ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಜಿಲೆಂಡ್

ವಿಕಿಸೋರ್ಸ್ದಿಂದ

ನ್ಯೂಜಿಲೆಂಡ್ ಕಾಮನ್‍ವೆಲ್ತಿನ ಪೂರ್ಣ ಸದಸ್ಯತ್ವ ಪಡೆದಿರುವ ಒಂದು ಸ್ವತಂತ್ರ ದೇಶ. ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಆಸ್ಟ್ರೇಲಿಯದ ಆಗ್ನೇಯಕ್ಕೆ ಸುಮಾರು 1.760 ಕಿಮೀ. ದೂರದಲ್ಲಿ ಪೂ. ರೇ. 166027'-178035' ಹಾಗೂ ದ.ಅ. 34025'-47017' ನಡುವೆ ಇದೆ. ನಾರ್ತ್ ಮತ್ತು ಸೌತ್ ಐಲೆಂಡುಗಳೆಂಬ ಎರಡು ದೊಡ್ಡ ದ್ವೀಪಗಳನ್ನೂ ಅನೇಕ ಸಣ್ಣ ದ್ವೀಪಗಳನ್ನೂ ಇದು ಒಳಗೊಂಡಿದೆ. ಇವುಗಳಲ್ಲಿ ಕೆಲವು ದ್ವೀಪಗಳು ಮುಖ್ಯ ದ್ವೀಪಗಳಿಂದ ನೂರಾರು ಮೈಲಿಗಳ ದೂರದಲ್ಲಿವೆ. ದಕ್ಷಿಣ ಪೆಸಿಫಿಕಿನ ನೀಯೂ ಮತ್ತು ಟೋಕಿಲಾವು ದ್ವೀಪಗಳೂ ಆಂಟಾರ್ಕ್‍ಟಿಕ ಖಂಡದ ಒಂದು ಭಾಗವೂ (ರಾಸ್ ಡಿಪೆಂಡೆನ್ಸಿ) ನ್ಯೂ ಜಿûೀಲೆಂಡಿನ ಆಡಳಿತಕ್ಕೆ ಒಳಪಟ್ಟಿವೆ. ಮುಖ್ಯವಾದ ನಾರ್ತ್ ಮತ್ತು ಸೌತ್ ದ್ವೀಪಗಳ ನಡುವೆ ಕುಕ್ ಜಲಸಂಧಿ ಇದೆ. ಅತ್ಯಂತ ಕಿರಿದಾದ ಎಡೆಯಲ್ಲಿ ಈ ಜಲಸಂಧಿಯ ಅಗಲ ಸುಮಾರು 26 ಕಿಮೀ. ಸೌತ್ ಮತ್ತು ಸ್ಟೂವರ್ಟ್ ದ್ವೀಪಗಳ ನಡುವಣ ಜಲಸಂಧಿ ಫೋವೋ. ಸಮೋವ ದ್ವೀಪಗಳ ಉತ್ತರಕ್ಕೆ ಸುಮಾರು 48 ಕಿಮೀ. ದೂರದಲ್ಲಿ ಟೋಕಿಲಾವು ದ್ವೀಪಗಳಿವೆ. ನ್ಯೂ ಜಿûೀಲೆಂಡಿನ ಆಶ್ರಯದಲ್ಲಿದ್ದ ಕುಕ್ ದ್ವೀಪ 1965ರಲ್ಲಿ ಸ್ವಯಮಾಡಳಿತ ಪಡೆಯಿತಾದರೂ ಅದರ ರಕ್ಷಣೆ ಮತ್ತು ವಿದೇಶ ವ್ಯವಹಾರಗಳ ಹೊಣೆ ನ್ಯೂ ಜಿûೀಲೆಂಡಿನದಾಗಿದೆ. ಪಶ್ಚಿಮಕ್ಕೆ 640 ಕಿಮೀ. ದೂರದಲ್ಲಿ ಮಧ್ಯ ಪೆಸಿಫಿಕ್‍ನಲ್ಲಿರುವ ನೀಯೂ ದ್ವೀಪವೂ 1974ರಲ್ಲಿ ಅದೇ ಸ್ಥಾನ ಗಳಿಸಿತು. ಇಂಗ್ಲೆಂಡಿನ ಎರಡರಷ್ಟು ಇರುವ ಈ ದೇಶದ 1/3ಭಾಗ ಗುಡ್ಡಗಾಡು. ಹಿಮಾಜ್ಛಾದಿತ ಪರ್ವತಗಳು, ಜ್ವಾಲಾಮುಖಿಗಳು, ಮರಳುವ ಬಿಸಿನೀರಿನ ಚಿಲುಮೆಗಳು, ಹೊಂಬಣ್ಣದ ಸಮುದ್ರ ದಂಡೆಗಳು, ನಾರ್ತ್ ದ್ವೀಪದಲ್ಲಿ ವೈಟೋಮೋ ಕುಹರಗಳು (ಮಿಣುಕು ಹುಳುವಿನ ಕುಹರ) - ಇವು ಈ ದೇಶದ ಕೆಲವು ಆಕರ್ಷಣೆಗಳು. ನ್ಯೂ ಜಿûೀಲೆಂಡಿನ ವಿಸ್ತೀರ್ಣ2,68,676 ಚ. ಕಿಮೀ. ಜನಸಂಖ್ಯೆ 29,09,916 (1972). ರಾಜಧಾನಿ ವೆಲಿಂಗ್ಟನ್.

1840ರಿಂದ ಬ್ರಿಟಿಷ್ ವಸಾಹತಾಗಿದ್ದ ನ್ಯೂಜಿûೀಲೆಂಡ್ 1901 ರಿಂದಲೇ ಅನೇಕ ವಿಚಾರಗಳಲ್ಲಿ ವಾಸ್ತವವಾಗಿ ಸ್ವಯಂ ನಿರ್ಧಾರ ಕೈಗೊಳ್ಳುತಿತ್ತು. ತಾಂತ್ರಿಕವಾಗಿ ಅದು 1974ರಲ್ಲಿ ಸಂಪೂರ್ಣಪ್ರಭುತ್ವಸಂಪನ್ನ ಅಧಿರಾಜ್ಯವಾಯಿತು. ದೂರದಲ್ಲಿ ಪ್ರತ್ಯೇಕವಾಗಿರುವುದರಿಂದ ಈ ದೇಶ ರಾಜ ಕೀಯವಾಗಿ ಹಾಗೂ ಆಯಕಟ್ಟಿನ ದೃಷ್ಟಿಯಿಂದ ಅಷ್ಟೇನೂ ಮಹತ್ತ್ವವುಳ್ಳದ್ದಲ್ಲ. ಆದರೆ ಇದರ ಜೀವನಮಟ್ಟ ಉನ್ನತವಾದ್ದಾಗಿದೆ. ಮೂಲನಿವಾಸಿಗಳಾದ ಮಾವೊರಿಗಳೊಂದಿಗೆ ಪಾಶ್ಚಾತ್ಯ ಮಾದರಿಯ ಸಮಾಜದ ಹೊಂದಾವಣೆ ಸಾಧಿಸಲಾಗಿದೆ. ಈಚೆಗೆ ಇದು ಪೆಸಿಫಿಕ್ ಸಾಗರದಲ್ಲಿರುವ ನೆರೆರಾಷ್ಟ್ರಗಳ ಬಗ್ಗೆ ಹೆಚ್ಚಿನ ಪ್ರಜ್ಞೆ ತಳೆದಿದೆ. ಹೆಚ್ಚು ಅಭಿವೃದ್ಧಿ ಹೊಂದದಿರುವ ಈ ವಲಯದ ಅಭಿವೃದ್ಧಿಯಲ್ಲಿ ನ್ಯೂ ಜಿûೀಲೆಂಡ್ ಮತ್ತು ಆಸ್ಟ್ರೇಲಿಯಗಳಂಥ ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳು ಅಧಿಕ ಪಾತ್ರ ವಹಿಸುವುದು ಅನಿವಾರ್ಯವಾಗಿದೆ. (ಜಿ.ಕೆ.ಯು.)

ಭೂವಿಜ್ಞಾನ: ನ್ಯೂಜಿûೀಲೆಂಡ್ ಪೆಸಿಫಿಕ್ ಸಾಗರದ ದಕ್ಷಿಣ ಭಾಗದಲ್ಲಿದೆ. ಉತ್ತರ ದ್ವೀಪ ಮತ್ತು ದಕ್ಷಿಣ ದ್ವೀಪ ಎಂಬ ಎರಡು ಮುಖ್ಯ ದ್ವೀಪಗಳಿಂದ ಕೂಡಿದೆ. ಇವುಗಳ ನಡುವೆ ಕುಕ್ ಜಲಸಂಧಿ ಉಂಟು. ದಕ್ಷಿಣ ದ್ವೀಪದಲ್ಲಿ ಸ್ವಿವರ್ಟ್ ಎಂಬ ಸಣ್ಣ ದ್ವೀಪವಿದೆ. ಇದಕ್ಕೂ ದಕ್ಷಿಣ ದ್ವೀಪಕ್ಕೂ ನಡುವೆ ಪೋವಾಕ್ವ್ ಜಲಸಂಧಿ ಉಂಟು. ಇದಲ್ಲದೆ ತೀರದಾಚೆ ಇನ್ನೂ ಅನೇಕ ಸಣ್ಣಪುಟ್ಟ ದ್ವೀಪಗಳಿವೆ. ಭೂವ್ಶೆಜ್ಞಾನಿಕ ದೃಷ್ಟಿಯಿಂದ ಉತ್ತರ ಮತ್ತು ದಕ್ಷಿಣ ದ್ವೀಪಗಳು ಇನ್ನೂ ಯೌವಾನಾವಸ್ಥೆಯಲ್ಲಿವೆ.

ನ್ಯೂಜಿûೀಲೆಂಡಿನ ಮೇಲ್ಮೈ ಬೆಟ್ಟ ಹೊಳೆ ಸರೋವರಗಳಿಂದ ತುಂಬಿದೆ. ದೇಶದ ಮುಕ್ಕಾಲುಭಾಗ ಸಮುದ್ರಮಟ್ಟಕ್ಕಿಂತ ಮೇಲ್ಮೈ ಉರುಳೆಯಾಕಾರದಲ್ಲಿದೆ. ದ್ವೀಪಗಳ ಮಧ್ಯಭಾಗಗಳಲ್ಲಿ ಉನ್ನತಪರ್ವತ ಶ್ರೇಣಿಗಳು ಹಾದುಹೋಗಿವೆ. ಉತ್ತರ ದ್ವೀಪದ ಮುಖ್ಯವಾದ ಪ್ರಸ್ಥಭೂಮಿ ಜ್ವಾಲಾಮುಖಿಯ ಚಟುವಟಿಕೆಯಿಂದ ರಚಿತವಾಗಿದೆ. ಜ್ವಾಲಾಮುಖಿಗಳ ಇತರ ಶಿಖರಗಳೆಂದರೆ ಮೌಂಟ್ ಎಗ್‍ಮಾಂಟ್ (ಎತ್ತರ ಸುಮಾರು 2,517 ಮೀ) ಮತ್ತು ಮಾಂಟ್ ರುವಾಪಿಹೂ (ಎತ್ತರ ಸುಮಾರು 2,796ಮೀ). ಇವು ಹಲವು ಬಾರಿ ಚಟುವಟಿಕೆಯನ್ನು ತೋರಿದ ಜ್ವಾಲಾಮುಖಿಗಳು. ದಕ್ಷಿಣ ದ್ವೀಪದಲ್ಲಿ ಉದ್ದಕ್ಕೂ ಹಬ್ಬಿರುವ ದಕ್ಷಿಣ ಆಲ್ಪ್ಸ್‍ಪರ್ವತಗಳಿವೆ. ಸುಮಾರು 3,704ಮೀ ಎತ್ತರದ ಮೌಂಟ್ ಕುಕ್ ಪರ್ವತದ ಮೇಲ್ಭಾಗದಲ್ಲಿ ಟಾಸ್‍ಮಾನ್ ಹಿಮನದಿ ಉಂಟು.

ನ್ಯೂಜಿûೀಲೆಂಡಿನಲ್ಲಿ ಹಲವಾರು ಸುಂದರ ಸರೋವರಗಳಿವೆ. ಟಾಪೋ ಸರೋವರ (ವಿಸ್ತಾರ 616 ಚ ಕಿಮೀ) ಉತ್ತರದ್ವೀಪದ ಮಧ್ಯದಲ್ಲಿದೆ. ಇದು ಅತ್ಯಂತ ದೊಡ್ಡ ಸರೋವರ. ವಾಯ್‍ಕಾಟೋ ಎಂಬುದು ಅತಿ ಉದ್ದವಾದ ನದಿ. ಇದು ಟಾಪೋ ಸರೋವರದಲ್ಲಿ ಹುಟ್ಟಿ ಉತ್ತರಾಭಿಮುಖವಾಗಿ 435ಕಿಮೀ ದೂರ ಹರಿದು ಅಕ್ಲೆಂಡ್ ಸಮೀಪದಲ್ಲಿ ಟಾಸ್ಮಾನ್ ಸಮುದ್ರವನ್ನು ಸೇರುತ್ತದೆ. ಕ್ಲುತಾನದಿ ದಕ್ಷಿಣ ಆಲ್ಪ್ಸ್ ಪರ್ವತದ ದಕ್ಷಿಣಭಾಗದಲ್ಲಿರುವ ವನಾಕಾ ಸರೋವರದಲ್ಲಿ ಹುಟ್ಟಿ ಉತ್ತರಾಭಿಮುಖವಾಗಿ 338 ಕಿಮೀ. ದೂರ ಹರಿದು ಫೆಸಿಫಿಕ್ ಸಾಗರದಲ್ಲಿ ಐಕ್ಯವಾಗುವುದು. ಉತ್ತರದ್ವೀಪದ ರೋಟೋರುವ ಎಂಬ ಸ್ಥಳದಲ್ಲಿ ಬಿಸಿನೀರಿನ ಚಿಲುಮೆಗಳೂ ಕಾರಂಜಿಗಳೂ ಇವೆ.

