ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪರಗ್ವೆ
ಪರಗ್ವೆ ದಕ್ಷಿಣ ಅಮೆರಿಕದ ಒಂದು ಭೂಬದ್ಧ ಗಣರಾಜ್ಯ. ಅಮೆರಿಕದ ದೇಶಗಳ ಮಾನದಿಂದ ಇದು ಚಿಕ್ಕದೇ. ಇದರ ವಿಸ್ತೀರ್ಣ 4,06,752 ಚ.ಕಿಮಿ. ವಾಯುವ್ಯ ಉತ್ತರ ದಿಕ್ಕುಗಳಲ್ಲಿ ಬೊಲಿವಿಯ, ಪೂರ್ವದಲ್ಲಿ ಬ್ರಜಿóಲ್, ಆಗ್ನೇಯ ದಕ್ಷಿಣ ನೈಋತ್ಯಗಳಲ್ಲಿ ಅರ್ಜೆಂಟೀನ ಇದನ್ನು ಸುತ್ತುವರಿದಿವೆ. ಜನಸಂಖ್ಯೆ 23,95,600 (1970 ಅಂ.) ರಾಜಧಾನಿ ಅಸುನ್ಸಿಯಾನ್. ಇಲ್ಲಿಯ ಮೂಲನಿವಾಸಿ ಇಂಡಿಯನ್ನರ ಗ್ವಾರಾನೀ ಭಾಷೆಯಲ್ಲಿ ಪರಗ್ವೆ ಎಂದರೆ ಮಹಾ ನದಿಯ ನೆಲ ಎಂದು ಅರ್ಥ.
ಭೂ ಲಕ್ಷಣ : ಪರಗ್ವೆ ನದಿ ಈ ದೇಶದಲ್ಲಿ ದಕ್ಷಿಣೋತ್ತರವಾಗಿ ಹರಿದು ದೇಶವನ್ನು ಪೂರ್ವ ಮತ್ತು ಪಶ್ಚಿಮ ಪ್ರಾಂತ್ಯಗಳಾಗಿ ವಿಭಾಗಿಸುತ್ತದೆ. ಇದು ದಕ್ಷಿಣ ಅಮೆರಿಕದ ಐದನೆಯ ದೊಡ್ಡ ನದಿ. ಬ್ರಜಿóಲನಲ್ಲಿ ಹುಟ್ಟಿ, ಪರಗ್ವೆಯಲ್ಲಿ ಹರಿದು, ಪಿಲ್‍ಕಮೈಯೋ ನದಿಯೊಡನೆ ಸಂಗಮಿಸಿ, ಪರಾನಾ ನದಿಗೆ ಕೂಡಿ ಸಮುದ್ರ ಸೇರುವ ಇದರ ಉದ್ದ 2,550 ಕಿಮೀ. ರಾಜಧಾನಿ ಅಸುನ್ಸಿಯಾನ್‍ವರೆಗೂ ಇದರಲ್ಲಿ ದೊಡ್ಡ ಹಡಗುಗಳು ಬರುತ್ತವೆ. ಭೂಬದ್ಧ ಪರಗ್ವೆಯಿಂದ ಸಮುದ್ರಕ್ಕೆ ಸ್ವತಂತ್ರ ಮಾರ್ಗ ಈ ನದಿಯಿಂದಾಗಿ ದೊರೆತಿದೆ. ಪರಗ್ವೆಯ ಪೂರ್ವಭಾಗ ದೇಶದ ಮೂರನೆಯ ಒಂದರಷ್ಟಿದೆ. 304-608 ಮೀ. ಎತ್ತರವಾಗಿರುವ ಅದು ಬ್ರಜಿóಲ್ ಪ್ರಸ್ಥಭೂಮಿಯ ವಿಸ್ತರಣೆ. ದೇಶದ ಉಳಿದೆಡೆಯಲ್ಲಿರುವುದಕ್ಕಿಂತ ಇಲ್ಲಿ ಜನಸಾಂದ್ರತೆ ಅಧಿಕ. ಪೂರ್ವದಲ್ಲಿ ಕಾರ್ಡಿಲೆರಾ, ಅಮಂಬೆ ಪರ್ವತ ಇವೆ. ಈಶಾನ್ಯದಲ್ಲಿ ಅರಕಾಂಗ್ವೆ ಎಂಬ ಇನ್ನೊಂದು ಪರ್ವತ ದಕ್ಷಿಣಾಭಿಮುಖವಾಗಿ ಸಾಗಿ ಅಷ್ಟು ಎತ್ತರವಿಲ್ಲದ ಗುಡ್ಡಗಳಾಗಿ ಪರಿಸಮಾಪ್ತಿ ಹೊಂದುತ್ತದೆ.
