ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಂಚ ಮಹಾ ಸರೋವರಗಳು
ಪಂಚ ಮಹಾ ಸರೋವರಗಳು - ಉತ್ತರ ಅಮೆರಿಕ ಖಂಡದ ಪೂರ್ವಭಾಗದಲ್ಲಿ ಸೆಂಟ್ ಲಾರೆನ್ಸ್ ನದಿಯ ಹರಿವಿನ ಭಾಗದಲ್ಲಿರುವ ಸುಪೀರಿಯರ್, ಮಿಷಿಗನ್, ಹ್ಯುರಾನ್, ಈರೀ ಮತ್ತು ಆಂಟೆರಿಯೋ ಎಂಬ ಐದು ದೊಡ್ಡ ಸರೋವರಗಳು. ಉ.ಅ.410 22'-490 00', ಪೂ.ರೇ.76(04'-92(06' ನಡುವೆ ಇರುವ ಈ ಸರೋವರಗಳ ಒಟ್ಟು ವಿಸ್ತೀರ್ಣ 2,45,000 ಚ.ಕಿಮೀ ಇವು ಪ್ರಪಂಚದ ಅತ್ಯಂತ ದೊಡ್ಡ ಸಿಹಿನೀರು ಸರೋವರಗಳು. ಇವುಗಳ ಜಲಾನಯನ ಭೂಮಿಯ ವಿಸ್ತೀರ್ಣ 7,53,950 ಚ.ಕಿಮೀ ಈ ಸರೋವರಗಳು ಒಂದು ಅಖಂಡ ಜಲೋತ್ಸಾರಣ ವ್ಯವಸ್ಥೆಯಾಗಿ ಪರಸ್ಪರ ಕೂಡಿಕೊಂಡಿವೆ. ಸೆಂಟ್‍ಲಾರೆನ್ಸ್ ನದಿಯ ಮೂಲಕ ಇವಕ್ಕೆ ಹೊರ ತೆರವು ಏರ್ಪಟ್ಟಿದೆ. ಈ ವ್ಯವಸ್ಥೆ ಅಮೆರಿಕ ಖಂಡದ ಅರ್ಧದ ವರೆಗೆ ಹಬ್ಬಿರುವ ಜಲಮಾರ್ಗವಾಗಿ ಪರಿಣಮಿಸಿದೆ. ಸುಪೀರಿಯರ್ ಸರೋವರದ ತಲೆಯ ಬಳಿ ಇರುವ ಪಟ್ಟಣಗಳಿಂದ ಅಟ್ಲಾಂಟಿಕ್ ಸಾಗರದ ವರೆಗಿನ ದೂರ 3,744 ಕಿಮೀ., ಮಿಷಿಗನ್ ಹೊರತು ಉಳಿದ ಸರೋವರಗಳು ಕೆನಡ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಡುವಣ ಸ್ವಭಾವಿಕ ಗಡಿಗಳಾಗಿವೆ. ಈ ಗಡಿಗಳನ್ನು 1909ರ ಗಡಿ ಜಲ ಒಪ್ಪಂದದ ಮೂಲಕ ಉರ್ಜೀತಗೊಳಿಸಲಾಯಿತು.