ಉತ್ತರದ್ವೀಪ: ಇದರ ಅಧಿಕ ಭಾಗ ಪರ್ವತಸ್ತೋಮಗಳಿಂದ ಕೂಡಿದೆ. ದ್ವೀಪದ ಮೇಲೆ ಮಡ್ಡಿ ಸ್ತರಗಳುಂಟು. ತರುವಾಯ ಸಮುದ್ರ ಸಂಚಯನಗಳಿಂದಾದ ಮರುಳು ಹಾಗೂ ಜ್ವಾಲಾಮುಖಿಗಳಿಂದ ಉತ್ಪತ್ತಿಯಾದ ವಸ್ತುಗಳು ಇದರ ಜತೆ ಸೇರಿವೆ. ಈ ದ್ವೀಪದ ಪರ್ವತಗಳ ಮೇಲ್ಮೈ ಮತ್ತು ಮೇಲ್ಭಾಗಕ್ಕೆ ಚಾಚಿಕೊಂಡಿರುವ ಶಿಲೆಗಳು ಅತಿ ಪುರಾತನ ಮತ್ತು ಗಡುಸಾದ ಶಿಲಾಭಾಗಗಳು. ಇವು ಬಲು ಇಕ್ಕಟ್ಟಾದ ಪ್ರದೇಶಗಳಿಗೆ ಸೀಮಿತಗೊಂಡಿವೆ. ಈ ಮಡಿಕೆ ಪರ್ವತಗಳಲ್ಲಿ ಅಧಿಕ ಗಾತ್ರದ ಸ್ತರಭಂಗಗಳನ್ನು ಗುರುತಿಸಬಹುದು. ಪೂರ್ವಭಾಗಕ್ಕೂ ಪಶ್ಚಿಮ ಭಾಗಕ್ಕೂ ನಡುವೆ ಸ್ಪುಟವಾದ ವಿಭಜನೆಯಾಗಿರುವುದನ್ನು ಮಧ್ಯ ಜೀವಯುಗದ ಗ್ರೇವಾಕೀಸ್ ಶಿಲೆಗಳು ತೋರಿಸುತ್ತವೆ. ಪೂರ್ವಕ್ಕೆ ಪೆಲ್ಲಿಸಾರ್ ಭೂಶಿರದಿಂದ ಅದರ ಪೂರ್ವದೆಡೆಗೆ ಭೂರಚನೆಯಲ್ಲಿ ಅತಿ ಕ್ಲಿಷ್ಟವಾದ ರೌಕುಮಾರಾ ಪರ್ಯಾಯದ್ವೀಪವೂ ಸೇರಿದಂತೆ ಉಳಿದ ಅತಿದೊಡ್ಡದಾದ ಜೂರಾಸಿಕ್. ಕ್ರಿಟೇಷಿಯಸ್, ತೃತೀಯಕ ಹಾಗೂ ಚತುರ್ಥಕ ಭೂಕಾಲಯುಗದ ಮೇಲ್ಪಾಗದ ಮಡ್ಡಿಸ್ತರಗಳುಂಟು. ಮುಖ್ಯವಾಗಿ ಇವುಗಳಲ್ಲಿ ಗ್ರೇವಾಕೀಸ್ ಸುಣ್ಣಶಿಲೆಗಳು, ಮೆಕ್ಕಲು ಮಣ್ಣಿನ ಶಿಲೆಗಳು ಮತ್ತು ಪೆಂಟಶಿಲೆಗಳು ಸೇರಿವೆ. ತೃತೀಯಕ ಭೂಕಾಲಯುಗದ ಅಂತ್ಯದಲ್ಲಿ ಭೂಚಲನೆ ಉಂಟಾಗಿ ಸಮತಲವನ್ನು ಸಂಕೋಚಿಸುವ ಶಕ್ತಿಗಳಿಂದ ಈ ಪ್ರದೇಶದಲ್ಲಿ ತೆಕ್ಕೆಮಡಿಲ ಪರ್ವತಗಳ ರಚನೆ ಆಯಿತು. ಈ ಮಡಿಕೆಗಳು ಕ್ರಮೇಣ ಹಲವಾರು ಸ್ತರಭಂಗಗಳಿಂದ ಭೇದಿಸಲ್ಪಟ್ಟವು. ಈಕ್ರಿಯೆ ಮತ್ತೂ ಮುಂದುವರಿದಿದೆ. ನ್ಯೂಜಿûೀಲೆಂಡಿನ ಇತರ ಭಾಗಗಳಂತೆ ಉತ್ತರದ್ವೀಪದಲ್ಲೂ ಭೂಕಂಪನಗಳು ಆಗಾಗ ಸಂಭವಿಸುತ್ತಿರುವುವು. ದಪ್ಪಮರುಳು ನಿಕ್ಷೇಪದಿಂದಾದ ವೈರಾಪಾರ ತಗ್ಗುಭಾಗ, ಮೆಕ್ಕಲುಮಣ್ಣಿನಿಂದ ರಚಿತವಾದ ಹಿಯರ್ ಟಾಂಗಾ ಮೈದಾನ (ಇದೇ ಹಾಕೀಸ್ ಕೊಲ್ಲಿ) ಮತ್ತು ಪಾವರ್ಟಿಕೊಲ್ಲಿಯ ವೈರಾಪಾರಾದ ಸಮತಟ್ಟಾದ ಭಾಗವನ್ನು ಬಿಟ್ಟರೆ ಉತ್ತರದ್ವೀಪ ಬೆಟ್ಟಗುಡ್ಡಗಳಿಂದ ಕೂಡಿದೆ. ಬೆಟ್ಟಗಳು ಬಲು ಕಡಿದಾಗಿವೆ. ಅಲ್ಲಲ್ಲಿ ಹಿರಿಗಾತ್ರದ ಬಿರುಕುಗಳಿಂದ ಕೂಡಿವೆ. ಅತಿಯಾದ ಶಿಥಿಲೀಕರಣದಿಂದ ಬೆಟ್ಟಗಳು ತಮ್ಮ ಮೊದಲಿನ ಆಕಾರವನ್ನು ಕಳೆದುಕೊಂಡಿವೆ. ಉತ್ತರದ್ವೀಪದ ಜ್ವಾಲಾಮುಖಿಗಳ ಪೈಕಿ ಮೌಂಟ್ ಎಗ್ (ಎತ್ತರ 2518 ಮೀ) 250 ವರ್ಷಗಳಷ್ಟು ಹಿಂದೆ ಪಟುವಾಗಿತ್ತು. ಈಗ ಪಟುವಾಗಿರುವ ಜ್ವಾಲಾಮುಖಿಗಳೆಂದರೆ ರೌಪಿಹೂ (ಎತ್ತರ 2,797ಮೀ.) ನ್ಗೌರಾಹೋ (ಎತ್ತರ 2,201ಮೀ).

ಉತ್ತರದ್ವೀಪದ ಮಧ್ಯದಲ್ಲಿ ಜ್ವಾಲಮುಖಿಯಿಂದ ಆದ ಪ್ರಸ್ಥಭೂಮಿ ಉಂಟು. ಇದನ್ನು ಶಾಖಪಟ್ಟಿ ಎಂದೂ ಕರೆಯುವುದಿದೆ. ಆಧುನಿಕ ಜೀವಯುಗ ಮತ್ತು ಪ್ಲೀಸ್ಟೋಸೀನ್ ಕಾಲದಲ್ಲಿ ಜ್ವಾಲಮುಖಿಗಳಿಂದ ಉತ್ಪತ್ತಿಯಾದ ವಸ್ತುಗಳು ನ್ಯೂಜಿûೀಲೆಂಡ್, ಟೋಂಗಾರಿಯೋ ನ್ಯಾಷನಲ್ ಪಾರ್ಕ್ ಮತ್ತು ವೈಟ್ ಐಲೆಂಡುಗಳಲ್ಲಿ ಏಕಕಾಲದಲ್ಲಿ ಕೇಂದ್ರೀಕೃತವಾಗಿದ್ದುವು. ಕೆಳಭಾಗದ ಗ್ರೇವಾಕೀಸ್ ಮತ್ತು ಅದರ ಕೆಳೆಗೆ ಸ್ತರಭಂಗಕ್ಕೆ ಒಳಗಾದ ಶಿಲೆಗಳ ಮೇಲ್ಭಾಗದಲ್ಲಿ ಸುಮಾರು 8.30 ಘಕಿಮೀಗಳಷ್ಟು ವ್ಯಾಪಕವಾದ ಲಾವಾ ಹರುವುಗಳು ಮುಚ್ಚಿವೆ. ಉತ್ತರ ದ್ವೀಪ ಜ್ವಾಲಾಮುಖಿಗಳಿಂದ ರಚಿತವಾದ ಪ್ರಸ್ಥಭೂಮಿಯ ಅಂಚಿನಿಂದ ಕೋರೋಮಂಡಲ್ ಪರ್ಯಾಯದ್ವೀಪದ ವಾಯವ್ಯಕ್ಕೆ ಚಾಚಿ ಕೊಂಡಿದೆ. ಈ ದ್ವೀಪದ ಭೂದೃಶ್ಯಗಳು ಭಿನ್ನವೂ ವೈವಿಧ್ಯಮಯವೂ ಆಗಿವೆ.

ದಕ್ಷಿಣ ದ್ವೀಪ: ದಕ್ಷಿಣ ದ್ವೀಪದ ಮುಕ್ಕಾಲು ಭಾಗ ಪರ್ವತಗಳಿಂದ ಕೂಡಿದೆ. ಇವು ದ್ವೀಪದ ಮಧ್ಯಭಾಗದಲ್ಲಿವೆ. ಇಲ್ಲಿರುವ ಆಲ್ಪ್ಸ್ ಪರ್ವತಗಳ ದಕ್ಷಿಣ ಭಾಗ ಬಲುಮಟ್ಟಿಗೆ ದೀರ್ಘಕಾಲದ ನಗ್ನೀಕರಣದ ಕ್ರಿಯೆಯಿಂದ ಕೊರೆತಕ್ಕೆ ಒಳಗಾಗಿದೆ. ಅಷ್ಟೇ ಅಲ್ಲ ಹಿಮನದಿಗಳ ಕ್ರಿಯೆಯಿಂದ ಕೂಡ ಪರಿಣಾಮಕಾರಿಯಾಗಿ ಸವೆದು ಹೋಗಿದೆ. ಹಿಮಾಚ್ಛಾದಿತ ಶಿಖರವಾದ ಮೌಂಟ್ ಕುಕ್‍ನ ಎತ್ತರ 3,784ಮೀ ಪರ್ವತಗಳು ಉತ್ತರದ ಕಡೆಗೆ ದ್ವೀಪದ ಅಡ್ಡಗಲವೂ ವ್ಯಾಪಿಸಿಕೊಂಡಿವೆ. ಅಲ್ಲಿ ಸಮುದ್ರದ ಕಡೆಗೆ ಚಾಚಿರುವ ಕೈಕಾರಾ ಪರ್ವತಶ್ರೇಣಿಗಳು ಮುಖ್ಯವಾಗಿ ಸ್ಪೆನ್ಸರ್ ಮತ್ತು ಸೇಂಟ್ ಅರ್ನಾಂಡ್ ಪರ್ವತಗಳಿಗೆ ಸಮಾಂತರದಲ್ಲಿದ್ದು ಆಳವಾದ ಕಣಿವೆಗಳಿಂದ ಪ್ರತ್ಯೇಕಿಸಲ್ಪಟ್ಟಿವೆ, ಭೂರಚನಾ ಕ್ರಿಯೆಯಿಂದ ಆದ ಸ್ತರಭಂಗಗಳು ಈ ಕಣಿವೆಗಳಲ್ಲಿ ಕಂಡುಬರುವುವು. ಇಲ್ಲಿನ ಉನ್ನತ ಮಡಿಕೆಗಳುಳ್ಳ ಪರ್ವತಗಳಲ್ಲಿಯೂ ಸ್ತರಭಂಗಗಳಿಂದಾದ ಪರ್ವತಗಳಲ್ಲಿಯೂ ಮಧ್ಯ ಜೀವಯುಗದ ಕೆಳಭಾಗದ ಗ್ರೇವಾಕೀಸ್, ಮರಳು ಶಿಲೆ ಮತ್ತು ಜೇಡು ಶಿಲೆಗಳಿವೆ. ಸ್ತರಭಂಗಗಳಿಂದಾದ ಉಬ್ಬಚ್ಚು ಪರ್ವತಗಳ ಪಟ್ಟಿ ಹಾಗೂ ಅವುಗಳ ನಡುವಿರುವ ಗ್ರಾಬೇಸ್ಸ್‍ಗಳು. ಡ್ಯೂನಿಡಿನ್ ಹೊರವಲಯದಿಂದ ಆಸ್ಟ್ರಿಂಗ್ ಪರ್ವತದ (ಎತ್ತರ3.035) ಕಡೆಗೆ ಒಟಾಗೋ ಮೂಲಕ ಸಾಗಿವೆ.

ಪರ್ವತ ಭೂ ಸಾದೃಶ್ಯಗಳಿಂದ ಕೂಡಿದ ಈ ದ್ವೀಪದ ಮೂರನೆಯ ಭಾಗದಲ್ಲಿ ಪುರಾತನ ಅಗ್ನಿಶಿಲೆಗಳಿಂದ ರಚಿತವಾದ ಪಿಯೋರ್ಡಲೆಂಡಿನಲ್ಲಿ ಪ್ರಾಚೀನ ಜೀವ ಯುಗದ ಆದಿಯಲ್ಲಿ ಸಂಚಯನಗೊಂಡ ಮಡ್ಡಿ ಸ್ತರಭಂಗಗಳು ರೂಪಾಂತರ ಶಿಲೆಗಳಿಗೆ ಪರಿವರ್ತನೆ ಹೊಂದಿರುವುದನ್ನು ಕಾಣಬಹುದು. ಭೂರಚನೆಯ ದೃಷ್ಟಿಯಿಂದ ಪಯೋರ್ಡಲೆಂಡ್ ನ್ಯೂಜೀಲೆಂಡಿನ ಅತ್ಯಂತ ಪುರಾತನ ಭಾಗಗಳಲ್ಲಿ ಒಂದಾಗಿದೆ. ಫಯೋರ್ಡಲೆಂಡಿನ ಮುಖ್ಯವಾದ ಪ್ರಸ್ಥಭೂಮಿ 1.500-2.150ಮೀ ಎತ್ತರವಿದೆ. ಪ್ಲೀಸ್ಟೋಸೀನ್ ಯುಗದಲ್ಲಿ ಹಿಮನದಿಗಳು ಈ ಪ್ರಸ್ಥಭೂಮಿಯನ್ನು ಅತಿ ಪರಿಣಾಮಕಾರಿಯಾಗಿ ಕೊರೆದು ಅಥವಾ ಸವೆಸಿ ಸುಮಾರು 300ಮೀ ಆಳದ ಕಣಿವೆಗಳನ್ನು ನಿರ್ಮಿಸಿವೆ, ಪಶ್ಚಿಮ ಭಾಗದಲ್ಲೂ ಹಿಮನದಿಗಳು ಅದ್ಭುತವಾದ ಹಾಗೂ ಆಳವಾದ ಕೊಳ್ಳಗಳನ್ನು ಕಡಲ ದಂಡಿಗಳಲ್ಲಿ ನಿರ್ಮಿಸಿವೆ. ಉದಾಹರಣೆಗೆ ಮಿಲ್‍ಫೋರ್ಡ ಕೊಳ್ಳ. ಪೂರ್ವಭಾಗದಲ್ಲಿ ಮುರುದಲುಗುಪ್ಪೆಗಳಿಂದ ಫಿಂಗರ್‍ಸರೋವರಗಳಾಗಿವೆ. ಕ್ರಮೇಣ ಈ ಪರ್ವತಗಳು ಮಾರ್ಲಬರೋ ಕರಾವಳಿಗುಂಟ ಬಟಾಗೋದ ಪೂರ್ವಭಾಗದಲ್ಲಿ ಸಮುದ್ರದ ಕಡೆಗೆ ಇಳಿಮುಖವಾಗುತ್ತವೆ, ಪುನಃ ಇವು ಸೌತ್ ಲೆಂಡಿ ಟೀವೇಕೊಲ್ಲಿಯನ್ನು ಸೇರುವುವು. ಇತರ ಕಡೆ ಮೈದಾನಗಳೂ ಸಣ್ಣ ಸಣ್ಣ ಬೆಟ್ಟಗಳು ಇಳಿಜಾರು ಪ್ರದೇಶಗಳು ಇವೆ. ಕ್ಯಾಂಟರ್‍ಬರಿ ಮತ್ತು ಸೌತ್‍ಲೆಂಡ್ ಮೈದಾನಗಳು ಅತಿ ದೊಡ್ಡ ತಗ್ಗು ಭಾಗಗಳು. ಕ್ಯಾಂಟರ್‍ಬರಿ ಮೈದಾನ ಈಶಾನ್ಯದಿಂದ ನೈಋತ್ಯ ದಿಕ್ಕಿಗೆ ಅಲ್ಲಲ್ಲಿ 160ಕಿಮೀಗೂ ಹೆಚ್ಚಾಗಿ ವ್ಯಾಪಿಸಿದೆ ಮತ್ತು 65ಕಿಮಿಗಳಷ್ಟು ಒಳಬಾಗಕ್ಕೆ ಚಾಚಿದೆ. ಈ ಮೈದಾನ ಇಡೀ ನ್ಯೂಜೀಲೆಂಡ್ನಲ್ಲೆ ಅತಿ ದೊಡ್ಡ ಭೂಸಾದೃಶ್ಯ. ಇದು ಮಡ್ಡಿ ಸ್ತರಗಳಿಂದ ರೂಪಿತಗೊಂಡಿದೆ,

