ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಟನ್, ಐಸಾಕ್

ವಿಕಿಸೋರ್ಸ್ದಿಂದ

ನ್ಯೂಟನ್, ಐಸಾಕ್ 1642-1727. ಪ್ರಪಂಚದ ಸಾರ್ವಕಾಲಿಕ ಸರ್ವಶ್ರೇಷ್ಠ ವಿಜ್ಞಾನಿUಳ ಪೈಕಿ ಒಬ್ಬ. ನಿಸರ್ಗದ ಬಲಗಳಲ್ಲಿ ಸಾಂಗತ್ಯವನ್ನು ಕಂಡುಕೊಂಡು ಅವನ್ನು ಸುಭದ್ರ ಹಾಗೂ ಸುವ್ಯಾಖ್ಯಿತ ಗಣಿತ ಚೌಕಟ್ಟಿನ ಒಳಗೆ ಕ್ರಮಬದ್ದವಾಗಿ ವಿವರಿಸಿ ತನ್ಮೂಲಕ ವಿಶ್ವವಿದ್ಯಮಾನಗಳಿಗೆ ಖಚಿತ ಅರ್ಥವನ್ನು ನೀಡಿದ ಯುಗಪ್ರವರ್ತಕ ಮಹಾಪುರುಷ: ಪ್ರಯೋಗಪಟು, ಸಿದ್ಧಾಂತ ಪರಿಣತ, ಯಂತ್ರ ವಿಜ್ಞಾನಿ ಹಾಗೂ ಶ್ರೇಷ್ಠ ಕಲಾವಿದ. ಇತಿಹಾಸದ ವಿರಳ ಮತ್ತು ವಿಶೇಷ ಪರ್ವಬಿಂದುವಿನಲ್ಲಿ ನ್ಯೂಟನ್ನನ ಅವತಾರವಾಯಿತು. ನ್ಯೂಟನ್‍ಪೂರ್ವ ದಿನಗಳಲ್ಲಿ ಆನುಭವಿಕ ಪ್ರಪಂಚದ ಸೃಷ್ಟಿ ಮರ್ಮವನ್ನು ರೂಪಿಸುವ ಸುವ್ಯವಸ್ಥಿತ ಮತ್ತು ಸ್ವಯಂಪೂರ್ಣ ತಾತ್ತ್ವಿಕ ಪ್ರಕ್ರಮ ಯಾವುದೂ ಇರಲಿಲ್ಲ. ಆದರೆ ಅಂಥ ತತ್ತ್ವವೊಂದನ್ನು ಶೋಧಿಸಲು ಕೊಪರ್ನಿಕಸ್ (1473-1543). ಕೆಪ್ಸರ್ (1571-1630), ಗೆಲಿಲಿಯೊ(1564-1642)ಮೊದಲಾದ ವಿಜ್ಞಾನಿಗಳು ಶಿಲಾನ್ಯಾಸಮಾಡಿ ಅಡಿಪಾಯ ಕಟ್ಟಿದರು. ಈ ಭದ್ರತಳಪಾಯದ ಮೇಲೆ ಸೃಷ್ಟಿಮರ್ಮದ ತಾತ್ತ್ವಿಕ ಸೌಧವನ್ನು ರಚಿಸಿದ್ದೇ ನ್ಯೂಟನ್ನನ ಮಹಾಸಾಧನೆ. ಲಗ್ರಾಂಜ್ ಎಂಬ ಗಣಿತಜ್ಞ ಹೀಗೆ ಹೇಳಿದ್ದಾನೆ. ಇಡೀ ವಿಶ್ವದ ರಚನೆಯನ್ನು ಕಂಡುಕೊಳ್ಳುವುದು ಒಂದು ಸಲ ಮಾತ್ರ ಸಾಧ್ಯ: ಅದು ಸಿದ್ಧಸಿದ್ದು ನ್ಯೂಟನ್ನನಿಗೆ ಮಾತ್ರ; ಆದ್ದರಿಂದ ಅವನು ಅದೃಷ್ಟಶಾಲೀ ಆದರೆ ನ್ಯೂಟನ್ ಆವಿಷ್ಕರಿಸಿದ ಗುರುತ್ವ ಸೂತ್ರ ಹಾಗೂ ಚಲನನಿಯಮಗಳು ಅಲ್ಪವೇಗದ ಚಲನೆಗಳಿಗೆ ಮಾತ್ರ ಅನ್ವಯಿಸುವುವು ಎಂದೂ ಬೆಳಕಿನ ವೇಗದಂಥ ಅತಿ ವೇಗದ ಚಲನೆಗಳಿಗೆ ಅನ್ವಯಿಸುವುದಿಲ್ಲ. ಎಂದೂ ಈ ನಿಯಮಗಳಿಗೆ ಮೂಲಾಧಾರಗಳಾದ ರಾಶಿ, ಆಕಾಶ ಮತ್ತು ಕಾಲ ಇವುಗಳ ಸ್ವರೂಪವನ್ನು ಕುರಿತಂತೆ ನ್ಯೂಟನ್ನನಿಗೆ ಇದ್ದ ಭಾವನೆಗಳು ಅಸಾಧು ಎಂದೂ ಪ್ರಸಕ್ತ ಶತಮಾನದಲ್ಲಿ ಐನ್ ಸ್ಟೈನ್ ಮಂಡಿಸಿದ ಸಾಪೇಕ್ಷತಾ ಸಿದ್ಧಾಂತದಿಂದ ತಿಳಿದಿದೆ. ಆದರೆ ಚಲನೆಯ ವಿಚಾರವಾಗಿ ನ್ಯೂಟನ್ ಮಾಡಿದ ಸಂಶೋಧನೆ ಸಾಪೇಕ್ಷತೆಗೆ ಮಂಚಿಕೆ ವೇದಿಕೆ ಒದಗಿಸಿತು ಎಂಬುದಾಗಿ ಖುದ್ದು ಐನ್ ಸ್ಟೈನ್ ಹೇಳಿದ್ದಾರೆ.

ನ್ಯೂಟನ್ ಹಾಗೂ ಆತನ ಸಮಕಾಲೀನ ಲೈಪ್ ನಿಟ್ಸ್ ಉಪಜ್ಞಿಸಿದ ಕಲನಶಾಸ್ತ್ರದ ಹೊಸ ಹತ್ಯಾರಿನಿಂದ ಗಣಿತವಿಜ್ಞಾನ ಪ್ರಗತಿಗೆ ಅಪಾರ ಲಾಭವಾಗಿದೆ. ವಿಜ್ಞಾನದ ಹಲವಾರು ಶಾಖೆಗಳಲ್ಲಿ ನ್ಯೂಟನ್ನನ ಅಸೀಮ ಮೇಧಾಶಕ್ತಿ ಹರಿದು ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ನಿಸರ್ಗ ಅವನೆದುರು ತೆರೆದಿಟ್ಟ ಪುಸ್ತಕದಂತೆ ಇತ್ತು. ಅದನ್ನು ಆತ ಅನಾಯಾಸವಾಗಿ ಓದಬಲ್ಲವನಾಗಿದ್ದ. ಪ್ರಯೋಗಗಳಲ್ಲಿ ನಿಪುಣ ತತ್ತ್ವದಲ್ಲಿ ವೇತ್ತ. ಯಂತ್ರ ನಿರ್ಮಾಣದಲ್ಲಿ ಸಮರ್ಥ ಮತ್ತು ವಿಷಯ ನಿರೂಪಣೆಯಲ್ಲಿ ಕಲೆಗಾರ--ಇವನೇ ನ್ಯೂಟನ್.

