ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂಯಾರ್ಕ್ (ರಾಜ್ಯ)

ವಿಕಿಸೋರ್ಸ್ದಿಂದ

ನ್ಯೂಯಾರ್ಕ್ (ರಾಜ್ಯ)

ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ರಾಜ್ಯ; ಅದನ್ನು ಮೊದಲು ಸೇರಿದ 13 ರಾಜ್ಯಗಳ ಪೈಕಿ ಒಂದು, ಉ.ಅ.40( 31'-45( ಮತ್ತು ಪ.ರೇ.101'-79(46' ನಡುವೆ ಇದೆ. ರಾಜ್ಯದ ವಾಯವ್ಯದಲ್ಲಿ ಆಂಟೆರಿಯೋ ಸರೋವರ ಮತ್ತು ಕೆನಡದ ಆಂಟೆರಿಯೋ ಪ್ರಾಂತ್ಯ, ಉತ್ತರದಲ್ಲಿ ಕೆನಡದ ಕ್ವಿಬೆಕ್ ಪ್ರಾಂತ್ಯ, ಪೂರ್ವದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ವರ್ಮಾಂಟ್, ಮ್ಯಾಸಚೂಸೆಟ್ಸ್ ಮತ್ತು ಕನೆಟ್ಟಿಕಟ್ ರಾಜ್ಯಗಳು, ಆಗ್ನೇಯದಲ್ಲಿ ಅಟ್ಲಾಂಟಿಕ್ ಸಾಗರ, ದಕ್ಷಿಣದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂ ಜರ್ಸಿ ಮತ್ತು ಪೆನ್ಸಿಲ್ವೇನಿಯ ರಾಜ್ಯಗಳು, ಮತ್ತು ಪಶ್ಚಿಮದಲ್ಲಿ ಈರೀ ಸರೋವರ ಮತ್ತು ನಯಾಗರ ನದಿ ಇವೆ. ವಿಸ್ತೀರ್ಣ 1,28,401 ಚ.ಕಿಮೀ ಜನಸಂಖ್ಯೆ 1,82,41,266 (1970). ರಾಜಧಾನಿ ಆಲ್ಬನೀ.

ಮೇಲ್ಮೈಲಕ್ಷಣ : ಇದರ ಮೇಲ್ಮೈಲಕ್ಷಣ ವೈವಿಧ್ಯಮಯವಾದ್ದು. ಜಗತ್ತಿನಲ್ಲೇ ಉತ್ತಮವಾದ ಬಂದರು ಇರುವ ಸಾಗರತೀರ ಪರ್ವತಗಳು, ಗುಡ್ಡಗಳು, ಬಯಲು, ಬಹು ದೂರ ನೌಕಾಯಾನ ಯೋಗ್ಯವಾದ ನದಿಗಳು, ಅನೇಕ ಚಿಕ್ಕದೊಡ್ಡ ಸರೋವರಗಳು, ಜಲಪಾತಗಳು ಎಲ್ಲವೂ ಇಲ್ಲಿವೆ. ಈಶಾನ್ಯದಲ್ಲಿ ವರ್ತುಲಾಕಾರದ ಆಡಿರಾಂಡ್ಯಾಕ್ ಪರ್ವತಸಮೂಹವಿದೆ. ಮೌಂಟ್ ಮಾರ್ಸಿ (1,629 ಮೀ) ಇದರ ಅತ್ಯುನ್ನತ ಶಿಖರ. ಈ ಪರ್ವತದ ಮುಖ್ಯ ಭಾಗ ಹಾಗೂ ಅದರ ಸುತ್ತಲಿನ ಪ್ರದೇಶದ ಮೇಲಿರುವ ಮಣ್ಣಿನ ಸ್ತರ ಕೃಷಿಗೆ ಬರದಷ್ಟು ತೆಳ್ಳಗಾಗಿದೆ. ಮೋಹಾಕ್ ಮತ್ತು ಹಡ್ಸನ್ ನದಿಗಳ ಕಣಿವೆ ಪ್ರದೇಶ ತಗ್ಗಿನ ಮೈದಾನ. ಹಡ್ಸನ್ ನದಿಯ ಪೂರ್ವಕ್ಕೆ ನ್ಯೂ ಇಂಗ್ಲೆಂಡ್ ದಿಣ್ಣೆನೆಲವಿದೆ. ಇದು ಪೂರ್ವದಲ್ಲಿ ಮ್ಯಾಸಚೂಸೆಟ್ಸ್ ಮತ್ತು ಕನೆಕ್ಟಿಕಟ್ ರಾಜ್ಯಗಳಿಗೂ ದಕ್ಷಿಣದಲ್ಲಿ ಪೆನ್ಸಿಲ್ವೇನಿಯಕ್ಕೂ ಹಬ್ಬಿದೆ. ಆಂಟೆರಿಯೊ ಸರೋವರದಿಂದ ಕೆನಡದ ಗಡಿಯ ಗುಂಟ ಈಶಾನ್ಯಾಭಿಮುಖವಾಗಿ ಸಾಗಿರುವ ಮೈದಾನ ಇನ್ನೊಂದು ಸ್ವಾಭಾವಿಕ ವಿಭಾಗ, ನ್ಯೂ ಯಾರ್ಕ್ ರಾಜ್ಯದ ಆಗ್ನೇಯ ಭಾಗದಲ್ಲಿ ಅಟ್ಲಾಂಟಿಕ್ ಕರಾವಳಿ ಬಯಲು ಮ್ಯಾಸಚೂಸೆಟ್ಸ್‍ನಿಂದ ದಕ್ಷಿಣಾಭಿಮುಖವಾಗಿ ಸಾಗುತ್ತದೆ. ಇದು ಲಾಂಗ್ ಮತ್ತು ಸ್ಟ್ಯಾಟನ್ ದ್ವೀಪಗಳನ್ನೂ ಒಳಗೊಳ್ಳುತ್ತದೆ. ಹಡ್ಸನ್ ನದಿಯ ಪಶ್ಚಿಮ ದಂಡೆಯ ಉದ್ದಕ್ಕೆ ಬೆರಳಿನಂತೆ ಕಿರಿ ಅಗಲದಲ್ಲಿ ಪೀಡ್ಮಾಂಟ್ ಉನ್ನತ ಪ್ರದೇಶ ಹಬ್ಬಿದೆ. ನ್ಯೂ ಯಾರ್ಕ್ ರಾಜ್ಯದ ಅತ್ಯಂತ ದೊಡ್ಡ ಸ್ವಾಭಾವಿಕ ವಿಭಾಗ ಆಪಲೇಚಿಯನ್ ಪ್ರಸ್ಥಭೂಮಿ ಪ್ರದೇಶ. ಇದು ರಾಜ್ಯದ ಸುಮಾರು ಅರ್ಧ ಭಾಗವನ್ನು ಒಳಗೊಂಡಿದೆ. ಇದು ಹಡ್ಸನ್ ನದಿ ಕಣಿವೆಯ ಪಶ್ಚಿಮಕ್ಕೆ, ರಾಜ್ಯದ ದಕ್ಷಿಣ ಮತ್ತು ಪಶ್ಚಿಮ ಎಲ್ಲೆಗಳ ವರೆಗೂ ಹಬ್ಬಿದೆ. ಇಲ್ಲಿ ಕ್ಯಾಟ್ಸ್‍ಕಿಲ್ ಪರ್ವತವೂ ಫಿಂಗರ್ ಲೇಕ್ಸ್ ಬೆಟ್ಟಗಳೂ ಇವೆ. ಅಪಲೇಚಿಯನ್ ಪ್ರಸ್ಥಭೂಮಿಯ ಉತ್ತರಕ್ಕೆ ಮತ್ತು ಮೋಹಾಕ್ ಕಣಿವೆಯ ಪಶ್ಚಿಮಕ್ಕೆ, ಮಹಾಸರೋವರಗಳ ದಕ್ಷಿಣದಂಡೆಗಳ ವರೆಗೂ, ಪ್ರಸ್ಥಭೂಮಿ ಸದೃಶ ಪ್ರದೇಶ ಹಬ್ಬಿದೆ. ಇದನ್ನು ಈರೀ-ಆಂಟೆರಿಯೊ ಬಯಲು ಎಂದು ಕರೆಯಲಾಗಿದೆ. ಸರೋವರಗಳ ಪ್ರಭಾವದಿಂದಾಗಿ ಇಲ್ಲಿ ವಾಯುಗುಣದ ತೀವ್ರತೆ ತಗ್ಗಿದೆ. ಇದು ಪ್ರಮುಖ ಹಣ್ಣು ಬೆಳೆಯುವ ಪ್ರದೇಶ. ಸರೋವರಗಳ ನೆರೆಯ ತಗ್ಗುನೆಲಕ್ಕೂ ಆಡಿರಾಂಡ್ಯಾಕ್ ಪರ್ವತಸಮೂಹದ ಪಶ್ಚಿಮದ ಅಂಚಿಗೂ ನಡುವೆ, ಓನೀಡ ಸರೋವರದ ಉತ್ತರಕ್ಕೆ ಟಗ್ ಬೆಟ್ಟನಾಡು ಇದೆ. ಇಲ್ಲಿಯ ನೆಲ ಬರಡು. ವಾಯುಗುಣ ತೀವ್ರತರ. ಆದ್ದರಿಂದ ಇದು ರಾಜ್ಯದ ಅತ್ಯಂತ ಕಡಿಮೆ ಜನವಸತಿಯ ಪ್ರದೇಶ.

