ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಷ್, ಪಾಲ್

ವಿಕಿಸೋರ್ಸ್ದಿಂದ

ನ್ಯಾಷ್, ಪಾಲ್ (1889-1946). ಇಂಗ್ಲೆಂಡಿನ ಖ್ಯಾತ ವರ್ಣಚಿತ್ರಗಾರ. ಆ ದೇಶದ ನಿಸರ್ಗ ಸೌಂದರ್ಯವನ್ನು ಯಥಾವತ್ತಾಗಿ ಚಿತ್ರಿಸಿದ ಶ್ರೇಷ್ಠ ನಿಸರ್ಗ ಚಿತ್ರಕಲಾವಿದ. ಹುಟ್ಟಿದ್ದು ಲಂಡನ್ನಿನಲ್ಲಿ. ಸ್ಲೇಡ್ ಸ್ಕೂಲಿನಲ್ಲಿ ಕೆಲಕಾಲ ಓದಿದನಾದರೂ ಈತ ಪಡೆದ ಕಲಾ ಶಿಕ್ಷಣ ಸಮಗ್ರವಾದದ್ದೇನೂ ಅಲ್ಲ. ಕಾಲಕ್ರಮದಲ್ಲಿ ಈತ ತನ್ನ ಸ್ವಂತ ಅನುಭವದಿಂದಲೇ ಕಲಾಪ್ರೌಢಿಮೆಯನ್ನು ಪಡೆದುಕೊಂಡ; ತನ್ನದೇ ಅದ ಕಲಾದೃಷ್ಟಿಯೊಂದನ್ನು ರೂಢಿಸಿಕೊಂಡ. 1914ರಲ್ಲಿ ಈತ ಏರ್ಪಡಿಸಿದ ಕಲಾಪ್ರದರ್ಶನದಲ್ಲಿ ಈತನ ವೈಯುಕ್ತಿಕ ಕಲಾದೃಷ್ಟಿಯನ್ನು ನಿರೂಪಿಸುವ ಸ್ವತಂತ್ರ ಕೃತಿಗಳು ಪ್ರದರ್ಶಿತವಾಗಿದ್ದವು. ಜಲವರ್ಣದಲ್ಲ ರಚಿಸಿದ ಬಕಿಂಗ್ ಹ್ಯಾಮ್‍ಷೈರನ ನಿಸರ್ಗ ಚಿತ್ರ ಹಾಗೂ ಎಲ್ಮ್ ಮರಗಳ ನೈಜ ಚಿತ್ರಗಳನ್ನು ಇಲ್ಲಿ ಹೆಸರಿಸಬೇಕು. ಇವುಗಳಲ್ಲಿ ಎದ್ದು ಕಾಣುವ ಸೊಬಗು ಈತನ ಕಲಾಶೈಲಿಯ ಜೀವಾಳ.

