ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪರಾಗಶಾಸ್ತ್ರ

ವಿಕಿಸೋರ್ಸ್ದಿಂದ

ಪರಾಗಶಾಸ್ತ್ರ - ಪರಾಗ (ಪೋಲನ್) ಮತ್ತು ಬೀಜಾಣುಗಳ (ಸ್ಟೋರ್ಸ್) ವೈಜ್ಞಾನಿಕ ಅಧ್ಯಯನ (ಪ್ಯಾಲಿನಾಲಜೀ) ಈ ಪದವನ್ನು ಮೊತ್ತಮೊದಲ ಬಾರಿಗೆ (1944) ಬಳಸಿದ್ದು ಹೈಡ್ ಮತ್ತು ವಿಲಿಯಮ್ ಎಂಬ ವಿಜ್ಞಾನಿಗಳು. ಕಾಕೊಲಿಥೋಪೋರುಗಳು. ಡಿಸ್‍ಕೋಆಸ್ಟರುಗಳು, ಡೈಯಾಟಮುಗಳು, ಶಿಲೀಂಧ್ರ ಬೀಜಾಣುಗಳು, ಪೀಡಿಯಾಸ್ಟ್ರಮ್, ಟ್ಯಾಸ್‍ಮೊನೈಟಸ್, ಡೈನೊಫ್ಲಾಜೆಲ್ಲೇಟುಗಳು ಸಿಲಿಕೊಫ್ಲಾಜಿಲ್ಲೇಟುಗಳು ಮತ್ತು ಇತರ ಸಮುದ್ರ ಕಳೆಗಳ ಪಳೆಯುಳಿಕೆಗಳ ಅಧ್ಯಯನವನ್ನು ಸಹ ಇದು ಒಳಗೊಳ್ಳುತ್ತದೆ. ಈ ಅಣು ಪಳೆಯುಳಿಕೆಗಳ ಗಾತ್ರ 2-1000 ಮೈಕ್ರಾನುಗಳಾಗಿದ್ದು ಸ್ವಾಭಾವಿಕವಾಗಿಯೇ ಇವು ಸೂಕ್ಷ್ಮದರ್ಶಕೀಯವಾಗಿರುವುವು.

ಪರಾಗಶಾಸ್ತ್ರವನ್ನು ವಿಶಾಲವಾಗಿ ಮೂಲ ಪರಾಗಶಾಸ್ತ್ರ ಮತ್ತು ಪ್ರಾಯೋಗಿಕ ಪರಾಗಶಾಸ್ತ್ರಗಳೆಂದು ವಿಂಗಡಿಸಬಹುದು. ಮೂಲ ಪರಾಗಶಾಸ್ತ್ರ ಪರಾಗ ಮತ್ತು ಬೀಜಾಣುಗಳ ಬಾಹ್ಯ ಗುಣಗಳ ಅಧ್ಯಯನವಾದರೆ. ಪ್ರಾಯೋಗಿಕ ಪರಾಗಶಾಸ್ತ್ರ ಒಳಗೊಳ್ಳುವುದು ಜೇನು ಪರಾಗಶಾಸ್ತ್ರ (ಮೆಲಿಟ್ಟೊಪ್ಯಾಲಿನಾಲಜೀ-ಜೇನಿನಲ್ಲಿರುವ ಪರಾಗಗಳ ಅಧ್ಯಯನ), ಪ್ರಾಗ್ಪರಾಗಶಾಸ್ತ್ರ (ಪೇಲಿಯೊಪ್ಯಾಲಿನಾಲಜೀ) ಮತ್ತು ಔಷಧಪರಾಗಶಾಸ್ತ್ರ (ಫಾರ್ಮಕೊಪ್ಯಾಲಿನಾಲಜೀ) ಇತ್ಯಾದಿಗಳ ಅಧ್ಯಯನವನ್ನು.