ಆಲ್ಪ್ಸ್ ಪರ್ವತಗಳ ಮೇಲಿಂದ ತುಂಬು ಪ್ರವಾಹದಲ್ಲಿ ಹರಿದು ಬರುವ ನದಿಗಳು ಅಧಿಕ ಮೊತ್ತದ ನೊರಜು ಮತ್ತು ಮರಳನ್ನು ಪರ್ವತ ತಪ್ಪಲಿನಲ್ಲಿ ತಂದು ಹಾಕುತ್ತವೆ. ಪರಿಣಾಮವಾಗಿ ಬೀಸಣಿಗೆ ಆಕಾರದ ತಪ್ಪಲು ಸಂಚಯನಗಳು ರೂಪುಗೊಳ್ಳುತ್ತವೆ. ಇತರ ಕಡೆ ಮೆಕ್ಕಲುಮಣ್ಣಿನಿಂದ ಕೂಡಿದ ಸಣ್ಣಪುಟ್ಟ ಬಯಲು ಭಾಗಗಳುಂಟು. ಕೆಲವು ಕಡೆ ಪರ್ವತಗಳಿಗೂ ಪೂರ್ವ ಕರಾವಳಿಗೂ ನಡುವೆ ಅವಶೇಷ ಸ್ತರಗಳು ಆವರಿಸಿಕೊಂಡಿವೆ. ಮಾರ್ಲಬರೋ ಉತ್ತರ ಕ್ಯಾಂಟರ್‍ಬರಿ ಮತ್ತು ದಕ್ಷಿಣ ಕ್ಯಾಂಟರ್‍ಬರಿ ಹಾಗೂ ಪೂರ್ವ ಬಟಾಗೋಗಳಲ್ಲಿ ಈ ಸ್ತರಗಳು ತೃತೀಯಕ ಭೂಕಾಲಯುಗದ ಮೇಲ್ಬಾಗದ ಮತ್ತು ಕೆಳಬಾಗದಲ್ಲಿ ಸಂಚಯಗೊಂಡ ಸ್ತರಗಳು. ಸತತವಾದ ನಗ್ನೀಕರಣ ಕ್ರಿಯೆಗೆ ಒಳಗಾದ ಈ ಶಿಲಾಸ್ತೋಮಗಳು ಸಣ್ಣ ಸಣ್ಣ ಬೆಟ್ಟಗಳಾಗಿ ಮತ್ತು ಇಳಿಜಾರಾದ ಹಾಗೂ ಸಮತಟ್ಟಾದ ಪ್ರದೇಶಗಳಾಗಿ ರೂಪುಗೊಂಡಿವೆ.

ಸೌತ್‍ಲೆಂಡಿನ ಉಬ್ಬಚ್ಚುಪರ್ವತಗಳು ರೂಪಾಂತರ ಶಿಲೆಗಳಿಂದ ಕೂಡಿವೆ. ಸರೋವರವನ್ನು ಒಳಗೊಂಡಿರುವ ಫಿಯೋರ್ಡಲೆಂಡಿನ ಪೂರ್ವಭಾಗದಲ್ಲಿ ನೈಸ್ ಶಿಲೆಗಳಿಂದ ರಚಿತವಾದ ಪ್ರಸ್ಥಭೂಮಿ ಉಂಟು. ಹೋಕೋನ್ಯೂಯಿ ಬೆಟ್ಟಗಳಲ್ಲಿರುವ ಸುಮಾರು 9.200 ಮೀ ದಪ್ಪದ ಟ್ರೈಯಾಸಿಕ್ ಮತ್ತು ಜುರಾಸಿಕ್ ಕಾಲದ ಸ್ತರಗಳು 90 ಪ್ರತ್ಯೇಕ ಭಾಗಗಳಾಗಿ ಅತಿ ಕಡಿದಾದ ಇಳಿವೊರೆಯಿಂದ ಕೂಡಿವೆ. ಕ್ರಿಟೇಷಿಯಸ್ ಶಿಲೆಗಳು ಅಲ್ಪ ಮೊತ್ತದಲ್ಲಿದ್ದು ಹೆಚ್ಚು ದಪ್ಪವಾಗಿಲ್ಲದಿದ್ದರೂ ಕೈಟಾನ್‍ಗಾಟಾ, ಓಹಾಯ್ ಮತ್ತು ನೈಟ್‍ಕ್ಯಾಪ್ಸ್‍ಗಳಲ್ಲಿ ಅತಿಮುಖ್ಯ ಕಲ್ಲಿದ್ದಲು ನಿಕ್ಷೇಪಗಳನ್ನು ಒಳಗೊಂಡಿವೆ.

ದಕ್ಷಿಣ ದ್ವೀಪದ ವಿವಿಧ ಪರ್ವತ ಭಾಗಗಳು ಪಶ್ಚಿಮದ ಕಡೆಗೆ ಆಲ್ಪೈನ್ ಸ್ತರ ಭಂಗದಿಂದ ಹಠಾತ್ತನೆ ಅಂತ್ಯಗೊಳ್ಳುತ್ತವೆ, ಈ ಬದಲಾವಣೆ ದಕ್ಷಿಣ ದ್ವೀಪದ ಅತಿ ಪ್ರಮುಖ ಭೂರಚನಾಲಕ್ಷಣ. ಈ ಸ್ತರಭಂಗ ಎಲ್ಲೂ ಅಡೆತಡೆಯಿಲ್ಲದ ದಕ್ಷಿಣ ಆಲ್ಪ್ಸ್ ಪರ್ವತಗಳ ಪಶ್ಚಿಮ ತಪ್ಪಲಿನುದ್ದಕ್ಕೂ ಮಿಲ್‍ಫೋರ್ಡ ಸೌಂಡ್ ಮುಖದಿಂದ ನೆಲ್ಸನ್ ಜಿಲ್ಲೆಯ ರೊಟೋರಾ ಸರೋವರದ ವರೆಗೆ ಸುಮಾರು 480 ಕಿಮೀ ದೀರ್ಘವಾಗಿ ಮುಂದುವರಿಯುತ್ತದೆ. ಅಲ್ಲಿಂದ ಈ ಸ್ತರಭಂಗ ವೈರಾವ್ ಎಂಬ ಹೆಸರಿನಿಂದ ಈಶಾನ್ಯಕ್ಕೆ ಇನ್ನೂ 145ಕಿಮಿ ದೂರಕ್ಕೆ ವ್ಯಾಪಿಸಿ ಬ್ಲೆನ್‍ಹೀಮ್‍ಕುಕ್ ಜಲಸಂಧಿಯನ್ನು ತಲಪುತ್ತವೆ. ಈ ಸ್ತರಭಂಗದ ಪಶ್ಚಿಮಕ್ಕೆ ಇಕ್ಕಟ್ಟಾದ ವೆಸ್ಟ್‍ಲೆಂಡ್ ಮೈದಾನ ಉಂಟು. ಅಲ್ಲದೆ ಭೂವೈಜ್ಞಾನಿಕವಾಗಿ ಅತಿ ಕ್ಲಿಷ್ಟವೂ ದುರ್ಗಮವು ಆದ ಪರ್ವತಗಳಿಂದ ತುಂಬಿದ ನೆಲ್ಸನ್ ಪ್ರದೇಶವಿದೆ. ವೆಸ್ಟ್‍ಲೆಂಡಿನ ಕಿರಿದಾದ ಕರಾವಳಿಯ ಕೆಲವು ಕಿಮೀ ಗಳಾಚೆ ಫ್ರಾನ್ಸ್ ಜೋಸೆಫ್ ಎಂಬ ಹಿಮನದಿಗಳ ಹಿಮಸಂಚಯನ ಮತ್ತು ಮೆಕ್ಕಲುಮಣ್ಣಿನ ಸಂಚಯನಗಳು ನ್ಯೂಜಿûೀಲೆಂಡಿನ ಅತಿ ಪುರಾತನ ಶಿಲೆಗಳನ್ನು ಮುಚ್ಚಿಬಿಟ್ಟಿದೆ. ಅದೃಶ್ಯ ಮಹಾಜೀವಕಲ್ಪದ (ಪುರಾತನಶಿಲೆಗಳು) ಈ ಶಿಲೆಗಳಲ್ಲಿ ಜೀವ್ಯವಶೇಷಗಳಿಲ್ಲ. ನೈಋತ್ಯ ಭಾಗದಲ್ಲಿರುವ ಪ್ರೀಕೆಂಬ್ರಿಯನ್ ಸ್ತೋಮಗಳಲ್ಲಿ ಗ್ರೇವಾಕೀಸ್. ಗ್ರ್ಯಾನೈಟ್ ಬ್ಯಾತೋಲಿತ್ ಎಂಬ ದೈತ್ಯಾಕಾರದ ಬಂಡೆಗಳೂ ನಸ್ ಶಿಲೆಗಳೂ ಇರುವ ಬೆಟ್ಟಗುಡ್ಡಗಳುಂಟು. ಕ್ರಿಟೇಷಿಯಸ್ ಮತ್ತು ತೃತೀಯಕ ಭೂಕಾಲಯುಗದ ಮಡ್ಡಿಸ್ತರಗಳು. ಕಲ್ಲಿದ್ದದಲು ನಿಕ್ಷೇಪಗಳನ್ನು ಒಳಗೊಂಡಂತೆ ಪುರಾತನವಾದ ಶಿಲೆಗಳ ಒಂದು ಭಾಗವಾಗಿವೆ. ಯುರೇನಿಯಮ್ ಧಾತುವುಳ್ಳ ಕೆಂಪುವರ್ಣದ ಹಾಕ್‍ಕ್ರ್ಯಾಗ್ ಬ್ರೆಕ್ಷಿಯಾ ನೆಲ್ಸನ್ನಿನಲ್ಲಿ ಸಿಕ್ಕುವುದು.

ಮಾರ್ಲ್‍ಬರೋ ಮತ್ತು ಸೌಂಡ್ಸ್ ಬ್ಲಾಕ್‍ಗಳಲ್ಲಿ ವೈರಾವೂ ಸ್ತರಭಂಗದ ಪಶ್ಚಿಮಕ್ಕೆ ಅನುಕ್ರಮವಾಗಿ ಪ್ರಾಚೀನ ಜೀವಕಲ್ಪದ ರೂಪಾಂತರ ಶಿಲೆಗಳು (ಶಿಸ್ಟ್ಸ್). ಟ್ರೈಯಾಸಿಕ್ ಜುರಾಸಿಕ್ ಗ್ರೇವಾಕೀಸ್ ಕಾರ್ಬಾನಿಫೆರಸ್ ಮತ್ತು ಪರ್ಮಿಯನ್ ಕಾಲದ ಮಡ್ಡಿಸ್ತರಗಳು ಕಂಡುಬರುತ್ತವೆ, ಈ ಶಿಲಾಸ್ತೋಮಗಳು ಬಹು ದೀರ್ಘಕಾಲದ ತನಕವೂ ಆಳವಾಗಿ ಕೊರೆಯಲ್ಪಟ್ಟಿದ್ದು ಉತ್ತರದ ಕಡೆಗೆ ಕುಕ್ ಜಲಸಂಧಿಗೆ ಸೇರಿ, ಅತಿ ಜಟಿಲವಾದ ರಿಯಾ ಕರಾವಳಿಯನ್ನು ರಚಿಸಿವೆ.

ಗಣಿಉದ್ಯಮ: ನ್ಯೂಜಿûೀಲೆಂಡಿನ ಆದಿವಾಸಿಗಳಾದ ಮವೋರಿಗಳಿಗೆ ನೆಫ್ರೈಟ್ ಎಂಬ ಹಸಿರುವರ್ಣದ ಶಿಲೆ ಮತ್ತು ಸೀಸೆಯ ಗಾಜನ್ನು ಹೋಲುವ ಜ್ವಾಲಮುಖಿಯ ಶಿಲೆಯಾದ ಅಬ್ಸೀಡಿಯನ್ ಎಂಬವು ಅತಿಮುಖ್ಯ ಖನಿಜಗಳಾಗಿದ್ದುವು. ಯೂರೋಪಿಯನ್ನರು ನೆಲಸಿದ್ದ ಕಾಲದಲ್ಲಿ ಮೊದಲು ಚಿನ್ನ ಮತ್ತು ಅನಂತರ ಕಲ್ಲಿದ್ದಲು ಪ್ರಾಮುಖ್ಯವನ್ನು ಪಡೆದಿದ್ದುವು. ಚಿನ್ನ ಅಗತ್ಯವಾದ ಬಂಡವಾಳವನ್ನು ಒದಗಿಸಿತಲ್ಲದೆ ದೇಶದ ಅಭಿವೃದ್ದಿಗೆ ಪೂರಕವಾಗಿದ್ದು ಹೆಚ್ಚು ಜನಸಂಖ್ಯೆಯನ್ನು ಆಕರ್ಷಿಸಿತು. ಈ ದೇಶದಲ್ಲಿ ಭೂರಿ ಗಾತ್ರದ ವಿದ್ಯುದುತ್ಪಾದನ ಘಟಕಗಳಿದ್ದರೂ ಕಲ್ಲಿದ್ದಲಿನಿಂದ ಕೂಡ ಶಕ್ತಿಯನ್ನು ಉತ್ಪಾದಿಸುವುದು ವಾಡಿಕೆ. ಇಲ್ಲಿನ ಮುಖ್ಯ ಖನಿಜ ನಿಕ್ಷೇಪಗಳೆಂದರೆ ಮ್ಯಾಂಗನೀಸ್ ಟಂಗ್‍ಸ್ಟನ್, ಯುರೇನಿಯಮ್, ಟೈಟಾನಿಯಮ್, ಕಬ್ಬಿಣಾಂಶದಿಂದ ಕೂಡಿದ ಮರಳು ಮತ್ತು ಬಾಕ್ಸೈಟ್ ಜೇಡಿಮಣ್ಣು. ದಕ್ಷಿಣ ದ್ವೀಪದ ಪಶ್ಚಿಮ ಕರಾವಳಿಯಲ್ಲಿರುವ ಮರಳನಲ್ಲಿ 4.30,00,000,ಟನ್ನುಗಳಿಗೂ ಹೆಚ್ಚಾಗಿ ಇಲ್ಮನೈಟ್ ಧಾತು ಇರುವುದೆಂದೂ ತಾರಾ ನಾಕಿ ಮತ್ತು ಆಕ್ಲೆಂಡ್ ರೇವಿನ ಉತ್ತರ ಭಾಗದ ವರೆಗೆ ವ್ಯಾಪಿಸಿರುವ ಕಪ್ಪುವರ್ಣದ ಕಬ್ಬಿಣಾಂಶವುಳ್ಳ ಮರಳಿನಲ್ಲಿ80.00.00.000 ಟನ್ನುಗಳಷ್ಟು ಟೈಟಾನಿಯಮ್ ಇರುವುದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಸೇಕಡ 50-59 ಕಬ್ಬಿಣ ಮತ್ತು ಸೇಕಡ 5-10ರಷ್ಟು ಟೈಟಾನಿಯಮ್ ಇರುವುದೆಂದು ರಾಸಾಯನಿಕ ವಿಶ್ಲೇಷಣೆಯಿಂದ ತಿಳಿದಿದೆ. ಕಬ್ಬಿಣಾಂಶವುಳ್ಳ ಮರಳನ್ನು ಆಧರಿಸಿ ವೈಕಾಟೋ ನದಿಮುಖಜಭೂಮಿಯ ಎತ್ತರಕ್ಕೆ ಆಕ್ಲೆಂಡಿನಿಂದ 58ಕಿಮೀ ದೂರದ ಗ್ಲೆನ್ ಬ್ರೂಕ್ ಎಂಬ ಸ್ಥಳದಲ್ಲಿ 1969ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯೊಂದು ಅಸ್ತಿತ್ವಕ್ಕೆ ಬಂದಿತು. ಮುಖ್ಯವಾಗಿ ವೆಟ್ಟಲೆಂಡಿನ ವೈಕಾಟೋ ಮತ್ತು ಸೌತ್‍ಲೆಂಡ್ ಈ ಸ್ಥಳಗಳಲ್ಲಿ ಕಲ್ಲಿದ್ದಲಿನ ವಾರ್ಷಿಕ ಉತ್ಪನ್ನ ಸುಮಾರು 30.00.000ಟನ್ನು ಗಳಷ್ಟಾಗುತ್ತದೆ. ಚಿನ್ನದ ಉತ್ಪಾದನೆ ಕ್ರಮೇಣ ಇಳಿಮುಖವಾಗಿದೆ. ಈಗ ಅದರ ವಾರ್ಷಿಕ ಉತ್ಪಾದನೆ ಕೆವಲ ಓZ 310.000 ದಷ್ಟಾಗುತ್ತದೆ. (ಎಂ.ಎಸ್.ಪಿ.)