ದೇಶದ ಮೂರರಲ್ಲೆರಡರಷ್ಟು ಭಾಗವನ್ನು ವ್ಯಾಪಿಸಿರುವ ಪಶ್ಚಿಮ ಪ್ರಾಂತ್ಯ ನಿರ್ವಿಶೇಷ ಭೂಲಕ್ಷಣವುಳ್ಳ ಸಮತಟ್ಟಾದ ಬಯಲು. ಗ್ರಾನ್ ಚಾಕೊ ಎಂದು ಕರೆಯಲ್ಪಡುವ ಈ ಬಯಲು ಪರಗ್ವೆಯ ಗಡಿಯಾಚೆಗೆ ಬೊಲಿವಿಯ ಮತ್ತು ಅರ್ಜೆಂಟೀನ ದೇಶಗಳಲ್ಲೂ ಹಬ್ಬಿದೆ. ಚಾಕೊದಲ್ಲಿ ಕುರುಚಲು ಕಾಡು, ಹುಲ್ಲು ಮಾತ್ರ ಬೆಳೆಯುತ್ತವೆ. ನದಿಗಳು ಸಾವಕಾಶವಾಗಿ ಹರಿದು, ಅಲ್ಲಲ್ಲೇ ಇಂಗಿ ಜವುಳುಗಳನ್ನು ನಿರ್ಮಿಸಿವೆ. ಈ ಪ್ರದೇಶದಲ್ಲಿ ಜನಸಂಖ್ಯೆ ವಿರಳ (ಚ.ಕಿ.ಮೀ.ಗೆ 2)
ಪೂರ್ವದ ಪರ್ವತಶ್ರೇಣಿಯಾಚೆಗೆ ಹರಿಯುವ ಪಾರನಾ ನದಿ ಪೂರ್ವ ಆಗ್ನೇಯ ಗಡಿಯಾಗಿಯೂ ಪರಿಣಮಿಸಿದೆ. ಪರಗ್ವೆ-ಪರನಾ ಸಂಗಮದ ಉತ್ತರಕ್ಕೆ ಮತ್ತು ಪರಗ್ವೆ-ಪಿಲ್ ಕಮೈಯೋ ಸಂಗಮದ ಪೂರ್ವಕ್ಕೆ ಇರುವ ಚಿಕ್ಕ ಪ್ರದೇಶವೇ ದೇಶದ ಅತ್ಯಂತ ಫಲವತ್ತೂ ಜನಭರಿತವೂ ಆದ ಪ್ರದೇಶ. (ಚ.ಕಿಮೀ.ಗೆ 50-2000) ಜನ). ಈ ದೇಶದ ಎರಡು ದೊಡ್ಡ ಸರೋವರಗಳು (ಪೊವಾ ಮತ್ತು ಯಿಪಕಾರೈ) ಇರುವುದು ಇಲ್ಲೇ. ಇಲ್ಲಿಯ ನದಿಗಳ ದಡಗಳಲ್ಲಿ ದಟ್ಟ ಉಷ್ಣವಲಯ ಅರಣ್ಯಗಳಿವೆ. ದೇಶದ ಗಡಿಗಳ ಉದ್ದದಲ್ಲಿ ಶೇಕಡ 80ರಷ್ಟು ದೂರ ನದಿಗಳೇ ಇವೆ. ಅವೇ ದೇಶದ ಮುಖ್ಯ ಜೀವನಾಧಾರ ಕೂಡ.
