ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾರೇಟೊ ವೀಲ್ಫ್ರೇಡೊ
ಪಾರೇಟೊ ವೀಲ್‍ಫ್ರೇಡೊ 1848-1923. ಹೆಸರಾಂತ ಅರ್ಥಶಾಸ್ತ್ರಜ್ಞ ಮತ್ತು ಸಮಾಜವಿಜ್ಞಾನಿ. ಇಟಲಿಯವ. ಹುಟ್ಟಿದ್ದು ಪ್ಯಾರಿಸ್‍ನಲ್ಲಿ. ಈತನ ತಂದೆ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಇಟಾಲಿಯನ್ನು ತ್ಯಜಿಸಿ ಫ್ರಾನ್ಸಿಗೆ ಬಂದು ಅಲ್ಲೇ ಫ್ರೆಂಚ್ ಮಹಿಳೆಯೊಬ್ಬಳನ್ನು ಮದುವೆಯಾಗಿ 1858ರಲ್ಲಿ ಮತ್ತೆ ತನ್ನ ಸ್ವದೇಶಕ್ಕೆ ಹಿಂದಿರುಗಿದ್ದ. ಇದರಿಂದಾಗಿ ಪಾರೇಟೊಗೆ ಇಟಲಿಯ ಶಾಲೆಗಳಲ್ಲಿ ವ್ಯವಸ್ಥಿತ ಶಿಕ್ಷಣ ಪಡೆಯಲು ಅವಕಾಶವಾಯಿತು.
ತನ್ನ ತಂದೆಯಂತೆ ತಾನೂ ಸಿವಿಲ್ ಎಂಜಿನಿಯರ್ ಆಗಬೇಕೆಂದು ಬಯಸಿ ಟ್ಯೂರಿನಿನ ಪಾಲಿಟೆಕ್ನಿಕ್ ಶಾಲೆಯನ್ನು ಸೇರಿದ. ಅಲ್ಲಿನ ಐದು ವರ್ಷಗಳ ವ್ಯಾಸಂಗಾವಧಿಯಲ್ಲೇ ಎರಡು ವರ್ಷಕಾಲ ಗಣಿತಶಾಸ್ತ್ರ ಅಭ್ಯಾಸ ಮಾಡಿದ. 1870ರಲ್ಲಿ ದಿ ಫಂಡಮೆಂಟಲ್ ಪ್ರಿನ್ಸಿಪಲ್ ಆಫ್ ಈಕ್ವಿಲಿಬ್ರಿಯಂ ಇನ್ ಸಾಲಿಡ್ ಬಾಡಿಸ್ ಎಂಬ ವಿಷಯವನ್ನು ಕುರಿತು ಮಹಾಪ್ರಬಂಧವೊಂದÀನ್ನು ರಚಿಸಿ ಪದವೀಧರನಾದ. ಈ ಪ್ರಬಂಧದಲ್ಲಿ ಈತ ಅರ್ಥಶಾಸ್ತ್ರ ಹಾಗೂ ಸಮಾಜವಿಜ್ಞಾನದಲ್ಲಿ ತನಗಿದ್ದ ಒಲವನ್ನು ತೋರ್ಪಡಿಸಿದ್ದ.
