ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಪೋರ್ಟ್ ನ್ಯೂಸ್

ವಿಕಿಸೋರ್ಸ್ದಿಂದ

ನ್ಯೂಪೋರ್ಟ್ ನ್ಯೂಸ್ - ಅಮೆರಿಕ ಸಂಯುಕ್ತ ಸಂಸ್ಥಾನಗಳ ವರ್ಜಿನಿಯ ರಾಜ್ಯದ ಒಂದು ಸ್ವತಂತ್ರ ನಗರ, ಬಂದರು. ರಾಜ್ಯದ ಆಗ್ನೇಯ ಭಾಗದಲ್ಲಿ ಹ್ಯಾಂಪ್ಟನ್ ರೋಡ್ಸ್ ರೇವಿನ ಜೇಮ್ಸ್ ನದಿಯ ಉತ್ತರ ದಡದಲ್ಲಿ ಉ.ಅ. 370 04' ಮತ್ತು ಪ,ರೇ 760 28' ಮೇಲೆ ಇದೆ ನಗರದ ಜನಸಂಖ್ಯೆ 1,38,177 (1970). ನ್ಯೂಪೋರ್ಟ್ ನ್ಯೂಸ್-ಹ್ಯಾಂಪ್ಟನ್ ನಗರ ಪ್ರದೇಶದ (ನಾರ್ತ್ ಹ್ಯಾಂಪ್ಟನ್ ರೋಡ್ಸ್) ಜನಸಂಖ್ಯೆ 2,68,263 (1621)ರಲ್ಲಿ ಇಲ್ಲಿ ವಸತಿ ಏರ್ಪಟ್ಟಿತು. ಐರ್ಲೆಂಡಿನಿಂದ ಬಂದವರು ಮೊದಲು ಇಲ್ಲಿ ನೆಲೆಸಿದರು. 1606-12ರಲ್ಲಿ ಜೇಮ್ಸ್ ಟೌನಿಗೆ ಬಂದಿದ್ದ ಪ್ರವಾಸಿಗಳ ನಾಯಕನಾಗಿದ್ದ ಕ್ರಿಸ್ಟೊಫರ್ ನ್ಯೂಪೋರ್ಟ್ ಎಂಬವನಿಂದ ಇದಕ್ಕೆ ಈ ಹೆಸರು ಬಂದಿದೆಯೆಂದು ಪರಂಪರೆಯಿಂದ ನಂಬಲಾಗಿದೆ. 1880ರಲ್ಲಿ ಇದು ಚೆಸಪೀಕ್ ಮತ್ತು ಒಹೈಯೋ ರೈಲ್ವೆಗೆ ಕಲ್ಲಿದ್ದಲು ಸರಬರಾಜು ಮಾಡುವ ಬಂದರಾದಾಗಿನಿಂದ ಬೆಳೆಯತೊಡಗಿತು. 1882ರಲ್ಲಿ ಇದರ ವಿನ್ಯಾಸ ರಚನೆಯಾಯಿತು. 1886ರಲ್ಲಿ ನ್ಯೂಪೋರ್ಟ್ ನ್ಯೂಸ್ ಹಡಗು ನಿರ್ಮಾಣ ಕಂಪನಿ ಸ್ಥಾಪನೆಯಾಯಿತು. ಇಲ್ಲಿಯದು ಪ್ರಪಂಚದ ಅತ್ಯಂತ ದೊಡ್ಡ ಹಾಗೂ ಸಮಗ್ರನೌಕಾಂಗಣಗಳಲ್ಲೊಂದು. ಹಲವು ಉನ್ನತದರ್ಜೆಯ ಪ್ರಯಾಣಿಕ ಹಡಗುಗಳೂ ವಿಮಾನವಾಹಕ ನೌಕೆಗಳೂ ಪರಮಾಣುಚಾಲಿತ ಜಲಾಂತರ್ಗಾಮಿಗಳೂ ಇಲ್ಲಿ ನಿರ್ಮಾಣವಾಗಿವೆ. 1952ರಲ್ಲಿ ಇದು ವಾರ್ವಿಕ್ ಕೌಂಟಿಯಿಂದ ಸ್ವತಂತ್ರ ನಗರವಾಯಿತು. ವಾರ್ವಿಕ್ ಕೌಂಟಿಯ ಬದಲು ವಾರ್ವಿಕ್ ನಗರ ಸ್ಥಾಪಿತವಾಯಿತು. 1958ರಲ್ಲಿ ನ್ಯೂಪೋರ್ಟ್ ನ್ಯೂಸ್ ಮತ್ತು ವಾರ್ದಿಕ್‍ಗಳು ಒಂದಾಗಿ ನ್ಯೂಪೋರ್ಟ್ ನ್ಯೂಸ್ ನಗರವಾಯಿತು. ಇದೊಂದು ಬೃಹತ್ ಬಂದರಾಗಿರುವುದರ ಜೊತೆಗೆ ಇಲ್ಲಿ ಅನೇಕ ಕೈಗಾರಿಕೆಗಳು ಬೆಳೆದಿವೆ. ಸಾಗರ ಯಾತ್ರಿಕರ ವಸ್ತುಸಂಗ್ರಹಾಲಯ, ಬಾಹ್ಯಾಕಾಶ ವಿಕಿರಣಕ್ರಿಯಾ ಪರಿಣಾಮ ಪರೀಕ್ಷಾಲಯ ಮುಂತಾದ ಹಲವು ಸಂಸ್ಥೆಗಳು ಇಲ್ಲಿವೆ. (ಕೆ.ಆರ್.)