ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಟ್ರಿನೊ

ವಿಕಿಸೋರ್ಸ್ದಿಂದ

ನ್ಯೂಟ್ರಿನೊ - ಆವೇಶರಹಿತ, ವಿರಾಮರಾಶಿ ಶೂನ್ಯ ಮತ್ತು ಗಿರಕಿ 1/2 ಇರುವ ಕಣ. ವಿಕಿರಣಪಟು ಧಾತುಗಳು ಬೀಟಕಣವನ್ನು ಉತ್ಸರ್ಜಿಸುವ ವಿದ್ಯಮಾನವನ್ನು ಪರಿಶೀಲಿಸಿದಾಗ ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂತು; ಬೀಟಕಣವನ್ನು ಉತ್ಸರ್ಜಿಸಿದ ಬಳಿಕ ಉಳಿದ ನ್ಯೂಕ್ಲಿಯಸ್ಸಿನ ರಾಶಿ ಹಾಗೂ ಬೀಟಕಣದ ರಾಶಿ ಇವುಗಳ ಮೊತ್ತ ಮೂಲ ನ್ಯೂಕ್ಲಿಯಸ್ಸಿನ ರಾಶಿಗಿಂತ ಸ್ವಲ್ಪ ಕಡಿಮೆ ಇತ್ತು. ಕಣ್ಮರೆಯಾದ ರಾಶಿ ವೇಗವಾಗಿ ಚಿಮ್ಮಿ ಬಂದ ಬೀಟಕಣದ ಶಕ್ತಿಯಾಗಿ ಪರಿವರ್ತಿತವಾಗಿರಬಹುದೆಂದು ಸಂದೇಹಿಸಿ, ಬೀಟಕಣದ ಶಕ್ತಿಯನ್ನು ಗಣನೆಗೆ ತೆಗೆದುಕೊಂಡಾಗ್ಯೂ ಲೆಕ್ಕ ತಾಳೆಯಾಗಲಿಲ್ಲ. ಅಂದರೆ ಶಕ್ತಿ ನಿತ್ಯತ್ವ ನಿಯಮದ ಉಲ್ಲಂಘನೆಯಾಯಿತೆ ಎಂಬ ಸಂದೇಹವೂ ಬಂದಿತು. ಈ ಲೆಕ್ಕವನ್ನು ಸರಿದೂಗಿಸಲು ಸ್ವಿಟ್‍ಜûರ್‍ಲೆಂಡಿನ ಪೌಲಿ ಎಂಬ ವಿಜ್ಞಾನಿ ನೂತನ ಕಣವೊಂದನ್ನು ಕಲ್ಪಿಸಿದ (1931). ಈ ಕಲ್ಪಿತಕಣಕ್ಕೆ ಫರ್ಮಿ ನ್ಯೂಟ್ರಿನೊ ಎಂಬುದಾಗಿ ಹೆಸರಿತ್ತ (ಇಟಾಲಿಯನ್ ಭಾಷೆಯಲ್ಲಿ ನ್ಯೂಟ್ರಿನೊ ಎಂದರೆ ಪುಟ್ಟ ನ್ಯೂಟ್ರಾನ್ ಎಂದರ್ಥ).

ಬೆಳಕಿನ ವೇಗದಿಂದ ಚಲಿಸುತ್ತಿರುವ ನ್ಯೂಟ್ರಿನೊ ಬೇರೆ ವಸ್ತುಗಳೊಡನೆ ವರ್ತಿಸುವ ಸಂಭವ ತೀರ ಕಡಿಮೆ. ಅದು ನೀರಿನಲ್ಲಿ ಅದರ ಅಣುಗಳೊಡನೆ ಒಮ್ಮೆಯೂ ಸಂಘಟಿಸದೆ 100 ಬೆಳಕು ವರ್ಷಗಳಷ್ಟು ದೂರ ಚಲಿಸಬಲ್ಲುದು. ಇಂಥ ಕಣವನ್ನು ಗುರುತಿಸುವುದು ಬಲು ಕಷ್ಟ. ಆದರೆ ಅಪರೂಪವಾಗಿ ನ್ಯೂಟ್ರಿನೊ ಸ್ವಲ್ಪ ದೂರ ಚಲಿಸುವಷ್ಟರಲ್ಲಿಯೇ ನೀರಿನ ಅಣುವಿಗೆ ಸಂಘಟ್ಟಿಸುವುದೂ ಉಂಟು. ನ್ಯೂಟ್ರಿನೊ ಪ್ರೋಟಾನಿನೊಡನೆ ವರ್ತಿಸಿ ಗ್ಯಾಮಕಿರಣವನ್ನು ಉತ್ಸರ್ಜಿಸುತ್ತದೆಂದು ಡಿರಾಕ್ ತಾತ್ವಿಕವಾಗಿ ಪ್ರತಿಪಾದಿಸಿದ. ಇದನ್ನು ಪ್ರಾಯೋಗಿಕವಾಗಿ ಸಾಧಿಸಿ ತೋರಿಸುವ ಯತ್ನ ನಡೆಯಿತು. ಪರಮಾಣು ಕ್ರಿಯಾಗಾರದಲ್ಲಿ ಅಸಂಖ್ಯಾತ ಎಲೆಕ್ಟ್ರಾನುಗಳು ಉತ್ಪನ್ನವಾಗುವುದರಿಂದ ಅದೇ ಕಾಲಕ್ಕೆ ನ್ಯೂಟ್ರಿನೊಗಳು ಕೂಡ ಹೇರಳವಾಗಿ ಉತ್ಪನ್ನವಾಗಬೇಕಷ್ಟೆ. ಅಮೆರಿಕದ ಎಫ್. ರೀನೆಸ್ ಹಾಗೂ ಸಿ.ಎಲ್ ಕೋವಾನ್ ಎಂಬ ವಿಜ್ಞಾನಿಗಳು ಪರಮಾಣು ಕ್ರಿಯಾಗಾರದ ಪಕ್ಕದಲ್ಲಿ ನೀರಿನ ತೊಟ್ಟಿಯನ್ನಿಟ್ಟು ನ್ಯೂಟ್ರಿನೊಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು(1956). ಹೀಗೆ ಪೌಲಿ 1913ರಲ್ಲಿ ಕನಸುಕಂಡ ಕಣ ಇಪ್ಪತ್ತೈದು ವರ್ಷಾನಂತರ ನನಸಾಯಿತು.