ವಾಯುಗುಣ : ಪರಗ್ವೆಯ ಮಧ್ಯದಲ್ಲಿ ಮಕರ ಸಂಕ್ರಾಂತಿ ವೃತ್ತ ಹಾದು ಹೋಗುತ್ತದೆ. ಈ ದೇಶದ ಉತ್ತರಾರ್ಧ ಉಷ್ಣವಲಯದಲ್ಲಿದೆ. ಇದು ಸಮುದ್ರದಿಂದ ದೂರವಾಗಿರುವುದರಿಂದಲೂ ಉಷ್ಣತೆ ಹೆಚ್ಚು. ಚಳಿಗಾಲದಲ್ಲಿ 10 ಡಿ.ಸೆಂ. ಕನಿಷ್ಠ ಉಷ್ಣತೆಯ ಮತ್ತು ಬೇಸಗೆಯಲ್ಲಿ 40 ಡಿ.ಸೆಂ. ಗರಿಷ್ಠ ಉಷúತೆಯ ದಾಖಲೆಯಿದೆ. ಒಟ್ಟಿನಲ್ಲಿ ಬ್ರಜಿಲ್ ಕಡೆಯಿಂದ ಬೀಸುವ ಬಡಗಣ ಗಾಳಿ ಉಷ್ಣವಾಗಿಯೂ ಆರ್ಜೆಂಟಿನದಿಂದ ಬೀಸುವ ತೆಂಕಣ ಗಾಳಿ ತಂಪಾಗಿಯೂ ಇರುತ್ತವೆ. ದಕ್ಷಿಣ ಪರಗ್ವೆಯಲ್ಲಿ ಕೆಲವೇಳೆ ನೀರು ಹೆಪ್ಪುಗಟ್ಟುವಷ್ಟು ಶೈತ್ಯ ಇರುವುದುಂಟು. ಪೂರ್ವಭಾಗದಲ್ಲಿ ವಾರ್ಷಿಕ ಸರಾಸರಿ ಮಳೆ 1,270 ಮಿಮೀ. ಪಶ್ಚಿಮಕ್ಕೆ ಮಳೆ ಕಡಿಮೆಯಾಗುತ್ತ ಸಾಗಿ, 762 ಮಿಮೀ.ಗಳಷ್ಟಾಗುತ್ತದೆ. ಚಾಕೋ ಪ್ರದೇಶಗಳಲ್ಲಿ ಒಮ್ಮೊಮ್ಮೆ ಬರಗಾಲವೂ ಅನಂತರ ಅತಿವೃಷ್ಟಿಯಿಂದ ನದೀ ಪ್ರದೇಶಗಳಲ್ಲಿ ನೆರೆಹಾವಳಿಯೂ ಸಂಭವಿಸುವುದುಂಟು.
ಚಿತ್ರ : ಭೂಪಟ
ಸಸ್ಯ ಪ್ರಾಣಿಜೀವನ : ಆರ್ಥಿಕವಾಗಿ ಪರಗ್ವೆ ಕೃಷಿ ಪ್ರಧಾನ ದೇಶ. ದಕ್ಷಿಣ ಭಾಗದ ಹುಲುಸು ಪ್ರದೇಶದಲ್ಲೇ ಕೃಷಿ ಕೇಂದ್ರೀಕೃತವಾಗಿದೆ. ಕೃಷಿವಿಧಾನಗಳು ಓಬೀರಾಯನ ಕಾಲದವು. ಆದರೆ ಸಾಕಷ್ಟು ವಿಸ್ತಾರವಾದ ಅರಣ್ಯಗಳು ದೇಶದ ಸಂಪತ್ತಿಗೆ ತಮ್ಮ ಪಾಲಿನ ನೆರವು ನೀಡುತ್ತವೆ. ಚಾಕೊ ಪ್ರದೇಶದಲ್ಲಿ ಬೆಳೆಯುವ ಕೆಂಬಣ್ಣದ ಕ್ವಿಬ್ರಾಚೋ ಎಂಬ ಮರ ಚರ್ಮ ಹದ ಮಾಡುವುದರಲ್ಲಿ ಬಳಸುವ ಶ್ರೇಷ್ಠ ಬಣ್ಣದ ದ್ರವ್ಯದ ನಿಧಿಯಾಗಿದೆ. ಪೂರ್ವಭಾಗದಲ್ಲಿರುವ ಅರಣ್ಯಗಳಲ್ಲಿ ಒಳ್ಳೆಯ ನಾಟಿನ ಮರಗಳಾದ ಉರುಡೇ, ಸಿಡಾರ್, ಕುರುಪೇ ಮತ್ತು ಲಪಾಚೋ ವೃಕ್ಷಗಳು