ಭೌತಲಕ್ಷಣ; ನ್ಯೂಜೀಲೆಂಡಿನ ಪ್ರತ್ಯೇಕತೆ ವಿಶಿಷ್ಟವಾದ್ದು. ಇದರ ಮತ್ತು ಆಸ್ಟ್ರೇಲಿಯದ ಬಂದರುಗಳ ನಡುವಿನ ತೀರ ಸಮೀಪದ ಸಮುದ್ರಮಾರ್ಗ ಸುಮಾರು 1.920ಕಿಮೀ. ಉದ್ದವಾಗಿದೆ. ಇದರ ಮತ್ತು ಚಿಲಿ ತೀರದ ನಡುವೆ ಸುಮಾರು 6.400ಕಿಮೀ ದೂರಸಮುದ್ರವಿದೆ. ಉತ್ತರಕ್ಕೆ ಪಾಲಿನೇಷಿಯದ ವರೆಗೂ ದಕ್ಷಿಣ ದಕ್ಷಿಣದ್ರುವದವರೆಗೂ ಬರೀನೀರು. ನಡುನಡುವೆ ಸಿಂಪಡಿಸಿದಂತೆ ದ್ವೀಪಗಳು. ಗುಡ್ಡಗಾಡು ಇಲ್ಲವೇ ಪರ್ವತಮಯ ಒಳನಾಡು ಮತ್ತು ತೀರ ಕಡಿದಾದ ತೀರಗಳನ್ನು ಹೊಂದಿರುವ ಈ ದೇಶ ಒಮ್ಮೆಲೇ ನೀರಿನೋಳಗಿಂದ ಎದ್ದುಕಾಣುತ್ತದೆ. ಪ್ರಪಾತ ಇಲ್ಲವೇ ಮರಳು ದಿಣ್ಣೆಗಳ ಹಿನ್ನಲೆಯಿರುವ ಡೊಂಕುಡೊಂಕಾದ ಕಡಲ ತೀರವಿದೆ. ಗುಡ್ಡಗಳ ಚಾಚುಗಳು ಸಮುದ್ರವನ್ನು ಹೊಗದಿರುವ ಎಡೆಗಳಲ್ಲಿ ಅವು ಸಮುದ್ರದಿಂದ ಅನತಿ ದೂರದಲ್ಲೆ ಇವೆ. ಪೂರ್ವದ ತೀರದಲ್ಲಂತೂ ಅವು ತಿಳಿ ವಾತಾವರಣದಲ್ಲಿ ಎಷ್ಟು ನಿಚ್ಚಳವಾಗಿ ಕಾಣವುದೆಂದರೆ, ನ್ಯೂಜೀಲೆಂಡ್ ದೇಶ ಸಮುದ್ರದಲ್ಲಿ ಅರ್ಧ ಮುಳುಗಿರುವ ಅಲ್ಲಲ್ಲಿ ತುಂಡಾಗಿರುವ, ಕಡಿದಾದ, ಮನೋಹರವಾದ ತಪ್ಪಲು ಸರಣಿಯಂತೆ ಕಾಣುತ್ತದೆ. ಪರ್ವತಗಳು ಸಮುದ್ರವನ್ನು ತಲುಪುವಲ್ಲೂ ಉದ್ದನೆಯ ತೀರದ ತೋಳುಗಳು ಪರ್ವತ ಶ್ರೇಣಿಗಳನ್ನು ಬಳಸುವಲ್ಲೂ ಕರಾವಳಿಯ ದೃಶ್ಯ ಅತ್ಯಂತ ಮನೋಹರವಾದ್ದು, ನೈಋತ್ಯದ ಜಲಸಂಧಿಗಳ ಭಾಗ ಮೃದು ಸೌಂದರ್ಯ ವಿಲಾಸದಿಂದ ಕೂಡಿದೆ.

ಪರ್ವತಗಳು: ನ್ಯೂಜಿûೀಲೆಂಡ್ ಪರ್ವತಮಯವಾದ ದೇಶ. ನಾರ್ತ ಮತ್ತು ಸೌತ್ ದ್ವೀಪಗಳನ್ನು ಗಿರಿಶ್ರೇಣಿಗಳೂ ಪರ್ವತಗಳೂ ಅರ್ಧಕ್ಕೆ ಸೀಳಿವೆ: ನಾರ್ತ್‍ದ್ವೀಪದ ಮೇಲ್ಮೈಯ ಸುಮಾರು 1/10 ಭಾಗವನ್ನು ಆವರಿಸಿವೆ ಎಂಗ್ಮಾಂಟ್ (2.518.ಮೀ) ರೂವಪೇಹೂ (2.797ಮೀ) ಎನ್ಗಾವುರಹೋಯಿ (2.291ಮೀ) ಮತ್ತು ಟಾಂಗರಿರೋ (1.968ಮೀ) ಅಗ್ನಿಪರ್ವತಗಳನ್ನು ಬಿಟ್ಟರೆ ಅವು ಎಲ್ಲೂ1.829 ಮಿ,ಗಿಂತ ಎತ್ತರವಾಗಿಲ್ಲ. ಈ ನಾಲ್ಕರಲ್ಲಿ ಮೊದಲನೆಯದು ತಣ್ಣಗಾಗಿದೆ. ಇಲ್ಲಿ ಜ್ವಾಲಾಮುಖಿಗಳಿಗೆ ನಿಕಟ ಸಂಬಂಧ ಇರುವ ಅನೇಕ ಬಿಸಿ ನೀರಿನ ಚಿಲುವೆಗಳು ಬುಗ್ಗೆಗಳು ಇವೆ, ನಾರ್ತದ್ವೀಪಕ್ಕಿಂತ ಸೌತ್ ದ್ವೀಪ ಹೆಚ್ಚು ಪರ್ವತಮಯವಾದ್ದು, ಅದರ ಉದ್ದಕ್ಕೂ ಸೌತ್ ಆಲ್ಟ್ಸ್ ಶ್ರೇಣಿಗಳು ಹಬ್ಬಿವೆ, ಅದರಲ್ಲಿ 3.048 ಮೀ. ಮತ್ತು ಅದಕ್ಕಿಂತ ಹೆಚ್ಚಿನ ಅತ್ಯುನ್ನತ ಶಿಖರ ಕುಕ್ (3.764ಮೀ) ದಕ್ಷಿಣ ಆಲ್ಟ್ಸನಲ್ಲಿ ಅನೇಕ ನೀರ್ಗಲ್ಲು ನದಿಗಳಿವೆ. ಟಾಸ್ಮನ್ ನೀರ್ಗಲ್ಲು ನದಿ ಅತ್ಯಂತ ದೊಡ್ಡದು. ಎದು 29ಕಿಮೀ ಉದ್ದವಾಗಿಯೂ 2ಕಿಮೀ ಅಗಲವಾಗಿಯೂ ಇದೆ. ನೀರ್ಗಲ್ಲು ನದಿಗಳು ವಿದ್ಯುತ್ತಿನ ಉತ್ಪಾದನೆಗೆ ಉಪಯೋಗವಾಗುವ ನದಿಗಳಿಗೆ ಸದಾ ನೀರನ್ನು ಒದಗಿಸುತ್ತವೆ. ಅಲ್ಲದೆ ಇವು ಪ್ರವಾಸಿ ಆಕರ್ಷಣಗಳು.

ನ್ಯೂಜಿûೀಲೆಂಡಿನ ಅಧಿಕ ಸಂಖ್ಯೆಯ ನದಿಗಳ ಪೈಕಿ ರಭಸದಿಂದ ಹರಿಯುವ ಶೀತಲವಾದ ಮತ್ತು ತಿಳಿನೀರಿನ ನಿರ್ಝರಗಳೇ ಹೆಚ್ಚು. ಬೇಸಿಗೆಯಲ್ಲಿ ನೀರು ಕಡಿಮೆಯಿದ್ದು ಗಾಢವಾಗಿರುವ ಅವಕ್ಕೆ ಮಳೆಗಾಲದಲ್ಲಿ ನೆಗಸು ಬರುತ್ತವೆ. ಕೆಲವು ನದಿಗಳು ಮುಖಿಪ್ರದೇಶದಲ್ಲಿ ಮಾತ್ರ ಯಾನಯೋಗ್ಯವಾಗಿವೆ. ಉಳಿದವು ಎಲ್ಲೂ ಯಾನಯೋಗ್ಯವಾಗಿಲ್ಲ. ಅವು ವಿದ್ಯುತ್ತಿನ ಉತ್ಪಾದನೆಗೆ ಅನುಕೂಲವಾಗಿವೆ. ಕುಕ್ ಜಲಸಂಧಿಯನ್ನು ಸೇರುವ ವಾಂಗನೂಯೀ (288ಕಿಮೀ.) ರಾಂಗಿಟೈಕೀ (192ಕಿಮೀ.) ಮತ್ತು ವಾನವಾಟೂ (181ಕಿಮೀ.), ಟಾಸ್ಮನ್ ಸಮುದ್ರವನ್ನು ಸೇರುವ ವೈಕಾಟೋ (422 ಕಿಮೀ.) ಇವು ನಾರ್ತ ದ್ವೀಪದ ದೊಡ್ಡ ನದಿಗಳು. ಸೌತ್ ದ್ವೀಪದಲ್ಲಿ ಕುಕ್ ಜಲಸಂಧಿಯನ್ನು ಸೇರುವ ನದಿಗಳ ಪೈಕಿ ಮುಖ್ಯವಾದವು ವೈರಾವು (160ಕಿಮೀ.) ಕ್ಲೂತ (320 ಕಿಮೀ,), ವೈಟಾಕೀ (208 ಕಿಮೀ.), ಕ್ಲ್ಯಾರೆನ್ಸ್ (208 ಕಿಮೀ.), ಟೈಯೆರೀ (304 ಕಿಮೀ.). ಪೋವೋ ಜಲಸಂಧಿಯನ್ನು ಸೇರುವ ದೊಡ್ಡ ನದಿಗಳಲ್ಲಿ ಮುಖ್ಯವಾದವು ಮಟಾವುರ (190ಕಿಮೀ) ಮತ್ತು ವೈಯಾವು (216ಕಿಮೀ.) ಟಾಸ್ಮನ್ ಸಮುದ್ರವನ್ನು ಸೇರುವ ನದಿ ಬುಲ್ಲರ್ (176ಕಿಮೀ.). ಹೆಚ್ಚಾಗಿ ಎಲ್ಲ ನದಿಗಳಿಗೂ ಮುಖದ ಹತ್ತಿರ ಒಡ್ಡುಗಳನ್ನು ಹಾಕಲಾಗಿದೆ. ಹೊರಗಡೆಯಿಂದ ತಂದು ಬಿಡಲಾದ ಮೀನುಗಳು ಅನೇಕ ತೊರೆಗಳಲ್ಲಿ ತುಂಬಿವೆ.

ಎರಡೂ ಮುಖ್ಯದ್ವೀಪಗಳಲ್ಲಿ ಅನೇಕ ಸರೋವರಗಳುಂಟು. ಅವುಗಳಲ್ಲಿ ದೊಡ್ಡವು ಸಾಮಾನ್ಯವಾಗಿ ಎತ್ತರ ಪ್ರದೇಶಗಳಲ್ಲಿವೆ. ನಾರ್ತ್‍ದ್ವೀಪದ ಅತ್ಯಂತ ದೊಡ್ಡ ಸರೋವರ ಟಾವುಪೋ (599ಚ.ಕಿಮೀ.)

ವಾಯುಗುಣ: ದಕ್ಷಿಣೋತ್ತರವಾಗಿ 1.600 ಕಿಮೀ. ದೂರ ಹಬ್ಬಿರುವ ನ್ಯೂಜಿûೀಲೆಂಡಿನ ವಾಯುಗುಣದಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿರುತ್ತವೆ. ಒಟ್ಟಿನಲ್ಲಿ ಇಲ್ಲಿಯದು ಸಾಗರಿಕ ವಾಯುಗುಣ. ಪೂರ್ವಕ್ಕಿಂತ ಪಶ್ಚಿಮದ ಕಡೆ ಹೆಚ್ಚು ಮಳೆಯಾಗುತ್ತದೆ. ನಾರ್ತ ದ್ವೀಪದ ತೀರ ಉತ್ತರ ಭಾಗದಲ್ಲಿ ಉಷ್ಣವಲಯದ್ದಕ್ಕೆ ಹತ್ತಿರವಾದ ವಾಯುಗುಣ ಇರುತ್ತವೆ. ಸೌತ್ ದ್ವೀಪದ ಎತ್ತರ ಪ್ರದೇಶವನ್ನು ಚಳಿಗಾಲದಲ್ಲಿ ದಪ್ಪನೆಯ ಹಿಮ ಮುಸುಕುತ್ತದೆ. ಪಶ್ಚಿಮ ಮಾರುತಕ್ಕೆ ಅಡ್ಡಲಾಗಿ ಹಬ್ಬಿರುವ ಪರ್ವತಶ್ರೇಣಿಗಳಿಂದಾಗಿ ದಕ್ಷಿಣೋತ್ತರವಾಗಿ ಇರುವುದಕ್ಕಿಂತ ಪೂರ್ವ-ಪಶ್ಚಿಮವಾಗಿ ವಾಯುಗುಣದ ವ್ಯತ್ಯಾಸ ಹೆಚ್ಚು. ಸುತ್ತಲೂ ಹಬ್ಬಿರುವ ವಿಶಾಲ ಸಾಗರದ ಪ್ರಭಾವ ನ್ಯೂಜೀಲೆಂಡಿನ ಮೇಲೆ ಅಧಿಕವಾಗಿದೆ.

