ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಟವರ್ಧನ್, ಅಚ್ಯುತ ಸೀತಾರಾಮ

ವಿಕಿಸೋರ್ಸ್ದಿಂದ

ಪಟವರ್ಧನ್, ಅಚ್ಯುತ ಸೀತಾರಾಮ - ಸ್ವಾತಂತ್ರ್ಯ ಹೋರಾಟಗಾರ, ಕಾಂಗ್ರೆಸ್ ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯ, ತಿಯಾಸೊಫಿಸ್ಟ್, ಬಾಯಿ ಅಚ್ಯುತ ಪಟವರ್ಧನರೆಂದು ಪ್ರಸಿದ್ಧರಾಗಿದ್ದಾರೆ. ಇವರು ಅಹಮದ್ ನಗರದಲ್ಲಿ 1905ರ ಫೆಬ್ರವರಿ 5 ರಂದು ಜನಿಸಿದರು. ಇವರು ಚಿತ್ಪಾವನ ಬ್ರಾಹ್ಮಣ ವಂಶದವರು. ತಂದೆ ಹರಿ ಕೇಶವ ಪಟವರ್ಧನರು ಅಹಮದ್‍ನಗರದಲ್ಲಿ ಗಮನಾರ್ಹ ಸಂಪಾದನೆಯಿದ್ದ ನ್ಯಾಯವಾದಿಯಾಗಿದ್ದರು. ಅವರ ಆರು ಮಕ್ಕಳಲ್ಲಿ ಅಚ್ಯುತ ಪಟವರ್ಧನರು ಎರಡನೆಯವರು. ಇವರು ನಾಲ್ಕು ವರ್ಷದವರಾದಾಗ ನಿವೃತ್ತ ಶಿಕ್ಪ್ಷಣಾಧಿಕಾರಿ ಸೀತಾರಾಮ ಪಟವರ್ಧನರು ಇವರನ್ನು ದತ್ತು ತೆಗೆದುಕೊಂಡರು. ಇದರಿಂದಾಗಿ ಇವರ ಹೆಸರು ಅಚ್ಯುತ ಹರಿ ಪಟವರ್ಧನ ಎಂಬುದರಿಂದ ಅಚ್ಯುತ ಸೀತಾರಾಮ ಪಟವರ್ಧನ ಎಂದಾಯಿತು. ಸೀತಾರಾಮ ಪಟವರ್ಧನರು ಹೆಚ್ಚು ಆಸ್ತಿಯನ್ನು ಬಿಟ್ಟು 1917 ರಲ್ಲಿ ಕಾಲವಾದರು.

ಪಟವರ್ಧನರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಹಮದ್‍ನಗರದಲ್ಲಿ ಮುಗಿಸಿದರು. ವಾರಾಣಸಿಯ ಸೆಂಟ್ರಲ್ ಹಿಂದು ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಓದಿ ಪ್ರಥಮ ವರ್ಗದಲ್ಲಿ ಬಿ.ಎ. ಮತ್ತು ಎಂ.ಎ. ಪದವಿ ಗಳಿಸಿದರು. ಇವರ ಜನ್ಮದಾತ, ದತ್ತಕ ತಂದೆ-ಇಬ್ಬರೂ ತಿಯಾಸೊಫಿಸ್ಟರಾಗಿದ್ದರು. ಕಾಲೇಜಿನ ಪ್ರಾಚಾರ್ಯ ಡಾ. ಜಿ. ಎಸ್. ಅರುಂಡೇಲ್, ಡಾ. ಅನಿಬೆಸೆಮಟ್, ಪ್ರಾಧ್ಯಾಪಕ ತೇಲಂಗ್ ಮೊದಲಾದ ತಿಯಾಸೊಫಿಸ್ಟರ ಪ್ರಭಾವ ಇವರ ಮೇಲಾಯಿತು. ಇವರು ತಿಯಾಸೊಫಿಸ್ಟ್ ಜೆ. ಕೃಷ್ಣಮುರ್ತಿಯವರ ಅನುಯಾಯಿ. ಈ ಪ್ರಭಾವ ಇವರನ್ನು ವ್ಯಾಸಂಗ, ಚಿಂತನೆ ಮತ್ತು ವೈರಾಗ್ಯಪ್ರಿಯರಾಗಿ ಮಾಡಿತು. ಇವರು ಬ್ರಹ್ಮಚಾರಿಯಾಗಿ ಉಳಿಯುವುದಕ್ಕೆ ಬಹುಶಃ ಇದೇ ಕಾರಣವಾಯಿತು.

