ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪವಿತ್ರವಾರ

ವಿಕಿಸೋರ್ಸ್ದಿಂದ

ಪವಿತ್ರವಾರ - ಪಾಸ್ಖ (ಈಸ್ಟರ್) ಹಬ್ಬದ ಹಿಂದಿನ ವಾರ (ಹೋಲಿವೀಕ್). ಈವಾರದಲ್ಲಿ ಬರುವ ಗರಿಗಳ ಭಾನುವಾರ (ಪಾಮ್ ಸಂಡೇ), ಪವಿತ್ರ ಗುರುವಾರ, ಪವಿತ್ರ ಶುಕ್ರವಾರ (ಗುಡ್‍ಫ್ರೈಡೇ) ಮತ್ತು ಪವಿತ್ರ ಶನಿವಾರಗಳೆಂದು ಕ್ರೈಸ್ತರು ಪ್ರಾರ್ಥನೆಗಳನ್ನು ಸಲ್ಲಿಸಿ ವಿಶಿಷ್ಟ ಧಾರ್ಮಿಕ ವಿಧಿಗಳನ್ನು ಆಚರಿಸುತ್ತಾರೆ.

ಯೇಸು ಕೊನೆಯ ಬಾರಿ ವೈಭವೋಪೇತನಾಗಿ ಜೆರೂಸಲೇಮನ್ನು ಪ್ರವೇಶಿಸಿದುದರ ಸ್ಮರಣೆ ಗರಿಗಳ ಭಾನುವಾರದ ವೈಶಿಷ್ಟ್ಯ. ಯೆಹೂದ್ಯರು ಆಲಿವ್ ಮರದ ಗರಿಗಳನ್ನು ಕೈಯಲ್ಲಿ ಹಿಡಿದು ಜಯಘೋಷ ಮಾಡಿ ಯೇಸುವನ್ನು ಸ್ವಾಗತಿಸಿದುದನ್ನು ಜ್ಞಾಪಿಸಲು ವಿಶ್ವಾಸಿಗಳು ಗರಿಗಳನ್ನು ಹಿಡಿದು ಮೆರವಣಿಗೆ ನಡೆಸುತ್ತಾರೆ. ಪವಿತ್ರ ಗುರುವಾರ ಯೇಸುವಿನ ಕೊನೆಯ ಭೋಜನದ ದಿನ. ಅಂದು ಯೇಸು ಕರ್ತನ ಭೋಜನ (ಯೂಕರಿಸ್ಟ್) ಎಂದು ಈಗ ನಿರ್ದೇಶಿಸಲ್ಪಡುವ ಸಂಸ್ಕಾರವನ್ನು ಸ್ಥಾಪಿಸಿದ. ವಿನಮ್ರತೆಯನ್ನು ಭೋಧಿಸುವುದಕ್ಕಾಗಿ ಶಿಷ್ಯರ ಪಾದಗಳನ್ನು ತೊಳೆದ. ಪವಿತ್ರ ಶುಕ್ರವಾರ ಯೇಸು ಶಿಲುಬೆಯ ಮೇಲೆ ಅಸುನೀಗಿದ ದಿನ. ಆ ದಿನ ಪೂಜೆ ನಡೆಯುವುದಿಲ್ಲ. ಯೇಸು ಅನುಭವಿಸಿದ ಹಿಂಸಾಮರಣಗಳ ಚರಿತ್ರೆಯನ್ನು ಓದುವುದು, ಬಹಿರಂಗವಾಗಿ ಔಪಚಾರಿಕ ಪ್ರಾರ್ಥನೆಗಳನ್ನು ಸಲ್ಲಿಸುವುದು, ಶಿಲುಬೆಯನ್ನು ಗೌರವಿಸಿ ನಮಸ್ಕರಿಸುವುದು ಮತ್ತು ಸತ್ತ್ವಸಾರವನ್ನು ಸ್ವೀಕರಿಸುವುದು ಅಂದಿನ ಮುಖ್ಯ ವಿಧಿಗಳು. ಪವಿತ್ರ. ಶನಿವಾರವೆಂದರೆ ಪಾಸ್ಖ ಹಬ್ಬದ ಜಾಗರಣೆ. ಮೃತನಾದ ಯೇಸು ಭಾನುವಾರ ಮತ್ತೆ ಜೀವಂತವಾಗಿ ಏಳುವುದನ್ನು ನಿರೀಕ್ಷಿಸಿ ಪ್ರಾರ್ಥನೆಯಲ್ಲಿ ಕಾಲ ಕಳೆಯುತ್ತಿರುವ ವಿಶ್ವಾಸಿಗಳು ದೇವರ ರಕ್ಷಣ ಕಾರ್ಯವನ್ನು ನಿರೂಪಿಸುವ ಬೈಬಲಿನ ಭಾಗಗಳನ್ನು ಓದುತ್ತಾರೆ. ಯೇಸು ಜಗತ್ತಿನ ಬೆಳಕು ಎಂಬುದನ್ನು ಸೂಚಿಸಲು ಹೊಸದಾಗಿ ಬೆಂಕಿಯನ್ನು ಉರಿಸಿ ಪಾಸ್ಖಲ್ ಬತ್ತಿಯನ್ನು ಹೊತ್ತಿಸುತ್ತಾರೆ; ಅಷ್ಟು ಹೊತ್ತಿಗೆ ನಡುರಾತ್ರಿಯಾಗಿ ಭಾನುವಾರ ಬಂತೆಂದಾಗ ಆವರೆಗೆ ಕ್ರಿಸ್ತನ ಕಷ್ಟಸ್ಮರಣೆಯಲ್ಲಿಯೇ ಇದ್ದ ಧರ್ಮಸಭೆ ಗಂಭೀರವೂ ಸುಶ್ರಾವ್ಯವೂ ಆದ ಪಾಸ್ಖ ಗೀತೆಯನ್ನು ಹಾಡಿ ಕ್ರಿಸ್ತನ ಪುನರುತ್ಥಾನವನ್ನು ಸ್ವಾಗತಿಸುತ್ತದೆ, ಸ್ಮರಿಸುತ್ತದೆ. ಹೀಗೆ ಲೋಕರಕ್ಷಣೆ ಯಾವ ಪುಣ್ಯ ಘಟನೆಗಳ ಮೂಲಕ ನಡೆಯಿತೊ ಆ ಘಟನೆಗಳ ಸ್ಮರಣೆಯೇ ಪವಿತ್ರವಾರದ ಗುರಿ. ಆದ್ದರಿಂದ ಈ ವಾರ ಕ್ರೈಸ್ತಧರ್ಮದಲ್ಲಿ ಕೇಂದ್ರಿಯ ಪ್ರಾಧಾನ್ಯ ಪಡೆದಿವೆ. ಈ ದೃಷ್ಟಿಯಲ್ಲಿ ಪೌರಸ್ತ್ಯ ಕ್ರೈಸ್ತಧರ್ಮದಲ್ಲಿ ಕೇಂದ್ರಿಯ ಪ್ರಾಧಾನ್ಯ ಪಡೆದಿದೆ. ಈ ದೃಷ್ಟಿಯಲ್ಲಿ ಪೌರಸ್ತ್ಯ ಕ್ರೈಸ್ತರು ಇದನ್ನು ರಕ್ಷಣೆಯ ವಾರ (ವೀಕ್ ಆಫ್ ಸ್ಯಾಲ್ವೇಷನ್) ಎನ್ನುವುದು ಅರ್ಥಯುಕ್ತವಾಗಿದೆ.

