ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯ ಸಹಾಯಕ

ವಿಕಿಸೋರ್ಸ್ದಿಂದ

ನ್ಯಾಯ ಸಹಾಯಕ - ಲ್ಯಾಟಿನ್ನಿನ ಅಮೈಕಸ್ ಕ್ಯೂರಿಯೀ ಎಂಬುದಕ್ಕೆ ಇದು ಕನ್ನಡದಲ್ಲಿ ಸಮಾನ ಪದ. ಅಮೈಕಸ್ ಕ್ಯೂರಿಯೀ ಎಂದರೆ ನ್ಯಾಯಾಲಯದ ಮಿತ್ರ ಎಂಬುದು ಪದಶಃ ಅರ್ಥ. ಒಂದು ಮೊಕದ್ದಮೆಯಲ್ಲಿ ತನಗೆ ಸಂಬಂಧ ಪಡದಿದ್ದರೂ ಸಲಹೆ ಕೊಡುವ ವ್ಯಕ್ತಿಯನ್ನು ಮೂಲತಃ ಹೀಗೆಂದು ಕರೆಯಲಾಗುತ್ತಿತ್ತು. ಈ ವ್ಯವಸ್ಥೆ ರೋಮಿನಲ್ಲಿ ಪರಿಮಿತ ರೀತಿಯಲ್ಲಿ ಆಚರಣೆಯಲ್ಲಿತ್ತೆಂದು ತಿಳಿದುಬರುತ್ತದೆ. 18ನೆಯ ಶತಮಾನದ ಮಧ್ಯಭಾಗದಲ್ಲಿ ಇಂಗ್ಲೆಂಡಿನಲ್ಲಿ ನ್ಯಾಯ ಸಹಾಯಕನ ಪ್ರವೇಶವಾಯಿತು. ಕಾಮನ್‍ವೆಲ್ತ್ ದೇಶಗಳ ನ್ಯಾಯಾಲಯಗಳಿಂದ ಪ್ರಿವಿ ಕೌನ್ಸಿಲಿಗೆ ಬರುವ ಪುನರ್ವಿಚಾರಣೆಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ನ್ಯಾಯಸಹಾಯಕನ ಉಪಯೋಗ ಪಡೆಯಬಹುದಾಗಿತ್ತು.

ಇಂಗ್ಲೆಂಡಿನಲ್ಲಿ ಒಂದು ಮೊಕದ್ದಮೆಯಲ್ಲಿ ಸರ್ಕಾರ ಪಕ್ಷ ವಹಿಸದಿದ್ದರೂ ವಿವಾದದಲ್ಲಿ ದೊರೆಯಬಹುದಾದ ನಿರ್ಣಯ ತನಗೆ ಪ್ರತ್ಯಕ್ಷವಾಗಿ ಸಂಬಂಧಪಡುವಾಗ ಅಡ್ವೊಕೇಟ್-ಜನರಲ್ ಆಗಲಿ ಬೇರೆ ವಕೀಲನಾಗಲಿ ಸರ್ಕಾರದ ಪರವಾಗಿ ನ್ಯಾಯ ಸಹಾಯಕನಾಗಿ ಹಾಜರಾಗುತ್ತಿದ್ದ. ಅಮೆರಿಕದಲ್ಲಿ 19ನೆಯ ಶತಮಾನದ ಆದಿಯಲ್ಲಿ ಮೊಕದ್ದಮೆಯ ಮಧ್ಯದಲ್ಲಿ ಪ್ರವೇಶಿಸಲು ಅಲ್ಲಿಯ ಅಟಾರ್ನಿ-ಜನರಲನಿಗೆ ಅನುಮತಿ ನೀಡಿದ ನಿದರ್ಶನವಿದೆ. 19ನೆಯ ಶತಮಾನದ ಮಧ್ಯದಲ್ಲಿ ಇಂಥ ಹಲವು ನಿದರ್ಶನಗಳು ದೊರಕುತ್ತವೆ. 1880ರ ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯಾಯ ನಿರೂಪಣಾಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ಮೊಕದ್ದಮೆಗಳಲ್ಲಿ ನ್ಯಾಯ ಸಹಾಯಕರಾಗಿ ಪ್ರವೇಶಿಸಲಾರಂಭಿಸಿದರು. 1930ರ ಹೊತ್ತಿಗೆ ಖಾಸಗಿ ಸಂಸ್ಥೆಗಳೂ ಈ ವಿಧಾನದಿಂದ ಒಂದು ಸಂಘ ಅಥವಾ ವರ್ಗದ ಅಭಿಪ್ರಾಯವನ್ನು ಸಮರ್ಥಿಸಲು ಪ್ರಾರಂಭಿಸಿದುವು.