1932ರ ವರೆಗೆ ಇವರು ತಮ್ಮ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಆ ಕಾಲದಲ್ಲಿ ಇವರು ಮೂರು ಸಲ ಇಂಗ್ಲೆಂಡ್ ಮತ್ತು ಇತರ ಐರೋಪ್ಯ ದೇಶಗಳಲ್ಲಿ ಪ್ರವಾಸ ಮಾಡಿದರು. ಇವರಿಗೆ ಅನೇಕ ಸಮಾಜವಾದಿ ಮುಖಂಡರ ಮತ್ತು ವಿದ್ವಾಂಸರ ಪರಿಚಯವಾಯಿತು. ಸಾಮ್ಯವಾದ ಮತ್ತು ಸಮಾಜವಾದಗಳನ್ನು ಕುರಿತ ಸಾಹಿತ್ಯವನ್ನು ಇವರು ಅಭ್ಯಾಸಮಾಡಿದರು. ಇವರು ಅಧ್ಯಾಪಕ ವೃತ್ತಿಗೆ ರಾಜಿನಾಮೆಯಿತ್ತು 1932ರಲ್ಲಿ ಗಾಂಧಿಯವರ ಸತ್ಯಾಗ್ರಹ ಚಳವಳಿಯಲ್ಲಿ ಧುಮುಕಿದರು. ಮುಂದಿನ ಹತ್ತು ವರ್ಷಗಳಲ್ಲಿ ಅನೇಕ ಸಲ ಜೈಲುವಾಸ ಮಾಡಿದರು.

ತಮ್ಮ ಸಂಗಡಿಗರಾದ ಆಚಾರ್ಯ ನರೇಂದ್ರ ದೇವ, ಜಯಪ್ರಕಾಶ ನಾರಾಯಣ ಮೊದಲಾದವರಂತೆ ಕಾಂಗ್ರೆಸನ್ನು ಸಮಾಜವಾದ ದತ್ತ ಎಳೆಯುವುದೇ ಇವರು ಆ ಸಂಸ್ಥೆಯನ್ನು ಸೇರುವುದರ ಉದ್ದೇಶವಾಗಿತ್ತು. ಕಾರಾಗೃಹದಲ್ಲಿದ್ದಾಗ ಇವರೂ ಇವರಂತೆ ಯೋಚಿಸುತ್ತಿದ್ದ ಸಂಗಡಿಗರೂ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್ಸಿನಲ್ಲಿದ್ದಕೊಂಡು ಸಮಾಜವಾದದ ಉದ್ದೇಶಗಳನ್ನು ಸಾಧಿಸಲು ಇವರು ಯೋಚಿಸಿದರು. 1936ರಲ್ಲಿ ಇವರು ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯ ಸದಸ್ಯರಾದರು. ಆದರೆ ಸ್ವಲ್ಪ ಕಾಲದಲ್ಲಿ ಆ ಸದಸ್ಯತ್ವಕ್ಕೆ ರಾಜೀನಾಮೆಯಿತ್ತರು. 1935-1941ರಲ್ಲಿ ಇವರು ದೇಶದ ತರುಣರಿಗೆ ಸಮಾಜವಾದದ ತತ್ತ್ವಗಳನ್ನು ಮನದಟ್ಟು ಮಾಡಿಕೊಡುವುದಕ್ಕಾಗಿ ಶಿಬಿರಗಳನ್ನು ಏರ್ಪಡಿಸಿದರು.