ಪರಾಗ ಮತ್ತು ಬೀಜಾಣುಗಳ ಹೊರಕವಚ ಅನೇಕ ಸಂಮ್ಮಿಶ್ರಿತ ವಸ್ತುಗಳಿಂದ ರಚಿತವಾಗಿದ್ದು ಕೊಳೆಯುವಿಕೆಯನ್ನು ನಿರೋಧಿಸುವಂತಹುದ್ದಾದರಿಂದ ಅತಿ ಶೀತ, ಉಷ್ಣ ಮತ್ತು ಒತ್ತಡಗಳಲ್ಲಿ ಪರಾಗ ಮತ್ತು ಬೀಜಾಣುಗಳ ಪಳೆಯುಳಿಕೆ ಸುರಕ್ಷಿತವಾಗಿ ಉಳಿಯುವಂತಾಗುತ್ತದೆ. ಎಲ್ಲ ತರಹದ ಶಿಲಾಸ್ತರಗಳನ್ನೊಳಗೊಂಡ ಮತ್ತು ಎಲ್ಲ ಯುಗಗಳ (ಅಂದರೆ ಪೂರ್ವ ಪೇಲಿಯೋeóÉೂೀಯಿಕಿನಿಂದ ಹಿಡಿದು ವರ್ತಮಾನತನಕದ ಎಲ್ಲ ಯುಗಗಳ) ಜಲಶಿಲೆಗಳಲ್ಲಿ ಪರಾಗ ಹಾಗೂ ಬೀಜಾಣುಗಳು ದೊರಕುವುವಾದ್ದರಿಂದ ಪರಾಗಶಾಸ್ತ್ರ ಜೀವಶಾಸ್ತ್ರದ ಇತರ ಪ್ರಕಾರಗಳ ಅಧ್ಯಯನದ ದೃಷ್ಟಿಯಿಂದ ನಿರ್ದಿಷ್ಟವಾಗಿ ಮತ್ತು ನಿಶ್ಚಯವಾಗಿ ಉಪಯುಕ್ತ ಎನಿಸಿಕೊಂಡಿದೆ. ಈ ಪರಾಗ ಭೂರಿ ಮೊತ್ತಗಳಲ್ಲಿ ಉತ್ಪತ್ತಿಯಾಗುವುದರಿಂದ ಅಲ್ಪ ಪ್ರಮಾಣದ ಪಳೆಯುಳಿಕೆಯನ್ನೊಳಗೊಂಡ ಶಿಲಾವಸ್ತು ಆಯಾ ಶಿಲೆಯ ಕಾಲದ ಹಾಗೂ ಶಿಲೆಗಳ ಬಾಹ್ಯ ಮತ್ತು ಅಂತರಶಿಲಾ ಪ್ರಮಾಣಗಳ ಬಾಂಧವ್ಯಗಳ ನಿರೂಪಣೆಯ ಅಧ್ಯಯನಕ್ಕೆ ಸಾಕಷ್ಟು ಅಣುಪಳೆಯುಳಿಕೆಗಳನ್ನು ಒದಗಿಸುತ್ತದೆ. ಉದಾಹರಣೆಗೆ ರೂಮೆಕ್ಸ್ ಅಸಿಟೋಸ ಗಿಡದ ಒಂದೇ ಒಂದು ಹೂಗೊಂಚಲು 393,000,000 ಪರಾಗಗಳನ್ನು ಉತ್ಪಾದಿಸುವುದಾದರೆ ಪೈನಸ್ ನೈಗ್ರ ಎಂಬುದು 225,000,000 ಪರಾಗಗಳನ್ನು ಉತ್ಪಾದಿಸುತ್ತದೆ. ಹೊರಕವಚದ ಬಾಹ್ಯ ವೈವಿಧ್ಯಗಳಿಂದ ಪರಾಗ ಮತ್ತು ಬೀಜಾಣುಗಳನ್ನು ಸುಲಭವಾಗಿ ಗುರುತಿಸಬಹುದು.

