ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಮನ್, ಜಾನ್ ಹೆನ್ರಿ

ವಿಕಿಸೋರ್ಸ್ದಿಂದ

ನ್ಯೂಮನ್, ಜಾನ್ ಹೆನ್ರಿ 1801-1890. ಇಂಗ್ಲೆಂಡಿನ ಧರ್ಮೋಪದೇಶಕ ಹಾಗೂ ಚರ್ಚಿನ ಪ್ರಧಾನಾಧಿಕಾರಿ (ಕಾರ್ಡಿನಲ್). ಹುಟ್ಟಿದ್ದು ಲಂಡನ್ನಿನಲ್ಲಿ. ತಂದೆ ಜಾನ್ ನ್ಯೂಮನ್ ಬ್ಯಾಂಕೊಂದರ ಚಾಲಕ. ತಾಯಿ ಜೆಮೀಮಾ ಫೋಡ್ರಿ ನಿಯರ್. ಇವರ ಆರು ಮಕ್ಕಳಲ್ಲಿ ಈತ ಮೊದಲಿಗ. ವೇದಾಂತಿ ವಿಲಿಯಂ ಫ್ರಾನ್ಸಿಸ್ ನ್ಯೂಮನ್ ಈತನ ಸಹೋದರ. ಈತನ ಪ್ರಾರಂಭದ ಶಿಕ್ಷಣ ಮನೆ ಹಾಗೂ ಈಲಿಂಗ್ ಶಾಲೆಯಲ್ಲಿ ನಡೆಯಿತು. ವಿದ್ಯಾರ್ಥಿಯಾಗಿದ್ದಾಗಲೇ ಕವಿತೆ, ನಾಟಕಗಳನ್ನು ಬರೆದ. ಶಾಲೆಯಲ್ಲಿದ್ದಾಗ ಈತನ ಮೇಲೆ ಕಾರ್ವಿನ್ ಮತದ ಪ್ರಭಾವವುಂಟಾಯಿತು. ತತ್ತ್ವ ಬೋಧಕ ಕೃತಿಗಳತ್ತ ಈತನ ಮನಸ್ಸು ಹರಿದು ಅವನ್ನು ಅಭ್ಯಾಸ ಮಾಡತೊಡಗಿದ. 1817ರಲ್ಲಿ ಕಾಯದೆಯ ಅಭ್ಯಾಸಕ್ಕಾಗಿ ಟ್ರಿನಿಟಿ ಕಾಲೇಜನ್ನು ಪ್ರವೇಶಿಸಿದ. ಆದರೆ 1821ರಲ್ಲಿ ಧಾರ್ಮಿಕ ದೀಕ್ಷೆ ಪಡೆದು 1822ರಲ್ಲಿ ಓರಿಯಲ್ ಕಾಲೇಜಿನ ಫೆಲೋ ಆದ. 1824ರಲ್ಲಿ ಆ್ಯಂಗ್ಲಿಕನ್ನನಾಗಿ (ಇಂಗ್ಲೆಂಡಿನ ಸುಧಾರಿತ ಮತದ ಅನುಯಾಯಿ) 1825ರಲ್ಲಿ ಪಾದ್ರಿಯಾದ. 1824ರಿಂದ 1826ರ ವರೆಗೆ ಸೇಂಟ್ ಕ್ಲೆಮೆಂಟ್ ಚರ್ಚಿನ ಕ್ಯುರೇಟರ್ ಆಗಿ (ಪಾದ್ರಿಯ ಸಹಾಯಕ) ಸೇವೆ ಸಲ್ಲಿಸಿದ. 1825ರಲ್ಲಿ ಸೇಂಟ್ ಅಲ್ಬನ್ ಹಾಲಿನ ವೈಸ್ ಪ್ರಿನ್ಸಿಪಾಲ್ ಆದ. 1828ರಲ್ಲಿ ಸೇಂಟ್ ಮೇರಿ ವಿಶ್ವವಿದ್ಯಾಲಯ ಚರ್ಚಿನ ವಿಕರ್ (ಕ್ರೈಸ್ತ ಪುರೋಹಿತ) ಆಗಿ ನೇಮಕಗೊಂಡ. ಕ್ರೈಸ್ತ ಧರ್ಮಗ್ರಂಥಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅಭ್ಯಸಿಸಿದ.

