ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಆರ್ಲಿಯನ್ಸ್‌

ವಿಕಿಸೋರ್ಸ್ದಿಂದ

ನ್ಯೂ ಆರ್ಲಿಯನ್ಸ್ - ಅಮೆರಿಕ ಸಂಯುಕ್ತ ಸಂಸ್ಥಾನಗಳ ಲುವೀಸಿಯಾನ ರಾಜ್ಯದ ಅತ್ಯಂತ ದೊಡ್ಡ ನಗರ; ಅಮರಿಕದ ಪ್ರಧಾನ ರೇವುಪಟ್ಟಣಗಳಲ್ಲಿ ಎರಡನೆಯದು ನ್ಯೂ ಆರ್ಲಿಯನ್ಸ್ ಪ್ಯಾರಿಷಿನ ಅಡಳಿತಕೇಂದ್ರ. ಲುವೀಸ್‍ಯಾನದ ಅಗ್ನೇಯ ಭಾಗದಲ್ಲಿ ಮಿಸಿಸಿಪಿ ನದಿಗೂ ಪಾಂಚಟ್ರ್ರೇನ್ ಸರೋವರಕ್ಕೂ ನಡುವೆ ಇದೆ. ಲ್ಯಾಟಿನ್ ಅಮೆರಿಕ ರಾಜ್ಯಗಳಿಗೂ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೂ ನಡುವಣ ವ್ಯಾಪಾರ ಈ ರೇವಿನ ಮೂಲಕ ನಡೆಯುತ್ತದೆ. ನಗರವನ್ನು ಮಿಸಿಸಿಪಿ ಪೂರ್ವದಂಡೆಯ ಬಳಸಿನಲ್ಲಿ ಸ್ಥಾಪಿಸಲಾಗಿತ್ತಾದ್ದರಿಂದ ಇದಕ್ಕೆ ಕ್ರೆಸೆಂಟ್ ಸಿಟಿ ಎಂಬ ಹೆಸರು ಬಂದಿತ್ತು. ಆಧುನಿಕ ನಗರ ಈ ನಿವೇಶನದ ಎರಡೂ ದಂಡೆಗಳ ಮೇಲೂ ಹಬ್ಬಿದೆ. ಜನವಸತಿ ಪ್ರಧಾನವಾಗಿ ಪೂರ್ವದಂಡೆಯ ಮೇಲಿದೆ. ಅಲ್ಜಿಯರ್ಸ್ ಎಂಬ ಪಶ್ಚಿಮ ಬಡಾವಣೆ ಈಚೆಗೆ ತ್ವರಿತವಾಗಿ ಬೆಳೆದುಕೊಂಡಿದೆ. ಅಲ್ಜಿಯರ್ಸ್ ಭಾಗಕ್ಕೂ ಪೂರ್ವಭಾಗಕ್ಕೂ ಸಂಪರ್ಕ ಕಲ್ಪಿಸುವ ಮಹಾಸೇತುವೆಯೊಂದಿದೆ. ನಗರದ ವಾಯುಗುಣ ಹಿತಕರವಾದ್ದು. ಸರಾಸರಿ ದೈನಂದಿನ ಉಷ್ಣತೆ ಅಕ್ಟೋಬರ್ - ಮಾರ್ಚ್‍ನಲ್ಲಿ 16ºಅ ಏಪ್ರಿಲ್-ಸೆಪ್ಟೆಂಬರ್‍ನಲ್ಲಿ 25ºಅ. ನ್ಯೂ ಅರ್ಲಿಯನ್ಸಿನ ಜನಸಂಖ್ಯೆ 5,93,471 (1970).

