ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪನಾಮಾ ನಗರ 1

ವಿಕಿಸೋರ್ಸ್ದಿಂದ

ಪನಾಮಾ ನಗರ 1 - ಪನಾಮಾ ಗಣರಾಜ್ಯದ ರಾಜಧಾನಿ. ಪನಾಮಾ ಪ್ರಾಂತ್ಯದ ಆಡಳಿತ ಕೇಂದ್ರ. ಪನಾಮಾ ಕಾಲುವೆ ಪೆಸಿಫಿಕ್ ಸಾಗರವನ್ನು ಸಂಧಿಸುವ ಕಡೆ, ಪನಾಮಾ ಕೊಲ್ಲಿಯ ಮೇಲೆ ಇದೆ. ಇಂಡಿಯನ್ ಜನರ ಭಾಷೆಯಲ್ಲಿ ಪನಾಮಾ ಎಂದರೆ ಅನೇಕ ಮೀನುಗಳು ಎಂದು ಅರ್ಥ. ಮೊದಲು ಇದು ಮೀನು ಹಿಡಿಯುವ ಸಣ್ಣ ಗ್ರಾಮವಾಗಿತ್ತು. ಹಳೆಯ ನಗರವನ್ನು ಪೆದ್ರೋ ಆರಿಯಾಸ್ ದೆ ವಿಲಾ 1591ರಲ್ಲಿ ಸ್ಥಾಪಿಸಿದ. 16ನೆಯ ಶತಮಾನದಲ್ಲಿ ಆಂಡೀಸ್ ಪರ್ವತ ಭಾಗದ ರಾಜ್ಯಗಳಿಂದ ಚಿನ್ನವನ್ನು ಸಮುದ್ರ ಮಾರ್ಗವಾಗಿ ಉತ್ತರದ ಪನಾಮಾ ನಗರಕ್ಕೆ ಕಳುಹಿಸಿದ. ಅಲ್ಲಿಂದ ಪನಾಮಾ ಭೂಕಂಠಕ್ಕೆ ಅಡ್ಡಲಾಗಿ ಹೇರು ಪ್ರಾಣಿಗಳ ಮೇಲೆ ನೋಂಬೇ ಡೇ ಡೀಯೋಸ್ ಮತ್ತು ಪೋರ್ಟಬೆಲೋ ನಗರಗಳಿಗೆ ಕಳುಹಿಸುತ್ತಿದ್ದರು. ಅಲ್ಲಿಂದ ಅದು ಸ್ಪೇನ್ ದೇಶಕ್ಕೆ ಹೋಗುತ್ತಿತ್ತು. ಉಚ್ಛ್ರಾಯ ಸ್ಥಿತಿಯಲ್ಲಿದ್ದ ನಗರ ಕಡಲ್ಗಳ್ಳರ ದಾಳಿಗಳಿಂದ ಹಾಗೂ ಖಾಸಗಿ ವ್ಯಾಪಾರಿಗಳಿಂದ ನಷ್ಟಕ್ಕೊಳಗಾಯಿತು. 1595ರಲ್ಲಿ ಇಂಗ್ಲೆಂಡಿನ ಫ್ರಾನ್ಸಿಸ್ ಡ್ರೇಕ್ ಹಳೆಯ ನಗರವನ್ನು ಹಿಡಿಯಲು ಪ್ರಯತ್ನಿಸಿ ವಿಫಲನಾದ. 1671ರಲ್ಲಿ ಹೆನ್ರಿ ಮೋರ್ಗನ್ ಅದನ್ನು ಪೂರ್ಣವಾಗಿ ನಾಶಗೊಳಿಸಿದ. ಸ್ಪ್ಯಾನಿಷರು ಹಳೆಯ ನಗರದ ಪಶ್ವಿಮಕ್ಕೆ ಹೊಸ ನಗರವನ್ನು ಕಟ್ಟಿದರು. ರಾಜಕೀಯ ಹಾಗೂ ಆರ್ಥಿಕ ದುಃಸ್ಥಿತಿಗಳಿಂದಾಗಿ 1751ರ ಹೊತ್ತಿಗೆ ನಗರ ಕೊಲಂಬಿಯಕ್ಕೆ ಸೇರಿತ್ತು. 150 ವರ್ಷಗಳ ತರುವಾಯ ಪನಾಮಾ ರಾಜ್ಯ ಕೊಲಂಬಿಯದಿಂದ ಪ್ರತ್ಯೇಕಗೊಂಡು ಸ್ವತಂತ್ರವಾದಾಗ ಪನಾಮಾ ನಗರ ಆ ಸ್ವತಂತ್ರ ರಾಜ್ಯದ ಆಡಳಿತ ಕೇಂದ್ರವಾಯಿತು (1903). ಅದೇ ವರ್ಷ ಒಂದು ಒಪ್ಪಂದದ ಪ್ರಕಾರ ನಗರದ ಶಿಸ್ತುಪಾಲನೆ ಹಾಗೂ ನೈರ್ಮಲ್ಯ ರಕ್ಷಣೆಯ ಅಧಿಕಾರಗಳು ಅಮೆರಿಕಕ್ಕೆ ಸೇರಿದುವು. ಪನಾಮಾ ಕಾಲುವೆ ನಿರ್ಮಾಣದ ತರುವಾಯ (1914) ಪನಾಮಾನಗರ ತ್ವರಿತವಾಗಿ ಬೆಳೆಯತೊಡಗಿತು. ಅಮೆರಿಕಕ್ಕೆ ವಹಿಸಿದ್ದ ನಗರಾಡಳಿತವನ್ನು ಪನಾಮಾ ಗಣರಾಜ್ಯಕ್ಕೆ ವರ್ಗಾಯಿಸಲಾಯಿತು (1942).