ಗಾಳಿಗೆ ಎದುರಾದ ಪರ್ವತ ಪಕ್ಕದ ಪ್ರದೇಶದಲ್ಲಿ ಮಳೆ ಅಧಿಕ. ಮಾಧ್ಯವಾರ್ಷಿಕ ಮಳೆ ಮಧ್ಯ ಓಟಾಗೋದಲ್ಲಿ 330ಮಿಮೀ. ನಿಂದ ದಕ್ಷಿಣ ಆಲ್ಟ್ಸ್‍ನಲ್ಲಿ 7.600ಮಿಮೀ. ವರೆಗೆ ವ್ಯತ್ಯಾಸವಾಗುತ್ತದೆ, ಸಮಶೀತೊಷ್ಣ ವಲಯದಲ್ಲಿ ಸಾಮಾನ್ಯವಾಗಿ ಆಗುವಂತೆ ಇಡೀ ದೇಶದಲ್ಲಿ ಮಳೆಯಾಗುತ್ತದೆ. ವರ್ಷವೆಲ್ಲ ಮಳೆಯ ಹಂಚಿಕೆಯಾಗಿದೆ : ವಾರ್ಷಿಕ ಸರಾಸರಿ 635-1.525 ಮಿಮೀ. ಉತ್ತರದಲ್ಲಿ ಮಾಧ್ಯ ಉಷ್ಣತೆ ಸಮುದ್ರಮಟ್ಟದಲ್ಲಿ 15ಛಿ ಕುಕ್ ಜಲಸಂಧಿಯ ಬಳಿ 12ಛಿ ದಕ್ಷಿಣ ತುದಿಯಲ್ಲಿ 9ಛಿ ಅತಿರೇಕಗಳು ಕಡಿಮೆ. ಪರ್ವತಪ್ರದೇಶದಲ್ಲಿ ಮಾತ್ರ ಹಿಮ ಬೀಳುತ್ತದೆ. ನ್ಯೂಜಿûೀಲೆಂಡಿನಲ್ಲಿ ಸಾಮಾನ್ಯವಾಗಿ ಬಿಸಿಲಿಗೆ ಕೊರತೆಯಿಲ್ಲ.

ಸಸ್ಯವರ್ಗ: ನ್ಯೂಜಿûೀಲೆಂಡಿನ ಸಸ್ಯವರ್ಗ ಸಮಶೀತೋಷ್ಣವಲಯದ ಮಿಶ್ರ ನಿತ್ಯಹಸಿರುಕಾಡು. ಇದು ಬಹುಶಃ ಇಲ್ಲಿಯ ಮೂರನೆಯ ಎರಡು ಭಾಗದಷ್ಟು ಪ್ರದೇಶವನ್ನು ಆವರಿಸಿತ್ತು. ಬಹು ದೀರ್ಘಕಾಲ ಈ ಪ್ರದೇಶ ಪ್ರತ್ಯೇಕವಾಗಿದ್ದುದರಿಂದ ಪ್ರಪಂಚದ ಇತರ ಭಾಗಗಳಲ್ಲಿ ಇಲ್ಲದ ಸಸ್ಯಗಳ ಅಭಿವೃದ್ದಿಗೆ ಇಲ್ಲಿ ಪ್ರೋತ್ಸಾಹ ದೊರಕಿದೆ. ಜನವಾಸಯೋಗ್ಯವಲ್ಲದ ಪ್ರದೇಶಗಳಲ್ಲಿ ಉದ್ಯಾನಗಳಲ್ಲೂ ರಕ್ಷಿತ ಅರಣ್ಯಗಳಲ್ಲೂ ಪೊದೆ ಜಾತಿಯ ಸಸ್ಯಗಳು ಈಗ ಉಳಿದಿವೆ. ದಕ್ಷಿಣದ ಪಶ್ಚಿಮ ತೀರದಲ್ಲಿಯ ಮಿಶ್ರ ಅರಣ್ಯಗಳು ಮರಮುಟ್ಟುಗಳಿಗೆ ಉಪಯುಕ್ತವಾಗಿವೆ. ಪರ್ವತ ಶ್ರೇಣಿಗಳಲ್ಲಿ ಉದ್ದಕ್ಕೂ ತೈಲಪರ್ನಿ ಮರಗಳಿವೆ. ಐರೋಪ್ಯ ವಲಸೆಗಾರರಿಂದ ಇಲ್ಲಿಯ ನೈಸರ್ಗಿಕ ಸಸ್ಯವರ್ಗ ಬಹಳವಟ್ಟಿಗೆ ನಷ್ಟವಾಗಿದೆ. ಹೊಸದಾಗಿ ಈಗ ತೋಪುಗಳಲ್ಲಿ ಮರಗಳನ್ನು ಬೆಳೆಸಲಾಗುತ್ತಿದೆ. ಕ್ಯಾಲಿಫೋರ್ನಿಯದ ಜಾತಿಯ ತೈಲಪರ್ನಿ ಇಲ್ಲಿಗೆ ಹೊಂದಿಕೊಂಡಿದೆ. ಯೂರೋಪಿನ ಹಲವು ಜಾತಿಯ ಮರಗಳನ್ನು ಇಲ್ಲಿ ಅಲಂಕಾರಕ್ಕಾಗಿ ಇಲ್ಲವೇ ನಗ್ನೀಕರಣವನ್ನು ತಡೆಯುವುದಕ್ಕಾಗಿ ಬೆಳಯಲಾಗಿದೆ.

ಪ್ರಾಣಿವರ್ಗ : ನ್ಯೂಜೀಲೆಂಡ್ ದೀರ್ಘಕಾಲ ಪ್ರತ್ಯೇಕವಾಗಿದ್ದುದರಿಂದ ಇಲ್ಲಿ ಉನ್ನತ ಪ್ರಾಣಿಜೀವನ ಇರಲಿಲ್ಲ. ಮಾವೊರಿ ಜನ ಇಲ್ಲಿಗೆ ಬಂದಾಗ (1.000) ವರ್ಷಗಳಿಗೂ ಹಿಂದೆ) ಇಲ್ಲಿ ಎರಡು ಬಗೆಯ ಹಲ್ಲಿಗಳು ಇದ್ದುವು. ಗೆಕೊ ಎಂಬುದು ಮೊಟ್ಟೆಯ ಬದಲು ನೇರವಾಯೇ ಮರಿಯಾಗುತ್ತಿತ್ತು. ಟುವಾಟರ ಎಂಬುದು ಕೊಕ್ಕಿನಂತೆ ತಲೆಯುಳ್ಳ ಸರೀಸೃಪ, ಕೆಲವು ಆದಿಮ ಕಪ್ಪೆಗಳು ಎರಡು ಬಗೆಯ ಬಾವಲಿಗಳು ಇದ್ದುವು. ಇವು ದೂರದ ದ್ವೀಪಗಳಲ್ಲಿ ಹಾಗೂ ಒಳನಾಡಿನ ಜನ ದೂರ ಪ್ರದೇಶಗಳಲ್ಲಿ ಅಪರೂಪವಾಗಿ ಈಗಲೂ ಇವೆ. ಯುರೋಪಿನವರು ಸಾಕುಪ್ರಾಣಿಗಳೊಂದಿಗೆ ಕೆಂಪು ಜಿಂಕೆ, ಒಪಾಸಮ್ ಮುಂತಾದವನ್ನೂ ಇಲ್ಲಿಗೆ ತಂದಿದ್ದಾರೆ. ಒಪಾಸಮ್‍ಗಳ ಸಂಖ್ಯೆ ಅತಿಯಾಗಿ ಹೆಚ್ಚಿದೆ. ಮೊಲಗಳ ಸಂಖ್ಯೆ ಯನ್ನು ಹಿಡಿತದಲ್ಲಿ ಇಡಲಾಗಿದೆ.

ನ್ಯೂಜಿûೀಲೆಂಡಿನಲ್ಲಿ ಪರಭಕ್ಷಕ ಮೃಗಗಳು ಇಲ್ಲದ್ದರಿಂದ ಇಲ್ಲಿ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿ ಹೊಂದಿದುವು. ಹಾರಲಾರದ ಹಲವು ಬಗೆಯ ಹಕ್ಕಿಗಳು ಇಲ್ಲಿವೆ. ಇಂಥ ಪಕ್ಷಿಗಳ ಪೈಕಿ ಅತ್ಯಂತ ದೊಡ್ಡದಾಗಿದ್ದ ಮೋವಾ ಈಗ ನಷ್ಟವಂಶಿ. ಕಿವಿ ಇನ್ನೂ ಉಳಿದಿದೆ. ಅದರೆ ಇವು ಜನದೂರವಾದ ಪೊದೆ ಪ್ರದೇಶಗಳಲ್ಲಿ ಮಾತ್ರ ಇದೆ. ವೇಕಾ ಮತ್ತು ನೊಟೋರ್ನಿಸ್ ಇಲ್ಲಿಗೆ ಬಂದ ಮೇಲೆ ಹಾರುವ ಸಾಮಥ್ರ್ಯ ಕಳೆದುಕೊಂಡುವು. ವೇಕಾ ಜಾತಿಯ ಪುಕೇಕೊ ಈ ಸಾಮಥ್ರ್ಯ ಕಳೆದುಕೊಳ್ಳುತ್ತಿದೆ. ಉಷ್ಣ ಹಾಗೂ ಶೀತೋದಕ ಪ್ರವಾಹಗಳು ಈ ದೇಶದ ಬಳಿ ಸಂಧಿಸುವುದು ಅನೇಕ ಬಗೆಯ ಮೀನುಗಳ ವೃದ್ಧಿಗೆ ಸಹಾಯಕವಾಗಿದೆ.

ಮಾನವ ಭೂಗೋಳ

ಜನಜೀವನ : ನ್ಯೂಜಿûೀಲೆಂಡಿನ ನಿವಾಸಿಗಳಲ್ಲಿ ಸೇಕಡ 91ರಷ್ಟು ಮಂದಿ ಐರೋಪ್ಯ ಮೂಲಗಳವರು. ಸೇಕಡ 8ರಷ್ಟು ಜನ ಮಾವೊರಿ ಮೂಲವಾಸಿಗಳು. ಉಳಿದವರು ಪೆಸಿಫಿಕ್ ಸಾಗರ ದ್ವೀಪವಾಸಿಗಳು. ಇಲ್ಲಿರುವ ಯೂರೋಪಿಯನ್ ಮೂಲದವರ ಪೈಕಿ ಬ್ರಿಟಿಷ್ ಮೂಲದವರಲ್ಲದೆ ಡಾಲ್ಮೇಷಿಯನರು, ಗ್ರೀಕ್ ಮತ್ತು ಇಟಾಲಿಯನ್ ಮೀನುಗಾರರು, ಡೇನ್ ಕೃಷಿಕಾರರು, ಪ್ರಥಮ ಮತ್ತು ದ್ವಿತೀಯ ಮಹಾಯುದ್ಧಗಳ ನಡುವಣ ಕಾಲದಲ್ಲಿ ಬಂದು ನೆಲಸಿದ ಮಧ್ಯ ಯೂರೋಪಿನವರು, ಅನಂತರ ವಲಸೆ ಬಂದು ಡಚ್ಚರು ಇದ್ದಾರೆ. ಚೀನೀ ತೋಟಗಾರರೂ ಕಡಿಮೆ ಸಂಖ್ಯೆಯಲ್ಲಿ ಭಾರತೀಯರೂ ಇಲ್ಲಿದ್ದಾರೆ. ಮಾವೊರಿಗಳು ಪಾಲಿನೇಷ್ಯದಿಂದ ಬಂದವರು. 19ನೆಯ ಶತಮಾನದ ಪ್ರಾರಂಭದಲ್ಲಿ ಅವರ ಸಂಖ್ಯೆ 2,00,000 ದಷ್ಟಿತ್ತು. ಕಲಹಗಳಿಂದಾಗಿಯೂ ಐರೋಪ್ಯರು ತಮ್ಮೊಡನೆ ತಂದ ರೋಗಗಳ ಫಲವಾಗಿಯೂ ಆ ಶತಮಾನದ ಅಂತ್ಯದ ವೇಳೆಗೆ ಮಾವೊರಿಗಳ ಸಂಖ್ಯೆ 40,000ಕ್ಕೆ ಇಳಿದಿತ್ತು. ಇತ್ತೀಚೆಗೆ ಮಾವೋರಿಗಳ ಸಂಖ್ಯೆ ವರ್ಷಕ್ಕೆ ಸೇಕಡ 3ರಂತೆ ಹೆಚ್ಚುತ್ತಿದೆ. 1975 ರಲ್ಲಿ 2,49,000 ಮಾವೊರಿಗಳಿದ್ದರು.

ಭಾಷೆ : ನ್ಯೂಜಿûೀಲೆಂಡ್‍ನ ಮುಖ್ಯ ಭಾಷೆ ಇಂಗ್ಲಿಷ್. ಯೂರೋಪಿನಿಂದ ವಲಸೆ ಬಂದವರು ಬಹು ಬೇಗ ತಮ್ಮ ಭಾಷೆಯನ್ನು ಬಿಟ್ಟು ಇಂಗ್ಲಿಷಿಗೆ ಹೊಂದಿಕೊಂಡಿದ್ದಾರೆ. ಗ್ರೀಕರು. ಚೀನೀಯರು ಮತ್ತು ಭಾರತೀಯರು ತಮ್ಮ ಮಕ್ಕಳನ್ನು ದ್ವಿಭಾಷೀಯರನ್ನಾಗಿಡಲು ಯತ್ನಿಸುತ್ತಾರೆ. ಮಾವೊರಿಗಳದು ಮಾವೊರಿ ಭಾಷೆ. ಅವರು ಸಾಮಾನ್ಯವಾಗಿ ದ್ವಿಭಾಷೀಯರು. ಮಾವೊರಿ ಮಕ್ಕಳು ಇಂಗ್ಲಿಷನ್ನು ಸುಧಾರಿಸಲು ಬಹಳ ಪ್ರಯತ್ನ ನಡೆಯುತ್ತಿದೆ.

ಧರ್ಮ : ರಾಜ್ಯದಲ್ಲಿ ಕ್ರೈಸ್ತಮತ ಪ್ರಧಾನ. ಇಲ್ಲಿಯ ನಿವಾಸಿಗಳ ಪೈಕಿ ಸುಮಾರು ಸೇ, 80ರಷ್ಟು ಜನರು ಪ್ರೆಸ್ಟಿಟೇರಿಯನ್. ಆಂಗ್ಲಿಕನ್, ರೋಮನ್ ಕ್ಯಾತೊಲಿಕ್ ಮತ್ತು ವೆಂತಾಡಿಸ್ಟ್ ಪಂಥಗಳಿಗೆ ಸೇರಿದವರು. ಊಳಿದವರು ಪ್ರಾಟೆಸ್ಟಂಟರು. ಪೌರಸ್ತ್ಯ ಸಂಪ್ರದಾಯಬದ್ಧ ಚರ್ಚಿನವರು. ಯೆಹೂದ್ಯರು ಹಾಗೂ ಮಾವೊರಿ ಕ್ರೈಸ್ತರು.