ವಸಾಹತು ಸ್ಥಾಪನೆಯ ಕಾಲದಲ್ಲಿ ಉತ್ತರ ಅಮೆರಿಕವನ್ನು ಗೆದ್ದು ಅಕ್ರಮಿಸಿಕೊಳ್ಳಲು ಸ್ಪರ್ಧಿಸಿದ ಯೂರೋಪಿಯನ್ ರಾಷ್ಟ್ರಗಳ ದೃಷ್ಟಿ ನ್ಯೂ ಅರ್ಲಿಯನ್ಸ್ ಮೇಲಿತ್ತು. ಈ ನಗರದಲ್ಲಿ ವಿವಿಧ ಜನಾಂಗಗಳ ಸಾಂಸ್ಕøತಿಕ ಮತ್ತು ಸಾಮಾಜಿಕ ವೈವಿಧ್ಯಗಳನ್ನು ಕಾಣಬಹುದು. ನೀಗ್ರೋಗಳು ಇಲ್ಲಿಯ ಜನಸಂಖ್ಯೆಯಲ್ಲಿ ಕಾಲುಭಾಗ ಇದ್ದವರು ಈಗ ಸುಮಾರು ಅರ್ಧಭಾಗದಷ್ಟು ಇದ್ದಾರೆ. ನ್ಯೂ ಆರ್ಲಿಯನ್ಸ್ ಸಮಸ್ಯೆಗಳ ನಗರವಾಗಿದೆ. ಇವುಗಳಲ್ಲಿ ಪ್ರಧಾನವಾದದ್ದು ವರ್ಣಭೇದ. ಕಪ್ಪು ಹಾಗೂ ಬಿಳಿ ಜನರ ನಡುವಣ ಘರ್ಷಣೆಯ ಪ್ರವೃತ್ತಿ ಕಾನೂನಿನ ಫಲವಾಗಿ ನಿಯಂತ್ರಣಕ್ಕೆ ಒಳಪಟ್ಟಿದೆ. ನಗರದ ಗೃಹನಿರ್ಮಾಣ ಯೋಜನೆಯಲ್ಲಿ ಬಿಳಿಯರು ಮತ್ತು ಕರಿಯರು ತಾರತಮ್ಯವಿಲ್ಲದೆ ವಾಸಿಸುವ ವ್ಯವಸ್ಥೆ ಇದೆ. ಇಲ್ಲಿಯ ಸಾಂಸ್ಕøತಿಕ ಜೀವನದಲ್ಲಿ ಬಿಳಿಯರ ಹಾಗೂ ನೀಗ್ರೋಗಳ ಕೊಡುಗೆಯನ್ನು ಕಾಣಬಹುದು: ನೀಗ್ರೋ ಜನರು ಸಂಗೀತ, ಪತ್ರಿಕೋದ್ಯಮ, ವ್ಯಾಪಾರ, ಕೈಕಸುಬು, ಕಟ್ಟಡ ನಿರ್ಮಾಣ ಇವುಗಳಲ್ಲಿ ಪ್ರವೀಣರು, ಬಿಳಿಯರು ಶಿಕ್ಷಣ, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಮುಂದಿದ್ದಾರೆ. 1717ರಲ್ಲಿ ಲುವೀಸಿಯಾನ ಪ್ರದೇಶದ ನಿಯಂತ್ರಣವನ್ನು ವಹಿಸಿಕೊಂಡ ಜಾನ್ ವಾವ್ರ್ಸ್ ಕಂಪನಿ ಮಿಸಿಸಿಪಿ ನದಿಯ ದಂಡೆಯ ಮೇಲೆ ನ್ಯೂ ಆರ್ಲಿಯನ್ಸ್ ಪಟ್ಟಣವನ್ನು ಸ್ಥಾಪಿಸಬೇಕೆಂಬ ನಿರ್ಣಯವನ್ನು ಅ ವರ್ಷ ಪ್ಯಾರಿಸಿನಲ್ಲಿ ಕೈಗೊಂಡಿತು. ಅಮೆರಿಕದ ಒಳನಾಡಿನ ಸರಕುಗಳನ್ನು ತಂದು ಹೊರದೇಶಗಳಿಗೆ ಸಾಗಿಸಲು ಮತ್ತು ಮಿಸಿಸಿಪಿ ಕಣಿವೆಯ ಭಾಗದ ವ್ಯಾಪಾರಕ್ಕೆ ಮುಖ್ಯ ಕೇಂದ್ರವನ್ನಾಗಿ ಮಾಡಲು ಈ ನಗರದ ಸ್ಥಾಪನೆ ಅಗತ್ಯವೆನಿಸಿತು. 