ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪತಂಗ ವೃಕ್ಷ
ಪತಂಗ ವೃಕ್ಷ - ಫ್ಯಾಬೇಸೀ (ಲೆಗ್ಯೂಮಿನೋಸೀ) ಕುಟುಂಬದ ಸೀಸಾಲ್‍ಪಿನಿಯಾಯ್ಡೀ ಉಪಕುಟುಂಬಕ್ಕೆ ಸೇರಿದ ಕಾಡುಮರ (ಸಸ್ಪನ್ ವುಡ್). ಸಪ್ಪಂಗ ಪರ್ಯಾಯ ನಾಮ. ಸೀಸಾಲ್ಪಿನಿಯ ಸಪ್ಟನ್ ಇದರ ಶಾಸ್ತ್ರೀಯ ಹೆಸರು.
ಇದೊಂದು ಪೊದೆಸಸ್ಯ ಅಥವಾ ಸಣ್ಣಮರ. ದಕ್ಷಿಣ ಭಾರತ, ಬಂಗಾಲ, ಶ್ರೀಲಂಕಾ, ಮಲಯ, ಬರ್ಮಗಳ ಕಾಡುಗಳಲ್ಲಿ ಕಾಣದೊರೆಯುತ್ತದೆ. ಇದನ್ನು ಬೇಲಿಗಿಡವಾಗಿ ಬೆಳೆಸುವುದೂ ಉಂಟು. ಇದರ ಚೇಗುಮರ ಕತ್ತರಿಸಿದಾಗ ತಿಳಿಹಳದಿ ಬಣ್ಣಕ್ಕಿರುತ್ತದೆ. ಆದರೆ ಗಾಳಿಯ ಸಂಪರ್ಕಕ್ಕೆ ಬಂದಂತೆ ಬೇಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣ ಚೇಗಿನಲ್ಲಿ ಇರುವ ಬ್ರಜಿಲಿನ್ ಎಂಬ ವರ್ಣಕ. ನೀರಿನಲ್ಲೂ ಆಲ್ಕೋಹಾಲಿನಲ್ಲೂ ಕರಗುವುದು ಆಕ್ಷಿಜನ್ ಸಂಪರ್ಕಕ್ಕೆ ಬಂದಾಗ ಬ್ರಜಿಲೈನ್ ಎಂಬ ಕಿತ್ತಳೆ ಕೆಂಪು ಬಣ್ಣದ ವಸ್ತುವಾಗಿ ಮಾರ್ಪಡುತ್ತದೆ. ಹತ್ತಿ, ರೇಷ್ಮೆ, ಉಣ್ಣೆಯ ಬಟ್ಟೆಗಳಿಗೆ ಬಣ್ಣ ಕಟ್ಟಲು ಇದನ್ನು ಬಳಸಲಾಗುತ್ತದೆ. ಚೌಬೀನೆಯನ್ನು ಚಿಕ್ಕ ಚಿಕ್ಕ ಚಕ್ಕೆಗಳಾಗಿ ಕತ್ತರಿಸಲಾಗುತ್ತದೆ. ಇಲ್ಲವೆ ಪುಡಿಮಾಡಲಾಗುತ್ತದೆ. ಅನಂತರ ಬಿಸಿನೀರಿನಿಲ್ಲಿ ಮಿಶ್ರಿಸಿ ವರ್ಣಪದಾರ್ಥವನ್ನು ಹೊರತೆಗೆಯಲಾಗುತ್ತದೆ. ಇದನ್ನು ಹಾಗೇ ಹುದುಗಲು ಬಿಟ್ಟು ಬ್ರಜಿಲೈನ್ ಬ್ರಜಿಲಿನ್ ಆಗುವಂತೆ ಮಾಡಿ ತರುವಾಯ ಬಳಸಲಾಗುತ್ತದೆ. ಅಲ್ಯೂಮಿನಿಯಮ್ ಅಸಿಟೇಟ್, ಸ್ಟ್ಯಾನಿಕ್ ಆಕ್ಸಲೇಟ್, ಟ್ಯಾನಿನ್-ಆಲಮ್, ಆಲಮ್, ಪೊಟ್ಯಾಸಿಯಮ್ ಡೈಕ್ರೊಮೇಟ್ ಇಲ್ಲವೆ ಕಬ್ಬಿಣದ ಲವಣಗಳು ಮುಂತಾದ ಬಣ್ಣಗಚ್ಚುಗಳೊಂದಿಗೆ (ಮಾರ್ಡಂಟ್) ಈ ವರ್ಣದ್ರವ್ಯವನ್ನು ಉಪಯೋಗಿಸಲಾಗುತ್ತದೆ.
ಪತಂಗದ ಚೌಬೀನೆ ಗಡುಸಾದುದು. ಇದಕ್ಕೆ ಚೆನ್ನಾಗಿ ಮೆರುಗು ಕೊಡಬಹುದು. ಬೀರು ಮುಂತಾದವುಗಳನ್ನು ತಯಾರಿಸಲು ಇದನ್ನು ಬಳಸಬಹುದು.
ಪತಂಗ ಮರಕ್ಕೆ ಔಷಧೀಯ ಮಹತ್ತ್ವವೂ ಉಂಟು. ಇದರ ಕಷಾಯವನ್ನು ಪ್ರತಿಬಂಧಕವಾಗಿ ಬಳಸುವರು. ಅತಿಸಾರ, ಆಮಶಂಕೆಗಳ ಚಿಕಿತ್ಸೆಯಲ್ಲಿ ಇದರ ಉಪಯೋಗ ಉಂಟು. ಕೆಲವು ತೆರನ ಚರ್ಮರೋಗಗಳಿಗೂ ಇದನ್ನು ಬಳಸಲಾಗುತ್ತದೆ. (ಎ.ಕೆ.ಎಸ್.) ಪರಿಷ್ಕರಣೆ : ಹರೀಶ್ ಭಟ್