ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ
ಗೋಚರ
ಪ - ಕನ್ನಡ ಅಕ್ಷರಮಾಲೆಯ ಪ ವರ್ಗದ ಮೊದಲನೆಯ ಲಿಪಿ ; ಅಲ್ಪಪ್ರಾಣ. ಉಭಯೋಷ್ಠ್ಯ ಅಘೋಪ ಸ್ಪರ್ಶ ಧ್ವನಿಯನ್ನು ಸೂಚಿಸುತ್ತದೆ. ಮೌರ್ಯರ ಕಾಲದ ಪಕಾರಕ್ಕೂ ಯಾವ ವ್ಯತ್ಯಾಸವೂ ಇಲ್ಲದಿರುವುದು ಗಮನಾರ್ಹ ಸಂಗತಿ ಮುಂದೆ ಕದಂಬರ ಕಾಲಕ್ಕೆ ಪಕಾರದ ಹೊಕ್ಕಳು ರೂಪುಗೊಳ್ಳುತ್ತಿರುವುದನ್ನು ಕಾಣುತ್ತೇವೆ. ಕಲ್ಯಾಣ ಚಾಳುಕ್ಯರ ಕಾಲಕ್ಕೆ ತಲೆಕಟ್ಟು ನಿಕರವಾಗಿ ಕಾಣತೊಡಗುತ್ತದೆ. ವಿಜಯನಗರದ ಕಾಲಕ್ಕೆ ಈ ಲಿಪಿಗೆ ಇಂದಿನ ರೂಪ ಬರಹತ್ತಿ ಅದು ಮೈಸೂರು ಅರಸರ ಕಾಲಕ್ಕೆ ಖಚಿತವಾಗುತ್ತದೆ.
ಪಕ್ಕೂ ಫಕ್ಕೂ ವ್ಯತ್ಯಾಸವೇನೆಂಬುದನ್ನು ತಿಳಿಯಲು ಫಕಾರದ ಚಿತ್ರ ನೋಡಬೇಕು. ಕಳಚೂರಿ ಕಾಲದಲ್ಲಿ ಹೊಕ್ಕಳು ಸೀಳುವ ಪ್ರಯತ್ನ ಪ್ರಾರಂಭವಾಗುತ್ತದೆ. ಅದು ವಿಜಯನಗರ ಹಾಗೂ ಮೈಸೂರು ಅರಸರ ಕಾಲದಲ್ಲಿ ಖಚಿತವಾಗುತ್ತದೆ. (ಎಚ್.ಆರ್.ಆರ್.ಬಿ.)