ಆರ್ಥಿಕತೆ: ನ್ಯೂಜಿûೀಲೆಂಡಿನ ಜನರ ಜೀವನಮಟ್ಟ ಹೆಚ್ಚಿನದು. ತಲಾ ವರಮಾನದ ದೃಷ್ಟಿಯಿಂದ ಪ್ರಪಂಚದಲ್ಲಿ ಇದರ ಸ್ಥಾನ 10ನೆಯದು. ಇಲ್ಲಿ ನಿರುದ್ಯೋಗ ಸಮಸ್ಯೆಯಿಲ್ಲ. ಕೃಷಿ ಉತ್ಪನ್ನಗಳ ರಫ್ತಿನಿಂದ ಹೆಚ್ಚಿನ ವರಮಾನ ಸಂಪಾದನೆಯಾಗುತ್ತಿದೆ. ಸೇಕಡ 70ಕ್ಕೂ ಹೆಚ್ಚಿನ ಅಂಶ ಉಣ್ಣೆ, ಮಾಂಸ, ಹಾಲು ಮತ್ತು ಹೈನು ಪದಾರ್ಥಗಳ ರಫ್ತಿನಿಂದ ಬರುತ್ತದೆ. ಹಾಲಿನಿಂದ ತಯಾರಾದ ಸಾಮಗ್ರಿಗಳ ರಫ್ತಿನಲ್ಲಿ ನ್ಯೂಜಿûೀಲೆಂಡ್ ಪ್ರಪಂಚದ ಮೊದಲನೆಯದು, ಉಣ್ಣೆಯ ರಫ್ತಿನಲ್ಲಿ ಮೂರನೆಯದು. ಇಲ್ಲಿ ಜನಸಂಖ್ಯೆ ಕಡಿಮೆಯಾಗಿರುವುದೂ ಪ್ರಪಂಚದ ಪ್ರಮುಖ ವಾಣಿಜ್ಯ ಕೇಂದ್ರಗಳಿಂದ ಇದು ದೂರ ಇರುವುದೂ ಈ ದೇಶದ ಅರ್ಥಿಕ ಅಭಿವೃದ್ಧಿಗೆ ಇರುವ ತೊಡಕುಗಳು.

ಕೃಷಿ : ಸೇಕಡ 12ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಕಣಿವೆ ಪ್ರದೇಶದಲ್ಲಿ ಗೋದಿ, ಓಟ್ಸ್, ಬಾರ್ಲಿ, ಹೊಗೆಸೊಪ್ಪು, ಹಣ್ಣು ಬೆಳೆಯುತ್ತಾರೆ. ಮೊದಲಿನಿಂದಲೂ ಪಶುಸಂಪತ್ತು ಉಳಿದೆಲ್ಲ ಸಂಪತ್ತಿಗಿಂತ ಹೆಚ್ಚು ಮಹತ್ತ್ವದ್ದಾಗಿದೆ. ಇಂದಿಗೂ ಅದೇ ಪ್ರವೃತ್ತಿ ಮುಂದುವರಿದಿದೆ. ಪೂರ್ವಾರ್ಧಗೋಳದಿಂದ ತಂದ ಸಾಧುಪ್ರಾಣಿಗಳು ನ್ಯೂಜಿûೀಲೆಂಡಿಗೆ ಚೆನ್ನಾಗಿ ಹೊಂದಿಕೊಂಡಿವೆ. ಅವುಗಳ ಸಂಖ್ಯೆ ಹೆಚ್ಚುತ್ತಿದೆ. ಅವು ಉಣ್ಣೆ, ಬೆಣ್ಣೆ, ಗಿಣ್ಣು, ಮಾಂಸ ಒದಗಿಸಿ ದೇಶದ ಗ್ರಾಮ ಕೈಗಾರಿಕೆಗೆ ಮುಖ್ಯಾಧಾರವಾಗಿವೆ. ರಾಷ್ಟ್ರೀಯ ವರಮಾನದ ಸೇಕಡ 18ರಷ್ಟು ಪ್ರಾಪ್ತವಾಗುವುದು ಈ ಪ್ರಾಥಮಿಕ ಕೈಗಾರಿಕೆಯಿಂದ. ವರಮಾನದ ಸೇಕಡ 90ರಷ್ಟು ಬರುವುದು ಕೃಷಿ ಉತ್ಪನ್ನದಿಂದ.

ಖನಿಜಗಳು : ಬಹುತೇಕ ಎಲ್ಲ ಬಗೆಯ ಲೋಹರೂಪದ ಮತ್ತು ಇತರ ಬಗೆಯ ಖನಿಜಗಳು ನ್ಯೂಜಿûೀಲೆಂಡ್‍ನಲ್ಲಿ ದೊರಕುವುವಾದರೂ ವಾಣಿಜ್ಯ ದೃಷ್ಟಿಯಿಂದ ಹೆಚ್ಚಿನ ಪರಿಮಾಣಗಳಲ್ಲಿ ಸಿಗುವ ಖನಿಜಗಳು ಕಡಿಮೆ. ಪ್ರಾರಂಭದ ದಿನಗಳಲ್ಲಿ ಬಂಗಾರ ಹೆಚ್ಚಾಗಿ ರಫ್ತಾಗುತ್ತಿತ್ತು. ಈಗ ಅದರ ಉತ್ಪಾದನೆ ಇಳಿದಿದೆ. ಕಲ್ಲಿದ್ದಲು ಗಮನಾರ್ಹವಾಗಿ ದೊರಕುತ್ತದೆ. ಸ್ಥಳೀಯ ಉಕ್ಕಿನ ಕಾರ್ಖಾನೆಗಾಗಿ ಮತ್ತು ರಫ್ತಿಗಾಗಿ ಕಬ್ಬಿಣ ಅದುರಿನ ಉತ್ಪಾದನೆಯಾಗುತ್ತದೆ. ಮ್ಯಾಂಗನೀಸ್, ಟಂಗ್‍ಸ್ಟನ್, ಲಿಗ್ನೈಟ್ ಇವು ಇತರ ಖನಿಜಗಳು ಕಟ್ಟಡಕ್ಕೆ ಬೇಕಾದ ಖನಿಜಗಳನ್ನೂ ಹೇರಳ ಪ್ರಮಾಣದಲ್ಲಿ ಅಗೆಯಲಾಗುತ್ತಿದೆ. ಈಚೆಗೆ ಪ್ರಾರಂಭವಾಗಿರುವ ನೈಸರ್ಗಿಕ ಅನಿಲದ ಉತ್ಪಾದನೆ ಅಶಾದಾಯಕವಾಗಿದೆ.

ವಿದ್ಯುಚ್ಛಕ್ತಿ : ಜಲಶಕ್ತಿಯಿಂದ ವಿದ್ಯುತ್ತಿನ ಉತ್ಪಾದನೆಗೆ ದೇಶದಲ್ಲಿ ಬೇಕಾದಷ್ಟು ಸೌಕರ್ಯವಿದೆ. ವಿದ್ಯುತ್ ಕೇಂದ್ರಗಳು ದೇಶಕ್ಕೆ ಅಗತ್ಯವಾದ ವಿದ್ಯುಚ್ಛಕ್ತಿಯನ್ನು ಕಡಿಮೆ ಖರ್ಚಿನಲ್ಲಿ ಒದಗಿಸುತ್ತವೆ. ಎರಡೂ ಮುಖ್ಯ ದ್ವೀಪಗಳ ನಡುವೆ ನೇರ ವಿದ್ಯುತ್ ಹೊರಜಿ ಹಾಕಲಾಗಿದೆ. ಇದರಿಂದ ಸೌತ್ ದ್ವೀಪದಲ್ಲಿ ಮಿಕ್ಕಿದ್ದು ಹೆಚ್ಚು ಜನವಸತಿ ಹಾಗೂ ಕೈಗಾರಿಕೆಗಳಿರುವ ನಾರ್ತ್ ದ್ವೀಪದಲ್ಲಿ ಉಪಯೋಗವಾಗುತ್ತದೆ. ದೇಶದ ಇದುವರೆಗಿನ ಅಭಿವೃದ್ಧಿಯಲ್ಲಿ ವಿದ್ಯುತ್ತು ಮಹತ್ತ್ವದ ಪಾತ್ರ ವಹಿಸಿದೆ; ಜನರ ಉನ್ನತ ಮಟ್ಟದ ಸುಖಜೀವನಕ್ಕೆ ಸೌಕರ್ಯಗಳನ್ನು ಒದಗಿಸಿದೆ. ಅಲ್ಯೂಮಿನಿಯಮ್ ಕಾರ್ಖಾನೆಯೇ ಮುಂತಾದ ನಾನಾ ಕೈಗಾರಿಕೆಗಳ ಅಭಿವೃದ್ಧಿಗೆ ಇದು ಸಹಾಯಕವಾಗಿದೆ.

ಕೈಗಾರಿಕೆ : ಹಾಲು, ಹೈನ, ಮಾಂಸ ಶೈತ್ಯೀಕರಣ. ಮರದ ಪದಾರ್ಥಗಳು. ಕಾರಿನ ಬಿಡಿ ಭಾಗಗಳ ಜೋಡಣೆ, ಬಟ್ಟೆ, ಪಾದರಕ್ಷೆ, ಕಬ್ಬಿಣ ಸಾಮಾನು, ವಿದ್ಯುತ್ ಉಪಕರಣ, ಕಾಗದ ಮತ್ತು ತಿರುಳಿನ ತಯಾರಿಕೆ-ಇವು ಮುಖ್ಯ ಕೈಗಾರಿಕೆಗಳು . ಆಹಾರ ಸಂಸ್ಕರಣೆ ಅತ್ಯಂತ ದೊಡ್ಡ ಕೈಗಾರಿಕೆ. 1968ರಲ್ಲಿ ಮೊದಲನೆಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕೆಲಸ ಪ್ರಾರಂಭವಾಯಿತು. ದಕ್ಷಿಣ ದ್ವೀಪದ ಮಾನಾಪೌರಿ ಸರೋವರದಲ್ಲಿರುವ ದೊಡ್ಡ ಜಲವಿದ್ಯುತ್ ಯಂತ್ರಾಗಾರ 1971ರಲ್ಲಿ ಅಲ್ಯೂಮಿನಿಯಮ್ ಕಾರ್ಖಾನೆಗೆ ವಿದ್ಯುಚ್ಛಕ್ತಿಯನ್ನು ಒದಗಿಸಲಾರಂಭಿಸಿತು.

ಹಣಕಾಸು ಮತ್ತು ವಿದೇಶೀ ವ್ಯಾಪಾರ : ಎರಡು ಬ್ರಿಟಿಷ್ ಮತ್ತು ಎರಡು ಆಸ್ಟ್ರೇಲಿಯನ್ ಬ್ಯಾಂಕು ಸಂಸ್ಥೆಗಳಲ್ಲದೆ ಇಲ್ಲಿ ಒಂದು ಸರ್ಕಾರ ಬ್ಯಾಂಕು ಇದೆ. ಸರ್ಕಾರಿ ಬ್ಯಾಂಕಿಂಗ್ ಸಂಸ್ಥೆ ಅತ್ಯಂತದೊಡ್ಡದು. ಈ ಬ್ಯಾಂಕುಗಳು ದೇಶಾದ್ಯಂತ ಶಾಖೆಗಳನ್ನು ತೆರೆದಿವೆ. ಇವು ಮೊದಲಿನಿಂದಲೂ ವಿದೇಶಿ ವ್ಯಾಪಾರಕ್ಕೂ ಹಣ ಒದಗಿಸುತ್ತಿವೆ. ವಿದೇಶಿ ವ್ಯಾಪಾರದ ಪ್ರಾಮುಖ್ಯ ಹೆಚ್ಚಿನದು. ನ್ಯೂಜಿûೀಲೆಂಡಿನ ಉತ್ಪಾದನೆಯಲ್ಲಿ ರಫ್ತಾಗುವ ಸರಕಿನ ಪ್ರಮಾಣ ಅಧಿಕ. ಹಾಲು ಹೈನದ ಪದಾರ್ಥಗಳ ರಫ್ತು ಒಂದು ಸಹಕಾರೀ ಸಂಸ್ಥೆಯ ಮೂಲಕವೂ ಮಾಂಸದ ರಫ್ತು ವೈಯಕ್ತಿಕ ಸಂಸ್ಕರಣಕಾರರ ಮೂಲಕವೂ ಉಣ್ಣೆಯ ರಫ್ತು ಹರಾಜುದಾರರ ಮೂಲಕವೂ ನಡೆಯುತ್ತವೆ. ಅಮದು ವ್ಯಾಪಾರ ಸಗಟು ವ್ಯಾಪಾರಿಗಳ ಕೈಯಲ್ಲಿರುವುದಾದರೂ ನೇರವಾಗಿ ಅಮದು ಮಾಡಿಕೊಳ್ಳುವ ಕೈಗಾರಿಕೆಗಳ ಸಂಖ್ಯೆ ಹೆಚ್ಚುತ್ತಿದೆ. ಸಾರಿಗೆ : ದೇಶ ಪರ್ವತಮಯವಾಗಿರುವುದಾದರೂ ಜನ ವಾಸವಿರುವ ಪ್ರದೇಶಗಳಲ್ಲಿ ಸಾರಿಗೆ ಸಂಪರ್ಕಗಳಿಗೆ ಅಡಚಣೆಗಳೇನೂ ಇಲ್ಲ. ಗ್ರಾಮಾಂತರ ಜಿಲ್ಲೆಗಳಲ್ಲೂ ಒಳ್ಳೆಯ ರಸ್ತೆಗಳಿವೆ. ದೊಡ್ಡ ನಗರಗಳ ಸುತ್ತಮುತ್ತ ಆಧುನಿಕ ಬಾಟಾ ಮಾರ್ಗಗಳನ್ನು ನಿರ್ಮಿಸಲಾಗಿದೆ. ನಗರಗಳ ನಡುವೆ ಬಸ್ಸು ವ್ಯವಸ್ಥೆಯುಂಟು. ದುರ್ಗಮ ಪ್ರದೇಶದಲ್ಲಿ ಸಾರಿಗೆ ನಿಧಾನ. ರೈಲ್ವೆ ವ್ಯವಸ್ಥೆ ಸರ್ಕಾರದ ಒಡೆತನ ಹಾಗೂ ನಿರ್ವಹಣೆಯಲ್ಲಿದೆ. ರೈಲುದೋಣಿಯಿಂದಾಗಿ ಎರಡೂ ಮುಖ್ಯ ದ್ವೀಪಗಳ ನಡುವೆ ಸಂಪರ್ಕ ಏರ್ಪಟ್ಟಿದೆ. ಹೆಚ್ಚು ಕಡಿಮೆ ಎಲ್ಲ ನಗರಗಳಿಗೂ ಅನೇಕ ಪಟ್ಟಣಗಳಿಗೂ ರೈಲುಮಾರ್ಗಗಳುಂಟು. ಸುರಂಗಗಳು ಕಿರಿದಾಗಿರುವುದರಿಂದ ರೈಲು ಹಳಿಗಳ ನಡುವಿನ ಅಗಲ ಕಡಿಮೆ. ರೈಲು ಸಂಚಾರ ಬಹಳ ನಿಧಾನ ಸರಕುಗಳನ್ನು ಸುವ್ಯವಸ್ಥಿತವಾಗಿ ಸಾಗಿಸುವುದರಲ್ಲಿ ರೈಲ್ವೆಯ ಪಾತ್ರ ಪ್ರಮುಖವಾದದ್ದು. ಸರಕು ಸಾಗಣೆಯಲ್ಲಿ ರೈಲ್ವೆಯೊಂದಿಗೆ ರಸ್ತೆ ಸಾರಿಗೆ ಸ್ಪರ್ಧೆ ನಡಸದಂತೆ ನಿರ್ಬಂಧಗಳಿವೆ. ಪರ್ವತಪ್ರದೇಶವಾದ ನ್ಯೂಜೀಲೆಂಡಿನಲ್ಲಿ ವಿಮಾನ ಸಾರಿಗೆ ಬೆಳೆವಣಿಗೆ ವಿಶೇಷವಾಗಿ ಆಗಿದೆ. ಬಹುತೇಕ ಪ್ರಾಂತೀಯ ಪಟ್ಟಣಗಳಲ್ಲಿ ವಿಮಾನ ನಿಲ್ದಾಣಗಳುಂಟು. ಎಲ್ಲ ಪ್ರಮುಖ ಕೇಂದ್ರಗಳ ನಡುವೆ ಸುವ್ಯವಸ್ಥಿತ ವಿಮಾನ ಸಂಪರ್ಕವಿದೆ. ಆಕ್ಲೆಂಡ್ ಮತ್ತು ಕ್ರೈಸ್ಟ್‍ಚರ್ಚ್‍ಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ವೆಲ್ಲಿಂಗ್ಟನ್ನಿನಲ್ಲಿರುವುದು ಇವಕ್ಕಿಂತ ಚಿಕ್ಕದು. ವೆಲ್ಲಿಂಗ್‍ಟನ್, ಆಕ್ಲೆಂಡ್, ನೇಪಿಯರ್ ಇವು ನಾರ್ತ್ ದ್ವೀಪದ ಮುಖ್ಯ ಬಂದರುಗಳು. ಸೌತ್ ದ್ವೀಪದಲ್ಲಿ ಕ್ರೈಸ್ಟ್‍ಚರ್ಚ್, ಡನೀಡಿನ್ ಬಂದರುಗಳು ಮುಖ್ಯವಾದವು.

