ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಂಜಾಬ್ (ಪಾಕಿಸ್ತಾನ)

ವಿಕಿಸೋರ್ಸ್ದಿಂದ

ಪಂಜಾಬ್ (ಪಾಕಿಸ್ತಾನ)

ಪಾಕಿಸ್ತಾನ ಒಂದು ಪ್ರಾಂತ್ಯ. ಹಿಮಾಲಯ ತಪ್ಪಲ ಬೆಟ್ಟಗಳು ಹಾಗೂ ಭಾರತದ ರಾಜಸ್ಥಾನ ರಾಜ್ಯ ಇವುಗಳ ನಡುವೆ ಇದೆ. ವಿಸ್ತೀರ್ಣ 2,06.432 ಚ.ಕಿಮೀ. ; ಜನಸಂಖ್ಯೆ 3,99,61,000(1975). ಪ್ರಾಂತ್ಯದ ಆಡಳಿತ ಕೇಂದ್ರ ಲಾಹೋರ್.

ಮೇಲ್ಮೈ ಲಕ್ಷಣ : ಸಿಂಧುವಿನ ಉಪನದಿಗಳಾದ ಝೀಲಂ, ಚೀನಾಬ್, ರಾವಿ, ಬೀಯಾಸ್ ಮತ್ತು ಸಟ್ಲೆಜ್ ಇವು ಹರಿಯುವ ಪ್ರದೇಶಕ್ಕೆ ಪಂಜಾಬ್ ಎಂದು ಹೆಸರು ಬಂತು. ಝೀಲಂ ಭಾರತದ ಜಮ್ಮು-ಕಾಶ್ಮೀರ ರಾಜ್ಯದ ಪಶ್ಚಿಮ ಗಡಿಯಾಗಿ, ರಾವಿ ಮತ್ತು ಸಟ್ಲೆಜ್ ನದಿಗಳು ಭಾರತದ ಪಂಜಾಬ್ ರಾಜ್ಯದ ಗಡಿಯಾಗಿ ಒಂದಿಷ್ಟು ದೂರ ಹರಿಯುತ್ತದೆ. ಇವು ಹರಿಯುವ ಪ್ರದೇಶ ಫಲವತ್ತಾದ ಮೆಕ್ಕಲು ಮಣ್ಣಿನ ಭೂಮಿ. ಪ್ರಾಂತ್ಯದ ಉತ್ತರದಲ್ಲಿ ಮುರ್ರೀ ಮತ್ತು ರಾವಲ್‍ಪಿಂಡಿ ಬೆಟ್ಟಗಳಿವೆ. ಇವುಗಳ ಎತ್ತರ ಸಮುದ್ರಮಟ್ಟದಿಂದ 2,269 ಮೀ. ಉತ್ತರದಲ್ಲಿರುವ ಪೋಟ್ವಾರ್ ಪ್ರಸ್ಥಭೂಮಿಯಲ್ಲಿ ಹಾರೋ ಮತ್ತು ಸೋನ್ ನದಿಗಳು ಹರಿಯುತ್ತವೆ. ಪಂಜಾಬಿನ ಬಯಲು ನೆಲ ಸ್ಥೂಲವಾಗಿ ಈಶಾನ್ಯದಿಂದ ನೈಋತ್ಯಕ್ಕೆ ಇಳಿಜಾರಾಗಿದೆ. ಆದರೆ ನದಿಗಳ ನಡುವಣ ನೆಲ ಸ್ವಲ್ಪ ಎತ್ತರವಾಗಿದೆ. ನದಿಯ ಪಾತ್ರಗಳ ಪಕ್ಕದ ನೆಲ ಪ್ರವಾಹಕಾಲದಲ್ಲಿ ನೀರಿನಿಂದ ತುಂಬಿರುತ್ತದೆ. ಮರುಭೂಮಿಯ ನೆಲದಲ್ಲಿ ಮರಳುಗುಡ್ಡೆಗಳಿವೆ.

