ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಬರ್ಗ್

ವಿಕಿಸೋರ್ಸ್ದಿಂದ

ನ್ಯೂಬರ್ಗ್ - ಅಮೆರಿಕ ಸಂಯುಕ್ತ ಸಂಸ್ಥಾನಗಳ ಉತ್ತರ ಕ್ಯಾರಲೈನ ರಾಜ್ಯದ ಪೂರ್ವಭಾಗದಲ್ಲಿ ಕ್ರೇವನ್ ಕೌಂಟಿಯ ಒಂದು ನಗರ; ಆ ಕೌಂಟಿಯ ಆಡಳಿತ ಕೇಂದ್ರ. ನ್ಯೂಸ್ ನದಿಯ ದಡದ ಮೇಲೆ, ಟ್ರೆಂಟ್ ನದಿ ಅದನ್ನು ಸೇರುವ ಎಡೆಯಲ್ಲಿ (ಉ.ಆ 35ಲಿ , 0.7', ಪ.ರೇ 77ಲಿ 0.3') ಇದೆ. ಜನಸಂಖ್ಯೆ 14,660(1970). 1710ರಲ್ಲಿ ಇಲ್ಲಿ ವಸತಿ ಆರಂಭವಾಯಿತು. ಸ್ವಿಟ್ಜರ್‍ಲೆಂಡಿನ ಬರ್ನ್ ನಿಂದ ಬಂದ ಕ್ರಿಸ್ಟಫರ್ ವಾನ್ ಗ್ರ್ಯಾಫನ್ ರೀಡ್ ಇದನ್ನು ಸ್ಥಾಪಿಸಿದ. 1723ರಲ್ಲಿ ಇದಕ್ಕೆ ನಗರದ ಸ್ಥಾನಮಾನ ದೊರಕಿತು. ಅದಕ್ಕೆ ಮುಂಚೆ (1711-12) ಇಂಡಿಯನರ ಆಕ್ರಮಣದಿಂದ ಇದು ಬಹುತೇಕ ನಾಶಗೊಂಡಿತು. ಉತ್ತರ ಕ್ಯಾರಲೈನದ ಮೊದಲನೆಯ ಮುದ್ರಣಾಲಯ (1749) ಮತ್ತು ಮೊದಲನೆಯ ಅನುದಾನ ಶಾಲೆ(1764) ಇಲ್ಲಿ ಸ್ಥಾಪಿತವಾದವು. 1737ರಲ್ಲಿ ನ್ಯೂಬರ್ನ್‍ನಲ್ಲಿ ಪ್ರಾಂತೀಯ ವಿಧಾನಸಭೆ ಸೇರಲಾರಂಭವಾಯಿತು. ಆಗ ಇದು ಉತ್ತರ ಕ್ಯಾರಲೈನಾ ವಸಾಹತುವಿನ ರಾಜಧಾನಿಯ ಮಟ್ಟಕ್ಕೆರಿತು. 1767-1770ರಲ್ಲಿ ನಿರ್ಮಿತವಾದ ಭವ್ಯ ಗವರ್ನರ್ ಭವನದಿಂದ ನಗರದ ಪ್ರಾಮುಖ್ಯ ಹೆಚ್ಚಿತು. 1798ರಲ್ಲಿ ಟ್ರೈಯಾನ್ ಅರಮನೆಯ ಪ್ರಮುಖ ಭಾಗ ಭಸ್ಮವಾಯಿತು. ಅದನ್ನು ಅದರ ಎರಡು ಪಾಶ್ರ್ವಗಳೊಂದಿಗೆ 1959ರಲ್ಲಿ ಪುನರ್ ನಿರ್ಮಿಸಲಾಯಿತು. 1774 ಮತ್ತು 75ರಲ್ಲಿ ನ್ಯೂಬರ್ನ್ ನಗರದಲ್ಲಿ ಬ್ರಿಟೀಷ್ ವಿರೋಧಿ ಪ್ರಥಮ ಮತ್ತು ದ್ವಿತೀಯ ಪ್ರಾಂತೀಯ ಕಾಂಗ್ರೆಸ್ ಸಭೆ ಸೇರಿತ್ತು. ಅಮೆರಿಕನ್ ಕ್ರಾಂತಿಯ ನಂತರ ಅನೇಕ ಪಟ್ಟಣಗಳಲ್ಲಿ ಪ್ರಾಂತೀಯ ಕಾಂಗ್ರೆಸ್ ಸಭೆಗಳು ನಡೆದರೂ 1794ವರೆಗೂ ಇದು ಕ್ಯಾರಲೈನಾದ ರಾಜಧಾನಿಯಾಗಿ ಮುಂದುವರಿಯಿತು.