ಇಂಗ್ಲೆಂಡಿನ ದೇಶದ ಲಿಂಕನ್‍ಶೈರಿನ ಗ್ರ್ರಾಂಥಮ್ ಪಟ್ಟಣದ ಬಳಿ ಇರುವ ವೂಲ್ಸ್ ತೋರ್ಪ್ ಎಂಬ ಚಿಕ್ಕ ಗ್ರಾಮದಲ್ಲಿ 1642ರ ಡಿಸಂಬರ್ 25ರಂದು ಐಸಾಕ್ ನ್ಯೂಟನ್ನನ ಜನನವಾಯಿತು. ಕ್ರಿಶ್ಚನರಿಗೆ ಪವಿತ್ರವಾದ ಕ್ರಿಸ್ಮಸ್ ದಿನದಂದು ಈ ಮಹಾಮೇಧಾವಿ ಹುಟ್ಟಿದ್ದು ಮತ್ತು ಕಾಲಾಂತರದಲ್ಲಿ ಪ್ರಪಂಚಕ್ಕೆ ಬೆಳಕು ಬೀರಿದ್ದು ಒಂದು ಯೋಗಾಯೋಗ. ನ್ಯೂಟನ್ನನ ತಂದೆ ಒಬ್ಬ ಜಮೀನುದಾರ. ಆದರೆ ತನ್ನ ಮಗ ಹುಟ್ಟುವ ಮೊದಲೇ ಆತ ತೀರಿಹೋಗಿದ್ದ. ಬಸುರಿಗೆ ಇನ್ನೂ ಒಂಬತ್ತು ತಿಂಗಳು ತುಂಬುವ ಮೊದಲೇ ತಾಯಿ ಈ ಮಗುವನ್ನು ಹೆಡೆದಳು. ಹೀಗೆ ಅಕಾಲದಲ್ಲಿ ಅನಾಥವಾಗಿ ಹುಟ್ಟಿದ ಮಗು ಈ ಮಗುವನ್ನು ಹಡೆದಳು. ಹೀಗೆ ಆಕಾಲದಲ್ಲಿ ಅನಾಥವಾಗಿ ಹುಟ್ಟಿ ಮಗು ಕೃಶವಾಗಿಯೂ ದುರ್ಬಲವಾಗಿಯೂ ಇದ್ದುದು ಸ್ವಾಭಾವಿಕವೇ. ಆಗ ಅವನನ್ನು ಅಳತೆಯ ಅರ್ಧ ಸೇರಿನೊಳಗೆ ಹುದುಗಿಸಿಡಬಹುದಾಗಿತ್ತು ಎಂದು ಅವನ ತಾಯಿ ಹೇಳುತ್ತಿದ್ದುದಿತ್ತು. ಮಗುವಿಗೆ ತ್ರಾಣದಾಯಕ ಔಷಧಿಯನ್ನು ತರಲೆಂದು ಔಷಧಿ ಅಂಗಡಿಗೆ ಹೋಗಿ ಬಂದ ಇಬ್ಬರು ಮಹಿಳೆಯರು ತಾವು ಮರುಳುವ ತನಕವೂ ಶಿಶು ಉಳಿದಿರಲಾರದೆಂದೇ ಭಾವಿಸಿದ್ದರು. ಆದರೆ ಹಾಗಾಗದೇ ಇನ್ನೂ ಬುದಕಿದ್ದ ಶಿಶುವನ್ನು ಕಂಡ ಅವರ ವಿಸ್ಮಯ ಹೇಳತೀರದು. ಮಗುವಿನ ಆಯಾ ಪರಿಮಿತಿ ಎಂಬತ್ತೈದು ವರ್ಷಗಳೆಂದಾಗಲಿ ಅದು ಅಗಾಧ ವಿಶ್ವಕ್ಕೆ ಭಾಷ್ಯಬರೆಯಬಲ್ಲಂಥ ಮಹಾ ಮೇಧಾವಿಯಾಗುವುದೆಂದಾಗಲಿ ಆಗ ಯಾರೂ ಊಹಿಸಿಯೂ ಇರಲಾರರು.

ಎರಡು ವರ್ಷಗಳ ತರುವಾಯ ನ್ಯೂಟನ್ನನ ತಾಯಿ ಪುನರ್ವಿವಾಹವಾಗಿ ಬೇರೆಮನೆ ಹೂಡಿದ್ದರಿಂದ ಇವನು ಅಜ್ಜಿಯ ಆಸರೆ ಪಡೆದ. ಇವನ ಬಾಲ್ಯ ವಿದ್ಯಾಭ್ಯಾಸ ಹಳ್ಳಿಯ ಶಾಲೆಯೊಂದರಲ್ಲಿ ನಡೆಯಿತು. ಹನ್ನೆರಡು ತುಂಬಿದಾಗ ನೆರೆಯ ಗ್ರಾಂಥಮ್ ಪಟ್ಟಣದ ಶಾಲೆಗೆ ಸೇರಿಸಿದರು. ಆದರೆ ಶಾಲೆಯಲ್ಲಿ ತನ್ನ ಲಕ್ಷ್ಯ ಪಾಠಪ್ರವಚನಗಳ ಕಡೆಗೆ ಇರಲಿಲ್ಲವೆಂದೂ ತರಗತಿಯಲ್ಲಿ ತಾನು ಕೆಳದರ್ಜೆಯವನಾಗಿದ್ದೆನೆಂದೂ ನ್ಯೂಟನ್ ಆ ದಿನಗಳನ್ನು ವರ್ಣಿಸಿದ್ದಾನೆ. ಮರಗೆಲಸ, ಯಂತ್ರನಿರ್ಮಾಣ, ನಕ್ಷಾಲೇಖನ, ವನಸ್ಪತಿ ಮತ್ತು ಪುಷ್ಪ ಸಂಗ್ರಹ ಇತ್ಯಾದಿ ಹವ್ಯಾಸಗಳಲ್ಲೇ ಆ ದಿನಗಳಂದು ಮಗ್ನನಾಗಿರುತ್ತಿದ್ದ. ಯಂತ್ರ ವಿಶೇಷವುಳ್ಳ ಗಾಡಿಯನ್ನು ತಯಾರಿಸಿದ್ದ. ಅದರಲ್ಲಿ ಕುಳಿತು ಕೈಪಿಡಿಯನ್ನು ತಿರುಗಿಸಿದಾಗ ಗಾಡಿ ಮುಂದಕ್ಕೆ ಸರಿಯುತ್ತಿತ್ತು. ಇದಲ್ಲದೆ ಗಾಳಿಯಂತ್ರವನ್ನೂ ಕಲ್ಲಿನ ಛಾಯಾಯಂತ್ರವನ್ನೂ ನಿರ್ಮಿಸಿದ್ದ. ಛಾಯಾಯಂತ್ರ ಈಗ ಲಂಡನ್ ನಗರದ ರಾಯಲ್ ಸೊಸೈಟಿಯ ವಶದಲ್ಲಿದೆ.

ಬಾಲಕ ನ್ಯೂಟನ್‍ಗ್ರಾಂಥಮ್ ಪಟ್ಟಣದ ಶಾಲೆಯಲ್ಲಿ ಓದುತ್ತಿದ್ದಾಗ ಅವನ ತಾಯಿಯ ಎರಡನೆಯ ಗಂಡನೂ ಸತ್ತುಹೋದದ್ದರಿಂದ ಪುನರ್ವಿಧವೆಯಾದ ಆಕೆ ಸ್ವಗ್ರಾಮಕ್ಕೆ ಮರಳಿದಳು. ಆಗ ಬಾಲಕ ನ್ಯೂಟನ್ ಭೂವ್ಯವಸಾಯ ಕಾರ್ಯದಲ್ಲಿ ಆಕೆಗೆ ಸಹಾಯಕನಾಗಿ ನಿಲ್ಲಲು ಶಾಲೆಬಿಟ್ಟು ಗ್ರಾಮ ಸೇರಬೇಕಾಯಿತು. ವಯಸ್ಸು ಹದಿನಾಲ್ಕು. ಅಲ್ಲಿಂದ ಮುಂದಿನ ನಾಲ್ಕು ವರ್ಷಗಳನ್ನು ಅಲ್ಲೇಕಳೆದ. ಅದರೆ ಬೇಸಾಯ ಅವನ ಬಲವಲ್ಲ. ಯಂತ್ರನಿರ್ಮಾಣದಲ್ಲಿ ಅವನಿಗಿದ್ದ ಆಸಕ್ತಿಯನ್ನು ನೋಡಿ ತಾಯಿ ಅವನನ್ನು ಕಾಲೇಜ್ ವ್ಯಾಸಂಗಕ್ಕಾಗಿ ಕೇಂಬ್ರಿಜಿಗೆ ಕಳುಹಿಸಿದಳು. ಹೀಗೆ ನ್ಯೂಟನ್ ಮತ್ತೆ ವಿದ್ಯಾರ್ಥಿಯಾಗಿ 1661ರ ಜೂನ್ ತಿಂಗಳಿನಲ್ಲಿ ಕೇಂಬ್ರಿಜಿನ ಟ್ರಿನಿಟಿ ಕಾಲೇಜ್ ಸೇರಿದ. ಹಿಂದೆ ಅ ಕಾಲೇಜಿನಲ್ಲಿ ಇವನ ಸೋದರ ಮಾವನೊಬ್ಬ ವಿದ್ಯಾರ್ಥಿಯಾಗಿದ್ದ.

ಕಾಲೇಜ್ ತರಗತಿಗಳಲ್ಲೂ ಮೊದಮೊದಲು ನ್ಯೂಟನ್ನನ ಧೀಮಂತಿಕೆಯಲ್ಲಿ ಹೇಳುವಂಥ ಹಿರಿಮೆ ಏನೂ ಕಂಡುಬರಲಿಲ್ಲ. ಅದರೆ ಅದೇ ವೇಳೆ ಅವನಿಗೊಂದು ಜ್ಯೋತಿಷಗ್ರಂಥ ದೊರೆತು ಅದರಲ್ಲಿದ್ದ ರೇಖಾಗಣಿತದ ನಕ್ಷೆಯಿಂದ ಆಕರ್ಷಿತನಾದ. ಅದನ್ನು ಅರ್ಥ ಮಾಡಿಕೊಳ್ಳಲೋಸ್ಕರ ಅವನು ರೇಖಾಗಣಿತದಲ್ಲಿ ಅಸಕ್ತನಾಗಿ ಯೂಕ್ಲಿಟ್ (ಕ್ರಿ. ಪೂ. ಸು. 300ರಲ್ಲಿ ಇದ್ದವ) ಮತ್ತು ಡೇ ಕಾರ್ಟೆ (ಕ್ರಿ.ಶ. 1596-1650) ಇವರು ಬರೆದಿದ್ದ ಗ್ರಂಥಗಳನ್ನು ಅಭ್ಯಸಿಸಿದ. ಈ ಕಾರ್ಯದಲ್ಲಿ ಐಸಾಕ್ ಬ್ಯಾರೋ (1630-1677) ಎಂಬ ಅಧ್ಯಾಪಕ ನ್ಯೂಟನ್ನನಿಗೆ ಸಹಾಯಕನೂ ಪ್ರೇರಕನೂ ಅಗಿದ್ದ. 1665ರಲ್ಲಿ ನ್ಯೂಟನ್ ಬಿ. ಎ. ಪದವಿ ಪಡೆದ. ಅ ವರ್ಷ ಮತ್ತು ಮಾರನೆಯ ವರ್ಷ ಕೇಂಬ್ರಿಜಿನಲ್ಲಿ ಪ್ಲೇಗ್ ಜಾಡ್ಯ ಉಲ್ಬಣಿಸಿದ್ದರಿಂದ ಕೇಂಬ್ರಿಜ್ ವಿಶ್ವವಿದ್ಯಾಲಯವನ್ನು ಹದಿನೆಂಟು ತಿಂಗಳ ಕಾಲ ಮುಚ್ಚಲಾಗಿತ್ತು. ಹೀಗಾಗಿ ನ್ಯೂಟನ್ ಆ ಅವಧಿಯನ್ನು ಸ್ವಗ್ರಾಮದಲ್ಲಿ ತಾಯಿ ಬಳಿ ಕಳೆದ. ಅದು ಅವನ ಬದುಕಿನಲ್ಲಿ ಅತ್ಯಂತ ಮುಖ್ಯವಾದ ಘಟ್ಟ, ಅವನ ಪ್ರತಿಭೆ ವಿಕಸಿಸಿ ಫಲಿಸಿದ್ದು ಆ ಕಾಲದಲ್ಲೆ.

