ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಟನ್, ಜಾನ್

ವಿಕಿಸೋರ್ಸ್ದಿಂದ

ನ್ಯೂಟನ್, ಜಾನ್ 1725-1807. ಖ್ಯಾತ ಪುರೋಹಿತ ಹಾಗೂ ಸ್ತೋತ್ರಗೀತೆಗಳ ಕರ್ತೃ. ತಂದೆ ವ್ಯಾಪಾರದ ಹಡಗಿನ ನಾಯಕನಾಗಿದ್ದು ಮುಂದೆ ಹಡ್ಸನ್ ಕೊಲ್ಲಿಯಲ್ಲಿರುವ ಯಾರ್ಕ್ ಕೋಟೆಯ ಗೌರ್ನರ್ ಆದ. ವಿದ್ಯಾಭ್ಯಾಸ ಅಷ್ಟಕಷ್ಟೆ: ಹೆಚ್ಚು ಓದಲಾಗಲಿಲ್ಲ. 1737ರಿಂದ 1742ರ ವರೆಗೆ ತಂದೆಯ ಹಡಗಿನಲ್ಲೇ ಕೆಲಸ ಮಾಡಿದ. ಅನಂತರ ಹಾರ್‍ವಿಕ್ ಎಂಬ ಯುದ್ಧನೌಕೆಯಲ್ಲಿ ಕಡ್ಡಾಯವಾಗಿ ಕೆಲಸ ಮಾಡಬೇಕಾಗಿ ಬಂತು. ಅಲ್ಲಿ ಮಿಡ್‍ಶಿಪ್‍ಮನ್ ಆಗಿ ನೇಮಕಗೊಂಡ. ಹಡಗು ಪ್ಲಿಮತ್ ಬಳಿ ತಂಗಿದ್ದಾಗ ಅಲ್ಲಿಂದ ಓಡಿಹೋಗಲು ಯತ್ನಿಸಿ ವಿಫಲನಾದ. ಇದಕ್ಕಾಗಿ ಕಠಿಣ ದಂಡನೆಗೆ ಒಳಗಾದ. ಜಿಗುಪ್ಸೆಗೊಂಡು ಆಫ್ರಿಕದ ಒಂದು ವ್ಯಾಪಾರ ಹಡಗಿನಲ್ಲಿ ಕೆಲಸಕ್ಕೆ ಸೇರಿದ. ಅನಂತರ ಗುಲಾಮರ ವ್ಯಾಪಾರದಲ್ಲಿ ತೊಡಗಿದ್ದ ಹಡಗುಗಳಲ್ಲಿ ಮೊದಲು ಸಹಾಯಕ ಅಧಿಕಾರಿಯಾಗಿ, ಅನಂತರ ನಾಯಕನಾಗಿ ಕೆಲಸ ಮಾಡಿದ. ಈ ಮಧ್ಯೆ ವಿರಾಮಕಾಲದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದ. ಕೊನೆಗೆ 1755ರಲ್ಲಿ ಸಮುದ್ರಯಾನವನ್ನು ಬಿಟ್ಟು ಲಿವರ್ ಪೂಲ್‍ನಲ್ಲಿ ಸಮುದ್ರದ ಉಬ್ಬರವಿಳಿತಗಳ ಪೈಮಾಷಿಕದಾರನಾಗಿ ನೇಮಕಗೊಂಡ. ಆ ವಯಸ್ಸಿನಲ್ಲೂ ಗ್ರೀಕ್ ಮತ್ತು ಹಿಬ್ರೂ ಭಾಷೆಗಳನ್ನು ಆಭ್ಯಸಿಸಲು ತೊಡಗಿದ. 1758ರಲ್ಲಿ ಪುರೋಹಿತ ವರ್ಗಕ್ಕೆ ಸೇರಿಸಿಕೊಳ್ಳಬೇಕೆಂದು ಯಾರ್ಕಿನ ಆರ್ಚ್‍ಬಿಷಪ್‍ರನ್ನು ಪ್ರಾರ್ಥಿಸಿಕೊಂಡ. 1764ರಲ್ಲಿ ಒಲ್ನಿಯ ಕ್ಯೂರೇಟ್ ಆಗಿ ನೇಮಕಗೊಂಡ. ಅನಂತರ ಲಿಂಕನ್ನಿನ ಬಿಷಪ್ಪರಿಂದ ಪುರೋಹಿತ ವರ್ಗಕ್ಕೆ ಸೇರಿಸಿಕೊಳ್ಳಲ್ಪಟ್ಟ..

ಪ್ರಸಿದ್ಧ ಕವಿ ವಿಲಿಯಂ ಕೌಪರನ ಸ್ನೇಹ ಬೆಳೆಸಿದ (1767). ಇಬ್ಬರೂ ಕೂಡಿ 1779ರಲ್ಲಿ ಒಲ್ನಿ ಸ್ತೋತ್ರಗೀತೆಗಳನ್ನು ಪ್ರಕಟಿಸಿದರು. ಅದೇ ವರ್ಷ ಲಂಡನ್ನಿನ ಸೇಂಟ್ ಮೇರಿ ವುಲ್‍ನಾಶನ ರೆಕ್ಟರ್ ಆಗಿ ನೇಮಕಗೊಂಡ.

ನ್ಯೂಟನ್ ಒಂದೆರಡು ಧಾರ್ಮಿಕ ಗದ್ಯಗ್ರಂಥಗಳನ್ನು ಬರೆದಿರುವನಾದರೂ ಅವನ ಹೆಸರು ಶಾಶ್ವತವೆನಿಸಿರುವುದು ಅವನು ಬರೆದಿರುವ ಸ್ತೋತ್ರಗೀತೆಗಳಿಂದ. (ಎಸ್.ಎನ್.ಎಸ್.ವಿ.)