ಸಮೃದ್ಧವಾಗಿವೆ. ಕ್ವಿನೀನು ಕೊಡುವ ಪರಾತೋದೋ, ಸೊಪ್ಪನ್ನು ಭಟ್ಟಿ ಇಳಿಸಿದರೆ ಪರಮಳದ್ರವ್ಯ ಕೊಡುವ ಪೆಟಟ್‍ಗ್ರೇನ್ ಎಂಬ ಕಹಿ ಕಿತ್ತಳೆ, ನೆರೆಹೊರೆಯ ದೇಶಗಳಿಗೆ ರಫ್ತಾಗಿ ಜನಪ್ರಿಯವಾದ ಚಹಾ ಎನಿಸುವ ಯೆರ್ಬ ಮಾತೇ ಇವು ಇತರ ವಾಣಿಜ್ಯ ಸಸ್ಯಗಳು. ಕೊನೆಯದು ಈಶಾನ್ಯದಲ್ಲಿ ಕಾಡಾಗಿ ಬೆಳೆದರೆ ನೈಋತ್ಯದಲ್ಲಿ ಕೃಷಿ ಮಾಡಲ್ಪಡುತ್ತವೆ.
ಪಶ್ಚಿಮದ ಚಾಕೊ ಪ್ರದೇಶ ಹೆಚ್ಚು ಕಡಿಮೆ ಬಂಜರಾಗಿದ್ದರೂ ಅದರ ಹೆಸರಿಗೆ ತಕ್ಕಂತೆ (ಚಾಕೊ ಎಂದರೆ ಬೇಟೆಯ ನೆಲೆ) ವನ್ಯಪಶುಗಳ ಆಗರವಾಗಿದೆ. ಸ್ಥಳೀಯರು ಟೈಗ್ರೆ ಎಂದು ಕರೆಯುವ ಜಾಗ್ವಾರ್ ಚಿರತೆ, ಕಾಡು ಹಂದಿ, ನೀರು ಹಂದಿ, ಚಿಗರೆ ಬೇಕಾದಷ್ಟಿವೆ. ಆರ್ಮಡಿಲೋ, ಪಿಪೀಲಿಕಾಭಕ್ಷಕ, ನೀರುನಾಯಿ, ಕೊಯ್ಟು (ಜಲಚರ ಇಲಿ) ಮೊದಲಾದ ದಕ್ಷಿಣ ಅಮೆರಿಕನ್ ಬಿಲವಾಸಿ ಪ್ರಾಣಿಗಳು ಚಾಕೊ ಪ್ರದೇಶದ ಪ್ರಾಣಿವಿಶೇಷಗಳಾದರೆ, ಪೂರ್ವಪ್ರದೇಶದ ಕಾಡುಗಳಲ್ಲಿ ಬಗೆಬಗೆಯ ಮಂಗ, ಟೇಪರ್ ಎಂಬ ಚಪಲ ಮುಸುಡಿಯ ಹಂದಿ, ಪೆಕರಿಯೆಂಬ ಚಿಕ್ಕ ಹಂದಿ, ಚಿಗರೆ, ಸಿಂಹ, ಜಾಗ್ವಾರ್ ಚಿರತೆ, ನರಿ, ಮುಂಗುಸಿ ಮೊದಲಾದವು ಇವೆ. ಚಾಕೊ ಪ್ರದೇಶದ ಪಕ್ಷಿಗಳಲ್ಲಿ ಐಬಿಸ್ ಬಕಗಳೂ ನಾರಾಯಣಿ ಪಕ್ಷಿಗಳೂ ಟೌಕಾನ್, ಮಸ್ಕೊವಿ ಬಾತು, ಕಪೋತ, ಗವುಜುಗ, ಗಿಳಿ, ಪ್ಯಾರಕೀಟ್ ಗಿಳಿಗಳೂ ಪೂರ್ವಪ್ರಾಂತ್ಯದ ಅಡವಿಗಳಲ್ಲಿ ಗರುಡ, ಡೇಗೆ, ನಾರಾಯಣ ಪಕ್ಷಿ, ಪಾರಿವಾಳ, ಗವುಜುಗಗಳನ್ನೊಳಗೊಂಡ 400 ಜಾತಿಯ ಹಕ್ಕಿಗಳೂ ತುಂಬಿವೆ. ನದಿಗಳಲ್ಲಿ ಮೊಸಳೆ, ಅನೇಕ ಮೀನುಜಾತಿಗಳು ಧಾರಾಳವಾಗಿವೆ. ಕೀಟಗಳ ಪೈಕಿ ತರಂತುಲಾ ಎಂಬ ಪ್ರಾಣಘಾತಕ ಜೇಡ ಹೆಸರಿಸಲು ತಕ್ಕದ್ದು.
