ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಚನ

ವಿಕಿಸೋರ್ಸ್ದಿಂದ

ಪಚನ - ನಾವು ಸೇವಿಸಿದ ಆಹಾರದಲ್ಲಿರುವ ಪೋಷಕಗಳು ರಕ್ತಗತವಾಗಬಲ್ಲ ಘಟಕಗಳಾಗಿ ಜೀರ್ಣನಾಳದಲ್ಲಿ ಬೇರ್ಪಡುವ ವಿಧಾನ (ಡೈಜೇಶನ್). ಅರಗುವಿಕೆ ಮತ್ತು ಜೀರ್ಣವಾಗುವಿಕೆ ಪರ್ಯಾಯ ನಾಮಗಳು. ಆಹಾರದಲ್ಲಿರುವ ಇಂಥ ಅಂಶಗಳು ಮುಖ್ಯವಾಗಿ ಸಸಾರಜನಕ (ಪ್ರೋಟೀನ), ಶರ್ಕರ (ಕಾರ್ಬೋಹೈಡ್ರೇಟ್) ಮೇದಸ್ಸು (ಲೈಪಿಡ್). ಇವು ಸಾಮಾನ್ಯವಾಗಿ ನೀರಿನಲ್ಲಿ ವಿಲೀನವಾಗುವಂಥವು. ಇಲ್ಲವೇಕರುಳಿನ ಒಳಪೊರೆಯ ಮೂಲಕ ತೂರಿ ರಕ್ತಗತವಾಗಲಾರದಷ್ಟು ದೊಡ್ಡ ಹಾಗೂ ಜಟಿಲ ರಚನೆಯ ಬೃಹದಣುಗಳಿಂದಾಂಥವು. ಪಚನಕ್ರಿಯೆಯಲ್ಲಿ ಆಹಾರದ ಘನಘಟಕಗಳು ಜೀರ್ಣನಾಳದ ಉದ್ದಕ್ಕೂ ಇರುವ ಸ್ನಾಯುಗಳ ಸಂಕೋಚನದಿಂದ ಆಹಾರದಲ್ಲಿರುವ ಇಲ್ಲವೇ ಜೀರ್ಣನಾಳದಲ್ಲಿರುವ ದ್ರವದೊಡನೆ ಯಾಂತ್ರಿಕವಾಗಿ (ಮೆಕ್ಯಾನಿಕಲಿ) ಒರೆಯಲ್ಪಟ್ಟು ಹಾಗೂ ಕಿವುಚಲ್ಪಟ್ಟು ಹಾಲಿನಂಥ ದ್ರವ ರೂಪ ತಳೆಯುತ್ತವೆ. ಈ ರೀತಿಯ ಯಾಂತ್ರಿ ಪಚನ ಮುಖ್ಯವಾಗಿ ಬಾಯಿ ಹಾಗೂ ಜಠರದಲ್ಲಿ ಜರುಗುತ್ತದೆ. ಜೀರ್ಣನಾಳದ ಉದ್ದಕ್ಕೂ ಇರುವ ಅತಿಸೂಕ್ಷ್ಮಗ್ರಂಥಿಗಳಿಂದಲೂ ಜೀರ್ಣನಾಳಕ್ಕೆ ಸಂಬಂಧಿಸಿದಂತೆ ಇರುವ ದೊಡ್ಡ ಗ್ರಂಥಿಗಳಿಂದಲೂ ಜೀರ್ಣರಸಗಳು ಉತ್ಪತ್ತಿ ಆಗುತ್ತವೆ. ಇವುಗಳಲ್ಲಿ ಅನೇಕ ಬಗೆಯ ಕಿಣ್ವಗಳು ಉಂಟು. ಇವುಗಳ ಸಹಾಯದಿಂದ ಯಾಂತ್ರಿಕ ಪಚನವಾಗುತ್ತಿರುವ ಕಾಲದಲ್ಲೆ ರಾಸಾಯನಿಕ ಪಚನವೂ ಪ್ರಾರಂಭವಾಗುತ್ತದೆ. ಯಾವುದೇ ಕಿಣ್ನ ನಿರ್ದಿಷ್ಟ ಗುಂಪಿಗೆ ಸೇರಿದ ಮತ್ತು ನಿರ್ದಿಷ್ಟ ರಾಸಾಯನಿಕ ರಚನೆ ಇರುವ ವಸ್ತುವೊಂದನ್ನು ಮಾತ್ರ ವಿಭಜನೆ ಮಾಡಬಲ್ಲವಾದರೂ ಒಟ್ಟಿನಲ್ಲಿ ಎಲ್ಲ ಕಿಣ್ವಗಳೂ ಸೇರಿ ಆಹಾರವನ್ನು ರಾಸಾಯನಿಕವಾಗಿ ಮತ್ತು ಪೂರ್ಣವಾಗಿ ಪಚನಮಾಡುತ್ತವೆ. ಸಸಾರಜನಕ ಶರ್ಕರವಸ್ತುಗಳು ಸರಳರಚನೆಯ ಹಾಗೂ ನೀರಿನಲ್ಲಿ ವಿಲೀನವಾಗುವ ರಾಸಾಯನಿಕಗಳಿಗಾಗಿ ವಿಭಜನೆಗೊಳ್ಳುತ್ತವೆ. ಮೇದಸ್ಸಿನಿಂದ ಅದರ ಆಮ್ಲಘಟಕಗಳು ಬೇರ್ಪಟ್ಟು 0.001 ಮಿಮಿ ಗಿಂತಲೂ ಸಣ್ಣಕಣಗಳಾಗಿ ರೂಪಾಂತರಗೊಂಡು ವಿಶೇಷ ವಿಧಾನದಿಂದ ನೀರಿನಲ್ಲಿ ವಿಲೀನವಾಗಿ ಕಲಿಲದ್ರಾವಣ (ಕಲಾಯ್ಡಲ್ ಸಲ್ಯೂಷನ್) ಫಲಿಸುತ್ತದೆ. ಆಹಾರಾಂಶಗಳು ಈ ರೀತಿ ಮಾರ್ಪಟ್ಟ ಮೇಲೆ ಜೀವಸತ್ವಗಳು ಪಚನದ ಅವಶ್ಯಕತೆ ಇಲ್ಲದೆ ರಕ್ತಗತವಾಗುತ್ತವೆ. ಆಹಾರದಲ್ಲಿ ಇರಬಹುದಾದ ಮಿಕ್ಕ ಘಟಕಗಳು ನಾರು, ಬೆನ್ನುಸಿಪ್ಪೆ, ಕೊಂಬಿನಂಥ ರಾಸಾಯನಿಕ ರಚನೆಯುಳ್ಳ ಹೊರಕವಚ, ಸಸ್ಯಕಣ ಬಿತ್ತಿಯ ಸೆಲ್ಯುಲೋಸ್, ಇತ್ಯಾದಿ ನಮಗೆ ಅನುಪಯುಕ್ತವಾದ್ದರಿಂದ ರಾಸಾಯನಿಕ ವಿಭಜನೆಗೊಳ್ಳವುದೂ ಇಲ್ಲ, ರಕ್ತಗತವಾಗುವುದೂ ಇಲ್ಲ. ಇವನ್ನು ಉಳಿಸಿಕೊಂಡಿರುವ ದ್ರಾವಣ ಜೀರ್ಣನಾಳದ ಕೊನೆ ಕೊನೆಯಲ್ಲಿ ಕ್ರಮಿಸುತ್ತಿದ್ದಂತೆ ಕ್ರಮೇಣ ಘನೀಭವಿಸುತ್ತ ಮಲರೂಪವನ್ನು ತಳೆದು ಅಂತಿಮವಾಗಿ ವಿಸರ್ಜಿತವಾಗುತ್ತದೆ. ಹೀಗೆ ಪಚನದ ಕಾರ್ಯಾಚರಣೆ ಯಾಂತ್ರಿಕವಾಗಿ ಮತ್ತು ರಾಸಾಯನಿಕವಾಗಿ ಜರಗುವ ಒಂದು ಜಟಿಲ ಪ್ರಕ್ರಿಯೆ. ಅದರ ತಪಶೀಲುಗಳನ್ನು ಮುಂದಿನ ಶೀರ್ಷಿಕೆಗಳಂತೆ ವಿಂಗಡಿಸಿ ವಿವರಿಸಲಾಗಿದೆ :


1 ಜೀರ್ಣನಾಳದ ಸಾಮಾನ್ಯ ರಚನಾ ವಿನ್ಯಾಸ 2 ಜೀರ್ಣನಾಳಕ್ಕೆ ಸಂಬಂಧಿಸಿದ ಗ್ರಂಥಿಗಳು 3 ಜೀರ್ಣಾಂಗಗಳ ಕ್ರಿಯಾನಿಯಂತ್ರಣ 4 ಜೀರ್ಣಾಂಗಗಳಲ್ಲಿ ಜರಗುವ ಕ್ರಿಯೆಗಳ ವಿವರ

1. ಜೀರ್ಣನಾಳದ ಸಾಮಾನ್ಯ ರಚನಾ ವಿನ್ಯಾಸ : ಜೀರ್ಣನಾಳ ಬಾಯಿಯಿಂದ ಪ್ರಾರಂಭವಾಗಿ ಮಲದ್ವಾರದಲ್ಲಿ ಕೊನೆ ಆಗುತ್ತದೆ. ಅದರ ಉದ್ದ ಸುಮಾರು 9 ಮೀಟರುಗಳು. ವಾಸ್ತವವಾಗಿ ಅದು ಅವಿಚ್ಛಿನ್ನವಾದ ನಾಳವಾಗಿದ್ದರೂ ಪ್ರತ್ಯೇಕ ಅಂಗಗಳೇ ಎಂದು ವಿವರಿಸಬಹುದಾದ ವಿವಿಧ ಭಾಗಗಳನ್ನು ಅದರಲ್ಲಿ ಗುರುತಿಸಬಹುದು. ಗಂಟಲಿನಿಂದ ಪ್ರಾರಂಭವಾಗಿ ಎದೆಯಲ್ಲಿ ಕೆಳಕ್ಕೆ ಇಳಿಯುವ ಸುಮಾರು 20 ಸೆಂ.ಮೀ. ಉದ್ದದ ಮತ್ತು 2-2.5 ಸೆಂ.ಮೀ. ವ್ಯಾಸದ ನಾಳಭಾಗವೇ ಅನ್ನನಾಳ. ಇದು ವಪೆಯನ್ನು ತೂರಿ ಉದರವನ್ನು ಪ್ರವೇಶಿಸಿದೊಡನೆಯೇ ವಿಶಿಷ್ಟ ಆಕಾರದ ಚೀಲದಂತೆ ಮಾರ್ಪಡುತ್ತದೆ. ಇದೇ ಜಠರ ಅಥವಾ ಅನ್ನಾಶಯ. ಆಹಾರ ಸ್ವಲ್ಪಕಾಲ ಇದರಲ್ಲಿ ತಂಗಬೇಕಾಗಿರುವುದರಿಂದ ಇದರ ಉದ್ದ 10-25 ಸೆಂ.ಮೀ. ಮತ್ತು ಅಗಲ 7-15 ಸೆಂ.ಮೀ. ಇವೆ. ಜಠರದಿಂದ ಮುಂದಕ್ಕೆ ಇರುವ ಮತ್ತು ಪುನಃ ನಾಳಾಕಾರ ತಾಳಿರುವ ಭಾಗ ಸಣ್ಣಕರುಳು. ಸುಮಾರು 6.5 ಮೀ. ಉದ್ದ ಹಾಗೂ 2.5-5 ಸೆಂ.ಮೀ ವ್ಯಾಸವಿರುವ ಇದನ್ನು ಮೂರು ಭಾಗಗಳಾಗಿ ವಿವರಿಸುವುದಿದೆ. ಮೊದಲನೆಯದು ಮುಂಗರುಳು (ಡುಯೋಡೀನಮ್). ಸುಮಾರು 25 ಸೆಂ.ಮೀ. ಉದ್ದವಾಗಿ ಉದರದ ಮಧ್ಯದ ಲಂಬಗೆರೆಯ ಬಲಭಾಗದಲ್ಲಿ ಬೆನ್ನಿಗೆ ಅಂಟಿಕೊಂಡಿರುವ ಅ ಆಕಾರಉಳ್ಳ ಭಾಗವಿದು. ಸಣ್ಣ ಕರುಳಿನ ಮಿಕ್ಕಭಾಗ ಮೇಲುನೋಟಕ್ಕೆ ಗೊಜಿಬಿಜಿ ಆಗಿರುವಂತೆ ಆದರೆ ಗಂಟಾಗದಂತೆ ಸುತ್ತಿಕೊಂಡು ಉದರದ ಬಿಡುಭಾಗವನ್ನೆಲ್ಲ ಆಕ್ರಮಿಸಿದೆ. ಸಣ್ಣಕರುಳಿನ ಮುಂದೆ ಇರುವ ಭಾಗಕ್ಕೆ ದೊಡ್ಡಕರುಳು ಎಂದು ಹೆಸರು. ಸಣ್ಣ ಕರುಳಿಗೆ ಲಂಬವಾಗಿ ಸೇರಿಕೊಂಡಂತಿರುವ ಈ ಜೀರ್ಣನಾಳ ಭಾಗದ ವ್ಯಾಸ 4.5 ಸೆಂ.ಮೀ. ಇರುವುದರಿಂದ ಇದಕ್ಕೆ ದೊಡ್ಡಕರುಳು ಎಂಬ ಹೆಸರುಂಟು. ಇದರ ಉದ್ದ ಸುಮಾರು 1.5 ಮೀ.ನಷ್ಟಿದೆ. ದೊಡ್ಡಕರುಳು ಉದರದ ಬಲಕೆಳಮೂಲೆಯಿಂದ ತೆರಪಿಲ್ಲದ ಕೊನೆಯಂತೆ (ಬ್ಲೈಂಡ್ ಎಂಡ್) ಪ್ರಾರಂಭವಾಗಿ ನೇರವಾಗಿ ಮೇಲಿನ ಮೂಲೆಯವರಿಗೆ ಏರಿ ಅಲ್ಲಿಂದ ಉದರದ ಎಡಮೇಲಿನ ಮೂಲೆಯವರಿಗೆ ಅಡ್ಡದಿಶೆಯಲ್ಲಿ ಮುಂದುವರಿದಿದೆ. ಅಲ್ಲಿಂದ ಕೆಳಮೂಲೆಯವರಿಗೆ ನೇರವಾಗಿ ಇಳಿದು ಪುನಃ ಓರೆದಿಕ್ಕಿನಲ್ಲಿ ಮೇಲೇರುತ್ತ ಉದರದ ಮಧ್ಯ ಗೆರೆಯನ್ನು ಸೇರಿ ಅಂತಿಮವಾಗಿ ಈ ನೇರದಲ್ಲೆ ಇಳಿದು ಮಲದ್ವಾರದಲ್ಲಿ ಕೊನೆಗೊಳ್ಳುತ್ತದೆ; ಅಂದರೆ ಹೆಚ್ಚು ಕಡಿಮೆ ಉದರವನ್ನು ಸುತ್ತುವರಿದ ಎಲ್ಲೆಯಂತಿದೆ.

