ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಟ್ನಾ

ವಿಕಿಸೋರ್ಸ್ ಇಂದ
Jump to navigation Jump to search

ಪಟ್ನಾ ಬಿಹಾರದ ರಾಜಧಾನಿ, ಪಟ್ನಾ ವಿಭಾಗದ ಹಾಗೂ ಜಿಲ್ಲೆಯ ಆಡಳಿತ ಕೇಂದ್ರ. ಗಂಗಾ ನದಿಯ ಬಲದಂಡೆಯ ಮೇಲೆ ಕಲ್ಕತ್ತಕ್ಕೆ 464 ಕಿಮೀ. ದೂರದಲ್ಲಿದೆ. ಪ್ರಾಚೀನ ನಗರವಾದ ಪಾಟಲಿಪುತ್ರ ಹೆಚ್ಚು ಕಡಿಮೆ ಇದೇ ಸ್ಥಳದಲ್ಲಿತ್ತು. ಹಳೆಯ ನಗರ ಗಂಗಾ ನದಿಯ ದಂಡೆಯ ಮೇಲೆ ಸುಮಾರು 19 ಕಿ.ಮೀ. ಉದ್ದಕ್ಕೆ ಹಬ್ಬಿದೆ. ಇದರ ಪಶ್ಚಿಮಕ್ಕೆ ಹೊಸ ಬಂಕೀಪುರ ವಿಭಾಗವಿದೆ. ಇದರ ಪಶ್ಚಿಮಕ್ಕೂ ನೈಋತ್ಯಕ್ಕೂ ಆಧುನಿಕ ರಾಜಧಾನಿ ಬೆಳೆದಿದೆ. ಜನಸಂಖ್ಯೆ 4,75,300(1971).

ಪಟ್ನಾ ಪ್ರಮುಖ ರೈಲ್ವೆ ಮತ್ತು ರಸ್ತೆ ಸಂಧಿಸ್ಥಳ. ಕಳೆದ ಐವತ್ತು ವರ್ಷಗಳಲ್ಲಿ ಪಟ್ನಾ ಬಹಳಮಟ್ಟಿಗೆ ಬೆಳೆದಿದೆ. 1916ರಲ್ಲಿ ಇಲ್ಲಿ ಉಚ್ಚ ನ್ಯಾಯಾಲಯ ಸ್ಥಾಪಿತವಾಯಿತು. ಪಟ್ನಾ ವಿಶ್ವವಿದ್ಯಾಲಯ 1917ರಷ್ಟು ಹಳೆಯದು. ಇಲ್ಲಿಯ ಆಧುನಿಕ ಕಟ್ಟಡಗಳಲ್ಲಿ ಮುಖ್ಯವಾದವರೆಂದರೆ ಸರ್ಕಾರಿ ಭವನ, ವಿಧಾನಸಭಾ ಭವನ, ಪ್ರಾಚ್ಯ ಗ್ರಂಥಾಲಯ, ವೈದ್ಯಕೀಯ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜು, ಇಲ್ಲಿ ಬಂಗಾಲದ ಹುಸೇನ್ ಶಹನ ಮಸೀದಿಯೂ (1490) ಸಿಕ್ಖರ ಹತ್ತನೆಯ ಗುರುವಾದ ಗೋವಿಂದ ಸಿಂಗನ ಕಾಲದ ಮಂದಿರವೂ ಗೋಲ್‍ಘರ್ ಎಂಬ ಬಂಕೀಪುರದ ಕಣಜವೂ ಇದೆ.

