ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಜರ್ಸೀ

ವಿಕಿಸೋರ್ಸ್ದಿಂದ

ನ್ಯೂಜರ್ಸೀ - ಅಮೆರಿಕ ಸಂಯುಕ್ತ ಸಂಸ್ಥಾನಗಳ ಪೂರ್ವತೀರದ ಒಂದು ರಾಜ್ಯ. ಉತ್ತರದಲ್ಲಿ ನ್ಯೂಯಾರ್ಕ್, ಪಶ್ಚಿಮದಲ್ಲಿ ಪೆನ್ಸಿಲ್ವೇನಿಯ, ನೈಋತ್ಯದಲ್ಲಿ ಡೆಲವೇರ್ ಕೊಲ್ಲಿ, ಮತ್ತು ಡೆಲವೇರ್ ರಾಜ್ಯ. ದಕ್ಷಿಣದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ಡೆಲವೇರ್ ಕೊಲ್ಲಿ, ಪೂರ್ವದಲ್ಲಿ ನ್ಯೂ ಯಾರ್ಕ್ ಮತ್ತು ಅಟ್ಲಾಂಟಿಕ್ ಸಾಗರ ಇವೆ. 209ಕಿ.ಮೀ ತೀರ ಪ್ರದೇಶವಿರುವ ಇದರ ಒಟ್ಟು ವಿಸ್ತೀರ್ಣ 20,175 ಚ.ಕಿ.ಮೀ. ಜನಸಂಖ್ಯೆ 77,48,634 (1990).

ಭೌತಲಕ್ಷಣ: ನ್ಯೂಜರ್ಸಿಯನ್ನು ನಾಲ್ಕು ಸ್ವಾಭಾವಿಕ ವಿಭಾಗಗಳಾಗಿ ವಿಂಗಡಿಸಬಹುದು. 1 ವಾಯುವ್ಯದ ಅಪಲೇಚಿಯನ್ ಪರ್ವತ ಪ್ರದೇಶ: ರಾಜ್ಯದ ಅತ್ಯಂತ ಎತ್ತರವಾದ ಹೈಪಾಯಿಂಟ್ (550 ಮೀ), ನ್ಯೂ ಯಾರ್ಕ್ ಗಡಿಯ ಬಳಿ ಇದೆ. 2 ನ್ಯೂ ಇಂಗ್ಲೆಂಡ್ ಪ್ರಸ್ಥಭೂಮಿ: ಅಪಲೇಚಿಯನ್ ಪರ್ವತ ಪ್ರದೇಶದ ಕೆಳಗಡೆಗೆ ಇದೆ. 3 ಪೀಡ್ ಮಾಂಟ್ ಪ್ರದೇಶ: ನ್ಯೂ ಇಂಗ್ಲೆಂಡ್ ಪ್ರಸ್ಥಭೂಮಿಗೆ ಆಗ್ನೇಯದಲ್ಲಿರುವ ಈ ಪ್ರದೇಶದ ರಾಜ್ಯದಲ್ಲಿ ಅಡ್ಡಲಾಗಿ ವ್ಯಾಪಿಸಿದೆ. ಇದು ಸಮತಲ ನೆಲ. 4 ಅಟ್ಲಾಂಟಿಕ್ ಸಾಗರದ ಆಂಚಿನ ಬಯಲು: ಹಳ್ಳತಿಟ್ಟಿನ ಭಾಗ. ಸಮುದ್ರದ ಕಡೆಗೆ ಈ ಮೈದಾನ ಪ್ರದೇಶದ ಉದ್ದಕ್ಕೂ ಚವುಳಮಣ್ಣಿನ ಜವುಗುನೆಲವೂ ಮರುಳು ಸುತ್ತುಗಟ್ಟಿರುವ ಲಗೂನುಗಳೂ ಇವೆ. ಸಮುದ್ರದ ಅಂಚಿನಲ್ಲಿ ದ್ವೀಪಗಳಿವೆ.