ವ್ಯಕ್ತಿ ಬಾಯಿಗಿಟ್ಟ ಗಟ್ಟಿ ಆಹಾರ ಪದಾರ್ಥವನ್ನು ಅಗಿದು ಜೊಲ್ಲಿನೊಡನೆ ಮಿಶ್ರ ಮಾಡಿ ಮೃದುವಾದ ಹಾಗೂ ನುಣುಚಿಕೊಳ್ಳುವಂತಿರುವ ತುತ್ತಾಗಿ ನುಂಗುವಂತೆ ಮಾಡುವುದು ಬಾಯಿಯ ಕೆಲಸ. ನುಂಗಿದ ಆಹಾರ ಪಾನೀಯಗಳನ್ನು ಸಾಗಿಸಿ ಜಠರಕ್ಕೆ ಸೇರಿಸುವುದು ಅನ್ನನಾಳದ ಕ್ರಿಯೆ. ಅನಂತರ ಸೇವನೆಯನ್ನು ಮುಂದುವರಿಸುತ್ತಿರುವ ತನಕ ಮತ್ತು ಇನ್ನೂ ಕೊಂಚ ಕಾಲ ಈ ಪದಾರ್ಥಗಳು ಜಠರದಲ್ಲಿ ತಂಗಿರುತ್ತವೆ. ಅಗತ್ಯವಿದ್ದಷ್ಟು ಮಾತ್ರ ಸಡಿಲಗೊಂಡು ಹಿಗ್ಗುತ್ತ ಒಂದು ಪಟ್ಟಿನಲ್ಲಿ ಸೇವಿಸಿದ ಪದಾರ್ಥವೆಲ್ಲವನ್ನೂ ಹೀಗೆ ಕಲೆ ಹಾಕುವುದು ಜಠರದ ಒಂದು ಕ್ರಿಯೆ. ಆದ್ದರಿಂದಲೇ ಅದನ್ನು ಅನ್ನಾಶಯವೆಂದೂ ಕರೆದಿದೆ. ಸೇವಿಸಿದ ಘನವಸ್ತುಗಳನ್ನು ಲಭ್ಯವಿರುವ ದ್ರವದೊಡನೆ ಸೇರಿಸಿ ಚೆನ್ನಾಗಿ ಅರೆದು ನುರಿಸಿ ಹಾಲಿನಂಥ ದ್ರಾವಣವಾಗಿ ಮಾಡಿ ಸಣ್ಣ ಕರುಳಿಗೆ ಮುಂದೂಡುವುದು ಜಠರದ ಇನ್ನೊಂದು ಕ್ರಿ.ಯೆ. ಆಹಾರದ ಘನಾಂಶವನ್ನು ಅವಲಂಬಿಸಿ ಈ ಕ್ರಿಯೆಗೆ ಗರಿಷ್ಠ ಐದರಿಂದ ಆರು ಗಂಟೆಗಳು ಬೇಕಾಗುತ್ತವೆ. ಸಣ್ಣಕರುಳನ್ನು ತಲುಪಿದ ದ್ರವರೂಪದ ಆಹಾರವಸ್ತು ಅದರ ಮೂಲಕ ಸಾಗುತ್ತಿರವಾಗ ಅಲ್ಲಿ ಕಲೆಯಾಗುವ ಜೀರ್ಣರಸಗಳೊಡನೆ ಮಿಶ್ರವಾಗಿ ಅವುಗಳ ರಾಸಾಯನಿಕ ಕ್ರಿಯೆಗಳಿಂದ ಪಚನಗೊಳ್ಳುತ್ತದೆ. ಅದೇ ಕಾಲದಲ್ಲಿ ಉಪಯುಕ್ತ ವಸ್ತುಗಳೆಲ್ಲ ಹೀರಲ್ಪಟ್ಟು ರಕ್ತಗತವಾಗುತ್ತವೆ. ಈ ಕಾರ್ಯ ಸುಮಾರು ಎರಡು ಗಂಟೆಗಳ ಅವಧಿಯಲ್ಲಿ ಮುಗಿದು ಪಚನವಾಗದ ಹಾಗೂ ಹೀರಲ್ಪಡದ ಅನುಪಯುಕ್ತವಸ್ತುಗಳಿರುವ ದ್ರಾವಣ ದೊಡ್ಡಕರುಳನ್ನು ಸೇರುತ್ತದೆ. ಇಲ್ಲಿ ಅದು ನಿಂತು ನಿಂತು ನಿಧಾನವಾಗಿ ಮುಂದುವರಿಯುತ್ತಿದ್ದಂತೆ ಅದರಿಂದ ನೀರು ಹೀರಲ್ಪಡುತ್ತದೆ. ತತ್ಫಲವಾಗಿ ಉಳಿಕೆ ವಸ್ತು ಕ್ರಮೇಣ ಘನೀಭವಿಸುತ್ತ ದೊಡ್ಡಕರುಳಿನ ಕೊನೆ ತಲುಪುವ ವೇಳೆಗೆ ಮಲವಸ್ತುವಾಗಿ ಮಾರ್ಪಟ್ಟಿರುತ್ತದೆ. ದೊಡ್ಡಕರುಳಿನಲ್ಲಿ ಈ ರೀತಿಯ ಮುನ್ನಡೆಗೆ ಹತ್ತರಿಂದ ಹನ್ನೆರಡು ಗಂಟೆಗಳೇ ಬೇಕಾಗಬಹುದು. ಅಂತಿಮವಾಗಿ ಮಲವಸ್ತು ಮಲದ್ವಾರದ ಮೂಲಕ ದಿನಕ್ಕೆ ಒಂದೆರಡು ಬಾರಿ ವಿಸರ್ಜಿತವಾಗುತ್ತದೆ.

ಜೀರ್ಣನಾಳದ ಭಿತ್ತಿ ಉದ್ದಕ್ಕೂ ನಾಲ್ಕು ಪದರಗಳಿಂದ ರಚಿತವಾಗಿದೆ. ಅತ್ಯಂತ ಹೊರಗಿನ ಪದರ ಬಲು ತೆಳುವಾದ ಪೊರೆ. ಜಾರಿಕೆ ಲಕ್ಷಣ ಉಳ್ಳದ್ರವದಿಂದ ಇದು ತೊಯ್ದಂತೆ ಇರುತ್ತದೆ. ಉದರದಲ್ಲಿ ಸಣ್ಣ ಕರುಳು ಸುರುಳಿ ಸುರುಳಿಯಾಗಿ ಸುತ್ತಿಕೊಂಡು ಇತರ ಅಂಗಗಳ ಮೇಲೆ ಪೇರಿಕೊಂಡಿದ್ದರೂ ಈ ಸುರುಳಿಗಳೊಡನೆ ಮತ್ತು ಅಂಗಗಳೊಡನ ತಿಕ್ಕಾಡುತ್ತಿದ್ದರೂ ಯಾವುದೇ ಉಜ್ಜುಗಾಯ ಆಗದಂತೆ ಜಾರಿಕೆಯ ಹೊರಪದರ ಕರುಳನ್ನು ರಕ್ಷಿಸುತ್ತದೆ. ಈ ಪದರದ ಒಳಗಿರುವ ಪದರ ಅನೈಚ್ಛಿಕ ಸ್ನಾಯುವಿನಿಂದಾದದ್ದು. ಜೀರ್ಣನಾಳದಲ್ಲಿ ವಿವಿಧ ಚಲನೆಗಳನ್ನು ಉಂಟುಮಾಡುವುದು ಈ ಸ್ನಾಯುಪದರದ ಕ್ರಿಯೆ. ಇದು ಉದ್ದಕ್ಕೂ ಸಾಮಾನ್ಯವಾಗಿ ಎರಡು ವರಿಸೆಗಳಾಗಿ ವ್ಯವಸ್ಥಿತವಾಗಿದೆ. ಹೊರವರಿಸೆ ತೆಳು. ಅದರಲ್ಲಿ ಸ್ನಾಯುತಂತುಗಳು ಜೀರ್ಣನಾಳದ ಲಂಬಾಕ್ಷದ ದಿಶೆಯಲ್ಲಿವೆ. ಆದ್ದರಿಂದ ಜೀರ್ಣನಾಳದ ಒಂದು ಘಟಕಾಂಗದಲ್ಲಿ ಇವು ಸಂಕೋಚಿಸಿದಾಗ ಮತ್ತು ವ್ಯಾಕೋಚಿಸಿದಾಗ ಜೀರ್ಣನಾಳದ ಆ ಭಾಗ ಗಿಡ್ಡವಾಗುತ್ತದೆ ಇಲ್ಲವೇ ಉದ್ದವಾಗುತ್ತದೆ. ಇದರ ಒಳಗಿನ ಸ್ನಾಯು ವರಿಸೆಯಲ್ಲಿ ಸ್ನಾಯುತಂತುಗಳು ಜೀರ್ಣನಾಳವನ್ನು ಸುತ್ತುವರಿದಂತೆ ಇವೆ. ಆದ್ದರಿಂದ ಇವು ಸಂಕೋಚಿಸಿದಾಗ ಮತ್ತು ವ್ಯಾಕೋಚಿಸಿದಾಗ ಜೀರ್ಣನಾಳದ ವ್ಯಾಸ ಕಿರಿದಾಗುತ್ತದೆ ಇಲ್ಲವೇ ದೊಡ್ಡದಾಗುತ್ತದೆ. ಜೀರ್ಣನಾಳದ ಚಲನೆಯಿಂದ ನಾಳದ ಒಳಗೆ ಜೀರ್ಣವಾಗುತ್ತಿರುವ ವಸ್ತು ಮುಂದು ಮುಂದಕ್ಕೆ ದೂಡಲ್ಪಡುತ್ತದೆ. ಜಠರ ಮತ್ತು ಸಣ್ಣಕರುಳಿನ ಸಂಧಿಸ್ಥಾನದಲ್ಲಿ, ಸಣ್ಣಕರುಳು ಮತ್ತು ದೊಡ್ಡಕರುಳಿನ ಸಂಧಿಸ್ಥಾನದಲ್ಲಿ ಮತ್ತು ಗುದನಾಳದ (ರೆಕ್ಟಮ್) ಅಂತ್ಯದಲ್ಲಿ ನಾಳಭಾಗವನ್ನು ಸುತ್ತುವರಿದಂತಿರುವ ಒಳ ಸ್ನಾಯುವರಿಸೆ ಜೀರ್ಣನಾಳದ ಬೇರೆಡೆಗಳಿಗಿಂತ ದಪ್ಪವಾಗಿರುವುದಲ್ಲದೆ ಸಾಮಾನ್ಯವಾಗಿ ಸಂಕೋಚಿಸಿದಂತೆಯೇ ಇರುವುದರಿಂದ ಜೀರ್ಣನಾಳದ ಆ ಸ್ಥಳಗಳಲ್ಲಿ ಉಂಗುರವಿರುವಂತೆ ಕಾಣಿಸುತ್ತದೆ. ಆದ್ದರಿಂದ ಈ ಸ್ನಾಯುಭಾಗಕ್ಕೆ ಉಂಗುರು ಸ್ನಾಯುವೆಂದೇ (ಸ್ಪಿಂಕ್ಟರ್) ಹೆಸರಾಗಿದೆ. ಉಂಗುರಸ್ನಾಯು ಸಂಕೋಚಿಸಿದ್ದಾಗ ಅದರ ಆಚೀಚೆ ಕಡೆಯ ಜೀರ್ಣನಾಳ ಭಾಗಗಳ ನ್ಶೆರಂತರ್ಯ (ಕಂಟಿನ್ಯೂಯಿಟಿ) ತಪ್ಪಿಹೋಗಿರುತ್ತದೆ. ಆದ್ದರಿಂದ ಜೀರ್ಣವಾದ ಆಹಾರ ಒಂದು ಅಂಗದಿಂದ ಇನ್ನೊಂದು ಅಂಗಕ್ಕೆ ಸಾಗಲು ಸಾಧ್ಯವಾಗುವುದಿಲ್ಲ. ಉಂಗುರಸ್ನಾಯು ವ್ಯಾಕೋಚಿಸಿದಾಗ ಮಾತ್ರ ಒಂದು ಭಾಗದಲ್ಲಿರುವ ವಸ್ತು ಇನ್ನೊಂದು ಭಾಗಕ್ಕೆ ಹರಿದು ಬರಬಹುದು. ಜಠರದ ಸ್ನಾಯು ಚಲನೆಯಿಂದ ಘನರೂಪದ ಆಹಾರ ವಸ್ತು ಅರೆಯಲ್ಪಟ್ಟು ಹಾಲಿನಂತೆ ಮಂದವಾದ ದ್ರವವಾಗವುದು ಒಂದು ವಿಶೇಷ.

ಸ್ನಾಯುಪದರದ ಒಳಗೆ ಬಂಧನಾಂಗಾಂಶದಿಂದ ರಚಿತವಾದ ಪದರ ಉಂಟು. ನರತಂತುಗಳು, ಧಮನಿಗಳು, ದುಗ್ಧರಸನಾಳಗಳು ಹಾಗೂ ದುಗ್ಧರಸಗ್ರಂಥಿಗಳಿಗೆ ಈ ಪದರ ಆಸರೆಯನ್ನು ಒದಗಿಸುತ್ತದೆ. ಅಲ್ಲದೆ ಜೀರ್ಣನಾಳದ ನಾಲ್ಕನೆಯ ಪೊರೆಯಾದ ಲೋಳೆಪೊರೆಯನ್ನು ಸ್ನಾಯುಪದರಕ್ಕೆ ಬಂಧಿಸಿದೆ.

ಜೀರ್ಣನಾಳದ ಲೋಳೆಪೊರೆ ನಾಳದ ಒಳಹೊದ್ದಿಕೆ ಎನ್ನುವುದು ಸ್ಪಷ್ಟ. ಹೆಸರೇ ಹೇಳುವಂತೆ ಲೋಳೆಯಂತ ದ್ರವದಿಂದ ತೇವವಾಗಿರುವುದು ಲೋಳೆಪೊರೆಯ ವಿಶಿಷ್ಟ ಲಕ್ಷಣ. ಇದರ ಮೇಲ್ಮೈಯನ್ನು ರಚಿಸುವ ಎಲ್ಲ ಕೋಶಗಳೂ ಇಲ್ಲವೇ, ಅವುಗಳಲ್ಲಿ ವಿಶಿಷ್ಟವಾದ ಕೆಲವು ಕೋಶಗಳು, ಲೋಳೆಯಂಥ ದ್ರವವನ್ನು ಅಲ್ಪವಾಗಿ ಆದರೆ ನಿರಂತರವಾಗಿ ಸ್ರವಿಸುತ್ತಿದ್ದು ಅದು ಈ ಮೇಲ್ಮೈಯನ್ನು ಯಾವಾಗಲೂ ಒದ್ದೆಯಾಗಿ ಇಟ್ಟಿರುತ್ತದೆ. ಆದರೆ ಜೀರ್ಣನಾಳದ ಲೋಳೆಪೊರೆಯಲ್ಲಿ ಈ ಲಕ್ಷಣದ ಜೊತಗೆ ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾದ ಮತ್ತು ವಿವಿಧ ರಚನೆಯ (ಸಾಮಾನ್ಯವಾಗಿ ಪ್ರಣಾಳದಂತಿರುವ) ಅಸಂಖ್ಯಾತ ಗ್ರಂಥಿಗಳು ಇರುವುದು ವೈಶಿಷ್ಟ್ಯ. ಇವು ಜೀರ್ಣನಾಳದ ಒಂದೊಂದು ಅಂಗದಲ್ಲೂ ಅದರ ವಿಶಿಷ್ಟ ಜೀರ್ಣರಸವನ್ನು ಸ್ರವಿಸುತ್ತವೆ. ಇನ್ನು ಮುಂಗರುಳಿನ ಮತ್ತು ಅನ್ನನಾಳದಭಿತ್ತಿಯ ಬಂಧನಾಂಗಾಂಶಪದರದಲ್ಲಿ ಸೂಕ್ಷ್ಮವಾದ ಗ್ರ್ರಂಥಿಗಳಿವೆ. ಎಲ್ಲ ಜೀರ್ಣ ರಸಗಳ ಕ್ರಿಯೆಯೂ ವಿವಿಧ ಆಹಾರಾಂಶಗಳ ಬೃಹದಣುಗಳನ್ನು ಛಿದ್ರಿಸಿ ಸುಲಭ ರಚನೆಯ ರಾಸಾಯನಿಕಗಳಾಗಿ ಮಾರ್ಪಡಿಸುವುದೇ ಆಗಿದೆ. ಸಣ್ಣಕರುಳಿನ ಲೋಳೆ ಪೊರೆಗ್ರಂಥಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಲೋಳೆಪೊರೆಗಳಿವೆ, ಜೊತಗೆ ಇವುಗಳಲ್ಲಿ ಇವುಗಳಷ್ಟೇ ಸೂಕ್ಷ್ಮಕಾರದ ಆದರೆ ಒಳಗೆ ಜೊಳ್ಳಿಲ್ಲದ ಅಸಂಖ್ಯಾತ ಹೊರಚಾಚುಗಳು ಕೂಡ ಇವೆ. ವಿಲ್ಲಸ್ (ಬಹುವಚನ ವಿಲ್ಲೈ) ಎಂಬ ಈ ಚಾಚುವಿನ ಕ್ರಿಯೆ ಪಚನಫಲವಾದ ಉಪಯುಕ್ತ ಆಹಾರಾಂಶಗಳನ್ನು ದ್ರಾವಣರೂಪದಲ್ಲಿ ಹೀರಿಕೊಳ್ಳುವುದು. ವಿಲ್ಲ್ಸಿನ ಒಳಗೆರಕ್ತನಾಳ ಹಾಗೂ ದುಗ್ಧರಸನಾಳ ಹುದುಗಿದ್ದು ಹೀರಲ್ಪಟ್ಟ ಆಹಾರಾಂಶ ಅವುಗಳ ಮೂಲಕ ಅಂತಿಮವಾಗಿ ರಕ್ತಗತವಾಗುತ್ತದೆ.

