ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಕ್ಯಾಸ್ಲ್ ಅಪಾನ್ ಟೈನ್

ವಿಕಿಸೋರ್ಸ್ದಿಂದ

ನ್ಯೂ ಕ್ಯಾಸ್‍ಲ್ ಅಪಾನ್ ಟೈನ್ - ಇಂಗ್ಲೆಂಡಿನ ಟೈನ್ ನದಿಯ ಮುಖಜ ಭೂಮಿಯಿಂದ 13 ಕಿಮೀ. ದೂರದಲ್ಲಿ, ನದಿಯ ಉತ್ತರ ದಡದ ಮೇಲಿರುವ ಒಂದು ನಗರ. ನಾರ್ತಂಬರ್ಲೆಂಡ್ ಕೌಂಟಿಯ ಪಟ್ಟಣ. ಉ.ಆ. 54º 59 ಮತ್ತು ಪ. ರೇ. 1º 35 ಮೇಲೆ ಇದೆ. ಈಗಿನ ಟೈನ್ ಸೇತುವೆಗೆ ಸಮೀಪದಲ್ಲಿ ರೋಮನರು ಕೋಟೆ ಕಟ್ಟಿದಾಗ ಇಲ್ಲಿ ವಸತಿ ಪ್ರಾರಂಭವಾಯಿತು. 1080ರಲ್ಲಿ ನ್ಯೂ ಕ್ಯಾಸ್‍ಲ್ ಅಸ್ತಿತ್ವಕ್ಕೆ ಬಂದರೂ ಇದರ ಚಟುವಟಿಕೆಗಳು ಸ್ಥಳೀಯವಾಗಿದ್ದುವು. 12ನೆಯ ಶತಮಾನದಿಂದೀಚೆಗೆ ಇದು ಸರಹದ್ದಿನ ರಕ್ಷಣಾ ನೆಲೆಯಾಗಿದ್ದು, ಸ್ಕಾಟ್ಲೆಂಡಿಗೆ ಹೋಗುವ ಪೂರ್ವತೀರದ ಜಲಮಾರ್ಗವನ್ನು ರಕ್ಷಿಸುವ ಮುಖ್ಯ ಕೇಂದ್ರವಾಗಿತ್ತು. 1172ರಲ್ಲಿ ಟೈನ್ ನದಿಯ ಸೇತುವೆಯ ರಕ್ಷಣಗಾಗಿ ದುರ್ಗದ ವಾಯವ್ಯ ದಿಕ್ಕಿನಲ್ಲಿ ಒಂದು ಬೃಹತ್ ಶಿಲೆಯನ್ನು ನಿಲ್ಲಿಸಲಾಯಿತು. ಇಲ್ಲಿಯ ಕೋಟೆಯ ರಕ್ಷಣೆಯಲ್ಲಿ ಅನೇಕ ಧರ್ಮಗಳವರು ಮತ್ತು ವ್ಯಾಪಾರಿಗಳು ಇಲ್ಲಿ ನೆಲಸಿ ಪಟ್ಟಣವನ್ನು ಬೆಳೆಸಿದರು. ಪಟ್ಟಣದ ಎಲ್ಲ ಸ್ವಾತಂತ್ರ್ಯಗಳನ್ನೂ ಅನುಕೂಲತೆಗಳನ್ನೂ ಜನರು ಪಡೆದರು. ಇದರಿಂದಾಗಿ ಪಟ್ಟಣ ವಾಣಿಜ್ಯಕೇಂದ್ರವಾಗಿ ಬೆಳೆಯಿತು. ಇಲ್ಲಿ ಉಣ್ಣೆಯ ವ್ಯಾಪಾರ ಪ್ರಧಾನವಾಯಿತು. 1353ರಲ್ಲಿ ಇದು ಮುಖ್ಯ ಉಣ್ಣೆ ಉತ್ಪಾದನ ಕೇಂದ್ರವಾಗಿ ಪ್ರಸಿದ್ಧಿ ಪಡೆಯಿತು. ಮಧ್ಯ ಯುಗದ ಅಂತ್ಯದಲ್ಲಿ ಮುಖ್ಯ ಬಟ್ಟೆ ಕೈಗಾರಿಕಾ ಕೇಂದ್ರವಾಗಿತ್ತು.

