ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾಟ್, ಪರ್ಸಿವಾಲ್

ವಿಕಿಸೋರ್ಸ್ದಿಂದ

ಪಾಟ್, ಪರ್ಸಿವಾಲ್ 1714-1728 ಗೂನು ಬೆನ್ನಾಗಿ ಪರಿಣಮಿಸುವ ಪ್ರಸಂಗಗಳಲ್ಲಿ ಕಾಲುಗಳ ಸ್ವಾಧೀನ ತಪ್ಪುವುದರ ಬಗ್ಗೆ ಮತ್ತು ಕಾಲಕಂಬದ ಕೆಳತುದಿಯ ಮೂಳೆಮುರಿತದ ಬಗ್ಗೆ ಕರಾರುವಾಕ್ಕು ವಿವರಣೆಯನ್ನಿತ್ತ ಲಂಡನ್ನಿನ ಹೆಸರಾಂತ ವೈದ್ಯ. ಇವೆರಡು ರೋಗಗಳನ್ನು ಅನುಕ್ರಮವಾಗಿ ಪಾಟ್‍ನ ಬೆನ್ನು ಮೂಳೆರೋಗ ಮತ್ತು ಪಾಟ್‍ನ ಮೂಳೆ ಮುರಿತ ಎಂದೇ ಮುಂದೆ ಹೆಸರಿಸಲಾಯಿತು. ಸೇಂಟ್ ಬಾರ್ಥೊಲೋಮ್ಯು ಆಸ್ಪತ್ರೆಯಲ್ಲಿ ಶಸ್ತ್ರವೈದ್ಯನಾಗಿ ಸುಮಾರು ನಲವತ್ತೆರಡು ವರ್ಷಗಳ ಪರ್ಯಂತ ನಿರಂತರವಾಗಿ ಕೆಲಸಮಾಡಿದ. ವೈದ್ಯಕೀಯ ಬರೆವಣಿಗೆಯಲ್ಲಿ ತುಂಬ ಸಮರ್ಥ. ನಲವತ್ತೆರಡನೆಯ ವರ್ಷ ವಯಸ್ಸಿನಲ್ಲಿ ಈತ ಕುದುರೆ ಮೇಲಿಂದ ಬಿದ್ದುದರ ಪರಿಣಾಮವಾಗಿ ಕಾಲುಮೂಳೆ ಮುರಿದು ಭೀಕರ ಗಾಯವಾಯಿತು. ಶಸ್ತ್ರವೈದ್ಯರುಗಳ ತಂಡ ನಿರ್ಧರಿಸಿದಂತೆ ಕಾಲನ್ನು ತುಂಡರಿಸಬೇಕೆಂದು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುವಷ್ಟರೊಳಗೆ ಈತನ ಗುರುವೂ ಮೇಲಧಿಕಾರಿಯೂ ಆಗಿದ್ದ ನೌರ್ಸ್ ಎಂಬ ಶಸ್ತ್ರವೈದ್ಯ ಅದೃಷ್ಟವಶಾತ್ ಆಗಮಿಸಿ ಆ ಗಾಯವನ್ನು ಪರೀಕ್ಷಿಸಿ, ಅಂಗಚ್ಛೇದ ನಿರ್ಧಾರವನ್ನು ಕೈಬಿಟ್ಟು ಬೇರೆ ಚಿಕಿತ್ಸೆಮಾಡಿ ಕಾಲನ್ನು ಉಳಿಸಬೇಕೆಂದು ಸಲಹೆಮಾಡಿದ. ಅದರಂತೆ ದೀರ್ಘಕಾಲಿಕ ಚಿಕಿತ್ಸೆ ನಡೆದು ಪಾಟ್‍ನ ಕಾಲು ಉಳಿಯಿತು. ಚಿಕಿತ್ಸಾಕಾಲದಲ್ಲಿ ಸಿಕ್ಕಿದ ಬಿಡುವಿನಲ್ಲಿ ಅಂಡವೃದ್ಧಿಯ (ಹರ್ನಿಯ) ವಿಷಯವಾಗಿ ಬರೆದ ಅವನ ಪ್ರಥಮ ಲೇಖನ ಸಿದ್ಧವಾಯಿತು. ಅಲ್ಲದೆ ಆಗ ದೊರೆತ ರೋಗದ ಸ್ವಾನುಭವದ ಅರಿವು ಮುಂದೆ ಅವನು ಆ ರೋಗವನ್ನು ವಿವರಿಸುವಲ್ಲಿ ತುಂಬ ಸಹಾಯಕವಾಯಿತು. ಶಸ್ತ್ರಚಿಕಿತ್ಸೆಗೆ ಲೋಕಾನುಭವದ (ಕಾಮನ್ ಸೆನ್ಸ್) ಆಧಾರದ ಮೇಲೆ ತರ್ಕಸಮ್ಮತವಾದ ತಳಹದಿಯನ್ನು ಪಾಟ್ ಒದಗಿಸಿದ. ಅಂದಿನ ಶಸ್ತ್ರವೈದ್ಯರು ಗಾಯ, ವ್ರಣ, ಬಾವು ಮುಂತಾದವುಗಳ ಚಿಕಿತ್ಸೆಗಾಗಿ ಅನುಸರಿಸುತ್ತಿದ್ದ ಕಾದ ಕಬ್ಬಿಣದಿಂದ ಬರೆಹಾಕುವ (ಕಾಟರಿ) ಅಮಾನುಷ ವಿಧಾನವನ್ನು ಕೊನೆಗೊಳಿಸಲು ಪಾಟ್ ಬಲುಮಟ್ಟಿಗೆ ಶ್ರಮಿಸಿದ.