ನ್ಯಾಯಸಹಾಯಕನ ಸಾಂಪ್ರದಾಯಿಕ ವೃತ್ತಿಯೆಂದರೆ ಮೊಕದ್ದಮೆಯ ಪಕ್ಷಗಳಿಗೆ ಸೇರದ ಹಾಗೂ ಸಂಬಂಧಿಸದ, ಬೇರೆಯದಾದ ಆಸ್ಥೆಯನ್ನು ಪ್ರತಿಪಾದಿಸುವುದು. ಇಂಥ ಆಸ್ಥೆ ವೈಯಕ್ತಿಕ ಅಥವಾ ಸಾರ್ವಜನಿಕವಾಗಿರಬಹುದು. ಹೀಗೆ ಯಾವುದೇ ವ್ಯಕ್ತಿಯ, ವರ್ಗದ, ಸಂಸ್ಥೆಯ ಅಥವಾ ಹಿತದ ಹಕ್ಕುಗಳು ಮೊಕದ್ದಮೆಯ ತೀರ್ಪನ್ನು ಅವಲಂಬಿಸಿರುವಾಗ ಅಂಥ ಆಸ್ಥೆಯನ್ನು ಸರಿಪಡಿಸುವುದಕ್ಕಾಗಿ ಅಥವಾ ರಕ್ಷಿಸುವುದಕ್ಕಾಗಿ ಅದು ನ್ಯಾಯಸಹಾಯಕನ ಮೂಲಕ ಮೊಕದ್ದಮೆಯಲ್ಲಿ ಪ್ರವೇಶಿಸುವುದುಂಟು.

ನ್ಯಾಯಸಹಾಯಕ ಮೂರು ರೀತಿಗಳಲ್ಲಿ ನ್ಯಾಯಾಲಯದ ಮೊಕದ್ದಮೆಗಳಲ್ಲಿ ಪ್ರವೇಶಿಸಬಹುದು. ಮೊದಲನೆಯದಾಗಿ, ಇಂಗ್ಲೆಂಡಿನಲ್ಲಿರುವಂತೆ ಅವನು ಸರ್ಕಾರದ ಪರವಾಗಿ ಮೊಕದ್ದಮೆಯಲ್ಲಿ ಪ್ರವೇಶಿಸಬಹುದು. ಎರಡನೆಯದಾಗಿ, ಅವನು ಉದ್ಯೋಗ ಅಥವಾ ವೃತ್ತಿಪರ ಸದಸ್ಯತ್ವವುಳ್ಳ ಖಾಸಗಿ ಸಂಸ್ಥೆಗಳ ಪರವಾಗಿ ಪ್ರವೇಶಿಸಬಹುದು (ಉದಾಹರಣೆ: ನ್ಯಾಯವಾದಿಗಳ ಪರಿಷತ್ತು, ಬಾರ್ ಕೌನ್ಸಿಲ್). ಮೂರನೆಯದಾಗಿ, ಉದ್ಯೋಗ ಅಥವಾ ವೃತ್ತಿಪರವಲ್ಲದ, ಇಲ್ಲವೇ ಸರ್ಕಾರಕ್ಕೆ ಸೇರದ, ಕೇವಲ ಸಾರ್ವಜನಿಕ ಆಸ್ಥೆಯುಳ್ಳ, ಸಾಂಪ್ರದಾಯಿಕವಾಗಿ ವ್ಯವಸ್ಥಿತಗೊಂಡ, ಖಾಸಗಿ ಸಂಸ್ಥೆಗಳ ಪರವಾಗಿ ಪ್ರವೇಶಿಸಬಹುದು (ಉದಾಹರಣೆ : ಧಾರ್ಮಿಕ ಸಂಸ್ಥೆಗಳು).

ಇದಲ್ಲದೆ ಭಾರತದಲ್ಲಿ ಕ್ರಿಮಿನಲ್ ಮೊಕದ್ದಮೆಗಳಲ್ಲಿ ತೀವ್ರ ಅಪರಾಧದ ಬಗ್ಗೆ ವಿಚಾರಣೆ ನಡೆಸುವಾಗ ನ್ಯಾಯಾಲಯವೇ ನಿಯಮಿಸುವ ವಕೀಲರನ್ನೂ ನ್ಯಾಯಸಹಾಯಕರೆಂದು ಕರೆಯಲಾಗುತ್ತದೆ. ಆದರೆ, ಇಂಥ ಅಪರಾಧಿಗೆ ನ್ಯಾಯ ಸಹಾಯಕನಾಗಿ ಒಬ್ಬ ವಕೀಲನನ್ನು ನೇಮಿಸದಿದ್ದರೆ ಆತನನ್ನು ಪ್ರತಿರಕ್ಷಿಸುವವಿಲ್ಲದೆ ಅವನು ತೀವ್ರವಾದ ಅನನುಕೂಲತೆಗೆ ಒಳಪಡುತ್ತಾನೆಯೇ ಎಂಬುದನ್ನು ನ್ಯಾಯಾಲಯ ಮೊದಲು ನಿರ್ಧರಿಸಬೇಕು.

ಒಬ್ಬ ನ್ಯಾಯವಾದಿ ನ್ಯಾಯಸಹಾಯಕನಾಗಿ ನೇಮಕ ಹೊಂದಿದಾಗ ಅಂಥ ನ್ಯಾಯವಾದಿಗೆ ತಾನು ನ್ಯಾಯಸಹಾಯಕನಾಗಿ ಪ್ರತಿನಿಧಿಸುತ್ತಿರುವ ಪಕ್ಷವನ್ನು ಸಮರ್ಥಿಸುವುದಕ್ಕೆ ಸಾಕಷ್ಟು ಕಾಲ ಮತ್ತು ಅವಕಾಶ ಕೂಡದಿದ್ದರೆ ನ್ಯಾಯಾಲಯ ಆತನಿಗೆ ಸರಿಯಾದ ನ್ಯಾಯ ದೊರಕಿಸಲಿಲ್ಲವಾಗುತ್ತದೆ ಎಂಬುದಾಗಿ ಭಾರತದ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. (ಎಚ್.ಕೆ.ಎನ್‍ಎ.)