ಆರ್ಥಿಕ ನೀತಿ : ನ್ಯೂಜಿûೀಲೆಂಡಿನ ಅರ್ಥಿಕತೆಯಲ್ಲಿ ಹಿಂದಿನಿಂದಲೂ ಸರ್ಕಾರದ ಪಾತ್ರಪ್ರಧಾನವಾದ್ದು. ಇಲ್ಲಿ 1935ರಲ್ಲಿ ಕಾರ್ಮಿಕ ಸರ್ಕಾರ ಪ್ರಥಮವಾಗಿ ಅಧಿಕಾರಕ್ಕೆ ಬಂತು. ಅದರೆ ಅದಕ್ಕೂ ಹಿಂದಿನಿಂದಲೇ ಇಲ್ಲಿ ಅನೇಕ ಸರ್ಕಾರಿ ಉದ್ಯಮಗಳಿದ್ದುವು, ಕಾರ್ಮಿಕ ಸರ್ಕಾರ ಇಲ್ಲಿ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿತು. ಇಲ್ಲಿ ಪ್ರಾಂತೀಯ ಸರ್ಕಾರಗಳು ಇಲ್ಲದ್ದರಿಂದಲೂ 1950ರಿಂದ ಈಚೆಗೆ ಏಕಸದನ ಸಂಸತ್ತಿರುವುದರಿಂದಲೂ ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರದ ಕ್ರಮಗಳು ಸುಗಮವಾಗಿವೆ. ಆರ್ಥಿಕತೆಯಲ್ಲಿ ಸ್ತಿಮಿತ ಸಾಧಿಸಲು ಸಾಧ್ಯವಾಗಿದೆ. ಆರ್ಥಿಕ ಕೇಂದ್ರೀಕರಣ ಪ್ರವೃತ್ತಿ ಬೆಳೆದಿದೆ. ಅಂತರಿಕ ಅನುಭೋಗದ ಮೇಲೆ ನಿಯಂತ್ರಣ ವಿಧಿಸಿ ಉತ್ಪಾದನೆಯ ವೈವಿಧ್ಯ ಸಾಧಿಸಿ ನಿರ್ಯಾತವನ್ನು ಹೆಚ್ಚಿಸುವುದು ಸರ್ಕಾರದ ಈಗಿನ ಆರ್ಥಿಕ ನೀತಿ.

ಆಡಳಿತ, ಶಿಕ್ಷಣ, ಸಂಸ್ಕøತಿ

ಸರ್ಕಾರ : ದೇಶದಲ್ಲಿ ಸಂವಿಧಾನಬದ್ಧ ರಾಜಪ್ರಭುತ್ವವಿದೆ. ಬ್ರಿಟನ್ನಿನ ರಾಣಿಯ ಪ್ರತಿನಿಧಿಯಾಗಿ ಗವರ್ನರ್-ಜನರಲ್ ಇರುತ್ತಾನೆ. ನ್ಯೂ ಜೀಲೆಂಡ್ ಸರ್ಕಾರದ ಅಭಿಪ್ರಾಯದ ಮೇರೆಗೆ ರಾಣಿಯಿಂದ ಅವನ ನೇಮಕವಾಗುತ್ತದೆ. ಅವನ ಅಧಿಕಾರಾವಧಿ ಐದು ವರ್ಷ. ಬ್ರಿಟನ್ನಿನ ರಾಯಭಾರಿಯಾಗಿ ಹೈ ಕಮಿಷನರ್ ಇರುತ್ತಾನೆ. ರಾಜ್ಯದ ಪರಿಮಾಧಿಕಾರ ಇರುವುದು ಏಕಸದನ ಸಂಸತ್ತಿನಲ್ಲಿ. ಆ ಸದನದ ಹೆಸರು ಪ್ರತಿನಿಧಿ ಸಭೆ. ಅದರ ಒಟ್ಟು 87 ಸದಸ್ಯರಲ್ಲಿ 83 ಮಂದಿ ಐರೋಪ್ಯರು. ಮತ್ತು ನಾಲ್ವರು ಮಾವೊರಿಗಳು. 20 ವರ್ಷಗಳ ಮೇಲಿನ ಎಲ್ಲರಿಗೂ ಮತಾಧಿಕಾರವುಂಟು. ಸದನದ ಸದಸ್ಯತ್ವದ ಅವಧಿ ಮೂರು ವರ್ಷ. ಇರುವ ಎರಡು ರಾಜಕೀಯ ಪಕ್ಷಗಳಲ್ಲಿ ಬಹುಮತ ಪಡೆದಿರುವ ಪಕ್ಷ ಆಡಳಿತ ವಹಿಸಿಕೊಳ್ಳುತ್ತದೆ. ಆ ಪಕ್ಷದ ನಾಯಕ ಪ್ರಧಾನಮಂತ್ರಿಯಾಗಿ ಮಂತ್ರಿಮಂಡಲವನ್ನು ರಚಿಸುತ್ತಾನೆ. 40 ಸರ್ಕಾರಿ ಇಲಾಖೆಗಳಿವೆ. ಇವಲ್ಲದೆ ಪ್ರಸಾರ, ವಿಮಾನ ಸಾರಿಗೆ ಮೊದಲಾದವಕ್ಕೆ ಸಂಬಂಧಿಸಿದ. ಸರ್ಕಾರದ ಒಡೆತನದ, ಇಲ್ಲವೇ ಬಂಡವಾಳದಲ್ಲಿ ಸರ್ಕಾರದ ಭಾಗಿತ್ವವಿರುವ, ಸಾರ್ವಜನಿಕ ಕಾರ್ಪೋರೇಷನ್‍ಗಳಿವೆ. ಸ್ಥಳೀಯ ಅಧಿಕಾರ ಅಧಿಕೃತ ಚುನಾಯಿತ ಸಂಸ್ಥೆಗಳ ಕೈಯಲ್ಲಿದೆ. ನ್ಯೂಜಿûೀಲೆಂಡಿನ ನ್ಯಾಯ ಪದ್ಧತಿ ಸಾಮಾನ್ಯವಾಗಿ ಇಂಗ್ಲಿಷ್ ನ್ಯಾಯದ ಪೂರ್ವ ನಿರ್ಣಯಗಳಿಗೆ ಅನುಸಾರವಾಗಿ ನಡೆಯುತ್ತದೆ. ಬ್ರಿಟಿಷ್ ಪ್ರಿವಿ ಕೌನ್ಸಿಲ್ ನ್ಯೂಜೀಲೆಂಡಿನ ಅಂತಿಮ ಅಪೀಲು ನ್ಯಾಯಾಲಯ, ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ಮತ್ತು ನ್ಯಾಯಾಲಯಗಳು, ದಂಡಾಧೀಶರ ನ್ಯಾಯಾಲಯಗಳು, ಸವೋಚ್ಛ ನ್ಯಾಯಾಲಯ ಮತ್ತು ಅಪೀಲು ನ್ಯಾಯಾಲಯ ನ್ಯೂಜೀóಲೆಂಡಿನಲ್ಲಿ ನ್ಯಾಯದರ್ಶಿ ಪದ್ಧತಿ ಜಾರಿಯಲ್ಲಿದೆ. ಆರ್ಥಿಕವಾಗಿ ದುರ್ಬಲರಾದವರಿಗೆ ಕಾನೂನಿನ ನೆರವು ನೀಡಲಾಗುತ್ತದೆ. ಮುಖ್ಯ ನ್ಯಾಯಾಲಯಗಳಲ್ಲದೆ ವಿಶಿಷ್ಟ ನ್ಯಾಯಾಲಯಗಳೂ ಉಂಟು.

ಸಮಾಜ ಕಲ್ಯಾಣ: ಆರೋಗ್ಯ ಇಲಾಖೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ನ್ಯೂ ಜಿûೀಲೆಂಡ್ ಒಂದು ಕಲ್ಯಾಣ ರಾಜ್ಯ. ತೊಟ್ಟಿಲಿಂದ ಗೋರಿಯ ತನಕ ಸಾಮಾಜಿಕ ಸುರಕ್ಷಣೆಯ ವ್ಯವಸ್ಥೆ, ಹೆರಿಗೆ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ, ನಿವೃತ್ತಿವೇತನ ಮತ್ತು ಇತರ ಸವಲತ್ತುಗಳನ್ನು ಸರ್ಕಾರ ಎಲ್ಲರಿಗೂ ಒದಗಿಸುತ್ತದೆ. ತಮ್ಮವೇ ಆದ, ಮೂರು ಮಲಗುವ ಕೋಣೆಗಳೂ ತೋಟವೂ ಇರುವ, ಬಂಗಲೆ ಮಾದರಿಯ ಮನೆಗಳನ್ನು ಪಡೆಯಲು ನ್ಯೂಜಿûೀಲೆಂಡಿನಲ್ಲಿ ಹೆಚ್ಚು ಜನರು ಯತ್ನಿಸುತ್ತಾರೆ. ದೊಡ್ಡ ನಗರಗಳಲ್ಲಿ ಸ್ಥಳದ ಅಭಾವ ಇರುವುದರಿಂದ ಎತ್ತರದ ಕಟ್ಟಡಗಳಲ್ಲಿ ಭಾಗಗಳನ್ನು ಮಾತ್ರ ದೊರಕಿಸುವದು ಸಾಧ್ಯ. ಸರ್ಕಾರ ಕಡಿಮೆ ಬಾಡಿಗೆಯ ವಸತಿಗಳನ್ನೂ ಒದಗಿಸುತ್ತದೆ. ಕಡಿಮೆ ವರಮಾನಗಳವರು ಮನೆಕೊಳ್ಳಲು ಅವರಿಗೆ ಸರ್ಕಾರ ಕಡಿಮೆ ಬಡ್ಡಿ ದರದಲ್ಲಿ ಸಾಲು ಒದಗಿಸುತ್ತದೆ.

ಸಂಸ್ಕøತಿ, ಕಲೆ, ಸಾಹಿತ್ಯ: ಕಲ್ಯಾಣ ರಾಜ್ಯದ ಗುರಿಯನ್ನು ಜಾರಿಗೆ ತಂದಾಗಿನಿಂದ ಜನರು ಸಾಮಾನ್ಯವಾಗಿ ತೃಪ್ತಿಜೀವನ ನಡೆಸುತ್ತಿದ್ದಾರೆ. ವೈಯಕ್ತಿಕ ವೈಲಕ್ಷಣ್ಯಗಳನ್ನು ಅವರು ಸಾಮಾನ್ಯವಾಗಿ ಸಹಿಸುವುದಿಲ್ಲ. ಮಾತು. ನಡೆತೆ, ಗೃಹೋಪಕರಣ-ಎಲ್ಲವೂ ಸಾಮಾನ್ಯವಾಗಿ ಒಂದೇ ರೀತಿ ಇರುತ್ತವೆ. ಇವರು ಅಧಿಕಾರಕ್ಕೆ ಸುಲಭವಾಗಿ ಮಣಿಯುತ್ತಾರೆ. ಮಾವೊರಿ ಜನರ ಸಂಸ್ಕøತಿ ಈಚೆಗೆ ಎದ್ದು ಕಾಣತೊಡಗಿದೆ. ದೇಶಾದ್ಯಂತ ಕಲಾವಿಲಾಸಿಗಳ ಸಜೀವ ನಾಟಕ ಸಂಪ್ರದಾಯವಿದೆ. ಸ್ಕಾಟ್ಲೆಂಡಿನ ತಿದಿಗೊಳಲು ಹಾಗೂ ಹಿತ್ತಾಳೆ ವಾದ್ಯಗಳ ಬಾಜನದಲ್ಲಿ ಜನರು ವಿಶೇಷ ಆಸಕ್ತಿ ವಹಿಸುತ್ತಾರೆ. ನ್ಯೂಜಿûೀಲೆಂಡಿನ ಜನರು ಮಣ್ಣಿನ ಪಾತ್ರೆಗಳನ್ನು ಮಾಡುವುದರಲ್ಲಿ ನಿಪುಣರು. ಇಲ್ಲಿಯ ಕುಂಬಾರಕೆಲಸ ಪ್ರಪಂಚದ ಶ್ರೇಷ್ಠ ಕುಂಬಾರ ಕೆಲಸಕ್ಕೆ ಸಮವಾಗಿದೆ. ದೇಶದ ಜನಸಂಖ್ಯೆ ಕಡಿಮೆಯಾಗಿರುವುದು ಸಾಂಸ್ಕøತಿಕ ಅಭಿವೃದ್ದಿಗೆ ಒಂದು ಸಮಸ್ಯೆಯಾಗಿದೆ ಮೂರು ಸಣ್ಣ ನಾಟಕ ಕಂಪನಿಗಳೂ ಒಂದು ಅಪೆರೆ ಮತ್ತು ಬ್ಯಾರೆ ಕಂಪನಿಯೂ ಇವೆ. ಸರ್ಕಾರದ ನೆರವಿಲ್ಲದೆ ಇವು ನಡೆಯುವುದು ಕಷ್ಟವಾಗಿದೆ. ಗೃಹಸಂಗೀತ ಸಂಘಗಳು, ಲೇಖಕರು, ಕಲಾಕಾರರು ಮತ್ತು ಸಂಗೀತಗಾರರಿಗೆ ಸರ್ಕಾರ ಧನಸಹಾಯ ನೀಡುತ್ತದೆ. ಕಲಾವಸ್ತು ಪ್ರದರ್ಶನ ಮಂದಿರ ಮತ್ತು ವಸ್ತುಸಂಗ್ರಹಾಲಯಗಳಿಗೂ ನೆರವು ನೀಡುತ್ತದೆ. ಮೊದಲು ಕ್ರೈಸ್ಟ್ ಚರ್ಚ್ ಮತ್ತು ಡನೀಡಿನ್‍ನಲ್ಲಿ ಕಲಾಶಾಲೆಗಳು ಸ್ಥಾಪಿತವಾದವು. 1890ರ ಸುಮಾರಿಗೆ ಆಕ್ಲೆಂಡಿನಲ್ಲಿ ಒಂದು ಶಾಲೆಯಿತ್ತು. ನ್ಯೂಜೀóಲೆಂಡ್ ಪ್ರಸಾರ ಸಂಸ್ಥೆ ಪ್ರಸಾರ ಮತ್ತು ದೂರದರ್ಶನಗಳನ್ನು ನಿಯಂತ್ರಿಸುತ್ತದೆ. ಈ ಸಂಸ್ಥೆಯ ಮುಖಾಂತರ ಸರ್ಕಾರ ರಾಷ್ಟ್ರೀಯ ಗಾನವೃಂದಕ್ಕೆ ಪೂರ್ಣ ಆಶ್ರಯ ನೀಡುತ್ತದೆ. ಜನರು ತಮ್ಮ ಬಿಡುವಿನ ವೇಳೆಯನ್ನು ಹೆಚ್ಚಾಗಿ ಆಟಗಳಲ್ಲಿ ಕಳೆಯುತ್ತಾರೆ. ಅವರು ಹೆಚ್ಚು ಕಡಿಮೆ ಎಲ್ಲ ಕ್ರೀಡೆಗಳಲ್ಲೂ ಆಸ್ಥೆಯಿಂದ ಭಾಗವಹಿಸುತ್ತಾರೆ.