1832ರಲ್ಲಿ ಎಚ್ ಫ್ರೂಡನೊಂದಿಗೆ ದಕ್ಷಿಣಯೂರೋಪು ಮತ್ತು ರೋಮ್‍ಗಳನ್ನು ಸಂದರ್ಶಿಸಿದ. ಆ ಸಮಯದಲ್ಲಿ ಈತನಿಗೆ ರೋಮನ್ ಚರ್ಚಿನ ವಾತಾವರಣ ಶುದ್ಧವಾಗಿಲ್ಲವೆಂದು ಮನವರಿಕೆಯಾಯಿತು. ಇದೇ ಸಮಯದಲ್ಲಿ ಆ್ಯಂಗ್ಲಿಕನ್ ಪಂಥದಲ್ಲಿನ ಕೆಲವು ನ್ಯೂನತೆಗಳನ್ನು ಸರಿಪಡಿಸಬೇಕೆಂದು ತೀರ್ಮಾನಿಸಿದ. ಈ ಹೊಸ ಸಂಕಲ್ಪದ ಕುರುಹಾಗಿ ಸ್ವದೇಶಕ್ಕೆ ಬಂದಮೇಲೆ ಲೀಡ್ ಕೈಂಡ್ಲಿ ಲೈಟ್ ಎಂಬ ಗೀತೆಯನ್ನು ಬರೆದ. ಅನೇಕ ಆ್ಯಂಗ್ಲಿಕನ್ ಪಾದ್ರಿಗಳು ರವಿವಾರದ ಪ್ರಾರ್ಥನೆಯನ್ನು ಬಿಟ್ಟರೆ ಹೆಚ್ಚಿನ ಧಾರ್ಮಿಕ ಕೆಲಸಗಳೇನನ್ನೂ ಮಾಡುತ್ತಿರಲಿಲ್ಲ. ಅಂಥವರನ್ನು ಗ್ರಂಥಾಭ್ಯಾಸ, ಸದಾಚಾರ ಸಹಿತವಾದ ಜೀವನ ನಿರ್ವಹಣೆಗಳ ಕಡೆ ತಿರುಗಿಸಲು ಈತ ಪ್ರಯತ್ನಿಸಿದ. 1833ರ ನವೆಂಬರಿನಲ್ಲಿ ಆಕ್ಸ್‍ಫರ್ಡ್ ಚಳವಳಿ ಪ್ರಾರಂಭವಾಯಿತು.

ಆಂಗ್ಲಜನತೆಯ ಮುಂದೆ ತಮ್ಮ ಕಾರ್ಯಕ್ರಮವನ್ನಿಡುವುದಕ್ಕಾಗಿ ನ್ಯೂಮನ್ ಮತ್ತು ಆತನ ಸಂಗಡಿಗರು ಟ್ರ್ಯಾಕ್ಟ್ಸ್ ಆಫ್ ದಿ ಟೈಮ್ಸ್ ಎಂಬ ಟ್ರ್ಯಾಕ್ಟುಗಳನ್ನು (ಕಿರು ಹೊತ್ತಗೆಗಳು) ಪ್ರಾರಂಭಿಸಿದರು. ಇವು ಮುಖ್ಯವಾಗಿ ರೋಮನ್ ಕ್ಯಾತೊಲಿಕ್ ಮತದ ಪುನರುದ್ಧಾರಕ್ಕಾಗಿ ಬರೆದ ಕೃತಿಗಳು. ನ್ಯೂಮನ್ ಒಟ್ಟು 24 ಟ್ರ್ಯಾಕ್ಟುಗಳನ್ನು ಬರೆದ. ಆ್ಯಂಗ್ಲಿಕನ್ ಪಂಥ (ಚರ್ಚ್ ಆಫ್ ಇಂಗ್ಲೆಂಡ್) ನಿಜವಾದ ಮನೋವೈಶಾಲ್ಯವನ್ನು ಪ್ರತಿನಿಧಿಸುತ್ತದೆಯೆಂತಲೂ ಈ ಮನೋವೈಶಾಲ್ಯ ರೋಮನ್ ಕ್ಯಾತೊಲಿಕ್ ಪಂಥದಲ್ಲಿಯಾಗಲೀ ಜನಪ್ರಿಯ, ಪ್ರಾಟೆಸ್ಟೆಂಟ್ ಮತದಲ್ಲಿಯಾಗಲಿ ಇರದೆ ಪ್ರಾಚೀನ ಅವಿಭಕ್ತ ಕ್ರೈಸ್ತಮತದ ಉಪದೇಶಗಳಲ್ಲಿದೆಯೆಂತಲೂ ಮೊದಲು ಈತ ಪ್ರತಿಪಾದಿಸಿದ.

