ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಪೋರ್ಟ್

ವಿಕಿಸೋರ್ಸ್ದಿಂದ

ನ್ಯೂಪೋರ್ಟ್ - ಈ ಹೆಸರಿನ ಅನೇಕ ಪಟ್ಟಣಗಳಿವೆ.

1 ದಕ್ಷಿಣ ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಕಡಲ್ಗಾಲುವೆಯ ಹ್ವೈಟ್ ದ್ವೀಪದಲ್ಲಿರುವ ಒಂದು ಪಟ್ಟಣ. ಮೆಡೀನ ನದಿಯ ವಿಶಾಲವಾದ ಅಳಿವೆಯಲ್ಲಿರುವ ವಜ್ರಾಕಾರದ ದ್ವೀಪದಲ್ಲಿ ಮಧ್ಯದ ಕಡೆಗೆ ಉ.ಅ.50ಲಿ 42' ಮತ್ತು ಪ.ರೇ.1ಲಿ 18' ಮೇಲೆ ಇದೆ. ಇದು ಒಂದು ಬರೋ, ಜನಸಂಖ್ಯೆ 22,309(1971). ಹಿಂದೆ ಇದು ಬಹುಶಃ ಮೆಡೀನದ ರೋಮನ್ ವಸತಿಗಳಿಂದ ಕೂಡಿತ್ತು. ಅನಂತರ ಇಲ್ಲಿ ನೆಲೆಸಿದ ಸ್ಯಾಕ್ಸನ್ ವಸತಿಗಳು ಕಂಡುಬರುವುದಿಲ್ಲ. ಈ ಪಟ್ಟಣಕ್ಕೆ ಮೊದಲನೆಯ ಸನ್ನದು 1177 ಮತ್ತು 1184ರ ಮಧ್ಯೆ ನೀಡಲಾಯಿತು. ಇಲ್ಲಿ 1184 ರಿಂದಲೂ ಶನಿವಾರದಂದು ಸಂತೆ ಕೂಡುತ್ತ ಬಂದಿದೆ. 1608 ರಲ್ಲಿ ಇದು ಬರೋ ಆಗಿ ಸನ್ನದು ಪಡೆಯಿತು. ಸೆಂಟ್ ತಾಮಸ್ ಆಫ್ ಕ್ಯಾಂಟರ್‍ಬರಿ ಚರ್ಚ್, ಪುರಸಭಾ ಭವನ ಇಲ್ಲಿಯ ಮುಖ್ಯ ಕಟ್ಟಡಗಳು. ನ್ಯೂಪೋರ್ಟ್‍ನ ವ್ಯಾಪಾರ ಸೌಲಭ್ಯಗಳಿಂದಾಗಿ ಅದು ಐಲ್ ಆಫ್ ಹ್ವೈಟ್‍ನ ಆಡಳಿತಕೇಂದ್ರವಾಗಿದ್ದ ಕ್ಯಾರಿಸ್ ಬ್ರೂಕನ್ನು ಹಿಂದೆ ಬೀಳಿಸಿ ತಾನೇ ಆ ಸ್ಥಾನ ಪಡೆದುಕೊಂಡಿತು. ಈಗ ಕ್ಯಾರಿಸ್‍ಬ್ರೂಕ್ ನ್ಯೂಪೋರ್ಟ್‍ನ ಒಂದು ಉಪನಗರ. ನ್ಯೂಪೋರ್ಟ್ ಹ್ವೈಟ್ ದ್ವೀಪದ ವ್ಯವಸಾಯಕೇಂದ್ರ; ಇಲ್ಲಿಯ ಬಂದರಿನ ಮೂಲಕ ಮುಖ್ಯ ಭೂಭಾಗದೊಡನೆ ವಾಣಿಜ್ಯ ಬೆಳೆದಿದೆ. ನ್ಯೂಪೋರ್ಟಿನ ಮುಖ್ಯ ಕೈಗಾರಿಕೆಗಳು ಪ್ಲಾಸ್ಟಿಕ್ ತಯಾರಿಕೆ, ಮರಗೆಲಸ, ಗಿರಣಿಗಾರಿಕೆ ಮತ್ತು ಮದ್ಯಸಾರ ತಯಾರಿಕೆ. ನ್ಯೂಪೋರ್ಟ್‍ನ ಹೊರವಲಯದಲ್ಲಿ ಬ್ರಿಟನ್ನಿನ ಅತ್ಯಂತ ಭದ್ರ ಕಾರಾಗೃಹವಾದ ಪಾರ್ಕ್‍ಹಸ್ರ್ಟ್ ಇದೆ.