2. ಜೀರ್ಣನಾಳಕ್ಕೆ ಸಂಬಂಧಿಸಿದ ಗ್ರಂಥಿಗಳು : ಜೀರ್ಣರಸಗಳನ್ನು ನಾಳ ಭಿತ್ತಿಯಲ್ಲಿರುವ ಗ್ರಂಥಿಗಳು ಅಲ್ಲದೆ ಜೀರ್ಣನಾಳದಿಂದ ದೂರವಾಗಿರುವ ಲಾಲಾ ಗ್ರಂಥಿಗಳು, ಮೇದೋಜೀರಕಾಂಗ ಹಾಗೂ ಯಕೃತ್ತು ಕೂಡ ಸ್ರವಿಸುತ್ತವೆ. ಇವುಗಳಿಂದ ಉತ್ಪತ್ತಿ ಆದ ರಸಗಳು ಆಯಾಗ್ರಂಥಿಯ ನಾಳದ ಮೂಲಕ ಜೀರ್ಣನಾಳಕ್ಕೆ ಹರಿದು ಬಂದು ಆಹಾರ ಪಚನದಲ್ಲಿ ಭಾಗವಹಿಸುತ್ತವೆ. ಎಡ ಬಲ ಎರಡು ಕಡೆಯೂ ಸೇರಿ ಒಟ್ಟು ಆರು ಲಾಲಾಗ್ರಂಥಿಗಳು ಇವೆ. ದವಡೆಗಳ ನೆರೆಯಲ್ಲಿ ಉಪಸ್ಥಿತವಾಗಿರುವ ಇವು ತಾವು ಸ್ರವಿಸುವ ಲಾಲಾರಸ ಅಥವಾ ಜೊಲ್ಲನ್ನು ನಾಳಗಳ ಮೂಲಕ ಬಾಯೊಳಕ್ಕೆ ಸುರಿಸುತ್ತವೆ. ಮೇದೋಜೀರಕಾಂಗ ಜಠರದ ಹಿಂದೆ ಬೆನ್ನಿಗೆ ಅಂಟಿಕೊಂಡಿರುವ ತೆಳುವಾದ ಗ್ರಂಥಿ. ಇದು ಸ್ರವಿಸುವ ಮೇದೋಜೀರಕರಸ ಗ್ರಂಥಿನಾಳದ ಮೂಲಕ ಮುಂಗರುಳಿಗೆ ಬಂದು ಸೇರುತ್ತದೆ. ಯಕೃತ್ತು ಉದರದ ಬಲ ಹಾಗೂ ಮೇಲು ಭಾಗವನ್ನು ಆಕ್ರಮಿಸಿಕೊಂಡಿರುವ ಅಂಗ. ಇದು ಜೀರ್ಣಾಂಗಗಳಲ್ಲೆಲ್ಲ ಬಲು ದೊಡ್ಡದು. ನಿರಂತರವಾಗಿ ಇದು ಪಿತ್ತರಸವನ್ನು ಸ್ರವಿಸುತ್ತಿರುವುದು. ಪಿತ್ತರಸ ಸಾಮಾನ್ಯವಾಗಿ ಕೋಶದಲ್ಲಿ ಜಲಾಂಶ ಹೀರಿಕೆ ಕ್ರಮದಿಂದ ಸಾಂದ್ರೀಕರಿಸಲ್ಪಟ್ಟು ಅಲ್ಲಿಯೇ ಶೇಖರವಾಗಿರುತ್ತದೆ. ಸೂಕ್ಷ್ಮ ವೇಳೆಯಲ್ಲಿ ಈ ಕೋಶ ಸಂಕೋಚಿಸಿ ಪಿತ್ತರಸವನ್ನು ಪಿತ್ತನಾಳದ ಮೂಲಕ ಮುಂಗುರುಳಿಗೆ ಸುರಿಸುತ್ತದೆ.

3. ಜೀರ್ಣಾಂಗಗಳ ಕ್ರಿಯಾನಿಯಂತ್ರಣ : ಜೀರ್ಣನಾಳದಲ್ಲಿ ಆಹಾರ ಬಾಯಿಯಿಂದ ಮಲದ್ವಾರದವರೆಗೂ ಕ್ಲುಪ್ತವಾಗಿ ಸಾಗಿಸಲ್ಪಡಬೇಕು. ಒಂದೊಂದು ಭಾಗದಲ್ಲೂ ಅವಶ್ಯವಿದ್ದಷ್ಟು ಕಾಲ ಆಹಾರ ತಂಗಿ ಅಥವಾ ಸಾಗುತ್ತಿದ್ದು ಜೀರ್ಣವಾಗಬೇಕು. ಜೀರ್ಣಕ್ರಿಯೆ ಪೂರ್ಣವಾದಂತೆಲ್ಲ ಬಿಡುಗಡೆ ಆದ ವಸ್ತುಗಳಲ್ಲ್ಲಿ ಉಪಯುಕ್ತ ಘಟಕಗಳು ರಕ್ತಗತವಾಗಬೇಕು. ಕೊನೆಗೆ ಉಳಿಯುವ ಶೇಷ ವ್ಯವಸ್ಥಿತವಾಗಿ ವಿಸರ್ಜಿತವಾಗಬೇಕು. ಇವೆಲ್ಲ ಸಾಧ್ಯವಾಗಲು ಸ್ನಾಯುಗಳ ಚಟುವಟಿಕೆ ಮತ್ತು ಗ್ರಂಥಿಗಳಿಂದ ರಸಸ್ರಾವ ಯುಕ್ತ ಕಾಲದಲ್ಲಿ ಮಾತ್ರ ಅಗತ್ಯವಿದ್ದಷ್ಟು ಪರಿಮಾಣದಲ್ಲಿ ಜರಗುವಂತೆ ಕಟ್ಟುನಿಟ್ಟಾಗಿ ನಿಯಂತ್ರಸಲ್ಪಡಬೇಕು. ಈ ರೀತಿ ಆಯಾ ಕಾಲದಲ್ಲಿ ಆಯಾ ಕ್ರಿಯೆ ಜರಗಲು, ಈಗ ಹೀಗಾಗಿದೆ ಎನ್ನುವ ಮಾಹಿತಿ ಒಂದು ಸ್ಥಳದಲ್ಲಿ ಉದ್ಭವಿಸಿ ಮುಂದಿನ ಕ್ರಿಯೆ ಕಂಡುಬರುವ ಸ್ಥಳಕ್ಕೆ ರವಾನೆ ಆಗಿ ಅಲ್ಲಿ ತಕ್ಕ ಕ್ರಿಯೆ ವ್ಯಕ್ತವಾಗುವಂತೆ ಇರಬೇಕು. ಸಂದೇಶ ಹೀಗೆ ಒಯ್ಯಲ್ಪಡುವುದಕ್ಕೆ ಎರಡು ಕ್ರಮಗಳಿವೆ. ಮೊದಲನೆಯದು ನರಗಳ ಮೂಲಕ ಸಾಗುವುದು. ಇದು ಅನೈಚ್ಛಿಕ ಕ್ರಿಯೆ (ರಿಫ್ಲೆಕ್ಸ್ ಆ್ಯಕ್ಷನ್). ಎರಡನೆಯದು ಹಾರ್ಮೋನುಗಳಿಂದ ಏರ್ಪಡುವುದು. ಆಹಾರ ಜೀರ್ಣನಾಳದಲ್ಲಿ ಸಾಗುತ್ತಿರುವಾಗ ನಾಳದ ಹಿಗ್ಗುವಿಕೆ, ಜೀರ್ಣವಾಗುತ್ತಿರುವ ಆಹಾರ ಪದಾರ್ಥದ ಘನ ಅಥವಾ ದ್ರವ ಸ್ವಭಾವ ಮತ್ತು ಅದರ ರಾಸಾಯನಿಕ ಘಟಕಗಳಿಂದ ಸ್ಥಳೀಯ ನರಗಳು ಹಾಗೂ ಲೋಳೆಪೊರೆಯ ಕೋಶಗಳು ಪ್ರಚೋದಿಸಲ್ಪಡುತ್ತವೆ. ನರಗಳ ಪ್ರಚೋದನೆಯ ಫಲವಾಗಿ ಅನೈಚ್ಛಿಕ ಕ್ರಿಯಾವಿಧಾನದಿಂದ ಮುಂದೆ ಕ್ರಿಯಾಶೀಲವಾಗಬೇಕಾದ ಜೀರ್ಣಾಂಗಗಳು ತಕ್ಕ ಕ್ರಿಯೆಗೆ ಸಿದ್ಧವಾಗುತ್ತವೆ. ಪ್ರಚೋದಿಸಲ್ಪಟ್ಟ ಲೋಳೆ ಪೊರೆಯ ಕೋಶಗಳಿಂದ ಹಾರ್ಮೋನುಗಳು ಉತ್ಪತ್ತಿ ಆಗಿ ಅಲ್ಲಿಯೇ ರಕ್ತಗತವಾಗುತ್ತವೆ. ರಕ್ತ ಪರಿಚಲನೆಯ ಮೂಲಕ ಇವು ದೇಹದ ಎಲ್ಲ ಕಡೆಗೂ ಒಯ್ಯಲ್ಪಡುತ್ತವೆ. ಆದರೆ ಯಾವುದೇ ಒಂದು ಹಾರ್ಮೋನಿನಿಂದ ನಿರ್ದಿಷ್ಟ ಜೀರ್ಣಾಂಗ ಮಾತ್ರ ಪ್ರಭಾವಿತವಾಗಬಹುದಾಗಿದೆ. ಇತರ ಜೀರ್ಣಾಂಗಗಳಾಗಲಿ ದೇಹದ ಬೇರೆ ಅಂಗಗಳಾಗಲಿ ಯಾವ ಪ್ರತಿಕ್ರಿಯೆಯನ್ನೂ ತೋರಿಸುವುದಿಲ್ಲ. ಆದ್ದರಿಂದ ಯುಕ್ತಕಾಲದಲ್ಲಿ ಹಾರ್ಮೋನ್ ಉತ್ಪತ್ತಿ ಆಗಿ ಮುಂದೆ ಕ್ರಿಯಾಶೀಲವಾಗಬೇಕಾದ ಜೀರ್ಣಾಂಗ ಮಾತ್ರ ಯುಕ್ತವಾಗಿ ಪ್ರಭಾವಿಸಲ್ಪಡುತ್ತದೆ. ಹೀಗೆ ನಿಯಂತ್ರಿತವಾಗಿ ಪ್ರಚೋದಿಸಲ್ಪಡುವ ಜೀರ್ಣಾಂಗ ಅನುಗುಣವಾಗಿ ಚಲಿಸುವುದರಿಂದ ಅಥವಾ ಮತ್ತು ಸ್ರವಿಸಿವುದಿರಿಂದ ಜೀರ್ಣಕ್ರಿಯೆ, ರಕ್ತಗತವಾಗುವಿಕೆ ಮತ್ತು ಅಂತಿಮವಾಗಿ ಮಲವಿಸರ್ಜನೆಗಳೆಲ್ಲವೂ ನಿರ್ದಿಷ್ಟ ರೀತಿಯಲ್ಲಿ ಜರಗುತ್ತವೆ.

4. ಜೀರ್ಣಾಂಗಗಳಲ್ಲಿ ಜರಗುವ ಕ್ರಿಯೆಗಳ ವಿವರ : ಆಹಾರ ಪಚನಕ್ರಮ ನಾವು ಆಹಾರವನ್ನು ಬಾಯಿಗೆ ಹಾಕಿಕೊಂಡ ಕೂಡಲೇ ಪ್ರಾರಂಭವಾಗಿ ಸಣ್ಣ ಕರುಳಿನ ಮೊದಲ ಭಾಗ ಮತ್ತು ಎರಡನೆಯ ಭಾಗಗಳಲ್ಲಿ ಅಂತ್ಯವಾಗುತ್ತದೆ. ಪಚನ ಎರಡು ರೀತಿಯದು ; ಯಾಂತ್ರಿಕ ಮತ್ತು ರಾಸಾಯನಿಕ. ಯಾಂತ್ರಿಕಪಚನ ಸ್ನಾಯುಕ್ರಿಯೆಯಿಂದ ಲಭಿಸುತ್ತದೆ. ರಾಸಾಯನಿಕ ಪಚನ ಜೀರ್ಣನಾಳದ ವಿವಿಧ ಸ್ಥಳಗಳಲ್ಲಿ ಕಂಡುಬರುವ ಜೀರ್ಣರಸಗಳ ಕ್ರಿಯೆಯಫಲ. ಯಾಂತ್ರಿಕ ಪಚನದಲ್ಲಿ ಆಹಾರದ ಘನರೂಪಕ ಘಟಕಗಳು ಚೆನ್ನಾಗಿ ಅರೆಯಲ್ಪಟ್ಟು ಅರೆ ಸಣ್ಣ ಕಣಗಳಾಗುತ್ತವೆ ಮತ್ತು ಸ್ಥಳೀಯವಾಗಿ ಲಭ್ಯವಿರುವ ದ್ರವದೊಡನೆ ಅದು ಆಹಾರದಲ್ಲಿ ಇರುವ ದ್ರವಾಂಶವಾಗಿರಬಹುದು ಇಲ್ಲವೇ ಸ್ರವಿಸಲ್ಪಟ್ಟ ಜೀರ್ಣರಸವಾಗಿರಬಹುದು. ಮಿಶ್ರವಾಗಿ ಸೇವಿಸಿದ ಆಹಾರ ಹೇಗೇ ಇದ್ದರೂ ಅಂತಿಮವಾಗಿ ದ್ರವರೂಪ ತಳೆಯುತ್ತದೆ. ಪಚನದ ಪ್ರಾರಂಭ ಹಂತದಲ್ಲಿ, ಅಂದರೆ ಬಾಯಿಯಲ್ಲಿ, ಪ್ರಧಾನವಾಗಿ ಯಾಂತ್ರಿಕ ವಿಧಾನಕಂಡುಬರುತ್ತದೆ. ಇಲ್ಲಿ ರಾಸಾಯನಿಕ ವಿಧಾನದಿಂದ ಪಚನ ಕ್ರಿಯೆಜರುಗಿದರೂ ಅದು ಪ್ರಮುಖವಲ್ಲ. ಪಚನದ ಕೊನೆಯ ಹಂತದಲ್ಲಿ ಅಂದರೆ ಸಣ್ಣ ಕರುಳಿನಲ್ಲಿ ಪ್ರಧಾನವಾಗಿ ಕಂಡುಬುರುವುದು ರಾಸಾಯನಿಕಪಚನ. ಇಲ್ಲಿ ಯಾಂತ್ರಿಕತೆ ಏನಿದ್ದರೂ ಅದು ಆಗಲೇ ದ್ರವವಾಗಿ ಮಾರ್ಪಟ್ಟಿರುವ ಆಹಾರವಸ್ತುವನ್ನು ಜೀರ್ಣನಾಳದಲ್ಲಿ ಮುನ್ನೂಕುವುದರಲ್ಲಿ ಮತ್ತು ಪಚನಕ್ರಿಯೆಯಿಂದ ಬೇರ್ಪಟ್ಟಿರುವ ಅಗತ್ಯ ವಸ್ತುಗಳನ್ನು ರಕ್ತಗತವಾಗಿಸುವುದರಲ್ಲಿ ಮುಗಿಯುತ್ತದೆ. ಮಧ್ಯ ಹಂತದಲ್ಲಿ ಅಂದರೆ ಜಠರದಲ್ಲಿ ಯಾಂತ್ರಿಕ ಮತ್ತು ರಾಸಾಯನಿಕ ಪಚನಗಳೆರಡೂ ಸಮವಾಗಿಯೇ ಪ್ರಮುಖವಾಗಿವೆ. ಪಚನದ ಪ್ರಾರಂಭಘಟ್ಟದ ನಿಯಂತ್ರಣ ನರಮಂಡಲದಿಂದ ಏರ್ಪಟ್ಟಿದೆ. ಹಾರ್ಮೋನ್ ನಿಯಂತ್ರಣ ಅತ್ಯಲ್ಪ. ಚಟುವಟಿಕೆ ತಕ್ಕಮಟ್ಟಿಗೆ ಐಚ್ಛಿಕ ಹತೋಟಿಗೆ ಒಳಪಟ್ಟಿರುವುದೂ ಉಂಟು. ಪಚನದ ಕೊನೆಯ ಘಟ್ಟದ ನಿಯಂತ್ರಣ ಪ್ರಧಾನವಾಗಿ ಹಾರ್ಮೋನುಗಳಿಂದ ಏರ್ಪಟ್ಟಿದೆ. ಇಲ್ಲಿ ನರನಿಯಂತ್ರಣ ಅಲ್ಪ. ನಿಯಂತ್ರಣಗಳೆರಡೂ ಪೂರ್ಣವಾಗಿ ಅನೈಚ್ಛಿಕ. ಪಚನದ ಮಧ್ಯ ಘಟ್ಟದ ಕ್ರಿಯಾನಿಯಂತ್ರಣ ಪೂರ್ಣವಾಗಿ ಅನೈಚ್ಛಿಕ. ಇಲ್ಲಿ ನರಮಂಡಲ ಮತ್ತು ಹಾರ್ಮೋನುಗಳು ಎರಡೂ ಸಮವಾಗಿ ನಿಯಂತ್ರಣದಲ್ಲಿ ಭಾಗವಹಿಸುತ್ತವೆ. ಪಚನಕ್ರಿಯೆಯಲ್ಲಿ ಯಾಂತ್ರಿಕ ವಿಧಾನ, ರಾಸಾಯನಿಕ ವಿಧಾನವೆಂದು ಎರಡು ವಿಧಾನಗಳನ್ನು ವಿವರಿಸದಿದ್ದರೂ ಮುಖ್ಯವಾದದ್ದು ರಾಸಾಯನಿಕ ಪಚನವೇ. ಇದು ಸುಸೂತ್ರವಾಗಿ ಜರಗಲು ಅನುವಾಗುವುದು ಯಾಂತ್ರಿಕ ವಿಧಾನ. ನಾವು ಸೇವಿಸಿದ ಆಹಾರದ ಘನವಸ್ತುಗಳು ಸೇವಿಸಿದ ರೂಪದಲ್ಲೇ ಇದ್ದರೆ ಜೀರ್ಣರಸಗಳು ಅವುಗಳ ಘಟಕಗಳನ್ನು ರಾಸಾಯನಿಕವಾಗಿ ವಿಭಜಿಸಿ ಸರಳಗೊಳಿಸಲು ಬಲುಕಾಲ ಬೇಕಾಗುತ್ತದೆ. ಅದೇ ಘನವಸ್ತುಗಳು ಯಾಂತ್ರಿಕವಾಗಿ ಅರೆಯಲ್ಪಟ್ಟು ಜೀರ್ಣರಸಗಳೊಡನೆ ಸೇರಿ ಹಾಲಿನಂಥ ಕಲಿಲ್ ದ್ರವವಾಗಿ ಮಾರ್ಪಟ್ಟಾಗ ರಾಸಾಯನಿಕ ಪಚನ ಶೀಘ್ರವಾಗಿ ಮತ್ತು ಸುಲಭವಾಗಿ ಜರಗಬಲ್ಲದು.

