ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಷನಲ್ ಕೊ - ಆಪರೇಟಿವ್ ಯೂನಿಯನ್ ಆಫ್ ಇಂಡಿಯ

ವಿಕಿಸೋರ್ಸ್ದಿಂದ

ನ್ಯಾಷನಲ್ ಕೊ - ಆಪರೇಟಿವ್ ಯೂನಿಯನ್ ಆಫ್ ಇಂಡಿಯ

ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ ಎಂಬುದು ಒಂದು ರಾಷ್ಟ್ರೀಯ ಮಟ್ಟದ ಮಂಡಳಿಯಾಗಿದೆ. ಇದು ಭಾರತದಲ್ಲಿ ಸಹಕಾರಿ ಚಳುವಳಿಯನ್ನು ಬೆಳೆಸುವ ಪ್ರಮುಖ ಉದ್ದೇಶದಿಂದ ಸ್ಥಾಪಿತವಾಗಿ ಕಾರ್ಯೋನ್ಮುಖವಾಗಿರುವ ಸಂಸ್ಥೆ. ಸಹಕಾರ ತತ್ತ್ವದ ಆಧಾರದ ಮೇಲೆ ಜನರಿಗೆ ಸಹಕಾರ ಕ್ಷೇತ್ರದಲ್ಲಿ ಹಲವಾರು ಸೇವೆಗಳನ್ನು ಸಲ್ಲಿಸುವುದು ಇದರ ಗುರಿಯಾಗಿದೆ. ಈ ಸಂಸ್ಥೆಯು ಪ್ರಥಮತಃ ಪ್ರಾರಂಭವಾದದ್ದು 1929 ರಲ್ಲಿ. ಅಖಿಲ ಭಾರತ ಸಹಕಾರ ಸಂಸ್ಥೆಗಳ ಸಂಘವೆಂಬ ಹೆಸರಿನಲ್ಲಿ ಸ್ಥಾಪಿತವಾದ ಇದು 1961 ರಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಂಡು ಈಗಿನ ಭಾರತದ ರಾಷ್ಟ್ರೀಯ ಸಹಕಾರಗಳ ಒಕ್ಕೂಟ ಎಂಬ ಹೆಸರನ್ನು ಪಡೆಯಿತು. ಈ ಸಮಯದಲ್ಲಿ ಭಾರತೀಯ ಪ್ರಾಂತೀಯ ಬ್ಯಾಂಕುಗಳ ಸಂಘ ಮತ್ತು ಅಖಿಲ ಭಾರತ ಸಹಕಾರ ಸಂಸ್ಥೆಗಳ ಸಂಘಗಳು ವಿಲೀನಗೊಂಡು ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ ಎಂದು ಒಂದಾದವು. ಸರ್ ಲಲ್ಲೂಭಾಯಿ ಸಮಾಲ್‍ದಾಸ್‍ರವರು ಮೊದಲ ಚುನಾಯಿತ ಅಧ್ಯಕ್ಷರಾಗಿದ್ದರು. ಪ್ರೊ. ಹೆಚ್.ಎಲ್. ಖಾಜಿ ಯವರು ಮೊದಲ ಕಾರ್ಯದರ್ಶಿಯಾಗಿದ್ದರು.

ಈ ಒಕ್ಕೂಟವು ರಾಷ್ಟ್ರೀಯ ಸಹಕಾರಿಗಳ ಮಂಡಳಿಯಂತೆ ರೂಪಿತವಾಗಿತ್ತು. ಆದುದರಿಂದ ಇದರ ಸದಸ್ಯತ್ವವು ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಎಲ್ಲ ಸಹಕಾರಿ ಸಂಸ್ಥೆಗಳಿಗೂ ಹಾಗು ಬಹು-ರಾಜ್ಯ ಸಹಕಾರಿ ಸಂಘಗಳಿಗೂ ಇದರ ಸದಸ್ಯತ್ವವು ತೆರೆದಿದೆ. ಈ ಸಂಸ್ಥೆಗಳ ಪರಾವಲಂಬಿ ಸಹಕಾರ ಸಂಘಗಳಿಗೂ ಇದರ ಸದಸ್ಯತ್ವವು ತೆರೆದಿದೆ. ಮಾರ್ಚ್ 31ರ 2000 ದಂದು ಇದರ ಸದಸ್ಯತ್ವವು 214 ಇತ್ತು.