ಪದವೀಧರನಾದ ಮೇಲೆ ಈತ ವ್ಯಾಪಾರೋದ್ಯಮದತ್ತ ತನ್ನ ಗಮನ ಹರಿಸಿದ. ಸ್ವಲ್ಪ ಕಾಲ ರೋಮ್ ರೈಲ್ವೆ ಕಂಪನಿಯ ನಿರ್ದೇಶಕನಾಗಿಯೂ ಫ್ಲಾರೆನ್ಸಿನ ಕಬ್ಬಿಣ ಉತ್ಪನ್ನದ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕನಾಗಿಯೂ ಕೆಲಸಮಾಡಿದ. ಆ ಕಾಲದಲ್ಲಿ ಈತ ಅನೇಕ ಗಣ್ಯರ ಹಾಗೂ ಸಮಾಜ ಪ್ರಮುಖರ ಸಂಪರ್ಕ ಪಡೆದು ಅನೇಕ ಸಭೆಗಳ ಸದಸ್ಯನಾಗಿ ಪ್ರಜಾಪ್ರಭುತ್ವದ ಬಗ್ಗೆ ತನಗಿದ್ದ ಅಭಿಪ್ರಾಯಗಳನ್ನು ಹೊರಗೆಡಹಿದ. ಇಟಲಿಯಲ್ಲಿ 1876ರಲ್ಲಿ ಬಲಪಕ್ಷದ ಅಧಿಕಾರ ಕೊನೆಗೊಂಡು. ಮಿತವಾದಿ ವಾಮಪಕ್ಷದವರು ಇಟಲಿಯ ರಾಜಕೀಯದಲ್ಲಿ ಪ್ರವೇಶಿಸಿ ಸ್ವದೇಶಿ ಕೈಗಾರಿಕೆಗಳ ರಕ್ಷಣೆ ಮತ್ತು ಪರದೇಶಗಳ ಮೇಲೆ ದಾಳಿ ನಡೆಸುವ ರಾಜನೀತಿಯನ್ನು ಅನುಸರಿಸಲಾರಂಭಿಸಿದಾಗ, ಉದ್ರೇಕಗೊಂಡ ಈತ ಸರ್ಕಾರವನ್ನು ಪ್ರತಿಭಟಿಸಿದ. ವರ್ತಮಾನ ಪತ್ರಿಕೆಗಳ ಮೂಲಕ ಟೀಕೆಗಳನ್ನು ಹೊರಗೆಡಹಿದ. 1882ರಲ್ಲಿ ಫ್ಲಾರೆನ್ಸಿನ ಲೋಕಸಭೆಗೆ ಸ್ಪರ್ಧಿಸಿ ಪರಾಜಯ ಹೊಂದಿದಾಗ ಅಸಮಾಧಾನಗೊಂಡ ಈತ ಸರ್ಕಾರವನ್ನು ತನ್ನ ಲೇಖಣಿಯ ಮೂಲಕ ಪ್ರಬಲವಾಗಿ ವಿರೋಧಿಸಿದ.
ಮುಂದೆ ಈತನ ತಂದೆ-ತಾಯಿಯರ ನಿಧನರಾದಾಗ ಬಹುವಾಗಿ ನೊಂದ ಈತ ತನ್ನ ಜೀವನಮಾದರಿಯನ್ನೇ ಬದಲಾಯಿಸಿಕೊಂಡ. 1889ರಲ್ಲಿ ತನ್ನ ನಿರ್ದೇಶಕ ಪದವಿಗೆ ರಾಜೀನಾಮೆಯನ್ನು ಕೊಟ್ಟ. ರಷ್ಯನ್ ಮಹಿಳೆಯನ್ನು ಮದುವೆಯಾದ ಈತ ಫ್ಲಾರೆನ್ಸ್‍ನನ್ನು ಬಿಟ್ಟು ಫಿಸೊಲದಲ್ಲಿ ನಿವೃತ್ತಿಜೀವನ ನಡೆಸತೊಡಗಿದ. ಈ ಬಿಡುವಿನ ವೇಳೆಯಲ್ಲಿ ಪಾರೇಟೊ ಲ್ಯಾಟಿನ್ ಗ್ರೀಕ್‍ನ ಪ್ರಾಚೀನ ಕೃತಿಗಳನ್ನು ಆಭ್ಯಸಿಸಿ ಆರ್ಥಶಾಸ್ತ್ರದ ಬಗ್ಗೆ ಆಳವಾಗಿ ಆಧ್ಯಯನ ಮಾಡಿದ. ಆಗಲೂ ಸರ್ಕಾರದ ಧೋರಣೆಗಳ ಬಗ್ಗೆ ಕಟುವಾಗಿ ಟೀಕಿಸಿ ಬರೆಯುವುದನ್ನು ಮುಂದುವರೆಸಿದ. ಕೇವಲ ನಾಲ್ಕು ವರ್ಷಗಳಲ್ಲಿ (1889-1893) ಈತ 167ಕ್ಕೂ ಹೆಚ್ಚಿನ ಲೇಖನಗಳನ್ನು ಬರೆದ. ಈ ಲೇಖನಗಳಲ್ಲಿ ಈತನ ವಿದ್ವತ್ ಪ್ರಭೆ ಎದ್ದು ಕಾಣತೊಡಗಿತು. ತನ್ನ ಸಲಹೆಗಳಿಗೆ ಕಿವಿಗೊಡದ ಸರ್ಕಾರದ ಪ್ರಬಲ ವಿರೋಧಿಯಾಗಿ ನಿಂತ. ಈ ವಿರೋಧದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ತನಗಿದ್ದ ನಂಬಿಕೆಯನ್ನು ಕಳೆದುಕೊಂಡು ಅದರ ಬಗ್ಗೆ ತಿರಸ್ಕಾರ ಭಾವ ಬೆಳೆಸಿಕೊಂಡ.
ಇದೇ ಸಮಯದಲ್ಲಿ ಈತ ಇಟಲಿಯ ಅನೇಕ ಆರ್ಥಶಾಸ್ತ್ರಜ್ಞರ ಹಾಗೂ ಸಮಾಜ ಪ್ರಚಾರಕರ ಸ್ನೇಹ ಸಂಪಾದಿಸಿಕೊಂಡ. ಫ್ಲಾರೆನ್ಸಿನಲ್ಲಿದ್ದ ಆ್ಯಂಡಮ್‍ಸ್ಮಿತ್ ಸಮಾಜದ ಸದಸ್ಯನಾದ. ಈ ಸಮಾಜದ ಪ್ರಮುಖ ಸದಸ್ಯ ಹಾಗೂ ಪ್ರಸಿದ್ಧ ಆರ್ಥಶಾಸ್ತ್ರಜ್ಞ ಮಾಫಿಯಾ ಪ್ಯಾಂಟಲಿಯೋನಿಯ ಆಪ್ತಮಿತ್ರನಾದ. ಅಲ್ಲದೆ ಆತನಿಗೆ ಲೋeóÁನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದ ಲಿಯೋನ್ ವಾಲ್ರಾಸ್ ವಿವರಿಸಿದ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಗಣಿತಶಾಸ್ತ್ರದ ಸಮತೋಲನ ವ್ಯವಸ್ಥೆಯ ಬಗ್ಗೆ ತಿಳಿಯ ಹೇಳಿದ. ಆ ಸಿದ್ಧಾಂತ ಆತನನ್ನು ಬಹುವಾಗಿ ಆಕರ್ಷಿಸಿತು. 