ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಬೆಡ್ಫರ್ಡ್

ವಿಕಿಸೋರ್ಸ್ದಿಂದ

ನ್ಯೂ ಬೆಡ್‍ಫರ್ಡ್ - ಅಮೆರಿಕ ಸಂಯುಕ್ತ ಸಂಸ್ಥಾನಗಳ ಮ್ಯಾಸಾಚೂಸೆಟ್ಸ್ ರಾಜ್ಯದ ಒಂದು ನಗರ; ಬಂದರು; ಬ್ರಿಸ್ಟಲ್ ಕೌಂಟಿಯ ಒಂದು ಕೇಂದ್ರ. ರಾಜ್ಯದ ಆಗ್ನೇಯ ಭಾಗದಲ್ಲಿ, ಬಜಡ್ರ್ಸ್ ಕೊಲ್ಲಿಯ ಬಳಿ, ಅಕೂಷ್‍ನೆಟ್ ನದೀ ಮುಖದಲ್ಲಿ ಉ.ಅ.41ಲಿ38' ಮತ್ತು ಪ.ರೇ.70ಲಿ56' ಮೇಲೆ ಇದೆ. ನಗರದ ಜನಸಂಖ್ಯೆ 1,07,777 (1970). ಇಡೀ ನಗರ ಪ್ರದೇಶದ ಜನಸಂಖ್ಯೆ 1,33,667 . ಪ್ಲೀಮತ್ ವಸಾಹತುದಾರರು 1652ರಲ್ಲಿ ಇಲ್ಲಿ ವಸತಿ ನಿರ್ಮಿಸಿದರು. ಆಗ ಇದು ಡಾರ್ಟ್‍ಮತ್‍ನ ಭಾಗವಾಗಿತ್ತು. 1760ರಲ್ಲಿ ಇಲ್ಲಿ ಮೀನುಗಾರರು ನೆಲೆಸಿದರು. 1765ರ ವೇಳೆಗೆ ಇದು ತಿಮಿಂಗಲ ಬೇಟೆಯ ಬಂದರಾಗಿ ಬೆಳೆಯಿತು. ಅನಂತರ ಹಡಗು ನಿರ್ಮಾಣ ಕೇಂದ್ರವಾಯಿತು. ಅಮೆರಿಕದ ಕ್ರಾಂತಿಯುದ್ಧದ ಸಮಯದಲ್ಲಿ ಹೋರಾಟಗಾರರು ಇಲ್ಲಿಯ ರೇವಿನಿಂದ ಕಾರ್ಯಾಚರಣೆ ನಡೆಸಿದರು. 1778ರಲ್ಲಿ ಬ್ರಿಟಿಷ್ ಪಡೆಗಳು ಇದರ ಮೇಲೆ ದಾಳಿ ಮಾಡಿ ಹಳ್ಳಿಯನ್ನು ಸುಟ್ಟುವು. ಅನಂತರ ಇದು ಚೇತರಿಸಿಕೊಂಡು ಮತ್ತೆ ಬೆಳೆಯಿತು. 1787ರಲ್ಲಿ ಡಾರ್ಟ್‍ಮತ್‍ನಿಂದ ಪ್ರತ್ಯೇಕವಾಗಿ, ಬೆಡ್‍ಫರ್ಡ್ ಎಂಬ ಹೆಸರು ಗಳಿಸಿ ಪಟ್ಟಣವಾಯಿತು. ಇದೇ ಹೆಸರಿನ ಮತ್ತೊಂದು ಪಟ್ಟಣ ಮಿಡ್ಲ್‍ಸೆಕ್ಸ್ ಕೌಂಟಿಯಲ್ಲಿದ್ದುದರಿಂದ ಇದನ್ನು ನ್ಯೂಬೆಡ್‍ಫರ್ಡ್ ಎಂದು ಅನಂತರ ಕರೆಯಲಾಯಿತು. 1820ರ ವೇಳೆಗೆ ನ್ಯೂಬೆಡ್‍ಫರ್ಡ್ ಪ್ರಪಂಚದ ಪ್ರಮುಖ ತಿಮಿಂಗಲ ಬೇಟೆಯ ಬಂದರುಗಳಲ್ಲಿ ಒಂದಾಗಿತ್ತು. ಇದರ ಪ್ರಾಮುಖ್ಯ ತಗ್ಗಿದಾಗ ನ್ಯೂಬೆಡ್‍ಫರ್ಡ್‍ನಲ್ಲಿ ಹತ್ತಿ ಬಟ್ಟೆ ತಯಾರಿಕೆಯ ಉದ್ಯಮ ಬೆಳೆಯಿತು. 1920ರ ಅನಂತರ ಈ ಕೈಗಾರಿಕೆ ಇಲ್ಲಿಂದ ಆಗ್ನೇಯಕ್ಕೆ ಸರಿಯತೊಡಗಿತು. ಈಗ ಇಲ್ಲಿ ಉಡುಪು, ವಿದ್ಯುತ್ ಉಪಕರಣ, ಯಂತ್ರ, ರಬ್ಬರ್ ಸರಕು, ಲೋಹ ಸರಕು ತಯಾರಾಗುತ್ತವೆ. ಈಗ ಇದು ಕಾಡ್ ಭೂಶಿರ ಪ್ರದೇಶದ ಬಂದರು; ಮೀನುಗಾರಿಕೆ ಕೇಂದ್ರ. ತಿಮಿಂಗಲ ಬೇಟೆಯ ಇತಿಹಾಸ ಸಂಘದ ವಸ್ತುಸಂಗ್ರಹಾಲಯ. ಅಂತರ್ಯುದ್ಧಕಾಲದಲ್ಲಿ ಬಂದರನ್ನು ರಕ್ಷಿಸಲು ರೋಡ್‍ಮನ್ ನಿರ್ಮಿಸಿದ ಕೋಟೆ ಮತ್ತು ಇತರ ಕೆಲವು ಇತಿಹಾಸ ಪ್ರಸಿದ್ಧ ಸಂಸ್ಥೆಗಳು, ಕಟ್ಟಡಗಳು ಇಲ್ಲಿವೆ.

ನ್ಯೂಬೆಡ್‍ಫರ್ಡ್ ಬಂದರು ಪ್ರಮುಖವಾಗಿ ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಎಣ್ಣೆಯ ವ್ಯಾಪಾರ ನಿರ್ವಹಿಸುತ್ತಿವೆ. ಇದು ದಕ್ಷಿಣ ನ್ಯೂಇಂಗ್ಲೆಂಡ್ ಭಾಗದ ಆಯಕಟ್ಟಿನ ಪ್ರದೇಶದಲ್ಲಿದೆ. (ಎಸ್.ಕೆ.ಆರ್.)