1917ರಲ್ಲಿ ಪಶ್ಚಿಮ ಸರಹದ್ದಿನಲ್ಲಿ ಕಲಾವಿದನಾಗಿ ಸೇವೆ ಸಲ್ಲಿಸುವ ಅವಕಾಶ ಈತನಿಗೆ ಒದಗಿಬಂತು. ಆಗ ಅನೇಕ ನಿಸರ್ಗ ಚಿತ್ರಗಳನ್ನು ರಚಿಸಿದ. ಕೆಲವು ಚಿತ್ರಗಳು ಯುದ್ಧಕ್ಕೆ ಸಂಬಂಧಿಸಿದವು ಅವುಗಳಲ್ಲಿ ಮಹಾಯುದ್ಧದ ಭೀಕರತೆ ನೈಜವಾಗಿ ಮೂಡಿಬಂದಿದೆ. ಒಟ್ಟು ಚಿತ್ರದಲ್ಲಿ ಕಾಣುವ ಲಯ ಹಾಗೂ ಸಂಯಮ ಗಮನಾರ್ಹ. ಉದಾ: ಡಾನ್ ಸ್ಯಾಂಕ್ಚುಯರಿ ವುಡ್ (1918). ಈತ ತನ್ನ ಚಿತ್ರಕೃತಿಗಳಿಗೆ ಕೊಡುವ ಶೀರ್ಷಿಕೆಗಳೂ ಕುತೂಹಲಕಾರಿಯಾಗಿರುತ್ತವೆ. ಅವು ಚಿತ್ರಿತ ದೃಶ್ಯಕ್ಕೆ ಒಂದು ರೀತಿಯ ಭಾವನಾತ್ಮಕ ಪ್ರತಿಕ್ರಿಯೆಯ ರೂಪದಲ್ಲಿರುತ್ತವೆ. ಉದಾ: ವಿ ಆರ್ ಮೇಕಿಂಗ್ ಎ ನ್ಯೂ ವಲ್ರ್ಡ್ (1918). ರಕ್ತ ಕೆಂಪು ಬಣ್ಣದ ಆಕಾಶ ನುಚ್ಚುನೂರಾದ ಮರಗಿಡಗಳೂ ಮುಂತಾದವು ಇಲ್ಲಿ ಗಮನಾರ್ಹ. ದಿ ಮೆನಿನ್ ರೋಡ್ 1918) ಎಂಬ ಕೃತಿಯಲ್ಲಿ ಈತನ ಜೀವನಾನುಭವಗಳು ಸಾರ ಸಂಗ್ರಹವಾಗಿ ಮೂಡಿಬಂದಿವೆ. ಇದನ್ನು ಈಗ ಲಂಡನ್ನಿನ ಇಂಪೀರಿಯಲ್ ಮ್ಯೂಸಿಯಂನಲ್ಲಿಡಲಾಗಿದೆ.

ಮೊದಲನೆಯ ಮಹಾಯುದ್ಧದ ಅನಂತರದ ಕಾಲದಲ್ಲಿ ಆರ್ಥಿಕವಾಗಿ, ಈತನ ಜೀವನ ದುಸ್ತರವಾಗತೊಡಗಿತು. ಬಡತನದ ಬೇಗೆ ತಾಗಿತು. ಇದರಿಂದ ಪಾರಾಗಲೆಂಬಂತೆ ಈಗ ಕೆಂಟ ಕರಾವಳಿ ತೀರಕ್ಕೆ ಹೋದ. ಅಲ್ಲಿಯ ಸ್ಥಳೀಯ ವಾತಾವರಣದೊಂದಿಗೆ ಹೊಂದಿಕೊಂಡ. ಅಲ್ಲಿಯ ವಿಶಾಲವಾದ ಬಯಲಿನ ನಿಸರ್ಗ ಚಿತ್ರಗಳನ್ನು ರಚಿಸಿದ. ಕೆಲವು ಕೃತಿಗಳಲ್ಲಿ ಕಾಣುವ ಕ್ಯೂಬಿಸಂ (ಘನಾಕೃತಿಪಂಥ) ಪ್ರಭಾವ ಗಮನಾರ್ಹ. ಡಂಜನೆಸ್ ಮತ್ತು ಡೈಮ್ ಚರ್ಚ್ ಎಂಬ ಎರಡು ಚಿತ್ರಗಳನ್ನು ಇಲ್ಲಿ ಹೆಸರಿಸಬಹುದು. ಲಯಬದ್ಧವಾದ ಈ ಚಿತ್ರರಚನೆಯಲ್ಲಿ ಕಾಣುವ ಸೊಬಗು ನಿಜಕ್ಕೂ ಅಕರ್ಷಕ.

1930ರ ಸುಮಾರಿಗೆ ಈತ ಆ್ಯವ್‍ಬರಿಯಲ್ಲಿ ಅನೇಕ ಬೃಹತ್ ಶಿಲಾಸಮಾಧಿಗಳನ್ನು ನೋಡಿ ಸ್ಪೂರ್ತಿಗೊಂಡು ಅವುಗಳಿಗೆ ಸಂಬಂಧಿಸಿದಂತೆ ಅನೇಕ ಚಿತ್ರಗಳನ್ನು ರಚಿಸಿದ. ಸರ್ಕಲ್ ಆಫ್ ದಿ ಮಾನೊಲಿಕ್ಸ್ (1938), ಲ್ಯಾಂಡ್‍ಸ್ಕೇಪ್ ಆಫ್ ದಿ ಮೆಗಾಲಿಕ್ಸ್ (1937) ಮುಂತಾದ ಕೃತಿಗಳನ್ನು ಇಲ್ಲಿ ಹೆಸರಿಸಬಹುದು. ಈ ಕೆಲವು ಕೃತಿಗಳಲ್ಲಿನ ಸರ್‍ರಿಯಲಿಸಂ ಪ್ರಭಾವವೂ ಗಣನೀಯವಾಗಿದೆ.

