ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಮಲೈಟಿಸ್

ವಿಕಿಸೋರ್ಸ್ದಿಂದ

ನ್ಯೂಮಲೈಟಿಸ್ ಪ್ರೋಟೊಜೋವ ವಿಭಾಗದ ಫೊರ್ಯಾಮಿನಿಫೆರ ಗಣಕ್ಕೆ ಸೇರಿದ ಒಂದು ಸಾಗರವಾಸಿ. ಇವುಗಳಲ್ಲಿ ಬಹುಪಾಲು ಪ್ರಭೇದಗಳು ಗತವಂಶಿಗಳು. ದಕ್ಷಿಣ ಯೂರೋಪ್, ಉತ್ತರ ಆಫ್ರಿಕ, ಏಷ್ಯದ ಕೆಲವು ಭಾಗಗಳಲ್ಲಿ ಸಿಗುವ ಇಯೊಸೀನ್ ಮತ್ತು ಆಲಿಗೊಸೀನ್ ಕಾಲಗಳ ಟರ್ಷಿಯರಿ ಸುಣ್ಣಕಲ್ಲಿನ ಶಿಲೆಗಳಲ್ಲಿ ನ್ಯೂಮಲೈಟಿಸ್ ಪಳೆಯುಳಿಕೆ ಚಿಪ್ಪುಗಳು ಹೇರಳ ಸಂಖ್ಯೆಯಲ್ಲಿ ಸಿಕ್ಕಿವೆ. ಈ ಚಿಪ್ಪುಗಳು ಗುಂಡನೆಯ ನಾಣ್ಯಗಳಂತೆ ಕಾಣುವುದರಿಂದ ಇಂಗ್ಲೆಂಡಿನ ದಕ್ಷಿಣ ಸೀಮೆಗಳಲ್ಲಿ ಇವನ್ನು ನಾಣ್ಯಶಿಲೆಗಳು ಎಂದು ಕರೆಯುವುದಿದೆ. ಕೆಲವೆಡೆಗಳಲ್ಲಿ ಚಿಪ್ಪುಗಳ ವ್ಯಾಸ 10 ಸೆಂಮೀ ಇರುವುದುಂಟು. ಅಲ್ಲದೆ ಯೂರೋಪಿನ ಪೈರನೀಸ್ ಪರ್ವತಗಳಿಂದ ಮೊದಲುಗೊಂಡು ಹಿಮಾಲಯದ ಮೂಲಕ ವ್ಯಾಪಿಸಿ ಮೇಲಣ ಬರ್ಮವರೆಗಿನ ವಿಸ್ತಾರ ಪರ್ವತ ಪ್ರದೇಶಗಳಲ್ಲಿ ನ್ಯೂಮಲೈಟಿಸ್ ಸುಣ್ಣಕಲ್ಲಿನ ಭಾರಿ ನಿಕ್ಷೇಪಗಳೇ ಇವೆ. ಹಿಮಾಲಯದ ಕೆಲವು ಸ್ಥಳಗಳಲ್ಲಿ ಇವುಗಳ ಮಂದ 1000 ಮೀ ಇರುವುದೆಂದು ಹೇಳಲಾಗಿದೆ. ನ್ಯೂಮಲೈಟಿಸ್ ಚಿಪ್ಪುಗಳ ಇರುವಿಕೆಯಿಂದ ಆಲ್ಪ್ಸ್-ಹಿಮಾಲಯ ಪರ್ವತ ವ್ಯವಸ್ಥೆ ಭೂವೈಜ್ಞಾನಿಕ ಕಾಲಮಾನ ರೀತ್ಯ ಇತ್ತೀಚಿನದೆಂದು ಹೇಳಲು ಸಾಕ್ಷ್ಯ ಒದಗಿದಂತಾಗಿದೆ. ಆಸ್ಟ್ರಲೇಷ್ಯ, ದಕ್ಷಿಣ ಆಫ್ರಿಕ, ಅಮೆರಿಕಗಳ ಟರ್ಷಿಯರಿ ಶಿಲೆಗಳಲ್ಲಿ ನ್ಯೂಮಲೈಟಿಸ್ ಕಂಡುಬಂದಿಲ್ಲ. ಮಯೊಸೀನ್ ಕಾಲದಲ್ಲಿ ಇವುಗಳ ಸಂತತಿ ಕ್ಷೀಣಗೊಳ್ಳುತ್ತ ಬಂತೆಂದು ಹೇಳಲಾಗಿದೆ. ಇಂದು ಜೀವಂತವಾಗಿರುವ ಕೆಲವು ಅಪೂರ್ವ ಪ್ರಭೇದಗಳಲ್ಲಿ ನ್ಯೂಮಲೈಟಿಸ್ ಕಮಿಂಗೈ ಎಂಬುದು ಉಷ್ಣವಲಯದ ಕಡಲುಗಳಲ್ಲಿ ಕಾಣಸಿಗುತ್ತವೆ. ಈಜಿಪ್ಟಿನ ಪಿರಮಿಡ್ಡುಗಳಲ್ಲಿ ನ್ಯೂಮಲೈಟಿಸ್ ಸುಣ್ಣಶಿಲೆಗಳನ್ನು ಬಳಸಲಾಗಿದೆ. (ಕೆ.ಎಂ.ವಿ.)