ವಾಯುಗುಣ : ಈ ಪ್ರಾಂತ್ಯ ಮುಂಗಾರು ಮಳೆಯ ವಲಯದಲ್ಲಿದೆ. ಜೂನ್ ತಿಂಗಳಲ್ಲಿ ಬಿಸಿಲೂ ಜನವರಿಯಲ್ಲಿ ಚಳಿಯೂ ಅಧಿಕ. ಮುರ್ರೀ ಗಿರಿಧಾಮದಲ್ಲಿ ಜೂನ್ ತಿಂಗಳ ಗರಿಷ್ಠ ಉಷ್ಣತೆ 27ಡಿಗ್ರಿ ಸೆ. ಕನಿಷ್ಠ ಉಷ್ಣತೆ 16ಡಿಗ್ರಿ ಸೆ. ಜನವರಿಯ ಗರಿಷ್ಠ ಕನಿಷ್ಠ ಉಷ್ಣತೆಗಳು ಅನುಕ್ರಮವಾಗಿ 7ಡಿಗ್ರಿ ಸೆ. ಮತ್ತು - 0.7ಡಿಗ್ರಿ ಸೆ. ಮೈದಾನದಲ್ಲಿ ಜೂನ್ ಮಾಧ್ಯ ಉಷ್ಣತೆ ಮುಲ್ತಾನಿನಲ್ಲಿ 36ಡಿಗ್ರಿ ಸೆ. ಲಾಹೋರಿನಲ್ಲಿ 34ಡಿಗ್ರಿ ಸೆ. ಜನವರಿಯಲ್ಲಿ ಇವುಗಳ ಮಾಧ್ಯ ಉಷ್ಣತೆಗಳು ಅನುಕ್ರಮವಾಗಿ 13ಡಿಗ್ರಿ ಸೆ. 12ಡಿಗ್ರಿ ಸೆ.

ಉಪ ಹಿಮಾಲಯ ಮತ್ತು ಉತ್ತರ ಭಾಗಗಳ ಹೊರತು ಉಳಿದ ಭಾಗಗಳಲ್ಲಿ ಮಳೆ ಕಡಿಮೆ. ಉತ್ತರದಿಂದ ದಕ್ಷಿಣಕ್ಕೆ ಅಥವಾ ನೈಋತ್ಯಕ್ಕೆ ಹೋದಂತೆ ಮಳೆ ಕಡಿಮೆಯಾಗುತ್ತದೆ. ವಾರ್ಷಿಕ ಮಳೆ ಸಿಯಾಲ್‍ಕೋಟ್ನಲ್ಲಿ 813 ಮಿಮೀ., ಲಾಹೋರ್‍ನಲ್ಲಿ 584 ಮಿ.ಮೀ., ಮುಲ್ತಾನ್ನಲ್ಲಿ 178 ಮಿ.ಮೀ.

ಆಡಳಿತ : ಪ್ರಾಂತ್ಯದ ಪ್ರಮುಖ ಆಡಳಿತಾಧಿಕಾರಿ ಗವರ್ನರ್. ಪಾಕಿಸ್ತಾನದ ರಾಷ್ಟ್ರಾಧ್ಯಕ್ಷರಿಂದ ಈತನ ನೇಮಕವಾಗುತ್ತದೆ. ಗವರ್ನರನಿಗೆ ಆಡಳಿತದಲ್ಲಿ ಸಹಾಯ ಮಾಡಲು ಪ್ರಾಂತ್ಯ ಸರ್ಕಾರವಿದೆ. ಆಡಳಿತಕ್ಕಾಗಿ ಪ್ರಾಂತ್ಯವನ್ನು 5 ವಿಭಾಗಗಳು, 19 ಜಿಲ್ಲೆಗಳು ಮತ್ತು 75 ತಹಸೀಲ್‍ಗಳಾಗಿ ವಿಂಗಡಿಸಲಾಗಿದೆ.