2 ಅಮೆರಿಕ ಸಂಯುಕ್ತ ಸಂಸ್ಥಾನಗಳ ಅರ್ಕಾನ್ಸಸ್‍ನ ಈಶಾನ್ಯ ದಿಕ್ಕಿನಲ್ಲಿ ಹ್ವೈಟ್ ನದಿಯ ದಡದ ಮೇಲೆ ಈ ಹೆಸರಿನ ಒಂದು ಪಟ್ಟಣವಿದೆ. ಜ್ಯಾಕ್ಸನ್ ಕೌಂಟಿಯ ಆಡಳಿತಕೇಂದ್ರವಿದು. ಉತ್ತರದಲ್ಲಿರುವ ಜ್ಯಾಕ್‍ಸನ್‍ಪೋರ್ಟ್ ಪಟ್ಟಣದ ನಿವಾಸಿಗಳು ನದಿಗೆ ಅಡ್ಡಲಾಗಿ ಸೇತುವೆ ಕಟ್ಟಿ ನೇರ ಹೊರದಾರಿ ನಿರ್ಮಿಸಲು ಅವಕಾಶ ಕೊಡಲು ನಿರಾಕರಿಸಿದಾಗ ಆ ನದಿಯ ಮೇಲಿನ ಹೊಸ ಬಂದರಾಗಿ (ನ್ಯೂಪೋರ್ಟ್) ಇದನ್ನು 1870ರಲ್ಲಿ ಸ್ಥಾಪಿಸಲಾಯಿತು. 1875ರಲ್ಲಿ ಇದಕ್ಕೆ ಅಧಿಕೃತ ಮಾನ್ಯತೆ ದೊರಕಿತು. ಜ್ಯಾಕ್ಸನ್‍ಪೋರ್ಟ್ ಬದಲು ಇದನ್ನು ಕೌಂಟಿಯ ಆಡಳಿತ ಕೇಂದ್ರವಾಗಿ ಮಾಡಲಾಯಿತು (1892). ಆ ಪ್ರದೇಶದ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಹಡಗಿನಲ್ಲಿ ಸಾಗಿಸುವ ಕೇಂದ್ರವಾಗಿ ಇದರ ಬೆಳೆವಣಿಗೆಯಾಯಿತು. ನದಿಯಿಂದ ಜೋಡು ಚಿಪ್ಪುಗಳನ್ನಾಯ್ದು ಅವುಗಳಿಂದ ಮುತ್ತಿನ ಸಂಗ್ರಹಣೆ. ಚಿಪ್ಪಿನ ಗುಂಡಿಗಳ ತಯಾರಿಕೆ-ಈ ಉದ್ಯಮಗಳು ಇಲ್ಲಿ ಬೆಳೆದುವು. ನಗರದ ಈಶಾನ್ಯದಲ್ಲಿದ್ದ ಸೇನಾ ವಿಮಾನ ನಿಲ್ದಾಣ ಪ್ರದೇಶವನ್ನು ಎರಡನೆಯ ಮಹಾಯುದ್ಧದ ಅನಂತರ ನ್ಯೂಪೋರ್ಟ್‍ಗೆ ವಹಿಸಿಕೊಡಲಾಯಿತು. ಅಲ್ಲಿ ಇಂದು ಕೈಗಾರಿಕೋದ್ಯಾನವಿದೆ. ಈ ಪಟ್ಟಣದ ಜನಸಂಖ್ಯೆ 7,725(1970). ಇದು ಉ.ಅ.35ಲಿ 37' ಮತ್ತು ಪ.ರೇ.90ಲಿ 17' ಮೇಲೆ ಇದೆ.