ಕೆಬಲ್ಲನೊಡನೆ ಈತ ಮತ ಸುಧಾರಣೆಯನ್ನು ತೆಗಳುವ ಫ್ರೂಡ್ಸ್ ರಿಮೈನ್ಸ್ ಎಂಬ ಕೃತಿಯನ್ನು ತಿದ್ದುಪಡಿ ಮಾಡಿ ಪ್ರಕಟಿಸಿದ ಮೇಲೆ ಆ್ಯಂಗ್ಲಿಕನ್ ಪಂಥದ ಈತನ ಅನುಯಾಯಿಗಳಿಗೆ ಈತನ ಮೇಲೆ ಸಂಶಯ ಬರತೊಡಗಿತು. ಕ್ರಮೇಣ ಈತ ರೋಮನ್ ಕ್ಯಾತೊಲಿಕ್ ಮತವಾದಿಯೆಂದು ಸ್ಪಷ್ಟವಾಗತೊಡಗಿತು.

ಆಕ್ಸ್‍ಫರ್ಡ್ ಚಳವಳಿ ಇಂಗ್ಲೆಂಡಿನಲ್ಲಿ ತುಂಬ ಹಬ್ಬಿದಾಗ ವಿರೋಧವಿತ್ತು. ಎಲ್ಲೆಲ್ಲೂ ಆಕ್ಸ್‍ಫರ್ಡ್ ಚಳವಳಿಯನ್ನು ವಿರೋಧಿಸಿ ಧರ್ಮ ಪ್ರವಚನಗಳಾಗತೊಡಗಿದವು. ಮುಂದೆ ಈತ ಟ್ರ್ಯಾಕ್ಟು ಬರೆಯುವುದನ್ನು ನಿಲ್ಲಿಸಿದ; ಅಲ್ಲದೆ ದಿನ ದಿನಕ್ಕೆ ರೋಮಿನತ್ತ ವಾಲತೊಡಗಿದ್ದ, 1843ರ ಸೆಪ್ಟೆಂಬರ್ 18ರಂದು ಸೇಂಟ್‍ಮೇರಿಯ ವಿಕರ್ ಪದವಿಗೆ ರಾಜಿನಾಮೆಯಿತ್ತ. ಒಂದು ವಾರದ ಅನಂತರ ದಿ ಪಾರ್ಟಿಂಗ್ ಆಫ್ ಫ್ರೆಂಡ್ಸ್ ಎಂಬ ತನ್ನ ಕೊನೆಯ ಆ್ಯಂಗ್ಲಿಕನ್ ಪ್ರವಚನ ಮಾಡಿದ. 1845ರ ಅಕ್ಟೋಬರ್ 8 ರಂದು ತನ್ನನ್ನು ರೋಮನ್ ಕ್ಯಾತೊಲಿಕ್ ಚರ್ಚಿನಲ್ಲಿ ಸೇರಿಸಿಕೊಳ್ಳುವಂತೆ ಭಿನ್ನವಿಸಿಕೊಂಡ. ಲಿಟಲ್‍ಮೋರಿನ ರೋಮನ್ ಕ್ಯಾತೊಲಿಕ್ ಚರ್ಚಿನೊಳಗೆ ಈತನಿಗೆ ಪ್ರವೇಶವೂ ದೊರೆಯಿತು. ಕೆಲವು ವಾರಗಳ ಅನಂತರ ಈತ ಕ್ರೈಸ್ತಮತ ಸಿದ್ಧಾಂತದ ಬೆಳೆವಣಿಗೆಯನ್ನು ಕುರಿತ ಒಂದು ಪ್ರಬಂಧವನ್ನು ಪ್ರಕಟಿಸಿದ. 1846ರಲ್ಲಿ ಕ್ಯಾತೊಲಿಕ್ ಪಂಥದ ದೀಕ್ಷೆಯನ್ನು ಸ್ವೀಕರಿಸುವುದಕ್ಕೆ ರೋಮಿಗೆ ಪ್ರವಾಸ ಮಾಡಿದ.