1718ರಲ್ಲಿ ಕಾಡನ್ನು ಕಡಿದು ನಗರವನ್ನು ನಿರ್ಮಿಸಲಾಯಿತು. ಅದನ್ನು ಫ್ರಾನ್ಸಿನ ರಾಜ ಪ್ರತಿನಿಧಿಯಾಗಿದ್ದ ಡ್ಯೂಕ್ ಆಫ್ ಆರ್ಲಿಯನ್ಸನ ಹೆಸರಿನಲ್ಲಿ ನ್ಯೂ ಆರ್ಲಿಯನ್ಸ್ ಎಂದು ಕರೆಯಲಾಯಿತು. 1721ರಿಂದ ನ್ಯೂ ಆರ್ಲಿಯನ್ಸ್ ಜನಸಂಖ್ಯೆ ಬೆಳೆಯತೊಡಗಿತು. 1722ರಲ್ಲಿ ಇದು ಲಿವೀಸಿಯಾನ ಪ್ರದೇಶದ ಆಡಳಿತಕೇಂದ್ರವಾಯಿತು. 1731ರಲ್ಲಿ ಫ್ರಾನ್ಸ್ ದೊರೆಯ ಆಳ್ವಿಕೆಗೆ ಒಳಪಟ್ಟಿತು. ಹಲವರು ಇಲ್ಲಿಗೆ ವಲಸೆ ಬಂದರು. ಸ್ಥಳೀಯ ದೊರೆಯ ಆಳ್ವಿಕೆಗೆ ಒಳಪಟ್ಟಿತು. ಹಲವರು ಇಲ್ಲಿಗೆ ವಲಸೆ ಬಂದರು. ಸ್ಥಳೀಯ ಬಳಕೆಗಾಗಿ ಬತ್ತ ತರಕಾರಗಳನ್ನಲ್ಲದೆ ರಫ್ತಿಗಾಗಿ ಹೊಗೆಸೊಪ್ಪು ಮತ್ತು ನೀಲಿ ಬೆಳೆಯಲಾಗುತ್ತಿತ್ತು. ಲಾಭಕರವಲ್ಲದ ಸರಕುಗಳನ್ನು ನ್ಯೂ ಆರ್ಲಿಯನ್ಸ್ ರೇವಿನಿಂದ ಕೊಂಡು ಹೋಗಲು ಫ್ರೆಂಚ್ ಹಡಗುಗಳಿಗೆ ಆಸಕ್ತಿ ಇರಲಿಲ್ಲ. ಫ್ರಾನ್ಸಿಗೆ ಪ್ರಯೋಜನವಿಲ್ಲವೆಂದು ಭಾವಿಸಲಾಗಿದ್ದ ನ್ಯೂ ಆರ್ಲಿಯನ್ಸ್ ಬಂದರನ್ನೂ ಮಿಸಿಸಿಪಿ ನದಿಯ ಪಶ್ಚಿಮ ಭಾಗದ ಲುವೀಸಿಯಾನ ಪ್ರದೇಶವನ್ನೂ ಪ್ಯಾರಿಸ್ ಕೌಲಿನ ಪ್ರಕಾರ (1763) ಸ್ಪೇನ್ ದೇಶಕ್ಕೆ ಕೊಡಲಾಯಿತು. ಸ್ಪೇನಿನ ಕಟ್ಟು ನಿಟ್ಟಾದ ನಿಬಂಧನೆಗಳಿಗೆ ಒಳಪಟ್ಟ ನ್ಯೂ ಆರ್ಲಿಯನ್ಸಿನಲ್ಲಿ ಜೀವನ ಶಾಂತಿಯುತವಾಗಿತ್ತು. ವ್ಯಾಪಾರನಿರ್ಬಂಧಗಳಿದ್ದರೂ ಬ್ರಿಟಿಷ್ ವಸಾಹತುಗಳೊಡನೆ ವ್ಯಾಪಾರ ಹೆಚ್ಚಿತು. 1800ರಲ್ಲಿ ಲುವೀಸಿಯಾನವನ್ನು ಸ್ಫೇನ್ ದೇಶ ನೆಪೋಲಿಯನನ ಫ್ರಾನ್ಸಿಗೆ ಹಿಂದಿರುಗಿಸಿತು. 1803ರಲ್ಲಿ ನೆಪೋಲಿಯನ್ ಅದನ್ನು ಅಮೆರಿಕ ಸಂಯುಕ್ತ ಸಂಸ್ಧಾನಗಳಿಗೆ ಮಾರಲು ಪತ್ರವ್ಯವಹಾರ ನಡೆಸಿದ. 1803ರ ಚಳಿಗಾಲದಲ್ಲಿ ನ್ಯೂ ಆರ್ಲಿಯನ್ನಿನ ಕಬಿಲ್ಡೊ ಚೌಕದಲ್ಲಿ ಈ ವರ್ಗಾವಣೆಯ ಸಮಾರಂಭ ಜರುಗಿತ್ತು. ಈಗ ಈ ಚೌಕಕ್ಕೆ ಜ್ಯಾಕ್ಸನ್ ಚೌಕವೆಂಬ ಹೆಸರಿದೆ.