ಪರಿಶೋಧನೆ : ಉತ್ತರ ಅಮೆರಿಕ ಖಂಡದ ಭೂಪರಿಶೋಧನೆ ಹಾಗೂ ವಸಾಹತುಗಳ ಸ್ಥಾಪನೆಯಲ್ಲಿ ಪಂಚ ಮಹಾ ಸರೋವರಗಳು ಪ್ರಧಾನ ಪಾತ್ರವಹಿಸಿವೆ. ಜನರು ಅವುಗಳಿಂದ ಆಕರ್ಷಿತರಾದರು. ಅವುಗಳ ಅಂಚಿನಲ್ಲಿ ಸ್ಥಾಪಿತವಾದ ಕೈಗಾರಿಕಾ ಪಟ್ಟಣಗಳು ಜನಭರಿತವಾದವು. ಫ್ರೆಂಚರು 1535ರಲ್ಲಿ ಆ ಸರೋವರಗಳ ಕಡೆಯ ಪ್ರದೇಶಗಳ ಪರಿಶೋಧನೆಯನ್ನು ಪ್ರಾರಂಭಿಸಿದರು. ಆ ವರ್ಷ ಭೂ ಪರಿಶೋಧಕ ಷಾಕ್ ಕಾಟ್ರ್ಯೇ ಪೌರಸ್ತ್ಯ ದೇಶಗಳಿಗೆ ಮಾರ್ಗವನ್ನು ಹುಡುಕುವ ಪ್ರಯತ್ನದಲ್ಲಿ ಸೆಂಟ್ ಲಾರೆನ್ಸ್ ನದಿಯತ್ತ ಪ್ರಯಾಣ ಮಾಡಿ ಈಗ ಮಾಂಟ್ರಿಯಾಲ್ ಪಟ್ಟಣವಿರುವ ಸ್ಥಳದ ವರೆಗೆ ಸಂಚರಿಸಿದ. ಮತ್ತೊಬ್ಬ ಫ್ರೆಂಚ್ ಭೂ ಪರಿಶೋಧಕ ಸ್ಯಾಮ್ಯುಯೆಲ್ ದ ಷಾಂಪ್ಲೇನ್ 1615ರಲ್ಲಿ ಹ್ಯುರಾನ್ ಸರೋವರವನ್ನು ತಲುಪಿದ. ಪಂಚಮಹಾ ಸರೋವರಗಳನ್ನು ಪ್ರಥಮಬಾರಿಗೆ ಕಂಡ ಐರೋಪ್ಯ ಇವನೇ. 1634ರಲ್ಲಿ µóÁನ್ ನೀಕಾಲೆ ಎಂಬಾತ ಮಿಷಿಗನ್ ಸರೋವರಕ್ಕೆ ಬಂದು, ಗ್ರೀನ್ ಬೇ ಕಡೆ ಸಾಗಿ ¥sóÁಕ್ಸ್ ನದಿಯನ್ನು ತಲುಪಿದ. ಈ ನದಿಯ ಬಳಿ ಅವನಿಗೆ ವಿನ್ನೆಬಾಗೊ ಇಂಡಿಯನರು ಎದುರಾದರು. ಪಂಚ ಮಹಾ ಸರೋವರಗಳ ಪ್ರದೇಶವನ್ನು ಪರಿಶೋಧಿಸಿದ ಮತ್ತೊಬ್ಬ ಫ್ರೆಂಚ್ ಪ್ರಜೆ ರಾಟೇರ್ ಕ್ಯಾವೀಲ್ಯೇ. ಪ್ರಾರಂಭದಲ್ಲಿ ಈ ಸರೋವರಪ್ರದೇಶದಲ್ಲಿ ವಸಾಹತುಗಳನ್ನು ಸ್ಥಾಪಿಸಿದ ಫ್ರೆಂಚರು ರೆಡ್ ಇಂಡಿಯನರ ಸ್ನೇಹ ಸಾಧಿಸಲು ಯತ್ನಿಸಿದರು.