ಹಡ್ಸನ್ ಮತ್ತು ಡೆಲಗೇರ್ ಈ ರಾಜ್ಯದ ಪ್ರಮುಖ ನದಿಗಳು ಹಡ್ಸನ್ ನದಿ ಈ ರಾಜ್ಯವನ್ನು ನ್ಯೂ ಯಾರ್ಕ್‍ನಿಂದ ಪ್ರತ್ಯೇಕಿಸುತ್ತದೆ. ಡೆಲವೇರ್ ನದಿ ಈ ರಾಜ್ಯದ ಪಶ್ಚಿಮ ಗಡಿಯಾಗಿ ಹರಿಯುತ್ತದೆ. ರಾಜ್ಯದಲ್ಲೇ ಹುಟ್ಟಿ ಹರಿಯುವ ನದಿ ರೇರಿಟನ್ ಇದು 120 ಕಿ ಮೀ. ಹರಿದು ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಇತರ ಮುಖ್ಯ ನದಿಗಳು ಪಸೇಯಿಕ್ ಮತ್ತು ಹ್ಯಾಕೆನ್ಸ್ಯಾಕ್. ರಾಜ್ಯದ ಪ್ರಸ್ಥಭೂಮಿ ಪ್ರದೇಶದಲ್ಲಿ, ಹೆಚ್ಚಾಗಿ ವಾಯುವ್ಯಭಾಗದಲ್ಲಿ, ನೂರಾರು ಸರೋವರಗಳಿವೆ. ಅವುಗಳಲ್ಲಿ ಹಪಾಟ್‍ಕಾಂಗ್ ಅತ್ಯಂತ ದೊಡ್ಡದು.

ವಾಯುಗುಣ: ರಾಜ್ಯದ ವಾಯುಗುಣ ಸೌಮ್ಯವಾದ್ದು. ವಾಯುವ್ಯ ಹಾಗೂ ಆಗ್ನೇಯಭಾಗಗಳ ನಡುವೆ ಉಷ್ಣತೆಯಲ್ಲಿ ತೀವ್ರ ವ್ಯತ್ಯಾಸಗಳಿವೆ. ಉತ್ತರದಲ್ಲಿ ವಾರ್ಷಿಕ ಸರಾಸರಿ ಉಷ್ಣತೆ 100ಅ ಚಳಿಗಾಲದಲ್ಲಿ 200ಅ) ದಕ್ಷಿಣದಲ್ಲಿ ವಾರ್ಷಿಕ ಸರಾಸರಿ 130ಅ (ಚಳಿಗಾಲದಲ್ಲಿ 200ಅ, ಬೇಸುಗೆಯಲ್ಲಿ 220ಅ ವಾರ್ಷಿಕ ಸರಾಸರಿ ಮಳೆ ಉತ್ತರ ಜರ್ಸಿಯಲ್ಲಿ 1.270 ಅ ಮಿಮೀ ದಕ್ಷಿಣಜರ್ಸಿಯಲ್ಲಿ 914ಮಿಮೀ.

ಸಸ್ಯಪ್ರಾಣಿವರ್ಗ: ನ್ಯೂ ಜರ್ಸಿಯ ಅರ್ಧಭಾಗ ಅರಣ್ಯ. ಇಲ್ಲಿ ಸುಮಾರು 22,30,000ಎಕರೆ ಗಟ್ಟಿಮರಗಳ ಅರಣ್ಯಗಳಿವೆ. ಅರಣ್ಯ ವೃಕ್ಷಗಳಲ್ಲಿ ಪ್ರಮುಖವಾದವು ಓಕ್. ಪೈನ್, ಮೇಪೆಲ್, ಸಿಡಾರ್, ಬೀಚ್, ಹೆಮ್‍ಲಾಕ್ ಮತ್ತು ಪಾಪ್ಲರ್. ಉತ್ತರದ ಅರಣ್ಯಗಳಲ್ಲಿ ಒಕ್ ಮತ್ತು ಬೀಚ್ ಮರಗಳು ಹೆಚ್ಚು. ದಕ್ಷಿಣದಲ್ಲಿ ಪೈನ್ ಮತ್ತು ಸಿಡಾರ್ ಹೆಚ್ಚಾಗಿವೆ. ಜಿಂಕೆ, ನರಿ, ಮಿಂಕ್ಸ್, ಪುನುಗು ಇಲಿ, ಒಪಾಸಂ, ಆಟರ್, ರಾಕೂನ್, ಮೊಲ, ಸ್ಕಂಕ್ ಮತ್ತು ಬಗೆ ಬಗೆಯ ಹಾವುಗಳು ಇವೆ. ಅಟ್ಲಾಂಟಿಕ್ ಕರಾವಳಿಯ ಜವುಗು ಭಾಗಗಳಲ್ಲಿ ನೀರು ಬಾತುಗಳಿವೆ. ಬಯಲುಗಳಲ್ಲಿ ಜೀವಂಜೀವ, ಕೋಗಿಲೆ, ಗೌಸ್ ಮತ್ತು ಟರ್ಕಿಕೋಳಿಗಳು ಇವೆ. ಸಮುದ್ರದಲ್ಲಿ ಹಲವು ಬಗೆಯ ಮೀನುಗಳು ಇವೆ. ಡೆಲವೇರ್ ನದಿ ಪ್ರದೇಶಕ್ಕೆ ಅನೇಕ ಪಕ್ಷಿಗಳು ನಿಯತ ಕಾಲಗಳಲ್ಲಿ ವಲಸೆ ಬರುತ್ತವೆ.