ನ್ಯೂ ಯಾರ್ಕ್ ರಾಜ್ಯಕ್ಕೆ 203 ಕಿಮೀ. ಉದ್ದದ ಅಟ್ಲಾಂಟಿಕ್ ತೀರವೂ 594 ಕಿಮೀ. ಉದ್ದದ ಈರೀ ಮತ್ತು ಆಂಟೆರಿಯೋ ಸರೋವರ ತೀರಗಳೂ ಇವೆ. ಇಲ್ಲಿ 8,000 ಸರೋವರಗಳೂ ಒಂಬತ್ತು ಪ್ರಮುಖ ನದಿಗಳೂ ಇವೆ. ಐತಿಹಾಸಿಕವಾಗಿ ರಾಜ್ಯದಲ್ಲಿ ಪ್ರಧಾನ ಪಾತ್ರ ವಹಿಸಿರುವ ನದಿಗಳು ಹಡ್ಸನ್ ಮತ್ತು ಮೋಹಾಕ್. ಇತರ ಪ್ರಮುಖ ನದಿಗಳ ಪೈಕಿ ಜೆನಸೀ, ಆಸ್ವೀಗೋ ಇವು ಉತ್ತರ ದಿಕ್ಕಿಗೆ ಹರಿದು ಆಂಟೆರಿಯೋ ಸರೋವರನ್ನು ಸೇರುತ್ತವೆ. ಡೆಲವೇರ್, ಸಸ್ಕ್ವಹ್ಯಾನ, ಆಲಿಘನಿ ಇವು ರಾಜ್ಯದ ದಕ್ಷಿಣ ಮತ್ತು ಪಶ್ಚಿಮ ಭಾಗದ ನದಿಗಳು. ನ್ಯೂ ಯಾರ್ಕ್ ನಗರದ ನೀರಿನ ಪೂರೈಕೆಯಾಗುವುದು ಬಹಳ ಮಟ್ಟಿಗೆ ಈ ನದಿಗಳಿಂದ. ಲಾಂಗ್ ಐಲೆಂಡ್ ಜಲಸಂಧಿಯನ್ನು ನ್ಯೂ ಯಾರ್ಕ್ ಕೊಲ್ಲಿಯೊಂದಿಗೆ ಸೇರಿಸುವುದು ಈಸ್ಟ್ ರಿವರ್ ಎಂಬ ಭರತ ಆಳಿವೆ. ನಯಾಗರ ಜಲಪಾತ ಈ ರಾಜ್ಯದ ವಿಶೇಷ ಆಕರ್ಷಣೆ. ಇದೊಂದು ಅತ್ಯಂತ ಸುಂದರ ತಾಣ; ವಿದ್ಯುತ್ತಿನ ಮೂಲ.