1942ರಲ್ಲಿ ನಡೆದ ಆಂದೋಲನದಲ್ಲಿ ಪಟವರ್ಧನರು ಪ್ರಮುಖ ಪಾತ್ರ ವಹಿಸಿದರು. 1945-46ರಲ್ಲಿ ಇವರು ಭೂಗತರಾಗಿ ಸಾತಾರಾ ಜಿಲ್ಲೆಯಲ್ಲಿ ಆಂದೋಲನವನ್ನು ನಿರ್ದೇಶಿಸಿದರು. ಈ ಆಂದೋಲನ ನಡೆಯುತ್ತಿದ್ದ ಸುಮಾರು ಎರಡು ವರ್ಷಗಳ ಕಾಲದಲ್ಲಿ ಸಾತಾರಾ ಜಿಲ್ಲೆಯಲ್ಲಿ ಸರ್ಕಾರ ಅಸಹಾಯಕವಾಗಿ ನಿಷ್ಕ್ರಿಯವಾಗಿತ್ತು. ಪಟವರ್ಧನರು ಜನಪ್ರಿಯ ವೀರರಾದರು. ಅನೇಕರು ಇವರನ್ನು ಸಾತಾರೆಯ ಸಿಂಹ ಎಂದು ಕರೆದರು. ಆಂದೋಲನದ ಕಾಲದಲ್ಲಿ ಇವರು ಸಂಗಡಿಗರ ಬಟ್ಟೆ ಒಗೆಯುವುದು, ಅವರಿಗೆ ಅಡಿಗೆ ಮಾಡುವುದು ಮೊದಲಾದ ವೈಯಕ್ತಿಕ ಸೇವೆಗಳನ್ನೂ ಸಲ್ಲಿಸಿದರೆಂದು ಹೇಳಲಾಗಿದೆ.

ಕಾಂಗ್ರೆಸ್ ಸಮಾಜವಾದಿ ಪಕ್ಷದ ವಾರ್ಷಿಕ ಸಮ್ಮೇಳನಗಳು 1934 ರಿಂದಲೂ ಜರುಗುತ್ತಿದ್ದವು. ಆದರೆ ಕಾಂಗ್ರೆಸ್ಸಿನೊಳಗಿದ್ದುಕೊಂಡು ಸಮಾಜವಾದವನ್ನು ಸಾದಿಸುವುದು ಕಷ್ಟಸಾಧ್ಯವಾಗಿತ್ತು. ಆದ್ದರಿಂದ ಪಟವರ್ಧನ್ ಮತ್ತು ಸಂಗಡಿಗರು 1947ರಲ್ಲಿ ಕಾಂಗ್ರೆಸ್ಸಿನಿಂದ ಬೇರೆಯಾಗಿ ಭಾರತೀಯ ಸಮಾಜವಾದಿ ಪಕ್ಷ ಸ್ಥಾಪಿಸಿದರು. 1950ರಲ್ಲಿ ಇವರು ರಾಜಕೀಯದಿಂದ ನಿವೃತ್ತರಾಗಿ ಪುನಃ ಅಧ್ಯಾಪಕ ವೃತ್ತಿ ಕೈಗೊಂಡು 1960 ರವರಗೆ ಸೆಂಟ್ರಲ್ ಹಿಂದು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಅಂದಿನಿಂದ ಇವರು ಯಾವ ಬಾಹ್ಯ ಸಂಪರ್ಕವನ್ನೂ ಇಟ್ಟುಕೊಳ್ಳದೆ ಏಕಾಂತ ಜೀವನ ನಡೆಸುತ್ತಿದ್ದಾರೆ.

ಇವರದು ಮೊದಲಿನಿಂದಲೂ ಸರಳ ಜೀವನ. ಇವರ ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಭಾಷಣಗಳು ನೇರವೂ ತರ್ಕಬದ್ಧವೂ ಆಗಿದ್ದುವು. ಸ್ವತಂತ್ರ ಭಾರತದ ರಾಜಕೀಯದಲ್ಲಿ ಇವರ ಪ್ರಮುಖ ಪಾತ್ರವಹಿಸುವರೆಂದು ಊಹಿಸಲಾಗಿತ್ತು. ಆದರೆ ಹಾಗಾಗದಿರುವುದಕ್ಕೆ ಇವರ ತಿಯಾಸೊಫಿಸ್ಟ್ ಹಿನ್ನೆಲ ಮತ್ತು ಮನೋಧರ್ಮ ಕಾರಣವಾಗಿರಬೇಕು ಎನ್ನಲಾಗಿದೆ. ಅಶೋಕ ಮೆಹತಾರೊಂದಿಗೆ ಇವರು ಬರೆದ ಕಮ್ಯೂನಲ್ ಟ್ರೈಯಾಂಗಲ್ ಆಫ್ ಇಂಡಿಯ ಎಂಬುದು ಇವರ ಒಂದೇ ಒಂದು ಕೃತಿ. ಇದು 1942ರಲ್ಲಿ ಪ್ರಕಟವಾಯಿತು. (ಜಿ.ಕೆ.ಯು.)