ರಾಜ್ಯದ ದೊಡ್ಡ ನಗರಗಳು ಜರ್ಸೀ ಸಿಟಿ, ಫಿಲಡೆಲ್ಫಿಯ, ಟ್ರನ್‍ಟನ್, ನ್ಯೂ ವಾರ್ಕ್, ಪ್ಯಾಟರ್ಸನ್, ಕ್ಯಾಮ್‍ಡನ್ ಮತ್ತು ಎಲಿಜûಬೆತ್.

ಇತಿಹಾಸ. ಐರೋಪ್ಯರು ಇಲ್ಲಿಗೆ ಬರುವುದಕ್ಕೆ ಮುಂಚೆ ಡೆಲವೇರ್ ಇಂಡಿಯನರು ಇಲ್ಲಿದ್ದರು. ಮೊದಲ ಬಂದ ಐರೋಪ್ಯ ಗಿಯೋವನ್ನಿದ ವೆರ್ರ ಜಾನೊ. ಫ್ಲಾರೆನ್ಸ್ ನಗರದ ಈ ನಾವಿಕ ಫಾನ್ಸ್ ದೇಶದ ರಾಜನ ಸೇವೆಯಲ್ಲಿದ್ದು 1524ರಲ್ಲಿ ತನ್ನ ಹಡಗನ್ನು ಸ್ಯಾಂಡಿ ಹೂಕ್ ತೀರಕ್ಕೆ ತಂದ. ಆಗ ಇವನು ನ್ಯೂ ಯಾರ್ಕ್ ಕೊಲ್ಲಿಯ ಉತ್ತರಭಾಗ ಹಾಗೂ ನ್ಯೂ ಜರ್ಸಿಯ ತೀರಭಾಗಗಳನ್ನು ಪರಿಶೋಧಿಸಿದನೆಂದು ತೋರುತ್ತದೆ. ತರುವಾಯ 100 ವರ್ಷಗಳ ವರೆಗೆ ಯೂರೋಪಿನವರು ಯಾರೂ ಇಲ್ಲಿಗೆ ಬಂದು ನೆಲಸಲಿಲ್ಲ. 1625ರಲ್ಲಿ ಡಚ್ಚರು ನ್ಯೂ ಆಮ್‍ಸ್ಟರ್ ಡ್ಯಾಮ್ ನಗರವನ್ನು ಮ್ಯಾನ್‍ಹಾಟನ್ ದ್ವೀಪದಲ್ಲಿ ಸ್ಥಾಪಿಸುವುದಕ್ಕೆ ಮುಂಚೆಯೇ, 1618ರಲ್ಲಿ, ಬರ್ಜೆನ್ ನಗರ ಸ್ಥಾಪಿತವಾಗಿತ್ತು. 1638ರಲ್ಲಿ ಡೆಲವೇರ್ ನದಿಯ ತಟದಲ್ಲಿ ನ್ಯೂ ಸ್ವೀಡನ್ ನಗರದ ಸ್ಥಾಪನೆಯಾಯಿತು. ತರುವಾಯ ಡಚ್ ಹಾಗೂ ಸ್ವೀಡನ್ ದೇಶದವರ ವಸಾಹತುಗಳ ನಡುವೆ ನ್ಯೂ ಜರ್ಸೀಪ್ರದೇಶ ಯಾರಿಗೂ ಸೇರದ ಭಾಗವಾಗಿತ್ತು. 1655ರಲ್ಲಿ ಡಚ್ ಗವರ್ನರ್ ಪೀಟರ್ ಸ್ಪೀವಿಸಂಟ್ ಇತರ ದೇಶಗಳವರ ನೆಲೆಗಳನ್ನು ವಶಪಡಿಸಿಕೊಂಡು ತನ್ನ ಅಧಿಕಾರವನ್ನು ಡೆಲವೇರ್ ನದಿಯವರೆಗೂ ವಿಸ್ತರಿಸಿದ. ಇಂಗ್ಲಿಷರು 1664ರಲ್ಲಿ ಡಚ್ಚರಿಗೆ ಸೇರಿದ ಹಡ್ಸನ್ ನದಿ ಮತ್ತು ಡೆಲವೇರ್ ನದಿಯ ಕೆಳಭಾಗದ ನಡುವಣ ನ್ಯೂ ನೆದರ್ಲೆಂಡ್ಸ್ ವಸಾಹತುವನ್ನು ಗೆದ್ದುಕೊಳ್ಳುವವರೆಗೆ ಅವನ ಅಧಿಕಾರ ಪ್ರಬಲವಾಗಿತ್ತು. ಸ್ವೀಡನ್ನಿನ ಜನ ಡೆಲವೇರ್ ನದಿಯ ಪಶ್ಚಿಮ ದಂಡೆಯ ಮೇಲೆ ವಸಾಹತುಗಳನ್ನು ಕಟ್ಟಿಕೊಂಡಿದ್ದರು. ನ್ಯೂ ಜರ್ಸೀ ಭಾಗದಲ್ಲಿ ಮೊಟ್ಟಮೊದಲು ನೆಲೆ ನಿಂತವರು ಸ್ವೀಡರು ಮತ್ತು ಫಿನ್‍ಲೆಂಡ್ ದೇಶದವರು. ಅವರು ಸ್ವೀಡನ್ ಬರೊ ಮತ್ತು ಮುಲ್ಲಿಕ ಪಟ್ಟಣಗಳನ್ನು ಸ್ಥಾಪಿಸಿದರು. ಇಂಗ್ಲಿಷರ ಆಕ್ರಮಣದ ತರುವಾಯ ಹಿಂದೆ ಡಚ್ಚರಿಗೆ ಸೇರಿದ್ದ ಭಾಗಗಳನ್ನು ಇಂಗ್ಲೆಂಡಿನ ರಾಜಮನೆತನದ ಡ್ಯೂಕ್ ಆಫ್ ಯಾರ್ಕ್ ಪ್ರಭುವಿಗೆ ನೀಡಲಾಗಿದ್ದು, ಆತ ಈ ಪ್ರದೇಶದ ಸ್ವಲ್ಪ ಭಾಗವನ್ನು ಬಕ್ರ್ಲಿ ಮತ್ತು ಜಾರ್ಜ್ ಕಾರ್ಪೆರೆಟರಿಗೆ ವಹಿಸಿದ. ಈ ಪ್ರದೇಶದ ಗಡಿಗಳು ಪೂರ್ವಭಾಗದಲ್ಲಿ ಹಡ್ಸನ್ ನದಿ ಮತ್ತು ಅಟ್ಲಾಂಟಿಕ್ ಸಾಗರ, ದಕ್ಷಿಣದಲ್ಲಿ ಕೇಪ್ ಮೇ ವರೆಗೆ ಅಟ್ಲಾಂಟಿಕ್ ಸಾಗರ, ಪಶ್ಚಿಮದಲ್ಲಿ ಡೆಲವೇರ್ ಕೊಲ್ಲಿ ಮತ್ತು ಡೆಲ್ವೇರ್ ನದಿ ಮತ್ತು ಉತ್ತರದಲ್ಲಿ ಡೆಲವೇರ್ ನದಿಗೂ ಹಡ್‍ಸನ್ ನದಿಗೂ ನಡುವೆ ಗೆರೆ ಎಳೆದಂತಿರುವ ಭಾಗ. ಡ್ಯೂಕ್ ಆಫ್ ಯಾರ್ಕ್ ಈ ಭಾಗವನ್ನು ತನ್ನ ಅಪ್ತರಿಬ್ಬರಿಗೆ ಕೊಟ್ಟಾಗ ಇದಕ್ಕೆ ನ್ಯೂ ಸೀಜûರಿಯ ಅಥವಾ ನ್ಯೂ ಜರ್ಸೀ ಎಂಬ ಹೆಸರನ್ನು ನೀಡಿದ. 1674ರಲ್ಲಿ ಬಕ್ರ್ಲಿ ಪಶ್ಚಿಮ ಭಾಗದ ಭೂಮಿಯ ಮೇಲಣ ತನ್ನ ಮಾಲೀಕತ್ವದ ಹಕ್ಕನ್ನು ಜಾನ್ ಫೆನ್‍ವಿಕನಿಗೆ ವರ್ಗಾಯಿಸಿದ. ಎರಡು ವರ್ಷಗಳ ತರುವಾಯ ಇದು ಕ್ವೇಕರ್ ಕ್ರೈಸ್ತನಾಯಕ ವಿಲಿಯಂ ಪೆನ್ನನಿಗೆ ಸೇರಿತು.