ನ್ಯೂಟನ್ನನ ಮುಖ್ಯ ಸಂಶೋಧನೆಗಳಿಗೆ ಸೇಬುಹಣ್ಣು ಕಾರಣವೆಂದು ಪ್ರತೀತಿ. ತರುಣ ನ್ಯೂಟನ್ ತನ್ನ ಹಣ್ಣಿನ ತೋಟದಲ್ಲಿ ಇದ್ದಾಗ ಸೇಬುಹಣ್ಣು ಗಿಡದಿಂದ ಉದುರಿ ಭೂಮಿಯ ಮೇಲೆ ಬಿದ್ದುದನ್ನು ಗಮನಿಸಿದ. ಆಗ ಅವನಿಗೆ ಗುರುತ್ವ ನಿಯಮದ ತತ್ತ್ವ ಸ್ಛುರಿಸಿತು. ಕೊಂಬೆಯಿಂದ ತೊಟ್ಟು ಕಳಚಿದ ಹಣ್ಣು ನೇರವಾಗಿ ಭೂಮಿಯ ಮೇಲೆ ಬಿದ್ದುದೇಕೆ? ಅದು ಮೇಲಕ್ಕಾಗಲಿ ಇನ್ನೊಂದು ದಿಕ್ಕಿಗಾಗಲಿ ಹೋಗಲಿಲ್ಲವೇಕೆ? ಅದು ಕೆಳಕ್ಕೆ ಬೀಳುವುದಕ್ಕೆ ಭೂಮಿಯ ಆಕರ್ಷಣೆಯೇ ಕಾರಣವಾಗಿರಬೇಕು. ಹಾಗಾದರೆ ಸೇಬನ್ನು ಭೂಮಿಯ ಆಕರ್ಷಣೆಯೇ ಕಾರಣವಾಗಿರಬೇಕು. ಹಾಗಾದರೆ ಸೇಬನ್ನು ಭೂಮಿ ಆಕರ್ಷಿಸಿದಂತೆ ಭೂಮಿಯನ್ನು ಸೇಬೂ ಆಕರ್ಷಿಸಿರಬಹುದು ಇತ್ಯಾದಿ ಯೋಚನೆಗಳು ಪುಂಖಾನುಪುಂಖವಾಗಿ ನ್ಯೂಟನ್ನನ ಮನಸ್ಸಿನಲ್ಲಿ ಮೂಡಿ ಕ್ರಮೇಣ ಗುರುತ್ವ ನಿಯಮವನ್ನೂ ಚಲನ ನಿಯಮ ತ್ರಯವನ್ನೂ ಆವಿಷ್ಕರಿಸುವುದಕ್ಕೆ ಕಾರಣವಾಯಿತು. ಈ ಸೇಬುಹಣ್ಣಿನ ಸಂಗತಿಯನ್ನು ತಾನು ನ್ಯೂಟನ್ನನ ಬಾಯಿಂದಲೇ ಕೇಳಿದ್ದುದಾಗಿ ಅವನ ಸ್ನೇಹಿತ ಸ್ಪಕ್ಲೇ ಎಂಬಾತ ಬರೆದಿಟ್ಟಿದ್ದಾನೆ. ಅಲ್ಲದೆ ನ್ಯೂಟನ್ನನ ಸೋದರಸೊಸೆ ಕ್ಯಾಥರೀನ್ ಬರ್ಟನ್ ಎಂಬಾಕೆ ಸೇಬುಹಣ್ಣಿನ ಸಂಗತಿಯನ್ನು ವಾಲ್ಟೇರ್ ಎಂಬಾತನಿಗೂ ರಾಯಲ್ ಸೊಸೈಟಿಯ ಅಧ್ಯಕ್ಷ ಮಾರ್ಟಿನ್ ಫೋಕ್ಸ್ ಎಂಬಾತನಿಗೂ ಹೇಳಿದ್ದಳೆಂದು ಗೊತ್ತಾಗಿದೆ. ಇದು ಕಟ್ಟುಕತೆ ಎಂದು ಹೇಳುವವರಿದ್ದಾರೆ. ಹೇಗಿದ್ದರೂ ಗುರುತ್ವದ ಪರಿಣಾಮವನ್ನು ಈ ನಿದರ್ಶನ ರಸವತ್ತಾಗಿ ತೋರಿಸಿಕೊಡುವುದರಿಂದ ಇದನ್ನು ಆ ಅರ್ಥದಲ್ಲಿ ಬಳಸುವುದರಲ್ಲಿ ತಪ್ಪೇನೂ ಇಲ್ಲ.

ಹದಿನೆಂಟು ತಿಂಗಳ ಅಜ್ಞಾತವಾಸಾವಧಿಯಲ್ಲಿ ನ್ಯೂಟನ್ ನಡೆಸಿದ ಸಂಶೋಧನೆಗಳನ್ನು ಕುರಿತು ಐವತ್ತು ವರ್ಷಗಳ ತರುವಾಯ (1716) ಅವನು ಈ ರೀತಿ ಬರೆದಿಟ್ಟಿದ್ದಾನೆ: ಶ್ರೇಣಿಯನ್ನು ಸನ್ನಿಹಿತೀಕರಿಸುವ ವಿಧಾನವನ್ನು ಮತ್ತು ಯಾವುದೇ ದ್ವಿಪದದ (ಬೈನಾಮಿಯಲ್) ಯಾವುದೇ ಘಾತವನ್ನು ಇಂಥ ಒಂದು ಶ್ರೇಣಿಗೆ ಹ್ರಸ್ವೀಕರಿಸುವ ಸೂತ್ರವಿಧಿಯನ್ನು 1665ರ ತರುಣದಲ್ಲಿ ಕಂಡುಕೊಂಡೆ; ಅದೇ ವರ್ಷದ ಮೇಯಲ್ಲಿ ಗ್ರೆಗರಿ ಮತ್ತು ಸ್ಲೂಸಿಯಸರ ಸ್ಪರ್ಶಕಗಳ ವಿಧಾನವನ್ನು ಶೋಧಿಸಿದೆ; ನವಂಬರಿನಲ್ಲಿ ಅಭಿವಾಹಗಳ (ಫ್ಲಕ್ಯನ್ಸ್) ನೇರವಿಧಾನ ಪಡೆದೆ; ಮರುವರ್ಷದ ಜನವರಿಯಲ್ಲಿ ವರ್ಣಗಳ ಸಿದ್ದಾಂತ ಸಿದ್ದಿಸಿತು; ಮುಂದಿನ ಮೇಯಲ್ಲಿ ಅಭಿವಾಹಗಳ ಪ್ರತಿಲೋಮ ವಿಧಾನ ತಿಳಿಯಿತು: ಚಾಂದ್ರಕಕ್ಷೆವರೆಗೂ ಗುರುತ್ವ ವ್ಯಾಪಿಸಿರುವುದರ ಬಗ್ಗೆ ಅದೇ ವರ್ಷ (1666) ಯೋಚಿಸತೊಡಗಿದೆ: ಗ್ರಹಗಳನ್ನು ಸ್ವಂತ ಕಕ್ಷೆಗಳಲ್ಲಿ ಇರಗೊಡಿಸುವ ಬಲಗಳು ಪರಿಭ್ರಮಣ ಕೇಂದ್ರಗಳಿಂದ ಗ್ರ್ರಹ ದೂರಗಳ ವ್ಯುತ್ಕ್ರಮ ವರ್ಗಾನುಪಾತದಲ್ಲಿ ಇರಬೇಕೆಂದು ಗ್ರಹಗಳ ಪರಿಭ್ರಮಣ ಕಾಲವನ್ನು ಕುರಿತು ಕೆಪ್ಲರನ ನಿಯಮದ ಆಧಾರದಿಂದ ನಿಗಮಿಸಿ ಆ ಪ್ರಕಾರ ಚಂದ್ರನನ್ನು ಕಕ್ಷೆಯಲ್ಲಿ ಇರಿಸಲು ಬೇಕಾಗುವ ಬಲವನ್ನು ಭೂಮಿಯ ಮೇಲ್ಮೆಯಲ್ಲಿ ಇರುವ ಗುರುತ್ವಬಲದೊಡನೆ ಹೋಲಿಸಿ ಅವೆರಡೂ ಸರಿಸಮಾರಾಗಿ ಹೊಂದುವುದನ್ನು ಅರಿತೆ; ಇವೆಲ್ಲವೂ ನಡೆದದ್ದು ಪ್ಲೇಗ್ ಬಂದ ಎರಡು ವರ್ಷಗಳಲ್ಲಿ (1665-66). ಆ ದಿನಗಳಂದು ನಾನು ಸಂಶೋಧನೆಗೆ ಬೇಕಾಗುವ ವಯಸ್ಸಿನ ಪರಾಕಾಷ್ಠೆಯಲ್ಲಿದೆ ಮತ್ತು ಅಂದಿನಿಂದ ಈಚೆಗೆ ಎಂದೂ ಯೋಚಿಸದಿದ್ದಷ್ಟು ಏಕಾಗ್ರತೆಯಿಂದ ಗಣಿತವನ್ನೂ ನಿಸರ್ಗಶಾಸ್ತ್ರವನ್ನೂ ಚಿಂತಿಸಿದೆ.