ನ್ಯೂಟ್ರಿನೊಗಳಲ್ಲಿ ಎರಡು ವಿಧ : ನ್ಯೂಟ್ರಿನೊ, ಪ್ರತಿನ್ಯೂಟ್ರಿನೊ, ನ್ಯೂಕ್ಲಿಯಸ್ ಬೀಟ ಕಣವನ್ನು ಉತ್ಸರ್ಜಿಸಿ ವಿಘಟನೆಗೊಳ್ಳುವಾಗ ನ್ಯೂಟ್ರಿನೊ ಹೊರಬೀಳುವಂತೆ ಸಂಲಯನ ಕ್ರಿಯೆಯಲ್ಲಿ ಪಾಸಿಟ್ರಾನುಗಳೊಂದಿಗೆ ಪ್ರತಿ ನ್ಯೂಟ್ರಿನೊಗಳು ಹೊರಬೀಳುತ್ತವೆ. ನ್ಯೂಟ್ರಿನೊ ಹಾಗೂ ಪ್ರತಿನ್ಯೂಟ್ರಿನೊಗಳಲ್ಲಿ ಇರುವ ವ್ಯತ್ಯಾಸ ಒಂದೇ ಒಂದು. ನ್ಯೂಟ್ರಿನೊ ಪ್ರದಕ್ಷಿಣ ದಿಶೆಯಲ್ಲಿ ಗಿರಕಿಸಿದರೆ ಪ್ರತಿನ್ಯೂಟ್ರಿನೊ ಅಪ್ರದಕ್ಷಿಣ ದಿಶೆಯಲ್ಲಿ ಗಿರಕಿಸುತ್ತದೆ. ಸೂರ್ಯ ಮತ್ತು ನಕ್ಷತ್ರಗಳಲ್ಲಿ ಸಂಲಯನ ಕ್ರಿಯೆ ನಡೆಯುವುದರಿಂದ ಅಲ್ಲಿ ಅಸಂಖ್ಯಾತ ನ್ಯೂಟ್ರಿನೊಗಳು ಉತ್ಪನ್ನವಾಗುವುದೆಂದು ನಂಬಲಾಗಿದೆ. ನಕ್ಷತ್ರದ ಆಂತರಿಕ ಉಷ್ಣತೆ 6 ಬಿಲಿಯನ್ ಡಿಗ್ರಿ ಸೆಲ್ಸಿಯಸುಗಳಷ್ಟಾದಾಗ ಪ್ರತಿಯೊಂದು ಸೆಕೆಂಡಿಗೆ 1053 ನ್ಯೂಟ್ರಿನೊಗಳು ಸೃಷ್ಟಿಗೊಳ್ಳಲಾರಂಭಿಸುತ್ತವೆ. ಇವು ಶಕ್ತಿಯನ್ನು ತೆಗೆದುಕೊಂಡು ಹಾರಿಹೋಗುವುದರಿಂದ ಕೆಲವೇ ಮಿನಿಟುಗಳಲ್ಲಿ ನಕ್ಷತ್ರ ಕುಸಿದು ಆಸ್ಫೋಟನೆಗೊಳ್ಳುತ್ತದೆ.

ಸೌರ ನ್ಯೂಟ್ರಿನೊಗಳ ಅಧ್ಯಯನಕ್ಕಾಗಿ ಮುಂಬೈಯ ತಾತಾ ಮೂಲಭೂತ ಸಂಶೋಧನ ಸಂಸ್ಥೆ ಕೋಲಾರ ಚಿನ್ನದ ಗಣಿಯೊಳಗೆ 2,250 ಮೀಟರ್ ಆಳದಲ್ಲಿ ಪ್ರಯೋಗಶಾಲೆಯನ್ನು ನಿರ್ಮಿಸಿದೆ. (ಡಿ.ಆರ್.ಬಿ.)