ಸ್ವಲ್ಪ ಕಾಲ ನ್ಯೂ ಜರ್ಸೀ ಪ್ರದೇಶ ಪೂರ್ವ ಜರ್ಸೀ ಮತ್ತು ಪಶ್ಚಿಮ ಜರ್ಸೀ ಎಂದು ವಿಭಾಗವಾಗಿತ್ತು. 1682ರಲ್ಲಿ ಇವೆರಡೂ ಮತ್ತೆ ಸಂಘಟಿತವಾದವು. ಅಷ್ಟು ಹೊತ್ತಿಗೆ ವಿಲಿಯಂ ಪೆನ್ ಮತ್ತು ಅವನ ಜೊತೆಗಾರರು ನ್ಯೂ ಜರ್ಸೀಯ ಪಶ್ಚಿಮ ಭಾಗವನ್ನು ಕಾರ್ಟೆರೆಟ್‍ನಿಂದ ಕೊಂಡುಕೊಂಡಿದ್ದರು. ಸ್ಥಳೀಯ ಇಂಡಿಯನ್ ಬಣಗಳ ದಾಳಿಗಳಿಗೆ ಒಳಗಾಗಿದ್ದ ನ್ಯೂ ಜರ್ಸಿಯ ಮಾಲೀಕರು 1702ರಲ್ಲಿ ಇದನ್ನು ಬ್ರಿಟಿಷ್ ಸರ್ಕಾರಕ್ಕೆ ಒಪ್ಪಿಸಿದರು. ಇದು ಬ್ರಿಟಿಷ್ ವಸಾಹತು ಆಯಿತು.

ಇದು ಪ್ರತ್ಯೇಕ ವಸಾಹತಾಗಿದ್ದರೂ ಇದರ ಆಡಳಿತವನ್ನು 1783ರ ವರೆಗೆ ನ್ಯೂ ಯಾರ್ಕಿನ ಗವರ್ನರ್ ವಹಿಸಿಕೊಂಡಿದ್ದ.

