ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಿಕ್ಯೀಟ್ಯಿನ್, ಆಥನೇಷಿಯಸ್

ವಿಕಿಸೋರ್ಸ್ದಿಂದ

ನ್ಯಿಕ್ಯೀಟ್ಯಿನ್, ಆಥನೇಷಿಯಸ್ - ಭಾರತಕ್ಕೆ ಆಗಮಿಸಿದ್ದ ರಷ್ಯನ್ ಪ್ರವಾಸಿಗಳಲ್ಲಿ ಪ್ರಮುಖ. ತೈತಿರ್ ಎಂಬ ಊರಿನವನು. ಮೂರನೆಯ ಐವಾನ್ ರಷ್ಯವನ್ನಾಳುತ್ತಿದ್ದಾಗ ಸುಮಾರು 1470ರಲ್ಲಿ, ವ್ಯಾಪಾರೋದ್ದೇಶದಿಂದ ಭಾರತಕ್ಕೆ ಬಂದ.

ಈತ ಭಾರತದಲ್ಲಿದ್ದ ಕಾಲದಲ್ಲಿ ಅನೇಕ ನಗರಗಳಲ್ಲಿ ತಂಗಿದ್ದು ಅಲ್ಲಿಯ ಜನಜೀವನವನ್ನು ತನ್ನ ಪ್ರವಾಸಕಥನದಲ್ಲಿ ವರ್ಣಿಸಿದ್ದಾನೆ. ಭಾರತದ ದಖನ್ ರಾಜ್ಯಗಳ ಮತ್ತು ಗೋಲ್ಕೊಂಡದ ವಿಚಾರವನ್ನು ಬರೆದಿದ್ದಾನೆ. ಈತ 1468ರಲ್ಲಿ ತನ್ನ ಊರಿನಿಂದ ಹೊರಟು ವೋಲ್ಗ ನದಿಯ ಮೇಲೆ ಪ್ರಯಾಣ ಮಾಡಿ ಬೊಖಾರಕ್ಕೆ ಬಂದ. ಅಲ್ಲಿ 6 ತಿಂಗಳ ಕಾಲ ಇದ್ದು ಅನಂತರ ಅಲ್ಲಿಂದ ಪ್ರಯಾಣ ಬೆಳೆಸಿ ಹೋರ್‍ಮಜ್ó ಪಟ್ಟಣ ತಲಪಿದ. ಅಂದಿನ ಹೋರ್‍ಮಜ್ó ಪಟ್ಟಣವನ್ನು ಒಂದು ಪ್ರಮುಖ ವ್ಯಾಪಾರ ಕೇಂದ್ರವೆಂದು ನ್ಯಿಕ್ಯೀಟ್ಯಿನ್ ತಿಳಿಸಿದ್ದಾನೆ. ಅಲ್ಲಿ ಒಂದು ತಿಂಗಳ ಕಾಲ ಇದ್ದಮೇಲೆ 10 ದಿವಸಗಳ ಕಾಲ ಇಂಡಿಯ ಸಮುದ್ರದ ಮೇಲೆ ಪ್ರಯಾಣಮಾಡಿ ಅರೇಬಿಯ ಪರ್ಯಾಯ ದ್ವೀಪದ ಆಗ್ನೇಯದಲ್ಲಿರುವ ಮಸ್ಸಾಟ್‍ಗೆ ಆಗಮಿಸಿದ. ಅಲ್ಲಿಂದ ಹೊರಟು ಗುಜರಾತ್ ಮತ್ತು ಕ್ಯಾಂಬೆಯಲ್ಲಿ ಸಂಚರಿಸಿ ಚಿವಿಲ್ (ಚೆಲ್) (ದಕ್ಷಿಣ ಮುಂಬಯಿ) ಎಂಬಲ್ಲಿಗೆ ಬಂದ. ಅನಂತರ ಹಲವು ಸ್ಥಳಗಳನ್ನು ಸಂದರ್ಶಿಸಿ ಕೊನೆಗೆ ಬೀದರ್‍ಗೆ ಬಂದ. ಆ ರಾಜ್ಯ ಜನಭರಿತವಾಗಿಯೂ ಅಲ್ಲಿಯ ಮಾರ್ಗಗಳು ಸುರಕ್ಷಿತವಾಗಿಯೂ ಇದ್ದುವೆಂದೂ ರಾಜಧಾನಿ ಶೋಭಾಯಮಾನವಾಗಿ, ಉದ್ಯಾನಗಳಿಂದ ಮತ್ತು ವಿಹಾರಪಥಗಳಿಂದ ಕೂಡಿತ್ತೆಂದೂ ಇವನು ವರ್ಣಿಸಿದ್ದಾನೆ. ನ್ಯಿಕ್ಯೀಟ್ಯಿನ್ ಇನ್ನೂ ಅನೇಕ ಸ್ಥಳಗಳನ್ನು ಸಂದರ್ಶಿಸಿದ. ಕೊನೆಯದಾಗಿ ವಿಜಯನಗರದ ಬಗ್ಗೆಯೂ ಕೆಲವು ವಿವರಗಳನ್ನು ನೀಡಿದ್ದಾನೆ.

ರಷ್ಯಕ್ಕೆ ಹಿಂದಿರುಗುವ ಮಾರ್ಗದಲ್ಲಿ ಇವನು ಇಥಿಯೋಪಿಯಲ್ಲಿ 5 ದಿವಸಗಳ ಕಾಲ ತಂಗಿದ್ದು ಇನ್ನೂ ಹಲವು ಸ್ಥಳಗಳನ್ನು ಸಂದರ್ಶಿಸಿ ಕಪ್ಪು ಸಮುದ್ರದ ಬಳಿಗೆ ಬಂದು ಹಡಗು ಹತ್ತಿ ಕಪ್ಫ್ಪಾವನ್ನು ತಲುಪಿದನೆಂದು ಇವನ ಬರೆವಣಿಗೆಯಿಂದ ಗೊತ್ತಾಗುತ್ತದೆ. (ಟಿ.ವಿ.ಜಿ.ಯು.)