ಪನಾಮಾ ನಗರದ ರೇವುಪಟ್ಟಣ ಬಲ್ಬೋವ. ಪೆಟ್ರೋಲ್ ಸಂಸ್ಕರಣ, ಮದ್ಯ, ಬಟ್ಟೆ, ಕಬ್ಬಿಣ ಮತ್ತು ಉಕ್ಕಿನ ಸಾಮಾನುಗಳ ತಯಾರಿಕೆ- ಇವು ನಗರದ ಪ್ರಮುಖ ಕೈಗಾರಿಕೆಗಳು. ಪನಾಮಾ ಮತ್ತು ಕೊಲೋನ್ ನಗರಗಳ ನಡುವೆ ಕಾಲುವೆ, ರೈಲು ಹಾಗೂ ರಸ್ತೆಗಳ ಮೂಲಕ ಸಂಚಾರ ಸರಕುಗಳು ಸಾಗುತ್ತವೆ. ಅಮೆರಿಕನ್ ಹೆದ್ದಾರಿಗಳು ಪನಾಮಾ, ಡೇವಿಡ್ ಮತ್ತು ಚೇಪೋ ನಗರಗಳ ಮೂಲಕ ಹಾದುಹೋಗುತ್ತವೆ. ಪನಾಮಾದ ಟೆಕುಮೆನ್ ಅಂತರರಾಷ್ಟ್ರೀಯ ನಿಲ್ದಾಣದಿಂದ ಪ್ರಪಂಚದ ಪ್ರಮುಖ ಪಟ್ಟಣಗಳಿಗೆ ವಿಮಾನಗಳು ಹೋಗಿಬರುತ್ತವೆ.

ಪನಾಮಾದಲ್ಲಿ ಅನೇಕ ಆಧುನಿಕ ಭವನಗಳಿರುವುದಾದರೂ ವಸಾಹತು ಕಾಲದಲ್ಲಿ ಸ್ಪೇನಿನವರು ನಿರ್ಮಿಸಿದ ಆಕರ್ಷಕ ಕಟ್ಟಡಗಳಿಂದ ಶೋಭಿಸುತ್ತದೆ. ಇಲ್ಲಿ 1673ರಲ್ಲಿ ಕಟ್ಟಿದ ಕ್ರೈಸ್ತ ದೇವಾಲಯವಿದೆ. ಆಧುನಿಕ ಕಟ್ಟಡಗಳಲ್ಲಿ ಮುಖ್ಯವಾದವು ನ್ಯಾಯಭವನ, ಅಧ್ಯಕ್ಷಭವನ, ರಾಷ್ಟ್ರೀಯ ಅರಮನೆ ಮತ್ತು ಹೋಟೆಲ್-ಎಲ್-ಪನಾಮಾ. ನಗರದಲ್ಲಿಯ ವಿಶ್ವವಿದ್ಯಾಲಯಗಳು ನ್ಯಾಷನಲ್ (1935) ಮತ್ತು ಸಾಂತಾ ಮರೀಯ (1965). ನಗರದ ಜನಸಂಖ್ಯೆ 3,48,04 (1970). (ವಿ.ಜಿ.ಕೆ.)