ಬ್ರಿಟಿಷ್ ಅಡಳಿತದಿಂದ ವಿಮೋಚನೆ ಹೊಂದಲು ಅಮೆರಿಕ ನಡೆಸಿದ ಯುದ್ದದಲ್ಲಿ ನ್ಯೂ ಜರ್ಸೀ ಪ್ರಧಾನ ಪಾತ್ರ ವಹಿಸಿತ್ತು. 1774 ರಲ್ಲಿ ನ್ಯೂ ಜರ್ಸೀ ವಸಾಹತು ಸಭೆ ಯುದ್ಧಸಂಬಂಧವಾಗಿ ಸ್ಥಳೀಯ ಸಮಿತಿಗಳನ್ನು ರಚಿಸಿತು. ಅದೇ ವರ್ಷ ಪ್ರಥಮ ಪ್ರಾಂತೀಯ ಕಾಂಗ್ರೆಸ್ ಸಭೆ ಸೇರಿ ಕೇಂದ್ರ ಕಾಂಗ್ರೆಸ್ ಸಭೆಗೆ ತನ್ನ ಪ್ರತಿನಿಧಿಗಳನ್ನು ಆಯ್ಕೆಮಾಡಿತು. ಬ್ರಿಟಿಷ್ ದೊರೆಯ ಪ್ರಭುತ್ವ ಅಮೆರಿಕದಲ್ಲಿ ಮುಕ್ತಾಯವಾಯಿತೆಂದು ಪ್ರಾಂತೀಯ ಸಭೆ 1776 ರಲ್ಲಿ ಘೋಷಿಸಿತು. 1776 ರಜುಲೈ 2ರಂದು ರಾಜ್ಯದ ಸಂವಿಧಾನ ರಚಿತವಾಗಿ. ಆ ಪ್ರದೇಶದ ಮಾಲೀಕರಿಗೆ 1664ರಲ್ಲೀ ನೀಡಿದ್ದ ರಿಯಾಯಿತಿಗಳನ್ನು ಮತ್ತು ಅವರೊಡನೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ರದ್ದುಮಾಡಿತು. ಸ್ವಾತಂತ್ರ್ಯ ಯುದ್ಧದ ಕಾಲದಲ್ಲಿ ಈ ಪ್ರದೇಶ ಅಪಾರ ನಷ್ಟ ಅನುಭವಿಸಿತು. ಸೈನ್ಯದ ನಾಯಕನಾಗಿ ಜಾರ್ಜ್ ವಾಷಿಂಗ್‍ಟನ್ ಬಹುಕಾಲ ಇಲ್ಲಿಯೇ ಇದ್ದ. ಯುದ್ದ ಕಾಲದಲ್ಲಿ ಟ್ರೆಂಟನ್. ಪ್ರಿನ್ಸ್‍ಟನ್ ಮತ್ತು ಮಾನ್‍ಮತ್‍ಗಳಲ್ಲಿ ಘೋರ ಸಮರಗಳಾದವು. ಅಲ್ಲಲ್ಲಿ ಒಟ್ಟು 90 ಘರ್ಷಣೆಗಳು ನಡೆದುವು.

1787ರ ಫಿಲಡೆಲ್ಛಿಯದ ಸಂವಿಧಾನ ಸಭೆಯಲ್ಲಿ ನ್ಯೂ ಜರ್ಸೀ ರಾಜ್ಯ ವರ್ಜಿನಿಯ ಯೋಜನೆಯ ವಿರುದ್ಧ ಸಣ್ಣ ರಾಜ್ಯಗಳ ಪ್ರಾತಿನಿಧ್ಯ ವಹಿಸಿತು. ಇದರ ಫಲವಾಗಿ ಕೇಂದ್ರದ ಸೆನೆಟ್ ಸಭೆಯಲ್ಲಿ ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯ ಇರಬೇಕೆಂಬ ನಿರ್ಣಯ ಅಂಗೀಕೃತವಾಯಿತು. ಅಮೆರಿಕ ಒಕ್ಕೂಟ ಸಂವಿಧಾನವನ್ನು ಅಂಗೀಕರಿಸಿದ ರಾಜ್ಯಗಳಲ್ಲಿ ನ್ಯೂ ಜರ್ಸೀ ಮೂರನೆಯದು (1787ರ ಡಿಸೆಂಬರ್ 18). 1790 ರಲ್ಲಿ ನ್ಯೂ ಜರ್ಸಿಗೆ ಟ್ರೆಂಟನ್ ರಾಜಧಾನಿಯಾಯಿತು.

ಅಮೆರಿಕನ್ ಅಂತರ್ಯುದ್ಧದ ಕಾಲದಲ್ಲಿ (1861-65) ನ್ಯೂ ಜರ್ಸಿ ರಾಜ್ಯ ಏಬ್ರಹಾಂ ಲಿಂಕನನ ಕಾರ್ಯನೀತಿಗೆ ವಿರೋಧ ಪ್ರಕಟಿಸಿತು. ಆದಾಗ್ಯೂ ಒಕ್ಕೂಟ ಸೈನ್ಯದ ನೆರವಿಗೆ ಈ ರಾಜ್ಯ 88,000 ಯೋಧರನ್ನು ಕಳುಹಿಸಿತು. 1844ರ ಸಂವಿಧಾನದ ಬದಲು 1947 ರಲ್ಲಿ ಹೊಸ ಸಂವಿಧಾನ ಜಾರಿಗೆ ಬಂತು.

