ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಣಜಿ

ವಿಕಿಸೋರ್ಸ್ದಿಂದ

ಪಣಜಿ- ಪಂಜಿಂ ಎಂದೂ ಹೆಸರು ಪಡೆದಿರುವ ಇದು ಗೋವ, ದಮನ್ ಮತ್ತು ಡಿಯುವಿನ ಆಡಳಿತ ಕೇಂದ್ರ ; ಬಂದರು. ಮಂಡಾವಿ ನದಿಯ ದಂಡೆಯ ಮೇಲೆ (ಉ.ಅ. 150 29 ಮತ್ತು ಪೂ.ರೇ. 730 50) ಇದೆ. ಜನಸಂಖ್ಯೆ 34,837(1971). 18ನೆಯ ಶತಮಾನಕ್ಕೆ ಹಿಂದೆ ಇದು ಒಂದು ಸಣ್ಣ ಹಳ್ಳಿಯಾಗಿತ್ತು. ಪೋರ್ಚುಗೀಸ್ ಗೋವದರಾಜಧಾನಿಯಾಗಿದ ಹಳೆಯ ಗೋವದಲ್ಲಿ (ವೆಲ್ಹ ಗೋವ, ಎಲ) ಪದೇ ಪದೇ ಪ್ಲೇಗ್ ವ್ಯಾಧಿ ಬರುತ್ತಿದ್ದದ್ದರಿಂದ ಪೋರ್ಚುಗೀಸರು ಅದನ್ನು ತೊರೆದು 1843ರಲ್ಲಿ ಪಣಜಿಯನ್ನು ರಾಜಧಾನಿಯಾಗಿ ಮಾಡಿಕೊಂಡರು. 1962ರಲ್ಲಿ ಗೋವದ ವಿಮೋಚನೆಯಾದಾಗ ಗೋವೆಯೊಂದಿಗೆ ಇದೂ ಭಾರತಕ್ಕೆ ಸೇರಿತು. ಆಡಳಿತ ಪ್ರಾಮುಖ್ಯ ಗಳಿಸಿದ ಈ ಪಟ್ಟಣದಲ್ಲಿ 1970ರಿಂದ ಈಚೆಗೆ ವಾಣಿಜ್ಯ ಬೆಳೆಯುತ್ತಿದೆ. ಇದರ ಬಳಿಯಲ್ಲಿ ಕೈಗಾರಿಕಾ ಕ್ಷೇತ್ರವೊಂದನ್ನು ಸ್ಥಾಪಿಸಲಾಗಿದೆ.

ಪಣಜಿಯಲ್ಲಿ ಹಿಂದೆ ಪೋರ್ಚುಗೀಸರು ಕಟ್ಟಿದ ಬಂಗಲೆಗಳು ಮತ್ತು ವಿಶಾಲವಾದ ಚೌಕಗಳು ಇವೆ. ಇಲ್ಲಿ ಯಸೂಫ್ ಆದಿಲ್ ಷಾ ಕಟ್ಟಿಸಿದ ಭವನವನ್ನು 1759ರಲ್ಲಿ ಪೋರ್ಚುಗೀಸ್ ರಾಜಪ್ರತಿನಿಧಿಯ ಅರಮನೆಯಾಗಿ ಮಾರ್ಪಡಿಸಲಾಗಿತ್ತು. ಪಶ್ಚಿಮ ಕರಾವಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಣಜಿ ಮತ್ತು ಬೇಟಿಂ ನಡುವೆ ಸಂಪರ್ಕ ಕಲ್ಪಿಸುವ ದೊಡ್ಡ ಸೇರುವೆಯೊಂದು ಮಂಡಾವಿ ನದಿಗೆ ಅಡ್ಡಲಾಗಿ ನಿರ್ಮಿತವಾಗಿದೆ. (ವಿ.ಜಿ.ಕೆ.)