ಜನ : ಪರಗ್ವೆ ವಿರಳ ಜನವಸತಿಯ ದೇಶ (ಚ.ಕಿಮೀ.ಗೆ 5.9). ನೆರೆ ದೇಶಗಳೊಡನೆ ಎರಡು ಘೋರ ಯುದ್ಧಗಳಲ್ಲಿ ಅದು ಬಹಳ ಜನರನ್ನು ಕಳೆದುಕೊಂಡಿತು. 64.3% ಜನ ಗ್ರಾಮವಾಸಿಗಳು. ಗಂಡಸರು 49.5% ರಷ್ಟಿದ್ದಾರೆ. ರಾಜಧಾನಿ ಅಸುನ್ಸಿಯಾನ್‍ನ ಜನಸಂಖ್ಯೆ 4,37,136 (1970 ಅಂ.). ಕನ್‍ಸೆಪ್ಸಿಯಾನ್, ವೀಯರೀಕ, ಕೊರೊನೆತ್, ಓವಿಯೆದೊ, ಞೀಂಬುಕು, ಎನ್‍ಕಾರ್ನೇ ಶಿಯನ್ ಇವು ಇತರ ಪ್ರಮುಖ ಪಟ್ಟಣಗಳು. ಇವುಗಳ ಜನಸಂಖ್ಯೆಗಳು ತಲಾ 20,000 ಕ್ಕಿಂತ ಹೆಚ್ಚು ಇಲ್ಲ.
ಲ್ಯಾಟಿನ್ ಅಮೆರಿಕದ ಇತರ ದೇಶಗಳಲ್ಲಿರುವಂತೆ ಇಲ್ಲಿ ಮೂಲನಿವಾಸಿ ರೆಡ್ ಇಂಡಿಯನರಿಗೂ ಬಿಳಿಯರಿಗೂ ತೀವ್ರ ಮನಸ್ತಾಪ ಇಲ್ಲ. ಶೇಖಡ 75ರಷ್ಟು ಜನರನ್ನು ಗ್ವಾರಾನಿಗಳೆಂದೂ ಗಣಿಸಿದ್ದರೂ ಇಲ್ಲಿ ವಿಜಯಿಗಳಾಗಿ ಬಂದ ಯೂರೋಪಿಯನರು ಸ್ಥಳೀಯರೊಡನೆ ಬೆರೆತಿದ್ದರಿಂದ ಹೆಚ್ಚು ಕಡಿಮೆ ಪ್ರತಿಯೊಬ್ಬ ಗ್ವಾರಾನಿಯಲ್ಲೂ ಸ್ವಲ್ಪವಾದರೂ ಸ್ಪ್ಯಾನಿಷ್ ರಕ್ತವಿದೆ. 65,000ದಷ್ಟು ಜನರು ಮಾತ್ರ ಶುದ್ಧ ಕೆಂಪು ಇಂಡಿಯನ್ನರು. ಸ್ಪ್ಯಾನಿಷ್, ಗ್ವಾರಾನಿ ಎರಡನ್ನೂ ಅಧಿಕೃತ ಭಾಷೆಗಳಾಗಿ ಸ್ವೀಕರಿಸಲಾಗಿದೆ. ಶಿಕ್ಷಣ, ವ್ಯವಹಾರ ಮತ್ತು ಸರ್ಕಾರಿ ಕೆಲಸಗಳಲ್ಲಿ ಸ್ಪ್ಯಾನಿಷ್ ಭಾಷೆ ಬಳಸಲಾಗುತ್ತಿದೆ. ಹೆಚ್ಚಿನ ಜನರು ಉಭಯಭಾಷಿಗಳು. ವಿದೇಶಿ ಮೂಲದವರಲ್ಲಿ ಪಶ್ಚಿಮ ಯೂರೋಪಿಯನರು. ಜಪಾನೀಯರು, ಕೊರಿಯನರು, ಆಸ್ಟ್ರೇಲಿಯನರು ಹೆಚ್ಚು ಇದ್ದಾರೆ. ಕ್ಯಾತೊಲಿಕ್ ಕ್ರೈಸ್ತಮತವನ್ನು ರಾಷ್ಟ್ರಮತವೆಂದು ಸ್ವೀಕರಿಸಲಾಗಿದೆ.