1803ರಲ್ಲಿ ನ್ಯೂ ಆರ್ಲಿಯನ್ಸ್ ಜನಸಂಖ್ಯೆ 8,000 ಇತ್ತು. ಇವರಲ್ಲಿ ಬಿಳಿಯರು 4,000, ಗುಲಾಮರು 2,700, ಗುಲಾಮಗಿರಿಯಿಂದ ಮುಕ್ತರಾದ ಕಪ್ಪು ಜನ 1,300. 1805ರಲ್ಲಿ ಪೌರಸಭೆ ಸ್ಧಾಪಿತವಾಯಿತು. 1812-1852 ಮತ್ತು 1865-1880ರಲ್ಲಿ ಇದು ಲುವೀಸಿಯಾನದ ರಾಜಧಾನಿಯಾಗಿತ್ತು. 18-12-14ರ ಅಮೆರಿಕ-ಬ್ರಿಟನ್ ಯುದ್ಧದಲ್ಲಿ ಬ್ರಿಟಿಷ್ ಪಡೆ ನ್ಯೂ ಆರ್ಲಿಯನ್ಸ್ ನಗರಕ್ಕೆ ಮುತ್ತಿಗೆ ಹಾಕಿತ್ತು. ಜನರಲ್ ಆಂಡ್ರ್ಯೂ ಜ್ಯಾಕ್‍ಸನ್ ಬ್ರಿಟಿಸನ್ ಬ್ರಿಟಿಷರನ್ನು ಸೋಲಿಸಿ ನಗರವನ್ನು ರಕ್ಷಿಸಿದ. ಈ ಯುದ್ಧದ ತರುವಾಯ 40 ವರ್ಷಗಳ ಕಾಲ ನ್ಯೂ ಆರ್ಲಿಯನ್ಸ್ ಹತ್ತಿ ಸಾಗಣೆಯ ಪ್ರಧಾನ ರೇವುಪಟ್ಟಣವಾಗಿತ್ತು. 1840ರ ಹೊತ್ತಿಗೆ ನ್ಯೂ ಆರ್ಲಿಯನ್ಸ್ ಪ್ರಪಂಚದ ಪ್ರಧಾನ ಬಂದರುಗಳಲ್ಲಿ 4ನೆಯ ಸ್ಧಾನ ಪಡೆದಿತ್ತು. 1840ರ ತರುವಾಯ ನಾಲೆಗಳ ಮತ್ತು ರೈಲುಮಾರ್ಗಗಳ ಮೂಲಕ ಪೂರ್ವಾಭಿಮುಖವಾಗಿ ನ್ಯೂ ಯಾರ್ಕ್ ಪಟ್ಟಣಕ್ಕೆ ಸರಕುಗಳು ಸಾಗಹತ್ತಿದುವು. ಆ ವರ್ಷ ಜರ್ಮನಿ ಮತ್ತು ಐರ್ಲೆಂಡ್ ದೇಶಗಳ ವಲಸೆಗಾರರು ಹೆಚ್ಚು ಸಂಖ್ಯೆಯಲ್ಲಿ ಬಂದು ಇಲ್ಲಿ ನೆಲೆಸಿದರು. 