ಪರಾಗ ಮತ್ತು ಬೀಜಾಣುಗಳು ಗಾಳಿ, ನೀರು ಮತ್ತು ಜೀವಿಗಳಿಂದ ಪ್ರಸಾರಗೊಳ್ಳುವುವು. ಇವು ನೀರಿನಲ್ಲಿ ಸಾಕಷ್ಟು ಕಾಲ ತೇಲಾಡುತ್ತವೆ ಮತ್ತು ಗಾಳಿಯ ಹೊಡೆತದಿಂದ ಬಹು ದೂರ ಕೊಂಡೊಯ್ಯಲ್ಪಡುತ್ತವೆ. ಕಾಲಕ್ರಮದಲ್ಲಿ ನದಿ, ಸರೋವರ ಸಮುದ್ರತೀರ ಮುಂತಾದೆಡೆ ತಳಕ್ಕೆ ಇಳಿದು ಪಳೆಯುಳಿಕೆಗಳಾಗುತ್ತವೆ. ಕಾಡುಗಳಲ್ಲಿ ನೆಲದ ಮೇಲೆಯೇ ಸಂಗ್ರಹಗೊಂಡು ಕಸಕಡ್ಡಿಯಿಂದ ಆವೃತವಾಗಿ ಪೀಟ್ಸ್ ಮತ್ತು ಬಾಗ್ಸ್‍ಗಳಲ್ಲಿ ಪಳೆಯುಳಿಕೆಗಳಾಗಿ ಉಳಿಯುತ್ತವೆ. ಹೈಡ್ರೊಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಮುಂತಾದ ರಾಸಾಯನಿಕ ವಸ್ತುಗಳನ್ನು ಬಳಸಿ ಪರಾಗ ಮತ್ತು ಬೀಜಾಣುಗಳನ್ನು ಶಿಲೆಗಳಿಂದ ಬೇರ್ಪಡಿಸಿ ಅಧ್ಯಯನಕ್ಕೆ ಅನುಕೂಲವಾಗುವಂತೆ ಸ್ಲೈಡುಗಳನ್ನು ತಯಾರಿಸಲಾಗುತ್ತದೆ.

ಪರಾಗಶಾಸ್ತ್ರದ ಪರಮ ಉಪಯೋಗ ತೈಲೋದ್ಯಮದಲ್ಲಿ. ಪರಾಗಶಾಸ್ತ್ರ ಜಲಜಶಿಲೆಗಳ ಕಾಲ ನಿರ್ಧರಣೆಯಲ್ಲೂ ಉಪಯುಕ್ತವಾಗಿದೆ. ಜೀವವಿಕಾಸ, ಗತಿಸಿ ಹೋದ ಯುಗಗಳ ಪರಿಸರ ಹೇಗಿತ್ತು ಎಂಬುದರ ಅಧ್ಯಯನ ಮತ್ತು ಪ್ರಾಚೀನ ಕಾಲದ ಭೂವಿವರಣೆಗೆ ಪರಾಗಶಾಸ್ತ್ರದ ಅಭ್ಯಾಸ ಆವಶ್ಯಕ. ಪರಾಗ ಹಾಗೂ ಬೀಜಾಣುಗಳ ಪಳೆಯುಳಿಕೆಗಳು ಅಲ್ಪ ಭೂ ವ್ಶೆಜ್ಞಾನಿಕ ಕಾಲಕ್ಕೆ ಸೀಮಿತವಾದ್ದರಿಂದ ಇವು ಪ್ರಾದೇಶಿಕ ಮತ್ತು ಸ್ಥಳೀಯ ಪ್ರಾಮುಖ್ಯವುಳ್ಳ ಸೂಚಕ ಪಳೆಯುಳಿಕೆಗಳಾಗಿ ಉಪಯುಕ್ತವೆನಿಸಿವೆ.

ಬೀಜಾಣುಗಳು ಮತ್ತು ಪರಾಗಗಳು ಸಮುದ್ರಾತೀತ ಮತ್ತು ಭೂಖಂಡದ ಅಮಾನತುಗಳಲ್ಲಿ ಬಹುತೇಕ ಶಿಲಾಸ್ತರಗಳಲ್ಲಿ ದೊರಕುವುದರಿಂದ ಕಾಲ ನಿರ್ಧಾರಕ್ಕೆ ಒಳ್ಳೆಯ ವಿಧಾನವನ್ನು ಒದಗಿಸಿಕೊಟ್ಟಿವೆ. ಇವು ಬಾಹ್ಯ ಮತ್ತು ಅಂತರ ಶಿಲಾಸ್ತರಗಳ ಪರಸ್ಪರ ಸಂಬಂಧಗಳನ್ನು ನಿರ್ಧರಿಸುವುದರಲ್ಲಿ ಸಹಾಯಕವಾಗಿವೆಯಲ್ಲದೆ, ಬಹುದೂರದ ಶಿಲೆಗಳ ಪರಸ್ಪರ ಸಂಬಂಧ ನಿರ್ದೇಶಕ್ಕೆ ಕೂಡ ಸಹಕಾರಿಯಾಗಿವೆ. ಈ ಉಪಯೋಗಗಳಲ್ಲದೆ ಅಣುಪಳೆಯುಳಿಕೆಗಳು ಪ್ರಾಗ್ಪರಿಸರವಿಜ್ಞಾನ ಮತ್ತು ಗತಭೂವಿವರಣೆಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದರ ಮೂಲಕ ತೈಲಾನ್ವೇಷಣೆಗೆ ಅನುಕೂಲವಾದ ಪ್ರದೇಶಗಳನ್ನು ಸೂಚಿಸುವುವು. ಈ ಕಾರಣಗಳಿಂದ ಪರಾಗಶಾಸ್ತ್ರ ಪಟಲವರ್ಣನಾ ಭೂವಿವರಣೆಯಲ್ಲಿ ಪರಿಣಾಮಕಾರಿಯಾದ ತಾಂತ್ರಿಕತೆಯನ್ನು ಒದಗಿಸಿಕೊಟ್ಟು ಸಾವಯವ ಇಂಧನ ಸಾಮಗ್ರಿಗಳನ್ನು ಪಡೆಯುವ ವಿಧಾನವನ್ನು ತೋರಿಸಿಕೊಡುತ್ತದೆ. ಪರಾಗಶಾಸ್ತ್ರದ ಮತ್ತಿತರ ಉಪಯೋಗಗಳು ಈ ರೀತಿ ಇವೆ.

