ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಳನಿ

ವಿಕಿಸೋರ್ಸ್ದಿಂದ

ಪಳನಿ ತಮಿಳುನಾಡಿನ ಮಧುರೆ ಜಿಲ್ಲೆಯಲ್ಲಿರುವ ಒಂದು ಪುಣ್ಯಕ್ಷೇತ್ರ. ಇಲ್ಲನ ವರಾಹಗಿರಿ ಬೆಟ್ಟದ ಶಿಖರದ ಮೇಲೆ ಶ್ರೀ ಸುಬ್ರಹ್ಮಣ್ಯನ ದೇವಾಲಯವಿದೆ. ಈ ಬೆಟ್ಟವನ್ನು ಮೇರುಪರ್ವತದ ಚೂರೆಂದು ಕಾಳಹಸ್ತಿಯ ಸ್ಥಳಪುರಾಣ ಸೂಚಿಸುತ್ತದೆ. ಆದರೆ ಇತರ ಸ್ಥಳಪುರಾಣಗಳಲ್ಲೂ ಹಲವಾರು ಇಂಥ ಚೂರುಗಳ ಉಲ್ಲೇಖವಿದೆ. ಹಿಡಿಂಬಾಸುರ ಇಂಥ ಒಂದು ಚೂರನ್ನು ಅಡ್ಡೆಯ ಮೇಲೆ ಹೊತ್ತು ತರುಗುತ್ತಿದ್ದಾಗ ಒಮ್ಮೆ ಕೆಳಕ್ಕೆ ಇಳಿಸಿದನೆಂದು ಮತ್ತೆ ಅದನ್ನು ಆತನಿಂದ ಎತ್ತಿಕೊಳ್ಳಲಾಗಲಿಲ್ಲವೆಂದು ಆಗ ಸುಬ್ರಹ್ಮಣ್ಯ ವಟುವಿನ ವೇಷದಲ್ಲಿ ಕಾಣಿಸಿಕೊಂಡು ಹಿಡಿಂಬಾಸುರನೊಡನೆ ಹೋರಾಡಿ ಆತನನ್ನು ಸೋಲಿಸಿ ತನ್ನ ದ್ವಾರಪಾಲಕನನ್ನಾಗಿ ಮಾಡಿಕೊಂಡನೆಂದು ಕಥೆ.

ಇಲ್ಲಿ ಸುಬ್ರಹ್ಮಣ್ಯ ಮೂರ್ತಿಯ ಕೈಲಿ ಒಂದು ದಂಡವಿರುವುದರಿಂದ ಈತನನ್ನು ದಂಡಾಯುಧಪಾಣಿಯೆಂದು ಕರೆಯುತ್ತಾರೆ. ಪಶ್ಚಿಮಾಭಿಮುಖವಿರುವ ಈ ಮಂದಿರದ ಹತ್ತಿರ ಭವ್ಯವಾದ ಒಂದು ಗೋಪುರವಿದೆ. ಈ ಪರ್ವತದಲ್ಲಿ ಸುಬ್ರಹ್ಮಣ್ಯ ನೆಲೆಸಿದ ಬಗೆಗೆ ಒಂದು ಆಖ್ಯಾಯಿಕೆ ಹೀಗಿದೆ:

ಒಮ್ಮೆ ಶಿವಪಾರ್ವತಿಯರು ವಿನೋದಕ್ಕಾಗಿ ತಮ್ಮ ಇಬ್ಬರು ಪುತ್ರರಾದ ಗಣೇಶ, ಸುಬ್ರಹ್ಮಣ್ಯ ಇವರ ನಡುವೆ ವಿಶ್ವಪ್ರದಕ್ಷಿಣೆಯ ಸ್ಪರ್ಧೆಯನ್ನು ಏರ್ಪಡಿಸಿದರು. ಸುಬ್ರಹ್ಮಣ್ಯ ತತ್‍ಕ್ಷಣವೇ ತನ್ನ ವಾಹನವಾದ ನವಿಲನ್ನೇರಿ ಪೃಥ್ವಿ ಪ್ರದಕ್ಷಿಣೆಗೆ ಹೊರಟ.

ಸ್ಥೂಲ ದೇಹಿಯಾದ ಗಣಪತಿಯಾದರೂ ತನ್ನ ವಾಹನವಾದ ಇಲಿಯ ಮೇಲೆ ಕುಳಿತು ಸುಬ್ರಹ್ಮಣ್ಯನ ಜೊತೆ ಸ್ಪರ್ಧಿಸಲು ಸಾಧ್ಯವಿಲ್ಲವಾಗಿ ಬುದ್ಧಿವಂತಿಕೆಯಿಂದ ವಿಶ್ವವನ್ನೇ ಒಳಗೊಂಡ ತನ್ನ ಮಾತಾಪಿತೃಗಳನ್ನು ಮೂರು ಪ್ರದಕ್ಷಿಣೆ ಹಾಕಿ ತಾನೇ ಸ್ಪರ್ಧೆಯಲ್ಲಿ ಗೆದ್ದನೆಂದು ಹೇಳಿದ. ಇದರಿಂದ ಸಂತೋಷಗೊಂಡ ಶಿವ ಬಹುಮಾನವಾಗಿ ಗಣಪತಿಗೆ ದಾಳಿಂಬೆ ಹಣ್ಣನ್ನು ನೀಡಿದ. ಇತ್ತ ಪೃಥ್ವಿಯ ಪ್ರದಕ್ಷಿಣೆ ಮಾಡಿ ಬಂದ ಸುಬ್ರಹ್ಮಣ್ಯ ಶಿವನ ಪಕ್ಷಪಾತವನ್ನು ಕಂಡು ಅಸಮಾಧಾನಗೊಂಡು ಕ್ರೋಧದಿಂದ ಪಳನಿಯಲ್ಲಿ ನೆಲೆಸಿದನಂತೆ.

ಸುಬ್ರಹ್ಮಣ್ಯ ತನ್ನ ಇಷ್ಟಾರ್ಥವನ್ನು ಪೂರೈಸುತ್ತಾನೆಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಮುಸಲ್ಮಾನರು ಇಲ್ಲಿ ಹರಕೆ ಹೊರುವುದು ಒಂದು ವೈಶಿಷ್ಟ್ಯ. ಕಾರ್ಥಿಕ ಮಾಸದಲ್ಲಿ ಇಲ್ಲಿ ದೊಡ್ಡ ಉತ್ಸವ ನಡೆಯುತ್ತದೆ. (ಜಿ.ಹೆಚ್.)