ಈ ಒಕ್ಕೂಟದ ಉದ್ದೇಶಗಳು ಸುಮಾರು 13 ಇವೆ. ಅವುಗಳಲ್ಲಿ ಮುಖ್ಯವಾದವುಗಳು: ಸಹಕಾರಿ ತತ್ತ್ವಗಳ ಸಿದ್ಧಾಂತ ಮತ್ತು ಆಚರಣೆಗಳನ್ನು ಪ್ರಚುರಗೊಳಿಸಿ ಅನುಷ್ಠಾನಗೊಳಿಸುವುದು ಮತ್ತು ಸಹಕಾರಿ ಶಿಕ್ಷಣ ಮತ್ತು ತರಬೇತಿಗಳನ್ನು ನಿರ್ವಹಿಸುವುದು. ವಿವಿಧ ಕ್ಷೇತ್ರಗಳಲ್ಲಿ ಸಹಕಾರಿ ಚಳುವಳಿಯನ್ನು ಒಟ್ಟುಗೂಡಿಸಿ ಬೆಳೆಸುವುದು ಮತ್ತು ಪರಸ್ಪರರಲ್ಲಿ ಸಹಕಾರೀ ಸಂಬಂಧಗಳನ್ನು ದೃಢಪಡಿಸುವುದು.

ನೆರವು, ನಿರ್ವಹಣೆ, ಮೊದಲಾದವುಗಳಿಂದ ಸಹಕಾರಿ ಸಮಸ್ಯೆಗಳ ಪರಿಹಾರಕ್ಕೆ ಸಂಶೋಧನೆ ನಡೆಸುವುದು ಮತ್ತು ಸಹಕಾರೀ ವಿಕಾಸಕ್ಕೆ ಬೇಕಾದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವುದು. ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಭೆ, ಚರ್ಚೆ, ಸಮಾವೇಶ, ಮೊದಲಾದವುಗಳಲ್ಲಿ ಭಾಗವಹಿಸುವುದು ಮತ್ತು ಆಯ್ದ ಪ್ರತಿನಿಧಿಗಳನ್ನು ಕಳಿಸುವುದು. ಐ ಸಿ ಎ, ಯು ಎನ್ ಒ, ಎಫ್ ಎ ಒ, ಐಎಲ್‍ಒ,ಯು ಎನ್ ಡಿ ಪಿ ಮೊದಲಾದ ಅಂತರರಾಷ್ಟ್ರೀಯ ಸಂಸ್ಥೆಗಳ ಜತೆ ನಮ್ಮ ಸಹಕಾರ ಸಂಬಂಧವನ್ನು ಬೆಳೆಸಿಕೊಂಡು ಅವರಿಂದ ನಮ್ಮ ಸಹಕಾರ ವಿಕಾಸ ಯೋಜನೆಯಲ್ಲಿ ನೆರವು ಪಡೆದುಕೊಳ್ಳುವುದು.

ಕೆಲವು ನಿಧಿಗಳನ್ನು ಸ್ಥಾಪಿಸಿ ಅದರಿಂದ ಹಲವಾರು ಉಪಯುಕ್ತ ಕಾರ್ಯಗಳನ್ನು ನಿರ್ವಹಿಸುವುದು. ಉದಾಹರಣೆಗೆ: (ಅ). ಸಹಕಾರಿ ಶಿಕ್ಷಣ ನಿಧಿ (ಬ). ರಾಷ್ಟ್ರೀಯ ಸಹಕಾರಿ ತರಬೇತಿ ನಿಧಿ ಅಥವಾ ಒಕ್ಕೂಟದ ಸಮಿತಿಯು ಸೂಚಿಸುವ ಇನ್ನಾವುದೇ ನಿಧಿಗಳು. ಮೊದಲಾದವುಗಳು ಒಕ್ಕೂಟದ ಉದ್ದೇಶಗಳು.

ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾದ ಕಾರ್ಯಗಳು ಹೀಗಿವೆ: ಸಹಕಾರಿ ಚಳುವಳಿಯನ್ನು ಬೆಳೆಸುವುದು ಮತ್ತು ಬಲಪಡಿಸುವುದು.