ವಾಯುಪರಾಗಶಾಸ್ತ್ರ (ಏರೊಪ್ಯಾಲಿನಾಲಜೀ) : ವಾಯುಗ್ರಾಹಕ ಅಥವಾ ವಾಯುವಿನಿಂದ ಪ್ರಸಾರವಾಗುವ ಬೀಜಾಣುಗಳು ಮತ್ತು ಪರಾಗಗಳು ಹಲವಾರು ದೃಷ್ಟಿಯಿಂದ ವಿಶೇಷ ಪ್ರಾಮುಖ್ಯ ಪಡೆದಿವೆ. ಹೇ ಫೀವರ್, ಆಸ್ತಮ ಮುಂತಾದ ಕಾಯಿಲೆಗಳು, ಕೆಲವು ತೆರನ ಪರಾಗಗಳ ಉಚ್ಛ್ವಾಸದಿಂದ ಬರಬಹುದೆಂದು ಇತ್ತೀಚೆಗೆ ಗೊತ್ತಾಗಿದೆ. ಈ ಕಾಯಿಲೆಗಳು ಪ್ರಪಂಚದ ನಾನಾ ಭಾಗಗಳಲ್ಲಿ ಸಾಕಷ್ಟು ಸಾಮಾನ್ಯವಾಗಿದ್ದು. ಇತ್ತೀಚಿಗೆ ಪರಾಗಶಾಸ್ತ್ರಅಧ್ಯಯನದಿಂದ ಈ ಬಗೆಯ ರೋಗಕಾರಕ ಪರಾಗಗಳನ್ನು ಗುರುತಿಸಲಾಗಿದೆ.

ಜೇನು ಪರಾಗಶಾಸ್ತ್ರ (ಮೆಲಿಟ್ಟೊಪ್ಯಾಲಿನಾಲಜೀ) : ಪರಾಗಶಾಸ್ತ್ರದ ಸಹಾಯದಿಂದ ಜೇನುತುಪ್ಪದ ಸಂಯೋಜನೆಯನ್ನು ಅಭ್ಯಸಿಸುವ ವಿಜ್ಞಾನ. ಇದರ ಸಹಾಯದಿಂದ ಜೇನುತುಪ್ಪದ ಕಲಬೆರಕೆಯನ್ನು ಅಲ್ಪ ಖರ್ಚಿನಲ್ಲಿ, ಪ್ರಯೋಗಾಲಯಗಳಲ್ಲಿ ಪತ್ತೆಹಚ್ಚಬಹುದಲ್ಲದೆ. ವಿಷಪೂರಿತ ಗಿಡಗಳಿಂದ ತಯಾರಿಸಲ್ಪಟ್ಟ ಜೇನು ತುಪ್ಪವನ್ನು ಗುರುತಿಸಬಹುದು.