1850ರ ಹೊತ್ತಿಗೆ ಇದರ ಜನಸಂಖ್ಯೆ 1,16,375 ಆಯಿತು. ಶೀಘ್ರವಾಗಿ ಬೆಳೆಯುತ್ತಿದ್ದ ನಗರದ ಸಮಸ್ಯೆಗಳು ಅಧಿಕವಾದವು; ಮನೆಗಳು ಒತ್ತಾಗಿದ್ದ ಕಡೆ ಜನರ ಆರೋಗ್ಯದತ್ತ ಗಮನ ನೀಡುವುದು ನಗರ ಪಾಲಿಕೆಯ ಕೆಲಸವಾಯಿತು. ಮಿಸಿಸಿಪಿ ನದಿಯಿಂದ ಪೀಪಾಯಿಗಳಲ್ಲಿ ನಗರದ ಬಳಕೆಗೆ ಬರುತ್ತಿದ್ದ ನೀರು ಶುಚಿಯಾಗಿರುತ್ತಿರಲಿಲ್ಲ. ಒಳಚರಂಡಿಗಳ ವ್ಯವಸ್ಧೆ ಇರಲಿಲ್ಲ. ಭಾರಿ ಮಳೆಯಾದಾಗ ನೀರು ಪಟ್ಟಣದ ತಗ್ಗು ಭಾಗಗಳಲ್ಲಿ ಹಾಗೂ ಬೀದಿಗಳಲ್ಲಿ ನಿಲ್ಲುತ್ತಿತ್ತು. 1853ರಲ್ಲಿ ಕಾಲರಾ ಮತ್ತು ಪೀತಜ್ವರದಿಂದ 8,000 ಮಂದಿ ಮೃತರಾದರು.

ಅಮೆರಿಕನ್ ಅಂತರ್ಯುದ್ಧದ ಕಾಲದಲ್ಲಿ (1861-65) ನ್ಯೂ ಆರ್ಲಿಯನ್ಸ್ ಅಮೆರಿಕನ್ ಒಕ್ಕೂಟದ ವಿರುದ್ಧ ನಿಂತಿತು. ಆಡ್ಮಿರಲ್ ಡೇವಿಡ್ ಫ್ಯಾರಗಾಟನ ನಾಯಕತ್ವದಲ್ಲಿ ಒಕ್ಕೂಟ ನೌಕಾಪಡೆ ನ್ಯೂ ಆರ್ಲಿಯನ್ಸ್ ಪಟ್ಟಣವನ್ನು ವಶಪಡಿಸಿಕೊಂಡಿತು. ಅಲ್ಲಿಗೆ ಸೈನಾಧಿಕಾರಿಯಾಗಿ ನೇಮಕಗೊಂಡು ಜನರಲ್ ಬೆಂಜಮಿನ್ ಬಟ್ಲರ್ ತನ್ನ ಕ್ರೂರ ವರ್ತನೆಯಿಂದಾಗಿ ಜನಪ್ರಿಯನಾಗಲಿಲ್ಲ. ಅಂತರ್ಯುದ್ಧದ ಅನಂತರ ಪುರ್ನವ್ಯವಸ್ಧೆಯ ಕಾಲದಲ್ಲಿ (1865-77) ಬಿಳಿಯರ ಮತ್ತು ನೀಗ್ರೊಗಳ ನಡುವಣ ವೈರ ಬೆಳೆಯಿತು. 1872ರಲ್ಲಿ ನಗರಕ್ಕೆ ಪೌರಾಡಳಿತ ಮತ್ತೆ ಪ್ರಾಪ್ತವಾಗಿ ಅದು ಬಿಳಿಯರ ನಿಯಂತ್ರಣಕ್ಕೆ ಒಳಪಟ್ಟಿತು. 1879ರಲ್ಲಿ ನಗರದ ಆಧುನಿಕ ಬಡಾವಣೆಗಳು ನಿರ್ಮಾಣವಾದುವು.

20ನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಮಿಸಿಸಿಪಿ ಉಗಿ ಜಹುಜುಗಳು ಸರಕುಸಾಗಣೆಯಲ್ಲಿ ರೈಲುಗಳೊಡನೆ ಸ್ಪರ್ಧಿಸುವುದು ಸಾಧ್ಯವಾಗದೆ ಅವುಗಳ ಸಂಖ್ಯೆ ಇಳಿಯಿತು. ರೈಲುಗಳೊಡನೆ ಸ್ಪರ್ಧಿಸುವುದು ಸಾಧ್ಯವಾಗದೆ ಅವುಗಳ ಸಂಖ್ಯೆ ಇಳಿಯಿತು. ರೈಲುಗಳೊಡನೆ ಸ್ಪರ್ಧಿಸುವುದು ಸಾಧ್ಯವಾಗದೆ ಅವುಗಳ ಸಂಖ್ಯೆ ಇಳಿಯಿತು. ರೈಲುಮಾರ್ಗಗಳ ನಿರ್ಮಾಣದ ಭಾರೀ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿತು. ನಗರದ ರಸ್ತೆಗಳನ್ನು ವಿಸ್ತರಿಸಲಾಯಿತು. 11 ಅಂತಸ್ತುಗಳ ನಗರಭವನದ ನಿರ್ಮಾಣವಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ (1939-45) ನ್ಯೂ ಆರ್ಲಿಯನ್ಸ್ ಅಮೆರಿಕದ ಪ್ರಧಾನ ಭೂ, ಸೇನಾ ಹಾಗೂ ನೌಕಾ ಶಿಬಿರಗಳಲ್ಲೊಂದಾಗಿತ್ತು.

ನಗರದ ಆಡಳಿತಕ್ಕೆ ಮೇಯರ್ ಮತ್ತು 7 ಸಭಾಸದಸ್ಯರು ಆಯ್ಕೆಯಾಗುತ್ತಾರೆ. ಇವರ ಅಧಿಕಾರಾವಧಿ 4 ವರ್ಷ. ಮೇಯರ್‍ಗೆ ಸಹಾಯಕನಾಗಿ ಪ್ರಧಾನ ಆಡಳಿತಾಧಿಕಾರಿ ಇರುತ್ತಾನೆ. 1970ರಲ್ಲಿ ನಗರದ ನ್ಯಾಯಾಲಯಗಳಲ್ಲಿ ಇಬ್ಬರು ನೀಗ್ರೋ ನ್ಯಾಯಾಧೀಶರಿದ್ದರು.

1841ರಲ್ಲಿ ಸರ್ಕಾರಿ ಶಾಲೆ ಆರಂಭವಾದಾಗ ಅದರಲ್ಲಿ 83 ವಿದ್ಯಾರ್ಥಿಗಳಿದ್ದರು. 1970ರಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು 1,00,000; ಶಿಕ್ಷಕರು 4,500. ಶಿಕ್ಷಣ ಸಂಸ್ಧೆಗಳಲ್ಲಿ ಕಪ್ಪು ಜನರನ್ನೂ ಬಿಳಿಯರನ್ನೂ ಒಂದುಗೂಡಿಸುವ ಬಗ್ಗೆ ಆತಂಕಗಳಿವೆ. ಈನ ಸಮಸ್ಯೆ ಕಾಲಕ್ರಮದಲ್ಲಿ ಬಗೆಹರಿಯಬಹುದು. ನ್ಯೂ ಆರ್ಲಿಯನ್ಸಿನ ಪ್ರಧಾನ ಉಚ್ಚ ಶಿಕ್ಷಣ ಸಂಸ್ಧೆಗಳು ಲುವೀಸಿಯಾನ ಟುಲೇನ್ ವಿಶ್ವವಿದ್ಯಾಲಯ (1834), ಸೋಫಿ ನ್ಯೂಕೂಂಬ್ ಮೆಮೋರಿಯಲ್ ಮಹಿಳಾ ಕಾಲೇಜು (1886), ಲಯೋಲ ವಿಶ್ವವಿದ್ಯಾಲಯ (1849), ಲುವೀಸಿಯಾನ ಸ್ಟೇಟ್ ವಿಶ್ವವಿದ್ಯಾಲಯ (1958), ಸೇಂಟ್ ಮೇರಿ ಡಾಮಿನಿಕನ್ ಕಾಲೇಜು (1910), ಡಿಲರ್ಡ್ ವಿಶ್ವವಿದ್ಯಾಲಯ (1869), ಜೇóವಿಯರ್ ವಿಶ್ವವಿದ್ಯಾಲಯ, ಡೆಲ್ಗಾಡೋ ತಾಂತ್ರಿಕ ಶಿಕ್ಷಣ ಕಾಲೇಜು (1921), ಅವರ್ ಲೇಡಿ ಹೋಲಿ ಕ್ರಾಸ್ ಕಾಲೇಜು (1916) ಮತ್ತು ಮೌಂಟ್ ಕಾರ್ಮೆಲ್ ಜೂನಿಯರ್ ಕಾಲೇಜು (1921).