ಹೀಗೆ ನ್ಯೂಟನ್ನನ ಸಿದ್ದಿ ಸಾಧನೆಗಳ ತಿರುಳು ಕೇವಲ ಇಪ್ಪತ್ತಮೂರರ ತರುಣನ ಮೇಧಾಶಕ್ತಿಯಿಂದ ಹೊರಬಿದ್ದ ವಸ್ತು. ವಾಸ್ತವಿವಾಗಿ ನ್ಯೂಟನ್ ತನ್ನ ಇಡೀ ಜೀವಿತ ಕಾಲದಲ್ಲಿ ಗಣಿತ. ಖಗೋಳ ಮತ್ತು ಭೌತಶಾಸû್ರಗಳಲ್ಲಿ ನಡೆಸಿದ ಪ್ರಮುಖ ಶೋಧನೆಗಳ ಮೂಲತತ್ತ್ವಗಳು ಅವನ ಮನಸ್ಸಿನಲ್ಲಿ ಅಂಕುರಿಸಿದುದು ಆ ಹದಿನೆಂಟು ತಿಂಗಳುಗಳ ತೀವ್ರ ಫಲವಂತ ದಿನಗಳಂದು.

1667ರಲ್ಲಿ ನ್ಯೂಟನ್ ಮತ್ತೆ ಕೇಂಬ್ರಿಜಿಗೆ ಬಂದು ಅದೇ ವರ್ಷ ಟ್ರಿನಿಟಿ ಕಾಲೇಜಿನ ಫೆಲೋ ಎಂಬ ಪ್ರಶಸ್ತಿಯನ್ನೂ ಮಾರನೆಯ ವರ್ಷ ಎಂ. ಎ. ಪ್ರಶಸ್ತಿಯನ್ನೂ ಪಡೆದ. ಅದೇ ವರ್ಷ (1668) ಈತನ ಪಾಲಿಗೆ ಅಧ್ಯಾಪಕ ಬ್ಯಾರೋನ ಉಪನ್ಯಾಸಗಳನ್ನು ತಿದ್ದಿ ಪರಿಷ್ಕರಿಸುವ ಕಾರ್ಯ ಬಿತ್ತು. ಮಾರನೆಯ ವರ್ಷ (1669) ಅಧ್ಯಾಪಕ ಬ್ಯಾರೊ ತನ್ನ ಗಣಿತಶಾಸ್ತ್ರದ ಲುಕೇಷಿಯನ್ ಪ್ರಾಧ್ಯಾಪಕತ್ವವನ್ನೇ ನ್ಯೂಟನ್ನನಿಗೆ ಒಪ್ಪಿಸಿಬಿಟ್ಟ. ಬ್ಯಾರೊ ಸ್ವತಃ ಪ್ರಕಾಂಡ ಪಂಡಿತನೂ ಉತ್ತಮ ಬೋಧಕನೂ ಆಗಿದ್ದ. ಆದರೂ ಈತ ನ್ಯೂಟನ್ ಸೂರ್ಯನ ಉದಯಪೂರ್ವ; `ಮುಂಜಾನೆಯ ತಾರೆ. ಆದದ್ದು ಕೇವಲ ಐತಿಹಾಸಿಕ ಯೋಗಾಯೋಗ. ತನ್ನ ಶಿಷ್ಯ ತನಗಿಂತ ಅಧಿಕ ಸಮರ್ಥನೆಂದು ಅರಿತು ಆತನಿಗೆ ಗಣಿತಪ್ರಾಧ್ಯಾಪಕತ್ವವನ್ನು ಬಿಟ್ಟು ಕೊಟ್ಟ ಬ್ಯಾರೋ ಉನ್ನತಮಟ್ಟದ ತ್ಯಾಗದ ಪ್ರತೀಕವಾಗಿದ್ದಾನೆ. ಹೀಗೆ ಇಪ್ಪತ್ತೇಳನೆಯ ವಯಸ್ಸಿಗಾಗಲೇ ನ್ಯೂಟನ್ನನಿಗೆ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಆಗ್ರಸ್ಥಾನಲಭಿಸಿತು. ಆ ವೇಳೆಗೆ ಅವನ ಹೆಸರು ಪ್ರಪಂಚದ ಉದ್ದಾಮ ವಿಜ್ಞಾನಿಗಳ ಪಂಕ್ತಿಗೆ ಸೇರಿತ್ತು. ಅಲ್ಲಿಂದ ಇಪ್ಪತ್ತು ವರ್ಷಕಾಲ ಅವನು ಅವಿಚ್ಪಿನ್ನವಾಗಿ ವಿಜ್ಞಾನಶೋಧನೆಯಲ್ಲಿ ನಿರತವಾಗಿದ್ದ. 1672ರಲ್ಲಿ ಎಫ್. ಆರ್. ಎಸ್. ಪ್ರಶಸ್ತಿ ದೊರೆಯಿತು

