ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾಂಡು
ಗೋಚರ
ಪಾಂಡು - ಪ್ರಖ್ಯಾತ ಪಂಚಪಾಂಡವರ ತಂದೆ; ಚಂದ್ರವಂಶದ ವಿಚಿತ್ರವೀರ್ಯನ ಪತ್ನಿ ಅಂಬಾಲಿಕೆಯಲ್ಲಿ ವೇದವ್ಯಾಸನಿಂದ ಹುಟ್ಟಿದವ. ಧೃತರಾಷ್ಟ್ರ ಮತ್ತು ವಿದುರರು ಸಹೋದರರು. ಕುಂತಿ ಮತ್ತು ಮಾದ್ರಿಯರು ಪತ್ನಿಯರು. ಒಮ್ಮೆ ಮೃಗಯಾ ವಿಹಾರಕ್ಕೆಂದು ಅರಣ್ಯಕ್ಕೆ ಹೋದಾಗ ಮೃಗವೇಷದಲ್ಲಿ ಪ್ರಣಯ ಕ್ರೀಡಾಮಗ್ನನಾಗಿದ್ದ ಕಿಂದಮನನೆಂಬ ಮುನಿ ಹಾಗೂ ಆತನ ಪತ್ನಿಯ ಮೇಲೆ ನಿಜವಾದ ಮೃಗಗಳೆಂದೇ ತಪ್ಪಾಗಿ ಭಾವಿಸಿ ಪಾಂಡು ಬಾಣಪ್ರಯೋಗ ಮಾಡಿದ. ಪರಿಣಾಮವಾಗಿ ಪ್ರಾಣತ್ಯಾಗ ಮಾಡಬೇಕಾಗಿ ಬಂದ ಆ ಮುನಿ, ನೀನು ನಿನ್ನ ಪತ್ನಿಯನ್ನು ಕೂಡಿದಾಗ ಜೀವಕ್ಕೆ ಎರವಾಗಲಿ ಎಂದು ಶಪಿಸಿ ಕೊನೆಯುಸಿರೆಳೆದ. ಅಂದಿನಿಂದ ಪಾಂಡು ವೈರಾಗ್ಯಭಾವಕ್ಕೆ ಒಳಗಾಗಿ, ರಾಜ್ಯ ತೊರೆದು ಪತ್ನಿಯರೊಂದಿಗೆ ಶತಶೃಂಗ ಪರ್ವತ ಪ್ರದೇಶಕ್ಕೆ ಹೋಗಿ ನಿರ್ಲಿಪ್ತ ನಿರ್ವಿಕಾರ ಜೀವನ ಸಾಗಿಸಹತ್ತಿದ. ಆದರೆ ವಸಂತಕಾಲದ ಒಂದು ದಿನ ರತಿದೇವಿಯಂತೆ ಸಿಂಗರಿಸಿಕೊಂಡ ಪ್ರಿಯಪತ್ನಿ ಮಾದ್ರಿಯನ್ನು ಸಂಯಮದ ಕಟ್ಟೊಡೆದು ವಿಕಾರವಶನಾಗಿ ಆಕೆಯನ್ನು ಆಲಂಗಿಸಿ ಋಷಿಶಾಪದಂತೆ ಮೃತನಾದ. (ಎಂ.ಎ.ಕೆ.)