ಪ್ರಾಂತ್ಯದ ನ್ಯಾಯಾಲಯಗಳ ಮೇಲಣ ಅಧಿಕಾರ ಪ್ರಾಂತ್ಯದ ಉಚ್ಚ ನ್ಯಾಯಾಲಯದಲ್ಲಿ ನಿಹಿತವಾಗಿದೆ. ಉಚ್ಚ ನ್ಯಾಯಾಲಯದ ತೀರ್ಪಿನ ಮೇಲೆ ಪಾಕಿಸ್ತಾನದ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಮಾಡಿಕೊಳ್ಳಬಹುದು.

ಜನ : ಇದು ಪಾಕಿಸ್ತಾನದ ಅತ್ಯಧಿಕ ಜನಸಂಖ್ಯೆಯುಳ್ಳ ಪ್ರಾಂತ್ಯ. ಹಿಂದೆ ಈ ಪ್ರಾಂತ್ಯ ಜನರ ವಾಸಕ್ಕೆ ಅನುಕೂಲವಾಗಿರಲಿಲ್ಲ. 20ನೆಯ ಶತಮಾನದ ಪ್ರಾರಂಭದಲ್ಲಿ ನೀರಾವರಿ ನಾಲೆಗಳನ್ನು ನಿರ್ಮಿಸಿದ ಮೇಲೆ ಇಡೀ ಪ್ರಾಂತ್ಯ ಬೇಗ ಜನಭರಿತವಾಯಿತು. ಇತ್ತೀಚೆಗೆ ಸ್ಥಾಪಿತವಾದ ಗ್ರಾಮಗಳು ಹಾಗೂ ಪಟ್ಟಣಗಳು ಆಧುನಿಕವಾಗಿವೆ.

ಲಾಹೋರ್ (21,48,00) (1972), ಲೈಯಲ್‍ಪುರ್ (8,20,000), ಮುಲ್ತಾನ್ (5,44,000), ರಾವಲ್ಪಿಂಡಿ (6,15,000), ಗುಜ್ರನ್‍ವಾಲ (3,66,000) ಸಿಯಾಲ್‍ಕೋಟ್ (2,12,000), ಸರ್‍ಗೋಧಾ (1,29,000) ಇವು ಪ್ರಾಂತ್ಯದ ಪ್ರಮುಖ ಪಟ್ಟಣಗಳು. ಪ್ರಾಂತ್ಯದಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚು. ಕ್ರೈಸ್ತರು 2% ಇದ್ದಾರೆ. ಇತರ ಮತಾವಲಂಬಿಗಳು 0.1%. ಜನರ ಮಾತೃಭಾಷೆ ಪಂಜಾಬಿ. ವ್ಯವಹಾರದಲ್ಲಿ ಉರ್ದು ಇಂಗ್ಲೀಷ್ ಭಾಷೆಗಳನ್ನು ವಿಶೇಷವಾಗಿ ಬಳಸಲಾಗುತ್ತದೆ. ಅಕ್ಷರಸ್ಥರು 16%. ಪಂಜಾಬಿನಲ್ಲಿ ಭಾವಲ್‍ಪುರದ ಇಸ್ಲಾಮಿಯ ವಿಶ್ವವಿದ್ಯಾಲಯ, ಮುಲ್ತಾನಿನ ಮುಲ್ತಾನ್ ವಿಶ್ವವಿದ್ಯಾಲಯ, ಲೈಯಲ್‍ಪುರದ ಪಾಕಿಸ್ತಾನ್ ವ್ಯವಸಾಯ ವಿಶ್ವವಿದ್ಯಾಲಯ, ಲಾಹೋರಿನ ಇಂಜಿನಿಯರಿಂಗ್ ವಿಶ್ವವಿದ್ಯಾಲಯ ಮತ್ತು ಪಂಜಾಬ್ ವಿಶ್ವವಿದ್ಯಾಲಯ ಇವೆ.