ಆಹಾರವನ್ನು ಬಾಯಿಯಲ್ಲಿ ಹಾಕಿಕೊಂಡ ಕೂಡಲೆ ಅದು ತೀರ ಶುಷ್ಕವಾದುದು ಬಹಳ ಗಟ್ಟಿಯಾದುದು, ಮೃದುವಾದುದು, ದ್ರವಯುಕ್ತವಾದುದು ಯಾವುದೇ ಆಗಿದ್ದರೂ ಅಗಿಯಲು ತೊಡಗುತ್ತೇವೆ. ಆಗ ಅದರ ಘನ ಘಟಕಗಳು ಯಾಂತ್ರಿಕವಾಗಿ ನುರಿಕೆಗೊಂಡು ದ್ರವಘಟಕಗಳೊಡನೆ ಬೆರೆತು ಅಥವಾ ಜೊಲ್ಲಿನೊಡನೆ ಸುಲಭವಾಗಿ ನುಂಗಬಲ್ಲ ತುತ್ತಾಗುತ್ತದೆ. ಜೊಲ್ಲಿನಲ್ಲಿ ಲೋಳೆ ಇರುವುದರಿಂದ ಇದು ಸಾಧ್ಯವಾಗಿದೆ. ಅಗಿದು ತುತ್ತಾಗಿ ಮಾರ್ಪಡಿಸುವುದು ಮಾನವರಲ್ಲಿಯಂತೂ ಪೂರ್ಣವಾಗಿ ಐಚ್ಛಿಕ ಕ್ರಿಯೆ. ಘನ ಪದಾರ್ಥ ದೊಡ್ಡದಾಗಿಲ್ಲದೆ ತಕ್ಕಷ್ಟು ದ್ರವವೋ ಜೊಲ್ಲೋ ಜೊತೆಗಿದ್ದರೆ ಅದನ್ನು ಅಗಿಯದೇ ನುಂಗಬಹುದೆಂಬುದು ಆತುರದಲ್ಲಿ ತಿನ್ನುವವರೆಗಲ್ಲರಿಗೂ ಗೊತ್ತು. ಅಗಿಯುವುದು ಒಂದೇ ಪಚನಕ್ರಿಯೆಯಲ್ಲಿಯ ಐಚ್ಛಿಕ ಕ್ರಿಯೆ. ಬಾಯಿಯಲ್ಲಿರುವ ಆಹಾರದ ರುಚಿ ಅಲ್ಲಿಯ ನರಗಳ ಮೂಲಕ ಗ್ರಹಿಕೆ ಆಗುವುದರಿಂದ ದವಡೆಗಳ ನೆರೆಯಲ್ಲಿರುವ ಲಾಲಾಗ್ರಂಥಿಗಳು ಪ್ರಚೋದನಗೊಂಡು ವಿಪುಲವಾಗಿ ಜೊಲ್ಲನ್ನು ಸುರಿಸುತ್ತವೆ. ರುಚಿಯ ಅನುಭವ ಜಾಗ್ರತೆ ಮನಸ್ಸಿಗೆ ಹತ್ತದಂತಿದ್ದರೂ (ಉದಾಹರಣೆಗೆ ಎಳೆ ಮಕ್ಕಳಲ್ಲಿ) ಈ ನಿಯಂತ್ರಣ ಕಾರ್ಯಗತವಾಗುವುದು ತಿಳಿದಿದೆ. ವಾಸ್ತವವಾಗಿ ಆಹಾರವನ್ನು ಬಾಯಿಯಲ್ಲಿ ಹಾಕಿಕೊಳ್ಳುವುದಕ್ಕೂ ಮೊದಲೇ ಈ ಗ್ರ್ರಂಥಿಗಳು ಪ್ರಚೋದಿತವಾಗುವುವು. ಆದರೆ ಇದು ಶೈಶವಾವಸ್ಥೆಯ ಬಳಿಕವೇ ಕಂಡುಬರುವ ವೈಶಿಷ್ಟ್ಯ ಆಹಾರ ಸೇವನೆಯ ನಿರೀಕ್ಷೆ, ಆಹಾರದ ಪರಿಮಳ, ನೋಟ ಇತ್ಯಾದಿಗಳಿಂದ ಬಾಯಿಯಲ್ಲಿ ನೀರೂಡುವುದು ಎಲ್ಲರಿಗೂ ತಿಳಿದ ವಿಷಯ. ಲಾಲಾಗ್ರಂಥಿಗಳಿಂದ ಸ್ರಾವನಿಯಂತ್ರಣ ಅನುಭವದಿಂದ ಕೈಗೂಡಿಸಿಕೊಂಡಿರುವ ಸಂಗತಿ ಎಂಬುದು ವ್ಯಕ್ತ. ಅಂತೂ ಆಹಾರಸೇವನೆಯ ಕಾಲದಲ್ಲಿ ಅಧಿಕ ಜೊಲ್ಲು ಉತ್ಪತ್ತಿ ಆಗುವುದು ನಿಜ. ಲಾಲಾಗ್ರಂಥಿಗಳಲ್ಲಿ ಉತ್ಪತ್ತಿ ಆಗುವ ಬ್ರಾಡಿಕೈನಿನ್ ಎಂಬ ಹಾರ್ಮೋನೂ ಸ್ವಲ್ಪಮಟ್ಟಿಗೆ ಇದರ ಕಾರಣವೆಂದು ತಿಳಿದಿದೆ. ಯಾವ ರೀತಿಯ ನಿಯಂತ್ರಣವಾಗಿಲಿ ಈ ಅಧಿಕ ಜೊಲ್ಲಿನ ಉತ್ಪತ್ತಿಯ ಮೇಲೆ ಐಚ್ಛಿಕಹತೋಟಿ ಇಲ್ಲ. ಜೊಲ್ಲಿನಲ್ಲಿ ಟಯಲಿನ್ ಅಥವಾ ಅಮೈಲೇಸ್ಸ ಎಂಬ ಕಿಣ್ವ ಉಂಟು. ಇದು ಆಹಾರದಲ್ಲಿ ಇರಬಹುದಾದ ಪಿಷ್ಟಾಂಶದ ಮೇಲೆ ವರ್ತಿಸಿ ಪಿಷ್ಟದ ಜಟಿಲ ರಚನೆಯ ಬೃಹದಣುಗಳನ್ನು ರಾಸಾಯನಿಕವಾಗಿ ವಿಭಜಿಸಿ ತಕ್ಕಮಟ್ಟಿನ ಸರಳ ರಚನೆಯ ಮಾಲ್ಟೋಸ್ ಎಂಬ ಸಕ್ಕರೆಯಾಗಿ ಪರಿವರ್ತಿಸುತ್ತದೆ. ಆದರೆ ಇದಕ್ಕೆ ತಕ್ಕಷ್ಟು ಕಾಲಾವಕಾಶವಿಲ್ಲದೆ ಬಾಯಿಯಲ್ಲಿ ಈ ರೀತಿಯ ರಾಸಾಯನಿಕ ಪಚನವಾಗುವುದು ಬಹಳ ಕಡಿಮೆ. ಅಗಿಯದೆ ಬಾಯಿಯಲ್ಲಿ ಹಾಕಿಕೊಂಡ ಕೂಡಲೇ ನುಂಗಿದರಂತೂ ಇದು ಇಲ್ಲವೆಂದೇ ಹೇಳಬಹುದು.

ಮುಂದಿನ ಜೀರ್ಣಕ್ರಿಯೆ ಜರಗುವುದು ಜಠರದಲ್ಲಿ. ಸ್ವತಃ ಜಠರರಸದಿಂದ ಪಚನ ಪ್ರಾರಂಭವಾಗುವುದಕ್ಕೆ ಮೊದಲು 10-20 ಮಿನಿಟುಗಳು ಬಹುಶಃ ಅಲ್ಲಿ ಟಯಲಿನ್ನಿನ ಕ್ರಿಯೆ ಮುಂದುವರಿಯುತ್ತದೆ. ಆದರೂ ಇದರಿಂದ ಪಚನವಾಗುವ ಪಿಷ್ಟದ ಪರಿಮಾಣ ಕಡಿಮೆಯೇ. ಆಹಾರ ಜಠರದಲ್ಲಿ ತಂಗಿ ಕೆಲವು ಮಿನಿಟುಗಳಾದ ಬಳಿಕ ಅಲ್ಲಿ ಉದ್ಭವಿಸುವ ನರಪ್ರಚೋದನೆಯಿಂದ ಜಠರದಲ್ಲಿ ಯಾಂತ್ರಿಕ ಪಚನ ಪ್ರಾರಂಭವಾಗುತ್ತದೆ. ಆಹಾರದಿಂದ ಜಠರಭಿತ್ತಿ ಹಿಗ್ಗಿಸಲ್ಪಟ್ಟಿರುವುದೇ ನರ ಪ್ರಚೋದನೆ ಉದ್ಭವಿಸುವುದಕ್ಕೆ ಕಾರಣ. ಪ್ರಚೋದನೆಯ ಫಲವಾಗಿ ಜಠರದ ಸ್ನಾಯುಗಳು ಪದೇಪದೇ ಸಂಕೋಚಿಸಿ ವ್ಯಾಕೊಚಿಸುವುದಕ್ಕೆ ಪ್ರಾರಂಭಿಸುತ್ತವೆ. ಈ ಸಂಕೋಚನ ವ್ಯಾಕೋಚನಗಳು ಜಠರದ ಉನ್ನತ ಭಾಗದಲ್ಲಿ ಎಲ್ಲಿಯೋ ಮೇಲಿಂದ ಮೇಲೆ ಪ್ರಾರಂಭಿಸುತ್ತ ನೀರಿನ ಅಲೆ ಮುಂದುವರಿಯುವಂತೆ ಜಠರಭಿತ್ತಿಯಲ್ಲಿ ಅಂತ್ಯಮುಖವಾಗಿ ಮುಂದುವರಿಯುತ್ತವೆ. ಪಕ್ಕದಿಂದ ವೀಕ್ಷಿಸಿದರೆ ಅಲೆಯಂಥ ಈ ಚಲನೆ ಹಾವಿನ ಚಲನೆಯಂತೆ ಕಾಣುವುದರಿಂದ ಇದಕ್ಕೆ ಸರ್ಪಗತಿ ಚಲನೆ (ಪೆರಿಸ್ಟಾಲ್‍ಸಿಸ್) ಎಂಬ ಹೆಸರುಂಟು. ಜಠರದಲ್ಲಿ ತುಂಬಿರುವ ಆಹಾರವಸ್ತು ಈ ತೆರನಾದ ಚಲನೆಯಿಂದ ಜಠರದ ಅಂತ್ಯದ ಕಡೆಗೆ ತಳ್ಳಲ್ಪಡುತ್ತದೆ. ಆದರೆ ಇಲ್ಲಿ ಜಠರ ಮತ್ತು ಸಣ್ಣ ಕರುಳಿಗೆ ನಡುವೆ ಇದ್ದು ಸಾಮಾನ್ಯವಾಗಿ ಸಂಕೋಚಿತ ಸ್ಥಿತಿಯಲ್ಲಿ ಇರುವ ಉಂಗುರ ಸ್ನಾಯು ಆಹಾರ ಕರುಳಿಗೆ ಪ್ರವೇಶಿಸದಂತೆ ತಡೆದುಬಿಡುತ್ತದೆ. ಹೀಗಾಗಿ ಮುನ್ನುಗ್ಗುತ್ತಿರುವ ಆಹಾರವಸ್ತು ದಾರಿಯಿಲ್ಲದೆ ಚಿರುಕಿಸಿದಂತೆ ವಾಪಸಾಗುತ್ತದೆ. ಅದೇ ವೇಳೆ ಆಹಾರಕಣಗಳು ಕಿವುಚಿದಂತಾಗಿ ಅಲ್ಲಿಯೇ ಉಪಸ್ಥಿತವಿರುವ ದ್ರವಘಟಕಗಳೊಡನೆ ಮಿಶ್ರವಾಗುತ್ತವೆ. ಪುನಃ ಪುನಃ ದ್ರವದೊಡನೆ ಈ ರೀತಿ ಮಿಶ್ರಿತವಾಗಿ ಅರೆಯಲ್ಪಡುತ್ತಲೇ ಇದ್ದು ಆಹಾರಪದಾರ್ಥ ದೃಶ್ಯಕಣಗಳಿಂದ ಮಂದವಾದ ಹಾಲಿನಂಥ ಕಲಿಲದ್ರಾವಣವಾಗಿ ಮಾರ್ಪಡುತ್ತದೆ. ಇಷ್ಟರ ಮಟ್ಟಿಗೆ ಮಾರ್ಪಟ್ಟ ಮೇಲೆಯೇ ಉಂಗುರಸ್ನಾಯು ಸಡಿಲವಾಗಿ ಮುಂದಿನ ಸರ್ಪಗತಿ ಚಲನೆ ಉಂಟಾದಾಗ ಈ ದ್ರಾವಣ ಕರುಳಿನೊಳಕ್ಕೆ ಪ್ರವೇಶಿಸುವುದು. ಆಗಲೂ ಅದರ ಸ್ವಭಾವ ಹದವಾಗಿಲ್ಲದಿದ್ದರೆ (ಮುಂಗುರುಳಿನ ನರಗಳಿಂದ ಈ ಮಾಹಿತಿ ಲಭಿಸುತ್ತದೆ) ಉಂಗುರಸ್ನಾಯು ಪುನಃ ಸಂಕೋಚಿಸಿ ಆಹಾರದ ಕರುಳಿನ ಪ್ರವೇಶಕ್ಕೆ ತಡೆಹಾಕಿಬಿಡುತ್ತದೆ. ಸರಿಯಾದ ಹದಕ್ಕೆ ಬಂದ ದ್ರಾವಣ ಮಾತ್ರ ಈ ರೀತಿ ನಿಯಂತ್ರಿತವಾಗಿ ಕರುಳಿನೊಳಕ್ಕೆ ಪ್ರವೇಶ ಮಾಡುತ್ತಿರುವ ಕಾರಣ ಜಠರದಲ್ಲಿ ತಂಗಿದ್ದ ವಸ್ತುವೆಲ್ಲವೂ ಕರುಳಿಗೆ ಪ್ರವೇಶ ಮಾಡಲು ಸುಮಾರು ಐದರಿಂದ ಆರು ಗಂಟೆಗಳು ಬೇಕಾಗುತ್ತವೆ.

