ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಹೆಬ್ರಿಡೀಸ್

ವಿಕಿಸೋರ್ಸ್ದಿಂದ

ನ್ಯೂ ಹೆಬ್ರಿಡೀಸ್ - ಪೆಸಿಫಿಕ್ ಸಾಗರದ ನೈಋತ್ಯ ಭಾಗದಲ್ಲಿರುವ 12 ದೊಡ್ಡ ಮತ್ತು ಹಲವಾರು ಚಿಕ್ಕ ದ್ವೀಪಗಳು, ಫೀಜಿಯ ಪಶ್ಚಿಮಕ್ಕೆ 800 ಕಿಮೀ ಮತ್ತು ಆಸ್ಟ್ರೇಲಿಯದ ಪೂರ್ವಕ್ಕೆ 1,760 ಕಿಮೀ ದೂರದಲ್ಲಿವೆ. ಈ ದ್ವೀಪಗಳ ಆಡಳಿತವನ್ನು ಫ್ರಾನ್ಸ್ ಮತ್ತು ಬ್ರಿಟನ್ ಜಂಟಿಯಾಗಿ ನಡೆಸುತ್ತವೆ. ದಕ್ಷಿಣೋತ್ತರವಾಗಿ 640 ಕಿಮೀ ಹಬ್ಬಿರುವ ಇವುಗಳ ವಿಸ್ತೀರ್ಣ 14,763 ಚ.ಕಿಮೀ, ಜನಸಂಖ್ಯೆ 86,000 (1972 ಅಂ) ನ್ಯೂ ಹೆಬ್ರಿಡೀಸ್‍ನಲ್ಲಿ ಪ್ರಮುಖವಾದ ದ್ವೀಪಗಳು ಬ್ಯಾಂಕ್ಸ್, ಎಸ್ಟಿರಿಟೂ ಸ್ಯಾಂಟೋ, ಓಬ, ಪೆಂಟಿಕಾಸ್ಟ್, ಮಾಲೆಕೂಲ, ಆಂಬ್ರಿಮ್, ಏಫ್ಯಾಟೀ ಮತ್ತು ಎರೊಮ್ಯಾಂಗ. ರಾಜಧಾನಿ ವೀಲ. ಇದು ಏಫ್ಯಾಟೀ ದ್ವೀಪದಲ್ಲಿದೆ.

ಈ ದ್ವೀಪಗಳ ಮೇಲ್ಮೈಲಕ್ಷಣ ವೈವಿಧ್ಯಮಯವಾದ್ದು. ರೂಕ್ಷ ಪರ್ವತಗಳು, ಉನ್ನತ ಹಾಗೂ ತಗ್ಗಿನ ಪ್ರಸ್ಥಭೂಮಿಗಳು. ಅಲೆಅಲೆಯಾಗಿ ಏರಿಳಿಯುವ ನೆಲ, ಕರಾವಳಿಯ ಉಬ್ಬು ನೆಲ, ಕಡಲ ಕೆರೆಯಿಂದಾಚೆಗೆ ಹವಳದ ದಿಬ್ಬ-ಇವುಗಳಿಂದ ಈ ದ್ವೀಪಗಳು ಕೂಡಿವೆ. ಇಲ್ಲಿ ಅವಸಾದಿ ಮತ್ತು ಸುಣ್ಣ ಕಲ್ಲುಗಳೂ ಜ್ವಾಲಾಮುಖೀಯ ಶಿಲೆಗಳೂ ಪ್ರಧಾನವಾಗಿವೆ. ಇಲ್ಲಿ ಆಗಿಂದಾಗ್ಗೆ ಭೂಕಂಪಗಳಾಗುತ್ತಲೇ ಇರುತ್ತವೆ. ಈ ದ್ವೀಪಸ್ತೋಮದ ಅತ್ಯುನ್ನತ ಶಿಖರ ಟ್ಯಾಬ್‍ವೆಮಸಾನ (1,888 ಮೀ) ಇದು ಇಲ್ಲಿಯ ಅತ್ಯಂತ ದೊಡ್ಡ ದ್ವೀಪವಾದ ಎಸ್ಟಿರಿಟೂ ಸ್ಯಾಂಟೋ ದ್ವೀಪದಲ್ಲಿದೆ. ದ್ವೀಪಗಳನ್ನು ಕಾಡುಗಳು ಆವರಿಸಿವೆ. ದಕ್ಷಿಣಕ್ಕಿಂತ ಉತ್ತರದಲ್ಲಿ ಹೆಚ್ಚು ಮಳೆ ಬೀಳುತ್ತದೆ. ಉಷ್ಣತೆಯೂ ಉತ್ತರದಲ್ಲೇ ಅಧಿಕ. ನೆಲದ ಮೇಲಣ ಪ್ರಾಣಿಗಳು ವಿರಳ. ಆದರೆ ಪಕ್ಷಿ ಸಂಕುಲ ವಿಫುಲವಾಗಿದೆ.

