ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಂಪಾ
ಗೋಚರ
ಪಂಪಾ ಪುರಾಣ ಪ್ರಸಿದ್ಧವಾದ ಸರೋವರ. ಬಳ್ಳಾರಿ ಜಿಲ್ಲೆಯ ಆನೆಗೊಂದಿಯಿಂದ ಎಂಟುಮೈಲಿಗಳ ದೂರದಲ್ಲಿರುವ ಋಷ್ಯಮೂಕ ಪರ್ವತದ ಸಮೀಪದಲ್ಲಿತ್ತೆನ್ನಲಾಗಿದೆ. ವಾಲ್ಮೀಕಿ ರಾಮಾಯಣದ ಕಿಷ್ಕಿಂಧ ಕಾಂಡದಲ್ಲಿ ಇದರ ಉಲ್ಲೇಖವಿದೆ. ಸೀತಾಪಹರಣದ ಅನಂತರ ಅವಳನ್ನು ಅರಸುತ್ತ ಲಕ್ಷ್ಮಣನೊಡನೆ ಈ ಸರೋವರದ ಬಳಿ ಬಂದ ರಾಮ ಇದರ ಚೆಲುವಿಗೆ ಮನಸೋಲುತ್ತಾನೆ, ಸ್ಪಟಿಕದಂತೆ ನಿರ್ಮಲವಾಗಿದ್ದ ಜಲರಾಶಿ, ಗಾಜಿನಂತೆ ಹೊಳೆಯುವ ಪ್ರವಾಹ, ವಿಹರಿಸುತ್ತಿದ್ದ ಹಂಸ ಚಕ್ರವಾಕಾದಿ ಜಲಚರಗಳು, ಸರೋವರದ ಚೆಲುವನ್ನು ಇಮ್ಮಡಿಸುವಂತಿದ್ದ ಕಮಲದ ಹೂಗಳು, ಆ ಹೂಗಳಿಂದ ಸುವಾಸಿತವಾದ ತಂಗಾಳಿ-ಇವೆಲ್ಲವುಗಳಿಂದ ಶ್ರೀರಾಮನ ವಿರಹತಾಪ ಉದ್ದೀಪನಗೊಳ್ಳುತ್ತದೆ. ದಕ್ಷಿಣ ದಂಡೆಯಲ್ಲಿನ ಪರ್ವತ ಖನಿಜಗಳಿಂದ ಸಮೃದ್ಧವಾಗಿತ್ತೆನ್ನಲಾಗಿದೆ. ಸರೋವರದ ಸುತ್ತಲೂ ಅನೇಕ ಗುಹೆಗಳೂ ಚಿಕ್ಕ ಪುಟ್ಟ ಹಳ್ಳ ತೊರೆಗಳೂ ಇದ್ದುವು. ಬಳಿಯ ಋಷ್ಯಮೂಕ ಪರ್ವತದ ಮೇಲಿನಿಂದಲೇ ಸುಗ್ರೀವ ರಾಮ-ಲಕ್ಷ್ಮಣರನ್ನು ನೋಡುತ್ತಾನೆ. (ವಿ.ಎನ್.ಆರ್.)