ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಪೈರಸ್
ಪಪೈರಸ್ ಸೈಪರೇಸೀ ಕುಟುಂಬಕ್ಕೆ ಸೇರಿದ ಒಂದು ತೆರನ ಜೊಂಡು (ಪೇಪರ್ ರೀಡ್). ಅತಿಪ್ರಾಚೀನಕಾಲದಲ್ಲಿ ಈಜಿಪ್ಟ್, ಪ್ಯಾಲಸ್ಟೈನ್ ಮುಂತಾದ ದೇಶಗಳಲ್ಲಿ ಈ ಗಿಡ ಬಳಕೆಯಲ್ಲಿತ್ತು. ಯೆಹೂದಿಗಳ ಪ್ರವಾದಿ ಮೋಸಸ್ ಮಗುವಾಗಿದ್ದಾಗ ಅವನನ್ನು ಅವನ ತಾಯಿ ಪಪೈರಸ್‍ನ ಕಾಂಡಗಳಿಂದ ಹೆಣೆದ ಬುಟ್ಟಿಯೊಂದರಲ್ಲಿಟ್ಟು ನೈಲ್ ನದಿಯಲ್ಲಿ ತೇಲಿಬಿಟ್ಟಳೆಂದು ಪ್ರತೀತಿ.
ಸೈಪರಸ್ ಪಪೈರಸ್ ಇದರ ವ್ಶೆಜ್ಞಾನಿಕ ಹೆಸರು. ಪಪೈರಸ್ ಅಂಟಿಕೋರಮ್ ಪರ್ಯಾಯನಾಮ. ಇದು 1-4 ಮೀಟರ್ ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಗಿಡ. ನದಿಗಳ ಇಕ್ಕೆಡೆಗಳಲ್ಲೂ, ಜೌಗು ಪ್ರದೇಶಗಳಲ್ಲೂ ಸರೋವರಗಳ ಅಂಚುಗಳಲ್ಲೂ ಹೇರಳವಾಗಿ ಬೆಳೆಯುತ್ತದೆ. ಕಾಂಡದಲ್ಲಿ ಭೂಗತಪ್ರಕಂದ (ರೈಜೋಮ್) ಭಾಗ ಮತ್ತು ಭೂಮಿಯ ಮೇಲೆ ಚಾಚಿ ಬೆಳೆಯುವ ನೀಳವಾದ ಭಾಗ ಇವೆ. ಮೇಲಿನ ಕಾಂಡ ಸಾಮಾನ್ಯವಾಗಿ ಕವಲೊಡೆಯುವುದಿಲ್ಲ. ಎಲೆಗಳು ಉದ್ದ ಹಾಗೂ ಒರಟು. ಎಲೆಗಳ ತಳಭಾಗ ಕಾಂಡಕ್ಕೆ ಸುತ್ತಿಕೊಂಡಿರುತ್ತದೆ. ಕಾಂಡದ ತುದಿಯಲ್ಲಿ ಹೂ ಗೊಂಚಲು ಬಿಡುತ್ತದೆ. ಹೂಗಳು ಬಹಳ ಸರಳವಾದವು; ಹುಲ್ಲಿನ ಹೂಗಳಂತೆ ಇವೆ. ದಳಗಳು ವರ್ಣರಹಿತ. ಪ್ರತಿ ಹೂವಿನಲ್ಲಿ 3 ಅಥವಾ 2 ಕೇಸರಗಳೂ ಒಂದು ಅಂಡಾಶಯವೂ ಇವೆ.
ಗಿಡಗಳನ್ನು ಕೊಯ್ದು, ಎಲೆಗಳನ್ನು ಬಿಡಿಸಿ ಕಾಂಡವನ್ನು ಸ್ವಚ್ಛಮಾಡಿ ನೀಳವಾದ ಪಟ್ಟೆಗಳಾಗಿ ಸೀಳಿ, ಸೀಳುಗಳನ್ನು ಹಸಿಯಾಗಿರುವಾಗಲೇ ಒತ್ತಡಕ್ಕೊಳಪಡಿಸಿ ಚಪ್ಪಟೆ ಮಾಡುತ್ತಾರೆ. ಕಾಗದವಾಗಿ ಉಪಯೋಗಿಸುವುದು ಈ ಪಟ್ಟೆಗಳನ್ನೆ. ಇದಕ್ಕೆ ಪಪೈರಸ್ ಕಾಗದವೆಂದೇ ಹೆಸರು. ಪ್ರಾಚೀನಕಾಲದಲ್ಲಿ ಈಜಿಪ್ಟ್, ಮೆಸಪೊಟೇಮಿಯ, ಪ್ಯಾಲಸ್ಟೈನ್, ತುರ್ಕಿ ಮುಂತಾದ ದೇಶಗಳಲ್ಲಿ ಈ ಕಾಗದವನ್ನು ಬಳಸುತ್ತಿದ್ದರು.
ಇದರ ಪ್ರಕಂದ ರಸಭರಿತವಾಗಿದ್ದು ತಿನ್ನಲು ಯೋಗ್ಯವಾಗಿದೆ. ತಾಳಿನಿಂದ ಬುಟ್ಟಿ, ತೊಟ್ಟಿಲು ಮುಂತಾದವನ್ನು ತಯಾರಿಸುವುದುಂಟು. (ಎಂ.ಸಿ.ಆರ್.)