ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಬ್ರನ್ಸ್‌ವಿಕ್ 1

ವಿಕಿಸೋರ್ಸ್ದಿಂದ

ನ್ಯೂ ಬ್ರನ್ಸ್‍ವಿಕ್ 1 - ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಸೇರಿದ ನ್ಯೂಜರ್ಸಿಯ ಒಂದು ನಗರ; ಮಿಡ್ಲ್‍ಸೆಕ್ಸ್ ಕೌಂಟಿಯ ಆಡಳಿತ ಕೇಂದ್ರ. ಉ.ಅ.40ಲಿ 29' ಮತ್ತು ಪ.ರೇ 74ಲಿ 27' ಮೇಲೆ ರ್ಯಾರಿಟನ್ ನದಿಯ ದಡದ ಮೇಲಿದೆ. ಜನಸಂಖ್ಯೆ 41,85(1970). 1681ರಲ್ಲಿ ಇಲ್ಲಿ ವಸತಿ ಏರ್ಪಟ್ಟಿತು. ಈ ಸ್ಥಳದಲ್ಲಿ ನೆಲೆ ಸ್ಥಾಪಿಸಿದ ಜಾನ್ ಇನಿಯನ್ ಇಲ್ಲಿ ನದಿ ದಾಟಲು ಹರಿಗೋಲು ಸಂಚಾರ ವ್ಯವಸ್ಥೆ ಏರ್ಪಡಿಸಿ ನಡೆಸುತ್ತಿದ್ದ. ಆದ್ದರಿಂದ ಇದಕ್ಕೆ ಇನಿಯನ್ಸ್ ಫರಿ ಎಂಬ ಹೆಸರಿತ್ತು. 1713ರಲ್ಲಿ 1ನೆಯ ಜಾರ್ಜನ ಗೌರವಾರ್ಥ ಇದಕ್ಕೆ ಈಗಿನ ಹೆಸರು ಬಂತು. ಜಾರ್ಜ್ ದೊರೆ ಬ್ರನ್ಸ್‍ವಿಕ್‍ನ ಡ್ಯೂಕನೂ ಆಗಿದ್ದ; 1730ರಲ್ಲಿ 2ನೆಯ ಜಾರ್ಜ್ ಇದಕ್ಕೆ ಪಟ್ಟಣದ ಸನ್ನದು ನೀಡಿದ. ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ನ್ಯೂಯಾರ್ಕಿನಿಂದ ಹಿನ್ನಡೆಯುತ್ತಿದ್ದ ವಾಷಿಂಗ್ಟನ್ನನ ಪಡೆಗಳು ಇದನ್ನು ಆಕ್ರಮಿಸಿಕೊಂಡಿದ್ದು (1776) ಬ್ರಿಟಿಷ್ ಸೇನೆಯ ಆಗಮನವಾದಾಗ ತೆರಪು ಮಾಡಿದುವು. 1778ರಲ್ಲಿ ವಾಷಿಂಗ್ಟನ್ ಮತ್ತೆ ಇದನ್ನು ಗೆದ್ದುಕೊಂಡ. ಇಲ್ಲಿಂದ ಯೋಧರು ಬ್ರಿಟಿಷರಿಗೆ ಕಿರುಕುಳ ನೀಡುತ್ತಿದ್ದರು. 1838ರಲ್ಲಿ ಕ್ಯಾಮ್‍ಡೆನ್ ಮತ್ತು ಅಂಬೋಯ್ ರೈಲು ರಸ್ತೆ ಇಲ್ಲಿಯವರೆಗೂ ನಿರ್ಮಾಣವಾಯಿತು. 19ನೆಯ ಶತಮಾನದಿಂದ ಇದು ಆಸ್ಪತ್ರೆಯ ವಸ್ತುಗಳ ಮತ್ತು ಔಷಧಗಳ ತಯಾರಿಕೆಯ ಕೇಂದ್ರವಾಗಿದೆ. ವಸ್ತ್ರ, ರಾಸಾಯನಿಕ, ಚರ್ಮ ಸರಕು, ಮತ್ತು ಮೋಟಾರುವಾಹನಗಳ ಬಿಡಿಭಾಗಗಳು ತಯಾರಾಗುತ್ತವೆ. 1766ರಲ್ಲಿ ಸ್ಥಾಪಿತವಾದ ಕ್ವೀನ್ಸ್ ಕಾಲೇಜು ರಟ್ಜರ್ಸ್ ವಿಶ್ವವಿದ್ಯಾಲಯವಾಗಿ ಬೆಳೆದಿದೆ. ಅಮೆರಿಕದ ಅತ್ಯಂತ ಪ್ರಾಚೀನ ದೇವತಾಶಾಸ್ತ್ರ ಶಾಲೆ ಇರುವುದು ಇಲ್ಲೇ. 1784ರಲ್ಲಿ ಸ್ಥಾಪಿತವಾದ ಈ ಶಾಲೆ 1810ರಿಂದ ಈ ನಗರದಲ್ಲಿದೆ. ಅಮೆರಿಕದ ಬಾಲಚಮಾ ಸಂಸ್ಥೆಯ ಕೇಂದ್ರ ಕಛೇರಿ ಇದೆ. 1784ರಲ್ಲಿ ಇದು ನಗರವಾಗಿ ನೋಂದಣಿಯಾಯಿತು. (ಎಚ್.ಜಿ.ಎ.)