ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಬರಿ

ವಿಕಿಸೋರ್ಸ್ದಿಂದ

ನ್ಯೂಬರಿ - ಇಂಗ್ಲೆಂಡಿನ ಒಂದು ಪಟ್ಟಣ, ವ್ಯಾಪಾರ ಸ್ಥಳ ಮತ್ತು ಬರ್ಕ್‍ಷೈರ್‍ನ ಬರೋ. ಕೆನೆಟ್ ನದಿಯ ದಡದಲ್ಲಿ, ಉ.ಆ.51 ಲಿ 25' ಮತ್ತು ಪ.ರೆ.1ಲಿ 20' ಮೇಲೆ ಇದೆ. ಜನಸಂಖ್ಯೆ 23, 696(1971). ಇದು ಇಂಗ್ಲೆಂಡಿನ ಹಳೆಯ ಪಟ್ಟಣಗಳಲ್ಲೊಂದು. ಇಲ್ಲಿ 16ನೆಯ ಶತಮಾನದಲ್ಲಿ ನಿರ್ಮಿತವಾದ ಸೇಂಟ್ ನಿಕೋಲಾಸ್ ಚರ್ಚ್ ಇದೆ. ಇಲ್ಲಿಯ ಜಾಕೋಬಿಯನ್ ವಸ್ತ್ರಭವನ ಈಗ ಈ ಬರೋದ ವಸ್ತುಸಂಗ್ರಹಾಲಯವಾಗಿದೆ. ಇದಕ್ಕೆ ಸೇರಿಕೊಂಡಂತೆ ಉದ್ದನೆಯ ಎರಡು ಅಂತಸ್ತುಗಳ ಕಣಜವೊಂದುಂಟು. ಇಲ್ಲೊಂದು ಹಳೆಯ ಶಾಲೆ, ಎಲಿಜಬೆತ್ ಕಾಲದ ಭವನ ಮುಂತಾದ ಹಲವು ಕಟ್ಟಡಗಳು ಇವೆ. ಇಲ್ಲಿಯ ಪ್ರಸಿದ್ಧ ಕುದುರೆ ಪದ್ಯಾಂಗಣ 1905ರಲ್ಲಿ ಪ್ರಾರಂಭವಾಯಿತು. ಮಾರುಕಟ್ಟೆ ಪ್ರದೇಶದಲ್ಲಿ ನ್ಯಾಯಾಲಯ, ಸಾರ್ವಜನಿಕ ಮನೋರಂಜನೆಯ ಭವನ ಮುಂತಾದವು ಇವೆ. ನ್ಯೂಬರಿಯ ಆಧುನಿಕ ಮಳಿಗೆಗಳು ಮತ್ತು ಬಯಲು ಮಾರುಕಟ್ಟೆಗಳು ಗ್ರಾಮಾಂತರ ಜನರನ್ನು ಆಕರ್ಷಿಸಿವೆ. ಇದು ಉಣ್ಣೆ ವ್ಯಾಪಾರ ಕೇಂದ್ರ. ಸಾಗರ ಯಾನ ಸಂಬಂಧವಾದ ಉಪಕರಣ ಮತ್ತು ಲಘು ಎಂಜಿನಿಯರಿಂಗ್ ಕೈಗಾರಿಕೆ. ಹಿಟ್ಟು ಗಿರಣಿ, ಮರಗೆಲಸ, ಲಘು ವಿಮಾನ ತಯಾರಿಕೆ ಇವು ಮುಖ್ಯ ಉದ್ಯಮಗಳು. ದಕ್ಷಿಣ ಇಂಗ್ಲೆಂಡಿನ ಮತ್ತು ತೀರ ಪ್ರದೇಶದ ಮುಖ್ಯ ಮಾರ್ಗಗಳು ಇಲ್ಲಿ ಸಂಧಿಸುತ್ತವೆ.

ಈ ಪಟ್ಟಣದಲ್ಲಿ ಪ್ರಾಚೀನ ರೋಮನ್ ಆಕ್ರಮಣದ ಕುರುಹುಗಳಿವೆ. 1152ರಲ್ಲಿ ಇಂಗ್ಲೆಂಡಿನ ನಾರ್ಮನ್ ದೊರೆ ಸ್ಟೀಫನ್ ನ್ಯೂಬರಿಯ ದುರ್ಗಕ್ಕೆ ಮುತ್ತಿಗೆ ಹಾಕಿದ್ದ. 1596ರಲ್ಲಿ ಒಂದನೆಯ ಎಲಿಜಬೆತ್ ರಾಣಿ ಈ ನಗರಕ್ಕೆ ಸನ್ನದ್ದನ್ನು ನೀಡಿದ್ದಳು. ಅನಂತರ ಇದನ್ನು ಹಲವು ಸಾರಿ ವಜಾಮಾಡಿ ಮತ್ತೆಮತ್ತೆ ನೀಡಲಾಗಿತ್ತು. 17ನೆಯ ಶತಮಾನದ ಇಂಗ್ಲೀಷ್ ಅಂತರ್ಯುದ್ಧದ ಕಾಲದಲ್ಲಿ 1643 ಮತ್ತು 1644ರಲ್ಲಿ ಇಲ್ಲಿ ಪಾರ್ಲಿಮೆಂಟರಿ ಪಡೆಗಳಿಗೂ ದೊರೆಯ ಬೆಂಬಲಿಗರ ಪಡೆಗಳಿಗೂ ಯುದ್ಧಗಳಾದವು.

ಅಮೆರಿಕ ಸಂಯುಕ್ತ ಸಂಸ್ಥಾನಗಳ ಮ್ಯಾಸಾಚೂಸೆಟ್ಸ್ ರಾಜ್ಯದಲ್ಲೂ ಈ ಹೆಸರಿನ ಪಟ್ಟಣವಿದೆ. (ಡಿ.ಎಸ್.ಜೆ.)