ಜಠರದಲ್ಲಿ ಯಾಂತ್ರಿಕ ರೀತಿಯ ಈ ಪಚನಕ್ರಿಯೆ ಜರಗುತ್ತಿರುವಂತೆಯೇ ಜಠರರಸದ ಉತ್ಪತ್ತಿಯೂ ಆಗುತ್ತಿದ್ದು ಸಹಕಾಲದಲ್ಲಿಯೇ ಅಲ್ಲಿ ರಾಸಾಯನಿಕ ಪಚನವೂ ಜರಗುತ್ತದೆ. ಆಹಾರ ಜಠರದಲ್ಲಿ ಶೇಖರವಾಗುತ್ತ ಅದನ್ನು ಹಿಗ್ಗಿಸುವುದರಿಂದ ಅಲ್ಲಿ ನರಪ್ರಚೋದನೆ ಆಗಿ ಅನೈಚ್ಛಿಕ ಪ್ರತಿಕ್ರಿಯಾ ವಿಧಾನದಿಂದ ಜಠರದ ಲೋಳೆಪೊರೆಯಲ್ಲಿರುವ ಗ್ರಂಥಿಗಳು ಜಠರರಸವನ್ನು ಸ್ರವಿಸಲು ಪ್ರಾರಂಭಿಸುತ್ತವೆ. ಜಠರಕ್ಕೆ ಆಹಾರ ಪ್ರವೇಶ ಮಾಡದೆ ಅದು ಬಾಯಿಯಲ್ಲಿ ಉಳಿದಿದ್ದರೂ ಅಥವಾ ಪ್ರತಿತುತ್ತನ್ನೂ ವ್ಯಕ್ತಿ ಉಗುಳಿಬಿಡುತ್ತಿದ್ದರೂ ಸ್ವಲ್ಪವಾಗಿಯಾದರೂ ಜಠರರಸ ಉತ್ಪತ್ತಿ ಆಗುವುದು ನಿಜ. ಆಹಾರದ ರುಚಿ ಪರಿಮಳ ನೋಟಗಳು ನರಗಳ ಮೂಲಕ ಜಠರರಸವನ್ನು ಉತ್ಪಾದಿಸಬಲ್ಲವು ಜೊಲ್ನನ್ನು ಉತ್ಪಾದಿಸುವಂತೆಯೇ. ಹೀಗೆ ವಿವಿಧ ರೀತಿಗಳಲ್ಲಿ ನರಪ್ರಚೋದನೆ ಒದಗಿ ಅದರಿಂದ ನಿಯಂತ್ರಿತವಾದ ಜಠರಸ್ರಾವ ಆಹಾರ ಸೇವಿಸಿದ ಮೇಲೆ ಸುಮಾರು ಒಂದು ಗಂಟೆಯ ಕಾಲ ಕಂಡು ಬರುತ್ತದೆ. ಹೀಗೆ ಸ್ರವಿಸಲ್ಪಟ್ಟ ಜಠರರಸ ರಾಸಾಯನಿಕ ಪಚನವನ್ನು ಪ್ರಾರಂಭಿಸಿ ಆಹಾರದ ಜಟಿಲ ರಚನೆಯ ಘಟಕಗಳನ್ನು ಛಿದ್ರಿಸಿ ಇನ್ನೂ ಸರಳ ರಚನೆಯ ಘಟಕಗಳಾಗಿ ಮಾರ್ಪಡಿಸುತ್ತದೆ. ಬಹುಶಃ ಈ ಘಟಕಗಳು ಇಲ್ಲವೇ ಸ್ವಯಂ ಆಹಾರ ವಸ್ತುವೇ ಜಠರದ ಲೋಳೆಪೊರೆಯ ಕೋಶಗಳ ಮೇಲೆ ಪ್ರಭಾವ ಬೀರಿ ಅವುಗಳಲ್ಲಿ ಗ್ಯಾಸ್ಟ್ರಿನ್ ಎಂಬ ಹಾರ್ಮೋನ್ ಉತ್ಪತ್ತಿ ಆಗುವಂತೆ ಮಾಡುತ್ತವೆ. ಇದು ಜಠರದಲ್ಲಿ ರಕ್ತಗತವಾಗಿ ಹೃದಯಕ್ಕೆ ಬಂದು ಸೇರಿ ರಕ್ತಪರಿಚಲನೆಯ ಮೂಲಕ ದೇಹದ ಎಲ್ಲೆಡೆಗೂ ಸಾಗುತ್ತದೆ. ಆದರೆ ಇದಕ್ಕೆ ಜಠರದ ಲೋಳೆಪೊರೆಯಲ್ಲಿರುವ ಸೂಕ್ಷ್ಮ ಗ್ರಂಥಿಗಳ ವಿನಾ ದೇಹದ ಬೇರೆ ಭಾಗ ಯಾವುದೂ ಪ್ರತಿಕ್ರಿಯೆ ತೋರಿಸುವುದಿಲ್ಲ. ಜಠರ ಗ್ರಂಥಿಗಳು ಮಾತ್ರ ತೀವ್ರವಾಗಿ ಉದ್ರೇಕಿಸಲ್ಪಟ್ಟು ರಸವನ್ನು ಹೇರಳವಾಗಿ ಸ್ರವಿಸುತ್ತವೆ. ಹೀಗಾಗಿ ಜಠರದಲ್ಲಿ ಜೀರ್ಣಕ್ರಿಯೆ ನಡೆಯುತ್ತಿರುವಷ್ಟು ಕಾಲವೂ ಜಠರರಸ ಉತ್ಪಾದನೆ ಆಗುತ್ತಿರುವಂತೆ ಹಾರ್ಮೋನಿನಿಂದ ನಿಯಂತ್ರಿತವಾಗಿದೆ. ಗ್ಯಾಸ್ಟ್ರಿನ್ ಅಲ್ಲದೆ ಎಂಟೆರೋಗ್ಯಾಸ್ಟ್ರೋನ್ ಎಂಬ ಹಾರ್ಮೋನೂ ಜಠರದ ಲೋಳೆಪೊರೆಯಿಂದ ಉತ್ಪತ್ತಿ ಆಗುವುದು ತಿಳಿದಿದೆ. ಆಹಾರದಲ್ಲಿ ಮೇದಸ್ಸಿನ ಅಂಶ ಹೆಚ್ಚಾಗಿದ್ದಾಗ ಈ ಹಾರ್ಮೋನಿನ ಉತ್ಪತ್ತಿ ಪ್ರಚೋದಿತವಾಗುತ್ತದೆಂದು ತಿಳಿದಿದೆ. ಎಂಟೆರೋಗ್ಯಾಸ್ಟ್ರೋನ್ ಕೂಡ ಜಠರದ ಮೇಲೆ ಮಾತ್ರವೇ ಪ್ರಭಾವ ಉಳ್ಳದ್ದಾಗಿದೆ. ಎಂಟೆರೋಗ್ಯಾಸ್ಟ್ರೋನಿನಿಂದ ಜಠರರಸದ ಉತ್ಪತ್ತಿ, ಅದರಲ್ಲೂ ಹೈಡ್ರೋಕ್ಲೋರಿಕ್ ಆಮ್ಲಘಟಕದ ಉತ್ಪತ್ತಿ, ತಗ್ಗುವುದು ತಿಳಿದಿದೆ. ಅಲ್ಲದೆ ಇದು ಜಠರದ ಸ್ನಾಯುಗಳ ಚಟುವಟಿಕೆಯನ್ನು ತಗ್ಗಿಸುತ್ತದೆ. ಆದ್ದರಿಂದಲೇ ಮೇದಸ್ಸಿನ ಅಂಶ ಹೆಚ್ಚಾಗಿರುವ ಆಹಾರ ಮಾಮೂಲಿಗಿಂತ ಹೆಚ್ಚು ಕಾಲ ಜಠರದಲ್ಲಿ ತಂಗುವಂತಿದೆ. ಇದರ ಫಲವಾಗಿ ಅಂಥ ಆಹಾರ ಸೇವನೆಯಿಂದ ಬಹುಕಾಲ ಹೊಟ್ಟೆ ಭರ್ತಿ ಆಗಿರುವಂತೆ ಅನುಭವ ಆಗುತಲ್ಲದೆ ಪುನಃ ಹೊಟ್ಟೆ ಹಸಿವಾಗುವುದೂ ತಡವಾಗಿ ಕಂಡು ಬರುತ್ತದೆ.

ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಪೆಪ್ಸಿನ್ ಎಂಬ ಕಿಣ್ವ ಪ್ರಧಾನ ಘಟಕಗಳು. ಇವೆರಡೂ ಒಟ್ಟಾಗಿ ಆಹಾರದ ಸಸಾರಜನಕದ ಅಂಶದ ಮೇಲೆ ವರ್ತಿಸಿ ಅದರ ಬಹು ಜಟಿಲವಾದ ಬೃಹದಣುಗಳನ್ನು ವಿಭಜಿಸಿ ಸ್ವಲ್ಪ ಸಣ್ಣದಾದ ಅಣುಗಳಾಗಿ ಮಾಡುತ್ತವೆ. ಪ್ರಧಾನವಾಗಿ ಹಾಲು ಆಹಾರವಾಗಿರುವ ಮಕ್ಕಳಲ್ಲಿ ಕುಡಿದಹಾಲು ಜಠರದಲ್ಲಿ ಗರಣೆ ಕಟ್ಟಿಮೊಸರಾಗುತ್ತದೆ. ಇದರಿಂದ ಅದು ಕರುಳಿಗೆ ಕೂಡಲೇ ಸಾಗಿಹೋಗದೆ ತಕ್ಕಷ್ಟು ಕಾಲ ಜಠರದಲ್ಲಿ ತಂಗಿರುವಂತಾಗಿ ಅಲ್ಲಿಯ ಪಚನಲಾಭ ಹಾಲಿಗೆ ದೊರೆಯುವಂತಾಗಿದೆ. ಹಾಲನ್ನು ಗರಣೆ ಕಟ್ಟಿಸುವ ಕಾರ್ಯ ಆ ವಯಸ್ಸಿನ ವ್ಯಕ್ತಿಯ ಜಠರರಸದಲ್ಲಿರುವ ರೆನ್ನಿನ್ ಎಂಬ ಇನ್ನೊಂದು ಕಿಣ್ವದ ಕ್ರಿಯೆ ಎಂದು ಹೇಳಲಾಗಿದೆ. ರೆನ್ನಿನ್ ಇಲ್ಲದ್ದಿದ್ದರೂ ಪೆಪ್ಸಿನ್ನೇ ಹಾಲನ್ನು ಮೊಸರು ಮಾಡುತ್ತದೆ ಎಂದೂ ಅಭಿಪ್ರಾಯವಿದೆ.

ಒಟ್ಟಿನಲ್ಲಿ ಆಹಾರವಸ್ತು ಜಠರವನ್ನು ಬಿಡುವಷ್ಟರಲ್ಲಿ ಜರುಗಿರುವ ಪಚನ ಇಷ್ಟು : ಚರ್ವಣದಿಂದ ಬಾಯಿಯಲ್ಲಿ ಪ್ರಾರಂಭವಾದ ಯಾಂತ್ರಿಕ ಪಚನ ಜಠರದಲ್ಲಿ ಕೊನೆಗೊಂಡು ಆಹಾರದ ಘನ ಘಟಕಗಳೆಲ್ಲವೂ ಚೆನ್ನಾಗಿ ಅರೆಯಲ್ಪಟ್ಟು ಜೀರ್ಣರಸಗಳೊಡನೆ ಮಿಲನವಾಗಿ ಕಲಿಲ್ ದ್ರಾವಣವಾಗಿ ಮಾರ್ಪಡುವುದು ಮತ್ತು ರಾಸಾಯನಿಕ ಪಚನ ಪ್ರಾರಂಭವಾಗಿ ಭಾಗಶಃ ಮುಂದುವರಿದಿರುವುದು. ನಿಜವಾಗಿಯೂ ಇಲ್ಲಿಯ ತನಕ ಜರುಗಿರುವ ರಾಸಾಯನಿಕಕ್ರಿಯೆ ಭಾಗಶಃ ಮಾತ್ರ. ಏಕೆಂದರೆ ಬಾಯಿಯಲ್ಲಿ ಪಿಷ್ಟದ ರಾಸಾಯನಿಕ ಪಚನಪ್ರಾರಂಭವಾದರೂ ಕಾಲಾವಕಾಶವಿಲ್ಲದೆ ಪೂರ್ಣವಾಗುವುದಿಲ್ಲ. ಸಸಾರಜನಕ ಮೇದಸ್ಸು ಹಾಗೂ ಸಕ್ಕರೆ ಘಟಕಗಳು ಹಾಗೆಯೇ ಉಳಿದುಕೊಂಡಿರುತ್ತವೆ. ಜಠರದಲ್ಲಿ ಸಸಾರಜನಕ ಘಟಕ ಮಾತ್ರ ಸ್ವಲ್ಪಮಟ್ಟಿಗೆ ಪಚನವಾಗುತ್ತದೆ. ಕಬ್ಬಿನ ಸಕ್ಕರೆಯೂ ಬಹುಶಃ ಭಾಗಶಃ ಪಚನವಾಗಿರಬಹುದು. ಆದರೆ ಪಿಷ್ಟ ಮತ್ತು ಮೇದಸ್ಸು ರೂಪಕ ಘಟಕಗಳು ಹಾಗೆಯೇ ಇರುತ್ತವೆ. ಅಂದರೆ ಆಹಾರ ಯಾಂತ್ರಿಕವಾಗಿ ಪೂರ್ಣ ಮತ್ತು ರಾಸಾಯನಿಕವಾಗಿ ಭಾಗಶಃ ಮಾತ್ರ ಪಚನವಾಗಿದ್ದು ಹಾಲಿನಂತೆ ಕಾಣುವ ದ್ರವರೂಪ ತಾಳಿರುತ್ತದೆ. ಇಂಥ ಆಹಾರವಸ್ತು ಮುಂದೆ ಕರುಳನ್ನು ಪ್ರವೇಶಿಸುತ್ತದೆ.