ಅಮೆರಿಕನ್ ಕ್ರಾಂತಿ ಯುದ್ಧದಲ್ಲಿ (1775-83) ಇಂಗ್ಲೆಂಡ್ ದೊರೆಯ ಪಕ್ಷವನ್ನು ವಹಿಸಿದ್ದ ವಿಧೇಯ ಜನರು ಪಂಚ ಮಹಾ ಸರೋವರಗಳ ಪ್ರದೇಶಕ್ಕೆ ಬಹುಸಂಖ್ಯೆಯಲ್ಲಿ ವಲಸೆ ಹೋಗಿ ಕೆನಡಕ್ಕೆ ಸೇರಿದ ಈಗಿನ ನ್ಯೂ ಬ್ರನ್ಸ್‍ವಿಕ್, ನೋವಸ್ಕೋಷಿಯ ಮತ್ತು ಆಂಟೆರಿಯೋ ಭಾಗಗಳಲ್ಲಿ ನೆಲಸಿದರು. ಈ ಯುದ್ಧದ ಫಲವಾಗಿ ಅಮೆರಿಕ ಮತ್ತು ಕೆನಡ ದೇಶಗಳ ನಡುವಣ ಗಡಿಯ ನಿರ್ಧಾರವೂ ಆಯಿತು. 19ನೆಯ ಶತಮಾನದಲ್ಲಿ ಉಗಿ ಜಹಜುಗಳ ನಿರ್ಮಾಣ, 1825ರಲ್ಲಿ ಈರೀ ಸರೋವರದ ಕಾಲುವೆಯ-ರಚನೆ-ಇವುಗಳಿಂದ ಅಮೆರಿಕದ ಪಶ್ಚಿಮ ಮತ್ತು ಪೂರ್ವ ಭಾಗಗಳ ವಾಣಿಜ್ಯ ಸಂಪರ್ಕಕ್ಕೆ ಸರೋವರಗಳ ಪಾತ್ರ ಪ್ರಧಾನವಾಯಿತು.
ಸರೋವರಗಳು : ಸುಪೀರಿಯರ್ ಸರೋವರದ ಉತ್ತರದಲ್ಲಿ ಕೆನಡದ ಮಾಂಟೆರಿಯೋ ಪ್ರಾಂತ್ಯವೂ ಪಶ್ಚಿಮದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಿನೆಸೋಟ, ದಕ್ಷಿಣದಲ್ಲಿ ವಿಸ್ಕಾನ್ಸಿನ್ ಮತ್ತು ಮಿಷಿಗನ್ ರಾಜ್ಯಗಳೂ ಇವೆ. ಪಂಚ ಮಹಾ ಸರೋವರಗಳ ಪೈಕಿ ಸುಪೀರಿಯರ್ ಸರೋವರವೇ ಮೂಲ ಜಲಾಶಯ ಹಾಗೂ ಹೆಚ್ಚು ಆಳವಾದ್ದು. ಅದರ ಮಾಧ್ಯ ಆಳ 148 ಮೀ. ಅದು ಸಮುದ್ರ ಮಟ್ಟಕ್ಕೆ 189ಮೀ, ಎತ್ತರದಲ್ಲಿದೆ. ಆ ಸರೋವರದ ನೀರು ಸೇಂಟ್ ಮೆರಿಸ್ ನದಿಯ ಮೂಲಕ, ಸೆಕೆಂಡಿಗೆ ಸರಾಸರಿ 74,200 ಘ.ಅ.ಗಳಂತೆ ಹ್ಯುರಾನ್ ಸರೋವರಕ್ಕೆ ಬೀಳುತ್ತದೆ.
ಮಿಷಿಗನ್ ಸರೋವರ ಸುಪೀರಿಯರ್, ಸರೋವರಕ್ಕೆ ದಕ್ಷಿಣದಲ್ಲಿದೆ. ಈ ಸರೋವರದ ಪಶ್ಚಿಮದಲ್ಲಿ ವಿಸ್ಕಾನ್ಸಿನ್, ದಕ್ಷಿಣದಲ್ಲಿ ಇಲಿನಾಯ್ ಮತ್ತು ಇಂಡಿಯಾನ, ಪೂರ್ವ ಹಾಗೂ ಉತ್ತರದಲ್ಲಿ ಮಿಷಿಗನ್ ರಾಜ್ಯಗಳಿವೆ. ಸರೋವರದ ಮಾಧ್ಯ ಆಳ 82ಮೀ. ಇದು ಸಮುದ್ರಮಟ್ಟಕ್ಕೆ 176 ಮೀ ಎತ್ತರದಲ್ಲಿದೆ, ಸರೋವರದ ನೀರು ಸೆಕೆಂಡಿಗೆ 56,000 ಘ.ಅ.ಗಳಂತೆ ಉತ್ತರಕ್ಕೆ ಹರಿದು ಮ್ಯಾಕಿನಾಕ್ ಜಲ ಸಂಧಿಯ ಮೂಲಕ ಹ್ಯುರಾನ್ ಸರೋವರಕ್ಕೆ ಬೀಳುತ್ತದೆ.