ವಾಯುಗುಣ : ನ್ಯೂ ಯಾರ್ಕ್ ರಾಜ್ಯದ ಪ್ರದೇಶದಲ್ಲಿ ಮೊದಲು ನೆಲಸಿದ ಡಚ್ ಜನಕ್ಕೆ ಇಲ್ಲಿಯ ವಾಯುಗುಣ ಅತ್ಯಂತ ನಿರಾಶಾದಾಯಕವಾಗಿತ್ತು. ಮಾಧ್ಯ ಮಾಸಿಕ ಉಷ್ಣತೆಯಲ್ಲಿ ಪ್ರಾದೇಶಿಕ ಅಂತರಗಳು ತೀವ್ರವಾಗಿವೆ; ನ್ಯೂ ಯಾರ್ಕ್ ನಗರದಲ್ಲಿ 12.2 ಡಿಗ್ರಿ.ಸೆ. ಆಡಿರಾಂಡ್ಯಾಕ್ಸ್‍ನ ಪ್ಲೇಸಿಡ್ ಸರೋವರದಲ್ಲಿ 4.4 ಡಿಗ್ರಿ ಸೆ. ಆಗಸ್ಟ್ ತಿಂಗಳಿನ ಸರಾಸರಿ ಉಷ್ಣತೆ ನ್ಯೂ ಯಾರ್ಕಿನಲ್ಲಿ 230 ಸೆ, ಆಡಿರಾಂಡ್ಯಾಕ್ಸ್‍ನ ಇಂಡಿಯನ್ ಸರೋವರದಲ್ಲಿ 170 ಸೆ; ಫೆಬ್ರವರಿಯದು ಲಾಂಗ್ ಐಲೆಂಡಿನಲ್ಲಿ 0.5( ಸೆ. ಆಡಿರಾಂಡ್ಯಾಕ್ಸಿನ ಸ್ಟಿಲ್‍ವಾಟರ್ ಜಲಾಶಯದಲ್ಲಿ -10( ಸೆ. ಬೆಳೆ ಬೆಳೆಯುವ ಶ್ರಾಯದಲ್ಲೂ ತೀವ್ರ ವ್ಯತ್ಯಾಸಗಳಿವೆ; ಲಾಂಗ್ ಐಲೆಂಡಿನಲ್ಲಿ 200 ದಿನಗಳು, ತೀರ ಉತ್ತರದ ಮಧ್ಯಭಾಗದಲ್ಲಿ 86 ದಿನಗಳು, ವಾರ್ಷಿಕ ಆವಪತನ 812 ಮಿಮೀ-1,143 ಮಿಮೀ. ಕರಾವಳಿಯಲ್ಲಿ ಹೆಚ್ಚು ಅವಪತನ ಆಗುತ್ತದೆ. ಸಾಮಾನ್ಯವಾಗಿ ಎಲ್ಲ ಕಡೆಯೂ ಸಾಕಷ್ಟು ಮಳೆಯಾಗುತ್ತದೆ. ಬಫೆಲೋ ಪ್ರದೇಶದಲ್ಲಿ ಇತರ ಎಡೆಗಳಲ್ಲಿ ಆಗುವುದಕ್ಕಿಂತ ಹೆಚ್ಚು ಹಿಮಪಾತವಾಗುತ್ತದೆ.

ಸಸ್ಯ ಪ್ರಾಣಿ ಜೀವನ: ವಸಾಹತು ಕಾಲದಲ್ಲಿ ಕೆಲವು ನೈಸರ್ಗಿಕ ಬಯಲು ಪ್ರದೇಶಗಳನ್ನು ಬಿಟ್ಟರೆ ಉಳಿದ ಎಲ್ಲ ಕಡೆಗೂ ದಟ್ಟವಾದ ಅರಣ್ಯ ಹಬ್ಬಿತ್ತು. ಇಲ್ಲಿ ಸುಮಾರು 140 ಜಾತಿಗಳ ಮರಗಳಿವೆ. ಇವುಗಳಲ್ಲಿ 116 ದೇಶೀಯ ಅಡಿರಾಂಡ್ಯಾಕ್ಸ್ ಹಾಗೂ ಕ್ಯಾಟ್ಸ್‍ಕಿಲ್ ಪರ್ವತಗಳಲ್ಲಿ ಸ್ಪ್ರೂಸ್, ತೈಲಪರ್ನಿ ಮತ್ತು ಹೆಮ್ಲಾಕ್ ಹೆಚ್ಚಾಗಿವೆ. ಹಡ್ಸನ್-ಮೋಹಾಕ್ ಕಣಿವೆ. ಆಂಟೆರಿಯೋ ಸರೋವರದ ಬಯಲು ಹಾಗೂ ಪರ್ವತಗಳ ಆಳವಾದ ಕಣಿವೆಗಳಲ್ಲಿ ಓಕ್, ಕಿರಿ ಎಲೆಯ ತೈಲಪರ್ನಿ, ಮೇಪಲ್, ಹಿಕರಿ, ಚೆಸ್‍ನಟ್ ಮತ್ತು ಎಲ್ಮ್ ಮರಗಳು ಅಧಿಕವಾಗಿವೆ. ರಾಜ್ಯದಲ್ಲಿ ಸಾವಿರಾರು ಜಾತಿಯ ಸಸ್ಯಗಳೂ ಜರೀ ಗಿಡಗಳೂ ತುಂಬಿವೆ.

ಕಾಡು ಟರ್ಕಿ ಕೋಳಿ, ಚಿರತೆ, ಎಲ್ಕ್, ಮೂಸ್, ವೂಲ್ವರೀಸ್ ಹಾಗೂ ಟಿಂಬರ್ ವುಲ್ಟ್ ಮೃಗಗಳು ಮಿತಿಯಿಲ್ಲದೆ ಕೊಲ್ಲಲ್ಪಟ್ಟು ಈಗ ಇಲ್ಲದಂತಾಗಿವೆ. ರಕ್ಷಣಾಕ್ರಮಗಳಿಂದ ಬೀವರ್, ಆಟರ್, ಮಿಂಕ್ ಮತ್ತು ಕಪ್ಪು ಕರಡಿ ಇನ್ನೂ ಉಳಿದುಕೊಂಡಿವೆ. ಚಿಗರೆ, ನರಿ, ಕಸ್ತೂರಿ ಇಲಿ, ರ್ಯಾಕೂನ್, ಮೊಲ, ಅಳಿಲು ಇವು ಎಲ್ಲೆಲ್ಲೂ ಕಂಡುಬರುವ ಪ್ರಾಣಿಗಳು.