ದೂರದರ್ಶಕವನ್ನು ಬಳಸಿ ನ್ಯೂಟನ್ ಪ್ರಯೋಗಗಳನ್ನು ಮಾಡತೊಡಗಿದ. ಆದರೆ ಆ ಕಾಲದ ದೂರದರ್ಶಕಗಳಲ್ಲಿ ಕಾಣಬರುತ್ತಿದ್ದ ಪ್ರತಿಬಿಂಬಗಳು ವರ್ಣರಂಜಿತವಾಗಿದ್ದುದರಿಂದ ಅಸ್ಫುಟವಾಗಿದ್ದವು. ಈ ವರ್ಣದೋಷವನ್ನು ನಿವಾರಿಸಬೇಕೆಂದು ಯೋಚಿಸಿ ಅವನು ಬೆಳಕು ಮತ್ತು ಬಣ್ಣಗಳ ವಿಚಾರವಾದ ಮೂಲಭೂತ ಪ್ರಯೋಗಗಳಲ್ಲಿ ಉದ್ಯುಕ್ತನಾದ. ಈ ತೆರೆನ ಅನ್ವೇಷಣೆಗಳಲ್ಲಿ ಅವನದು ಎತ್ತಿದ ಕೈ. ಪ್ರಯೋಗಶಾಲೆಯ ಕತ್ತಲೆಕೋಣೆ ಬಾಗಿಲಿನಲ್ಲಿ ಚಿಕ್ಕರಂಧ್ರವನ್ನು ಮಾಡಿ ಅದರ ಮೂಲಕ ಪ್ರವೇಶಿಸಿದ ಕಿರಣದಂಡವನ್ನು ಗಾಜಿನ ಆಶ್ರಗದ ಮೂಖಾಂತರ ಹಾಯಿಸಿದ. ಇದರಿಂದ ಕಾಮನಬಿಲ್ಲಿನ ಬಣ್ಣಗಳ ರೋಹಿತ ದೊರೆಯಿತು. ಅದರಲ್ಲಿ ಪ್ರಮುಖ ಸಪ್ತವರ್ಣಗಳು ನೇರಳೇ, ಕಪಿಲ, ನೀಲಿ, ಹಸಿರು, ಹಳದಿ, ಕಿತ್ತಳೆ ಕೆಂಪು (ಪಾಟಲ. ಕಪಿಲ, ನೀಲ, ಹರಿತ, ಪೀತ, ಸಾರಂಗ, ರಕ್ತ) ಎಂಬುವು ಅವರೋಹೀ ಕ್ರಮದಲ್ಲಿ ಇದ್ದುದನ್ನು ವೀಕ್ಷಿಸಿದ. ಈ ವರ್ಣಕಿರಣಗಳನ್ನು ಇನ್ನೊಂದು ಆಶ್ರಗದ ಮೂಲಕ ಹಾಯಿಸಿದಾಗ ಮತ್ತೆ ಶ್ವೇತವರ್ಣ ದೊರೆಯಿತು. ಅಲ್ಲದೆ ರೋಹಿತದ ಯಾವುದೇ ಒಂದು ವರ್ಣದ ಕಿರಣಗಳನ್ನು ಮಾತ್ರ ಆಶ್ರಗದ ಮೂಲಕ ಹಾಯಿಸಿದಾಗ ಆ ವರ್ಣವಲ್ಲದೆ ಬೇರೆ ಅವುದೂ ದೊರೆಯಲಿಲ್ಲ. ಇದರಿಂದ ಸೂರ್ಯನ ಬೆಳಕು ಕಾಮನ ಬಿಲ್ಲಿನ ಬಣ್ಣಗಳ ಮಿಶ್ರಣವೆಂದು ನ್ಯೂಟನ್ ತೀರ್ಮಾನಿಸಿದ. ದೂರದರ್ಶನಗಳ ವರ್ಣದೋಷಗಳಿಗೆ ಗಾಜಿನ ಮಸೂರಗಳೇ ಕಾರಣವೆಂದು ಯೋಚಿಸಿ ಆ ಬದಲು ಲೋಹದ ಪ್ರವಣದರ್ಪಣಗಳನ್ನಿಟ್ಟು ವರ್ಣರಹಿತ ಮತ್ತು ಶುದ್ದ ಪ್ರತಿಬಿಂಬಗಳು ಕಾಣುವಂತೆ ಮಾಡಿದ. ಆದರೆ ಈಚೆಗೆ ವರ್ಣರಹಿತ ಪ್ರತಿಬಿಂಬಗಳನ್ನು ಕೊಡುವ ವಿಶೇಷ ರೀತಿ ಗಾಜಿನ ಮಸೂರಗಳನ್ನು ಉಪಜ್ಞಿಸಲಾಗಿದೆ. ಬೆಳಕಿನ ನಿಜವಾದ ಸ್ವರೂಪವೇನು ಎಂಬ ವಿಚಾರವಾಗಿ ಆ ಕಾಲದಲ್ಲಿ ಕಣವಾದ ಮತ್ತು ತರಂಗವಾದ ಎಂಬ ಎರಡು ವಾದಗಳಿದ್ದುವು. ನ್ಯೂಟನ್ ಬಲುಮಟ್ಟಿಗೆ ಕಣವಾದಕ್ಕೆ ಬೆಂಬಲವಿತ್ತಿದ್ದ. ಆದರೆ ಕೆಲವು ವೇಳೆ ಮತ್ತೆ ತರಂಗವಾದವನ್ನೂ ಕೆಲವು ವೇಳೆ ಈ ಎರಡು ವಾದಗಳ ಸಂಮಿಶ್ರಣವನ್ನೂ ಪುರಸ್ಕರಿಸುತ್ತಿದ್ದ. ಖಚಿತವಾದ ಯಾವ ತೀರ್ಮಾನಕ್ಕೂ ಆತ ಬಂದಿದ್ದಂತೆ ಕಾಣುವುದಿಲ್ಲ. ರಸವಿಜ್ಞಾನದಲ್ಲೂ ನ್ಯೂಟನ್ ಕೆಲವು ಪ್ರಯೋಗಗಳನ್ನು ಮಾಡಿದ್ದ. ಲೋಹಾಂತರಣ ಅವನ ಗುರಿಯಾಗಿದ್ದಿತೆಂದು ಕಾಣುತ್ತದೆ. ಆದರೆ ಅದು ಸಾಧ್ಯವಾಗಲಿಲ್ಲ.

ಪಾಠಗಳಲ್ಲಿ ತೊಡಗುವುದು ನ್ಯೂಟನ್ನನಿಗೆ ಇಷ್ಟವಿರಲಿಲ್ಲ. ಈ ಕಾರಣದಿಂದ ಅವನು ತನ್ನ ಸಂಶೋಧನಫಲಗಳನ್ನು ಕ್ಷಿಪ್ರವಾಗಿ ಪ್ರಕಟಿಸುತ್ತಿರಲಿಲ್ಲ. ಆ ಕಾಲದ ಇತರ ವಿಜ್ಞಾನಿಗಳು ಪ್ರಕಟಿಸಿದ ಅನೇಕ ಸಾಧನೆಗಳನ್ನು ಅವರಿಗಿಂತ ಮೊದಲೇ ನ್ಯೂಟನ್ ಆವಿಷ್ಕರಿಸಿದ್ದರೂ ಅವನ್ನು ಆತ ಪ್ರಕಟಿಸುತ್ತಿದ್ದುದು ತೀರ ವಿಳಂಬವಾಗಿಯೇ. ಈ ವಿಳಂಬ ಆಗಾಗ ಸಂಶಯಾತ್ಮಕ ಟೀಕೆಗಳಿಗೆ ಕೂಡ ವೃಥಾ ಕಾರಣವಾಗುತ್ತಿದ್ದುದಿತ್ತು. ವಿಶೇಷ ಪರಿಣಾಮಕಾರಕವಾದ ಅನೇಕ ಸಂಶೋಧನಫಲಗಳು ಅಪ್ರಕಟಿತವಾಗಿ ಅವನ ಬಳಿಯೇ ಇದ್ದುವೆಂದು ಅವನ ಸ್ನೇಹಿತ ಹ್ಯಾಲಿ ಎಂಬಾತನಿಗೆ ಗೊತ್ತಿತ್ತು. ಅವೆಲ್ಲವನ್ನೂ ಹ್ಯಾಲಿ ನ್ಯೂಟನ್ನನೊಡನೆ ಚರ್ಚೆಮಾಡಿ (1684) ಕ್ರೋಡೀಕರಿಸಿ ಪುಸ್ತಕರೂಪದಲ್ಲಿ ಪ್ರಕಟಿಸಬೇಕೆಂದು ಅಗ್ರಹ ಪಡಿಸಿದ. ಪ್ರಕಟನೆಯ ವೆಚ್ಚವನ್ನು ತಾನು(ಹ್ಯಾಲೀ) ದೊಡ್ಡ ಧನಿಕನಲ್ಲವಾದರೂ ವಹಿಸಿಕೊಳ್ಳುವುದಾಗಿ ಕೂಡ ಆಶ್ವಾಸಿಸಿದ. ಅದರಂತೆ ನ್ಯೂಟನ್ 1685ರಲ್ಲಿ ಗ್ರಂಥರಚನೆಯನ್ನು ಪ್ರಾರಂಭಿಸಿ `ಫಿಲಸಾಫಿಯಾ ನ್ಯಾಚುರಲಿಸ್ ಪ್ರಿನ್ಸಿಪಿಯ ಮ್ಯಾಥ್ ಮ್ಯಾಟಿಕ್ ಎಂಬ ಹೆಸರಿನ ಉದ್ಗಂಥವನ್ನು ಪ್ರಕಟಿಸಿದ (1687). ಪ್ರಿನ್ಸಿಪಿಯ ಎಂದು ಲೋಕ ಪ್ರಸಿದ್ದವಾಗಿರುವ ಈ ಗ್ರಂಥ ಅಂದು ಪಾಶ್ಚಾತ್ಯ ದೇಶದಲ್ಲಿ ವಿಜ್ಞಾನಮಾಧ್ಯಮವಾಗಿದ್ದ ಲ್ಯಾಟಿನ್ ಭಾಷೆಯಲ್ಲಿದೆ. ಇದರಲ್ಲಿ ಮೂರು ಭಾಗಗಳಿವೆ. ಮೊದಲನೆಯದರಲ್ಲಿ ಗುರುತ್ವ ಮತ್ತು ಚಲನನಿಯಮಗಳನ್ನು ಪ್ರಥಮವಾಗಿ ಪ್ರತಿಪಾದಿಸಲಾಗಿದೆ. ರಾಶಿ m ಮತ್ತು m ಇರುವ ಎರಡು ವಸ್ತುಗಳು ಡಿ ಅಂತರದಲ್ಲಿದ್ದರೆ ಒಂದು ಇನ್ನೊಂದು ಉmm/ಡಿ2 ದಷ್ಟು ಬಲದಿಂದ ಆಕರ್ಷಿಸುತ್ತದೆ ಎಂಬುದೇ ಗುರುತ್ವನಿಯಮ. ಚಲನನಿಯಮಗಳು ಮೂರು : 1 ಬಾಹ್ಯಬಲಪ್ರಯೋಗ ಮಾಡಿದ ವಿನಾ ತಟಸ್ಥ ವಸ್ತು ಚಲಿಸದು ಮತ್ತು ಚರವಸ್ತುವಿನ ಚಲೆನ ಬದಲಾಗದು. 2 ಚಲನೆಯ ಬದಲಾವಣೆಯ ದರ ಅನ್ವಿತ ಬಾಹ್ಯಬಲದ ಅನುಪಾತದಲ್ಲಿರುತ್ತದೆ ಮತ್ತು ಅದು ಅನ್ವಿತಬಲ ಪ್ರೇರಿಸುವ ದಿಕ್ಕಿನಲ್ಲಿ ಆಗುತ್ತದೆ. 3 ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಸಮ ಮತ್ತು ವಿರುದ್ಧ.