ಪಾಶ್ಚಾತ್ಯರ ಪೈಕಿ ಇದನ್ನು ಮೊದಲು ನೋಡಿದವನು ಪೋರ್ಚುಗೀಸ್ ನಾವಿಕ ಪೇದ್ರೂ ಫರ್ನಾಂಡಿಷ್ ದೆ ಕ್ವೈರೋಸ್(1606). ಅನಂತರ (1768) ಫ್ರೆಂಚ್ ಪರಿಶೋಧಕ ಲೂಯಿದ ಬೂಗ್ಯಾನ್‍ವೀಲ್ ಇದನ್ನು ಕಂಡ. ಇಂಗ್ಲಿಷ್ ನಾವಿಕ ಜೇಮ್ಸ್ ಕೂಕ್ ಇದರ ಮೇಲೆ ಬ್ರಿಟಿಷ್ ಹಕ್ಕನ್ನು ಸ್ಥಾಪಿಸಿದ (1887), ಬ್ರಿಟಿಷರಿಗೂ ಫ್ರೆಂಚರಿಗೂ ಇವುಗಳ ಒಡೆತನದ ಬಗ್ಗೆ ಎದ್ದಿದ್ದ ವಿವಾದ 1887ರಲ್ಲಿ ಪರಿಹಾರವಾಯಿತು. ಇವುಗಳ ಆಡಳಿತಕ್ಕೆ ಇವೆರಡೂ ದೇಶಗಳ ಜಂಟಿ ನೌಕಾ ಆಯೋಗದ ನೇಮಕವಾಯಿತು. 1906ರಲ್ಲಿ ಇವೆರಡೂ ದೇಶಗಳು ಸಹಪ್ರಭುತ್ವದ ಸರ್ಕಾರದ ಸ್ಥಾಪನೆಗೆ ಒಪ್ಪಿದುವು. ಸ್ಥಳೀಯರ ಮೇಲೆ ಇವುಗಳ ಜಂಟಿ ಅಧಿಕಾರ ಇದೆ. ಇಲ್ಲಿರುವ ಬ್ರಿಟಿಷ್ ಫ್ರೆಂಚ್ ಕಮಿಷನರು ತಂತಮ್ಮ ರಾಷ್ಟ್ರೀಯರ ಮೇಲೆ ಅಧಿಕಾರ ಹೊಂದಿದ್ದಾರೆ.

ಗಂಧದ ಮರದಲ್ಲಿ ಆಸಕ್ತಿ ಇದ್ದವರು 19ನೆಯ ಶತಮಾನದಲ್ಲಿ ಈ ದ್ವೀಪಗಳಿಗೆ ಬಂದರು. 1868ರ ವೇಳೆಗೆ ಹತ್ತಿ ಬೆಳೆಯುವವರು ಇಲ್ಲಿ ಬಂದು ಹತ್ತಿಯ ಹೊಲಗಳನ್ನು ಸ್ಥಾಪಿಸಿದರು. 1880ರ ಅನಂತರ ಬಾಳೆ ಮತ್ತು ಕಾಫಿ ಬೆಳೆಗಳಿಗೆ ಪ್ರಾಧಾನ್ಯ ಬಂತು. 20ನೆಯ ಶತಮಾನದ ಆರಂಭದ ವೇಳೆಗೆ ತೆಂಗು ಮತ್ತು ಮುಸುಕಿನ ಜೋಳ ಪ್ರಧಾನ ಬೆಳೆಗಳಾದುವು. ವಿಯೆಟ್ನಾಮಿನಿಂದ ಕಾರ್ಮಿಕರನ್ನು ಕರೆಯಿಸಿಕೊಂಡು ಇಲ್ಲಿ ತೋಟಗಾರಿಕೆ ಮಾಡಲಾಯಿತು. ಕೊಬ್ಬರಿ, ಕಕೇವೋ, ಕಾಫಿ ಬೆಳೆಗಳು ಲಾಭದಾಯಕವಾಗಿದ್ದವು. 1930ರ ಅನಂತರದ ವಿಶ್ವ ಆರ್ಥಿಕ ಮುಗ್ಗಟ್ಟಿನಿಂದಾಗಿ ವ್ಯವಸಾಯ ಹಿಂದೆ ಬಿತ್ತು. ಕೊಬ್ಬರಿ ಕಕೇವೋ, ಕಾಫಿ, ಮಾಂಸಪದಾರ್ಥ ಇವು ರಫ್ತುಗಳು. ಇವು ಮುಖ್ಯವಾಗಿ ಫ್ರಾನ್ಸಿಗೆ ನಿರ್ಯಾತವಾಗುತ್ತವೆ. ವೀಲ ಮತ್ತು ಲೂಗ್ಯಾನ್‍ವಿಲ್ ಬಂದರುಗಳಿಂದ ಇವು ಸಾಗುತ್ತವೆ. ಲ್ಯೂಗಾನ್‍ವಿಲ್ ಬಂದರು ಎಸ್ಪಿರಿಟೂ ಸ್ಯಾಂಟೋ ದ್ವೀಪದ ಪೂರ್ವತೀರದಲ್ಲಿದೆ. ಮೀನು ಹಿಡಿಯುವುದೂ ಪ್ರವಾಸೋದ್ಯಮವೂ ಇಲ್ಲಿಯ ಜನರ ಸಂಪಾದನೆಯ ಇನ್ನೆರಡು ಮಾರ್ಗಗಳು.

ಇಲ್ಲಿಯ ಮೂಲವಾಸಿಗಳು ಮೆಲನೇಷಿಯನರು. ಯೂರೋಪ್, ಚೀನ ಮತ್ತು ವಿಯೆಟ್ನಾಂ ಜನರೂ ತಾಹಿತಿಯನ್, ವಾಲಿಸ್ ದ್ವೀಪೀಯ ಮತ್ತು ನ್ಯೂ ಕ್ಯಾಲೆಟೋನಿಯನ್ ಜನರೂ ಇಲ್ಲಿದ್ದಾರೆ. ಮಲೇರಿಯ ಇಲ್ಲಿಯ ದೊಡ್ಡ ವ್ಯಾಧಿ. ಇದರ ಚಿಕಿತ್ಸೆಗೆ ಆಸ್ಪತ್ರೆಗಳು ಸ್ಥಾಪಿತವಾಗಿವೆ. ವೀಲದ ಬಳಿ ಒಂದು ಉಪಾಧ್ಯಾಯ ಪ್ರಶಿಕ್ಷಣ ಕಾಲೇಜ್ ಇದೆ. (ಪಿ.ಬಿ.)