ಸುಮಾರು 265 ಜಾತಿಗಳ ಪಕ್ಷಿಗಳು ವರ್ಷದಲ್ಲಿ ಕೆಲವು ಕಾಲ ಇಲ್ಲಿ ವಾಸಿಸುತ್ತವೆ. ರಾಬಿನ್, ತ್ರಶ್, ಕ್ಯಾಟ್ ಬರ್ಡ್, ಬ್ಲೂಬರ್ಡೆ, ರೆನ್, ಲಾರ್ಕ್, ಕೆಂಪುತಲೆಯ ಮರಕುಟಕ, ಓರಿಯಲ್ ಮೊದಲಾದ ಪಕ್ಷಿಗಳು ಬೇಸಗೆಯಲ್ಲಿರುತ್ತವೆ. ಇಂಗ್ಲಿಷ್ ಸ್ವಾಲೋ, ಕಾಗೆ ಹಲವು ಜಾತಿಯ ಮರಕುಟಕಗಳು ಹಾಗೂ ಗಿಡುಗ ವರ್ಷದಾದ್ಯಂತ ಇರುತ್ತವೆ. ಬೇಟೆ ಹಕ್ಕಿಗಳಾದ ಪಾರ್ಟ್‍ರಿಜ್, ಜೀವಂಜೀವ, ಗ್ರೌಸ್, ಬಗೆಬಗೆಯ ಕಾಡು ಬಾತುಗಳು, ಸ್ನೈಪ್ ಮತ್ತು ವುಡ್‍ಕಾಕ್‍ಗಳಿಗೆ ಸರ್ಕಾರ ರಕ್ಷಣೆ ನೀಡಿದೆ. ರಾಜ್ಯದ ನದಿಸರೋವರಗಳಲ್ಲಿ ನೀರು ಕಲುಷಿತಗೊಳ್ಳುತ್ತಿದೆಯಾದರೂ ಅನೇಕ ಜಾತಿಯ ಮೀನುಗಳು ತುಂಬಿವೆ. ಲಾಂಗ್ ಐಲೆಂಡ್ ಜಲಸಂಧಿ ಹಾಗೂ ಅಟ್ಲಾಂಟಿಕ್ ತೀರದಲ್ಲಿ ಹಲವು ಬಗೆಯ ಮೀನುಗಳುಂಟು.

ಖನಿಜಸಂಪತ್ತು : ರಾಜ್ಯದಲ್ಲಿ ಖನಿಜಸಂಪತ್ತು ಹೇರಳವಾಗಿದೆ. ಕಲ್ಲುಪ್ಪು, ಜೇಡಿ ಮಣ್ಣು, ಜಿಪ್ಸಮ್ ಸತು, ಸಿಮೆಂಟು ಕಲ್ಲು, ಬಳಪಕಲ್ಲು ಮರಳುಗಲ್ಲು ಬೆಣಚುಕಲ್ಲು, ಪೈರೈಟೀಸ್ ಇವು ಕೆಲವು ಮುಖ್ಯ ಅದುರುಗಳು. ಕಾಗೆಬಂಗಾರ, ಟಿಟಾನಿಯಮ್, ಕುರುಂದ, ಗಾರ್ನೆಟ್ ಇವುಗಳ ಉತ್ಪಾದನೆಯಲ್ಲಿ ಸಂಯುಕ್ತ ಸಂಸ್ಥಾನಗಳಲ್ಲಿ ಇದು ಮೊದಲನೆಯ ರಾಜ್ಯ: ಸತುವಿನ ಉತ್ಪಾದನೆಯಲ್ಲಿ ಎರಡನೆಯದು. ಕಲ್ಲುಪ್ಪು ಉತ್ಪಾದಿಸುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಇದೂ ಒಂದು. ಸೀಸ ಮತ್ತು ಕಬ್ಬಿಣ ಇವು ಇತರ ಉತ್ಪನ್ನಗಳು.

