ಭಾರತದಲ್ಲಿ : ಅಧಿಕೃತ ನ್ಯಾಯ ವರದಿಗಳಿಗೆ ಕಾನೂನಿನಷ್ಟೇ ಪ್ರಾಮಾಣ್ಯ ವಿರಬೇಕೆಂಬುದನ್ನು ಭಾರತದಲ್ಲಿ ಕಲ್ಕತ್ತದ ಸದರ್ ದಿವಾನಿ ಅದಾಲತ್ತಿನ ನ್ಯಾಯಾದೀಶನಾಗಿದ್ದ ಡೋರಿನ್ 1831ರಷ್ಟು ಹಿಂದೆಯೇ ಬೆಂಬಲಿಸಿದ್ದ. ಭಾರತದ ನ್ಯಾಯ ಆಯೋಗವೂ ಈ ವಿಚಾರವನ್ನು ಸಮರ್ಥಿಸಿದೆ. 1875ರಷ್ಟು ಹಿಂದೆಯೇ ಭಾರತೀಯ ನ್ಯಾಯ ವರದಿಗಳ ಅಧಿನಿಯಮವನ್ನು ಜಾರಿಗೆ ತರಲಾಯಿತು. ಇದರಿಂದ ವರದಿಗಾರರಲ್ಲಿ ಕಂಡುಬಂದ ಅಸಹಜ ಪೈಪೋಟಿಯನ್ನು ನಿಯಂತ್ರಿಸಲು ಅನುಕೂಲವಾಯಿತು. ನ್ಯಾಯ ವರದಿಗಳನ್ನು ಬರೆಯುವ ಆಧುನಿಕ ರೀತಿಯನ್ನು 18ನೆಯ ಶತಮಾನದ ಕೊನೆಯಲ್ಲಿ ಜೇಮ್ಸ್ ಬರೋ ಎಂಬಾತ ರೂಪಿಸಿದನೆಂದು ಹೇಳುತ್ತಾರೆ.

ಭಾರತದಲ್ಲಿ ಕಂಪನಿ ಸರ್ಕಾರದ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಸದರ್ ದಿವಾನಿ ಅದಾಲತ್, ಸದರ್ ನಿಜಾಮತ್ ಅದಾಲತ್ ಎಂಬ ಉಚ್ಚ ನ್ಯಾಯಾಲಯಗಳ ಅಂದಿನ ಆಂಗ್ಲ ನ್ಯಾಯಾಧೀಶರು ಅನೇಕ ಮಹತ್ತ್ವದ ಸಿವಿಲ್ ಮತ್ತು ಕ್ರಿಮಿನಲ್ ತೀರ್ಮಾನಗಳನ್ನು ಕ್ರೋಡೀಕರಿಸಿ ವ್ರಕಟಿಸಿದ್ದಾರೆ. ಹಿಂದೂ ಧರ್ಮ ಶಾಸ್ತ್ರ ಮತ್ತು ಮುಸ್ಲಿಮ್ ಷರೀಯತ್ ವಿಷಯಗಳಿಗೆ ಸಂಬಂಧಿಸಿದ ಪ್ರಿವಿ ಕೌನ್ಸಿಲ್ ತೀರ್ಮಾನಗಳೂ ಗ್ರಂಥ ರೂಪದಲ್ಲಿ ಪ್ರಕಟವಾಗಿವೆ. ಭಾರತಕ್ಕೆ ಸಂಬಂಧಿಸಿದಂತೆ, ವರದಿ ರೂಪದ ಬೃಹದ್ಗ್ರಂಥಗಳನ್ನು ಪ್ರಕಟಿಸಿದವರಲ್ಲಿ ಫ್ರಾನ್ಸಿಸ್ ಮೆಕ್ನಾಟನ್, ಆರ್. ಚೇಂಬರ್ಸ್, ಮತ್ತು ಎಡ್ವರ್ಡ್ ಹೈಡ್ ಈಸ್ಟ್ ಪ್ರಖ್ಯಾತರಾಗಿದ್ದಾರೆ. ಇಂಡಿಯನ್ ಅಷೀಲ್ಸ್ (ಭಾರತೀಯ ಅಪೀಲುಗಳು) ಎಂಬ ಗ್ರಂಥ ಭಾರತೀಯ ಕಾನೂನು ಸಾಹಿತ್ಯಕ್ಕೆ ಇ.ಎಫ್. ಮೂರ್ ನೀಡಿದ ಅಪೂರ್ವ ಕೊಡುಗೆಯೆಂದು ಪರಿಗಣಿತವಾಗಿದೆ.

