ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪರಮದೇವ

ವಿಕಿಸೋರ್ಸ್ದಿಂದ

ಪರಮದೇವ : - 1777. ಬ್ರಾಹ್ಮಣಕವಿ. ಪರಮೇಶ್ವರ ಎಂಬುದು ಹುಟ್ಟು ಹೆಸರು. ಪರಮೈಯ, ಪರಮಣ್ಣನೆಂಬುವುದು ಈತನ ಇತರ ಹೆಸರುಗಳು. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಹನ್ನರ ಮಾಗಣೆಗೆ ಸೇರಿದ ಸುಳಿಗೋಡು.

ಬಡಕುಟುಂಬದಲ್ಲಿ ಹುಟ್ಟಿದ ಈತನಿಗೆ ವಿದ್ಯಾಭ್ಯಾಸ ಚೆನ್ನಾಗಿ ಆಗಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಯಿತು. ಸಾಲ ಹಾಗೂ ಸಂಸಾರದ ಹೊರೆ ಹೆಚ್ಚಿದಾಗ ಸಂಸಾರದೊಡನೆ ಇಕ್ಕೇರಿ ಹತ್ತಿರದ ಚಿಪ್ಪಳಿ ಗ್ರಾಮಕ್ಕೆ ಬಂದು ಸೇರಿದ. ಅಲ್ಲಿ ಕೆಲಕಾಲ ಮಕ್ಕಳಿಗೆ ಪಾಠಹೇಳಿ ಜೀವಿಸಿದ. ಅನಂತರ ಅಲ್ಲಿಯ ಒಂದು ಗಣಪತಿ ದೇವಸ್ಥಾನದ ಪೂಜಾರಿಯಾಗಿ ನೇಮಕಗೊಂಡ. ಅಲ್ಲಿಯೆ ಈತನ ಕವಿತ್ವ ಆರಂಭವಾದುದು.

ಈತ ತತ್ತ್ವಚೌಪದ, ನಾರಾಯಣಾಕ್ಷರಮಾಲಿಕಾಸ್ತೋತ್ರ, ತುರಂಗಭಾರತ ಎಂಬ ಮೂರು ಗ್ರಂಥಗಳನ್ನು ರಚಿಸಿದ್ದಾನೆ. ತತ್ತ್ವಚೌಪದ ಅದ್ವೈತಬೋಧಕವಾದ 54 ಪದ್ಯಗಳುಳ್ಳ ಸಣ್ಣಗ್ರಂಥ. ಇದೇ ಈತನ ಮೊದಲ ಗ್ರಂಥ. ನಾರಾಯಣಾಕ್ಷರ ಮಾಲಿಕಾಸ್ತೋತ್ರ ದೊರೆತಿಲ್ಲ. ತುರಂಗಭಾರತ ಬೃಹದ್ಗ್ರಂಥ. ವಾರ್ಧಕ ಷಟ್ಪದಿಯಲ್ಲಿರುವ ಇದರಲ್ಲಿ 96 ಸಂಧಿಗಳೂ 4,720 ಪದ್ಯಗಳೂ ಇವೆ. ಸಂಕ್ಷೇಪ ಭಾರತವೆಂದು ತನ್ನ ಗ್ರಂಥಕ್ಕೆ ಕವಿ ತಾನೇ ಹೆಸರಿಟ್ಟಿದ್ದರೂ ಆ ಸುತ್ತಿನವರು ಅಶ್ವಧಾಟಿಯ ವೇಗದ ವಾರ್ಧಕ ಷಟ್ಪದಿಯ ನಿಮಿತ್ತವಾಗಿ ಇದನ್ನು ತುರಂಗ ಭಾರತವೆಂದು ಕರೆದರಂತೆ. ಇದರಲ್ಲಿನ ಭಾಷೆ ಜನರಾಡುವ ಮಾತಿಗೆ ತೀರ ಸಮೀಪವಾಗಿದೆ. ಭಾಷಾ ಪರಿಶುದ್ಧಿಗೆ ಕವಿ ಹೆಚ್ಚಾಗಿ ಗಮನ ಕೊಟ್ಟಿಲ್ಲದಿದ್ದರೂ ಈತನ ಸ್ಫೂರ್ತಿ ಮತ್ತು ವರ್ಣನಾಶಕ್ತಿ ಅಪಾರವಾದುದು. (ಎಚ್.ಡಿ.)