ಸಹಕಾರಿ ಶಿಕ್ಷಣ ಮತ್ತು ತರಬೇತಿ.

ಸಂಶೋಧನಾಧ್ಯಯನಗಳು.

ಪ್ರಕಟಣೆಗಳು, ಪ್ರಚಾರಗಳು ಮತ್ತು ಜನ ಸಂಪರ್ಕ.

ಅಂತರ ಸಹಕಾರಿ ಸಂಬಂಧಗಳ ಅಭಿವೃದ್ಧಿ.

ಸಹಕಾರಿ ವಿಷಯಗಳ ನೀಡುವ ಮತ್ತು ಸಂಗ್ರಹಿಸುವ ವ್ಯವಸ್ಥಿತ ಮಾಹಿತಿ ಸಂಪರ್ಕಜಾಲ. ಸಹಕಾರಿ ಅಭಿಪ್ರಾಯಗಳು ಮತ್ತು ವಿಮರ್ಶೆಗಳ ಸಲಹಾ ಸೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿನ ಸಹಕಾರಿ ತತ್ತ್ವ ವಿಕಾಸ ಮತ್ತು ಸಹಕಾರೀ ವ್ಯಾಪಾರ, ವಾಣಿಜ್ಯದಲ್ಲಿ ನೆರವು. ಕಾರ್ಯಕಾರೀ ವಿಭಾಗಗಳು :

ಪ್ರಸ್ತುತ ಲಭ್ಯವಿರುವ ಸಂಪನ್ಮೂಲದ ಮಿತಿಯೊಳಗೆ ಒಕ್ಕೂಟವು ತನ್ನ ಧ್ಯೇಯೋದ್ದೇಶ ಸಾಧನೆಗಳಿಗಾಗಿ ಹಲವಾರು ವಿಶೇಷ ತಜ್ಞತೆ ಇರುವ ಹಾಗು ಕಾರ್ಯಕಾರೀ ವಿಭಾಗಗಳನ್ನು ರಚಿಸಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಯೋಜಿಸಿದೆ. ಈಗ ಸಧ್ಯವಿರುವ ಒಕ್ಕೂಟದ ಕಾರ್ಯಕಾರೀ ವಿಭಾಗಗಳೆಂದರೆ : 1. ಸಹಕಾರಿ ಶಿಕ್ಷಣ. 2. ಸಾಮಾನ್ಯವಾದ ಸಹಕಾರಿ ಶಾಸನಗಳು, ಸಿದ್ಧಾಂತಗಳು. 3. ರಾಷ್ಟ್ರೀಯ ಸಹಕಾರಿ ಮಾಹಿತಿ ಕೇಂದ್ರ.. 4. ಅಂತರ ರಾಷ್ಟ್ರೀಯ ಸಹಕಾರಿ ವ್ಯಾಪಾರಿ ಕೇಂದ್ರ. 5. ಆಂತರಿಕ ನಿಯಂತ್ರಣ ಮತ್ತು ದೂರು, ಅಸಮಾಧಾನ ನಿವಾರಣಾ ಕೇಂದ್ರ. 6. ಧ್ವನಿ ಮತ್ತು ಚಿತ್ರಣ ಸಹಾಯಕಗಳು ಮತ್ತು ಹಿಂದಿ. 7. ಸಂಯೋಜನೆಗಳು. 8. ಆಡಳಿತ ಮತ್ತು ಸಿಬ್ಬಂದಿ ನಿರ್ವಹಣೆ. 9. ಲೆಕ್ಕ ಮತ್ತು ಹಣಕಾಸು. 10. ಪ್ರಕಟಣೆಗಳು. 11. ಪ್ರಚಾರ ಮತ್ತು ಜನ ಸಂಪರ್ಕ. 12. ಅಂತರ ರಾಷ್ಟ್ರೀಯ ಸಂಬಂಧಗಳ ವರ್ಧನೆ. 13. ಗ್ರಂಥಾಲಯ ಮತ್ತು ದಾಖಲೆ ವಿಭಾಗ. 14. ಸಹಕಾರಿ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕೇಂದ್ರ.

(ಎ.ಆರ್.ಆರ್.; ಎ.ಬಿ.ಎ.)

(ಪರಿಷ್ಕರಣೆ: ಜಿ.ಆರ್.ವಿ; ವೈ.ಕೆ)