ನ್ಯೂ ಆರ್ಲಿಯನ್ಸ್ ಪ್ರಧಾನವಾಗಿ ವಾಣಿಜ್ಯಕೇಂದ್ರ. ಇದು ಪ್ರಪಂಚದ ಪ್ರಧಾನ ಬಂದರುಗಳಲ್ಲೊಂದು. ಇಲ್ಲಿಂದ ಧಾನ್ಯಗಳು, ಲೋಹ ಹಾಗೂ ರಾಸಾಯನಿಕ ವಸ್ತುಗಳು, ಬಟ್ಟೆ, ಎಣ್ಣೆ, ಗಂಧಕ, ಪೆಟ್ರೋಲ್, ಹೊಗೆಸೊಪ್ಪು, ಕಾಗದ ರಫ್ತಾಗುತ್ತವೆ. ನ್ಯೂ ಆರ್ಲಿಯನ್ಸ್ ಮತ್ತು ಅದರ ಪ್ಯಾರಿಸ್ ಭಾಗಗಳಾದ ಸೇಂಟ್ ಬರ್ನಾರ್ಡ್, ಸೇಂಟ್ ಟಮನಿ, ಜೆಫರ್‍ಸನ್‍ಗಳಲ್ಲಿ ಕೈಗಾರಿಕೆಗಳು ಹೆಚ್ಚುತ್ತಿವೆ. ಕಲ್ಲು, ಗಾಜು, ಸಾಬೂನು, ಮಣ್ಣಿನ ವಸ್ತುಗಳು, ಮೋಟಾರು ವಾಹನಗಳ ಬಿಡಿಭಾಗಗಳು, ಹತ್ತಿಬಟ್ಟೆ, ಕಬ್ಬಿಣದ ಸರಕು, ಚುಟ್ಟ, ಸಿಗರೇಟು, ಅಲ್ಯುಮಿನಿಯಂ ಸರಕು, ಮೀನುಗಳ ಡಬ್ಬೀಕರಣ, ವಿೂೀನೆಣ್ಣೆ ಮತ್ತು ತೈಲ ಶುದ್ಧೀಕರಣ ಕೈಗಾರಿಕೆಗಳಿವೆ.

ನ್ಯೂ ಆರ್ಲಿಯನ್ಸ್ ಭಾರಿ ರೈಲ್ವೆ ಜಂಕ್ಷನ್. ಇಲ್ಲಿಂದ 8 ಪ್ರಧಾನ ಮಾರ್ಗಗಳಲ್ಲಿ ಅಮೆರಿಕದ 28 ರಾಜ್ಯಗಳಿಗೆ ರೈಲುಗಳು ಹೋಗುತ್ತವೆ. ಬಸ್ಸು, ಲಾರಿ ಸಂಚಾರವೂ ಅಧಿಕವಾಗಿದೆ. 100ಕ್ಕೂ ಹೆಚ್ಚಿನ ಉಗಿ ಜಹಜುಗಳು ಪ್ರಯಾಣಿಕೆ ಮತ್ತು ಸರಕುಗಳ ಸಾಗಣೆಗೆ ಮಿಸಿಸಿಪಿ ನದಿಯಲ್ಲಿ ದಿನವಹಿ ಸಂಚರಿಸುತ್ತವೆ. ಇಲ್ಲಿ ಮೂರು ವಿಮಾನನಿಲ್ದಾಣಗಳಿವೆ. ದಿನವಹಿ 300 ವಾಣಿಜ್ಯ ವಿಮಾನಗಳು ಬಂದು ಹೋಗುತ್ತವೆ.