1909ರಿಂದ ಈಚೆಗೆ ಇಂಡಿಯನ್ ಕೇಸಸ್ (ಭಾರತೀಯ ಪ್ರಕರಣಗಳು) ಎಂಬ ಪತ್ರಿಕೆ ಲಾಹೋರಿನಿಂದ ಪ್ರಕಟವಾಗುತ್ತಿತ್ತು. ಭಾರತ ವಿಭಜನೆಯ ತರುವಾಯ ಅದು ನಿಂತುಹೋಯಿತು. 1911ರಿಂದ ಈಚೆಗೆ ಟಿ. ಎ. ವೆಂಕಟಸ್ವಾಮಿ ರಾವ್ ಅವರು ಹಿಂದಿನ ಮಹತ್ತ್ವದ ತೀರ್ಮಾನಗಳನ್ನೆಲ್ಲ ಸಂಗ್ರಹಿಸಿ ಇಂಡಿಯನ್ ಡಿಸಿಷನ್ಸ್ (ಭಾರತೀಯ ತೀರ್ಪುಗಳು) ಎಂಬ ಹೆಸರಿನಿಂದ ಪ್ರಕಟಿಸಿದರು. ಹಾಬ್ ಹೌಸ್ ಎಂಬ ನ್ಯಾಯ ವಿಶಾರದ ಕಾನೂನು ಮುತ್ರಿಯಾಗಿದ್ದಾಗ ಆಲ್ ಇಂಡಿಯ ರಿಪೋರ್ಟ್ ಎಂಬ ಪತ್ರಿಕೆ ನಾಗಪುರದಿಂದ ಪ್ರಕಟವಾಗತೊಡಗಿತು. ಭಾರತದ ಸರ್ಪೋಚ್ಚ ನ್ಯಾಯಾಲಯದ ಮತ್ತು ಆಯಾ ರಾಜ್ಯಗಳ ಉಚ್ಚ ನ್ಯಾಯಾಲಯಗಳ ಮಹತ್ತ್ವದ ತೀರ್ಮಾನಗಳ ನ್ಯಾಯ ವರದಿಗಳು ಮುಂಬಯಿ, ಕಲ್ಕತ್ತ, ಮದ್ರಾಸ್, ಅಲಹಾಬಾದ್, ಪಟನಾ, ಲಖನೌ, ಕಟಕ್ ಮೊದಲಾದ ಸ್ಥಳಗಳಲ್ಲಿ ಪ್ರಕಟವಾಗತೊಡಗಿದುವು. ಸರಿ ಸುಮಾರಾಗಿ ಎಲ್ಲ ಉಚ್ಚ ನ್ಯಾಯಾಲಯಗಳ ಮಹತ್ತ್ವದ ತೀರ್ಮಾನಗಳು ಈಗ ವರದಿಯಾಗುತ್ತಿವೆಯೆಂದು ಹೇಳಬಹುದು. ಹೈದರಾಬಾದಿನ ನಿಜಾಮರ ಆಳ್ವಿಕೆಯ ಕಾಲದಲ್ಲಿ ಡೆಕನ್ ಲಾ ರಿಪೋರ್ಟ್ ಎಂಬ ಪತ್ರಿಕೆ ಹೈದರಾಬಾದಿನಿಂದ ಉರ್ದು ಭಾಷೆಯಲ್ಲಿ ಪ್ರಕಟವಾಗುತ್ತಿತ್ತು.