ಹ್ಯುರಾನ್ ಸರೋವರ ಮಿಷಿಗನ್ ಸರೋವರದಂತೆ ಸಮುದ್ರಮಟ್ಟಕ್ಕೆ 176 ಮೀ. ಎತ್ತರದಲ್ಲಿದೆ. ಆದರೆ ಇದು ಮಿಷಿಗನ್‍ಗಿಂತ ದೊಡ್ಡದು. ಇದರ ಮಾಧ್ಯ ಆಳ 594 ಮೀ. ಸರೋವರದ ಉತ್ತರ ಹಾಗೂ ಪೂರ್ವ ಭಾಗಗಳಲ್ಲಿ ಕೆನಡದ ಆಂಟೆರಿಯೋ ಪ್ರಾಂತ್ಯ, ಪಶ್ಚಿಮ ಹಾಗೂ ದಕ್ಷಿಣದಲ್ಲಿ ಅಮೆರಿಕದ ಮಿಷಿಗನ್ ರಾಜ್ಯ ಇವೆ. ಸರೋವರದ ನೀರಿನ ಹರಿವು ಸೆಕೆಂಡಿಗೆ 177,500 ಘ.ಅ.
ಈರೀ ಸರೋವರದ ಉತ್ತರದಲ್ಲಿ ಕೆನಡದ ಆಂಟೆರಿಯೋ ಪ್ರಾಂತ್ಯವೂ ಪಶ್ಚಿಮದಲ್ಲಿ ಅಮೆರಿಕದ ಮಿಷಿಗನ್, ದಕ್ಷಿಣದಲ್ಲಿ ಒಹೈಯೋ ಮತ್ತು ಪೆನ್ಸಿಲ್ವೇನಿಯ, ಪೂರ್ವದಲ್ಲಿ ನ್ಯೂ ಯಾರ್ಕ್ ರಾಜ್ಯಗಳೂ ಇವೆ. ಪಂಚ ಮಹಾ ಸರೋವರಗಳ ಪೈಕಿ ಈ ಸರೋವರದ ಆಳ ಅತ್ಯಂತ ಕಡಿಮೆ. ಇದರ ಮಾಧ್ಯ ಆಳ 18ಮೀ. ಇದು ಸಮುದ್ರ ಮಟ್ಟಕ್ಕೆ 174 ಮೀ. ಎತ್ತರದಲ್ಲಿದೆ. ಇದರ ನೀರು ನಯಾಗರ ನದಿಯ ಮೂಲಕ ಹರಿದು, ನದಿಯ ಹಾರ್ಸ್ ಷೂ ಮತ್ತು ಅಮೆರಿಕನ್ ಜಲಪಾತಗಳಲ್ಲಿ ಧುಮುಕಿ ಆಂಟೆರಿಯೋ ಸರೋವರವನ್ನು ಸೇರುತ್ತದೆ. ನೀರಿನ ಸರಾಸರಿ ಹರಿವು ಸೆಕೆಂಡಿಗೆ 194,300 ಘ.ಅ.