ಸುಮಾರು ಮೂರನೆಯ ಶತಮಾನದಲ್ಲಿ ಪಾಸ್ಖ ಹಬ್ಬದ ಆಚರಣೆಯನ್ನು ಪವಿತ್ರವಾರದಂದು ಆರಂಭಿಸಿ ಭಾನುವಾರದವರೆಗೆ ನಡೆಸುತ್ತಿದ್ದರು. ನಾಲ್ಕನೆಯ ಶತಮಾನದಲ್ಲಿ ಪವಿತ್ರ ಗುರುವಾರ ಸೇರಿಕೊಂಡಿತು. ಐದನೆ ಆರನೆಯ ಶತಮಾನಗಳಲ್ಲಿ ಇಡೀ ವಾರವನ್ನೇ ಈ ಆಚರಣೆಗೆ ಮೀಸಲಿರಿಸಿದರು. ಬರಬರುತ್ತ ಈ ವಾರದ ನಿಜಸ್ವಭಾವವನ್ನೂ ಉದ್ಧೇಶವನ್ನೂ ಕ್ರೈಸ್ತರು ಮರೆಯುತ್ತಿದ್ದರೆಂದು ಕಾಣುತ್ತದೆ. 1955ರಲ್ಲಿ ಹನ್ನೆರಡನೆಯ ಪಯಸ್ ಜಗದ್ಗುರುಗಳು ಪವಿತ್ರ ವಾರಕ್ಕೆ ಸಲ್ಲಬೇಕಾದ ನ್ಯಾಯವಾದ ಸ್ಥಾನವನ್ನೂ ಪ್ರಾಧಾನ್ಯವನ್ನೂ ಪುನಃ ಸ್ಥಾಪಿಸಿದರು. ಎಲ್ಲ ವಿಶ್ವಾಸಿಗಳು ಪವಿತ್ರ ವಾರದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಧರ್ಮಸಭೆ ಒತ್ತಾಯ ಪೂರ್ವಕವಾಗಿ ಬೋಧಿಸುತ್ತದೆ. (ಇ.ಎನ್.ಎಸ್.ಜೆ.)