ರಸ್ತೆಗಳು ಸುವ್ಯವಸ್ಥಿತವಾಗಿವೆ. ಭಾರಿ ಸೇತುವೆಗಳು ನಿರ್ಮಾಣವಾಗಿವೆ. ನ್ಯೂ ಆರ್ಲಿಯನ್ಸ್ ಮಹಾಸೇತುವೆ 1958ರಲ್ಲಿ ನಿರ್ಮಾಣವಾಯಿತು. ಹೆನ್ರಿ ಪೀಲಾಂಗ್ ಸೇತುವೆ ಇನ್ನೊಂದು ದೊಡ್ಡ ಸೇತುವೆ. ಸುಮಾರು 37 ಕಿಮೀ. ಉದ್ದವಿರುವ ಪಾಂಚಟ್ರ್ರೇನ್ ಸೇತುವೆ ಪ್ರಪಂಚದಲ್ಲೇ ಅತ್ಯಂತ ಉದ್ದವಾದ್ದು.

ಮನೋರಂಜನೆ, ರುಚಿಕರ ಭೋಜನ ಹಾಗೂ ಜಾಸ್ ಸಂಗೀತಕ್ಕೆ ನ್ಯೂ ಆರ್ಲಿಯನ್ಸ್ ಪ್ರಸಿದ್ಧವಾದ್ದು. ಇದು ಅಮೆರಿಕದ ಮುಖ್ಯ ಪ್ರವಾಸಿ ಕ್ಷೇತ್ರಗಳಲ್ಲೊಂದು. ಕ್ರಿಸ್‍ಮಸ್ ತರುವಾಯ ನಗರದಲ್ಲಿ ಜಾತ್ರೆ ಸೇರುತ್ತದೆ. ಮೆರೆವಣಿಗೆಯ ದಿನ ಲಕ್ಷಾಂತರ ಜನ ಬೀದಿಗಳಲ್ಲಿ ಕಿಕ್ಕಿರಿದು ಅದನ್ನು ವೀಕ್ಷಿಸುತ್ತಾರೆ. ದೋಣಿ ಸಂಚಾರ, ಮೀನುಹಿಡಿತ, ಗಾಲ್ಫ್ ಆಟ, ಈಜುಗಾರಿಕೆ ಮೊದಲಾದವು ಪ್ರವಾಸಿಗಳ ಆಕರ್ಷಣೆಗಳು. ಫ್ರೆಂಚ್ ಕ್ವಾರ್ಟರ್ಸ್, ಜ್ಯಾಕ್ಸನ್ ಸ್ಕ್ವೇರ್, ಸ್ಟೇನಿನವರು ನಿರ್ಮಿಸಿದ ಕಬಿಲ್ಡೊ ನ್ಯಾಯಾಲಯ ಭವನ. ಸೇಂಟ್ ಲೂಯಿ ಕತೀ ಡ್ರಲ್, 18ನೆಯ ಶತಮಾನದ ಸ್ಟ್ಯಾನಿಷ್ ಕೋಟೆ, ಪಾಂಚಟ್ರ್ರೇನ್ ತೀರ, ಡೆಲ್ಗಾಡೋ ಕಲಾ ವಸ್ತು ಸಂಗ್ರಹಾಲಯ, ನಗರೋದ್ಯಾನ, ನಗರ ಭವನ, ಕೆನಾಲ್ ಸ್ಟ್ರೀಟ್ (ವ್ಯಾಪಾರ ಕೇಂದ್ರ), ನಗರದ ಮಹಾಸೇತುವೆಗಳು-ಇವು ಪ್ರೇಕ್ಷಣೀಯ. ಎರಡನೆಯ ಮಹಾಯುದ್ಧದ ತರುವಾಯ ನ್ಯೂ ಆರ್ಲಿಯನ್ಸ್ ಅಮೆರಿಕದ ಕಲಾಕೇಂದ್ರಗಳಲ್ಲೊಂದಾಗಿ ಬೆಳೆದಿದೆ. ಜಾಸ್ó ಸಂಗೀತ ನಡೆದು ಬಂದ ದಾರಿಯನ್ನು ತೋರಿಸುವ ವಸ್ತು ಸಂಗ್ರಹಾಲಯವೊಂದು ಈ ನಗರದಲ್ಲಿದೆ. (ವಿ.ಜಿ.ಕೆ.)