ಇತಿಹಾಸ : ಫ್ರಾನ್ಸಿನ ಸೇವೆಯಲ್ಲಿದ್ದ ಇಟಾಲಿಯನ್ ನಾವಿಕ ಜೋವಾನೀ ಡಾ ವೇರಾಟ್ಸಾನೊ (1485?-1528) ? ನ್ಯೂ ಯಾರ್ಕ್ ರೇವನ್ನು ಪ್ರವೇಶಿಸಿದ ಮೊತ್ತ ಮೊದಲಿನ ಐರೋಪ್ಯನೆಂದು ಹೇಳಲಾಗಿದೆ. ಫ್ರೆಂಚ್ ಪ್ರಜೆ ಸ್ಯಾಮ್ಯುಯೆಲ್ ಡೀ ಷಾಂಪ್ಲೇನ್ (1567?-1630) ನ್ಯೂ ಯಾರ್ಕಿನ ನೆಲದ ಮೇಲೆ ಕಾಲಿಟ್ಟ ಮೊದಲನೆಯ ಬಿಳಿಯ. ಅವನು 17ನೆಯ ಶತಮಾನದ ಪ್ರಾರಂಭದಲ್ಲಿ ಕ್ವಿಬೆಕ್ಕಿನಿಂದ ದಕ್ಷಿಣಕ್ಕೆ ಹೊರಟು. ಈಗ ತನ್ನ ಹೆಸರನ್ನು ಹೊತ್ತಿರುವ ಷಾಂಪ್ಲೇನ್ ಸರೋವರವನ್ನು ಕಂಡ. 1609ರ ಸೆಪ್ಟೆಂಬರಿನಲ್ಲಿ ಡಚ್ಚರ ಊಳಿಗದಲ್ಲಿದ್ದ ಆಂಗ್ಲ ನಾವಿಕ ಹೆನ್ರಿ ಹಡ್ಸನ್ ತೀರ ಪೂರ್ವಪ್ರದೇಶಗಳಿಗೆ ಜಲಮಾರ್ಗವನ್ನು ಕಂಡು ಹಿಡಿಯಲು ನೇಮಿತವಾಗಿ ಉತ್ತರ ಯೂರೋಪಿನ ಸುತ್ತ ಜಲಸಂಚಾರ ಮಾಡುವುದಕ್ಕೆ ಮಾಡಿದ ಪ್ರಯತ್ನ ವಿಫಲವಾದ ಬಳಿಕ ಪಶ್ಚಿಮಕ್ಕೆ ತಿರುಗಿ ಕೊನೆಯಲ್ಲಿ ನ್ಯೂ ಯಾರ್ಕ್ ಬಂದರನ್ನು ಪ್ರವೇಶಿಸಿದ. ಅನಂತರ ಅವನ ಹೆಸರನ್ನೇ ಪಡೆದ ಹಡ್ಸನ್ ನದಿಯಲ್ಲಿ ಬಹುದೂರ ಪ್ರವಾಸ ಮಾಡಿದ. ಮರುವರ್ಷ ಕೆಲವು ಡಚ್ ವ್ಯಾಪಾರಿಗಳು ಮ್ಯಾನ್‍ಹ್ಯಾಟನ್ ದ್ವೀಪದ ಮೇಲೆ ಬಂದಿಳಿದು ಇಂಡಿಯನರೊಡನೆ ತುಪ್ಪುಳದ ವ್ಯಾಪಾರ ಪ್ರಾರಂಭಿಸಿದರು. ಡಚ್ಚರು ಹೊಸದಾಗಿ ಕಂಡಿದ್ದ ಈ ಭೂಭಾಗಕ್ಕೆ ನ್ಯೂ ನೆದರ್‍ಲೆಂಡ್ ಎಂಬ ಹೆಸರನ್ನು ಕೊಟ್ಟರು. ಮ್ಯಾನ್‍ಹ್ಯಾಟನ್ ದ್ವೀಪದ ಪೂರ್ವಕ್ಕೆ ಸಾಗಿ ಲಾಂಗ್‍ಐಲೆಂಡ್ ಜಲಸಂಧಿ ಮತ್ತು ಬ್ಲಾಕ್ ಐಲೆಂಡ್‍ಗಳನ್ನು ಕಂಡಿದ್ದ ಏಡ್ರಿಯನ್ ಬ್ಲಾಕ್ 1614ರ ಪ್ರಾರಂಭದಲ್ಲಿ ಹಾಲೆಂಡಿನಿಂದ ನ್ಯೂ ನೆದರ್ಲೆಂಡಿನಲ್ಲಿ ತುಪ್ಪುಳು ವ್ಯಾಪಾರದ ಏಕಸ್ವಾಮ್ಯ ಪಡೆದ. ಅದೇ ವರ್ಷದ ಕೊನೆಯಲ್ಲಿ ಡಚ್ಚರು ಈಗ ಆಲ್ಬನಿ ಇರುವ ಸ್ಥಳದ ಕೆಳಭಾಗದಲ್ಲಿ ಗಡಿಗಾವಲಿಗಾಗಿ ಫೋರ್ಟ್‍ನಾಸೂ ಕೋಟೆಯನ್ನು ಕಟ್ಟಿದರು. ಮರುವರ್ಷ ಬಂದ ಪ್ರವಾಹವೊಂದರಿಂದ ಕೋಟೆ ಹಾಳಾಯಿತು. ಆ ವೇಳೆಗೆ ಕೆಲವು ಸಣ್ಣಪುಟ್ಟ ವ್ಯಾಪಾರ ಕೋಠಿಗಳು ಮ್ಯಾನ್‍ಹ್ಯಾಟನ್ ದ್ವೀಪದ ಮೇಲೆ ಸ್ಥಾಪಿತವಾಗಿದ್ದುವು. 1617ರಲ್ಲಿ ಡಚ್ಚರು ಈಗ ಆಲ್ಬನಿ ಇರುವ ಸ್ಥಳದ ಹತ್ತಿರದಲ್ಲಿ ಫೋರ್ಟ್ ಆರೆಂಜನ್ನು ಕಟ್ಟಿದರು.

1623ರಲ್ಲಿ ನ್ಯೂ ನೆದರ್‍ಲೆಂಡ್ ಪ್ರಾಂತ್ಯಸ್ಥಾಪಿತವಾಯಿತು. 1624ರಲ್ಲಿ ಬಂದ ಬೆಲ್ಜಿಯಮ್ಮಿನ ಪ್ರಾಟೆಸ್ಟೆಂಟ್ ನಿರಾಶ್ರಿತರ ವಂಶದ ಕೆಲವು ಕುಟುಂಬಗಳು ಮೊದಲು ಫೋರ್ಟ್ ಆರೆಂಜ್‍ನಲ್ಲು ಅವುಗಳಲ್ಲಿ ಕೆಲವು ಕುಟುಂಬಗಳು ಅನಂತರ ಮ್ಯಾನ್‍ಹ್ಯಾಟನ್‍ನಲ್ಲೂ ನೆಲಸಿದುವು. ಈ ಕುಟುಂಬಗಳವರು ಇಲ್ಲಿಯ ಮೊತ್ತಮೊದಲಿನ ನೆಲಸಿಗರು. ಕ್ರಮೇಣ ಸುತ್ತಮುತ್ತಲಿನ ಪ್ರದೇಶದಲ್ಲೂ ವಸತಿಗಳು ತಲೆದೋರಿದುವು. ಲಾಭದಾಯಕ ವ್ಯಾಪಾರದಿಂದ ಉತ್ತೇಜನ ಪಡೆದ ಡಚ್ ವೆಸ್ಟ್ ಇಂಡಿಯ ಕಂಪನಿ ನೆಲಸಿಗರನ್ನು ಪ್ರೋತ್ಸಾಹಿಸಿತಲ್ಲದೆ 1626ರಲ್ಲಿ ಪೀಟರ್ ಮಿನ್ಯುಯಿಟ್ ಎಂಬಾತನನ್ನು ಡೈರೆಕ್ಟರ್ ಜನರಲನನ್ನಾಗಿ ಕಳುಹಿಸಿತು. ಅವನು ದೇಶೀಯರಿಂದ ಮ್ಯಾನ್‍ಹ್ಯಾಟನ್ ದ್ವೀಪವನ್ನು ಕೇವಲ 24 ಡಾಲರುಗಳ ಬೆಲೆಯ ವಸ್ತುಗಳನ್ನು ಕೊಟ್ಟು ಕೊಂಡು ಅದರ ದಕ್ಷಿಣ ತುದಿಯಲ್ಲಿ ಕೋಟೆಯೊಂದನ್ನು ಕಟ್ಟಿಸಿದ. ಈ ವಸತಿಯನ್ನು ನ್ಯೂ ಆಮ್‍ಸ್ಟರ್‍ಡ್ಯಾಮ್ ಎಂದು ಕರೆಯಲಾಯಿತು.

1629ರಿಂದ ಡಚ್ ವೆಸ್ಟ್ ಇಂಡಿಯ ಕಂಪನಿ ಇಲ್ಲಿಗೆ ವಲಸೆ ಬರುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿತು. ಹಡ್ಸನ್ ಮೋಹಾಕ್ ನದಿಗಳ ಕಣಿವೆಗಳ ಉದ್ದಕ್ಕೂ ಅನೇಕ ವಸತಿಗಳು ಹುಟ್ಟಿಕೊಂಡುವು.