3 ಅಮೆರಿಕ ಸಂಯುಕ್ತ ಸಂಸ್ಥಾನಗಳ ಕೆಂಟಕೀ ರಾಜ್ಯದ ಕ್ಯೌಂಬೆಲ್ ಕೌಂಟಿಯ ಎರಡು ಕೇಂದ್ರಗಳಲ್ಲಿ ಒಂದು. (ಮತ್ತೊಂದು ಅಲೆಗ್ಸಾಂಡ್ರಿಯ) ಒಹೈಯೊ ನದಿಯ ದಡದ ಮೇಲೆ, ಲಿಕಿಂಗ್ ನದಿಯ ಮುಖದ ಬಳಿ ಇರುವ ಸಿನ್ಸಿನಾಟಿ ನಗರದ ಎದುರಿನಲ್ಲಿದೆ. ಹಬರ್ಡ್ ಟೇಲರ್ ಎಂಬ ತರುಣ ಸೈನಿಕನೊಬ್ಬ 1790ರಲ್ಲಿ ಪಟ್ಟಣದ ಸ್ಥಳದಲ್ಲಿ ಮೊಟ್ಟಮೊದಲು ಜನವಸತಿಯನ್ನು ಯೋಜಿಸಿದ. ಜೇಮ್ಸ್‍ಟೌನ್ ಬಂದರನ್ನು ಪ್ರಥಮವಾಗಿ ತಲಪಿದ (1607) ನೌಕೆಯ ಅಧಿಪತಿಯಾದ ಕ್ರಿಸ್ಟೊಫರ್ ನ್ಯೂಪೋರ್ಟ್ ಎಂಬವನ ಜ್ಞಾಪಕಾರ್ಥವಾಗಿ ಇದಕ್ಕೆ ಈ ಹೆಸರನ್ನು ಇಡಲಾಯಿತು. 1850ರ ದಶಕದಲ್ಲಿ ಕೆಂಟಕಿಯಲ್ಲಿ ಪ್ರಕಟವಾಗುತ್ತಿದ್ದ ದಿ ಫ್ರೀ ಸೌತ್ ಎಂಬ ಗುಲಾಮಗಿರಿ ವಿರೋಧಿ ಪತ್ರಿಕೆಯನ್ನು ವಿಲಿಯಮ್ ಷ್ರೆವ್ ಬೇಲಿ ಇಲ್ಲಿಂದ ಪ್ರಕಟಿಸುತ್ತಿದ್ದ. ಆದರೆ ಗುಲಾಮಗಿರಿಯ ಪರವಾಗಿದ್ದವರ ದೊಂಬಿಯೊಂದು 1859ರಲ್ಲಿ ಇವನ ಮುದ್ರಣಯಂತ್ರ ಸಲಕರಣೆಗಳನ್ನು ಬೀದಿಯಲ್ಲಿ ಬಿಸಾಡಿತು. ಬೇಲ್ ಆಗ ಸಿನ್ಸಿನಾಟಿಗೆ ಹೋದ. 1880-1900ರಲ್ಲಿ ಈ ನಗರ ವಿಶೇಷವಾಗಿ ಬೆಳೆಯಿತು. ಸಿನ್ಸಿನಾಟಿಗೆ ಸೇತುವೆಗಳ ನಿರ್ಮಾಣವಾಯಿತು. ಇಲ್ಲಿಯ ಮುಖ್ಯ ಕೈಗಾರಿಕೆಗಳು ಉಕ್ಕು, ಬಟ್ಟೆ ಮತ್ತು ಮದ್ಯಸಾರ ತಯಾರಿಕೆ, ಉ.ಅ.39ಲಿ 36' ಮತ್ತು ಪ.ರೇ.84ಲಿ 29' ಮೇಲೆ ಇರುವ ಈ ಪಟ್ಟಣದ ಜನಸಂಖ್ಯೆ 25,998(1970).