ಪ್ರಿನ್ಸಿಪಿಯ ಗ್ರಂಥದ ಎರಡನೆಯ ಭಾಗದಲ್ಲಿ ಮೊದಲನೆಯ ಭಾಗದ ವಸ್ತುವಿನ ಹೆಚ್ಚಿನ ವಿವರಣೆ ಮತ್ತು ರೋಧದ ವಿಚಾರಗಳಿವೆ. ಮೂರನೆಯ ಭಾಗದಲ್ಲಿ ಗ್ರಹಚಲನೆ. ಡೇ ಕಾರ್ಟೆಯ ಸುಳಿಗಳು (ವೋರ್ಟಿಸಸ್) ಮುಂತಾದ ವಿಷಯಗಳಿವೆ.

ಪ್ರಿನ್ಸಿಪಿಯ ಗ್ರಂಥವನ್ನೇ ಅಲ್ಲದೆ ನ್ಯೂಟನ್ ಇನ್ನೂ ಕೆಲವು ಗ್ರಂಥಗಳನ್ನು ಬರೆದಿದ್ದಾನೆ. ಬೀಜಗಣಿತ ಮತ್ತು ಸಮೀಕರಣಗಳ ವಿಷಯವಾದ ಉಪನ್ಯಾಸ ರೂಪದ `ಅರಿತ್ ಮೆಟಿಕ್ ಯೂನಿವಸ್ರ್ಯಾಲಿಸ್ ಎಂಬ ಪುಸ್ತಕವನ್ನು 1673-1683ರ ಅವಧಿಯಲ್ಲಿ ಬರೆದ; ಪ್ರಕಟವಾದದ್ದು 1707ರಲ್ಲಿ. ಶ್ರೇಣಿ ವಿಶ್ಲೇಷಣೆಯ ಮೇಲಿನ ಗ್ರಂಥವನ್ನು 1669ರಲ್ಲಿ ಬರೆದ; ಪ್ರಕಟವಾದದ್ದು 1711ರಲ್ಲಿ. ರೇಖಾಕ್ಷೇತ್ರದ ಮೇಲಿನ ಗ್ರಂಥವನ್ನು 1671ರಲ್ಲಿ ಬರೆದ. ಪ್ರಕಟವಾದದ್ದು 1704ರಲ್ಲಿ ಪ್ರವಾಹ ಪದ್ಧತಿ ಮತ್ತು ಶ್ರೇಣಿಗಳು ಎಂಬ ಲ್ಯಾಟಿನ್ ಪುಸ್ತಕದ ಇಂಗ್ಲಿಷ್ ಅನುವಾದ `ದಿ ಮೆತಡ್ ಆಫ್ ಫ್ಲಕ್ಯನ್ಸ್ ಅಂಡ್ ಡೆಫಿನಿಟ್ ಸೀರೀಸ್ ಎಂಬ ಹೆಸರಿನಲ್ಲಿ ನ್ಯೂಟನ್ನನ ಮರಣಾನಂತರ ಪ್ರಕಟವಾಯಿತು.

ಜೀವಿತಕಾಲದಲ್ಲೇ ನ್ಯೂಟನ್ ಪ್ರಪಂಚವಿಖ್ಯಾತನಾಗಿದ್ದ. ವಿಜ್ಞಾನಿಯಾದವ ಬಯಸಬಹುದಾದ ಎಲ್ಲ ಬಹುಮಾನಗಳೂ ಸನ್ಮಾನಗಳೂ ಅವನಿಗೆ ಲಭಿಸಿದುವು. ಖ್ಯಾತಿಗೆ ಅನುಗುಣವಾಗಿ ಅವನ ಪದವಿಯನ್ನೂ ಹೆಚ್ಚಿಸಲಾಯಿತು. ಆದರೆ ಪದವಿಯನ್ನು ಹೆಚ್ಚಿಸುವ ಸಂಭ್ರಮದಲ್ಲಿ ಅವನನ್ನು ವಿಜ್ಞಾನಕ್ಷೇತ್ರದಿಂದ ವರ್ಗಾಯಿಸದೆ ಇದ್ದಿದ್ದರೆ ಅವನಿಂದ ಪ್ರಪಂಚಕ್ಕೆ ಇನ್ನೂ ಹೆಚ್ಚಿನ ಉಪಯೋಗವಾಗುತ್ತಿದ್ದುದು ಖಾತ್ರಿ. 1689ರಲ್ಲಿ ನ್ಯೂಟನ್ ವಿಶ್ವವಿದ್ಯಾಲಯ ಕ್ಷೇತ್ರದಿಂದ ಬ್ರಿಟಿಷ್ ಸಂಸತ್ತಿಗೆ ಚುನಾಯಿತನಾಗಿ ಕೇಂಬ್ರಿಜಿನಿಂದ ಲಂಡನ್ನಿಗೆ ಹೋದ. ಆದರೆ ಆ ಸಂಸತ್ತಿನ ಅವಧಿ ಹದಿಮೂರು ತಿಂಗಳು ಮಾತ್ರ ಇದ್ದುದರಿಂದ ಅದು ಮುಗಿದ ತರುವಾಯ ಕೇಂಬ್ರಿಜಿಗೆ ಹಿಂತಿರುಗಿದ. 1696ರಲ್ಲಿ ಅವನನ್ನು ಟಂಕಸಾಲೆಯ ಪಾಲಕನಾಗಿ ನೇಮಿಸಲಾಯಿತು. ಅಲ್ಲಿಂದ ಮುಂದೆ ನ್ಯೂಟನ್ ಲಂಡನ್ ನಗರನಿವಾಸಿ ಪಾಲಕನಾಗಿ ನೇಮಿಸಲಾಯಿತು. ಅಲ್ಲಿಂದ ಮುಂದೆ ನ್ಯೂಟನ್ ಲಂಡನ್ ನಗರನಿವಾಸಿ ಆಗಿಯೇ ಇದ್ದ. 169ರಲ್ಲಿ ಅವನನ್ನು ಟಂಕಸಾಲೆಯ ಮುಖ್ಯವಾಗಿ ಮಾಡಿದರು. ಈ ಹುದ್ದೆಯಲ್ಲಿ ಅವನು ನಾಣ್ಯಗಳಿಗೆ ಸಂಬಂಧಿಸಿದ ಹೊಸ ಸೂತ್ರವನ್ನು ಶೋಧಿಸಿ ನಾಣ್ಯಚುನಾವಣೆಯನ್ನು ಸುವ್ಯವಸ್ಥೆಗೊಳಿಸಿದ. ಇನ್ನೊಮ್ಮೆ ಅವನು ಸಂಸತ್ತಿಗೆ 1701ರಲ್ಲಿ ಚುನಾಯಿತನಾದ. ಆದರೆ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ಪ್ರದರ್ಶಿಸಲಿಲ್ಲ. 1703ರಿಂದ ಅಜೀವಾಂತ ರಾಯಲ್ ಸೊಸೈಟಿಯ ಅಧ್ಯಕ್ಷನಾಗಿದ್ದ.