ಔಷಧ ಪರಾಗಶಾಸ್ತ್ರ (ಫಾರ್ಮಕೊಪ್ಯಾಲಿನಾಲಜೀ) ಲೈಕೊಪೋಡಿಯಮ್, ಟೈಫ, ಸೈಕ್ಯಾಸ್ ಮುಂತಾದ ಸಸ್ಯಗಳ ಪರಾಗಗಳು ಮಾನವನ ಬಹುತೇಕ ರೋಗಗಳ ಚಿಕೆತ್ಸೆಯಲ್ಲಿ ಔಷಧಗಳಾಗಿ ಬಳಕೆಯಾಗುವುವು. ಔಷಧೋದ್ಯಮದಲ್ಲಿ ಉಪಯುಕ್ತವಾಗಿರುವ ಪರಾಗ ಹಾಗೂ ಬೀಜಾಣುಗಳ ಅಧ್ಯಯನವೇ ಔಷಧ ಪರಾಗಶಾಸ್ತ್ರ. ಈ ಅಧ್ಯಯನ ಔಷಧಗಳ ಕಲಬೆರಕೆಯನ್ನು ತಡೆಗಟ್ಟುವುದರಲ್ಲಿಯೂ ಸಹಕಾರಿಯಾಗುತ್ತದೆ.

ಪ್ರಾಚ್ಯವಸ್ತು ಪರಾಗಶಾಸ್ತ್ರ (ಆರ್ಕಿಯೊಪ್ಯಾಲಿನಾಲಜೀ) : ಪ್ರಾಗೈತಿಹಾಸಿಕ ಪ್ರಾಮುಖ್ಯವುಳ್ಳ ಪ್ರದೇಶಗಳಲ್ಲಿ ದೊರೆಯುವ ವಸ್ತುಗಳ ಪರಾಗಶಾಸ್ತ್ರಧ್ಯಯನದಿಂದ ಅಂದಿನ ವಾತಾವರಣ ಸ್ಥಿತಿಗಳು, ಅಂದಿನ ಜನರ ಖಾದ್ಯಾಭ್ಯಾಸಗಳು ಮುಂತಾದ ವಿಚಾರಗಳ ಬಗ್ಗೆ ಅಭ್ಯಾಸ ನಡೆಸಬಹುದು.

ಕಾನೂನಿನ ಪರಾಗಶಾಸ್ತ್ರ (ಫಾರೆನ್ಸಿಕ್ ಪ್ಯಾಲಿನಾಲಜೀ) : ಅಪರಾಧಶಾಸ್ತ್ರಾಭ್ಯಾಸದಲ್ಲಿ ಪರಾಗಶಾಸ್ತ್ರದ ಅಧ್ಯಯನ ಇತ್ತೀಚಿಗೆ ಸಾಕಷ್ಟು ಪ್ರಾಮುಖ್ಯವನ್ನು ಪಡೆದಿದೆ. ಈ ತರಹದ ಅಧ್ಯಯನಗಳು ಅಪರಾಧಿಯನ್ನು ಗುರುತಿಸುವುದರಲ್ಲಿ ಸಾಕಷ್ಟು ಉಪಯುಕ್ತವಾಗಿವೆ.

ತೋಟಗಾರಿಕೆ ಮತ್ತು ಸಸ್ಯಪೋಷಣೆಯಲ್ಲಿ ಪರಾಗಶಾಸ್ತ್ರ : ಸಸ್ಯಗಳ ಉತ್ಪಾದನೆಯನ್ನು ಅಭಿವೃದ್ಧಿಗೊಳಿಸಲು ಬಳಸುವ ಅಡ್ಡತಳಿ ವಿಧಾನಗಳಲ್ಲಿ ಪರಾಗಶಾಸ್ತ್ರ ಸಹಾಯಕಾರಿಯಾಗಿದೆ. ಯುಕ್ತ ರೀತಿಯ ಹಾಗೂ ಆರೋಗ್ಯವಂತ ಸಸ್ಯಗಳಿಂದ ಪರಾಗವನ್ನು ಸಂಗ್ರಹಿಸಿಡುವುದು. ಬಹಳ ಕಾಲ ಕೆಡದಂತೆ ಸಂರಕ್ಷಿಸುವುದು, ಯುಕ್ತ ಕಾಲಗಳಲ್ಲಿ ಪರಾಗಾರ್ಪಣೆಗೆ ಅವನ್ನು ಬಳಸುವುದು ಮುಂತಾದ ಚಟುವಟಿಕೆಗಳಿಂದ ಉತ್ತಮ ಸಸ್ಯಗಳ ಉತ್ಪಾದನೆಯನ್ನು ಸಾಧಿಸಬಹುದಾಗಿದೆ. (ಬಿ.ಎಸ್.ವಿ.ಇ.ಎನ್.) (ಪರಿಷ್ಕರಣೆ : ಕೆ ಬಿ ಸದಾನಂದ)