ಸಂವಿಧಾನ ಮತ್ತು ಸರ್ಕಾರ : ರಾಜ್ಯದಲ್ಲಿ ದ್ವಿಸದನ ವಿಧಾನ ಮಂಡಲವಿದೆ. 4 ವರ್ಷಗಳ ಅವಧಿಗೆ ಚುನಾಯಿತರಾಗುವ ಸೆನೆಟಿನ ಸದಸ್ಯರು 40 ಮಂದಿ ; ಅಸೆಂಬ್ಲಿಯ ಸದಸ್ಯರ ಸಂಖ್ಯೆ 80. ಇವರ ಅಧಿಕಾರಾವಧಿ 2 ವರ್ಷ. ಗವರ್ನರನ ಅಧಿಕಾರಾವಧಿ 4 ವರ್ಷ. ಅಮೆರಿಕನ್ ಕಾಂಗ್ರೆಸ್‍ನ ಸೆನೆಟ್‍ನಲ್ಲಿ ರಾಜ್ಯದ 2 ಸದಸ್ಯರೂ ಪ್ರತಿನಿಧಿ ಸಭೆಯಲ್ಲಿ 15 ಸದಸ್ಯರೂ ಇರುತ್ತಾರೆ.

ಆಡಳಿತಕ್ಕಾಗಿ ರಾಜ್ಯವನ್ನು 21 ಕೌಂಟಿಗಳಾಗಿ ವಿಭಾಗ ಮಾಡಲಾಗಿದೆ. ರಾಜ್ಯದಲ್ಲಿ 567 ಪೌರಸಭೆಗಳಿವೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶ ಮತ್ತು 6 ಮಂದಿ ನ್ಯಾಯಾಧೀಶರಿರುತ್ತಾರೆ. ಇವರ ನೇಮಕವನ್ನು ಸೆನೆಟ್ ಸಭೆಯ ಅನುಮೋದನೆಗೆ ಒಳಪಟ್ಟು ಗವರ್ನರ್ ಮಾಡುತ್ತಾನೆ.

ಶಿಕ್ಷಣ : ಪ್ರಾಥಮಿಕ ಶಿಕ್ಷಣ 7ರಿಂದ 16 ವರ್ಷಗಳ ವರೆಗಿನ ಮಕ್ಕಳಿಗೆ ಕಡ್ಡಾಯಹಾಗೂ ಉಚಿತ. ರಾಜ್ಯದಲ್ಲಿ 2.40.891 (1972) ಉನ್ನತ ಸೆಕೆಂಡರಿ ಶಾಲೆಗಳಿವೆ. ಪ್ರಿನ್ಸ್‍ಟನ್ ವಿಶ್ವವಿದ್ಯಾಲಯ (1746). ಕ್ವೀನ್ಸ್ ಕಾಲೇಜಾಗಿ ಆರಂಭವಾದ ರಡ್ಜರ್ ಸ್ಪೇಟ್ ವಿಶ್ವವಿದ್ಯಾಲಯ ಇವು ಮುಖ್ಯವಾದವು.

ಆರ್ಥಿಕತೆ : ವ್ಯವಸಾಯ ಅಭಿವೃದ್ಧಿ ಹೊಂದಿದೆ. ಭೂಮಿ ಬೇಸಾಯಕ್ಕೆ ಅನುಕೂಲವಾಗಿದೆ. ರಾಜ್ಯದ ಉತ್ತರಭಾಗ ಹುಲ್ಲುಗಾವಲು ಪ್ರದೇಶ. ಇಲ್ಲಿ ಜಾನುವಾರು ಸಾಕುತ್ತಾರೆ. ಮಧ್ಯಭಾಗದ ಭೂಮಿ ಫಲವತ್ತಾಗಿದೆ. ದಕ್ಷಿಣದ ಮರಳು ಭೂಮಿಯಲ್ಲಿ ಹಣ್ಣುಗಳು ಮುಸುಕಿನ ಜೋಳ, ಬಿಳಿ ಆಲೂಗಡ್ಡೆ, ಗೆಣಸು, ಪೀಚಸ್, ಕ್ರಾನ್‍ಬೆರಿ ಹಣ್ಣು, ದ್ರಾಕ್ಷಿ, ಸೇಬು, ತರಕಾರಿ.

ನ್ಯೂ ಜರ್ಸೀ ಪಶುಪಾಲನೆಗೆ ಹೆಸರಾಗಿದೆ. ಉತ್ತಮಜಾತಿಯ ಹಸು, ಹಂದಿ ಸಾಕುತ್ತಾರೆ. ಹಾಲು, ಚೀಸ್ ಉತ್ಪನ್ನವಾಗುತ್ತವೆ, ಮೀನುಗಾರಿಕೆಯೂ ಒಂದು ಮುಖ್ಯ ಕಸುಬು.