ಅನಂತರದ ಶತಮಾನಗಳಲ್ಲಿ ಪಟ್ಟಣ ಅವ್ಯಾಹತವಾಗಿ ಬೆಳೆದು ಅಭಿವೃದ್ಧಿ ಹೊಂದಿತ್ತು. 16ನೆಯ ಶತಮಾನದಲ್ಲಿ ಬೆಳೆಯುತ್ತಿದ್ದ ಲಂಡನ್ ಮಾರುಕಟ್ಟೆಗೆ ಕಲ್ಲಿದ್ದಲನ್ನು ಒದಗಿಸುತ್ತಿತ್ತು. 1800ರ ಹೊತ್ತಿಗೆ ನ್ಯೂ ಕ್ಯಾಸ್‍ಲ್ ಪ್ರಮುಖ ಕೈಗಾರಿಕೆ ಮತ್ತು ಹಣಕಾಸು ಕೇಂದ್ರವಾಯಿತು. ಇಲ್ಲಿ ಪ್ರಥಮ ಬ್ಯಾಂಕು ಸ್ಥಾಪಿತವಾದ್ದು 1755ರಲ್ಲಿ. ಇಲ್ಲಿ ಕಬ್ಬಿಣ ಮತ್ತು ಗಾಜಿನ ಸರಕುಗಳನ್ನು ಉತ್ಪಾದಿಸಲಾಗುತ್ತಿತ್ತು. ಇದು ಹಡಗು ನಿರ್ಮಾಣ ಕೇಂದ್ರವಾಯಿತು. ಉದ್ಯಮದ ಪ್ರಾಮುಖ್ಯ ಕಡಿಮೆಯಾಯಿತಾದರೂ ನಾಗರಿಕ ಮತ್ತು ಭಾರಿ ಎಂಜಿನಿಯಿರಿಂಗ್ ಕೈಗಾರಿಕೆಗಳು ಮುಖ್ಯವಾಗಿ ಉಳಿದಿದೆ. ಇದು ಈಗ ಪ್ರಮುಖ ಸೇವಾ ಕೇಂದ್ರವಾಗಿದೆ. ಎರಡನೆಯ ಮಹಾ ಯುದ್ಧದ ಅನಂತರ ಇದರ ಉತ್ತರ ಭಾಗವನ್ನು ಪುನರ್ನಿರ್ಮಿಸಲಾಯಿತು. ಪೌರ ಕೇಂದ್ರ, ಹೊಸ ಮಾರುಕಟ್ಟೆ, ವಿಶ್ವವಿದ್ಯಾಲಯ ಕ್ಷೇತ್ರ ಇವುಗಳ ನಿರ್ಮಾಣವಾಗಿದೆ. ಜನಸಂಖ್ಯೆಯ ಹೆಚ್ಚಳದಿಂದ ಕೋಟೆಯ ಗೋಡೆಯ ಹೊರಗೆ ಮಧ್ಯಮ ದರ್ಜೆಯ ವಸತಿಗಳಿಂದ ಕೂಡಿದ ಬಡಾವಣೆಗಳು ಬೆಳೆದವು. ನದಿಯ ದಡದಲ್ಲಿ ಕಾರ್ಮಿಕ ವಸತಿಗಳು 1970ರ ಆದಿಭಾಗದಲ್ಲಿ ಪುನರ್‍ನಿರ್ಮಾಣ ಗೊಂಡವು. ಐದು ರಸ್ತೆ ಮತ್ತು ರೈಲ್ವೆ ಸೇತುವೆಗಳು ನದಿಯ ದಕ್ಷಿಣದ ದಡದಲ್ಲಿರುವ ಗೇಟ್ಸ್‍ಹೆಡ್ ಪಟ್ಟಣದೊಡನೆ ಸಂಪರ್ಕ ಕಲ್ಪಿಸುತ್ತವೆ. ಅವುಗಳಲ್ಲಿ ಹೆಚ್ಚು ಪ್ರಸಿದ್ಧವಾದ್ದು ಟೈನ್ ಸೇತುವೆ. ಇದು 1928ರಲ್ಲಿ ನಿರ್ಮಿತವಾದ್ದು. ರೋಮನ್ ಮತ್ತು ಮಧ್ಯ ಯುಗದ ಸೇತುವೆಗಳಿಂದ ಭಾಗದಲ್ಲಿರುವ ವಿದ್ಯುತ್ ಚಾಲಿತ ತೂಗು ಸೇತುವೆ (1865-76) ಆ ಕಾಲದ ಎಂಜಿನಿಯಿರಿಂಗ್ ವಿಕ್ರಮವೆನಿಸಿತ್ತು. ಸೇಂಟ್ ನಿಕೋಲಸ್ ಕತೀಡ್ರಲ್ 14ನೆಯ ಶತಮಾನದಷ್ಟು ಹಳೆಯದ್ದು. ಹಳೆಯ ನಗರದ ಸ್ಯಾಂಡ್‍ಹಿಲ್ ಮೇಲಿರುವ ಗಿಲ್ಡ್‍ಹಾಲ್ ಹಳೆಯ ನಗರ ಕೇಂದ್ರ. ಇದನ್ನು 1655-66ರಲ್ಲಿ ಪುನರ್ನಿರ್ಮಿಸಲಾಯಿತು.