ಎರಡನೆಯ ಮಹಾಯುದ್ಧ ಆರಂಭವಾದಾಗ (1939) ಈತ ಮvಸಸÉ್ತ ಯುದ್ಧ ಕಾಲೀನ ಕಲಾವಿದನಾಗಿ ನೇಮಕಕೊಂಡ. ಜರ್ಮನ್ ಬಾಂಬರುಗಳನ್ನು ಸೋತು ಸಾಯುತ್ತಿರುವ ಡೇಗನ್‍ನಂತೆ ಚಿತ್ರಿಸಿರುವುದು ಅರ್ಥವತ್ತಾಗಿದೆ. ಟೋಟ್ಸ್‍ಮೀರ್ ಎಂಬುದು ಎಂದು ಸಮಗ್ರ ಕೃತಿಯಾಗಿದ್ದು ಅದನ್ನು ಈಗ ಟೇಟ್ ಗ್ಯಾಲರಿಯಲ್ಲಡಲಾಗಿದೆ. ಈತ ಆರಿಸಿಕೊಂಡ ವಸ್ತುನಿರೂಪಣಾಕ್ರಮದ ಬಗ್ಗೆ ಟೀಕೆ ಟಿಪ್ಪಣಿಗಳು ಬಂದದ್ದುಂಟು. ಅದೇನಿದ್ದರೂ ನಿಸರ್ಗ ಚಿತ್ರಣದಲ್ಲಿ ಈತನದು ರೊಮ್ಯಾಂಟಿಕ್ ದೃಷ್ಟಿಯೆಂಬುದು ಮುಖ್ಯ. ಕವಿ ವಿಲಿಯಂ ಬ್ಲೇಕ್‍ನಿಂದಲೂ ಈತ ಪ್ರಭಾವಿತನಾಗಿದ್ದ. ಸೊಲ್‍ಸ್ಟಿಸ್ ಆಫ್ ದಿ ಸನ್ ಫ್ಲವರ್ (1945). ಮುಂತಾದ ಕೃತಿಗಳಲ್ಲಿ ಈ ಗುಣ ಕಂಡುಬರುತ್ತದೆ. ಸನ್ ಫ್ಲವರ್ ಅಂಡ್ ದಿ ಸನ್ (1943). ಈತನ ಕಲಾಪ್ರತಿಭೆಯೆಲ್ಲ ದಟ್ಟವಾಗಿ ಮೂತೀರ್ಭವಿಸಿದೆ. ನಿಸರ್ಗಚಿತ್ರಣದಲ್ಲಿ ವೃಕ್ಷಗಳಿಂದ ಆಚ್ಛಾದಿತವಾದ ಗುಡ್ಡಗಳನ್ನು ಯಥಾವತ್ತಾಗಿ ಈತ ರಚಿಸಿದ್ದಾನೆ. ಭಾವಸಾಂದ್ರತೆ, ವರ್ಣವೈವಿಧ್ಯ, ಆಕರ್ಷಕ ವಿನ್ಯಾಸ-ಇವುಗಳ ದೃಷ್ಟಿಯಿಂದ ಈತನ ಕೃತಿಗಳು ಅಗ್ರಗಣ್ಯ ಸ್ಥಾನ ಪಡೆದಿವೆ. ಅಂತೆಯೇ ಇವು ಇಂಗ್ಲೆಂಡಿನ ನಿಸರ್ಗಚಿತ್ರಕಲಾಕ್ಷೇತ್ರಕ್ಕೆ ನೀಡಿದ ಪ್ರಧಾನ ಕಾಣಿಕೆಗಳಾಗಿವೆ. ಈತನ ಜೀವನ ಚರಿತ್ರೆ ಔಟ್‍ಲೈನ್ಸ್ 1949ರಲ್ಲಿ ಮರಣ ನಂತರ ಪ್ರಕಟವಾಯಿತು. (ಎಚ್.ಆರ್.ಆರ್.ಬಿ.)