ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಟ್ಟಿನತ್ತಾರ್
ಪಟ್ಟಿನತ್ತಾರ್ - ಕಾಲ ಸುಮಾರು 10ನೆಯ ಶತಮಾನ. ಈತ ಕಾವೇರಿಪೊಂಪಟ್ಟನಂ ಎಂಬಲ್ಲಿ ಹುಟ್ಟಿದ ಕಾರಣದಿಂದ ಪಟ್ಟಿನತ್ತಾರೆ, ಪಟ್ಟಿನತ್ ಪಿಳ್ಳೈಯಾರ್, ಪಟ್ಟಿನತ್ ಅಡಿಗಳ್ ಎಂಬ ಹೆಸರಿಂದ ಪ್ರಸಿದ್ಧನಾಗಿದ್ದಾನೆ. ಹುಟ್ಟು ಹೆಸರು ತಿರುವೆಣ್ಣಾಡರ್. ಈತ ದನವಣಿಜ ಕುಲದಲ್ಲಿ ಹುಟ್ಟಿದವ. ಈತನ ತಂದೆ ಶೀವನೇಸರ್, ತಾಯಿ ಜ್ಞಾನಕುಲೈಯಮ್ಮೆಯಾರ್ ಹಡಗಿನಲ್ಲಿ ದೂರದೇಶಗಳಿಗೆ ವ್ಯಾಪಾರಕ್ಕಾಗಿ ಹೋಗುತ್ತಿದ್ದ ಶ್ರೀಮಂತ ಶಿವಭಕ್ತ ಮನೆತನ ಈತನದು. ಶಿವಕಲೈಯಮ್ಮೈಯಾರ್ ಎಂಬಾಕೆಯನ್ನು ಮದುವೆಯಾಗಿ ಬಹುಕಾಲ ಮಕ್ಕಳಾಗದೆ ದುಃಖಗೊಂಡಿದ್ದ ಈತ ದೇವರನ್ನು ಪೂಜಿಸಿ ಬ್ರಾಹ್ಮಣನೊಬ್ಬನಿಂದ ಒಂದು ಮಗುವನ್ನು ಕ್ರಯಕ್ಕೆ ಪಡೆದುಕೊಂಡು, ಮರುದವಾಣನ್ ರೂಪದಲ್ಲಿ ಬಂದನೆಂದು ನಂಬಿಕೆ. ಮರುದವಣಾನ್ ಯೌವನಸ್ಥನಾಗಲು ತನ್ನ ಕುಲಪದ್ಧತಿಯಂತೆ ಹಣಸಂಪಾದನೆಗೆ ಪರದೆ ಶಕ್ಕೆ ಹೋಗಿ ಬಹಳವಾಗಿ ದ್ರವ್ಯ ಸಂಪಾದಿಸಿ ಹಿಂದಿರುಗಿ ಕಡೆಕಾಲದಲ್ಲಿ ತೂತಿಲ್ಲದ ಸೂಜಿಯೂ ನಮ್ಮೊಡನೆ ಬರಲಾರದು ಎಂದು ಓಲೆಯಲ್ಲಿ ಬರೆದು ಒಂದು ಪೆಟ್ಟಿಗೆಯಲ್ಲಿಟ್ಟು ಅದನ್ನು ತನ್ನ ತಂದೆಗೆ ಕೊಟ್ಟು ಮಾಯವಾದ. ತಂದೆಗೆ ಆ ಮಾತು ಗುರುವಾಕ್ಯವಾಯಿತು. ಇಹ ಲೋಕದ ಐಶ್ವರ್ಯ ನಶ್ವರವೆಂಬ ಸತ್ಯವನ್ನು ತಿಳಿದು ತನ್ನದನ್ನೆಲ್ಲ ದಾನ ಕೊಟ್ಟು ಗೃಹಸ್ಥ ಜೀವವನವನ್ನು ತೊರೆದು ತಾನು ಶ್ರೀಮಂತನಾಗಿ ಬಾಳಿದ ಊರಿನಲ್ಲಿಯೇ ಭಿಕ್ಷೆ ಬೇಡಿ ಜೀವನ ಸಾಗಿಸತೊಡಗಿದ. ಮುಂದೆ ಈತ ಎಲ್ಲ ಊರುಗಳಿಗೆ ಹೋಗಿ ಶಿವನನ್ನು ಪೂಜಿಸಿ ಉತ್ತಮ ಕವಿತೆಗಳನ್ನು ಹಾಡಿದ. ಭದ್ರಗಿರಿ ಎಂಬ ಅರಸನ ಶಿಷ್ಯನಾದನೆಂದೂ ಮುಂದೆ ಅನೇಕ ಪವಾಡಗಳನ್ನೂ ಮೆರೆದನೆಂದು ಕೊನೆಯ ಕಾಲದಲ್ಲಿ ಮದರಾಸಿಗೆ ಸಮೀಪವಾಗಿರುವ ತಿರುವೂಟ್ಟಿಯೂರ್ ಎಂಬಲ್ಲಿಗೆ ಹೋಗಿ ಅಲ್ಲಿ ದಂಡೆಯಲ್ಲಿ ಸಶರೀರನಾಗಿ ಮುಕ್ತಿ ಪಡೆದನೆಂದೂ ಹೇಳಲಾಗಿದೆ.