ಪೂರ್ವಜರ ನೃತ್ಯ: ಮುತ್ರಪಠಣ, ಭಾಷೆ, ಕಲೆಗಳನ್ನು ಮಾವೂರಿ ಜನ ಉಳಿಸಿಕೊಂಡು ಬಂದಿದ್ದಾರೆ. ಮರದ ಕೆತ್ತನೆ ಕೆಲಸದಲ್ಲಿ ಅವರದೇ ಆದ ಶೈಲಿಯನ್ನು ಕಾಣಬಹುದು. ಅಲಂಕಾರಿಕ ವಿನ್ಯಾಸಗಳನ್ನು ಬಿಟ್ಟರೆ ಮಾವೊರಿಗಳ ಕಲಾನಿರೂಪಣೆ ಐರೋಪ್ಯರ ಆಗಮನಕ್ಕೆ ಮುಂಚೆ ಪೂರ್ಣವಾಗಿ ಮೌಖಿಕವಾಗಿತ್ತು. ಅವರು ಕೂಡ ಈಗ ಇಂಗ್ಲಿಷ್‍ನಲ್ಲಿ ಬರೆಯತೊಡಗಿರುವುದು ಸಾಹಿತ್ಯದ ಅಭಿವೃದ್ದಿಗೆ ಸಹಾಯಕವಾಗಬಹುದು.

ನ್ಯೂಜಿûೀಲೆಂಡಿನ ಸಾಹಿತ್ಯ ತೌಲನಿಕವಾಗಿ ಇನ್ನೂ ಶೈಶವಾಸ್ಥೆಯಲ್ಲಿದೆ. ದೇಶದ ಹೆಚ್ಚು ಸಾಹಿತ್ಯ ಕೃತಿಗಳು ಸಾಮಾಜಿಕವಾದವು. ಶೋಧಕರ ಹಾಗೂ ಪ್ರವಾಸಿಗಳ ವೃತ್ತಾಂತ ಕಥನಗಳನ್ನು ಬಿಟ್ಟೆರೆ, ನ್ಯೂಜಿûೀಲೆಂಡಿನ ನಿಜವಾದ ಸಾಹಿತ್ಯ ಆರಂಭವಾದ್ದು ಅಲ್ಲಿಯ ಮೊದಲನೆಯ ಪಾದ್ರಿ ಸಾಮ್ಯುಯೆಲ್ ಮಾರ್ಸ್‍ಡೆನನ (1765-1838) ಪತ್ರ ಹಾಗೂ ದಿನಚರಿಗಳಿಂದ ಎನ್ನಬಹುದು. 1932ರ ವರೆಗೂ ಅವನ್ನು ಸಂಪಾದಿಸಿ ಪ್ರಕಟಿಸಿರಲಿಲ್ಲ. ವಲಸೆಗಾರರು ಬರುತ್ತಿದ್ದ ಕಾಲದಲ್ಲಿ ವಿಕ್ಟೋರಿಯನ್ ಮಾದರಿಯ ಪದ್ಯದ ರಚನೆಯಾಗುತ್ತಿತ್ತು. ನ್ಯೂಜೀóಲೆಂಡಿನ ವಿಡಂಬನ ಸಾಹಿತ್ಯ ಮೊದಲಿನಿಂದಲೂ ಪ್ರಾಮುಖ್ಯ ಪಡೆದಿದೆ. ಇತ್ತೀಚೆಗೆ ವರ್ಷಗಳಲ್ಲಿ ಪ್ರಕಟನಾವಕಾಶಗಳೂ ಗ್ರಂಥರಚನೆಯ ಮಟ್ಟವೂ ಗರ್ಮನಾರ್ಹವಾಗಿ ಹೆಚ್ಚಿವೆ.

ಪಾಲೀನೇಷ್ಯದಿಂದ ಬಂದ ಮಾವೊರಿಗಳು 12ನೆಯ ಇಲ್ಲವೇ 13ನೆಯ ಶತಮಾನದದಲ್ಲಿ ನ್ಯೂಜಿûೀಲೆಂಡನ್ನು ಕಂಡುಹಿಡಿದು ಇಲ್ಲಿ ನೆಲಸತೊಡಗಿದರೆನ್ನಲಾಗಿದೆ. ಅಂತೂ ಒಂದು ಸಾವಿರ ವರ್ಷಗಳಿಗೂ ಹಿಂದೆ ಇವರು ಇಲ್ಲಿ ನೆಲಸಿರಬೇಕು. ಇಲ್ಲಿಗೆ ಬಂದ ಪ್ರಥಮ ಯೂರೋಪಿಯನನೆಂದರೆ ಏಬೆಲ್ ಯಾನ್ಸನ್ ಟಾಸ್ಮಾನ್ ಎಂಬ ಡಚ್ ನಾವಿಕ. ಇವನು 1642ರ ಡಿಸಂಬರಿನಲ್ಲಿ ವೆಸ್ಟ್ ಲೆಂಡಿನ ತೀರವನನ್ನು ಕಂಡ. ಕೆಟ್ಟ ಹವಾಗುಣ ಮತ್ತು ಮಾವೊರಿಗಳ ವಿರೋಧದಿಂದಾಗಿ ಇವನು ಒಳನಾಡನ್ನು ಹೊಕ್ಕು ನೋಡಲಿಲ್ಲ. 1769ರಲ್ಲಿ ಕ್ಯಾಪ್ಟನ್ ಜೇಮ್ಸ್ ಕುಕ್ ನ್ಯೂಜೀóಲೆಂಡಿನ ಎರಡೂ ದೊಡ್ಡ ದ್ವೀಪಗಳನ್ನು ಬಳಸಿದನಲ್ಲದೆ ಭೂಪಟವನ್ನು ತಯಾರಿಸಿ ನಾಡು ಮತ್ತು ಜನರ ಬಗ್ಗೆ ತನ್ನ ದಿನಚರಿಯಲ್ಲಿ ?: ಮಾವೊರಿಗಳೊಡನೆ ಬೆರೆತ: ಫೆಸಿಫಿಕ್ ಸಾಗರದಲ್ಲಿ ಅವನು ಮಾಡಿದ. ಎರಡನೆಯ ಮತ್ತು ಮೂರನೆಯ ಪ್ರವಾಸಗಳಲ್ಲಿ ಅನೇಕ ಸಲ ಇಲ್ಲಿಗೆ ಭೇಟಿಯಿತ್ತ. 19ನೆಯ ಶತಮಾನ ಪ್ರಾರಂಭವಾಗುವ ಮೊದಲೇ ಇಲ್ಲಿಂದ ಒಂದು ಹಡಗಿನ ತುಂಬ ಚೌಬೀನೆಯನ್ನು ಆಸ್ಟ್ರೇಲಿಯಕ್ಕೆ ಸಾಗಿಸಲಾಯಿತು. ಐರೋಪ್ಯರು ಇಲ್ಲಿ ನೆಲೆಸಿದರು. ವ್ಯಾಪಾರ ಬೆಳೆಯಿತು. ವ್ಯಾಪಾರಿಗಳ ಹಿಂದೆಯೇ ಪಾದ್ರಿಗಳು ಬಂದರು. 1814 ರಲ್ಲಿ ಪಾದ್ರಿ ಸ್ಯಾಮ್ಯುಯೆಲ್ ಮಾರ್ಸ್‍ಡೆನ್ ನ್ಯೂಜೀóಲೆಂಡಿಗೆ ಬಂದ. ಐರೋಪ್ಯರು ತಂದ ರೋಗಗಳಿಂದಲೂ ಯುದ್ದಗಳಿಂದಲೂ ಮಾವೋರಿ ಜನರ ಸಂಖ್ಯೆ ಕ್ಷೀಣಿಸಿತು. ಆಸ್ಟ್ರೇಲಿಯದವರು ಇಲ್ಲಿ ಜಮೀನು ಕೊಳ್ಳಲಾರಂಭಿಸಿದರು. ಇಲ್ಲಿಯ ನೆಲ ಕ್ರಮಕ್ರಮವಾಗಿ ಬ್ರಿಟಿಷ್ ವಸಾಹತಾಯಿತು. 1838ರಲ್ಲಿ ಕ್ಯಾಪ್ಟನ್ ವಿಲಿಯಂ ಹಾಬ್ಸನ್ ಇಲ್ಲಿ ಲೆಫ್ಟೆನೆಂಟ್ ಗವರ್ನರ್ ಆಗಿ ನೇಮಕ ಹೊಂದಿದ. 1841ರ ವೇಳೆಗೆ ಇವನು ಗವರ್ನರ್ ಆದ. ಮಾವೊರಿಗಳು ಐರೋಪ್ಯರಿಂದ ಮದ್ದುಗುಂಡುಗಳನ್ನು ಕೊಂಡುಕೊಂಡಿದ್ದು ಆಂತರಿಕ ಮತ್ತು ಐರೋಪ್ಯವಿರೋಧಿ ಕಲಹಗಳಿಗೆ ಕಾರಣವಾಗಿತ್ತು. 1840ರಲ್ಲಿ ಮಾವೊರಿಗಳ ಮುಖ್ಯರು ಮತ್ತು ಕ್ಯಾಪ್ಟನ್ ವಿಲಿಯಮ್ ಹಾಬ್ಸನನ ನಡುವೆ ಒಪ್ಪಂದವಾಗಿ ಇಡೀ ದೇಶ ಬ್ರಿಟಿಷರ ವಶವಾಯಿತು. ಈ ಒಪ್ಪಂದದ ಪ್ರಕಾರ ಮಾವೊರಿಗಳು ತಮ್ಮ ಜಮೀನುಗಳನ್ನು ಇಟ್ಟುಕೊಳ್ಳಬಹುದೆಂದೂ ಇನ್ನು ಮುಂದೆ ಜಮೀನುಗಳು ವಸಾಹತು ಸರ್ಕಾರದ ಮೂಲಕವೇ ಐರೋಪ್ಯರಿಗೆ ಪರಭಾರೆಯಾಗಬೇಕೆಂದೂ ನಿರ್ಣಯವಾಯಿತು. 1840ರ ಮತ್ತು 1860ರ ದಶಕಗಳಲ್ಲಿ ಜಮೀನುಗಳ ಪರಭಾರೆಯನ್ನು ಮಾವೊರಿಗಳು ವಿರೋಧಿಸಿದ್ದರಿಂದ ಯುದ್ಧಗಳು ನಡೆದವು. ಆ ವೇಳೆಗೆ ಅಲ್ಪಸಂಖ್ಯಾತರೆನಿಸಿದ್ದ ಮಾವೊರಿಗಳನ್ನು ಸರ್ಕಾರ ಹತ್ತಿಕ್ಕತು. 1864ರಲ್ಲಿಮಾವೊರಿಗಳಿಗೆ ಮತದಾನದ ಅಧಿಕಾರ ನೀಡಲಾಯಿತು. ಅನಂತರ ಶಾಂತಿಸ್ಥಾಪನೆಯಾಯಿತು. ಆದರೆ ಶಾಶ್ವತವಾದ ಶಾಂತಿ ನೆಲೆಗೊಂಡಿದ್ದು 1871ರಲ್ಲಿ.

1852ರ ವರೆಗೂ ವಸಾಹತಿನ ಅಡಳಿತ ನ್ಯೂ ಸೌತ್ ವೇಲ್ಸ್ ಕಾಲೋನಿ ಆಫ್ ಆಸ್ಟ್ರೇಲಿಯದ ಕೈಯಲ್ಲಿತ್ತು. ವೆಲ್ಲಿಂಗ್ಟನ್, ಆಕ್ಲೆಂಡ್, ಡನೀಡನ್ ಮತ್ತು ಕ್ರೈಸ್ಟ್ ಚರ್ಚ್‍ಗಳಿಂದ ನೆಲಸುಗಳು ಹಬ್ಬಿದವು. ಸರ್ಕಾರದ ಮೊದಲನೆಯ ಕೇಂದ್ರ ಆಕ್ಲೆಂಡ್. 1852ರಲ್ಲಿ ನ್ಯೂಜಿûೀಲೆಂಡ್ ಸ್ವಯಮಾಡಳಿತವುಳ್ಳ ವಸಾಹತಾಯಿತು. 1876ರಲ್ಲಿ ಇಲ್ಲಿ ಬಲವಾದ ಏಕೀಕೃತ ಸರ್ಕಾರ ಸ್ಥಾಪಿತವಾಯಿತು. 1860ರಲ್ಲಿ ಚುನಾವಣೆಗಳ ಆರಂಭವಾಯಿತು. 1878ರಲಿ ಎಲ್ಲ ವಯಸ್ಕರ ಪುರುಷರಿಗೂ ಮತಾಧಿಕಾರ ದೊರೆಕಿತು. 1893ರಲ್ಲಿ ಇದು ಹೆಂಗಸರಿಗೂ ಪ್ರಾಪ್ತವಾಯಿತು.

1907 ನ್ಯೂಜಿûೀಲೆಂಡ್ ಬ್ರಿಟಿಷ್ ಚಕ್ರಾಧಿಪತ್ಯದೊಳೊಗಿನ ಡೊಮಿನಿಯನ್ ಆಯಿತು. 1926ರಲ್ಲಿ ಇದು ಬ್ರಿಟಿಷ್ ದೊರೆಗೆ ನಿಷ್ಠೆ ಇರುವ ಸ್ವಯಂಮಾಡಳಿತಾಧಿ ಕಾರವುಳ್ಳ ಕಾಮನ್ ವೆಲ್ತ್ ಸದಸ್ಯರಾಷ್ಟ್ರವಾಯಿತು. ಒಂದನೆಯ ಮಹಾಯುದ್ಧದಲ್ಲಿ ಮಿತ್ರ ರಾಷ್ಟ್ರಗಳ ಪರವಾಗಿ ಇದು ಪಾಲುಗೊಂಡಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ 1939ರಲ್ಲಿ ಜರ್ಮನಿಯ ವಿರುದ್ಧವಾಗಿಯೂ 1942ರಲ್ಲಿ ಜಪಾನಿನ ವಿರುದ್ಧವಾಗಿಯೂ ಯುದ್ಧ ಸಾರಿತು. 1945ರಲ್ಲಿ ಸ್ಯಾನ್ ಫ್ರ್ಯಾನ್ಸಿಸ್ಕೋ ಸಮ್ಮೇಳನದಲ್ಲಿ ಇದು ಚಿಕ್ಕ ರಾಷ್ಟ್ರಗಳ ಮಂಚೂಣಿಯ ದೇಶಗಳಲ್ಲಿ ಒಂದಾಗಿ ಪ್ರಮುಖ ಪಾತ್ರವಹಿಸಿತು. ಮತ್ತು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಯಿತು. (ಜಿ.ಕೆ.ಯು.)