ಆದರೆ ಈ ವಸತಿಗಳನ್ನು ರಾಜರಂತೆ ಸ್ವಚ್ಛಂದವಾಗಿ ಆಳುತ್ತಿದ್ದವರಿಗೂ ಕಂಪನಿಗೂ ಈ ವಸಾಹತುಗಳ ಕಲ್ಯಾಣದ ಕಡೆಗೆ ಲಕ್ಷ್ಯವಿರಲಿಲ್ಲ. ಜನರಲ್ಲಿ ಅಸಮಾಧಾನ ಹಬ್ಬಿ ಅವರು ಆಡಳಿತದಲ್ಲಿ ಪರಿಣಾಮಕಾರಿಯಾದ ಹಕ್ಕು ಹಾಗೂ ಹೆಚ್ಚಿನ ಸ್ವಾತಂತ್ರ್ಯಗಳನ್ನು ಬೇಡತೊಡಗಿದರು. ಇಂಡಿಯನರೊಡನೆ ಹಗೆತನವೂ ಬೆಳೆಯಿತು. ಡಚ್ಚರು ತಮ್ಮವೆಂದು ಸಾಧಿಸುತ್ತಿದ್ದ ಪ್ರದೇಶಗಳನ್ನು ನ್ಯೂ ಇಂಗ್ಲೆಂಡ್ ವಸಾಹತು ಜನರು ಆಕ್ರಮಿಸತೊಡಗಿದರು. ಈ ಘಟನೆಗಳು ವಸಾಹತಿನವರ ಅಸಹನೆಯನ್ನು ಹೆಚ್ಚಿಸಿ, ತಮ್ಮನ್ನು ಆಳುತ್ತಿದ್ದವರ ಬೆಂಬಲಕ್ಕೆ ಅಗತ್ಯ ಕಾಲದಲ್ಲಿ ಅವರು ಬರದೆ ಇರುವುದಕ್ಕೆ ಕಾರಣವಾದವು. 1664ರಲ್ಲಿ ಕರ್ನಲ್ ರಿಚರ್ಡ್ ನಿಕಾಲ್ಸ್ ಬ್ರಿಟಿಷ್ ಪಡೆಯೊಂದಿಗೆ ಬಂದು ನ್ಯೂ ಆಮ್‍ಸ್ಟರ್‍ಡ್ಯಾಮನ್ನು ವಶಪಡಿಸಿಕೊಂಡ. ಉಳಿದ ಪ್ರದೇಶಗಳೂ ಶೀಘ್ರದಲ್ಲೇ ಬ್ರಿಟಿಷರ ವಶವಾದುವು. ಈ ವಸಾಹತನ್ನು ದೊರೆ ಎರಡನೆಯ ಚಾರ್ಲ್‍ಸ್ ತನ್ನ ತಮ್ಮ ಡ್ಯೂಕ್ ಆಫ್ ಯಾರ್ಕನಿಗೆ ಕೊಟ್ಟ. ನ್ಯೂ ನೆದರ್ಲೆಂಡ್ ವಸಾಹತಿಗೂ ನ್ಯೂ ಆಮ್‍ಸ್ಟರ್‍ಡ್ಯಾಮಿಗೂ ಡ್ಯೂಕನ ಗೌರವಾರ್ಥ ನ್ಯೂ ಯಾರ್ಕ್ ಎಂದು ನಾಮಕರಣ ಮಾಡಲಾಯಿತು. 1673ರಲ್ಲಿ ಡಚ್ ಹಡಗು ಪಡೆಯೊಂದು ನ್ಯೂ ಯಾರ್ಕನ್ನು ಗೆದ್ದುಕೊಂಡಿತು. ಆದರೆ 1674ರಲ್ಲಿ ಆದ ಒಪ್ಪಂದದ ಪ್ರಕಾರ ಡಚ್ಚರು ಬ್ರಿಟಿಷರಿಗೆ ಅದನ್ನು ಮರಳಿಕೊಟ್ಟರು. ಉತ್ತರ ಅಮೆರಿಕದಲ್ಲಿ ಸ್ಥಾಪಿತವಾದ 13 ಬ್ರಿಟಿಷ್ ವಸಾಹತುಗಳಲ್ಲಿ ನ್ಯೂ ಯಾರ್ಕ್ ಒಂದಾಗಿ ಗವರ್ನರನ ಆಡಳಿತಕ್ಕೆ ಬಂತು.

ವರ್ಷಗಳು ಸಂದಂತೆ ವಸಾಹತು ಬೆಳೆಯಿತು. ಮುಂದೆ ಬ್ರಿಟಿಷರ ಆಡಳಿತದ ನೀತಿಧೋರಣೆಗಳಿಂದ ವಸಾಹತುಗಳಿಗೆ ಅತೃಪ್ತಿಯಾಗಿ ಅವು ಕ್ಷೋಭೆಗೊಂಡುವು. 1775ರ ಅಮೆರಿಕನ್ ಸ್ವಾತಂತ್ರ್ಯ ಯುದ್ಧದಲ್ಲಿ ನ್ಯೂ ಯಾರ್ಕ್ ಮಹತ್ತರ ಪಾತ್ರವಹಿಸಿತು. ಬ್ರಿಟಿಷರ ಸೋಲಿನ ಅನಂತರ 1783ರಲ್ಲಿ ಆದ ಪ್ಯಾರಿಸ್ ಒಪ್ಪಂದದ ಪ್ರಕಾರ ಬ್ರಿಟಿಷ್ ಸರ್ಕಾರ ಅಮೆರಿಕನ್ ವಸಾಹತುಗಳು ಸ್ವತಂತ್ರವೆಂದು ಒಪ್ಪಿಕೊಂಡಿತು. ಪೂರ್ವತೀರದ 13 ವಸಾಹತುಗಳ ಸಾಹಸದ ಪರಿಣಾಮವಾಗಿ ಸಂಯುಕ್ತ ಸಂಸ್ಥಾನಗಳೆಂಬ ದೇಶ ರೂಪುಗೊಂಡಿತು. ನ್ಯೂ ಯಾರ್ಕ್ 1788ರ ಜೂನ್ 17ರಂದು ಸಂಯುಕ್ತ ಸಂಸ್ಥಾನಗಳ ಸಂವಿಧಾನಕ್ಕೆ ಸಹಿ ಹಾಕಿತು. ಹಾಗೆ ಮಾಡಿದ ರಾಜ್ಯಗಳಲ್ಲಿ ಇದು ಹನ್ನೊಂದನೆಯದು.