ಕ್ರಿ.ಪೂ. 5ನೆಯ ಶತಮಾನದಲ್ಲಿ ಇಲ್ಲಿ ಸ್ಥಾಪಿತವಾದ ಪಾಟಲಿಪುತ್ರ ನಗರ ಕ್ರಿ.ಶ. 7ನೆಯ ಶತಮಾನದವರೆಗೂ ಪ್ರವರ್ಧಮಾನಸ್ಥಿತಿಯಲ್ಲಿತ್ತು. ಅನಂತರ 16ನೆಯ ಶತಮಾನದ ವರೆಗಿನ ಇದರ ಇತಿಹಾಸ ನಮಗೆ ತಿಳಿದುಬಂದಿಲ್ಲ. ಆಫ್‍ಘನ್ ದೊರೆ ಷೇರ್‍ಶಹ 1541ರಲ್ಲಿ ಮತ್ತೆ ಸ್ಥಾಪಿಸಿದ ನಗರಕ್ಕೆ ಪಟ್ನಾ ಎಂದು ಹೆಸರು ಇಟ್ಟ. ಮೊಗಲರ ಆಧಿಪತ್ಯದಲ್ಲಿ ಇದು ಮತ್ತೆ ಹಳೆ ಸ್ಥಾನಮಾನ ಪಡೆದು ಬಿಹಾರದ ಪ್ರಮುಖ ನಗರವಾಯಿತು. 1586ರಲ್ಲಿ ಇಲ್ಲಿಗೆ ಭೇಟಿ ನೀಡಿದ ರಾಲ್ಫ್ ಫಿಚ್ ಎಂಬ ಇಂಗ್ಲಿಷ್ ಇದನ್ನು ಬಲು ಉದ್ದನೆಯ ಮಹಾನಗರವೆಂದು ಬಣ್ಣಿಸಿದ. ಮೊಗಲ್ ಚಕ್ರವರ್ತಿ ಔರಂಗ್‍ಜೇóಬ್ (1659-1707) ತನ್ನ ಮೊವ್ಮ್ಮಗನಾದ ಅಜೀóಮನ ಹೆಸರಿನಲ್ಲಿ ಇದಕ್ಕೆ ಅಜೀóಮಾಬಾದ್ ಎಂದು ನಾಮಕರಣ ಮಾಡಿದ. ಈ ನಗರ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ವಶವಾದ್ದು 1765ರಲ್ಲಿ. ಕಂಪನಿಯ ಕಂದಾಯ ವಸೂಲಿಗಾಗಿ ಸ್ಥಾಪಿತವಾಗಿದ್ದ ಪ್ರಾಂತೀಯ ಮಂಡಲಿಯ ಮುಖ್ಯ ಕಛೇರಿ ಇಲ್ಲಿ ಸ್ಥಾಪಿತವಾಯಿತು. 1865ರಲ್ಲಿ ಬಿಹಾರದಲ್ಲಿ ಪಟ್ನಾ ಮತ್ತು ಗಯಾ ಜಿಲ್ಲೆಗಳು ರೂಪಿತವಾದವು. 1912ರಲ್ಲಿ ಬಂಗಾಲ ಆಧಿಪತ್ಯದಿಂದ ಬಿಹಾರ ಮತ್ತು ಒರಿಸ್ಸ ಪ್ರಾಂತ್ಯದ ರಚನೆಯಾದಾಗ ಪಟ್ನಾ ಆ ಪ್ರಾಂತ್ಯದ ರಾಜಧಾನಿಯಾಯಿತು. 1936ರಲ್ಲಿ ಒರಿಸ್ಸ ಪ್ರತ್ಯೇಕ ಪ್ರಾಂತ್ಯವಾಯಿತು. ಬಿಹಾರದ ರಾಜಧಾನಿಯಾಗಿ ಪಟ್ನಾ ಮುಂದುವರೆಯಿತು. ಸ್ವತಂತ್ರ ಭಾರತದಲ್ಲೂ ಇದು ಬಿಹಾರದ ರಾಜಧಾನಿಯಾಗಿ ಮುಂದುವರಿಯಿತು.

16ನೆಯ ಶತಮಾನದ ಹಿಂದಿನ - ಪಾಟಲಿಪುತ್ರ-ಇತಿಹಾಸ ಮತ್ತು ಇತರ ವಿವರಗಳಿಗೆ (ನೋಡಿ- ಪಾಟಲಿಪುತ್ರ)