ಸಣ್ಣ ಕರುಳಿನಲ್ಲಿ ಮುಖ್ಯವಾದ ಪಚನವಿಧಾನ ರಾಸಾಯನಿಕ ಎಂದು ಹೇಳಿದೆ. ಈಗಾಗಲೇ ಭಾಗಶಃ ರಾಸಾಯನಿಕ ಪಚನಗೊಂಡ ಆಹಾರವಸ್ತು ಸಣ್ಣ ಕರುಳಿನಲ್ಲಿ ಪೂರ್ಣವಾಗಿ ಪಚನವಾಗುತ್ತದೆ. ಸಣ್ಣ ಕರುಳಿನ ಲೋಳೆಪೊರೆಯಿಂದ ಆ ವೇಳೆ ಉತ್ಪತ್ತಿ ಆಗುವ ಕರುಳುರಸ, ಹಾಗೆಯೇ ಮೇದೋಜೀರಕಾಂಗದಿಂದ ಉತ್ಪತ್ತಿ ಆಗಿ ನಾಳದ ಮೂಲಕ ಕರುಳಿನೊಳಕ್ಕೆ ಹರಿದು ಬರುವ ಮೇದೋಜೀರಕ ರಸ ಮತ್ತು ಪಿತ್ತಕೋಶದಲ್ಲಿ ಶೇಖರವಾಗಿದ್ದು ಪ್ರಸಕ್ತ ಕಾಲದಲ್ಲಿ ಪಿತ್ತರಸನಾಳದ ಮೂಲಕ ಕರುಳಿನೊಳಕ್ಕೆ ಹರಿದು ಬರುವ ಪಿತ್ತರಸ - ಈ ಮೂರು ಜೀರ್ಣರಸಗಳ ಮಿಶ್ರಣ ಆಹಾರ ರಾಸಾಯನಿಕವಾಗಿ ಪೂರ್ಣ ಪಚನಗೊಳ್ಳುವುದಕ್ಕೆ ಕಾರಣ. ಇವುಗಳ ಪೈಕಿ ಅತಿ ಪ್ರಬಲವಾದದ್ದೆಂದರೆ ಮೇದೋಜೀರಕರಸ. ಇದರಲ್ಲಿ ಸಸಾರಜನಕ ಪಿಷ್ಟ ಮತ್ತು ಮೇದಸ್ಸುಗಳೆಲ್ಲವನ್ನೂ ಜೀರ್ಣಿಸುವ, ಅಂದರೆ ರಾಸಾಯನಿಕವಾಗಿ ವಿಭಜಿಸುವ, ಕಿಣ್ವಗಳು ಅನೇಕ ಇವೆ. ಜಠರರಸದಿಂದ ಭಾಗಶಃ ಪಚನಗೊಂಡ ಸಸಾರಜನಕ ವಸ್ತುಗಳ ವಿಭಜನೆ ಮುಂದುವರಿದು ಅವು ಪಾಲಿಪೆಪ್ಟೈಡುಗಳೆಂಬ ರಾಸಾಯನಿಕಗಳಾಗಿ ಮಾರ್ಪಡುತ್ತವೆ. ಆಹಾರದಲ್ಲಿರುವ ಸಸಾರಜನಕಗಳ ಬೃಹದಣುಗಳಿಗೆ ಹೋಲಿಸಿದರೆ ಪಾಲಿಪೆಪ್ಟೈಡುಗಳ ಬೃಹದಣುಗಳು ಬಲು ಚಿಕ್ಕವು. ಸಸಾರಜನಕ ವಸ್ತುಗಳು ಪಾಲಿಪೆಪ್ಟೈಡುಗಳಾಗುವ ಪರಿವರ್ತನೆಯಲ್ಲಿ ಮೇದೋಜೀರಕ ರಸದ ಕೈಮೋಟ್ರಿಪ್ಸಿನ್ ಮತ್ತು ಟ್ರಿಪ್ಸಿನ್ ಎಂಬ ಕಿಣ್ವಗಳು ಭಾಗವಹಿಸುತ್ತವೆ. ಜೊಲ್ಲಿನಿಂದ ಭಾಗಶಃ ಪಚನಗೊಂಡಿರಬಹುದಾದ ಪಿಷ್ಟ ಪೂರ್ಣವಾಗಿ ಮೇದೋಜೀರಕರಸದ ಅಮೈಲೇಸ್ ಎಂಬ ಕಿಣ್ವದಿಂದ ವಿಭಜಿಸಲ್ಪಟ್ಟು ಮಾಲ್ಟೋಸ್ ಆಗಿ ಪರಿವರ್ತಿತವಾಗುತ್ತದೆ. ಇವೆರಡು ಪಚನಗಳಿಗಿಂತ ಮುಖ್ಯವಾಗಿ ಮೇದೋಜೀರಕರಸ ಅದರ ಹೆಸರೇ ಹೇಳುವಂತೆ ಮೇದಸ್ಸನ್ನು ಜೀರ್ಣಿಸುತ್ತದೆ. ಬಾಯಿಯಲ್ಲಾಗಲಿ ಜಠರದಲ್ಲಾಗಲಿ ಜೀರ್ಣವೇ ಆಗಲಾರದ ಮೇದಸು ಈ ರಸದಲ್ಲಿರುವ ಲೈಪೇಸ್ ಎಂಬ ಕಿಣ್ವದಿಂದ ಗ್ಲಿಸರಿನ್ ಮತ್ತು ವಿವಿಧ ಮೇದೋಆಮ್ಲಗಳಾಗಿ ವಿಭಜಿಸಲ್ಪಡುತ್ತದೆ. ಜಠರರಸದಲ್ಲೂ ಲೇಪೇಸ್ ಇದೆ ಎಂದು ಹೇಳಲಾದರೂ ಆ ರಸದ ಅತ್ಯಾಮ್ಲತೆಯಿಂದಾಗಿ ಲೈಪೇಸ್ ಕ್ರಿಯಾಶೀಲವಾಗಲು ಸಾಧ್ಯವಾಗದ್ದರಿಂದ ಮೇದಸ್ಸಿನ ಅಂಶ ಜಠರದಲ್ಲಿ ಸ್ವಲ್ಪವೂ ಪಚನವಾಗದೆ ಕರುಳಿಗೆ ಬರುತ್ತದೆ. ಮೇದಸ್ಸಿನ ಪಚನಕ್ಕೆ ಕಾರಣವಾದ ಕಿಣ್ವ ಮೇದೋಜೀರಕ ರಸದ ಲೈಪೇಸ್ ಒಂದೇ ಎಂದು ಧಾರಾಳವಾಗಿ ಹೇಳಬಹುದು. ಮೇದೋಜೀರಕರಸದಲ್ಲಿ ಇರುವ ಈ ವಿವಿಧ ಕಿಣ್ವಗಳು ಗ್ರ್ರಂಥಿಯಿಂದ ಸ್ರವಿಸಲ್ಪಟ್ಟ ರೂಪದಲ್ಲಿ ಜಡವಾಗಿದ್ದು ಆಹಾರದ ಯಾವ ಘಟಕವನ್ನೂ (ಪ್ರಮುಖವಾಗಿ ಸಸಾರಜನಕ ಘಟಕವನ್ನು ಈ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳುವುದು ವಾಡಿಕೆ) ರಾಸಾಯನಿಕ ವಿಭಜನೆ ಮಾಡಲಾರದಂತಿರುತ್ತದೆ. ಆದರೆ ಈ ರಸ ಕರುಳು ರಸದೊಡನೆ ಮಿಶ್ರವಾದಾಗ ಕರುಳು ರಸದಲ್ಲಿರುವ ಎಂಟೆರೋ ಕೈನೇಸ್ ಎಂಬ ಕಿಣ್ವ ಮೇದೋಜೀರಕರಸದ ಕಿಣ್ವಗಳನ್ನು ಚುರುಕುಗೊಳಿಸಿ ಪಚನ ಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡುತ್ತದೆ. ಅಂದರೆ ಮೇದೋಜೀರಕರಸದ ಪ್ರಾಬಲ್ಯ ಅದು ಕರುಳು ರಸದೊಡನೆ ಮಿಶ್ರವಾದ ಮೇಲೆಯೇ ವ್ಯಕ್ತವಾಗತಕ್ಕದ್ದಾಗಿದೆ.

ಮೇದೋಜೀರಕರಸದ ಸಫಲ ಕ್ರಿಯೆಗೆ ಕರುಳುರಸ ಎಷ್ಟು ಅಗತ್ಯವೋ ಅಷ್ಟೇ ಅಗತ್ಯವಾದ್ದು ಪಿತ್ತರಸ ಕೂಡ. ಪಿತ್ತರಸದ ಅಗತ್ಯ ಕಂಡುಬರುವುದು ಮುಖ್ಯವಾಗಿ ಲೈಪೇಸಿನ ಕಾರ್ಯಕ್ರಮದಲ್ಲಿ. ಆಹಾರದ ಮೇದಸ್ಸಿನ ಘಟಕದ ಮೇಲೆ ಲೈಪೇಸ್ ವರ್ತಿಸುವ ಕ್ರಮದಲ್ಲಿ ಕೆಲವು ವಿಷಯಗಳು ಗಮನಾರ್ಹ. ಮೇದಸ್ಸಿನ ಬೃಹದಣುಗಳು ತಕ್ಕಮಟ್ಟಿಗೆ ದೊಡ್ಡವು ಮತ್ತು ನೀರಿನಲ್ಲಿ ಲೀನವಾಗದವು. ಜಠರದಲ್ಲಿ ದ್ರವವಾಗಿ ರೂಪಾಂತರಿಸಲ್ಪಟ್ಟು ಕರುಳಿಗೆ ಧಾವಿಸುವ ಆಹಾರವಸ್ತುವಿನಲ್ಲಿ ಮೇದಸ್ಸಿನ ಘಟಕಗಳು ಬಲು ಸಣ್ಣ ಬಿಂದುಗಳಾಗಿ ತೇಲುತ್ತಿರುವುದನ್ನು ಕಾಣಬಹುದು. ಕಣ್ಣಿಗೆ ಗೋಚರವಾಗುವಷ್ಟಾದರೂ ದೊಡ್ಡವಾದ ಇಂಥ ಕಣಗಳನ್ನು ಲೈಪೇಸ್ ಸುಲಭವಾಗಿ ರಾಸಾಯನಿಕ ವಿಭಜನೆಗಳಿಸಲಾರದು. ಇಂಥ ವಿಭಜಿತ ಕಣಗಳು 0.0005 - 0.001 ಮಿ.ಮೀ. ನಷ್ಟು ಗಾತ್ರದ ಅತಿ ಸಣ್ಣ ತುಂತುರುಗಳ ರೂಪದಲ್ಲಿ ಇರುವುದು ಆವಶ್ಯಕ. ಮೇದಸ್ಸು ಇಂಥ ಅತಿ ಸೂಕ್ಷ್ಮರೂಪದ ತುಂತುರುಗಳಾಗುವಂತೆ ಪಿತ್ತರಸದ ಲವಣಗಳು ಮಾಡಬಲ್ಲವು. ಆದ್ದರಿಂದ ಪಿತ್ತರಸ ಲೈಪೇಸಿನ ಕ್ರಿಯೆಗೆ ಆವಶ್ಯಕ. ಲೈಪೇಸಿನ ಕ್ರಿಯೆಯಿಂದ ಬಿಡುಗಡೆ ಆದ ಮೇದೋಆಮ್ಲಗಳು ಸಾಬೂನುಗಳಾಗಿ (ಸೋಪ್ಸ್) ಪರಿವರ್ತಿತವಾಗುತ್ತವೆ. ಇವೂ ಮೇದಸ್ಸನ್ನು ಲೈಪೇಸಿನ ಕ್ರಿಯೆಗೆ ತಕ್ಕಷ್ಟು ಸಣ್ಣವಾದ ತುಂತುರುಗಳಾಗಿ ಮಾಡುತ್ತವೆ. ಅಲ್ಲದೆ ಭಾಗಶಃ ರಾಸಾಯನಿಕ ವಿಭಜನೆಗೊಂಡ ಮೇದಸ್ಸಿನ ಬೃಹದಣು ಪಿತ್ತರಸ ಲವಣಗಳೊಡನೆ ಸೇರಿ ಸಂಯುಕ್ತ ರಾಸಾಯನಿಕವಾಗಿ ಅದೂ ಮೇದಸ್ಸಿನ ಕಣಗಳನ್ನು ಅತ್ಯಂತ ಕಿರಿಹನಿಗಳಾಗಿ ಮಾಡುತ್ತದೆ. ಅಂದರೆ ಲೈಪೇಸಿನಿಂದ ಮೇದಸ್ಸಿನ ಹನಿಗಳ ರಾಸಾಯನಿಕ ವಿಭಜನೆ ಆಗುವುದರಿಂದ ದೊರೆಯುವ ವಸ್ತುಗಳೇ ಮೇದಸ್ಸಿನ ಕಣಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ ಕಿರು ಹನಿಗಳಾಗಿ ಛಿದ್ರಿಸುತ್ತವೆ. ಮೇದಸ್ಸಿನ ಮೇಲೆ ಲೈಪೇಸ್ ವರ್ತಿಸಿ ಮೇದೋಆಮ್ಲ ಮತ್ತು ಗ್ಲಿಸರಿನನ್ನು ಬಿಡುಗಡೆ ಮಾಡಿದರೆ ಮೇದಸ್ಸಿನ ಪಚನ ಸಿದ್ಧಿಸಿತು ಎಂದು ಹೇಳುವಂತಿಲ್ಲ. ಏಕೆಂದರೆ ಮೇದೋಆಮ್ಲಗಳೂ ಮೇದಸ್ಸಿಗಿಂತ ಎಲ್ಲೊ ಸ್ವಲ್ಪಮಟ್ಟಿಗೆ ಸರಳವಾಗಿಸಲ್ಪಟ್ಟ ಬೃಹದಣುಗಳಿಂದಾದವು. ಅಲ್ಲದೆ ಇವೂ ಮೇದಸ್ಸಿನಂತೆಯೇ ನೀರಿನಲ್ಲಿ ವಿಲೀನವಾಗಲಾರದ ರಾಸಾಯನಿಕಗಳು. ನೀರಿನಲ್ಲಿ ವಿಲೀನಿವಾಗುವಂತಾದರೆ ಅವು ರಕ್ತಗತವಾಗಬಲ್ಲವು. ಆ ಘಟ್ಟ ತಲುಪಿದರೆ ಪಚನ ಪೂರ್ಣವಾದಂತೆ ಮತ್ತು ಸಿದ್ಧಿಸಿದಂತೆ. ಮೇದೋಆಮ್ಲಗಳನ್ನು ನೀರಿನಲ್ಲಿ ವಿಲೀನವಾಗುವಂತೆ ಮಾಡುವ ಪಸಾಧಕಗಳೂ ಪಿತ್ತರಸ ಲವಣಗಳೇ. ಮೇದಸ್ಸು ಪೂರ್ಣಪಚನವಾಗುವಂತೆ ಪಿತ್ತರಸ ಹೀಗೆ ವಿವಿಧ ರೀತಿಗಳಲ್ಲಿ ಅಗತ್ಯವಾಗಿವೆ. ಪಚನ ಕ್ರಿಯೆಯಲ್ಲಿ ಪಿತ್ತರಸದ ಪಾತ್ರ ಇದರ ಹೊರತಾಗಿ ಬೇರೆ ಏನೂ ಇರುವುದಿಲ್ಲ.

ಆಹಾರದ ಸಸಾರಜನಕ, ಪಿಷ್ಟ ಮತ್ತು ಮೇದಸ್ಸು ಘಟಕಗಳು ಜೊಲ್ಲು, ಜಠರ ರಸ, ಮೇದೋಜೀರಕರಸ ಮತ್ತು ಪಿತ್ತರಸಗಳಿಂದ ಮೇಲೆ ವಿವರಿಸಿರುವ ಘಟ್ಟದವರೆಗೆ ಪಚನವಾದ ಬಳಿಕಸ್ವತಃ ಕರುಳು ರಸದಲ್ಲಿರುವ ಕಿಣ್ವಗಳು ಪಚನಕಾರ್ಯವನ್ನು ಮುಂದುವರಿಸಿ ಮುಗಿಸುತ್ತವೆ. ಮೇದೋಜೀರಕರಸದಲ್ಲಿಯಂತೆಯೇ ಕರುಳುರಸದಲ್ಲಿ ಕೂಡ ಆಹಾರದ ಮೂರು ಪ್ರಮುಖ ಘಟಕಗಳ ಮೇಲೆಯೂ ವರ್ತಿಸುವ ವಿವಿಧ ಕಿಣ್ವಗಳು ಇವೆ. ಆದರೆ ಇವು ಅಷ್ಟು ಪ್ರಬಲ ಕಿಣ್ವಗಳೆಂದು ಹೇಳುವಂತಿಲ್ಲ. ಸಸಾರಜನಕಘಟಕದಿಂದ ಈಗಾಗಲೇ ಭಾಗಶಃ ಪಚನದಿಂದ ಬಿಡುಗಡೆ ಹೊಂದಿರುವ ಪಾಲಿಪೆಪ್ಟೈಡುಗಳ ಮೇಲೆ ಹಲವುಕಿಣ್ವಗಳು ಇವುಗಳ ಮಿಶ್ರಣಕ್ಕೆ ಒಟ್ಟಾಗಿ ಇರೆಪ್ಸಿನ್ ಎಂದು ಹೆಸರು- ವರ್ತಿಸಿ ಅವನ್ನೆಲ್ಲ ಸರಳ ರಚನೆಯ ಹಾಗೂ ನೀರಿನಲ್ಲಿ ವಿಲೀನವಾಗುವ ಅಮೈನೋ ಆಮ್ಲಗಳಾಗಿ ಪೂರ್ಣವಾಗಿ ವಿಭಜಿಸುತ್ತವೆ. ಪಿಷ್ಟದ ಪಚನದಿಂದ ಲಭಿಸಿಸುವ ಮಾಲ್ಟೋಸ್ ಸಕ್ಕರೆಯನ್ನು ಕರುಳು ರಸದ ಮಾಲ್ಟೇಸ್ ಎಂಬ ಕಿಣ್ವ ವಿಭಜಿಸಿ ಇನ್ನೂ ಸರಳವಾದ ಗ್ಲೂಕೋಸ್ ಸಕ್ಕರೆಯನ್ನಾಗಿಸುತ್ತದೆ. ಜಠರದಲ್ಲಿ ಕಬ್ಬಿನ ಸಕ್ಕರೆ ಅಲ್ಪಸ್ವಲ್ಪ ವಿಭಜಿಸಲ್ಪಟ್ಟು ಗ್ಲೂಕೋಸ್ ಮತ್ತು ಫ್ರಕೊಟೋಸ್ ಎಂಬ ಸರಳ ಸಕ್ಕರೆಗಳಾಗುತ್ತವೆಂಬ ಸಂಗತಿಯನ್ನು ಮೇಲೆ ಹೇಳಿದೆ. ಉಳಿದ ಕಬ್ಬಿನ ಸಕ್ಕರೆ ಕರುಳು ರಸದ ಸುಕ್ರೇಸ ಅಥವಾ ಇನ್ವರ್ಟೇಸ ಎಂಬ ಕಿಣ್ವದಿಂದ ಪೂರ್ಣವಾಗಿ ವಿಭಜಿತವಾಗಿ ಗ್ಲೂಕೋಸ್ ಮತ್ತು ಫ್ರಕ್ಟೋಸಾಗಿ ಪರಿವರ್ತಿತವಾಗುತ್ತದೆ. ಸೇವಿಸಿದ ಹಾಲಿನಲ್ಲಿರುವ ಲ್ಯಾಕ್ಟೋಸ್ ಎಂಬ ಸಕ್ಕರೆ ಇತರ ಜೀರ್ಣರಸಗಳ ಧಾಳಿಗೆ ಮಣಿಯದೆ ಕರುಳು ರಸದಲ್ಲಿರುವ ಲ್ಯಾಕ್ಟೇಸ್ ಎಂಬ ಕಿಣ್ವದಿಂದ ವಿಭಜನೆಗೊಂಡು ಗ್ಲೂಕೋಸ್ ಮತ್ತು ಗ್ಯಾಲಾಕ್ಟೋಸ್ ಎಂಬ ಸರಳ ರಚನೆಯ ಇನ್ನೊಂದು ಸಕ್ಕರೆಯಾಗಿ ಪರಿವರ್ತಿತವಾಗುತ್ತದೆ. ಕರುಳುರಸದಲ್ಲಿ ಸ್ವಲ್ಪ ಲೈಪೇಸ್ ಇದ್ದರೂ ಮೇದಸ್ಸಿನ ಅಂಶ ಮೇದೋಜೀರಕರಸ ಮತ್ತು ಪಿತ್ತರಸಗಳಿಂದ ಈಗಾಗಲೇ ಪೂರ್ಣವಾಗಿ ಪಚನವಾಗಿರುವುದದರಿಂದ ಅದಕ್ಕೆ ವಿಶೇಷ ಪ್ರಾಮುಖ್ಯ ಏನೂ ಇಲ್ಲ. ಈ ಪಚನಗಳಷ್ಟೇ ಅಲ್ಲದೆ ಆಹಾರದಲ್ಲಿ ಇರಬಹುದಾದ ಜೀವರಸದ (ಪ್ರೋಟೋ ಪ್ಲಾಸ್ಮ್) ಘಟಕಗಳಾದ ಮತ್ತು ಬಹು ಜಟಿಲ ರಚನೆಯ ರಾಸಾಯನಿಕಗಳಾದ ನ್ಯೂಕ್ಲಿಯಿಕ್ ಆಮ್ಲಗಳನ್ನು ನ್ಯೂಕ್ಲಿಯೇಸ್ ಎಂಬ ಕಿಣ್ವಗಳು ಪೂರ್ಣವಾಗಿ ವಿಭಜಿಸಿ ಸರಳರಚನೆಯ ರಾಸಾಯನಿಕಗಳಾಗಿ ಮಾರ್ಪಡಿಸುತ್ತವೆ.