ಇಂಗ್ಲೆಂಡಿಗೆ ಮರಳಿದ ಬಳಿಕ ಕೆಲಕಾಲ ಈತ ಹೊಗಳಿಕೆಗಿಂತಲೂ ಹೆಚ್ಚು ತೆಗಳಿಕೆಗೆ ಪಾತ್ರನಾದ. 1852ರಲ್ಲಿ ಇಟಲಿಯ ಪಾದ್ರಿಯನ್ನು ಕುರಿತು ಬರೆದ ಒಂದು ಲೇಖನಕ್ಕಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಸಿಲುಕಿಕೊಂಡು ನೂರು ಪೌಂಡುಗಳ ದಂಡವನ್ನೂ ನ್ಯಾಯಾಲಯದ ಖರ್ಚನ್ನೂ ಕೊಟ್ಟ. ಅದೇ ವರ್ಷ ಈತ ಡಬ್ಲಿನ್ನಿನ ರೋಮನ್ ಕ್ಯಾತೊಲಿಕ್ ವಿಶ್ವವಿದ್ಯಾಲಯದ ರೆಕ್ಟರ್ ಆಗಿ ನೇಮಕಗೊಂಡ. ಸಾಕಷ್ಟು ಬೆಂಬಲವಿಲ್ಲದ್ದರಿಂದ ಆ ಪದವಿಗೆ ರಾಜೀನಾಮೆ ಕೊಟ್ಟ (1865). ಅಲ್ಲಿದ್ದಾಗ ದಿ ಐಡಿಯ ಆಫ್ ಎ ಯೂನಿವರ್ಸಿಟಿ (ವಿಶ್ವವಿದ್ಯಾಲಯದ ಕಲ್ಪನೆ) ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ. ಮುಂದೆ ಈತ ಬರ್ಮಿಂಗ್‍ಹ್ಯಾಮ್‍ನಲ್ಲಿ ಒಂದು ಆರಾಧನಾ ಮಂದಿರವನ್ನು ಸ್ಥಾಪಿಸಿದ. ಆಕ್ಸ್‍ಫರ್ಡಿನಲ್ಲಿಯೂ ಒಂದನ್ನು ಸ್ಥಾಪಿಸಲು ಇಚ್ಛಿಸಿದ. ಆದರೆ ಅದು ಸಾಧ್ಯವಾಗಲಿಲ್ಲ. 1860ರಲ್ಲಿ ರ್ಯಾಂಬ್ಲರ್ ಎಂಬ ಕ್ಯಾತೊಲಿಕ್ ಪಂಥದ ಪತ್ರಿಕೆಯ ಸಂಪಾದಕನಾದ. ಮುಂದೆ ಅದಕ್ಕೂ ರಾಜೀನಾಮೆಯಿತ್ತ. ಈತ ತನ್ನ ಹೆಚ್ಚು ಸಮಯವನ್ನು ಬರ್ಮಿಂಗ್‍ಹ್ಯಾಮಿನ ಹುಡುಗರಿಗೆ ಶಿಕ್ಷಣ ಕೊಡುವುದರಲ್ಲಿ ಕಳೆಯತೊಡಗಿದ..