ಹಾಲಿನ ಪುಡಿ, ಚೀಸ್, ಮಾಂಸ, ಮೀನು ಮೊದಲಾದ ಆಹಾರಪದಾರ್ಥಗಳನ್ನು ಡಬ್ಬಗಳಲ್ಲಿ ತುಂಬುವ ಕಾರ್ಖಾನೆಗಳಿವೆ. ಬಟ್ಟೆ, ರಾಸಾಯನಿಕ, ಮೋಟಾರು ವಾಹನ, ಬಣ್ಣ, ವಾರ್ನಿಷ್, ಯಂತ್ರೋಪಕರಣ, ರಬ್ಬರ್ ಮತ್ತು ಚರ್ಮದ ಸಾಮಾನುಗಳು, ಹಡಗು ನಿರ್ಮಾಣ, ಕಾಗದ ತಯಾರಿಕೆ_ಇವು ಪ್ರಮುಖ ಕೈಗಾರಿಕೆಗಳು. ರಾಜ್ಯದಲ್ಲಿ ಮರಳುಗಲ್ಲು ಹಾಗೂ ಕಟ್ಟಡ ಕಲ್ಲುಗಳು ದೊರಕುತ್ತವೆ.

ಸಾರಿಗೆ ಸಂಪರ್ಕ : ನ್ಯೂ ಜರ್ಸಿಯಿಂದ ಹೊರಡುವ ಪೆನ್ಸಿಲ್‍ವೇನಿಯ, ಡೆಲವೇರ್, ಲಾಕವಾನ, ವೆಸ್ಟರ್ನ್, ಈರಿ, ಲೀ ಹೈ ಕಣಿವೆ ರೈಲುಮಾರ್ಗಗಳು ಮುಖ್ಯವಾದವು. ರಾಜ್ಯದಲ್ಲಿ ಒಳ್ಳೆಯ ರಸ್ತೆ ವ್ಯವಸ್ಥೆಯಿದೆ. ನ್ಯೂಜರ್ಸೀಟರ್ನ್‍ಪೈಕ್ ಹಾಗೂ ಗಾರ್ಡನ್ ಸ್ಟೇಟ್ ಪಾರ್ಕ್ ರಸ್ತೆಗಳು ಪ್ರಮುಖವಾದವು. ನ್ಯೂ ಜಿರ್ಸಿಗೂ ನ್ಯೂ ಯಾರ್ಕ್ ಪಟ್ಟಣಕ್ಕೂ ನಡುವೆ ಜಾರ್ಜ್ ವಾಷಿಂಗ್‍ಟನ್ ಸೇತುವೆ, ಹಾಲೆಂಡ್ ಮತ್ತು ಲಂಡನ್ ಸುರಂಗ ಮಾರ್ಗಗಳು ಇವೆ. ರಾಜ್ಯದ ದೊಡ್ಡ ವಿಮಾನ ನಿಲ್ದಾಣ ನ್ಯೂವಾರ್ಕ್‍ನಲ್ಲಿದೆ. ಇದು ದೊಡ್ಡ ಬಂದರು.

ಪ್ರವಾಸಿ ಕ್ಷೇತ್ರಗಳು : ಅಟ್ಲಾಂಟಿಕ್ ಸಿಟಿ ಮತ್ತು ವೈಲ್ಡ್‍ವುಡ್ ಪ್ರದೇಶ, ವೆಸ್ಟ್ ಆರೆಂಜ್ ಭಾಗದ ಎಡಿಸನ್ ನ್ಯಾಷನಲ್ ಪಾರ್ಕ್, ಕ್ಯಾಂಡನ್‍ನಲ್ಲಿ ಕವಿ ವಾಲ್ಟ್ ಹ್ವಿಟ್‍ಮನ್ ಹುಟ್ಟಿದ ಮನೆ, ಟೆಲಿಗ್ರಾಫ್ ಹಿಲ್ ಪಾರ್ಕಿನ ಗಾರ್ಡನ್ ಸ್ಟೇಟ್ ಕಲಾಕೇಂದ್ರ_ಇವು ಪ್ರಮುಖ ಪ್ರವಾಸಿ ಆಕರ್ಷಣೆಗಳು. (ವಿ.ಜಿ.ಕೆ.)