ಅಂಡವೃದ್ಧಿ, ತಲೆಗಾಯ, ವೃಷಣಕೋಶದಲ್ಲಿ ದ್ರವ ತುಂಬುವಿಕೆ (ಹೈಡ್ರೊಸೀಲ್) ಮತ್ತು ಕೀಲುತಪ್ಪುವಿಕೆಗಳ ಬಗೆಗೆ ವಿಶೇಷ ಅಧ್ಯಯನಮಾಡಿ ವಿವರಣೆಯನ್ನಿತ್ತ. ಬೆನ್ನೆಲುಬಿನ ಮೂಳೆಕುಸಿತದಿಂದ ಗೂನುಬೆನ್ನಾಗುವುದನ್ನೂ ಮಿದುಳುಬಳ್ಳಿಯ ರಕ್ತಪೂರೈಕೆಗೆ ಅದು ಉಂಟುಮಾಡುವ ವ್ಯತ್ಯಯದಿಂದ ಹಾಗೂ ನೇರ ಒತ್ತಡದಿಂದ ಕಾಲಿನ ಸ್ವಾಧೀನ ತಪ್ಪುವುದನ್ನೂ ನಿಖರವಾಗಿ ವಿವರಿಸಿದ. ಮುಂದೆ ಇಂಥ ಗೂನುಬೆನ್ನಿಗೆ ಕಾರಣ ಬೆನ್ನಮೂಳೆಗೆ ಅಂಟಿದ ಕ್ಷಯಾಣು ಸೋಂಕು ಎಂದು ವೇದ್ಯವಾಯಿತು. ಕಾಲಕಂಬದ ಕೆಳತುದಿಯಲ್ಲಿ ಮೂಳೆಮುರಿತವನ್ನು ವಿವರಿಸಿದಾಗ ಅದಕ್ಕೆ ಮಾಡಬೇಕಾದ ಚಿಕಿತ್ಸಾವಿಧಾನವನ್ನೂ ಸೂಚಿಸಿದ. ತಲೆಬುರುಡೆಯಡಿ ಕೀವು ಸಂಗ್ರಹಗೊಂಡು ನೋಯುವ ಬಾವಾಗಿ ತಲೆನೋವನ್ನು ಉಂಟುಮಾಡುವ ರೋಗ ಸ್ಥಿತಿಯ ಬಗ್ಗೆ ಅವನು ನೀಡಿದ ವಿವರಣೆಯಿಂದಾಗಿ ಈಗ ಆ ರೋಗ ಪಾಟ್‍ನ ದದ್ದರಿಕೆ ಎಂಬ ಹೆಸರು ಪಡೆದಿದೆ.

ಹೊಗೆ ಕೊಳವೆಯನ್ನು ಚೊಕ್ಕಟ ಮಾಡುವವರಿಗೆ ಮಸಿಯಿಂದ ವೃಷಣಕೋಶಗಳಿಗೆ ಎಡೆಬಿಡದ ದೀರ್ಘಕಾಲಿಕ ಪ್ರಕೋಪ ಉಂಟಾಗಿ ಅಲ್ಲಿ ಏಡಿಗಂತಿಯಾಗುತ್ತಿದ್ದುದು ಆ ಕಾಲದಲ್ಲಿ ಸಾಮಾನ್ಯವಾಗಿತ್ತು. ಇದರ ಸಾಧ್ಯತೆಯ ಬಗ್ಗೆ ಪಾಟ್ 1775ರಲ್ಲಿ ಮೊದಲು ಗಮನಸೆಳೆದು ನೀಡಿದ ವಿವರಣೆ ಐತಿಹಾಸಿಕ ಪ್ರಾಮುಖ್ಯ ಪಡೆದಿದೆ. ಟಾರ್ ಅಥವ ಮಸಿಯನ್ನು ಪದೇ ಪದೇ ಬಹುಕಾಲ ಚರ್ಮದ ಮೇಲೆ ಸವರಿದಾಗ ಅಲ್ಲಿ ಏಡಿಗಂತಿ ಉದ್ಭವಿಸಬಲ್ಲದೆಂಬುದನ್ನು ಸ್ಥಿರೀಕರಿಸಲು ತರುವಾಯದ ನೂರ ಐವತ್ತು ವರ್ಷಗಳ ಕಾಲ ಕಳೆಯಬೇಕಾಯಿತೆಂಬುದನ್ನು ಲಕ್ಷಿಸಿದಾಗ ಪಾಟ್‍ನ ತನಿಖಾ ದೃಷ್ಟಿಯ ಅರಿವಾಗುತ್ತದೆ.


1787ನೆಯ ಜುಲೈಯಲ್ಲಿ ಪಾಟ್ ಸೇಂಟ್ ಬಾರ್ಥೊಲೋಮ್ಯು ಆಸ್ಪತ್ರೆಯ ಕೆಲಸಕ್ಕೆ ರಾಜೀನಾಮೆ ಕೊಟ್ಟು ವಿಶ್ರಾಂತಜೀವನ ನಡೆಸಲು ಉದ್ಯುಕ್ತನಾದ. 1788ರ ಡಿಸೆಂಬರಿನಲ್ಲಿ ನ್ಯೂಮೋನಿಯ ರೋಗಪೀಡಿತನಾಗಿ ಸ್ವಗೃಹದಲ್ಲಿ ಮೃತಿಹೊಂದಿದ. (ಪಿ.ಎಸ್.ಎಸ್.)