ಆಡಳಿತ : ರಾಜ್ಯದ ಕಾರ್ಯಾಂಗದ ಪ್ರಾಧಿಕಾರಿ ಗವರ್ನರ್. ಅವನು ಸಂಯುಕ್ತ ಸಂಸ್ಥಾನಗಳ ಪ್ರಜೆಯೂ ಗವರ್ನರನಾಗಿ ಚುನಾಯಿತನಾಗಿರುವುದಕ್ಕೆ ಮೊದಲು ರಾಜ್ಯದಲ್ಲಿ ಕನಿಷ್ಠ 5 ವರ್ಷಗಳ ಕಾಲ ಸತತವಾಗಿ ವಾಸಿಸಿದವನೂ ಆಗಿರಬೇಕು. ವಿಧಾನಾಧಿಕಾರ ಸೆನೆಟ್ ಮತ್ತು ಪ್ರತಿನಿಧಿ ಸಭೆಗಳನ್ನೊಳಗೊಂಡ ವಿಧಾನಮಂಡಲ ದಲ್ಲಿದೆ. ಸೆನೆಟ್‍ನಲ್ಲಿ 58 ಸದಸ್ಯರೂ ಪ್ರತಿನಿಧಿ ಸಭೆಯಲ್ಲಿ 150 ಸದಸ್ಯರೂ ಇರುತ್ತಾರೆ.

ಮೇಲ್ಮನವಿ ನ್ಯಾಯಾಲಯ ರಾಜ್ಯದ ಅತ್ಯುಚ್ಛ ನ್ಯಾಯಾಲಯ. ಅದರಲ್ಲಿ ಒಬ್ಬ ನ್ಯಾಯಾಧೀಶನೂ ಆರು ಸಹನ್ಯಾಯಾಧೀಶರೂ ಇರುತ್ತಾರೆ. ಈ ರಾಜ್ಯದಿಂದ ಅಮೆರಿಕ ಸಂಯುಕ್ತ ಸಂಸ್ಥಾನಗಳ ಪ್ರತಿನಿಧಿಸಭೆಗೆ 43 ಮತ್ತು ಸೆನೆಟ್‍ಗೆ 2 ಪ್ರತಿನಿಧಿಗಳನ್ನು ಕಳಿಸಲಾಗುತ್ತದೆ.

ಶಿಕ್ಷಣ : ರಾಜ್ಯದಲ್ಲಿ 219 ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಅವುಗಳಲ್ಲಿ 86,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. 1972ರಲ್ಲಿ ನ್ಯೂ ಯಾರ್ಕ್ ರಾಜ್ಯ ವಿಶ್ವವಿದ್ಯಾಲಯಕ್ಕೆ 72 ಕಾಲೇಜುಗಳೂ ವಿಶ್ವವಿದ್ಯಾಲಯ ಕೇಂದ್ರಗಳೂ ಸೇರಿದ್ದುವು. ಕೊಲಂಬಿಯ, ಕಾರ್ನೆಲ್, ಸಿರಾಕ್ಯೂಸ್, ರಾಚೆಸ್ಟರ್ ಇವು ಇತರ ಪ್ರಮುಖ ವಿಶ್ವವಿದ್ಯಾಲಯಗಳು. ವೆಸ್ಟ್ ಪಾಯಿಂಟ್‍ನಲ್ಲಿ ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಅಕಾಡೆಮಿ ಇದೆ.

ಕೃಷಿ : ಫಲವತ್ತಾದ ಮತ್ತು ಅಲೆಯಲೆಯಾಗಿ ಏರಿಳಿಯುವ ನೆಲ ಕೃಷಿಗೆ ಅನುಕೂಲವಾಗಿದೆ. ಕ್ಲೋವರ್ ಮತ್ತು ಟಿಮೊತಿ ಮೊದಲಾದ ಸಸ್ಯಗಳನ್ನು ಬೆಳೆಯುತ್ತಾರೆ. ಮೇಪ್‍ಲ್ ಷರಬತ್ತು, ಹಾಲು ಮತ್ತು ಐಸ್‍ಕ್ರೀಂ ಉತ್ಪಾದನೆಯಲ್ಲಿ ಈ ರಾಜ್ಯದ್ದು ಮೊದಲನೆಯ ಸ್ಥಾನ. ಸೇಬು ಮತ್ತು ದ್ರಾಕ್ಷಿ ಉತ್ಪಾದನೆಯಲ್ಲಿ ಇದು ಎರಡನೆಯದು. ತರಕಾರಿ, ಕರಬೂಜ, ಸಿಹಿ ಮತ್ತು ಹುಳಿ ಚೆರಿ, ಬೋರೆ ಹಣ್ಣು ಮತ್ತು ಬಟಾಟೆ ಉತ್ಪಾದನೆಯಲ್ಲಿ ಇದು ಮುಂದಿದೆ. ಕಾಳು, ಓಟ್ಸ್, ಗೋದಿ, ಪೀಚ್, ಬಟಾಣಿ, ಬೀಟ್ , ಅವರೆ, ಕೋಸು, ಕೋಳಿ ಮತ್ತು ತತ್ತಿ ಇವುಗಳ ಉತ್ಪಾದನೆಯೂ ಅಧಿಕ. ಮದ್ಯ ಮತ್ತು ದ್ರಾಕ್ಷಾರಸ ಹೆಚ್ಚಾಗಿ ತಯಾರಾಗುತ್ತವೆ. ಆಹಾರಪದಾರ್ಥಗಳನ್ನು ಡಬ್ಬಿಗಳಲ್ಲಿ ತುಂಬುವ ಮತ್ತು ಘನೀಕರಿಸುವ ಉದ್ಯಮಗಳೂ ಅಧಿಕ ಸಂಖ್ಯೆಯಲ್ಲಿ ಇವೆ.