ಇದು ಒಂದು ಮುಖ್ಯ ಶಿಕ್ಷಣ ಕೇಂದ್ರ. ನ್ಯೂ ಕ್ಯಾಸ್‍ಲ್ ಅಪಾನ್ ಟೈನ್ ವಿಶ್ವವಿದ್ಯಾಲಯ 1937ರಲ್ಲಿ ಕಿಂಗ್ಸ್ ಕಾಲೇಜ್ ಆಗಿ ಆರಂಭವಾಯಿತು. ಡಹ್ರ್ಯಮ್ ವಿಶ್ವವಿದ್ಯಾಲಯಕ್ಕೆ ಸೇರಿದ್ದ ಈ ಕಾಲೇಜು 1937ರಲ್ಲಿ ಈಗಿನ ವಿಶ್ವವಿದ್ಯಾಲಯವಾಯಿತು. ಪೌರಸಭಾ ತಂತ್ರವಿಜ್ಞಾನ ಕಾಲೇಜು, ರುದರ್‍ಫರ್ಡ್ ತಂತ್ರವಿಜ್ಞಾನ ಕಾಲೇಜು ಮತ್ತು ಶಿಕ್ಷಣ ಕಾಲೇಜು, 8ನೆಯ ಹೆನ್ರಿಯ (ಆ 1509-47) ಕಾಲದಲ್ಲಿ ಸ್ಥಾಪಿತವಾದ ರಾಯಲ್ ಗ್ರ್ಯಾಮರ್ ಶಾಲೆ, 1705ರಲ್ಲಿ ಸ್ಥಾಪಿತವಾದ ಡೇಮ್ ಅಲಾನ್ಸ್ ಶಾಲೆ ಇವು ಪ್ರಮುಖ ಶಿಕ್ಷಣ ಸಂಸ್ಥೆಗಳು. ಪ್ರಮುಖ ರೋಮನ್ ಮತ್ತು ಇತರ ಪ್ರಾಚ್ಯವಸ್ತುಗಳನ್ನು ವಿಶ್ವವಿದ್ಯಾಲಯಕ್ಕೆ ಸೇರಿದ ಪ್ರಾಚೀನ ವಸ್ತುಸಂಗ್ರಹಾಲಯದಲ್ಲಿ ಮತ್ತು ಪ್ರಾಚೀನ ವಸ್ತುಗಳ ಸಂಘದಲ್ಲಿ ಇಡಲಾಗಿದೆ. ವಿಜ್ಞಾನ ಮತ್ತು ತಂತ್ರವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಈ ಪ್ರದೇಶದ ಕೈಗಾರಿಕಾ ಪ್ರಗತಿಯ ಇತಿಹಾಸವನ್ನು ಪ್ರದರ್ಶಿಸಲಾಗಿದೆ. ಹ್ಯಾನ್‍ಲಾಕ್ ವಸ್ತುಸಂಗ್ರಹಾಲಯದಲ್ಲಿ ಪ್ರಾಣಿಶಾಸ್ತ್ರ ಸಂಬಂಧವಾದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಲೇಂಗ್ ಮತ್ತು ಹಾಲನ್ ಕಲಾ ಸಂಗ್ರಹಾಲಯದಲ್ಲಿ ವರ್ಣಚಿತ್ರಗಳನ್ನು ಇಡಲಾಗಿದೆ. ನ್ಯೂ ಕ್ಯಾಸ್‍ಲ್ ಅಪಾನ್ ಟೈನ್‍ನ ಜನಸಂಖ್ಯೆ ಸುಮಾರು 2,22,153 (1971). (ಕೆ.ಆರ್.)