1891ರಲ್ಲಿ ಈತನಿಗೆ ಪ್ಯಾಂಟಲ್‍ಯೋನಿಯ ಮೂಲಕ ವಾಲ್ರಾಸವ ಪರಿಚಯವಾಯಿತು. ಅನಾರೋಗ್ಯದಿಂದ ತನ್ನ ವೃತ್ತಿಯಿಂದ ನಿವೃತ್ತನಾಗಬೇಕಾದ ವಾಲ್ರಾಸ್ ಪಾರೇಟೊನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಆರಿಸಿದ. 1893ರಲ್ಲಿ ಪಾರೇಟೊ ತನ್ನ ನಡುವಯಸ್ಸಿನಲ್ಲಿ ಲೋeóÁನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಿತನಾದ. ಅಲ್ಲಿಯೂ ವಿಮರ್ಶಾತ್ಮಕ ಲೇಖನಗಳನ್ನು ಬರೆಯುವ ಕಾರ್ಯವನ್ನು ಮುಂದುವರಿಸಿದ ಮತ್ತು ತನ್ನ ಉಪನ್ಯಾಸಗಳ ಆಧಾರದ ಮೇಲೆ ಎರಡು ಸಂಪುಟಗಳನ್ನು ಹೊರತಂದು ಆಧುನಿಕ ಆರ್ಥಶಾಸ್ರ ಕ್ಷೇತ್ರದಲ್ಲಿ ಪ್ರತಿಭಾವಂತ ಪಂಡಿತರೆನೆಸಿಕೊಂಡ. ಆದರೆ 1898ರಲ್ಲಿ ಅನಿರೀಕ್ಷಿತವಾಗಿ ಈತ ತನ್ನ ಅಭಿಪ್ರಾಯಗಳಲ್ಲಿ ತೀವ್ರ ಬದಲಾವಣೆ ಮಾಡಿಕೊಂಡು ಪ್ರಜಾಪ್ರಭುತ್ವವಾದ. ಸಮಾಜಸುಧಾರಣೆ ಹಾಗೂ ಮಾನವೀಯ ಭಾವನೆಗಳ ತೀವ್ರ ವಿರೋಧಿಯಾದ. ಉದಾರವಾದಿಯಾಗಿದ್ದ ಈತ ಎಲ್ಲದರಲ್ಲೂ ತಪ್ಪು ಕಂಡುಹಿಡಿಯುವ ಹಾಗೂ ಕಡು ಹಗೆ ತೋರುವ ಗುಣವನ್ನು ಬೆಳೆಸಿಕೊಂಡು ಆ ಕಾಲದ ಪ್ರಮುಖ ವಿಚಾರ ಪ್ರವೃತ್ತಿಗಳನ್ನು ದ್ವೇಷಿಸಲಾರಂಭಿಸಿದ. ಅದೇ ವೇಳೆಗೆ ತನ್ನ ಪತ್ನಿ ಮನೆಯಾಳಿನೊಂದಿಗೆ ಓಡಿಹೋಗಿದ್ದನ್ನು ಕಂಡು ಮಾನವತಾವಾದದಲ್ಲಿ ತನಗಿದ್ದ ನಂಬಿಕೆಯನ್ನು ಪೂರ್ಣ ಕಳೆದುಕೊಂಡು ಜೀವನವನ್ನೇ ದ್ವೇಷಿಸತೊಡಗಿದ.
ಅದೇ ಸಮಯದಲ್ಲಿ ವಿಧಿವಶನಾದ ತನ್ನ ಚಿಕ್ಕಪ್ಪನ ಆಸ್ತಿಗೆ ಈತನೇ ಒಡೆಯನಾದ. ಇದರಿಂದಾಗಿ ಈತನಿಗೆ ಶ್ರೀಮಂತ ಜೀವನ ನಡೆಸುವುದು ಸಾಧ್ಯವಾಯಿತು. ಲೋeóÁನ್‍ಗೆ ಸಮೀಪದಲ್ಲಿ ಒಂದು ಸ್ವಂತ ಗೃಹವನ್ನು ನಿರ್ಮಿಸಿಕೊಂಡು ಜಿನ್‍ರೆಗಿಸ್ ಎಂಬ ನೂತನ ಸಂಗಾತಿಯನ್ನು ಪಡೆದ. ಜೀವನದಲ್ಲಿ ನಿರ್ವಿಣ್ಣನಾದ ಈತನಿಗೆ ಆಗ ತಾನು ಸಾಕಿದ ಬೆಕ್ಕುಗಳು, ಸಂಗ್ರಹಿಸಿ ಇಟ್ಟುಕೊಂಡಿದ್ದ ಆಹಾರ ಪದಾರ್ಥಗಳು ಹಾಗೂ ಪಾನೀಯಗಳೇ ಅತ್ಯಂತ ಪ್ರಿಯವಾಗಿ ಕಂಡವು. ಜೀವನದ ಸಂಧ್ಯಾಕಾಲ ತಲುಪಿದಂತೆ ಈತ ಹೃದ್ರೋಗಕ್ಕೆತುತ್ತಾದ. 1907ರಲ್ಲಿ ವಿಶ್ವವಿದ್ಯಾನಿಲಯದ ವೃತ್ತಿಯಿಂದ ನಿವೃತ್ತನಾದ. ಆದರೂ ಆಗಾಗ್ಗೆ ಸಮಾಜಶಾಸ್ತ್ರ ಕುರಿತು ಉಪನ್ಯಾಸಗಳನ್ನು ಕೊಡುತ್ತಿದ್ದ. ಈತ ಜೀವನದ ಅಂತಿಮ ವರ್ಷದಲ್ಲಿ ಮುಸಲೋನಿ ಇಟಲಿಯ ಸರ್ವಾಧಿಕಾರವನ್ನು ವಹಿಸಿಕೊಂಡ. ಆತ ತಾನು ಪಾರೇಟೊನಿನ ಶಿಷ್ಯನೆಂದು ಹೇಳಿಕೊಂಡು ಈತನನ್ನು ಅತ್ಯಂತ ಆದರದಿಂದ ಗೌರವಿಸಿದ. ಇಟಲಿ ರಾಜ್ಯದ ಸೆನೆಟ್ ಸದಸ್ಯನೂ ಆದ. ಜಿನೀವಾದಲ್ಲಿ ನಡೆದ ನಿಶ್ಯಸ್ತ್ರೀಕರಣದ ಸಮ್ಮೇಳನದಲ್ಲಿ ಭಾಗವಹಿಸಿದ. ಮುಸಲೋನಿ ತನ್ನ ಅಧಿಕಾರದ ಆರಂಭದಲ್ಲಿ ಪಾರೇಟೊ ಪ್ರತಿಪಾದಿಸಿದ ಸಿದ್ಧಾಂತಗಳನ್ನು ಜಾರಿಗೆ ತರುವಂತೆ ತೋರಿಸಿಕೊಂಡ. ಆದರೆ ಮುಸಲೋನಿ ಇಟಲಿಯ ವಿಶ್ವವಿದ್ಯಾನಿಲಯಗಳ ಸ್ವಾತಂತ್ರ್ಯಕ್ಕೆ ಮುಳ್ಳಾದಾಗ ಈತನಲ್ಲಿ ಸುಪ್ತವಾಗಿದ್ದ ಸ್ವಾತಂತ್ರ್ಯಪ್ರಿಯತೆ ಪುಟಿದೆದ್ದು ಮುಸಲೋನಿಯ ಕ್ರಮವನ್ನು ಬಲವಾಗಿ ವಿರೋಧಿಸಿದ. ಮುಸಲೋನಿ ರಾಜ್ಯವಾಳಲು ಆರಂಭಿಸಿದ ಒಂದು ವರ್ಷದಲ್ಲಿ 1923ರ ಆಗಸ್ಟ್ 19ರಂದು ತನ್ನ 75ನೆಯ ವಯಸ್ಸಿನಲ್ಲಿ ಕಾಲವಾದ.
ಈತನ ಪ್ರಧಾನ ಕೃತಿ ಮೈಂಡ್ ಆಂಡ್ ಸೊಸೈಟಿ ಎಂಬ ಹೆಸರಿನಲ್ಲಿ ಅನುವಾದಗೊಂಡು 4 ಸಂಪುಟಗಳಲ್ಲಿ ಪ್ರಕಟವಾಗಿದೆ.
ಈತನ ವಿಚಾರಧಾರೆ, ಸಿದ್ಧಾಂತ, ಕೃತಿಗಳಿಗೆ (ನೋಡಿ- ಪಾರೇಟೊ-ನಿಯಮ) (ಎಂ.ಬಿ.ಆರ್.ಎ.)