1864ರಲ್ಲಿ ಚಾಲ್ರ್ಸ್ ಕಿಂಗ್‍ಸ್ಲಿ ಮ್ಯಾಕ್‍ಮಿಲನ್ ಮ್ಯಾಗಜೀನಿನಲ್ಲಿ ಈತನ ಪ್ರಾಮಾಣಿಕತೆಯನ್ನು ಪ್ರಶ್ನಿಸಿ ಬರೆದ. ಅದಕ್ಕುತ್ತರವಾಗಿ ನ್ಯೂಮನ್ ತಾನು ಕ್ಯಾತೊಲಿಕ್‍ನಾದ ಬಗೆಯನ್ನು ವಿವರಿಸುವ ಅಪಲೋಜಿಯಾ ಪ್ರೊವಿಟಾ ಸುಆ(1864) ಎಂಬ ಆಧ್ಯಾತ್ಮಿಕ ಆತ್ಮಕತೆಯನ್ನು ಬರೆಯಲು ಅವಕಾಶ ದೊರೆಯಿತು. ಈ ಪುಸ್ತಕ ಧಾರ್ಮಿಕ ಆತ್ಮಚರಿತ್ರೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುದಲ್ಲದೆ ಇದನ್ನು ಮೀರಿಸುವ ಗ್ರಂಥ ಹುಟ್ಟಿಲ್ಲ ಎನ್ನುವಂತಾಯಿತು. ಇದರಲ್ಲಿನ ವಿಚಾರಪೂರ್ಣ ಸೂಕ್ಷ್ಮತರ್ಕ, ವಿವರಣೆ ಯಥಾರ್ಥತೆ-ಇವು ಈತನ ಪ್ರಾಮಾಣಿಕತೆಯನ್ನು ಶಂಕಿಸುತ್ತಿದ್ದವರನ್ನು ಸುಮ್ಮನಾಗಿಸಿದುವು. ಮುಂದೆ 1878ರಲ್ಲಿ ಟ್ರಿನಿಟಿಯ ಗೌರವ ಸದಸ್ಯನಾಗಿ ನೇಮಕಗೊಂಡ. ಅದೇ ವರ್ಷ ಹದಿಮೂರನೆಯ ಪೋಪ್ ಗುರು ಲಿಯೋನ ಆಯ್ಕೆಯಿಂದಾಗಿ ರೋಮನ್ ಕ್ಯಾತೊಲಿಕ್ ಪಂಥದ ವತಿಯಿಂದ ಈತ ವಹಿಸಿದ ಶ್ರಮಕ್ಕೆ ಮಾನ್ಯತೆ ದೊರೆತು ಕಾರ್ಡಿನಲ್ ಆಗಿ ನೇಮಕಗೊಂಡ. 1880ರಲ್ಲಿ ಆಕ್ಸ್‍ಫರ್ಡ್, ಟ್ರಿನಿಟಿ ಕಾಲೇಜಿನ ಜೆಸ್ಯೊಯಿಟ್ ಚರ್ಚಿನಲ್ಲಿ ಬೋಧಿಸಲು ಹಿಂತಿರುಗಿದ. ತನ್ನ ಉಳಿದ ಆಯುಷ್ಯದ ಹೆಚ್ಚು ದಿನಗಳನ್ನು ಬರ್ಮಿಂಗ್ ಹ್ಯಾಮಿನ ಆರಾಧನಾ ಮಂದಿರದಲ್ಲಿ ಕಳೆದ. 1890ರ ಆಗಸ್ಟ್ 11ರಂದು ಬರ್ಮಿಂಗ್‍ಹ್ಯಾಮಿನಲ್ಲಿ ಈತನ ದೇಹಾಂತವಾಯಿತು.

