ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಸೈಬೀರಿಯನ್ ದ್ವೀಪಗಳು

ವಿಕಿಸೋರ್ಸ್ದಿಂದ

ನ್ಯೂ ಸೈಬೀರಿಯನ್ ದ್ವೀಪಗಳು - ನೊವೊ ಸಿಬಿರ್ಸ್‍ಕ್ಕೆ ಆಸ್ಟ್ರೊವ. ರಷ್ಯನ್ ಸೋವಿಯೆತ್ ಫೆಡರೇಟೆಡ್ ಸಮಾಜವಾದಿ ಗಣರಾಜ್ಯದ ದ್ವೀಪಸ್ತೋಮ. ಪೂರ್ವ ಸೈಬೀರಿಯದ ಉತ್ತರಕ್ಕೆ, ಆರ್ಕ್‍ಟಿಕ್ ಸಾಗರದಲ್ಲಿ, ಉ.ಅ.75(00' ಮತ್ತು ಪೂ.ರೇ.142(00' ಮೇಲೆ ಪೂರ್ವ ಸೈಬೀರಿಯನ್ ಸಮುದ್ರಕ್ಕೂ ಲಾಪ್‍ಟೆಫ್ ಸಮುದ್ರಕ್ಕೂ ನಡುವೆ ಇದೆ. ಸೈಬೀರಿಯನ್ ಪ್ರದೇಶಕ್ಕೂ ಈ ದ್ವೀಪಕ್ಕೂ ನಡುವೆ ಇರುವ ಜನಸಂಧಿ ಡಮೀಟ್ರೀ ಲಾಪೆಟೆಫ್. ದ್ವೀಪಸ್ತೋಮ ಯಾಕುತ್ ಸ್ವಯಮಾಡಳಿತ ಸೋವಿಯೆತ್ ಸಮಾಜವಾದಿ ಗಣರಾಜ್ಯಕ್ಕೆ ಸೇರಿದೆ. ದ್ವೀಪಗಳ ವಿಸ್ತೀರ್ಣ ಸುಮಾರು 38,000 ಚ.ಕಿಮೀ ದ್ವೀಪಸ್ತೋಮದಲ್ಲಿ ಮೂರು ಗುಂಪುಗಳಿವೆ. ಇವು ಲ್ಯಾಕ್‍ಫ್‍ಸ್ಕ್ಯೆಡಿಲಾಂಗ್, ಮತ್ತು ನಿರ್ದಿಷ್ಟವಾಗಿ ನ್ಯೂ ಸೈಬೀರಿಯನ್ ಎನಿಸಿಕೊಳ್ಳುವ ದ್ವೀಪಗಳು. ಲ್ಯಾಕಫ್‍ಸ್ಕ್ಯೆಗೂ ನ್ಯೂ ಸೈಬೀರಿಯನ್‍ಗೂ ನಡುವೆ ಸ್ಯಾನ್ ನಿಕೋವ ಜಲಸಂಧಿಯಿದೆ. ನಿರ್ದಿಷ್ಟವಾಗಿ ನ್ಯೂ ಸೈಬೀರಿಯನ್ ಎಂದು ಕರೆಯಲಾಗುವ ಸ್ತೋಮದಲ್ಲಿ ನೋವಯ ಸಿಬಿರ್, ಬೆಲ್‍ಕಾಫ್ಸ್‍ಕಿ, ಕೊಟೆಲ್ನಿ, ಫ್ಯಾಡೆಯೆಫ್ಸ್‍ಕಿ ಎಂಬ ದೊಡ್ಡ ದ್ವೀಪಗಳಿವೆ. ಕೊಟೆಲ್ನಿಗೂ ಫ್ಯಾಡೆಯೆಫ್ಸ್‍ಕಿಗೂ ನಡುವೆ ತಗ್ಗಿನ ಮರಳು ನೆಲವನ್ನು ಆಗಾಗ್ಗೆ ಸಮುದ್ರ ಆವರಿಸುತ್ತದೆ. ಈ ದ್ವೀಪಗಳು 374 ಮೀ.ಗಿಂತ ಎತ್ತರವಾಗಿಲ್ಲ. ಇಲ್ಲಿಯದು ತೀವ್ರ ಚಳಿಯ ವಾಯುಗುಣ. ಇದು ಶೀತವಲಯ ಪ್ರರೂಪದ್ದು. ವರ್ಷದಲ್ಲಿ ಒಂಬತ್ತು ತಿಂಗಳ ಕಾಲ ನೆಲದ ಮೇಲೆ ಹಿಮ ಕಟ್ಟಿರುತ್ತದೆ. ಇಲ್ಲಿಯ ಸಸ್ಯ ಟಂಡ್ರ. ಪೊದೆಗಳು ಕೂಡ ಇಲ್ಲ. ಜವುಗು ಮತ್ತು ಮರಳು ಸಾಮಾನ್ಯವಾಗಿದೆ. ಶೀತವಲಯದ ನರಿ, ಉತ್ತರದ ಜಿಂಕೆ ಮತ್ತು ಲೆಮಂಗ್ ಇಲ್ಲಿಯ ಮುಖ್ಯ ಪ್ರಾಣಿಗಳು. ಬೇಸಗೆಯಲ್ಲಿ ಹಕ್ಕಿಗಳು ಹೇರಳವಾಗಿರುತ್ತವೆ. (ಕೆ.ಆರ್.)