ವಿವಾದಗಳ ವಿಷಯವೈವಿಧ್ಯ ಬೆಳೆದಂತೆ ಮಾರಾಟ ತೆರಿಗೆ, ಕಾರ್ಮಿಕ ಮತ್ತು ಉದ್ಯಮ ಸಮಸ್ಯೆಗಳಿಗೆ ಸಂಬಂಧಿಸಿದ ತೀರ್ಮಾನಗಳು ಮತ್ತು ರಾಜಸ್ವ ಮಂಡಲಿ, ಜಲ ಮಂಡಲಿ, ಸಹಕಾರಿ ಇಲಾಖೆ-ಇವೇ ಮೊದಲಾದ ಸಂಸ್ಥೆಗಳಿಗೆ ಸಂಬಂಧಿಸಿದ ನ್ಯಾಯಾಧಿಕರಣಗಳ ತೀರ್ಮಾನಗಳು ಪ್ರತ್ಯೇಕವಾಗಿ ವರದಿಯಾಗುತ್ತಿವೆ. ನ್ಯಾಯ ವರದಿಗಳು ವ್ಯಾಪಕವಾಗಿದ್ದು ಜೀವನದ ಎಲ್ಲ ರಂಗಗಳನ್ನೂ ಪ್ರತಿನಿಧಿಸುವಷ್ಟು ಬೆಳೆದಿವೆಯೆಂದು ಹೇಳಬಹುದು.

ಭಾರತ ಸರ್ಕಾರದ ಲಾ ಗಜಿûಟ್, ಕರ್ನಾಟಕ ಲಾ ಜರ್ನಲ್, ಮದ್ರಾಸ್ ಲಾ ಜರ್ನಲ್, ಸುಪ್ರೀಂ ಕೋರ್ಟ್ ನೋಟ್ಸ್, ಆಲ್ ಇಂಡಿಯ ರಿಪೋರ್ಟರ್, ಲೇಬರ್ ಲಾ ಜರ್ನಲ್, ಇಯರ್ಸ್ ಡೈಜೆಸ್ಟ್, ಕರೆಂಟ್ ಇಂಡಿಯನ್ ಸ್ಟ್ಯಾಚ್ಯೂಟ್ಸ್, ಸೇಲ್ಸ್ ಟ್ಯಾಕ್ಸ್ ಕೇಸಸ್, ಸರ್ವಿಸ್ ಲಾ ರಿಪೋರ್ಟರ್ ಮೊದಲಾದ ವರದಿ ಪತ್ರಿಕೆಗಳು ನಮ್ಮಲ್ಲಿ ಪ್ರಕಟವಾಗುತ್ತಿದ್ದು ದೇಶಾದ್ಯಂತ ಪ್ರಚಾರದಲ್ಲಿವೆ. ದೆಹಲಿಯ ಲಾ ಇನ್‍ಸ್ಟಿಟ್ಯೂಟಿನವರು ಭಾರತದ ಸರ್ವೋಚ್ಚ ನ್ಯಾಯಾಲಯದ ಮತ್ತು ಹಿಂದಿ ರಾಜ್ಯಗಳ ಉಚ್ಚ ನ್ಯಾಯಾಲಯಗಳ ತೀರ್ಮಾನಗಳನ್ನು ಹಿಂದಿಯಲ್ಲಿ ವರದಿ ಮಾಡುವ ಉದ್ದೇಶ ಹೊಂದಿದ್ದಾರೆಂದೂ ತಿಳಿದು ಬಂದಿದೆ. ಈಚೆಗೆ ಬೆಂಗಳೂರಿನಿಂದ ನ್ಯಾಯ ಸುಧಾ ಎಂಬ ಪತ್ರಿಕೆ ಕನ್ನಡದಲ್ಲಿ ಪ್ರಕಟವಾಗುತ್ತಿದೆ. ಇದರಿಂದ ಕನ್ನಡದಲ್ಲಿ ನ್ಯಾಯ ವರದಿಗೆ ಅವಕಾಶ ದೊರೆತಿದೆ. ನ್ಯಾಯ ವರದಿಗಳು ನ್ಯಾಯಿಕ ಸಾಹಿತ್ಯದ ಅವಿಭಾಜ್ಯ ಅಂಗವಾಗಿರುವುವಷ್ಟೇ ಅಲ್ಲದೆ ಆಧುನಿಕ ಪ್ರಪಂಚದ ನ್ಯಾಯ ವಿತರಣೆಯ ಪ್ರಬಲ ಸಾಧನಗಳಾಗಿವೆ.

ನ್ಯಾಯ ವರದಿಗಳನ್ನು ತಯಾರಿಸಲು ಅನೇಕ ಆಧುನಿಕ ಸೂಕ್ಷ್ಮಗ್ರಾಹಿ ಯಂತ್ರೋಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ. (ಕೆ.ಎ.ಆರ್.)