ಆಂಟೆರಿಯೋ ಅಮೆರಿಕದ ಪಂಚ ಮಹಾ ಸರೋವರಗಳಲ್ಲಿ ಅತ್ಯಂತ ಕಿರಿಯದು. ಇದರ ಮಾರ್ಧಯ ಆಳ 86 ಮೀ. ಇದರ ಪಶ್ಚಿಮ ಮತ್ತು ಉತ್ತರದಲ್ಲಿ ಕೆನಡದ ಆಂಟೆರಿಯೋ ಪ್ರಾಂತ್ಯ, ದಕ್ಷಿಣ ಮತ್ತು ಪೂರ್ವದಲ್ಲಿ ಅಮೆರಿಕದ ನ್ಯೂ ಯಾರ್ಕ್ ರಾಜ್ಯ ಇವೆ. ಇದು ಸಮುದ್ರಮಟ್ಟಕ್ಕೆ 74ಮೀ. ಎತ್ತರದಲ್ಲಿದೆ, ಸೆಕೆಂಡಿಗೆ 233,000 ಘ.ಅ.ಗಳಂತೆ ಈ ಸರೋವರದ ನೀರು ಹರಿದು ಸೇಂಟ್ ಲಾರೆನ್ಸ್ ನದಿಯನ್ನು ಸೇರುತ್ತದೆ. ಈ ನದಿ 1,200 ಮೀ. ಹರಿದು ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ.
ಸುತ್ತಮುತ್ತಲ ಪ್ರದೇಶದ ವಾಯುಗುಣದ ಮೇಲೆ ಪಂಚ ಮಹಾ ಸರೋವರಗಳ ಪ್ರಭಾವ ಗಣನೀಯ. ಬೇಸಗೆ ಹಿತಕರ. ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವುದಿಲ್ಲ. ಸರೋವರಗಳ ಪೂರ್ವತೀರಗಳಲ್ಲಿ ಮಳೆ ಹೆಚ್ಚು. ಸರೋವರಗಳ ಅಂಚಿನಲ್ಲಿ ಕವಿಯುವ ಮಂಜಿನಿಂದ ಸರೋವರ ಭಾಗಗಳ ಪಟ್ಟಣಗಳಾದ ಪೆನ್ಸಿಲ್ವೇನಿಯ, ಬಫಲೋ, ನ್ಯೂ ಯಾರ್ಕ್ ಮೊದಲಾದವುಗಳ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತದೆ.
ಸರೋವರಗಳ ಮೀನುಗಳಲ್ಲಿ ಪ್ರಧಾನವಾದವು ಟ್ರೌಟ್ ಮತ್ತು ಹ್ವೈಟ್, ಈ ಸರೋವರಗಳಲ್ಲಿ ಹಿಂದಿನಿಂದಲೂ ಹೆಚ್ಚಾಗಿ ಮೀನು ಹಿಡಿಯುತ್ತ ಬಂದ ಕಾರಣ, ವಾಣಿಜ್ಯ ದೃಷ್ಟಿಯಿಂದ ಈಗ ಇದರ ಪರಿಮಾಣ ಬಹಳ ಕಡಿಮೆ. ಸರೋವರದ ಅಂಚಿನಲ್ಲಿ ಅನೇಕ ಬಗೆಯ ಜಲಪಕ್ಷಿಗಳು ಹಾಗೂ ಹಾಡುಹಕ್ಕಿಗಳು ಇವೆ. ವಸಂತ ಕಾಲದಲ್ಲಿ ಕೆಲವು ಬಗೆಯ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. ಸರೋವರಗಳ ಮರಳು ತೀರಗಳು ಪ್ರವಾಸಿಗಳನ್ನು ಆಕರ್ಷಿಸುತ್ತವೆ. ಇವುಗಳ ನೀರು ಸಮೀಪದ ಪಟ್ಟಣಗಳ ಕೈಗಾರಿಕೆಗಳಿಗೆ ಉಪಯುಕ್ತವಾಗಿದೆ. ಸುಮಾರು 240 ಪುರಸಭೆಗಳು ಇವುಗಳ ನೀರನ್ನು ಉಪಯೋಗಿಸುತ್ತವೆ. (ವಿ.ಜಿ.ಕೆ.)