ನ್ಯೂಬರ್ನ್ ನಗರ ಉತ್ತರ ಕ್ಯಾರಲೈನಾದ ಉತ್ತಮ ಬಂದರಾಗಿ ಪ್ರಸಿದ್ಧಿಗೆ ಬಂತು. ಪಾಮ್ಲಿಕೋ ಜಲಸಂಧಿಯ ಮುಖಾಂತರ ನ್ಯೂಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ದ್ವೀಪಗಳೊಂದಿಗೆ ಇದು ಸಮುದ್ರ ವ್ಯಾಪಾರ ನಡೆಸುತ್ತಿತ್ತು. ಅಮೆರಿಕನ್ ಕ್ರಾಂತಿಯ ಅನಂತರ ಇಲ್ಲಿ ಹಡಗು ನಿರ್ಮಾಣ ಕಾರ್ಯ ಬೆಳೆಯಿತು. ಹೊಗೆಸೊಪ್ಪು, ಮರಮುಟ್ಟುಗಳು ಮತ್ತು ನಾವಿಕರ ಪರಿಕರಗಳನ್ನು ಪ್ರಮುಖವಾಗಿ ಈ ಬಂದರಿನ ಮುಖಾಂತರ ರಫ್ತುಮಾಡಲಾಗುತ್ತಿತ್ತು. 20ನೆಯ ಶತಮಾನದಲ್ಲಿ ಅಟ್ಲಾಂಟಿಕ್ ಕರಾವಳಿಯಲ್ಲಿ ಸುಮಾರು 4 ಮೀ ಅಗಲದ ಜಲಮಾರ್ಗವನ್ನು ನಿರ್ಮಿಸಿ ನ್ಯೂಬರ್ನ್ ನಗರಕ್ಕೆ ಒಳನಾಡಿನ ಜಲಮಾರ್ಗ ಸೌಲಭ್ಯಗಳನ್ನು ಕಲ್ಪಿಸಲಾಯಿತು. ಮೋರ್‍ಹೆಡ್ ನಗರದ ಬಂದರನ್ನು ಅಭಿವೃದ್ಧಿಪಡಿಸಿ ಸರ್ಕಾರ ಇದನ್ನು ವಾಣಿಜ್ಯಕೇಂದ್ರವನ್ನಾಗಿ ಪರಿವರ್ತಿಸಿತು. ಇದು ಬೇಸಗೆ ತಾಣವಾಗಿದೆ. ಮೆಕ್ಕೆಜೋಳ, ಹೊಗೆಸೊಪ್ಪು, ಸೋಯಾಬೀನ್, ಮರದ ತಿರುಳು ಮತ್ತು ಹತ್ತಿ ಬೆಳೆಯುವ ಪ್ರದೇಶ ಇದಕ್ಕೆ ಹಿನ್ನಾಡಾಗಿದೆ. ಮರಗೆಲಸ ದೋಣಿ ನಿರ್ಮಾಣ, ಆಹಾರ ಸಂಸ್ಕರಣ, ಜವಳಿ, ರಾಸಾಯನಿಕ ಇವು ನಗರದ ಪ್ರಮುಖ ಕೈಗಾರಿಕೆಗಳು. ಈಗಿನ ಸಾರ್ವಜನಿಕ ಪುಸ್ತಕಭಂಡಾರವಾಗಿರುವ ಸ್ಟಾನ್ಲೆ ಅರಮನೆ (1780) ಆಟ್‍ಮೋರ್ ಅರಮನೆ (1790), ಪ್ರೆಸ್ ಬಿಟೀರಿಯನ್ ಚರ್ಚ್ (1822), ಕ್ರೈಸ್ಟ್ ಚರ್ಚ್ (1752) ಇವು ಇಲ್ಲಿಯ ಪ್ರಮುಖ ಭವನಗಳು. ನೀಗ್ರೋಗಳಿಗಾಗಿ ಆರಂಭವಾದ ಮೊದಮೊದಲ ಸಾರ್ವಜನಿಕ ಶಾಲೆಗಳಲ್ಲಿ ಒಂದು ಇಲ್ಲಿ 1862ರಲ್ಲಿ ಸ್ಥಾಪಿತವಾಯಿತು. (ಎಸ್.ಕೆ.ಆರ್)