ಅಲ್ಲದೆ ಈತ ದಿ ಏರಿಯನ್ಸ್ ಆಫ್ ದಿ ಫೋರ್ತ್ ಸೆಂಚುರಿ (1833): ರೋಮಾನಿಸಂ ಅಂಡ್ ಪಾಪ್ಯುಲರ್ ಪ್ರಾಟೆಸ್ಟಾಂಟಿಸಂ (1837); ಟ್ವೆಲ್ವ್ ಲೆಕ್ಚರ್ಸ್(1859); ಲೆಕ್ಚರ್ಸ್ ಆನ್ ದಿ ಪ್ರಸೆಂಟ್ ಆಫ್ ಕ್ಯಾತೊಲಿಕ್ಸ್(1851)-ಮುಂತಾದ ಧಾರ್ಮಿಕ ಗ್ರಂಥಗಳನ್ನು ಬರೆದ. ಈತನ ಸಮಗ್ರ ಕೃತಿಗಳನ್ನು 36 ಸಂಪುಟಗಳಲ್ಲಿ (1868-81) ಪ್ರಕಟಿಸಲಾಗಿದೆ. ಈತ ಆ ಕಾಲದ ಆಧ್ಯಾತ್ಮ ಬುದ್ಧಿಜೀವಿಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದ. ಈತನ ಗದ್ಯಶೈಲಿ ಅನನುಕರಣೀಯವಾಗಿದ್ದು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಿದೆ. ಈತ ತನ್ನ ಅಮೋಘ ಧರ್ಮ ಪ್ರವಚನಗಳಿಂದಾಗಿ ಕ್ರೈಸ್ತಧರ್ಮ ಪ್ರಚಾರಕರಲ್ಲಿ ಅಗ್ರಸ್ಥಾನ ಪಡೆದಿದ್ದಾನೆ. (ಜಿ.ಕೆ.ಯು.)

ನ್ಯೂಮನ್‍ಗೆ ಅಸಾಧಾರಣ ತೀಕ್ಷ್ಣ ಬುದ್ಧಿಯ ವರವಿತ್ತು. ಬಹು ಸೂಕ್ಷ್ಮ ತರ್ಕದ ಪ್ರಭು. ಪ್ರಾಮಾಣಿಕತೆ ಇವನ ಎಲ್ಲ ಬರಹದ ಮೊದಲನೆಯ ಗುಣ ಬಹು ಸೊಗಸಾದ ಸ್ಪಷ್ಟವಾದ, ಮನ ಒಲಿಸುವ, ಶಕ್ತ ಗದ್ಯ ಇವನದು. `ಜಂಟ್ಲ್‍ಮನ್‍ನ ಲಕ್ಷಣಗಳನ್ನು ವಿವರಿಸುವ ಪ್ರಬಂಧ, `ದ ಐಡಿಯ ಆಫ್ ಎ ಯುನಿವರ್ಸಿಟಿ ಶ್ರೇಷ್ಠ ಬರಹಗಳು.

ನ್ಯೂಮನನ `ಲೀಡ್, ಕೈಂಡ್ಲಿ ಲೈಟ್ ಹೃದಯದಿಂದ ಚಿಮ್ಮಿದ ಪ್ರಾರ್ಥನೆ. ಇದನ್ನು ಬರೆದಾಗ ಅವನು ತಾನು ಯಾವ ಮಾರ್ಗವನ್ನು ಆರಿಸಿಕೊಳ್ಳಬೇಕೆಂದು ತಿಳಿಯದೆ ತೊಳಲಾಡುತ್ತಿದ್ದ. ಈ ಕವನವನ್ನು ಹಲವು ಚರ್ಚ್‍ಗಳಲ್ಲಿ ಪ್ರಾರ್ಥನಾ ಹೀನವಾಗಿ ಹಾಡುತ್ತಾರೆ. ಇದನ್ನು ಬಿ.ಎಂ. ಶ್ರೀಕಂಠಯ್ಯನವರು ಬಹು ಸುಂದರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಅನುವಾದದ ಶೀರ್ಷಿಕೆ `ಪ್ರಾರ್ಥನೆ, ಮೊದಲನೆಯ ಪಂಕ್ತಿ, `ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ. (ಪರಿಷ್ಕರಣೆ: ಎಲ್.ಎಸ್.ಶೇಷಗಿರಿರಾವ್)