ಹೀಗೆ ಕರುಳಿನಲ್ಲಿರುವ ಜೀರ್ಣರಸಮಿಶ್ರಣದಿಂದ ರಾಸಾಯನಿಕ ಪಚನ ಪೂರ್ಣಗೊಳ್ಳುತ್ತದೆ. ಬಾಯಿಯಲ್ಲಿ ಮತ್ತು ಜಠರದಲ್ಲಿ ಯಾಂತ್ರಿಕವಾಗಿ ಹಾಗೂ ಭಾಗಶಃ ರಾಸಾಯನಿಕವಾಗಿ ಪಚನವಾಗಿದ್ದರೆ ಕರುಳಿನಲ್ಲಿ ಪೂರ್ಣ ಪಚನ ಸಿದ್ಧಿಸುವುದು ಸುಲಭ. ಈ ಪೂರ್ವಪಚನ ಆಗದೇ ಇದ್ದರೆ ಕರುಳಿನಲ್ಲಿ ಸ್ವಲ್ಪಮಟ್ಟಿಗೆ ಪಚನವಾಗುತ್ತದೆ. ದ್ರವೀಕರಿಸಲ್ಪಟ್ಟ ಆಹಾರಪದಾರ್ಥ ಜಠರದಿಂದಕರುಳಿಗೆ ಹರಿದುಬಂದಾಗ ಕರುಳಿನ ಲೋಳೆಪೊರೆಯಲ್ಲಿರುವ ಅಸಂಖ್ಯಾತ ಸೂಕ್ಷ್ಮರೂಪಕ ಗ್ರಂಥಿಗಳಿಂದ ಕರುಳುರಸ ಸ್ರವಿಸಲ್ಪಡುತ್ತದೆ. ಭಾಗಶಃ ಜೀರ್ಣಗೊಂಡಿರುವ ಆಹಾರ ಘಟಕಗಳೇ ಈ ಸ್ರಾವಕ್ಕೆ ಕಾರಣ. ಇವು ಮುಂಗುರುಳಿನ ಕೋಶಗಳನ್ನು ಪ್ರಚೋದಿಸುವುದರಿಂದ ಎಂಟೆರೊಕ್ರೈನಿನ್ ಮತ್ತು ಡುಯೊಕ್ರೈನಿನ್ ಎಂಬ ಹಾರ್ಮೋನುಗಳು ಉತ್ಪತ್ತಿ ಆಗಿ ಅಲ್ಲೆ ರಕ್ತಗತವಾಗಿ ರಕ್ತಪರಿಚಲನೆಯಿಂದ ದೇಹದ ಎಲ್ಲೆಡೆಗೂ ಒಯ್ಯಲ್ಪಡುತ್ತವೆ. ಕರುಳು ಗ್ರಂಥಿಗಳ ಹೊರತಾಗಿ ಮಿಕ್ಕೆಡೆ ಏನೂ ಪ್ರಭಾವವಿಲ್ಲದ ಇವು ಕರುಳು ರಸ ಉತ್ಪತ್ತಿ ಆಗುತ್ತಿರುವಂತೆ ಪ್ರಚೋದಿಸುತ್ತವೆ. ಅಂದರೆ ಆಹಾರ ಕರುಳಿಗೆ ಬಂದಾಗ ಮತ್ತು ಕರುಳಿನಲ್ಲಿ ಇರುವಾಗ ಕರುಳುರಸ ಉತ್ಪತ್ತಿ ಆಗುತ್ತಿರುವಂತೆ ಏರ್ಪಟ್ಟಿರುವ ಕ್ರಮ ಇದು. ಕರುಳುರಸ ಸ್ರಾವದಲ್ಲಿ ಈ ರೀತಿಯ ಹಾರ್ಮೋನ್ ನಿಯಂತ್ರಣವೇ ಮುಖ್ಯ. ನರ ನಿಯಂತ್ರಣದಿಂದ ಕರುಳುರಸ ಉತ್ಪಾದಿತವಾಗುವುದು ಬಹುಶಃ ಅತ್ಯಲ್ಪ.

ಕರುಳಿಗೆ ಬಂದು ಸೇರುವ ಆಹಾರವಸ್ತುವಿನಲ್ಲಿ ಇರುವ ಮೇದಸ್ಸಿನ ಘಟಕಗಳು ಮುಂಗರುಳಿನ ಲೋಳೆಪೊರೆಯ ಕೋಶಗಳನ್ನು ಪ್ರಚೋದಿಸುವುದರಿಂದ ಕೋಲಿಸಿಸ್ಟೊಕೈನಿನ್ ಎಂಬ ಹಾರ್ಮೋನು ಉತ್ಪಾದಿತವಾಗುತ್ತದೆ. ಇದು ಪಿತ್ತಕೋಶದ ಮೇಲೆ ಮಾತ್ರ ಪ್ರಭಾವಉಳ್ಳ ಹಾರ್ಮೋನ್. ರಕ್ತಪರಿಚಲನಾಕ್ರಮದಿಂದ ಈ ಹಾರ್ಮೋನ್ ಪಿತ್ತಕೋಶವನ್ನು ತಲುಪಿದಾಗ ಪಿತ್ತಕೋಶ ಸಂಕೋಚಿಸುತ್ತದೆ. ಅದರಲ್ಲಿ ಸಾಂದ್ರೀಕರಿಸಲ್ಪಟ್ಟು ಶೇಖರವಾಗಿರುವ ಪಿತ್ತರಸ ನಾಳದ ಮೂಲಕ ಹರಿದು ಬಂದು ಮುಂಗರುಳನ್ನು ಸೇರುತ್ತದೆ. ಮೇದಸ್ಸು ಪಚನವಾಗಲು ಅಗತ್ಯವಾದ ಪಿತ್ತರಸ ಮೇದಸ್ಸು ಕರುಳಿನಲ್ಲಿ ಇದ್ದ ಕಾಲದಲ್ಲಿ ಮಾತ್ರ ಕರುಳಿಗೆ ಬಂದು ಸೇರುವ ಇಂಥ ನಿಯಂತ್ರಣವನ್ನು ಬಿಟ್ಟು ಕರುಳಿನಲ್ಲಿ ಪಿತ್ತರಸದ ಹಾಜರಿಗೆ ಬೇರೆ ಅಂದರೆ ನರಗಳ ಮೂಲಕ ನಿಯಂತ್ರಣ ಅಗಣನೀಯ.

ಇದಕ್ಕೆ ಭಿನ್ನವಾಗಿ ಮೇದೋಜೀರಕರಸದ ಸ್ರಾವ ಹಾರ್ಮೋನ್ ನಿಯಂತ್ರಣ ಮತ್ತು ನರನಿಯಂತ್ರಣ ಎರಡರಿಂದಲೂ ಜರಗುವ ಕ್ರಿಯೆ. ಆಹಾರ ಜಠರವನ್ನು ಪ್ರವೇಶಿಸಿದಾಗ ಜಠರದ ಚಟುವಟಿಕೆಗಳು ಪ್ರಾರಂಭವಾಗುವದರಿಂದ ಅಲ್ಲಿ ನರ ಪ್ರಚೋದನೆ ಆಗುತ್ತದೆ ಎಂದೂ ಆಹಾರವನ್ನು ಬಾಯಿಗೆ ಹಾಕಿಕೊಂಡು ಅಗಿಯುತ್ತ ರುಚಿಯನ್ನು ಗ್ರಹಿಸುತ್ತ ಇರುವುದರಿಂದಲೂ ಆಹಾರದ ನೋಟ ಕಂಪುಗಳಿಂದಲೂ ನರಪ್ರಚೋದನೆ ಉದ್ಭವಿಸುತ್ತದೆ ಎಂದೂ ಮೇಲೆ ಹೇಳಿದೆ. ಈ ಎಲ್ಲ ನರ ಪ್ರಚೋದನೆಗಳಿಂದ ಪ್ರಾರಂಭಿಸಿದ ಅನೈಚ್ಛಿಕ ಪ್ರತಿಕ್ರಿಯಾಮಾರ್ಗದ (ರಿಫ್ಲೆಕ್ಸ್‍ಪಾತ್‍ವೇ) ಮೂಲಕ ಮೇದೋಜೀರಕಾಂಗಕ್ಕೆ ಪ್ರೇರಣೆಗಳು ಒದಗಿ ಅದು ಕೂಡಲೇ ರಸವನ್ನು ಸ್ರವಿಸಿ ನಾಳದ ಮೂಲಕ ಮುಂಗರುಳಿಗೆ ಸಾಗಿಸಲು ಪ್ರಾರಂಭಿಸುತ್ತದೆ. ದ್ರವರೂಪತಾಳಿದ ಪದಾರ್ಥ ಜಠರದಿಂದ ಕರುಳಿಗೆ ಹರಿದು ಬರುವುದು ಸರಿಯಷ್ಟೆ. ಆ ದ್ರವದಲ್ಲಿ ಜಠರಸ ಮಿಶ್ರವಾಗಿರುವುದೂ ತತ್ಫಲವಾಗಿ ಅದು ತಕ್ಕಮಟ್ಟಿಗೆ ಆಮ್ಲ ಸ್ವಭಾವ ಉಳ್ಳದ್ದಾಗಿರುವುದೂ ವೇದ್ಯ. ಈ ಆಮ್ಲಘಟಕವೂ ಭಾಗಶಃ ಪಚನವಾದ ಸಸಾರಜನಕ ಘಟಕವೂ ಮುಂಗರುಳಿನ ಕೋಶಗಳ ಲೋಳೆಪೊರೆಯ ಮೇಲೆ ಪ್ರಭಾವ ಬೀರಿ ಅದು ಅನುಕ್ರಮವಾಗಿ ಸೆಕ್ರಿಟಿನ್ ಮತ್ತು ಪ್ಯಾಂಕ್ರಿಯೋಜೈಮಿನ್ ಎಂಬ ಹಾರ್ಮೋನುಗಳನ್ನು ವಿಶಿಷ್ಟವಾಗಿ ಉತ್ಪಾದಿಸುವಂತೆ ಪ್ರಚೋದಿಸತ್ತವೆ. ಈ ಹಾರ್ಮೋನುಗಳು ಮೇದೋಜೀರಕಾಂಗದ ಮೇಲೆ ಮಾತ್ರ ಪ್ರಭಾವ ಉಳ್ಳವು. ಆದ್ದರಿಂದ ಆಹಾರ ಕರುಳಿಗೆ ಬಂದ ಮೇಲೆ ಮಾತ್ರ ಮೇದೋಜೀರಕರಸ ಉತ್ಪತ್ತಿ ಆಗಿ ಕರುಳಿಗೆ ಹರಿದು ಬಂದು ಕರುಳು ರಸ ಪಿತ್ತರಸಗಳೊಡನೆ ಸೇರಿ ಅತ್ಯಂತ ಪ್ರಬಲ ಜೀರ್ಣರಸ ಮಿಶ್ರಣ ಲಭಿಸುವಂತೆ ಹಾರ್ಮೋನ್ ನಿಯಂತ್ರಣ ಏರ್ಪಟ್ಟಿದೆ.

ಮೇಲಿನ ಜೀರ್ಣರಸಮಿಶ್ರಣದಿಂದ ಆಹಾರ ಘಟಕಗಳ ಪಚನವಾಗಿ ಕರುಳಿನಲ್ಲಿ ಬಿಡುಗಡೆ ಆಗುತ್ತಿರುವ ಪೋಷಕಗಳು ಆಗಾಗಲೇ ಕರುಳಿನ ರಕ್ತನಾಳಗಳಿಂದ ಹೀರಲ್ಪಟ್ಟು ರಕ್ತವಾಗುತ್ತವೆ. ಪಚನ ಹಾಗೂ ರಕ್ತಗತವಾಗುವಿಕೆ ಎರಡೂ ಜೋಡಿಯಾಗಿಯೇ ಸಣ್ಣಕರುಳಿನ ಉದ್ದಕ್ಕೂ ಜರಗುವುವೆಂದು ಭಾವಿಸಬಹುದು. ಇದಕ್ಕಾಗಿ ಸಣ್ಣ ಕರುಳಿನಲ್ಲಿರುವ ಆಹಾರ ಮತ್ತು ಜೀರ್ಣರಸಗಳ ಮಿಶ್ರಣದ್ರವ ಕರುಳಿನ ಆದಿಯಿಂದ ಅಂತ್ಯದವರೆಗೂ ವ್ಯವಸ್ಥಿತ ರೀತಿಯಲ್ಲಿ ಸಾಗಿಸಲ್ಪಡುತ್ತದೆ. ಸುಮಾರು 6.5 ಮೀಟರುಗಳಷ್ಟಿರುವ ಈ ದೂರವನ್ನು ಕ್ರಮಿಸಲು ಹೆಚ್ಚು ಕಡಿಮೆ ಎರಡು ಗಂಟೆಗಳು ಬೇಕಾಗುತ್ತವೆ. ಸಾಗಣೆಗೆ ಮುಖ್ಯ ಕಾರಣ ಸಣ್ಣ ಕರುಳಿನಲ್ಲಿ ಕಾಣಬರುವ ಸರ್ಪಗತಿ ಚಲನೆ. ಸಣ್ಣ ಕರುಳಿನಲ್ಲಿ ಉದ್ದಕ್ಕೂ ಎಲ್ಲಿಯಾದರೂ ಪ್ರಾರಂಭವಾಗಬಹುದಾದ ಈ ಚಲನೆ ಒಂದೊಂದು ಸಲವೂ ಸುಮಾರು 10-20 ಸೆಂ.ಮೀ. ನಷ್ಟು ದೂರ ಕರುಳಿನ ಒಳಗಿರುವ ವಸ್ತುವನ್ನು ಸಾಗಿಸಬಲ್ಲದು. ಕರುಳಿನಲ್ಲಿ ಸರ್ಪಗತಿಚಲನೆ ಯಾವಾಗಲೂ ಆದಿಯಿಂದ ಅಂತ್ಯಮುಖವಾಗಿಯೇ ಸಾಗುತ್ತದೆ. ಈ ಚಲನೆ ತಲೆಕೆಳಗಾಗಿ ಆದಿಮುಖವಾಗಿ ಸಾಗದಂತಿರುವುದು ಸಣ್ಣಕರುಳಿನ ಸ್ನಾಯುಗಳ ಚಟುವಟಿಕೆ ನಿಯಂತ್ರಣ ವೈಶಿಷ್ಟ್ಯ. ಜೀರ್ಣನಾಳದುದ್ದಕ್ಕೂ ಅದರ ಎರಡೂ ಸ್ನಾಯುಪದರಗಳ ನಡುವೆ ನರಕೋಶಗಳ ಹಾಗೂ ಅವುಗಳ ಚಾಚುಗಳ ವಿಶಿಷ್ಟ ನರಜಾಲ ಉಂಟು. ಇದೇ ಮೇಲೆ ಹೇಳಿದಂತೆ ವ್ಯವಸ್ಥಿತ ರೀತಿಯಲ್ಲಿ ಸರ್ಪಗತಿಚಲನೆ ಉಂಟಾಗುವಂತೆ ನಿಯಂತ್ರಿಸುವುದಾಗಿದೆ. ಜೀರ್ಣನಾಳದ ಉದಕ್ಕೂ ಯಾವುದೇ ಭಾಗ ಆಹಾರ ವಸ್ತುವಿನಿಂದ ಹಿಗ್ಗಿಸಲ್ಪಟ್ಟಾಗಲೂ ಆ ಸ್ಥಳದಲ್ಲಿ ನರ ಪ್ರಚೋದನೆ ಉದ್ಭವಿಸುವುದು ಸಹಜ. ಈ ಪ್ರಚೋದನ ಮೇಲೆ ಹೇಳಿರುವ ನರಜಾಲದಲ್ಲಿ ಹಿಂದಕ್ಕೂ ಮುಂದಕ್ಕೂ ಪಸರಿಸುತ್ತದೆ. ಮುಂದೆ ಪಸರಿಸಿದ ಫಲವಾಗಿ ಅಲ್ಲಿಯ ಸ್ನಾಯುಗಳು ವ್ಯಾಕೋಚಿಸಿ ಜೀರ್ಣನಾಳದ ಆ ಭಾಗ ಸಡಿಲಗೊಂಡು ಸುಲಭವಾಗಿ ಹಿಗ್ಗುವಂತಾಗುವುದು. ಹಿಂದಕ್ಕೆ ಪಸರಿಸಿದ ಫಲವಾಗಿ ಅಲ್ಲಿಯ ಸ್ನಾಯುಗಳು ಸಂಕೋಚಿಸಿ ಮತ್ತು ಜೀರ್ಣನಾಳದ ಆ ಭಾಗದ ವ್ಯಾಸಕಿರಿದಾಗಿ ಒಳಗಿರುವ ವಸ್ತುವಿನ ಮೇಲೆ ಒತ್ತಡ ಉಂಟಾಗುವುದು. ಇದರಿಂದ ಆ ವಸ್ತು ಮುಂಚೆಯೇ ಸುಲಭವಾಗಿ ಹಿಗ್ಗುವಂತೆ ಮಾಡಲ್ಪಟ್ಟಿರುವ ಮುಂದಿನ ಭಾಗಕ್ಕೆ ನೂಕಲ್ಪಡುತ್ತದೆ. ನೈಸರ್ಗಿಕವಾಗಿ ಹೀಗೆ ಏರ್ಪಟ್ಟಿರುವ ನಿಯಂತ್ರಣದಿಂದ ಜೀರ್ಣನಾಳದಲ್ಲಿ ಆಹಾರ ಮುಂದಕ್ಕೆ ಸಾಗುತ್ತಿರುವುದೇ ಹೊರತು ಹಿಮ್ಮೊಗವಾಗಿ ಸಾಗುವಂತಿಲ್ಲ. ಸರ್ಪಗತಿಚಲನೆ ಸಣ್ಣ ಕರುಳಿನಲ್ಲಿ ಕಂಡುಬರುವಷ್ಟು ವ್ಯವಸ್ಥಿತ ರೀತಿಯಲ್ಲಿ ಮತ್ತೆಲ್ಲೂ ಕಂಡುಬರುವುದಿಲ್ಲ.