ಪಟ್ಟಿನತ್ತಾರ್ ಹಾಡಿದ ಕವಿತೆಗಳು ಕೋಯಿಲ್ ನಾನ್‍ಮಣಿಕೋವೈ, ತಿರುಕಳುವರಲ ಮುಮ್ಮಣಿ ಕೋವೈ, ತಿರು ಏಕಂಬಮೂಡೆಯಾರ್ ತಿರು ಅಂತಾದಿ ತಿರುವೊಟ್ರಿಯಾರ್, ಒರುಪಾ ಒರು ಪುಗದ್-ಎಂಬ ಐದು ಪುಸ್ತಕಗಳಿವೆ. ಇವು ಶೈವ ಸಂಪ್ರದಾಯದ ಮುರೈ (ಗ್ರಂಥ) ಯಲ್ಲಿ ಸಂಗ್ರಹಿತವಾಗಿವೆ. ಪಟ್ಟಿನತ್ತ್ ಪಿಳ್ಳೈಯಾರ್ ಪ್ರಬಂಧ ತಿರಟ್ಟ್ ಎಂಬ ಸಂಗ್ರಹದಲ್ಲಿ ಕೋಯಲ್ ತಿರು ಅಗವಲ್. ನೆಂಜೊದು ಪುಲಂಬಲ್ ಮೊದಲಾದ ಗ್ರಂಥಗಳೂ ಹಾಡುಗಳೂ ಇವೆ. ಸಿದ್ಧರ್ ಜ್ಞಾನಕೋವೈ ಎಂಬ ಪುಸ್ತಕದಲ್ಲಿ ಇವನನ್ನು ಒಬ್ಬ ಪ್ರಸಿದ್ಧನೆಂದು ಹೆಸರಿಸಿ ಈತನವೆಂದು ಪ್ರಚಲಿತವಿರುವ ಹಲವು ಹಾಡುಗಳನ್ನು ಕೊಟ್ಟಿದೆ. ಸಂಶೋಧಕರು ಪಟ್ಟಿನತ್ತಾರ್ ಪಿಳ್ಳೈಯಾರ್ ಪ್ರಬಂಧ ತಿರಟ್ ಮತ್ತು ಸಿದ್ಧರ್ ಜ್ಞಾನಕೋವೈಗಳಲ್ಲಿರುವ ಹಾಡುಗಳ ಭಾಷೆ, ವಿಷಯ, ಶೈಲಿಗಳನ್ನು ಪರಿಶೀಲಿಸಿ, ಈ ಗ್ರಂಥಗಳನ್ನು ಅನಂತರದ ಬೇರೊಬ್ಬ ಪಟ್ಟಿನತ್ತಾರ್ ರಚಿಸಿರಬೇಕೆಂದು ಅಭಿಪ್ರಾಯಪಡುತ್ತಾರೆ.
ಶಿವನ ಮಹಿಮೆಯನ್ನು, ಉನ್ನತಿಯನ್ನು, ಶಿವಭಕ್ತರ ಹಿರಿಮೆಯನ್ನು ಕುರಿತು ಈತ ಹಾಡಿದ್ದಾನೆ. ಗೃಹಸ್ಥಜೀವನದ ಮೇಲ್ಮೈಯನ್ನೂ ಸಂನ್ಯಾಸದ ವಿಶುದ್ಧತೆಯನ್ನೂ ಒತ್ತಿ ಹೇಳಿದ್ದಾನೆ. ಈತ ತಿರುಕ್ಕುರಳ್, ತೇವಾರಂ, ತಿರುವಾಚಕಗಳನ್ನು ಉಲ್ಲೇಖಿಸಿದ್ದಾನೆ. ಗಾದೆಗಳನ್ನೂ ರೂಪಕ ಉಪಮೆಗಳನ್ನೂ ಬಹುವಾಗಿ ಬಳಸಿಕೊಂಡಿದ್ದಾನೆ. ದೇವರನ್ನು ಸೇರಲು ಸುಲಭದ ದಾರಿಯೆಂದರೆ ಹೃದಯದಲ್ಲಿ ಅವನನ್ನು ನೆನಸಿ ಪೂಜಿಸುವುದೇ ಎಂದು ಸಾರಿ ಸಾರಿ ಹೇಳಿದ್ದಾನೆ. ಈತನ ಕಾಲಾನಂತರ ಬಾಳಿದ ತಾಯು ಮಾನವರ್ ಎಂಬುವರು ಲೋಕ ಅಶಾಶ್ವತವೆಂಬುದನ್ನು ಅರಿತು, ಸರ್ವವನ್ನು ತೊರೆದುಬಿಡುವುದರಲ್ಲಿ, ಪಟ್ಟಿನತ್ತಾಪಿಳ್ಳೈಯಾರ್ಗೆ ಸಮ ಜೋಡಿಯಾಗಲು ಯಾರಿಗೂ ಆಗದು ಎಂದು ಇವನನ್ನು ಹೊಗಳಿದ್ದಾರೆ. (ಎಸ್.ಪಿ.ಟಿ.)