ಕೈಗಾರಿಕೆ : 1840ರಿಂದಲೇ ನ್ಯೂ ಯಾರ್ಕ್ ಕೈಗಾರಿಕೆಯಲ್ಲಿ ಮುಂದುವರಿದಿತ್ತು. ಉಡುಪುಗಳ ತಯಾರಿಕೆ ರಾಜ್ಯದ ಅತ್ಯಂತ ದೊಡ್ಡ ಉದ್ಯಮ, ಮುದ್ರಣ ಮತ್ತು ಪ್ರಕಾಶನ, ಆಹಾರ ಸಂಸ್ಕರಣ, ಯಂತ್ರ, ರಗ್ಗು, ರತ್ನಗಂಬಳಿ, ಬಟ್ಟೆ, ವಾಹನ ಸೌಕರ್ಯ, ಸಾಬೂನು, ಪೀಠೋಪಕರಣ, ಪೆಟ್ರೋಲ್, ಶುದ್ಧೀಕರಣ, ವೈಜ್ಞಾನಿಕ ಸಲಕರಣೆ, ತಂಬಾಕಿನ ಸರಕು, ರಾಸಾಯನಿಕ, ಕಾಗದ ಮತ್ತು ಚರ್ಮದ ವಸ್ತು ಇವು ಇತರ ಕೈಗಾರಿಕೆಗಳು. ಆಭರಣ, ಬೆಳ್ಳಿಯ ಸಾಮಾನು, ಗೊಂಬೆ, ಆಟಿಕೆ, ಲೇಖನಿ, ಸೀಸದ ಕಡ್ಡಿ ಇವೂ ತಯಾರಾಗುತ್ತವೆ. ವಿದ್ಯುತ್ ಉಪಕರಣ, ಉಗಿಬಂಡಿ, ಮೋಟಾರುಗಾಡಿ ಮತ್ತು ವಿಮಾನಯಂತ್ರ, ಕಬ್ಬಿಣ ಮತ್ತು ಉಕ್ಕಿನ ಸಾಮಾನುಗಳು ಇಲ್ಲಿ ತಯಾರಾಗುತ್ತವೆ. ರಾಚೆಸ್ಟರಿನಲ್ಲಿ ಕ್ಯಾಮೆರ ತಯಾರಿಸುವ ಒಂದು ಜಗತ್‍ಪ್ರಸಿದ್ಧ ಸಂಸ್ಥೆಯಿದೆ.

ಪ್ರೇಕ್ಷಣೀಯ ಸ್ಥಳಗಳು : ರಾಜ್ಯದಲ್ಲಿ ಅನೇಕ ವಸ್ತು ಸಂಗ್ರಹಾಲಯಗಳು, ಕಟ್ಟಡಗಳು ಮತ್ತು ಐತಿಹಾಸಿಕ ನಿವೇಶನಗಳು ಇವೆ. ಸರ್ಕಾರ 20ಕ್ಕೂ ಹೆಚ್ಚು ಐತಿಹಾಸಿಕ ಭವನ ಮತ್ತು ನಿವೇಶನಗಳನ್ನು ವಹಿಸಿಕೊಂಡಿದೆ. ಕಿಂಗ್ಸ್ ಟನ್ನಿನಲ್ಲಿರುವ ಸೆನೆಟ್ ಹೌಸ್, ಟ್ಯಾರಿಟೌನಿನಲ್ಲಿರುವ ವಾಷಿಂಗ್‍ಟನ್ ಅರ್ವಿಂಗನ ಮನೆ ಸನ್ನಿಸೈಡ್, ಡಚ್‍ರ ಚರ್ಚು (1697), ಜೇಗೋಲ್ಡನ 19ನೆಯ ಶತಮಾನದ ಭವನ ಲಿಂಡ್‍ಹಸ್ರ್ಟ್, ಹೈಡ್ ಪಾರ್ಕಿನಲ್ಲಿರುವ ರೂಸ್‍ವೆಲ್ಟ್ ರಾಷ್ಟ್ರೀಯ ಐತಿಹಾಸಿಕ ನಿವೇಶನ, ರೂಸ್‍ವೆಲ್ಟ್ ಗ್ರಂಥಾಲಯ, ನಾರ್ತ್ ಟ್ಯಾರಿಟೌನಿನಲ್ಲಿರುವ ಫಿಲಿಪ್ಸ್ ಬರ್ಗ್ ಮೇನರ್, ಸ್ಟೋನೀಬ್ರೂಕ್ ನಲ್ಲಿರುವ ಸಫಾಕ್ ಮ್ಯೂಸಿಯಮ್ ಮತ್ತು ಕ್ಯಾರಿಯೆಜ್ ಹೌಸ್, ಕೂಪರ್ ಟೌನಿನ ರಾಷ್ಟ್ರೀಯ ಬೇಸ್‍ಬಾಲ್ ಹಾಲ್, ಹತ್ತಿರದಲ್ಲೇ ಇರುವ ಫೆನಿಮಾರ್ ಹೌಸ್, ಆಲ್ಬನಿಯ ನ್ಯೂ ಯಾರ್ಕ್ ರಾಜ್ಯ ವಸ್ತು ಸಂಗ್ರಹಾಲಯ, ಕಾರ್ನಿಂಗಿನ ಕಾರ್ನಿಂಗ್ ಗ್ಲಾಸ್ ಸೆಂಟರ್, ಫಿಂಗರ್ ಲೇಕ್ಸ್‍ನ ಕರ್ಟಿಸ್ ಮ್ಯೂಸಿಯಮ್, ಹ್ಯಾಮಂಡ್ಸ್ ಪೋರ್ಟಿನ ವೈನ್ ಮ್ಯೂಸಿಯಮ್, ಯುಟಿಕಾದಲ್ಲಿರುವ ಮನ್ಸನ್-ವಿಲಿಯಮ್-ಪ್ರಾಕ್ಟರ್ ಇನ್‍ಸ್ಟಿಟ್ಯೂಟ್, ಆಗ್ಡೆನ್ಸ್ ಬರ್ಗ್‍ನ ರೆಮಿಂಗ್‍ಟನ್ ಕಲಾ ಸ್ಮಾರಕ ವಸ್ತು ಸಂಗ್ರಹಾಲಯ ಮುಂತಾದವು ಪ್ರೇಕ್ಷಣೀಯವಾದವು.

ನ್ಯೂ ಯಾರ್ಕ್, ಬಫಲೋ, ರಾಚೆಸ್ಟರ್, ಸಿರಾಕ್ಯೂಸ್, ಯಾಂಕರ್ಸ್, ಆಲ್ಬನಿ, ಯೂಟಿಕ, ಸ್ಕನೆಕ್‍ಟಡೀ, ನಯಾಗರ ಫಾಲ್ಸ್, ಬಿಂಗ್‍ಹ್ಯಾಮ್‍ಟನ್ ಇವು ಹೆಚ್ಚು ಜನಸಂಖ್ಯೆಯ ನಗರಗಳು. (ಜಿ.ಕೆ.ಯು.)