4 ಅಮೆರಿಕ ಸಂಯುಕ್ತ ಸಂಸ್ಥಾನಗಳ ಆರಿಗನ್ ರಾಜ್ಯದ ಲಿಂಕನ್ ಕೌಂಟಿಯ ಆಡಳಿತ ಕೇಂದ್ರದ ಹೆಸರೂ ಇದೇ ಆಗಿದೆ. ಇದು ಫೆಸಿಫಿಕ್ ಸಾಗರದ ಯಾಕಿನ ಕೊಲ್ಲಿಯ ಉತ್ತರ ದಡದ ಮೇಲಿದೆ. ಮರದ ದಿಮ್ಮಿ, ಮೀನು ಡಬ್ಬೀಕರಣ ಇವು ಮುಖ್ಯ ಕೈಗಾರಿಕೆಗಳು. ಆರಿಗನ್ ರಾಜ್ಯ ವಿಶ್ವವಿದ್ಯಾಲಯದ ಸಾಗರಿಕ ವಿಜ್ಞಾನ ಕೇಂದ್ರ ಇಲ್ಲಿ ಇದೆ. ನ್ಯೂಪೋರ್ಟ್ ಪ್ರವಾಸಿ ಕೇಂದ್ರ. ಜನಸಂಖ್ಯೆ 5,188 (1970)

5 ಅಮೆರಿಕ ಸಂಯುಕ್ತ ಸಂಸ್ಥಾನಗಳ ರೋಡ್ ಐಲೆಂಡಿನ ದಕ್ಷಿಣ ತುದಿಯಲ್ಲಿರುವ ಇದೇ ಹೆಸರಿನ ನಗರದ ಜನಸಂಖ್ಯೆ 34,562(1970). ಇದು ನ್ಯೂಪೋರ್ಟ್ ಕೌಂಟಿಯ ಆಡಳಿತ ಕೇಂದ್ರ, ಬಂದರು. 1639ರಲ್ಲಿ ಇದು ಸ್ಥಾಪಿತವಾಯಿತು. ಅಮೆರಿಕನ್ ಕ್ರಾಂತಿಯ ಸಮಯದಲ್ಲಿ (1776-79) ಬ್ರಿಟನ್ನು ಇದನ್ನು ಆಕ್ರಮಿಸಿಕೊಂಡಿತ್ತು. ಅಂತರ್ಯುದ್ಧದ ಅನಂತರ ಇದು ಅಭಿವೃದ್ಧಿ ಹೊಂದಿತು. ಇಲ್ಲಿಯ ವಾಯುಗುಣವೂ, ಇದು ಬಂದರಾಗಿದ್ದುದೂ ಇದರ ಬೆಳೆವಣಿಗೆಗೆ ಕಾರಣಗಳು. ನ್ಯೂಪೋರ್ಟ್‍ನಲ್ಲಿ ಮತ್ತು ಇದರ ಸುತ್ತಮುತ್ತ ನೌಕಾ ನೆಲೆಯ ಅನೇಕ ಸ್ಥಾವರಗಳ ಸಂಕೀರ್ಣವೊಂದು ಬೆಳೆದಿದೆ. ನೌಕಾ ಚಟುವಟಿಕೆಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳೂ ಸಂಶೋಧನ ಕೇಂದ್ರಗಳೂ ಇಲ್ಲಿವೆ. ಹಳೆಯ ವಸಾಹತು ಭವನ (1739). ಟ್ರಿನಿಟಿ ಚರ್ಚ್ (1726). ಟೌರೊ ಸೈನಗಾಗ್(1763). ರೆಡ್‍ಮಾಡ್ ಲೈಬ್ರರಿ ಮತ್ತು ಅತೆನಿಯಮ್ (1747) ನ್ಯೂಪೋರ್ಟ್ ಆರ್ಟಿಲರಿ ಕಂಪನಿ, ಸೈನಿಕ ವಸ್ತು ಸಂಗ್ರಹಾಲಯ (1741)-ಇವು ನಗರದ ಕೆಲವು ಆಕರ್ಷಣೆಗಳು. ರೇವಿನ ಮೇಲೆ ಇರುವ ಹಳೆಯ ವಲಯದಲ್ಲಿ (ದಿ ಪಾಯಿಂಟ್) ವಸಾಹತುಕಾಲದ ವ್ಯಾಪಾರಿಗಳ ಮನೆಗಳಿವೆ.