ಇತಿಹಾಸ: ಪರಗ್ವೆ ಪ್ರದೇಶವನ್ನು ಪ್ರವೇಶಿಸಿದ ಪ್ರಥಮ ಯೂರೋಪಿನವನೆಂದರೆ ಬಹುಶಃ ಅಲೆಜೊಗಾರ್ಶಿಯ. ಇವನು ಪೋರ್ಚುಗೀಸ್ ಶೋಧಕ. ಇವನು 1525ರಲ್ಲಿ ಇಲ್ಲಿಗೆ ಬಂದ. 1527ರಲ್ಲಿ ಸ್ಪೇನಿನ ಸೆಬಾಸ್ತಿಯನ್ ಕ್ಯಾಬಟ್ ಇಲ್ಲಿಗೆ ಬಂದಿಳಿದ. 1535ರೊಳಗೆ ಪರಗ್ವೆ ಸ್ಪೇನಿನ ವಸಾಹತುವಾಗಿಬಿಟ್ಟಿತ್ತು. ಪ್ರಾರಂಭದಲ್ಲಿ ಇದು ಅರ್ಜೆಂಟೀನದಲ್ಲಿ ಸಮಾವೇಶವಾಗಿತ್ತು. ಇದನ್ನು 1617ರಲ್ಲಿ ಬೇರ್ಪಡಿಸಿ ಇದಕ್ಕೆ ಪ್ರತ್ಯೇಕ ವೈಸ್‍ರಾಯನನ್ನು ನೇಮಿಸಲಾಯಿತು. 1811ರಲ್ಲಿ ಇದಕ್ಕೆ ರಕ್ತಪಾತವಿಲ್ಲದೆ ಸ್ವಾತಂತ್ರ್ಯ ಲಭಿಸಿತು. ಆದರೆ ತೀವ್ರ ಅಂತಃಕಲಹದಿಂದಾಗಿ 1815ರಲ್ಲಿ ಜೋಸ್ ಗಾಸ್ಪರ್ ರೋಡ್ರಿಗ್ಸ್ ಫ್ರಾನ್ಸಿಸ್ ಸರ್ವಾಧಿಕಾರಿಯಾದ. ಅವನ ಅನಂತರ ಕಾರ್ಲೋಸ ಆಂತನಿ ಲೊಪೆಜ್ó ಮತ್ತು ಅವನ ಮಗ ಫ್ರಾನ್ಸಿಸ್ಕೋ ಸಲಾನೋ ಲೊಪೆಜ್ó ಅಧಿಕಾರದಲ್ಲಿ ಮುಂದುವರಿದರು. ಹೀಗೆ 60 ವರ್ಷ ಸರ್ವಾಧಿಕಾರ ನಡೆಯಿತು. ಕೊನೆಯಾತ ದೇಶವನ್ನು ಸೈನಿಕ ದೃಷ್ಟಿಯಿಂದ ಬಲಪಡಿಸಿದರೂ ನೆರೆಯ ಅರ್ಜೆಂಟಿನ, ಉರುಗ್ವೆ ಮತ್ತು ಬ್ರಜಿóಲ್ ಒಡನೆ ಏಕಕಾಲದಲ್ಲಿ ಯುದ್ಧಕ್ಕಿಳಿದು ಸೋತ. ಇದರಿಂದ ಪ್ರದೇಶ ಕಳೆದು ಹೋಯಿತಲ್ಲದೆ ಅರ್ಧಕ್ಕಿಂತ ಹೆಚ್ಚು ಮಂದಿ ಸತ್ತರು. ಗಂಡಸರ ಪೈಕಿ ಬದುಕಿದವರು ಸ್ವಲ್ಪ ಮಂದಿ. ಮತ್ತೆ 1932-35ರಲ್ಲಿ ಬೊಲಿವಿಯದೊಡನೆ ಯುದ್ಧ ನಡೆಯಿತು. ಅದೂ ತುಂಬಹಾನಿಕರವಾಯಿತಾದರೂ ಸಾಕಷ್ಟು ಪ್ರದೇಶ ಸಿಕ್ಕಿ ದೇಶದ ವಿಸ್ತೀರ್ಣ 1870ರಲ್ಲಿದ್ದುದಕ್ಕೆ ಇಮ್ಮಡಿಯಾಯಿತು.