ಜನರು ಯೋಧಪರಂಪರೆಗೆ ಸೇರಿದವರು. ಜನಜೀವನದಲ್ಲಿ ಧರ್ಮದ ಪಾತ್ರ ಪ್ರಧಾನವಾಗಿದೆ. ಪಂಜಾಬಿ ಸಾಹಿತ್ಯದಲ್ಲಿ ಸಹ ಇದನ್ನು ಕಾಣಬಹುದು. ಜಾನಪದ ಕಥೆಗಳಲ್ಲಿ ಪ್ರಸಿದ್ಧವಾದವು ಹೀರ್ ರಾಂಝೂ, ಸೋಹಿನ ಮಾಹೀವಾಲ್ ಮತ್ತು ಮಿeóರ್Á ಶಾಹಿಬಾನ್.

ವ್ಯವಸಾಯ : ಪ್ರಾಂತ್ಯದ ಪ್ರಧಾನ ಬೆಳೆಗಳು ಗೋಧಿ ಮತ್ತು ಹತ್ತಿ. ಇತರ ವ್ಯವಸಾಯೋತ್ಪನ್ನಗಳು ಬತ್ತ. ದ್ವಿದಳ ಧಾನ್ಯಗಳು, ಕಬ್ಬು, ಮೆಕ್ಕೆ ಜೋಳ, ಎಣ್ಣೆ ಬೀಜಗಳು, ಹಣ್ಣು ಮತ್ತ ತರಕಾರಿ. ವ್ಯವಸಾಯ ಯೋಗ್ಯ ಭೂಮಿಯ 3/4 ಭಾಗ ಜಮೀನಿಗೆ ನೀರಾವರಿ ಸೌಲಭ್ಯವಿದೆ. ಥಾರ್ ಮರುಭೂಮಿ ವಸಾಹತು ಯೋಜನೆಯ ಅಡಿಯಲ್ಲಿ ಸಿಂಧೂ ಮತ್ತು ಝೀಲಂ ನದಿಗಳ ನಡುವಣ ಸುಮಾರು 20 ಲಕ್ಷ ಎಕರೆ ಭೂಮಿಯನ್ನು ನೀರಾವರಿಗೆ ತರುವ ನಿರೀಕ್ಷೆಯಿದೆ.

ಕೈಗಾರಿಕೆ : ಪಾಕಿಸ್ತಾನದಲ್ಲಿ ಇದು ಕೈಗಾರಿಕೆಗಳಲ್ಲಿ ಮುಂದುವರಿದ ಪ್ರಾಂತ್ಯ. ಇಲ್ಲಿಯ ಪ್ರಧಾನ ಕೈಗಾರಿಕೆಗಳು ಬಟ್ಟೆ, ಯಂತ್ರೋಪಕರಣ, ವಿದ್ಯುತ್ ಸಲಕರಣೆ, ಲೋಹವಸ್ತು, ಸೈಕಲ್ ಮತ್ತು ಪ್ಲಾಸ್ಟಿಕ್ ಸರಕು.

ಸಾರಿಗೆ ಸಂಪರ್ಕ : 1970 ರಲ್ಲಿ ಪ್ರಾಂತ್ಯದಲ್ಲಿ 9,477 ಕಿ.ಮೀ. ರಸ್ತೆಗಳಿದ್ದುವು. ಲಾಹೋರ್ ಮತ್ತು ರಾವಲ್ಪಿಂಡಿ ಪಟ್ಟಣಗಳಿಗೆ ವಿಮಾನ ಸಂಪರ್ಕವಿದೆ. ಲಾಹೋರ್ ಪ್ರಮುಖ ರೈಲ್ವೆ ಜಂಕ್ಷನ್. (ವಿ.ಜಿ.ಕೆ.)