ಸರ್ಪಗತಿಚಲನೆಯ ಜೊತೆಗೆ ಸಣ್ಣಕರುಳಿನಲ್ಲಿ ಇನ್ನೆರಡು ರೀತಿಯ ಚಲನೆಗಳೂ ಕಂಡುಬರುತ್ತವೆ. ಒಂದು ರೀತಿಯ ಚಲನೆಯಲ್ಲಿ, ಕರುಳಿನೊಳಗೆ ಆಹಾರ ತುಂಬಿರುವ ಒಂದು ಭಾಗದಲ್ಲಿ, ಕ್ಲುಪ್ತಸ್ಥಳಗಳಲ್ಲಿ ಉಂಗುರದಂಥ ಸಂಪೀಡನಗಳು ಏಕಕಾಲದಲ್ಲಿ ಕಂಡುಬರುತ್ತವೆ. ಇದರಿಂದ ಆಹಾರವಸ್ತು ಅಷ್ಟೆ ಖಂಡಗಳಾಗಿ ವಿಭಾಗಿಸಲ್ಪಡುತ್ತದೆ. ಮರುಗಳಿಗೆಯಲ್ಲೆ ಪ್ರತಿಯೊಂದು ಖಂಡದ ಮಧ್ಯದಲ್ಲಿ ಸಂಪೀಡನೆಗಳು ಉಂಟಾಗಿ ಮೊದಲಿನ ಸಂಪಿಡನ ಸ್ಥಳಗಳು ವ್ಯಾಕೋಚಿಸುತ್ತವೆ. ಇದರಿಂದ ಒಳವಸ್ತುವಿನ ಪ್ರತಿಖಂಡವೂ ಇಬ್ಭಾಗವಾಗಿ ಕೂಡಲೆ ಒಂದು ಖಂಡದ ಅರ್ಧ, ಪಕ್ಕದ ಖಂಡದ ಅರ್ಧದೊಡನೆ ಸೇರಿ ಹೊಸ ಖಂಡವಾಗುತ್ತದೆ. ಇಂಥ ಹೊಸ ಖಂಡಗಳ ಮಧ್ಯೆ ಪುನಃ ಸಂಪೀಡನಗಳು ಉಂಟಾಗಿ ಮುಂಚಿನ ಸಂಪೀಡನ ಸ್ಥಳಗಳು ವ್ಯಾಕೋಚಿಸುತ್ತವೆ. ಹೀಗೆ ಪದೇ ಪದೇ ಆಗುತ್ತಿರುವುದರಿಂದ ಕರುಳಿನ ಭಾಗದಲ್ಲಿರುವ ವಸ್ತು ಚೆನ್ನಾಗಿ ಮಿಲನವಾಗುತ್ತದೆ. ಇದು ಖಂಡಕಾರ್ಕ ಚಲನೆ (ಸೆಗ್‍ಮೆಂಟೇಷನ್ ಮೂವ್‍ಮೆಂಟ್). ಇನ್ನೊಂದು ರೀತಿಯ ಚಲನೆಯಲ್ಲಿ ಕರುಳಿನ ಒಂದು ಗೊಳಸು (ಲೂಪ್) ಆ ಭಾಗದ ಸ್ನಾಯುಗಳ ವ್ಯಾಕೋಚನದಿಂದ ಲಂಬಿಸಿ ಪುನಃ ಸ್ನಾಯುಗಳ ಸಂಕೋಚನದಿಂದ ಗಿಡ್ಡವಾಗುತ್ತದೆ. ತತ್ಫಲವಾಗಿ ಆ ಗೊಳಸು ಲೋಲಕದಂತೆ ತೂಗಾಡುತ್ತದೆ ಮತ್ತು ಅದರ ಒಳಗಿರುವ ವಸ್ತುಗಳು ಚೆನ್ನಾಗಿ ಮಿಶ್ರಿತವಾಗುತ್ತವೆ. ಇದು ಲೋಲಕ ಚಲನೆ (ಪೆನ್‍ಡ್ಯುಲರ್ ಮೂವ್‍ಮೆಂಟ್). ಮೇಲಿನ ಎರಡು ಚಲನಗಳಿಂದಲೂ ಕರುಳಿನ ಒಳಗಿರುವ ವಸ್ತು ಮುಂದಕ್ಕೆ ಸಾಗಿಸಲ್ಪಡುವುದಿಲ್ಲ. ಬದಲು ಒಂದು ನಿರ್ದಿಷ್ಟ ಭಾಗದಲ್ಲಿರುವ ವಸ್ತು ಚೆನ್ನಾಗಿ ಮಿಶ್ರಿತವಾಗುತ್ತದೆ. ಇದರಿಂದ ಜೀರ್ಣರಸಗಳು ಆಹಾರವನ್ನು ಪಚನಮಾಡುವ ಕ್ರಿಯೆ ಚೆನ್ನಾಗಿ ಸಿದ್ಧಿಸುವಂತಿದೆ.

ಕರುಳಿನಲ್ಲಿ ರಾಸಾಯನಿಕ ಪಚನಕ್ರಮದಿಂದ ಬಿಡುಗಡೆ ಆದ ಅಮೈನೋ ಆಮ್ಲಗಳು, ಸರಳ ಸಕ್ಕರೆಗಳು, ಮೇದೋಆಮ್ಲಗಳು ಇತ್ಯಾದಿ ಪೋಷಕಗಳನ್ನು ಕರುಳಿನ ವಿಲ್ಲೈಗಳು ದ್ರಾವಣರೂಪದಲ್ಲಿ ಹೀರಿಕೊಂಡು ರಕ್ತಗತವಾಗಿಸುತ್ತವೆ ಎಂದು ಹೇಳಿದೆ. ಅತಿ ಸೂಕ್ಷ್ಮಾಕಾರದ ಬೆರಳುಗಳಂತಿರುವ ಈ ವಿಲ್ಲೈಗಳು ಪದೇಪದೇ ಲಂಬಿಸುತ್ತ ಗಿಡ್ಡವಾಗುತ್ತ ಪಿಚಕಾರಿಯ ಆಡುಬೆಣೆಯಂತೆ (ಪಿಸ್ಟನ್) ವರ್ತಿಸಿ ಪೋಷಕಗಳನ್ನು ಹೀರಿಕೊಂಡು ತಮ್ಮೊಳಗಿರುವ ರಕ್ತನಾಳಗಳೊಳಕ್ಕೆ ನೂಕುತ್ತವೆ. ವಿಲ್ಲೈಗಳ ಈ ಚಲನೆಯನ್ನು ನಿಯಂತ್ರಿಸುವುದು ವಿಲ್ಲಿಕೈನಿನ್ ಎಂಬ ಹಾರ್ಮೋನ. ಜೀರ್ಣನಾಳಗಳ ಮೇಲೆ ವರ್ತಿಸುವ ಅನೇಕ ಹಾರ್ಮೋನುಗಳಂತೆ ಇದು ಸಹ ಮುಂಗರುಳಿನ ಲೋಳೆಪೊರೆಯ ಕೋಶಗಳಲ್ಲಿ ಉತ್ಪತ್ತಿ ಆಗುತ್ತದೆ. ಪಚನಕ್ರಿಯೆಯಿಂದ ಮುಕ್ತಗೊಳಿಸಲ್ಪಟ್ಟ ಪೋಷಕಗಳೇ ಈ ಕೋಶಗಳನ್ನು ಪ್ರಚೋದಿಸಿ ವಿಲ್ಲಿಕೈನಿನ್ನು ಉತ್ಪಾದಿಸುವುದರಿಂದ ಅವುಗಳ ಹೀರಿಕೆ ಹಾಗೂ ರಕ್ತಗತವಾಗುವಿಕೆ ಸಿದ್ಧಿಸಿದೆ. ವಿಲ್ಲೈಗಳ ಚಲನೆ ಇಲ್ಲದಿದ್ದರೂ ಈ ಪೋಷಕಗಳು ಅವುಗಳಿಂದ ಹೀರಲ್ಪಡವುದೂ ರಕ್ತಗತವಾಗುವುದೂ ಉಂಟು.

ಸಣ್ಣ ಕರುಳಿನಲ್ಲಿ ಸಾಗುತ್ತಿರುವ ಆಹಾರವಸ್ತು ಕರುಳಿನ ಅಂತ್ಯಭಾಗಕ್ಕೆ ತಲಪುವಷ್ಟರಲ್ಲಿ ಅದರಲ್ಲಿರುವ ಪೋಷಕಗಳೆಲ್ಲ ದ್ರಾವಣರೂಪದಲ್ಲಿ ಹೀರಲ್ಪಡುವುದರಿಂದ ಆ ಭಾಗದಲ್ಲಿ ಉಳಿದಿರುವುದು ಸುಮಾರು 0.5 ಲೀಟರಿನಷ್ಟು ಪಚನವಾಗದ ಮತ್ತು ಚೂಷಿಸಲ್ಪಡದ ವಸ್ತುಗಳ ದ್ರಾವಣ ಮಾತ್ರ, ಸಣ್ಣ ಕರುಳಿನ ಅಂತ್ಯಭಾಗದ ಸರ್ಪಗತಿ ಚಲನೆಯಿಂದ ಇದು ದೊಡ್ಡಕರುಳಿಗೆ ಸಾಗುತ್ತದೆ. ಸಣ್ಣ ಕರುಳಿಗೂ ದೊಡ್ಡ ಕರುಳಿಗೂ ನಡುವೆ ಇರುವ ಉಂಗುರಸ್ನಾಯುವಿನ ಕ್ರಿಯೆಯಿಂದಾಗಿ ವಸ್ತು ಸಣ್ಣ ಕರುಳಿನಿಂದ ದೊಡ್ಡಕರುಳಿಗೆ ಸಾಗುತ್ತದೆಯೇ ವಿನಾ ವಿಪರ್ಯಾಯವಾಗಿ ಅಲ್ಲ. ದೊಡ್ಡಕರುಳಿನಲ್ಲಿ ಸರ್ಪಗತಿಚಲನೆ ಕಂಡುಬಂದರೂ ಅದು ಸಣ್ಣಕರುಳಿನಲ್ಲಿಯಂತೆ ಅಲ್ಲ. ದೊಡ್ಡಕರುಳಿನಲ್ಲಿ ಒಂದು ಸರ್ಪಗತಿ ಅಲೆಗೂ ಇನ್ನೊಂದಕ್ಕೂ ನಡುವೆ ಸುಮಾರು ಎರಡು ಮೂರು ಗಂಟೆಗಳ ಅವಧಿಯೇ ಇರಬಹದು. ಆದರೆ ಒಂದೊಂದು ಸಲ ಏರ್ಪಟ್ಟ ಚಲನೆಯೂ 30-60 ಸೆಂ.ಮೀ.ಗಳಷ್ಟು ದೂರ ಪಸರಿಸಿ ಒಳಗಿರುವ ವಸ್ತುವನ್ನು ಒಮ್ಮೆಗೇ ಅಷ್ಟು ದೂರ ಸಾಗಿಸುತ್ತದೆ. ಸಾಮಾನ್ಯವಾಗಿ ಆಹಾರ ಶೇಷ ದೊಡ್ಡಕರುಳನ್ನು ತಲುಪುವುದು ಆ ಆಹಾರವನ್ನು ಸೇವಿಸಿದ ಆರರಿಂದ ಎಂಟುಗಂಟೆಗಳ ತರುವಾಯ. ಈ ವೇಳೆಯಲ್ಲಿ ಇನ್ನೊಂದು ಸಲ ಆಹಾರ ಸೇವಿಸುವುದು ಸಾಮಾನ್ಯ. ಇದು ಜಠರವನ್ನು ಹೊಕ್ಕು ಅದನ್ನು ಹಿಗ್ಗಿಸುವುದರಿಂದ ನರಪ್ರಚೋದನೆ ಉಂಟಾಗುವುದೆಂಬುದನ್ನು ಹೇಳಿದೆ. ಇದರಿಂದ ಅನೈಚ್ಛಿಕ ಪ್ರತಿಕ್ರಿಯಾಕ್ರಮದ ಮೂಲಕ ದೊಡ್ಡಕರುಳಿನ ಸ್ನಾಯುಗಳಿಗೆ ಪ್ರಚೋದನೆ ಒದಗಿ ಅಲ್ಲಿ ಸರ್ಪಗತಿ ಚಲನೆ ಪ್ರಾರಂಭವಾಗುತ್ತದ. ಮುಂದೆ ಕೆಲವು ಗಂಟೆಗಳ ತರುವಾಯ ಇನ್ನೊಂದು ಸಲ ಆಹಾರ ಸೇವಿಸಿದಾಗ ಇದೇ ಕ್ರಮದಲ್ಲಿ ವಸ್ತು ದೊಡ್ಡಕರುಳಿನಲ್ಲಿ ಇನ್ನೂ ಅಷ್ಟು ದೂರ ಸಾಗುತ್ತದೆ. ಹೀಗೆ ನಿಧಾನವಾಗಿ ಸಾಗುತ್ತಿರುವಾಗ ಅದರ ದ್ರವಾಂಶ ಹೀರಲ್ಪಟ್ಟು ಅದು ಘನೀಭವಿಸುತ್ತ ಗಟ್ಟಿಯಾದ ಮಲವಸ್ತುವಾಗಿ ಪರಿಣಮಿಸಿ ದೊಡ್ಡಕರುಳಿನ ಅಂತ್ಯಭಾಗವಾದ ಮಲಕೋಶದಲ್ಲೊ ಅದರ ನೆಲೆಯಲ್ಲೊ ಶೇಖರಿಸಿರುತ್ತದೆ. ಮುಂದಿನ ಸರ್ಪಗತಿ ಚಲನೆಯ ಕಾಲ ಅನುಕೂಲವಾಗಿದ್ದರೆ ಮಲದ್ವಾರದ ಉಂಗುರಸ್ನಾಯು ಐಚ್ಛಿಕವಾಗಿ ಸಡಿಲಗೊಳಿಸಲ್ಪಟ್ಟು ಮಲವಿಸರ್ಜನೆಯಾಗುತ್ತದೆ. (ಎಸ್.ಆರ್.ಆರ್.)