ಪ್ರಜಾಸತ್ತೆ, ಸಂವಿಧಾನಬದ್ಧ ರಾಜ್ಯಪದ್ದತಿ ಇವು ಪರಗ್ವೆಗೆ ದಕ್ಕಲಿಲ್ಲವೆಂದೇ ಹೇಳಬೇಕು. 1870ರಲ್ಲಿ ಉದಾರ ಸಂವಿಧಾನವೊಂದು ಸ್ವೀಕೃತವಾಗಿ ಲಿಬರಲ್ ಮತ್ತು ಕೊಲೆರೆಡೊ ಎಂಬ ಎರಡು ಪಕ್ಷಗಳು ಅಸ್ತಿತ್ವಕ್ಕೆ ಬಂದುವು. ಅವುಗಳ ಕಲಹದಿಂದ ಅವ್ಯವಸ್ಥೆ ತಲೆದೋರಿ 1904ರಲ್ಲಿ ಕ್ರಾಂತಿಯಾಯಿತು. ಕೊಲರೆಡೊ ಪಕ್ಷ ಉಚ್ಚಾಟನೆ ಹೊಂದಿತು. 1936ರಲ್ಲಿ ಲಿಬರಲ್ ಪಕ್ಷವನ್ನು ಪದಚ್ಯುತಿಗೊಳಿಸಿ ಮಿಲಿಟರಿ ಸರ್ವಾಧಿಕಾರ ಬಂತು. 1936 ರಿಂದ 1954 ರವರಗೆ ಒಟ್ಟು ಆರು ಸೈನಿಕ ಕ್ರಾಂತಿಗಳಾದುವು. ಕೊನೆಯ ಸರ್ವಾಧಿಕಾರಿ ಜನರಲ್ ಆಲ್ಪ್ರೆಡೊ ನ್ಟ್ರೋಸ್ನರ್ ದೇಶದ ಆಧುನೀಕರಣಕ್ಕೆ ಚಾಲನೆ ಕೊಟ್ಟರಲ್ಲದೆ 1968ರಲ್ಲಿ ಹೊಸ ಸಂವಿಧಾನವನ್ನು ಜಾರಿಗೆ ತಂದರು. ನಾಗರಿಕ ಹಕ್ಕುಗಳು ಪುನಃ ಸ್ಥಾಪಿತವಾಗಿ ಕಾಂಗ್ರೆಸ್ (ಸಂಸತ್ತು) ಪುನಃ ಅಸ್ತಿತ್ವಕ್ಕೆ ಬಂತು. ಆದರು ವಿರೋಧಿಗಳ ಮೇಲೆ ದಬ್ಬಾಳಿಕೆ ಮುಂದುವರಿಯಿತು. ಧರ್ಮಪೀಠಗಳು ಸರ್ಕಾರದ ದಮನ ನೀತಿಯನ್ನು ಖಂಡಿಸಿದುವು. 1970ರ ಅನಂತರ ಸುಮಾರಾಗಿ ಶಾಂತಿ ನೆಲಸಿದೆ.