ನ್ಯೂಟನ್ ಸ್ವಭಾವತಃ ಗಾಂಭೀರ್ಯವಂತ. ಅವನು ವಿನೋದವಾಗಿ ಮಾತಾಡಿದ್ದಾಗಲಿ ನಕ್ಕದ್ದಾಗಲಿ ಅಪೂರ್ವ. ಒಂದೆರಡು ಸಲ ಅವನು ನಕ್ಕಿದ್ದರೆ ಅದು ಅವನು ಆಡಿದ ಮಾತು ಎದುರಾಳಿಗೆ ಅರ್ಥವಾಗದಿದ್ದಾಗ ಮಾತ್ರ. ವ್ಯಾಯಾಮ, ಸಂಗೀತ. ಸಾಹಿತ್ಯಗಳಲ್ಲಿ ಅವನಿಗೆ ಆಸಕ್ತಿ ಇರಲಿಲ್ಲ. ಸ್ವಂತ ಆಹಾರ, ಉಡುಪುಗಳ ಕಡೆಗೂ ಹೆಚ್ಚು ಲಕ್ಷ್ಯವಿರಲಿಲ್ಲ. ಅವನು ಅವಿವಾಹಿತನಾಗಿಯೇ ಇದ್ದ. ಚಿಕ್ಕವಯಸ್ಸಿನಲ್ಲಿ ನಡೆದ ಒಂದು ಪ್ರೇಮಪ್ರಕರಣದ ವಿನಾ ಅವನಿಗೆ ಸ್ತ್ರೀಹವ್ಯಾಸವಿರಲಿಲ್ಲ. ವಿಜ್ಞಾನಚಿಂತನೆಯೊಂದೇ ಅವನ ಹವ್ಯಾಸ ಆಗಿತ್ತು. ಕೆಲವು ವೇಳೆ ಯೋಚನಾಮಗ್ನನಾಗಿ ಬಾಹ್ಯಸನ್ನಿವೇಶವನ್ನೇ ಮರೆತು ಬಿಡುತ್ತಿದ್ದ. ಒಂದು ಸಲ ತನ್ನ ಮನೆಯಲ್ಲಿ ನಡೆಸಿದ ಔತಣಕೂಟದ ಮಧ್ಯೆ ಸೀಸೆಯನ್ನು ತರುವುದಕ್ಕಾಗಿ ಒಳಕ್ಕೆ ಹೋದವ ಔತಣವನ್ನೇ ಮರೆತು ಕೋಣೆಯಲ್ಲಿ ಏನನ್ನೊ ಯೋಚಿಸುತ್ತ ಕುಳಿತುಬಿಟ್ಟನಂತೆ. ಇನ್ನೊಮ್ಮೆ ತನ್ನ ಕುದುರೆಯನ್ನು ನಡೆಸಿಕೊಂಡು ದಿಣ್ಣೆಯ ಮೇಲಕ್ಕೆ ಹೋಗುತ್ತಿದ್ದಾಗ ಏನನ್ನೊ ಯೋಚಿಸುತ್ತಿದ್ದ.ನಂತೆ. ಸ್ವಲ್ಪಕಾಲವಾದ ಮೇಲೆ ಕುದುರೆಯನ್ನೇರುವ ಯೋಚನೆ ಅವನಿಗೆ ಬಂದಾಗ ಕೈಯಲ್ಲಿ ಲಗಾಮು ಮಾತ್ರ ಇದ್ದಿತಂತೆ. ಕುದುರೆ ಅಲ್ಲಿರಲಿಲ್ಲವಂತೆ.

ನ್ಯೂಟನ್ ಎಷ್ಟು ಘನ ವಿಜ್ಞಾನಿಯೋ ಅಷ್ಟು ನಮ್ರವಿನಯಶಾಲಿಯೂ ಹೌದು. `ಕಡಲಕಿನಾರೆಯಲ್ಲಿ ಕಪ್ಪೆ ಚಿಪ್ಪುಗಳನ್ನು ಆಯ್ದು ಆಡುವ ಮಕ್ಕಳಂತಿದ್ದೇವೆ ನಾವು! ಆಗಾಧವಾದ ಜ್ಞಾನಾರ್ಣವನ್ನು ಇನ್ನೂ ಪ್ರವೇಶಿಸಿಯೇ ಇಲ್ಲ! ನನಗೆ ಇತರರಿಗಿಂತ ಸ್ವಲ್ಪ ಆಚಿನವರೆಗೆ ಕಾಣಿಸಿರುವುದಾದರೆ ನಾನು ಉದ್ದಾಮ ವ್ಯಕ್ತಿಗಳ ಹೆಗಲಮೇಲೆ ಕುಳಿತಿರುವುದರಿಂದ ಮಾತ್ರ ಸಾಧ್ಯವಾಗಿದೆ ಎಂದು ನ್ಯೂಟನ್ ಹೇಳುತ್ತಿದ್ದ.

ವೃದ್ದಾಪ್ಯದಲ್ಲಿ ನ್ಯೂಟನ್ನನ ಪ್ರತಿಭೆ ಸುಪ್ತವಾಗಿತ್ತು. ಕೊನೆಗೆ ಸುಮಾರು ಮೂರು ವರ್ಷಗಳ ಅಸ್ವಾಸ್ಥ್ಯದ ಬಳಿಕ 1727ನೆಯ ಮಾರ್ಚ್ 20ರಂದು ತೀರಿಹೋಗ. ಆಗ ಅವನ ವಯಸ್ಸು 85. ಅವನ ಶವವನ್ನು ಲಂಡನ್ ನಗರದ ವೆಸ್ಟ್ ಮಿನ್ ಸ್ಟರ್ ಅಬೆಯಲ್ಲಿ ಹೂಳಲಾಯಿತು. (ಬಿ.ಎಸ್.ಎಸ್.)