6 ಬ್ರಿಟನ್ನಿನ ವೇಲ್ಸ್ ನಲ್ಲಿ ಬ್ರಿಸ್ಟಲ್ ಕಡಲ್ಗಾಲುವೆಯ ಮುಖದ ಮೇಲೆ ಇರುವ ನ್ಯೂಪೋರ್ಟ್ ಸುಮಾರು 1126ರಿಂದ ಬೆಳೆದು ಬಂದಿದೆ. ಮಧ್ಯಯುಗದಲ್ಲಿ ವಾಣಿಜ್ಯ ಪ್ರಾಮುಖ್ಯ ಹೊಂದಿದ್ದ ಈ ನಗರ ಅನೇಕ ಸವಲತ್ತುಗಳನ್ನು ಪಡೆದಿತ್ತು. 19ನೆಯ ಶತಮಾನದಲ್ಲಿ ಪಶ್ಚಿಮ ಮಾನ್‍ಮತ್‍ಷೈರ್ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಕೈಗಾರಿಕೆಗಳು ಬೆಳೆದ ಫಲವಾಗಿ ಆಧುನಿಕ ನಗರ ಉಚ್ಛ್ರಾಯಸ್ಥಿತಿಗೆ ಬಂತು. ನ್ಯೂಪೋರ್ಟ್‍ನಲ್ಲಿ 20ನೆಯ ಶತಮಾನದಲ್ಲಿ ಉಕ್ಕು ಸಂಸ್ಕರಣ, ಕಾಗದ ತಯಾರಿಕೆ ರಾಸಾಯನಿಕ ಮುಂತಾದ ಕೈಗಾರಿಕೆಗಳು ಬೆಳೆದಿವೆ. 1959ರಿಂದ ಈಚೆಗೆ ಇದು ಬ್ರಿಟನ್ನಿನ ಮುಖ್ಯ ಉಕ್ಕು ತಯಾರಿಕಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ಐತಿಹಾಸಿಕ ಕಟ್ಟಡಗಳು ಹೆಚ್ಚಾಗಿ ಇಲ್ಲ. ನಗರದ ಜನಸಂಖ್ಯೆ 1,12,048 (1971).

7 ಅಮೆರಿಕ ಸಂಯುಕ್ತ ಸಂಸ್ಥಾನಗಳ ವರ್ಮಾಂಟ್ ರಾಜ್ಯದ ಉತ್ತರ ಭಾಗದಲ್ಲಿ ಈ ಹೆಸರಿನ ಒಂದು ಪಟ್ಟಣವಿದೆ. ಇದು ಆರ್ಲಿಯನ್ಸ್ ಕೌಂಟಿಯ ಆಡಳಿತ ಕೇಂದ್ರ. ಜನಸಂಖ್ಯೆ 4,664(1970). (ಕೆ.ಆರ್.)