ಆರ್ಥಿಕ ಸ್ಥಿತಿ : ದೇಶದ ಆಧುನೀಕರಣ ಪ್ರಾರಂಭವಾಗಿದ್ದರೂ ಪರಗ್ವೆ ಲ್ಯಾಟಿನ್ ಅಮೆರಿಕದಲ್ಲಿ ಅತ್ಯಂತ ಕಡಿಮೆ ವರಮಾನವುಳ್ಳ ದೇಶವಾಗಿದೆ. ಆದ್ದರಿಂದ ಜೀವನೋಪಾಯಕ್ಕಾಗಿ 1940-70ರ ಅವಧಿಯಲ್ಲಿ ನಾಲ್ಕು ಲಕ್ಷ ಜನ ನೆರೆಯ ಬ್ರಜಿóಲ್, ಅರ್ಜೆಂಟೀನಗಳಿಗೆ ವಲಸೆ ಹೋದರು. ಒಳವಲಸೆ ಸ್ವಾಭಾವಿಕವಾಗಿ ಕಡಿಮೆ. 75% ಜನ ಕೃಷಿಯಲ್ಲಿ ನಿರತರಾಗಿ, ಉಪಕಸುಬಾಗಿ ಪಶುಪಾಲನೆ ಕೈಗೊಂಡಿದ್ದಾರೆ. ಮೆಕ್ಕೆ ಜೋಳ, ಅವರೆ, ತಂಬಾಕು, ಕಿತ್ತಳೆಜಾತಿಯ ಹಣ್ಣುಗಳು ಮುಖ್ಯ ಬೆಳೆಗಳು. ನಾಟಿನ ಮರಗಳು ಅರಣ್ಯಗಳಲ್ಲಿ ಅಪರಿಮಿತವಾಗಿದ್ದರೂ ಪೂರ್ಣ ವ್ಯಾಪಾರಿ ಉಪಯೋಗಕ್ಕೆ ಅಳವಟ್ಟಿಲ್ಲ. ಮುಖ್ಯ ರಫ್ತುಗಳು ಗೋಮಾಂಸ ಮತ್ತು ಇತರ ಆಹಾರ ಸಾಮಗ್ರಿಗಳು, ಚರ್ಮ ಮತ್ತು ಕ್ವಿಬ್ರಾಚೋ ಮರ.
ಸಂವಿಧಾನ : 1968ರ ಸಂವಿಧಾನದ ಪ್ರಕಾರ ಸೆನೆಟ್ (30 ಸದಸ್ಯರು) ಮತ್ತು ಪ್ರತಿನಿಧಿಸಭೆಗಳಿಗೆ (60 ಸದಸ್ಯರು) ಪಂಚವಾರ್ಷಿಕವಾಗಿ ಆಯ್ಕೆ ನಡೆಯುತ್ತದೆ. ಐದು ವರ್ಷಗಳಿಗೊಮ್ಮೆ ಅಧ್ಯಕ್ಷನ ಆಯ್ಕೆ ಆಗುತ್ತದೆ. ಅವನು ಕ್ಯಾತೊಲಿಕನೂ 40 ವಯಸ್ಸು ಮೀರಿದವನೂ ಆಗಿರಬೇಕು. ಅವನಲ್ಲಿ ಅಪಾರ ಅಧಿಕಾರ ಕೇಂದ್ರೀಕೃತವಾಗಿದೆ. ಒಂಬತ್ತು ಜನರ ಒಂದು ರಾಷ್ಟ್ರ ಸಮಿತಿಯಿದ್ದರೂ ಅದನ್ನು ನೇಮಿಸುವವನೂ ಅಧ್ಯಕ್ಷನೇ, ಮಂತ್ರಿಗಳನ್ನೂ ಆಡಳಿತಗಾರರನ್ನೂ ನೇಮಿಸುವುದು ಅವನ ಅಧಿಕಾರ. ವಿದೇಶನೀತಿ, ಕಾಂಗ್ರೆಸ್ಸಿನ ವಿಸರ್ಜನೆ, ಸುಗ್ರೀವಾಜ್ಞೆ, ಮುತ್ತಿಗೆ ಸ್ಥಿತಿಯ ಘೋಷಣೆ, ಸೈನ್ಯ ಸನ್ನಾಹ ಇವೆಲ್ಲ ಅವನ ಕೈಯಲ್ಲಿವೆ. (ಪಿ.ವಿ.ಎ.)